Thursday 22 October 2015

ಕಮಲ್ ಹಾಸನ್ ಅವರಿಗೊಂದು ಬಹಿರಂಗ ಪತ್ರ...



ಪ್ರೀತಿಯ ಕಮಲ್ ಹಾಸನ್ ಅವರೆ, ನಿಮ್ಮ ಅಭಿಮಾನಿಯೋರ್ವನ ಮನದಾಳದ ನಮನಗಳು. ಬಹುಶ ಭಾರತ ಕಂಡ ಮಹಾನ್ ನಟರಲ್ಲಿ ಅಗ್ರಗಣ್ಯರು ನೀವು ಅಂತಂದರೆ ಅದು ಅತಿಶಯೋಕ್ತಿ ಆಗಲಿಕ್ಕಿಲ್ಲ. ಅದೆಷ್ಟು ವಿಭಿನ್ನ ಪಾತ್ರಗಳನ್ನು ಮಾಡಿದ್ದೀರೋ ಲೆಕ್ಕ ಹಾಕೋದು ಬಹಳ ಕಷ್ಟ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳೋದು ನೀವೊಬ್ಬರೇ, ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನಿಮ್ಮ ಇತ್ತೀಚಿನ ಮತ್ತು ವಿವಾದಕ್ಕೊಳಗಾಗಿರೋ " ವಿಶ್ವರೂಪಂ " ಕೂಡ ಅಷ್ಟೇ ವಿಭಿನ್ನವಾಗಿರಬಹುದು. ಕರ್ನಾಟಕದಲ್ಲಿ ಬಿಡುಗಡೆಯಾದರೂ ನನಗೆ ನೋಡಲು ಸಮಯ ಸಿಗಲಿಲ್ಲ. ಬಹುಶ ರಾಜಕೀಯ ವ್ಯಕ್ತಿಗಳ ವೋಟ್ ಬ್ಯಾಂಕ್ ದಾಹಕ್ಕೆ ನೀವು ಮತ್ತು ನಿಮ್ಮ ಚಿತ್ರ ಬಲಿಯಾಗಿರುವುದು ಬಹಳ ಖೇದಕರ. ಚಿತ್ರದ ವಿಮರ್ಶೆಯಲ್ಲಿ ಅಲ್ ಖೈದಾದ ಬಗ್ಗೆ ತೋರಿಸಿರುವ ಮಾಹಿತಿ ಇತ್ತು. ಅದೊಂದು ಭಯೋತ್ಪಾದಕ ಸಂಘಟನೆ, ಇಡಿಯ ವಿಶ್ವಕ್ಕೆ ಗೊತ್ತು , ಆದರೂ ನಮ್ಮ ತಮಿಳುನಾಡಿನ ಮುಖ್ಯಮಂತ್ರಿಗೆ ಇದರ ಮಾಹಿತಿ ಇಲ್ಲದಿರುವುದು ಬಹಳ ಬೇಸರವಾಗುತ್ತೆ. ಒಂದು ವೇಳೆ ಈ ವಿಚಾರ ಗೊತ್ತಿದೆ ಎಂದಾದಲ್ಲಿ ಆಕೆ ಮಾಡುತ್ತಿರುವುದು ವೋಟ್ ಬ್ಯಾಂಕ್ ರಾಜಕೀಯ ಅನ್ನೋದು ಸುಸ್ಪಷ್ಟವಾಗುತ್ತೆ. ( ಬಹುಶ ಒಂದು ಕಾಲದಲ್ಲಿ ನೀವು ಮುಸ್ಲಿಂ ಬಂಧುಗಳ ಮೇಲೆ ತೋರಿದ ಮಮಕಾರವನ್ನ ( ಬಾಬರಿ ಮಸೀದಿ ಧ್ವಂಸ ಆದಾಗ ಕಮಲ್ ಅವರು ಪ್ರಧಾನಿ ಬಳಿ ಹೋಗಿ ಮುಸ್ಲಿಮರಿಗೆ ಸರಿಯಾದ ರಕ್ಷಣೆ ಕೊಡಿ ಅಂದಿದ್ದರಂತೆ... ಟಿವಿ ನ್ಯೂಸ್ ನಲ್ಲಿ ನೋಡಿದ್ದು) ಇಂದು ಜಯಲಲಿತಾ ಅವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ತೋರಿಸುತ್ತಿದ್ದಾರೆ. ಹೀಗಿರುವಾಗ ರಾಜಕೀಯ ವ್ಯಕ್ತಿಗಳಿಂದಾಗಿರೋ ವಿವಾದ ಇದು, ಇಲ್ಲಿನ ಜನರಿಂದಾಗಿ ಆಗಿರೋ ಅನ್ಯಾಯ ಅಲ್ಲ. ಇದನ್ನು ಪರಿಹರಿಸೋಕೆ ಕೋರ್ಟ್ ಗಳಿವೆ. ಆ ಮೂಲಕವೇ ಪರಿಹರಿಸಿಕೊಳ್ಳುವ ಆಲೋಚನೆ ಮಾಡಬೇಕಿತ್ತು. ಹಾಗೆ ಮಾಡುವಿರಿ ಎಂದುಕೊಂಡಿದ್ದೇನೆ.
ಆದರೆ ಈ ಪತ್ರ ಬರೆದ ಉದ್ದೇಶ ನೀವು ಪ್ರೆಸ್ ಮೀಟ್ ನಲ್ಲಿ ಆಡಿದ ಒಂದು ಮಾತು. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾದಲ್ಲಿ ನಾನು ಈ ದೇಶ ಬಿಡಲು ಕೂಡ ಸಿದ್ಧ. ಬರಿಯ ಒಂದು ಚಿತ್ರದ ವಿವಾದಕ್ಕೆ ದೇಶ ಬಿಡುವ ಆಲೋಚನೆ ನಿಮ್ಮಲ್ಲಿ ಬಂದಿದ್ದು ನನಗೇಕೋ ಸರಿ ಅನ್ನಿಸಲಿಲ್ಲ. ಖಂಡಿತವಾಗಿಯೂ ಭಾರತಕ್ಕೆ ಕಲಾವಿದನಾಗಿ ನಿಮ್ಮ ಕೊಡುಗೆ ತುಂಬಾ ಇದೆ. ಆದರೆ ನಿಮ್ಮ ಕಲೆಯನ್ನು ಮೆಚ್ಚಿ ಇಷ್ಟು ಎತ್ತರಕ್ಕೆ ಏರಿಸಿದ್ದು ಈ ಭಾರತದ ಜನರೇ... ಅದೆಷ್ಟೋ ಜನ್ಮದ ಪುಣ್ಯಗಳ ನಂತರ ಈ ದೇಶದಲ್ಲಿ ಮಾನವನಾಗಿ ಹುಟ್ಟುವ ಭಾಗ್ಯ ಸಿಗುತ್ತಂತೆ, ಅಂತಹಾ ದೇಶವನ್ನು ತೊರೆಯುವ ಮಾತಾಡಿದಿರಲ್ಲ ಇದು ಸರೀನಾ....? ಸರಿ, ಒಂದು ವೇಳೆ ಬಿಟ್ಟು ಹೋದಿರಿ ಅಂತಾನೆ ಇಟ್ಟುಕೊಳ್ಳೋಣ ಯಾವ ದೇಶದಲ್ಲಿ ಸಿಕ್ಕೀತು ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ...? ಕ್ರಿಶ್ಚಿಯನ್ ದೇಶದಲ್ಲಿ ಕ್ರೈಸ್ತ ಧರ್ಮಕ್ಕೆ ವಿರುದ್ಧವಾಗಿ ಏನನ್ನು ತೋರಿಸುವಂತಿಲ್ಲ, ಮುಸ್ಲಿಂ ರಾಷ್ಟ್ರಗಳಲ್ಲಿ ಇಸ್ಲಾಂ ವಿರುದ್ಧವಾಗಿ ತೋರಿಸುವಂತಿಲ್ಲ. ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಮೂಲ ಧರ್ಮದ ವಿರುದ್ಧವಾಗಿ ಮಾತನಾಡುವಂತಿಲ್ಲ. ಮಾತಾಡೋಕೆ ಅಥವಾ ತೋರಿಸೋಕೆ ಸಾಧ್ಯ ಇದೆ ಎಂದಾದರೆ ಅದು ಭಾರತದಲ್ಲಿ ಮಾತ್ರ. ಇಲ್ಲಿನ ಮೂಲ ಧರ್ಮ ಹಿಂದೂಗಳ ಕುರಿತಾಗಿ ಅದೆಷ್ಟೇ ಕೆಟ್ಟದಾಗಿ ಚಿತ್ರಿಸಿ ಯಾರೂ ಮಾತಾಡೋಲ್ಲ....(ಈ ದೇಶದ ಮತ್ತು ಈ ಧರ್ಮದ ಅತ್ಯಂತ ದೊಡ್ದ ದುರಂತವಿದು... ಇದಕ್ಕೆ ಉದಾಹರಣೆ... ನಿಮ್ಮ ದಶಾವತಾರಂ ಸಿನಿಮಾದಲ್ಲಿ ಶೈವರು ಮತ್ತು ವೈಷ್ಣವರ ಕದನವನ್ನ ಅತಿರೇಕವಾಗಿ ಚಿತ್ರಿಸಿದಿರಿ. ಒಬ್ಬ ಸೈಂಟಿಸ್ಟ್ ನ ಪಾತ್ರಧಾರಿಯಾಗಿ ದೇವರ ಮೇಲಿನ ಭಾವನೆಗಳನ್ನ ಮೂಡನಂಬಿಕೆಗಳು ಅಂತಂದಿರಿ... ಯಾರಾದರೂ ತುಟಿ ಪಿಟಿಕ್ಕೆಂದರೆ.....ಇಲ್ಲ ತಾನೆ. ನಿಮ್ಮೊಳಗಿನ ನಾಸ್ತಿಕನನ್ನು ಕಂಡ ಮೇಲೂ ಹಿಂದೂಗಳು ನಿಮ್ಮನ್ನ ಆರಾಧಿಸಿದರಲ್ವಾ) ಇದು ಇಲ್ಲಿ ನಿಮಗೆ ಸಿಗೋ ಅಭಿವ್ಯಕ್ತಿ ಸ್ವಾತಂತ್ರ್ಯ... ಚಾರ್ವಾಕನನ್ನೂ ಸಂತನಂತೆ ಕಂಡ ದೇಶ ತಾನೆ ಇದು.
ರಾಜಕೀಯ ವೋಟ್ ಬ್ಯಾಂಕಿನಿಂದಾಗಿ ,ಬರಿಯ ಒಂದು ಚಿತ್ರದಿಂದಾಗಿ ನಿಮಗಾಗಿರುವ ಅನ್ಯಾಯವನ್ನು ನಿಮ್ಮಿಂದ ಸಹಿಸಲಾಗದೇ ದೇಶ ಬಿಡುತ್ತಿರುವ ಮಾತಾಡುತ್ತಿದ್ದೀರಾ... ಆದರೆ ಇದೇ ಅನ್ಯಾಯವನ್ನ ಇಲ್ಲಿನ ಬಹುಸಂಖ್ಯಾತ ಹಿಂದೂಗಳು ನೆಹರೂರವರವ ಕಾಲದಿಂದ ಸಹಿಸಿಕೊಂಡು ಬರುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣದ ಹೆಸರಿನಲ್ಲಿ ಬಹುಸಂಖ್ಯಾತರ ಮನಸ್ಸಿಗಾದ ನೋವುಗಳೆದೆಷ್ಟೋ...ಬಹುಶ ನಾನಾಯಿತು ನನ್ನ ಚಿತ್ರಗಳಾಯಿತು ಅಂತ ಇದ್ದ ನಿಮಗೆ ಇದು ಕಾಣಿಸಿರಲಿಲ್ಲವೇನೋ ಸರಿಯಾಗಿ ನೋಡಿದರೆ ವಾಸ್ತವದ ಅರಿವಾದೀತು. ಆ ನೋವುಗಳನ್ನ ಲೆಕ್ಕ ಹಾಕತೊಡಗಿದರೆ ವರ್ಷವೇ ಬೇಕಾದೀತು. ಆದರೂ ಇದನ್ನ ಸಹಿಸಿಕೊಂಡು ನಾವುಗಳು ಇಲ್ಲಿಯೇ ಜೀವಿಸುತ್ತಿದ್ದೇವೆ ಕಾರಣ ಇದು ನಮ್ಮ ತಾಯಿ ನಾಡು, ಅದೆಷ್ಟೇ ಕಷ್ಟ ಬಂದರೂ ತಾಯಿ ಭಾರತಿಯ ಮಡಿಲಲ್ಲಿ ಸತ್ತು ಇಲ್ಲೇ ಮಣ್ಣಾದೇವೆ ಹೊರತು ಇವಳ ತೊರೆದು ಹೋಗೆವು. ಸಿನಿಮಾದಲ್ಲಿ ನೀವು ನುಡಿಯುವಂತೆ ಉದ್ದುದ್ದನೆಯ ಭಾವಪೂರಿತ ದೇಶಭಕ್ತಿಯ ಮಾತುಗಳೆಲ್ಲ ನಮ್ಮಲ್ಲಿ ನಿಮಗೆ ಸಿಗಲಿಕ್ಕಿಲ್ಲ ಆದರೆ ಒಂದಂತೂ ಸತ್ಯ ಇದು ಬರಿಯ ನಟನೆಯಂತೂ ಖಂಡಿತ ಅಲ್ಲ.
ನಿಮ್ಮಷ್ಟು ಬುದ್ಧಿವಂತಿಕೆ ನನ್ನಲ್ಲಿ ಇಲ್ಲ ಹಾಗಾಗಿ ನೀವು ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಲು ನೀವು ಸರ್ವಸ್ವತಂತ್ರರು. ನನ್ನ ಹಣವನ್ನೆಲ್ಲಾ ಹಾಕಿದ್ದೇನೆ , ದಿವಾಳಿಯಾಗುತ್ತೇನೆ ಅನ್ನುವಾಗ ಈ ಹಣ ಮತ್ತು ಪ್ರಸಿದ್ಧಿ ಇಲ್ಲಿನವರದೇ ಕೊಡುಗೆ ಅನ್ನೋದನ್ನ ಮರೆಯದಿರಿ ಎಂದಷ್ಟೇ ಹೇಳಬಯಸುತ್ತೇನೆ. ಪ್ರತಿ ಬಾರಿ ಗೆಲುವು ಸಿಕ್ಕಾಗ ಸಂತಸ ಪಡುತ್ತಿದ್ದವರು ಸೋಲಿನ ಭಯದಿಂದ ದೇಶ ಬಿಡುವೆ ಅಂದಿದ್ದು ಸರಿಯೇ...ಈಸಬೇಕು ಇದ್ದು ಜಯಿಸಬೇಕು ಅಂದಿದ್ದಾರೆ ಹಿರಿಯರು. ಸುಪ್ರೀಂ ಕೋರ್ಟಿನವರೆಗಾದರೂ ಸರಿ ಹೋಗಿ ಗೆದ್ದು ಬನ್ನಿ, ಈ ಭಾರತದಲ್ಲಿರಬೇಕಾಗಿದ್ದು ಸಮಾನತೆ ಆದರೆ ಇಲ್ಲಿ ಆಗುತ್ತಿರುವುದು ಅಲ್ಪಸಂಖ್ಯಾತರ ತುಷ್ಟೀಕರಣ ಅನ್ನೋದನ್ನ ವಾದಿಸಿ. ಈ ಪಿಡುಗನ್ನು ನಿವಾರಿಸಬೇಕಾಗಿದೆ ಅನ್ನಿ. ಒಬ್ಬ ಪ್ರಖ್ಯಾತ ನಟ ನೀವು ಹೌದು ಆದರೂ ಅದಕ್ಕೂ ಮುನ್ನ ಇಲ್ಲಿನ ಪ್ರಜೆ. ಈ ನಿಟ್ಟಿನಲ್ಲಿಯೂ ನಿಮ್ಮ ಕೆಲಸ ಸಾಗಲಿ. ನೀವೂ ಕೂಡ ಸಮಾನತೆಗೆ ಬದಲಾಗಿ, ತುಷ್ಟೀಕರಣ ನೀತಿಯನ್ನು ಅನುಸರಿಸಬೇಡಿ.
ಎಲ್ಲಾ ವಿವಾದಗಳು ಮುಗಿದು ಹೋಗಲಿ ಎಂದಷ್ಟೇ ಹೇಳಿ ನನ್ನ ಈ ಪತ್ರವನ್ನ ಮುಗಿಸುತ್ತೇನೆ
---ಕೆ.ಗುರುಪ್ರಸಾದ್
( ಕಮಲ್ ಹಾಸನ್ ಎಂಬ ಬರಿಯ "ನಟ" ನ ಅಭಿಮಾನಿ)

No comments:

Post a Comment