Sunday 25 October 2015

ಮೈ ಅಜಾದ್ ಹೂಂ ಅಜಾದ್ ಹೀ ರಹೂಂಗಾ ಭಾಗ 5



ಕ್ರಾಂತಿಕಾರಿ ಸಂಘಟನೆಯ ನಾಯಕತ್ವ ಅಂದರೆ ಅದು ಸಣ್ಣ ಪದವಿಯಲ್ಲ... ಅದನ್ನು ಸಮರ್ಥವಾಗಿ ನಿಭಾಯಿಸುವ ಮನೋಭಾವ ಬೇಕಾಗುತ್ತದೆ... ಅದಕ್ಕಾಗಿಯೆ ಅಜಾದ್ ಸರ್ವಾನುಮತದಿಂದ ಆಯ್ಕೆಯಾಗಿದ್ದು... ಅದೆಂತಾ ಪರಿಸ್ಥಿತಿಯಲ್ಲೂ ಅಜಾದ್ ಸಂಘಟನೆಯ ಹಿತದೃಷ್ಟಿಯಿಂದಲೇ ಕೆಲಸ ಮಾಡುತ್ತಿದ್ದರು...ಸಂಘಟನೆಯ ಪ್ರಮುಖ ಹೋರಾಟಗಾರ ಭಗತ್ ಸಿಂಗ್ ಬಂಧಿಯಾದ ಮೇಲೆ ಇನ್ನೇನು ಸಂಘಟನೆ ನಿಷ್ಕ್ರಿಯವಾದೀತು ಎಂದು ನೀವು ಅಂದು ಕೊಂಡಲ್ಲಿ ಅದು ತಪ್ಪಾದೀತು... ಈ ಕ್ರಾಂತಿ ರಥಕ್ಕೆ ಕೃಷ್ಣನಂತ ಸಾರಥಿ ಇರೋವಾಗ ಈ ರೀತಿ ಆಗಲು ಸಾಧ್ಯವೇ...ಅಜಾದರಿಗೆ ತನ್ನ ಸಂಘಟನೆಯ ಬಗೆಗೆ ಕಾಳಜಿ ಅದೆಷ್ಟು ಅಂದರೆ , ಭಗತರ ಬಂಧನವಾದ ನಂತರ, ಒಮ್ಮೆ ಭಗತ್ ಸಿಂಗ್ ಸರ್ಕಾರಿ ಸಾಕ್ಷಿಯಾಗಿದ್ದನೆ ಅನ್ನೋ ವದಂತಿಯನ್ನು ಬ್ರಿಟಿಷರು ಹಬ್ಬಿಸಿಬಿಟ್ಟರು...ಮನಸ್ಸಿನಲ್ಲಿ ಭಗತನ ಬಗೆಗೆ ದೃಡವಾದ ನಂಬಿಕೆ ಇದ್ದರೂ ಸಂಘಟನೆಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಅಜಾದ್ ತಮ್ಮ ನೆಲೆಗಳನ್ನೆಲ್ಲಾ ಬದಲಿಸಿದಿದ್ದರು. ಅಷ್ಟೇ ಅಲ್ಲ ಸಂಘದ ಮೆದುಳು ಎಂದೇ ಖ್ಯಾತನಾಗಿದ್ದ ಭಗವತಿ ಚರಣ್ ದಾಸ್ ಬಗ್ಗೆ ಆತ ಆಂಗ್ಲರ ಗುಪ್ತಚರ ಎಂಬ ಸುದ್ದಿ ಹರಡಿದಾಗಲೂ ಅಜಾದ್ ಇದೇ ರೀತಿ ನಡೆದುಕೊಂಡು ಸಂಘದ ಒಳಿತನ್ನೇ ಯೋಚಿಸಿದ್ದ... ಹಾಗಂತ ಸತ್ಯ ಗೊತ್ತಾದೊಡನೆ ನಾಯಕನೆಂಬ ಅಹಂಕಾರ ತೋರದೆ ಭಗವತೀ ಚರಣರ ಬಳಿ ಕ್ಷಮೆಯನ್ನು ಕೇಳಿದ್ದ.. ಇದು ಆಜಾದರ ವ್ಯಕ್ತಿತ್ವ...
ಹಾಗಾದರೆ ಆಜಾದ್ ಎಲ್ಲಿಯೂ ಎಡವಲಿಲ್ಲವೇ... ಅಷ್ಟೊಂದು ಪರಿಪೂರ್ಣನೇ ಎಂದುಕೊಳ್ಳಬಹುದು...ನಿಮ್ಮ ಮುಂದೆ ಈಗ ಹೇಳಹೊರಟಿರುವುದು ಅಜಾದ್ ಎಡವಿದ ವಿಷಯದ ಬಗ್ಗೆ...
ಅಜಾದ್ ಸದಾ ಕ್ರಿಯಾಶೀಲ ವ್ಯಕ್ತಿ... ತನ್ನ ಸಂಘಟನೆಯನ್ನು ಬೆಳೆಸುತ್ತಾ ಹೋಗುತ್ತಿದ್ದ ... ಹೊಸ ಹೊಸ ಯುವಕರ ಸೇರ್ಪಡೆ ಮಾಡುತ್ತಿದ್ದ...ಈ ರೀತಿ ಸೇರ್ಪಡೆ ಮಾಡುವ ವ್ಯಕ್ತಿಯ ಬಗ್ಗೆ ಕೂಲಂಕುಷವಾಗಿ ಅರಿತುಕೊಳ್ಳುತ್ತಿದ್ದ ಆಮೇಲೆಯೆ ಅವರಿಗೆ ಒಳಪ್ರವೇಶ...ಹಾಗಿದ್ದು ನನ್ನ ಪ್ರಕಾರ , ಯಶಪಾಲ್ ಹಾಗೂ ವೀರಭದ್ರ ತಿವಾರಿ ಎಂಬಿಬ್ಬರ ಸೇರ್ಪಡೆಯಲ್ಲಿ ಅಥವಾ ಅವರ ತಪ್ಪುಗಳನ್ನು ಕಡೆಗಾಣಿಸುವ ಮೂಲಕ ಅಜಾದ್ ಎಡವಿದರು ಅನ್ನಬಹುದು....
ಯಶಪಾಲ್ ಒಮ್ಮೆ ಸಂಘದ ನಿರ್ಣಯಕ್ಕೆ ವಿರುದ್ಧವಾಗಿ ಒಮ್ಮೆ ವೈಸರಾಯ್ ಬರುವ ರೈಲಿನಡಿಯಲ್ಲಿ ಬಾಂಬನ್ನು ಇಟ್ಟು ಸ್ಫೋಟಿಸಿದ್ದ... ಅದು ವಿಫಲವಾಗಿತ್ತು... ಅಜಾದ್ ಕೋಪಗೊಂಡರೂ ಆತನನ್ನು ಕ್ಷಮಿಸಿದ್ದು ಆತನಲ್ಲಿರುವ ಉತ್ತಮ ಬರವಣಿಗೆಯ ಪ್ರತಿಭೆಗಾಗಿ...ಆದರೆ ಆತ ತನ್ನ ತಪ್ಪುಗಳನ್ನು ನಿಲ್ಲಿಸಲೇ ಇಲ್ಲ....ಉತ್ತಮ ಕ್ರಾಂತಿಕಾರಿಯಾಗಿರಲು ಬಿಸ್ಮಿಲ್ಲ್ ಅವರ ಕಾಲದಿಂದಲೂ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸೋದು ಸಂಘದ ನಿಯಮವಾಗಿತ್ತು .ಒಂದು ವೇಳೆ ಮದುವೆಯಾಗೋದಾದರೂ ಕೇಂದ್ರ ಸಮಿತಿಯ ಒಪ್ಪಿಗೆ ಪಡೆಯಬೇಕಿತ್ತು. ಇದರಿಂದಾಗಿಯೇ ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿತ್ತು. ಆದರೆ ಯಶಪಾಲ್ ಅದನ್ನು ಸರಿಯಾಗಿ ಪಾಲಿಸಲಿಲ್ಲ...ಅವನದು ಕ್ರಾಂತಿಕಾರಿಯ ಮನೋಭಾವ ತೋರ್ಪಡಿಕೆ ಮಾತ್ರವಾಗಿತ್ತು.. ನಿಜವಾದ ಕ್ರಾಂತಿಕಾರಿಯಲ್ಲಿ ಇರಬೇಕಾದ ಗುಣಗಳೇ ಕಮ್ಮಿ...
ಈ ಯಶಪಾಲ ತನ್ನ ಅಕ್ಕನ ಬಳಿ ಪಾಠ ಹೇಳಿಸಿಕೊಳ್ಳಲು ಬರುತಿದ್ದ ಪ್ರಕಾಶವತಿ ಅನ್ನೋ ಹುಡುಗಿಯೊಂದಿಗೆ ಪ್ರೇಮದಾಟ ಆಡತೊಡಗಿದ್ದ. ತನ್ನ ಪ್ರೇಮದಾಟವನ್ನು ಮುಂದುವರಿಸುವ ಸಲುವಾಗಿ ಅವಳನ್ನು ಸಂಘಟನೆಯಲ್ಲಿ ಸೇರಿಸುವ ಯೋಜನೆ ಮಾಡಿದ್ದ. ಅದಕ್ಕಾಗಿ ಆತ ಅವಳು ಬರುವಾಗ ತನ್ನ ಮನೆಯಿಂದ 50,000 ಹಣ ತರುತ್ತಾಳೆ ಎಂದು ಸುಳ್ಳು ಹೇಳಿದ್ದ . ಆದರೆ ಆಕೆಯ ಮನೆಯವರಿಗೆ ಅವಳ ಮೇಲೆ ಅನುಮಾನ ಬಂದು ಹಣವನ್ನು ಭದ್ರ ಪಡಿಸಿ ಇಟ್ಟುಕೊಂಡರು. ಇದರಿಂದಾಗಿ ಯಾವ ಹಣದ ನೆಪದ ಮೂಲಕ ಆಕೆಯನ್ನು ಸಂಘಟನೆಯಲ್ಲಿ ಸೇರಿಸ ಬೇಕೆಂದು ಕೊಂಡಿದ್ದನೋ ಅದು ನೆರವೇರಲಿಲ್ಲ. ಆದರೆ ಆಕೆ ಅವಳ ಮನೆಯಿಂದ ಓಡಿ ಬಂದಿದ್ದಳು... ಆಗ ಯಶಪಾಲ್ ಹೊಸ ನಾಟಕವಾಡಿದ ಆಕೆ ಬರುವಾಗ ಹಣ ಕಳೆದು ಹೋಯಿತು ಅಂದ... ಇವರಿಬ್ಬರ ಈ ಪ್ರೀತಿಯ ಹುಚ್ಚಿನಿಂದಾಗಿ ಸಂಘಟನೆಯ ಎಲ್ಲರೂ ತೊಂದರೆ ಅನುಭವಿಸತೊಡಗಿದ್ದರು .. ಅದರಲ್ಲಿ ಒಬ್ಬೊಬ್ಬರಿಗೆ ಇವರ ಪ್ರೇಮ ವ್ಯವಹಾರದ ಬಗ್ಗೆ ತಿಳಿಯ ತೊಡಗಿತು ಆದರೆ ಅಜಾದರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ.. ಇಲ್ಲೂ ಅವರು ಸ್ವಲ್ಪ ಎಡವಿದರು...
ಪ್ರಕಾಶವತಿಯನ್ನು ದಿಲ್ಲಿಗೆ ಕರಕೊಂಡು ಹೋಗಲಾಯಿತು... ಯಶಪಾಲ್ ಕ್ರಾಂತಿಕಾರಿ ಕೆಲಸದಿಂದಾಗಿ ಲಾಹೋರಿನಲ್ಲೇ ಇದ್ದ ಆದರೆ ಮನಸ್ಸು ಮಾತ್ರ ದಿಲ್ಲಿಯಲ್ಲೇ...ಇವನ ಈ ಅರೆ ಮನಸ್ಸಿನ ಕೆಲಸಗಳಿಂದಾಗಿ ಭಗವತೀ ಚರಣ್ ದಾಸ್ ಸಾವನಪ್ಪಬೇಕಾಯಿತು...( ಭಗವತೀ ಚರಣ ದಾಸ್ ಅವರ ಕುರಿತು ಇನ್ನೊಮ್ಮೆ ಸಾಧ್ಯವಾದಲ್ಲಿ ಬರೆಯುತ್ತೇನೆ)... ಸಾವಿಗೂ ಮುನ್ನ ಭಗವತೀ ಚರಣ್, ಯಶಪಾಲನ ಪ್ರೇಮಪ್ರಸಂಗದ ಕುರಿತು ಅಜಾದರಿಗೆ ತಿಳಿಸಿದ್ದ... ಅಜಾದ್ ಈ ಬಾರಿ ಗಟ್ಟಿ ಮನಸ್ಸು ಮಾಡಿಕೊಂಡ ಯಶಪಾಲನಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದ... ಆತನನ್ನು ಗುಂಡಿಕ್ಕಿ ಕೊಲ್ಲುವ ಜವಾಬ್ದಾರಿ ಕೊಟ್ಟಿದ್ದು ವೀರಭದ್ರ ತಿವಾರಿ ಅನ್ನುವಾತನಿಗೆ...
ಅಜಾದ್ ಇನ್ನೊಂದು ತಪ್ಪು ಮಾಡಿದರು ...
ಈ ವೀರ ಭದ್ರ ತಿವಾರಿಯ ನಡುವಳಿಕೆಯೂ ಯಶಪಾಲನ ನಡವಳಿಕೆಯನ್ನೇ ಹೋಲುತಿತ್ತು...ಯಾರೂ ಯಶಪಾಲನನ್ನು ಕೊಲ್ಲಬೇಕಾಗಿತ್ತೋ ಅವನೇ ಯಶಪಾಲನಿಗೆ ಮರಣದಂಡನೆಯ ಕುರಿತು ಮಾಹಿತಿ ಕೊಟ್ಟು ಬಿಟ್ಟ ಮತ್ತು ನಾನು ಕೊಲ್ಲಲು ಬಂದಾಗ ನನಗೆ ಸಿಗದೆ ಪರಾರಿಯಾಗು ಎಂದು ಹೇಳಿದ... ಅದೇ ರೀತಿ ಆತ ಪರಾರಿಯಾದ.. ಈ ಯೋಜನೆ ವಿಫಲವಾದದ್ದು ಕಂಡು ಆಜಾದರಿಗೆ ತುಂಬಾ ನಿರಾಸೆಯಾಯಿತು...ಒಂದಷ್ಟು ಕಾಲ ಕಳೆದ ನಂತರ ಒಂದು ದಿನ ಯಶಪಾಲ ಅಜಾದರ ಬಳಿಬಂದು ಪಶ್ಚಾತ್ತಾಪ ಪಟ್ಟುಕೊಂಡವನಂತೆ ಬಂದು ಎದುರು ನಿಂತು ಬಿಟ್ಟ... ಅಜಾದನು ಸಮಿತಿಯ ನಿರ್ಣಯದಂತೆ ಆತನಿಗೆ ಕ್ಷಮಾದಾನ ಕೊಟ್ಟ ... ಆದರೆ ಆತನಿಗೆ ವಿಧಿಸಿದ್ದ ಮರಣದಂಡನೆಯ ಶಿಕ್ಷೆಯ ಬಗ್ಗೆ ಹೇಳಿದವರಾರು ಅಂತ ಹೇಳಬೇಕಾಗಿತ್ತು... ಯಶಪಾಲ್ ಮೆಲ್ಲಗೆ ಉಸುರಿದ..." ವೀರಭದ್ರ ತಿವಾರಿ...." ಅಜಾದರ ಪಾಲಿಗಿದು ಬಹಳ ಅಘಾತ ಕಾರಿ ವಿಷಯವಾಗಿತ್ತು... ಯಾರನ್ನು ನಂಬಲಿ ಯಾರನ್ನು ನಂಬದಿರಲಿ ಎನ್ನುವ ಗೊಂದಲದಿಂದಾಗಿ ಇಡಿಯ ಕ್ರಾಂತಿ ಕಾರಿ ಸಂಘಟನೆಯನ್ನೇ ವಿಸರ್ಜಿಸಿಬಿಟ್ಟರು... ಶಿಸ್ತು ಇಲ್ಲದ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ... ನೀವೆಲ್ಲರೂ ಸ್ವತಂತ್ರರು... ನಿಮ್ಮದೇ ರೀತಿಯಲ್ಲಿ ಕೆಲಸ ಮಾಡಿ... ನನಗೆ ನನ್ನ ಮೌಸರ್ (ಪಿಸ್ತೂಲು) ಸಾಕು ಆಂಗ್ಲರೊಡನೆ ಹೋರಾಡಿ ಸಾಯುತ್ತೇನೆ ಅಂದು ಬಿಟ್ಟರು...ಸ್ವಂತ ಜನರ ವಿಶ್ವಾಸದ್ರೋಹಕ್ಕೆ ಸಂಘಟನೆಯೇ ಬೇಡ ಎನುವ ನಿರ್ಧಾರಕ್ಕೆ ಬಂದಿದ್ದರು ಅಜಾದ್
ಆದರೆ ಈ ಸಂಧರ್ಭವನ್ನು ಯಶಪಾಲ್ ಬಳಸಿಕೊಳ್ಳಲು ಆಲೋಚಿಸಿದ, ಉಳಿದ ಕ್ರಾಂತಿಕಾರಿಗಳನ್ನು ಮನವೊಲಿಸಿ ಸ್ವಂತದ ಸಂಘಟನೆ ಮಾಡಲು ಆಲೋಚಿಸಿದ ಆದರೆ ಇದಕ್ಕೆ ಒಪ್ಪುವರಾರು ? ಎಲ್ಲರ ಮಾತು ಒಂದೇ ಆಗಿತ್ತು ಸಂಘಟನೆ ಇರಲಿ ಇಲ್ಲದಿರಲಿ ನಾವೆಲ್ಲ ಅಜಾದರನ್ನೆ ಅನುಸರಿಸುವವರು ಅಂದು ಬಿಟ್ಟರು, ಕೊನೆಗೆ ಯಶಪಾಲನೂ ವಿಧಿಯಿಲ್ಲದೆ ನಾನು ನಿಮ್ಮ ಜೊತೆ ಬರುತ್ತೇನೆ ಎಂದು ಅಜಾರಲ್ಲಿ ಹೇಳಿದ... ಅಜಾದರ ಒಪ್ಪಿಗೆಯೂ ಸಿಕ್ಕಿತು... ಆದರೆ ಒಂದು ಶರತ್ತು ವಿದಿಸಿದರು... ವೀರಭದ್ರ ತಿವಾರಿಯನ್ನು ಕೊಲ್ಲಬೇಕು ಅಂದರು...ಅಜಾದರ ತಪ್ಪುಗಳ ಸಂಖ್ಯೆಯಲ್ಲಿ ಇನ್ನೊಂದು ಸೇರ್ಪಡೆಯಾಯಿತು... ಈ ವೀರಭದ್ರ ತಿವಾರಿಯ ಬೇಟೆಗೆ ಅಜಾದರು ನಿಯೋಜಿಸಿದ್ದು ಯಶಪಾಲ್ ಮತ್ತು ಖೋಕಿ ಅನ್ನೋ ಮಹಿಳಾ ಕ್ರಾಂತಿಕಾರಿಣಿ. ಮಹಿಳಾ ಕ್ರಾಂತಿಕಾರಿಣಿ ಆಗಿದ್ದರು ನಡತೆಯಲ್ಲಿ ಈಕೆ ಯಶಪಾಲ್ ಮತ್ತು ತಿವಾರಿಯ ಪಡಿಯಚ್ಚು... ಎಂಥಾ ವಿಚಿತ್ರ ನೋಡಿ... ಅಜಾದ್ ಈ ಕೆಲಸಕ್ಕೆ ನಿಯೋಜಿಸಿದವರಿಗೇ ತಿವಾರಿಯನ್ನು ಕೊಲ್ಲುವ ಮನಸ್ಸಿರಲಿಲ್ಲ ಕಾರಣ ಯಶಪಾಲ್ ನಿಗೆ ತಿವಾರಿ ಪ್ರಾಣ ಭಿಕ್ಷೆ ನೀಡಿದ್ದ... ಹಾಗಾಗಿ ಆ ಋಣ ಯಶಪಾಲನ ಮೇಲಿತ್ತು.. ಇನ್ನು ಖೋಕಿ ತಿವಾರಿಯನ್ನು ಕೊಲ್ಲುವ ಸಂಭವವೇ ಇಲ್ಲ ಕಾರಣ ಈಕೆ ತಿವಾರಿಯ ಪ್ರೇಯಸಿ... ಅದೆಷ್ಟೋ ಯೋಜನೆಗಳನ್ನು ಮಾಡಿ ಸಫಲನಾಗಿದ್ದ ಅಜಾದ್ ಇಲ್ಲಿ ಸಫಲನಾಗಲೇ ಇಲ್ಲ.... ಇಲ್ಲಿನ ವಿಫಲತೆಯೇ ಅಜಾದರ ಜೀವಕ್ಕೆ ದೊಡ್ಡ ಕಂಟಕವಾಗಲಿತ್ತು....

No comments:

Post a Comment