Saturday 24 October 2015

ಬನ್ನಿ ಕಾರ್ಗಿಲ್ ವಿಜಯ ರಥವನ್ನೆಳೆಯೋಣ... ಯುವಾ ಬ್ರಿಗೇಡಿಯನ್ನರ ಹೆಗಲಿಗೆ ಹೆಗಲು ಕೊಡೋಣ


ಜುಲೈ ೨೬ ಭಾರತದ ಇತಿಹಾಸದಲ್ಲೊಂದು ಮರೆಯಲಾಗದ ದಿನ.... ನೆರೆಯ ಪಾಕಿ(ಪಿ)ಗಳಿಗೆ ನಮ್ಮ ಯೋಧರು ಮತ್ತೊಮ್ಮೆ ಸೋಲಿನ ರುಚಿಯನ್ನು ತೋರಿದ ದಿನ... ಕಾಶ್ಮೀರವನ್ನು ಮೆಲ್ಲನೆ ನುಂಗಲು ಬಂದ ಪಾಕಿಸ್ಥಾನಿ ನುಸುಳುಕೋರರಿಗೆ ಬಂದ ದಾರಿಯನ್ನೇ ಮರಳಿ ತೋರಿಸಿದ ದಿನ... ಅಲ್ಪಕಾಲದ ಸಮಯಕ್ಕೆ ಭಯೋತ್ಪಾದಕರ ಪಾಲಾಗಿದ್ದ ನಮ್ಮ ಸೇನಾನೆಲೆಗಳನ್ನ ಮತ್ತೆ ವಶಪಡಿಸಿಕೊಂಡ ದಿನ.... ಹೌದು... ಸರಿ ಸುಮಾರು ೫೨೭ ಯೋಧರ ಬಲಿದಾನದ ಫಲಸ್ವರೂಪವಾಗಿ ಮತ್ತೆ ನಮ್ಮ ಭೂಮಿ ನಮ್ಮ ಸೇನಾನೆಲೆ ನಮ್ಮ ಕೈವಶವಾಯಿತು... ಭಾರತದ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಆಯಕಟ್ಟಿನ ಜಾಗವಾಗಿತ್ತು... ಹಾಗಾಗೇ ಇದನ್ನ ಬಿಟ್ಟುಕೊಡುವಂತಿರಲಿಲ್ಲ... ಹಾಗಿದ್ದರೂ ಸುಲಭವಾಗಿ ಮರಳಿ ಪಡೆಯುವ ಹಾಗೂ ಇರಲಿಲ್ಲ.... ಬಹುಶಃ ನಮ್ಮಂಥ ಸಾಮಾನ್ಯರಿಗೆ ಕಾರ್ಗಿಲ್ ಯುದ್ಧದ ಸವಾಲು ಗೊತ್ತಾಗಲಿಕ್ಕಿಲ್ಲ... ಆದರೂ ಒಮ್ಮೆ ಹಾಗೇ ಯೋಚಿಸಿ ಮೇಲ್ಭಾಗದಲ್ಲಿ ಅಡಗಿ ಕುಳಿತು ಗುಂಡಿನ ಮಳೆಗರೆಯುವುದು ಸುಲಭ ಅದಕ್ಕೆ ವಿರುದ್ಧವಾಗಿ ಸಾಗುವುದೆಂದರೆ ಸುಲಭದ ಮಾತೇ.... ಮೇಲೆ ಹತ್ತುವುದೋ ಅಥವಾ ಅವರ ದಾಳಿಗೆ ಉತ್ತರಿಸುವುದೋ...?  ಬಾಂಬು ಮತ್ತು ಗುಂಡಿನ ಮಳೆಯೇ ಆಗುತ್ತಿರುವಾಗ... ಅದೂ ಎಲ್ಲಿಂದ ಗುಂಡು ಬರುತ್ತಿದೆ ಅನ್ನುವುದು ಗೊತ್ತಿಲ್ಲದೇ ಇರುವಾಗಲೂ.. ಎದೆ ಕೊಟ್ಟು ಸಾಗಬೇಕು. ಅಂದರೆ ನಿಜಕ್ಕೂ ಕಾರ್ಗಿಲ್ ವಿಜಯ ನಮ್ಮ ಯೋಧರ ಕೆಚ್ಚೆದೆಯ ಪ್ರದರ್ಶನವಲ್ಲದೆ ಮತ್ತೇನು...?
ಈ ಯುದ್ಧ ನಮಗೆ ಪರಿಚಯಿಸಿಕೊಟ್ಟ ವೀರ ಯೋಧರ ಪಟ್ಟಿಯೇನು ಕಡಿಮೆಯೇ...? ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್  ಪಾಂಡೆ, ಕ್ಯಾಪ್ಟನ್ ವಿಕ್ರಂ ಭಾತ್ರಾ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ಕ್ಯಾಪ್ಟನ್ ಅನುಜ್ ನಯ್ಯರ್, ಮೇಜರ್ ರಾಜೆಶ್ ಸಿಂಗ್ ಅಧಿಕಾರಿ, ಮೇಜರ್ ಮರಿಯಪ್ಪನ್ ಸರವಣನ್, ಸ್ಕ್ವಾರ್ಡನ್ ಲೀಡರ್ ಅಜಯ್ ಅಹುಜಾ, ಹವಾಲ್ದಾರ್ ಚುನಿ ಲಾಲ್.... ಹೀಗೆ ನಮ್ಮ ಐನೂರ ಇಪ್ಪತ್ತೇಳು ಜನ ಈ ಯುದ್ಧದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದರು. ತಾಯಿ ಭಾರತಿಯ ಒಂದಿಂಚು ನೆಲವನ್ನೂ ಬಿಟ್ಟು ಕೊಡುವುದಿಲ್ಲ ಎನ್ನುವ ಸಂದೇಶವನ್ನು ಪಾಕಿಸ್ಥಾನಕ್ಕೆ ಕಳುಹಿಸಿಬಿಟ್ಟರು. ಸಾವಿರದ ಮುನ್ನೂರಕ್ಕೂ ಹೆಚ್ಚು ಜನ ಗಾಯಾಳುಗಳಾದರು. ಇಷ್ಟೊಂದು ಜನ ಪಾಕಿಸ್ಥಾನಕ್ಕೆ ಕೊಟ್ಟ ಪೆಟ್ಟು ಕಡಿಮೇಯೇನಲ್ಲ.. ಮುಖಭಂಗ ಅನ್ನೋದು ಅತ್ಯಂತ ದೊಡ್ದ ಪೆಟ್ಟಾದರೆ ಸಾವು ನೋವುಗಳು ಕಡಿಮೆಯೇನಲ್ಲ. ಪಾಕಿಸ್ಥಾನ ವಾಸ್ತವದಲ್ಲಿ ಎಷ್ಟು ಯೋಧರನ್ನ ಕಳೆದುಕೊಂಡಿದೆ ಅಂತ ನಿಜವಾದ ದಾಖಲೆ ಕೊಡುವುದಿಲ್ಲ ಅನ್ನೋದು ಗೊತ್ತಿರುವಂಥಾದ್ದೇ... ಆದರೂ ಅವರ ಸೇನೆ ಕೊಟ್ಟ ಮಾಹಿತಿಯ ಪ್ರಕಾರ 453 ಯೋಧರ ಸಾವಾಗಿದೆ ಆದರೆ ಅಲ್ಲಿನ ರಾಜಕೀಯ ಪಕ್ಷಗಳದ್ದು ಒಂದೊಂದು ಹೇಳಿಕೆ ಆಗಿನ ಆಡಳಿತ ಪಕ್ಷ ಮೂರುಸಾವಿರ ಮುಜಾಹಿದೀನ್ ಗಳು ಸತ್ತಿದ್ದಾರೆ ಅನ್ನುತ್ತೆ... ಇನ್ನೊಂದು ಪಾರ್ಟಿ ಪಾಕಿಸ್ಥಾನ ಪೀಪಲ್ ಪಾರ್ಟಿ ಪ್ರಕಾರ ಕಾರ್ಗಿಲ್ ಯುದ್ದದಲ್ಲಿ ಸಾವಿರಕ್ಕೂ ಹೆಚ್ಚಿನ ಯೋಧರು ಸತ್ತಿದ್ದಾರೆ. ಪರ್ವೇಜ್ ಮುಷರಫ್ ಹೇಳಿಕೆಯಂತೆ ಬರೀ 357 ಜನ ಯೋಧರು ಸತ್ತರು ಮತ್ತು 665 ಜನ ಗಾಯಗೊಂಡರು....ಅಷ್ಟೇ..  ಆದರೆ ಪಾಕಿಸ್ಥಾನಿಗಳನ್ನ ಹಿಮ್ಮೆಟ್ಟಿಸುತ್ತಾ ಯಮಲೋಕಕ್ಕೆ ಅಟ್ಟುತ್ತಾ ಸಾಗಿದ  ನಮ್ಮ ಭಾರತೀಯ ಸೇನೆ ಲೆಕ್ಕ ಹಾಕಿರುವಂತೆ ಪಾಕಿಸ್ಥಾನದ 1042  ಯೋಧರನ್ನ ಕೊಂದು ಹಾಕಲಾಗಿದೆಯಂತೆ..
ಎಂಥಾ ಅದ್ಭುತ ಶೌರ್ಯ ಅಲ್ವಾ.... ನಮ್ಮ ಭಾರತೀಯ ಯೋಧರ ವೀರಗಾಥೆಯನ್ನ ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣನ ಮಾತುಗಳಲ್ಲಿ ಕೇಳುತ್ತಾ ಹೋಗಬೇಕು... ನಿಜಕ್ಕೂ ರೋಮಾಂಚಿತರಾಗದೇ ಇರಲು ಸಾಧ್ಯವೇ ಇಲ್ಲ. ಬಹುಶ ಸಾಮಾನ್ಯ ಜನರಲ್ಲಿ ಅದರಲ್ಲೂ ಕರ್ನಾಟಕದ ಜನರಿಗೆ ಯೋಧರ ವೀರತ್ವವನ್ನು, ಸಾಧನೆಯನ್ನ ಬಿಡಿಸಿ ಹೇಳಿ ಜನರಲ್ಲಿ ಯೋಧರ ಬಗೆಗಿನ ಸಾಮಾನ್ಯ ಭಾವನೆಯನ್ನ ಗೌರವದ ಭಾವನೆಯನ್ನಾಗಿಸುವಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಪಾತ್ರ ಮಹತ್ವದ್ದು... ಇದೇ ಚಕ್ರವರ್ತಿ ಸೂಲಿಬೆಲೆಯವರ ಕನಸಿನಾ ಕೂಸು " ಯುವಾ ಬ್ರಿಗೆಡ್ ". ಏನಿದು ಯುವಾ ಬ್ರಿಗೇಡ್...? ಸರಳವಾಗಿ ಹೇಳೋದಾದರೆ ಇದೊಂದು ದೇಶಕ್ಕಾಗಿ ತುಡಿಯುವ ಯುವ ಮನಸ್ಸುಗಳ ಗುಂಪು... ಯುವಾ ಅಂತಂದರೆ ಚಕ್ರವರ್ತಿಯವರೇ ಹೇಳುವಂತೆ ಪ್ರಾಯದಿಂದಲ್ಲ ಯುವಾ ಅಲ್ಲ ಹುಮ್ಮಸ್ಸಿನ ಆಧಾರದ ಮೇಲಿನ ಯುವಕರು. ತಮ್ಮದಾಗಿರೋ ವಿಶಿಷ್ಠ ಕಾರ್ಯಕ್ರಮಗಳ ಮೂಲಕ ಈ ದೇಶದ ಸೇವೆ ಮಾಡಲು ಮತ್ತು ಭಾರತವನ್ನ ಮತ್ತೆ ವಿಶ್ವಗುರುವಾಗಿಸೋ ಕನಸುಹೊತ್ತ ತಂಡ... ಬರಿಯ ಕನಸು ಕಾಣುತ್ತಾ ಕುಳಿತ ತಂಡವಲ್ಲ... ಆ ಕನಸಿನಾ ಸಾಕಾರಕ್ಕೆ ಹಲವು ಯೋಚನೆಗಳನ್ನೂ ಯೋಜನೆಗಳನ್ನೂ ಹಾಕಿಕೊಂಡು... ನಿರಂತರವಾಗಿ ಆ ಪಥದಲ್ಲೇ ಸಾಗುತ್ತಿರುವ ಯುವ ಜನತೆಯ ಗುಂಪು. ಇದನ್ನ ಮುನ್ನಡೆಸುತ್ತಿರುವವರು ಚಕ್ರವರ್ತಿ ಸೂಲಿಬೆಲೆ. ಇದೀಗಾಗಲೇ ಅಲ್ಲಲ್ಲಿ ಯುವಾ ಬ್ರಿಗೆಡ್ ನ ಹಲವು ಘಟಕಗಳು ತಲೆ ಎತ್ತಿ ಚಕ್ರವರ್ತಿ ಸೂಲಿಬೆಲೆಯವರ ನಿರ್ದೇಶನದಂತೆಯೇ ಕಾರ್ಯಪ್ರವೃತ್ತವಾಗಿದೆ.
ಮಹಾರಕ್ಷಕ್ ( ಯುವಜನತೆಯನ್ನ ಸೈನ್ಯಕ್ಕೆ ಮತ್ತು ಪೋಲೀಸ್ ಹುದ್ದೆಗೆ ಸೇರಿಸುವ ನಿಟ್ಟಿನಲ್ಲಿ  ಹುರಿದುಂಬಿಸಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸೋ ಯೋಜನೆ ),
ವಿತ್ತಶಕ್ತಿ ( ವಿತ್ತ ನೀತಿಯ ಕುರಿತಾಗಿ ಯೋಚಿಸಿ ಸ್ವ ಉದ್ಯೋಗಕ್ಕೆ ಪುಷ್ಟಿಕೊಡುವ ಯೋಜನೆ ) ,
ಸದ್ಭಾವನಾ ( ಜಾತಿ ಜಾತಿಗಳನ್ನು ಮೀರಿ ಪ್ರಾದೇಶಿಕತೆಯನ್ನು ಮೀರಿ ಏಕತೆಗಾಗಿ ಭಾರತದ ಶ್ರೇಷ್ಠತೆಗಾಗಿ ಜನರನ್ನು ಒಂದಾಗಿಸೋ ಯೋಜನೆ ),
ಡಿಜಿಟಲ್ ಸಂಸ್ಕಾರ್ ( ಕ್ಷೀಣವಾಗುತ್ತಿರುವ ಭಾರತೀಯ ಸಂಸ್ಕ್ರತಿಯನ್ನ ಉಳಿಸೋ ಸಲುವಾಗಿ ಯುವ ಹೃದಯಗಳ ಅಚ್ಚು ಮೆಚ್ಚಿನ ಡಿಜಿಟಲ್ ಮೀಡಿಯಾ ಮತ್ತು ಸೋಶಿಯಲ್ ನೆಟ್ ವರ್ಕ್ ಗಳನ್ನ ಬಳಸಿ ಸಂಸ್ಕಾರಯುತ ಮೌಲ್ಯಗಳನ್ನು ಹಂಚಿ ನಮ್ಮ  ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಯೋಜನೆ )
ಈ ರೀತಿಯ ಮೂಲ ನಾಲ್ಕು ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನ ಹಾಕಿಕೊಂಡು ತನ್ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿರುವ ಒಂದು ತಂಡ ಯುವಾ ಬ್ರಿಗೇಡ್... ಈ ಯುವಾ ಬ್ರಿಗೇಡ್ ನ ಹತ್ತು ಹಲವು ಯೋಜನೆಗಳಲ್ಲಿ ಸೈಕಲ್ ಜಾಥಾ, ಕಲ್ಯಾಣಿ ಸ್ವಚ್ಛತೆ, ಪೃಥ್ವೀ ಯೋಗ ( ಸಸಿ ನೆಡುವುದು )  ಯೋಧ ನಮನ ಅರ್ಥಾತ್ ಭಾರತೀಯ ಸೇನೆಯಲ್ಲಿ ದುಡಿದು ಬಂದವರನ್ನ ಗುರುತಿಸಿ ಸಮಾಜಕ್ಕೆ ಅವರನ್ನ ಪರಿಚಯಿಸಿ ಅವರ ಸಾಧನೆಗೆ ಗೌರವ ಸೂಚಿಸೋದು ಇವೆಲ್ಲವೂ ಒಳಗೊಂಡಿದೆ..
ಇದೇ ಯುವಾ ಬ್ರಿಗೇಡ್ ಕಾರ್ಗಿಲ್ ವಿಜಯ ದಿನಕ್ಕಾಗಿ ಹಮ್ಮಿಕೊಂಡ ವಿಶಿಷ್ಠ ಯೋಜನೆಯೇ " ಕಾರ್ಗಿಲ್ ವಿಜಯ ರಥ ಯಾತ್ರೆ " ಕಾರ್ಗಿಲ್ ಯುದ್ಧದಲ್ಲಿನ ನಮ್ಮ ಯೋಧರ ವಿಜಯಗಾಥೆಯನ್ನ ಎಲ್ಲೆಡೆ ಪಸರಿಸುವ ರಥ. ಈ ರಥ ಯಾತ್ರೆ ಯಾಕೆ ಬೇಕು..? ಅನ್ನೋ ಪ್ರಶ್ನೆ ನಮ್ಮಲ್ಲೆಲ್ಲರಲ್ಲೂ ಬಂದಿರಬಹುದು. ಉತ್ತರವೂ ಇಲ್ಲದಿಲ್ಲ... ನಿಜವಾಗಿ ನೋಡಬೇಕಂದರೆ ಈ ಕಾಲಕ್ಕೆ ದೇಶಭಕ್ತಿಯ ಅದ್ಭುತ ಚಿತ್ರಣ ಸಿಗೋದು  ಸೈನಿಕರಲ್ಲೇ. ಇಂತಹಾ ಸೈನಿಕರ ಸಾಹಸಗಾಥೆಯನ್ನ ಕೇಳಿದಾಗ ಅದು ಪರೋಕ್ಷವಾಗಿ ನಮ್ಮಲ್ಲೂ ದೇಶಭಕ್ತಿಯನ್ನ ಹುಟ್ಟಿಸೋದು ಸಹಜ. ಇದೇ ಉದ್ದೇಶವಿಟ್ಟುಕೊಂಡೇ ಕಾರ್ಗಿಲ ವಿಜಯರಥ ಹೊರಟಿರುವುದು... ಮೊದಲನೆಯದಾಗಿ ಸೈನಿಕರ ತ್ಯಾಗಕ್ಕೆ ನಿಜವಾದ ಬೆಲೆ ಸಿಗಬೇಕಾದರೆ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡೋ ಸತ್ಯ ಜನರಿಗೆ ಗೊತ್ತಾಗಬೇಕು... ಕೆಲವೊಂದು ಜನರಲ್ಲಿ " ಅವರೇನು ಸುಮ್ಮನೆ ಪ್ರಾಣ ಕೊಡೋದಿಲ್ಲಾ ರೀ ಸರಿಯಾಗಿ ಹಣ ಸಿಗುತ್ತದೆ. ಸೌಲಭ್ಯಗಳು ಸಿಗುತ್ತದೆ " ಅನ್ನೋ ಭಾವನೆ ಇದೆ.  ಹಾ ಹಣವೇನೂ ಸಿಗುತ್ತದೆ... ಅಂತಾನೇ ಇಟ್ಟುಕೊಳ್ಳಿ ಹಾಗಂತ  ಪ್ರಾಣ ಕಳೆದುಕೊಳ್ಳಲು ನಾವು ತಯಾರಾಗುತ್ತೇವೆಯೇ...??? ಸುಲಭದ ಮಾತಲ್ಲ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ ಅಂತ ತಯಾರಾಗಬೇಕಾದರೆ ಮನದಾಳದಲ್ಲಿ ದೇಶಭಕ್ತಿಯ ಕಿಚ್ಚು ಇದ್ದಿರಲೇಬೇಕು...  ಇಂಥಾ ದೇಶಭಕ್ತಿಯ ಕಿಚ್ಚು ಬರಿಯ ಸೈನಿಕರಲ್ಲಿ ಮಾತ್ರ ಇರದೆ ದೇಶದ ಪ್ರತಿಯೊಬ್ಬರಲ್ಲು ಇದ್ದರೆ...? ಖಂಡಿತಾ ದೇಶಭಕ್ತಿ ಸೈನಿಕರಲ್ಲಿ ಮಾತ್ರ ಇದೆ ಸಾಮಾನ್ಯ ಜನರಲ್ಲಿ ಇಲ್ಲ ಅಂತ ನಾನು ಹೇಳುತ್ತಿಲ್ಲ... ಅದೆಷ್ಟೋ ಜನ ಸೈನಿಕರಲ್ಲದವರಲ್ಲೂ ದೇಶಭಕ್ತಿ ಇದೆ. ಆದರೆ ಈಗಿನ ಪಾಶ್ಚಾತ್ಯ ಸಂಸ್ಕೃತಿ ಭಾರತೀಯರ ಜೀವನ ಶೈಲಿಯ ಮೇಲೆ ಉಂಟು ಮಾಡುತ್ತಿರುವ ಪ್ರಭಾವ ಕಂಡಾಗ ಭಾರತೀಯರಲ್ಲಿ ದೇಶ ಪ್ರೇಮ.. ಅದೂ ಯುವಜನತೆಯಲ್ಲಿ ಸ್ವಲ್ಪ ಕಡಿಮೆಯಾಗುತ್ತಿದೆಯೇನೋ ಅನ್ನೋ ಆತಂಕ ಉಂಟಾಗುತ್ತದೆ.
ಒಂದು ವೇಳೆ ಯುವ ಜನತೆಯಲ್ಲೇ ದೇಶಭಕ್ತಿ ಕ್ಷೀಣವಾದರೆ ಅದು ದೇಶಕ್ಕೆ ದೊಡ್ಡ ಗಂಡಾಂತರವೇ... ಕೆಲವೊಂದು ಜನ ಭಾರತ ಕ್ರಿಕೆಟ್ ತಂಡ ಗೆದ್ದಾಗ ಸಂಭ್ರಮಿಸೋದನ್ನೇ ದೇಶಭಕ್ತಿ ಅಂದುಕೊಂಡಿದ್ದಾರೆ.. ಅಂತವರಿಗೆ ನಿಜವಾದ ದೇಶಭಕ್ತಿಯ ಅನಾವರಣ ಆಗಬೇಕೂ ಅಂತಾದರೆ ನಮ್ಮ ಸೈನಿಕರ, ದೇಶಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚಿನ ಹೋರಾಟದ ಕಥೆ ತಿಳಿಯಲೇಬೇಕು.... ನಮ್ಮ ಸೈನಿಕರು ಗಡಿಯಲ್ಲಿ ತಮ್ಮ ಜೀವದ ಹಂಗು ತೊರೆದು ನಮ್ಮ ಸುರಕ್ಷತೆಗಾಗಿ ಯಾವ ರೀತಿಯ ಬದುಕನ್ನು ಸ್ವೀಕರಿಸುತ್ತಿದ್ದಾರೆ...??? ಯಾವ ರೀತಿ ನೆರೆಯ ರಾಷ್ಟ್ರದ ಕುಂತಂತ್ರ ಗಳಿಗೆ, ರಾಜಕೀಯ ಹಿತಾಸಕ್ತಿಗೆ ತಮ್ಮ ಸ್ವಂತದ ಆಸೆ ಆಕಾಂಕ್ಷೆಗಳನ್ನ ಬಲಿಕೊಡುತ್ತಿದ್ದಾರೆ...? ಅನ್ನೋದು ಗೊತ್ತಾದಾಗಲೇ ನಾವು ಸೈನಿಕರ ಮತ್ತು ಅವರ ಕುಟುಂಬದ ಸುರಕ್ಷತೆಯ ಬಗ್ಗೆ ಧ್ವನಿ ಎತ್ತೋಕೆ ಸಾಧ್ಯ... ಒಂದು ವೇಳೆ ಸೈನಿಕನಿಗೆ ಈ ದೇಶದ ಜನರಿಗೆ, ನನ್ನ ಮಹತ್ವ ಏನು ಅಂತ ಗೊತ್ತಿಲ್ಲ ಅನ್ನೋ ಭಾವನೆ ಮೂಡಿದರೆ ಆತನ ಮನಸ್ಸಿನಲ್ಲಿ ಅದು ಯಾವ ರೀತಿಯ ನಿರಾಶೆಯನ್ನ  ಉಂಟು ಮಾಡೀತು..? ತಾನು ಯಾರ ಉಳಿವಿಗಾಗಿ ಹೋರಾಡುತ್ತಿದ್ದೇನೋ ಅವರಿಗೇ ನನ್ನ ಬಗೆಗಿನ, ನನ್ನ ಬಲಿದಾನದ ಬಗೆಗಿನ ಅರಿವಿಲ್ಲ ಅನ್ನೋದು ತಿಳಿದು ಅದೆಷ್ಟು  ನೋವಾದೀತು... ತನ್ನ ಕುಟುಂಬದವರ ಮುಂದಿನ ಪರಿಸ್ಥಿತಿ ಏನಾದೀತು...? ಅವರ ರಕ್ಷಣೆ ಮಾಡುವುದು ಯಾರು ಅನ್ನೋ ಭಾವನೆ ಮೂಡಿತೆಂದರೆ ಅವನ ಮಾನಸಿಕ ಸ್ಥಿತಿಯ ಗತಿಯೇನಾದೀತು...? ಇಂತಹಾ ಪರಿಸ್ಥಿತಿಯಲ್ಲಿ ಒಬ್ಬ ಸೈನಿಕ ಹೋರಾಡುವುದಕ್ಕೂ.... ನನಗೇನಾದರೂ ಪರವಾಗಿಲ್ಲ ನನ್ನವರ ಬಗ್ಗೆ ಈ ದೇಶದ ಜನ ಕಾಳಜಿ ವಹಿಸುತ್ತಾರೆ ಅನ್ನೋ ಭಾವನೆಯಲ್ಲಿ ಸೈನಿಕ ಹೋರಾಡುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆಯಲ್ವಾ.... ಭಾರತದ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಅವಶ್ಯಕ ತಾನೆ. ಅದಕ್ಕಾಗೇ ಈ ರಥ ಯಾತ್ರೆ.
ಸೈನಿಕ ಗಡಿಯಲ್ಲಿ ತನ್ನ ಕರ್ತವ್ಯ ನಿರ್ವಹಣೆ ಮಾಡಿದರೆ ಸಾಕು ಈ ದೇಶ ಉಳಿಯುತ್ತದೆ ಅನ್ನೋದು ಒಂದು ಹಂತಕ್ಕೆ ನಿಜವೇ ಆದರೂ ಸಾಮಾನ್ಯ ನಾಗರಿಕರೂ ಯೋಧರಾಗದೇ ಹೋದರೆ ದೇಶ ಆಂತರಿಕವಾಗಿ ಕುಗ್ಗಿ ಹೋದೀತು. ಸಾಮಾನ್ಯ ನಾಗರಿಕರಾಗಿ ನಾವು ಅವರಿಗೆ ಬೆಂಬಲವಾಗಿ ನಿಲ್ಲದೇ ಹೋದರೆ  ಸೈನಿಕನೂ ಕುಗ್ಗಿಯೇ ಕುಗ್ಗುತ್ತಾನೆ. ಅಂತಹಾ ಪರಿಸ್ಥಿಯು ನಮ್ಮ ದೇಶದಲ್ಲಿ ನಿರ್ಮಾಣವಾಗಬಾರದೆನ್ನುವ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ಈ ಕಾರ್ಗಿಲ್ ವಿಜಯ ರಥ ಯಾತ್ರೆ ಹೊರಡಿಸಿದೆ. ಸರಳವಾಗಿ ಹೇಳಬೇಕೆಂದರೆ ಪ್ರತಿಯೊಬ್ಬನಲ್ಲೂ ಅಡಗಿಕೊಂಡಿರುವ ಯೋಧನೊಬ್ಬನನ್ನು ಹೊರಗೆಳೆಯುವುದೇ ಈ ರಥ ಯಾತ್ರೆಯ ಮೂಲ ಉದ್ದೇಶ... ಆ ಮೂಲಕ ಒಬ್ಬ ಸೈನಿಕ ತನ್ನ ದೇಶಭಕ್ತಿಯನ್ನ ಹೇಗೆ ಪ್ರದರ್ಶಿಸುತ್ತಾನೋ ಅದೇ ರೀತಿ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶದ ಮೇಲಿನ ಪ್ರೀತಿಯನ್ನ ತೋರ್ಪಡಿಸಬೇಕು ಅನ್ನೋದು ಉದ್ದೇಶ... ಈ ದೇಶದ ಸೈನಿಕರಿಗೆ ನಮ್ಮ ದೇಶವಾಸಿಗಳು ನಮಗೆ ಬೆಂಗಾವಲಾಗಿದ್ದರೆ ಅನ್ನೋದು ತಿಳಿದರೆ ಸಾಕು  ಭಾರತದತ್ತ ಕುದೃಷ್ಟಿ ಬೀರೋ ಕಣ್ಣುಗಳನ್ನ ಕುಕ್ಕದೆಯೇ ಸುಮ್ಮನೆ ಬಿಟ್ಟಾರೇ... ಇಡಿಯ ಜಗತ್ತನ್ನೇ ಎದುರಾಗಿ ನಿಂತರೂ ಹೋರಾಟ ನಿಲ್ಲಿಸಲಾರರು .... ಅವರ ದೇಶಭಕ್ತಿಯ ಕಿಚ್ಚಿಂದ ನಮ್ಮೊಳಗೂ ದೇಶಭಕ್ತಿಯ ಹಣತೆ ಹಚ್ಚೋಣ. ಭಾರತ ಮಾತೆಯ ಅಂಗರಕ್ಷರಿಗೆ ಉಘೇ ಅನ್ನೋಣ.... ಬನ್ನಿ ನಾವು ನೀವೆಲ್ಲಾ ಒಂದಾಗಿ ಕಾರ್ಗಿಲ್ ವಿಜಯ ರಥವನ್ನ ಒಟ್ಟಾಗಿ ಎಳೆಯೋಣ... ಭಾರತ ಮಾತೆಯನ್ನ ವಿಶ್ವಗುರುವಿನ ಸ್ಥಾನದಲ್ಲಿ ಕೂರಿಸೋಣ.


No comments:

Post a Comment