Saturday 31 October 2015

ಇದು ವಿಮರ್ಶೆಯಲ್ಲ ನನ್ನನಿಸಿಕೆ...



ಇತ್ತೀಚೆಗೆ ಒಂದು ವಿಷಯದ ಬಗ್ಗೆ ನಾ ಮೆಚ್ಚುವ ಇಬ್ಬರು ಲೇಖಕರ ಆರ್ಟಿಕಲ್ ಓದಿದೆ. ಒಂದು ಪ್ರತಾಪ್ ಸಿಂಹ ಅವರ " ಮೇನಕೆ ಬಂದು ಕುಣಿಯುವವರೆಗೆ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇಯೇ ಆಯಿತು " ಇನ್ನೊಂದು ಚಕ್ರವರ್ತಿ ಸೂಲಿಬೆಲೆಯವರ " ಎರಡು ರಾಷ್ಟ್ರೀಯ ಪಕ್ಷ ಎಷ್ಟೊಂದು ಅಂತರ ". ಮೊದಲೇ ಹೇಳಿದಂತೆ ಎರಡೂ ಕರ್ನಾಟಕದಲ್ಲಿನ ಬಿಜೆಪಿಯ ಸೋಲಿನ ಕುರಿತಾಗೇ ಇರೋದು. ಪ್ರತಾಪ್ ಸಿಂಹ ಅವರು ಯಾವ ರೀತಿ ಸೋಲನುಭವಿಸಿತು ಅನ್ನೋದನ್ನ ವಿಶ್ಲೇಷಣೆ ಮಾಡಿದ್ದರೆ, ಸೂಲಿಬೆಲೆಯವರು ಎರಡು ಪಕ್ಷಗಳ ನಡುವಿನ ವ್ಯತ್ಯಾಸವನ್ನ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಈ ಎರಡು ಲೇಖನಗಳನ್ನ ಓದಿದ ನಂತರ ನನಗೆ ನನ್ನ ಅನಿಸಿಕೆಯನ್ನು ಹೇಳೋ ಮನಸಾಯಿತು ಹಾಗಾಗಿ ಈ ಸಣ್ಣ ಲೇಖನ...ಮೊದಲೇ ಶೀರ್ಷಿಕೆಯ ರೂಪದಲ್ಲಿ ಹೇಳಿದ್ದೇನೆ, ಇದು ವಿಮರ್ಶೆಯಲ್ಲ ಯಾಕೆಂದರೆ ಇಬ್ಬರೂ ತಮ್ಮ ಬರಹಗಳಿಂದ ಜನರ ಮಂತ್ರಮುಗ್ಧರನ್ನಾಗಿಸಿದವರು. ಅವರ ಕುರಿತಾಗಿ ವಿಮರ್ಶೆ ಮಾಡುವ ಯೋಗ್ಯತೆ ಎಳ್ಳಷ್ಟೂ ನನ್ನಲ್ಲಿಲ್ಲ ಅನ್ನೋದು ನನ್ನ ಧೃಡವಾದ ನಂಬಿಕೆ. ಹಾಗಾಗಿ ಇಲ್ಲಿರೋದು ಅದೇ ವಿಷಯದ ಕುರಿತಾದ ನನ್ನ ಅನಿಸಿಕೆ ಅಷ್ಟೇ..
ಮೊದಲಿಗೆ ಪ್ರತಾಪ್ ಸಿಂಹರ ಲೇಖನವನ್ನ ನೋಡೋದಾದ್ರೆ... ಬಿಜೆಪಿಯ ಸೋಲಿನ ಕುರಿತಾದ ಪ್ರತಾಪ್ ಅವರ ಅನಾಲಿಸಿಸ್ ಸೂಪರ್... ಎರಡು ಮಾತಿಲ್ಲದೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅಧಿಕಾರದ ಮೆಟ್ಟಲೇರುವ ಹೊತ್ತಲ್ಲಿ ಆದ ಸಣ್ಣ ಸಣ್ಣ ತಪ್ಪುಗಳು ಮುಂದೆ ಯಾವ ರೀತಿ ಯುಡಿಯೂರಪ್ಪ ಅವರನ್ನ ಕಾಡತೊಡಗಿತು, ಯಾವ ರೀತಿ ಹೈಕಮಾಂಡ್ ನ ನಡೆಗಳು ಯಡಿಯೂರಪ್ಪ ಅವರನ್ನ ತಪ್ಪು ದಾರಿ ಹಿಡಿಯುವಂತೆ ಪ್ರೇರೇಪಿಸಿತು ಅನ್ನೋದರ ಸ್ಪಷ್ಟ ಚಿತ್ರಣ ಕೊಡುತ್ತಾ ಹೋಗುತ್ತಾರೆ. ಆಪರೇಶನ್ ಕಮಲ, ರೆಡ್ಡಿಗಳ ದರ್ಪ, ಸುಷ್ಮಾರವರ ಮಾತುಗಳು, ಅನಂತ್ ಕುಮಾರರ ಒಳಸಂಚು ಹೀಗೆ...ಏಕಾಂಗಿತನವನ್ನ ಅನುಭವಿಸಿದ ಯಡಿಯೂರಪ್ಪನವರು ಎಡವಿದರು ಅಂದರು. ಇದೆಲ್ಲವನ್ನೂ ಒಪ್ಪೋಣ ಆದರೆ ಸ್ವಲ್ಪ ಹಿಮ್ದಿನದನು ಮೆಲುಕು ಹಾಕಿದರೆ ಇದೇ ಪ್ರತಾಪ್ ಸಿಂಹ ಅವರು ಯಡಿಯೂರಪ್ಪ ಅವರನ್ನ ತಮ್ಮ ಎರಡು ಮೂರು ಲೇಖನದಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು...( ೨೦೦೮ ರ ಲೇಖನಗಳು.. ಅವರ ಬ್ಲಾಗ್ ನಲ್ಲಿ ಈಗಲೂ ಲಭ್ಯವಿದೆ) ವರ್ಗಾವಣೆಯ ಕುರಿತಾಗಿ, ನಿವೃತ್ತಿ ವಯಸ್ಸನ್ನು ಏರಿಸಿದ್ದುದರ ಕುರಿತಾಗಿ ಹೀಗೆ ಹಲವು ವಿಷಯಗಳಲ್ಲಿ ನೇರವಾಗಿ ದೋಷಾರೋಪಣೆ ಮಾಡಿದ್ದ ಪ್ರತಾಪರಿಗೆ ಈಗ ಯುಡಿಯೂರಪ್ಪನವರ ತಪ್ಪುಗಳು ಕೂಡ ಬಿಜೆಪಿಯ ಸೋಲಿಗೆ ಒಂದು ಕಾರಣ ಅಂತನ್ನಿಸದೇ ಇರೋದು ನನಗೇಕೋ ಸರಿ ಅನ್ನಿಸಲಿಲ್ಲ. ಯಡಿಯೂರಪ್ಪನವರ ಪುತ್ರಪ್ರೇಮದ ಬಗ್ಗೆ ಟೀಕಿಸಿದ್ದ ಪ್ರತಾಪರು ಯಾಕೋ ಇಲ್ಲಿ ಅದನ್ನ ಉಲ್ಲೇಖಿಸಲಿಲ್ಲ. ಬಿಜೆಪಿಯಿಂದ ಹೊರ ಬಂದ ಮೇಲೆ ಯಡಿಯೂರಪ್ಪನವರ ನಡೆಯ ಬಗೆಗೆ ಯಾವುದೇ ರೀತಿಯ ಮಾತುಗಳನ್ನಾಡದೇ "ಬಿಜೆಪಿ" ಯಡಿಯೂರಪ್ಪನವರ ಬಳಿ ಹೋಗಿ ಅವರನ್ನ ಕರೆತರುವ ಪ್ರಯತ್ನ ಮಾಡಬೇಕು ಅಂದರು.
ನನಗೆ ಯಡಿಯೂರಪ್ಪನವರ ಬಗ್ಗೆ ಯಾವುದೇ ದ್ವೇಷ ಇಲ್ಲ ಆದರೆ ಅಸಮಾಧಾನ ಖಂಡಿತ ಇದೆ. ಕಾರಣ ಸದಾ ಜನಸೇವೆಯ ಪಣತೊಟ್ಟವನಿಗೆ ಇಂತಾದ್ದೇ ಪದವಿಯಲ್ಲಿದ್ದುಕೊಂಡು ನಾನು ಜನಸೇವೆ ಮಾಡುತ್ತೇನೆ ಅನ್ನೋ ಭಾವನೆ ಬರಬಾರದು. ಯಾವುದೇ ಪದವಿ ಇರಲಿ ಜನಸೇವೆ ಮಾತ್ರ ಮುಖ್ಯವಾಗಬೇಕಲ್ವಾ.. ಹಾಗಂತ ಕರ್ನಾಟಕದಲ್ಲಿನ ಬಿಜೆಪಿಯಲ್ಲಿನ ನಾಯಕರುಗಳಲ್ಲಿ ಹೆಚ್ಚಿನ ನಾಯಕತ್ವದ ಗುಣ ಇರುವುದು ಯಡಿಯೂರಪ್ಪನವರಲ್ಲೇ ಅನ್ನೋದನ್ನ ತಳ್ಳಿ ಹಾಕುವಂತಿಲ್ಲ. ಆದರೆ ಅವರಲ್ಲಿನ " ನಾನೇ..." ಅನ್ನುವ ಅಹಂ ಸರಿಯಲ್ಲ ಅನ್ನೋದು ನನ್ನ ಭಾವನೆ. ಅದನ್ನು ಬಿಟ್ಟು ಬಿಟ್ಟರೆ ಸಾಕು. ಎಲ್ಲವೂ ಸರಿಯಾಗುತ್ತದೆ. ಈ ಕಿವಿಮಾತನ್ನ ಪ್ರತಾಪರ ಲೇಖನದಲ್ಲಿ ಹುಡುಕಾಡಿದ್ದೆ. ಆದರ್ಯಾಕೋ ಸಿಗಲೇ ಇಲ್ಲ. ಉಳಿದೆಲ್ಲರನ್ನ ದೂಷಿಸಿದ ಪ್ರತಾಪರು , ಬಿಜೆಪಿ ಪಕ್ಷವೇ ಯಡಿಯೂರಪ್ಪನವರ ಬಳಿ ಹೋಗಬೇಕು ಅಂದರು. ಇದು ನನ್ನನ್ನ ಬಹಳಷ್ಟು ಕಾಡಿತು. ಕಾರಣ ಪಕ್ಷ ಯಾವತ್ತಿಗೂ ವ್ಯಕ್ತಿಗಿಂತ ಮೇಲು ಅನ್ನೋದು ನನ್ನ ಭಾವನೆ. ಒಂದು ವೇಳೆ ಒಬ್ಬ ವ್ಯಕ್ತಿ ಯಾವುದೇ ತಪ್ಪು ಮಾಡಿಲ್ಲ ಅಂತಾದಾಗ ಪಕ್ಷ ಅವನ ಬಳಿ ಹೋಗುವುದರಲ್ಲಿ ತಪ್ಪನಿಸಲಿಕ್ಕಿಲ್ಲ ಆದರೆ ಇಲ್ಲಿ ವ್ಯಕ್ತಿಯದೂ ತಪ್ಪಿದೆ ಅಂತಾದಾಗ ಮೊದಲು ಪಕ್ಷ ಯಾಕೆ ತಲೆಬಾಗಬೇಕು...? ಇಲ್ಲಿ ಒಬ್ಬರಿಗೊಬ್ಬರು ಪೂರಕವಾಗಿರುವುದರಿಂದ ವ್ಯಕ್ತಿ ಮೊದಲು ಪಕ್ಷಕ್ಕೆ ತಲೆಬಾಗಲಿ ಅನ್ನೋದು ನನ್ನ ಅಭಿಪ್ರಾಯ. ಈ ಮೊದಲೊಮ್ಮೆ ಹೇಳಿದ್ದೆ ಬಿಜೆಪಿಗಾದ ನಷ್ಟಕ್ಕಿಂತಲೂ ಅತಿಯಾದ ನಷ್ಟವಾಗಿದ್ದು ಯಡಿಯೂರಪ್ಪನವರಿಗೆ ಹಾಗಾಗಿ ಮಾತುಕತೆಯ ಒಲವು ಅವರಲ್ಲಿ ಮೊದಲು ಬರಬೇಕು.
ಇನ್ನು ದಕ್ಷಿಣ ಕನ್ನಡದ ಪರಿಸ್ಥಿಯ ಕುರಿತು ಪ್ರಭಾಕರ ಭಟ್ಟರನ್ನು ತುಂಬಾನೇ ತರಾಟೆಗೆ ತೆಗೆದುಕೊಂಡರು. ಅದರೊಳಗಿನ ನಿಜಾಂಶ ಕುರಿತು ನನಗಂತೂ ಅಷ್ಟಾಗಿ ಗೊತ್ತಿಲ್ಲ. ಯಾಕೆಂದರೆ ಇಲ್ಲಿನ ಹಲವಾರು ಜನರಿಗೆ ಪ್ರಭಾಕರ ಭಟ್ಟರು ಯೋಗ್ಯತೆಯ ಅರಿವಿದೆ. ಆದರೆ ಪ್ರತಾಪರು ಪತ್ರಕರ್ತರು ಹಾಗಾಗಿ ಒಳಸುದ್ದಿಗಳೆಲ್ಲವೂ ಗೊತ್ತಿರಬಹುದು. ನಾವು ಬರಿಯ ಓದುಗರು ಅಷ್ಟೊಂದು ಮಾಹಿತಿ ನಮಗೆ ಸಿಗೋದಿಲ್ಲ. ಇರಲಿ ಬಿಡಿ ಆದರೆ ಆ ಕುರಿತಾಗಿ ನನ್ನ ಅಸಮಾಧಾನ ಇರುವುದು ಜಾತಿಗಳನ್ನೆಳೆದು ತಂದಿರುವುದಕ್ಕೆ. ಇತ್ತೀಚೆಗಿನ ಕೆಲವು ಸಮಯದಿಂದ ಸಂಘದ ಒಡನಾಟದಲ್ಲಿರುವುದರಿಂದ ಈ ಮಾತನ್ನ ಹೇಳಬಯಸುತ್ತೇನೆ. ಸಂಘ ಅಂದರೆ ಅದೊಂದು ರೀತಿಯ ಅರ್ಪಣಾ ಮನೋಭಾವನೆ ನನ್ನ ಧರ್ಮದ ಕುರಿತಾಗಿ ಮತ್ತು ನನ್ನ ದೇಶದ ಕುರಿತಾಗಿ. ಇಲ್ಲಿ ಯಾವುದೇ ವೈಯಕ್ತಿಕ ಆಸೆಗಳು ಇರುವ ಸಾಧ್ಯತೆಯೇ ಇಲ್ಲ . ಹಾಗಾಗಿಯೇ ಮಂಗಳೂರಿನ ಸಾಂಘಿಕ್ ನಲ್ಲಿ ಒಂದು ಲಕ್ಷಕ್ಕೂ ಮೀರಿದ ಜನ ಪಾಲ್ಗೊಂಡಿದ್ದು. ಇದೇ ಒಂದು ವೇಳೆ ಬಿಜೆಪಿಯ ಕಾರ್ಯಕ್ರಮವಾಗಿದ್ದರೆ ಅಲ್ಲಿ ಖಂಡಿತ ಒಂದು ಲಕ್ಷ ಜನ ಒಗ್ಗೂಡುವ ಸಾಧ್ಯತೆ ಇರಲಿಕ್ಕಿಲ್ಲ. ಸ್ವಯಂಸೇವಕರಲ್ಲಿನ ನಿಸ್ವಾರ್ಥತೆ ಬಿಜೆಪಿಯ ಕಾರ್ಯಕರ್ತರಲ್ಲಿಲ್ಲ. ಹಾಗಾಗಿ ಇಲ್ಲಿ ಯಾರೊಬ್ಬನೂ ಯಾವುದೇ ಪದವಿಯ ಆಕಾಂಕ್ಷಿಯಾಗೋದಿಲ್ಲ , ತನಗೆ ನೀಡಲ್ಪಟ್ಟ ಕೆಲಸವನ್ನು ದೇಶಸೇವೆ ಅನ್ನುತ್ತಾ ಮಾಡುತ್ತಾನೆ. ಅದು ಬಿಲ್ಲವರೇ ಆಗಿರಲಿ, ಮೊಗವೀರರೇ ಆಗಿರಲಿ. ಒಮ್ಮೆ ಸ್ವಯಂಸೇವಕ ಅಂತಾದ ಮೇಲೆ ಆತ ತಾನು ಬಿಲ್ಲವ ಅಥವಾ ಮೊಗವೀರ ಅನ್ನೋದನ್ನ ಬದಿಗಿಟ್ಟು ಬಿಡುತ್ತಾನೆ. ಹೊಡೆದಾಟಕ್ಕೆ ಬಿಲ್ಲವರು ಮೊಗವೀರರನ್ನ ಬಳಸಿಕೊಂಡರು ಅನ್ನೋದನ್ನ ಸಲೀಸಾಗೇ ಹೇಳಿದರು ಅವರಿಗೆ ಸ್ಥಾನ ಮಾನ ಕೊಡಲಿಲ್ಲ ಅಂದರು, ಆದರೆ ಲಾಲಾಜಿ ಮೆಂಡನ್ ಮೊಗವೀರ ಸಮಾಜದವರು, ಸುನಿಲ್ ಕುಮಾರ್ ಬಿಲ್ಲವ ಸಮಾಜದವರು ಇವೆರೆಲ್ಲರಿಗೆ ಸ್ಥಾನ ಮಾನ ಸಿಕ್ಕಿದೆ ತಾನೇ. ಬ್ರಾಹ್ಮಣರಿಗೆ ಬೆರಳಿಗೆ ಗಾಯವಾದ ಉದಾಹರಣೆಗಳಿಲ್ಲ ಅಂದರು. ಬಹುಷ ಇದು ಎದೆಗಾರಿಕೆಯ ಪ್ರಶ್ನೆ ಹಿಂದಿನಿಂದಲೂ ಕ್ಷತ್ರಿಯ ವರ್ಗವೇ ಹೋರಾಟಕ್ಕೆ ಸಜ್ಜಾಗುತ್ತಿದ್ದುದು. ಬ್ರಾಹ್ಮಣರ ಸಾತ್ವಿಕ ಆಹಾರವೇ ಇದಕ್ಕೆ ಕಾರಣವಾಗಿರಬಹುದು ಅಲ್ವಾ. ಹಾಗಂತ ದೇಶಕ್ಕಾಗಿ ತಾವೂ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಹೋರಾಟ ಮಾಡಿಯಾರು. ಎಲ್ಲೋ ಸಂಘದ ವಿಷಯದಲ್ಲಿ ಜಾತಿಯನ್ನು ಎಳೆದು ತಂದಿದ್ದು ನನಗೇಕೋ ಹಿಡಿಸಲಿಲ್ಲ ಕಾರಣ ಸಂಘ ನಿಜವಾದ ಜಾತ್ಯಾತೀತ ಶಕ್ತಿ...( ನಿಜವಾದ ಸ್ವಯಂಸೇವಕರು ( ಯಾವುದೇ ಜಾತಿಯವರಾಗಿರಲಿ..) ಪ್ರತಾಪರ ಈ ಮಾತಿನಿಂದ ಸಂಘದ ಮೇಲಿನ ನಿಷ್ಠೆಯನ್ನು ಬಿಟ್ಟು ಕೊಡಲಿಕ್ಕಿಲ್ಲ ಅನ್ನೋದು ನನ್ನ ಬಲವಾದ ನಂಬಿಕೆ) ಪದವಿಯ ಆಸೆ ಅಥವಾ ಸ್ಥಾನ ಮಾನದ ಆಸೆಗಳನ್ನಿಟ್ಟುಕೊಂಡು ಬಂದವ ಸ್ವಯಂಸೇವಕನಾಗಿರಲು ಹೇಗೆ ತಾನೇ ಸಾಧ್ಯ...?
ಇನ್ನು ಸೂಲಿಬೆಲೆಯವರ ಲೇಖನ ತೆಗೆದುಕೊಂಡರೆ ಯಡಿಯೂರಪ್ಪನವರು ಹೋದುದನ್ನ ಉಲ್ಲೇಖಿಸಿ ನಷ್ಟವಾದುದನ್ನ ಪರೋಕ್ಷವಾಗಿ ಹೇಳಿದರೂ " ಬಿಜೆಪಿಯಲ್ಲಿ ಪಕ್ಷ ದೊಡ್ಡದು ಉಳಿದವರೆಲ್ಲರೂ ಚಿಕ್ಕದು ಅನ್ನುತ್ತಾರೆ." ಬಹುಷ ಇದನ್ನ ನನ್ನ ಜೊತೆ ಹಲವಾರು ಜನ ಒಪ್ಪಿಕೊಂಡಾರು. ಪಕ್ಷಕ್ಕಿಂತ ದೊಡ್ಡದಿಲ್ಲ ಅನ್ನುವುದನ್ನ ಯಾವರೀತಿ ಸಮರ್ಥಿಸಿಕೊಂಡರೆಂದರೆ ಅಡ್ವಾಣಿಯವರನ್ನೂ ತರಾಟೆಗೆ ತೆಗೆದುಕೊಂಡರು. ನಿಜ ಸಣ್ಣದಾಗಿದ್ದಾಗಲೇ ಚಿವುಟಬೇಕಾಗಿದ್ದ ತಪ್ಪುಗಳನ್ನ ಹಿರಿಯರಾಗಿ ಚಿವುಟದೇ ಇದ್ದಿದ್ದು ಅಡ್ವಾಣಿಯವರ ತಪ್ಪೇ... ಆವಾಗ ಸುಮ್ಮನಿದ್ದು ಈಗ ಬಿಜೆಪಿ ಗೆಲ್ಲುತ್ತಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು ಅನ್ನೋದು ಎಷ್ಟು ಸರಿ...? ಆದರೆ ಸೂಲಿಬೆಲೆಯವರ ಒಂದು ಮಾತು ನನಗೆ ಅಷ್ಟಾಗಿ ಹಿಡಿಸಲಿಲ್ಲ ಅದು " ಶಾಸಕರಾಗಿ ಆಯ್ಕೆಯಾಗೋದು ಮೊದಲನೆಯ ಬಾರಿ ಅನುಭವ ಪಡೆಯಲಿಕ್ಕೆ ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ . ಮೂರನೆ ಬಾರಿ ಸಾಕು ತರುಣರಿಗೆ ದಾರಿ ಬಿಡಿ... ಎನ್ನುವ ಪ್ರಭಾಕರ ಭಟ್ಟರ ಮಾತನ್ನು ಉಲ್ಲೇಖಿಸಿದ್ದು. ನನ್ನ ಪ್ರಕಾರ ಇಲ್ಲಿ ಈ ಮಾತು ಶಾಸಕನಾಗಿರುವವನ ವ್ಯಕ್ತಿತ್ವ ಅಥವ ಆತ ಮಾಡುವ ಕೆಲಸದ ರೀತಿಯ ಮೇಲೆ ನಿರ್ಭರವಾಗಿರಬೇಕು... ಈಗ ಮೋದಿಯ ವಿಚಾರವನ್ನೇ ತೆಗೆದುಕೊಳ್ಳಿ ಮೂರು ಬಾರಿ ಅಧಿಕಾರ ಕೊಟ್ಟು ಸುಮ್ಮನಿರಲು ಸಾಧ್ಯವೇ....ಇನ್ನೊಂದು ಸೂಲಿಬೆಲೆಯವರು ಕೂಡ ಅಗ್ರಗಣ್ಯ ನಾಯಕರನ್ನ ತರಾಟೆಗೆ ತೆಗೆದುಕೊಂಡಂತೆ ಯಡಿಯೂರಪ್ಪನವರ ಕಿವಿ ಹಿಂಡಲಿಲ್ಲ ಅನ್ನುವುದು ನನಗೂ ಬೇಸರ ತಂದಿತು.
ಇರಲಿ ಬಿಡಿ ಒಟ್ಟಾರೆಯಾಗಿ ನೋಡಿದಾಗ ಎರಡು ಲೇಖನಗಳಲ್ಲಿ ನನಗೆ ಚಕ್ರವರ್ತಿಯವರ ಲೇಖನ ಸ್ವಲ್ಪ ಹೆಚ್ಚು ಅಂಕ ಪಡೆಯಲು ಯೋಗ್ಯ ಅಂತನಿಸಿತು ಕಾರಣ ಅವರು ತಮ್ಮ ಇಡಿಯ ಲೇಖನದಲ್ಲಿ ಸಂಘ ಶಕ್ತಿಯ ಬಗ್ಗೆ ಮತ್ತು ಸಿದ್ಧಾಂತಗಳ ಬಗ್ಗೆ ಬರೆದಿದ್ದಾರೆ. ನನ್ನ ಅಭಿಪ್ರಾಯವೂ ಅದೇ ಒಬ್ಬ ವ್ಯಕ್ತಿ ಸಂಘವನ್ನು ಸೇರಲಿ ಅಥವಾ ಯಾವುದೇ ಪಕ್ಷವನ್ನು ಸೇರಲಿ ಅಲ್ಲಿನ ಸಿದ್ಧಾಂತಗಳಿಗೆ ಬದ್ಧನಾಗಿರಬೇಕು. ಯಾವತ್ತಿಗೂ ನನಗಿಂತ ಪಕ್ಷ ಮೇಲು ಅನ್ನುವ ಸಾಮಾನ್ಯ ಜ್ನಾನವುಳ್ಳವನಾಗಿರಬೇಕು ಆಗ ಮಾತ್ರ ಪಕ್ಷಕ್ಕಾಗಲಿ ಅಥವ ವ್ಯಕ್ತಿಗಾಗಲಿ ಒಳ್ಲೆಯ ಹೆಸರು ಬರಲು ಸಾಧ್ಯ... ಅದಕ್ಕಾಗಿ ಏನೋ ಸೂಲಿಬೆಲೆಯವರು ಬಿಜೆಪಿ ಸಂಘ ಶಕ್ತಿಯಿಂದಾಗಿ ಮತ್ತೆ ಮೇಲೆದ್ದು ಬರುತ್ತದೆ ಅಂದರೇ ಹೊರತು ಯಡಿಯೂರಪ್ಪನವರಿಂದ ಮಾತ್ರ ಮೇಲೆ ಬರಲು ಸಾಧ್ಯ ಅನ್ನಲಿಲ್ಲ. ಅಂದ ಹಾಗೆ ಪ್ರತಾಪ್ ಸಿಂಹರೇ ಮೇನಕೆಯ ಪ್ರಕರಣದ ಬಗ್ಗೆ ಗೊತ್ತಾದ ಮೇಲೂ ಜನರು ವಿಶ್ವಾಮಿತ್ರರನ್ನ ಮಹಾ ತಪಸ್ವಿ ಅಂತಾನೇ ಕರೆಯುತ್ತಾರೆ ಅಲ್ವಾ....?

No comments:

Post a Comment