Saturday 31 October 2015

ಸಿನಿಮಾ ಉದ್ಯಮ, ಮನೋರಂಜನೆ ಮತ್ತು ಭಾಷಾಪ್ರೇಮ...




ಭಾಷಾಪ್ರೇಮ ಅನ್ನೋದು ಒಂದಷ್ಟು ಜನರಲ್ಲಿ ತೀರಾ ಅತಿರೇಕದ ಮಟ್ಟದಲ್ಲಿದ್ದರೆ ಇನ್ನೊಂದಿಷ್ಟು ಜನರಲ್ಲಿ ಎಳ್ಳಷ್ಟೂ ಇರೋದಿಲ್ಲ... ಮತ್ತೂ ಒಂದಷ್ಟು ಜನ ಈ ಗೋಜಿಗೇನೆ ಹೋಗದೆ ಈ ದಿನ ಕಳೆದರೆ ಸಾಕಪ್ಪ ಅಂತ ತಮಗೆ ಹೇಗೆ ಇರಬೇಕೋ ಹಾಗೆ ಇದ್ದು ಬಿಡುತ್ತಾರೆ... ಆದರೆ ಕೆಲವೊಂದು ಜನರಿಗೆ ಭಾಷೆಯ ಮೇಲಿನ ಅಭಿಮಾನ ಜಾಗೃತವಾಗೋಕೆ ಏನೇನೋ ವಿಚಾರಗಳು ನೆಪವಾಗಿ ಬಿಡುತ್ತದೆ... ಸಿನಿಮಾ ಅನ್ನೋದು ಕೂಡಾ ಇಂತಹ ನೆಪಗಳಲ್ಲೊಂದು... ನಮ್ಮ ನಾಡನ್ನೇ ತೆಗೆದುಕೊಳ್ಳೋಣ... ನಮ್ಮಲ್ಲಿ ಕನ್ನಡಾಭಿಮಾನ ನವೆಂಬರ್ ತಿಂಗಳಲ್ಲಿ ಸ್ವಲ್ಪ ಜಾಸ್ತಿ ಅನ್ನೋದು ಕಟು ಸತ್ಯ ಅಂತ ಹೇಳಲೇನೂ ಅಡ್ಡಿಯಿಲ್ಲ.... ಇನ್ನೂ ಕೆಲವೊಮ್ಮೆ ಕನ್ನಡಾಭಿಮಾನ ಜಾಗೃತವಾಗೋದು ಪರಭಾಷಾ ಸಿನಿಮಾದ ಅಬ್ಬರದ ಪ್ರಚಾರದ ಮೂಲಕ. ಭಾಷೆಗೂ ಸಿನಿಮಾಗೂ ಏನು ನಂಟು...? ಸಿನಿಮಾ ನೋಡೋದರಿಂದ ಭಾಷೆ ಉಳಿಯುತ್ತದೆಯೇ....? ಇಂತಹಾ ವಿಚಾರಗಳ ಕುರಿತು ಸ್ವಲ್ಪ ವಿವೇಚಿಸೋಣ.
ಸಿನಿಮಾ ಒಂದು ಕಲಾ ಮಾಧ್ಯಮ ಹೇಗೋ.... ಹಾಗೇ ಒಂದು ದೊಡ್ಡ ಉದ್ಯಮ ಅನ್ನೋದು ನಮೆಗೆಲ್ಲರಿಗೂ ಗೊತ್ತಿರುವ ವಿಚಾರವೇ... ಅದೆಷ್ಟೋ ಕೋಟಿ ರೂಪಾಯಿ ಬಂಡವಾಳ ಹಾಕಲಾಗುತ್ತದೆ... ಅದರಷ್ಟೇ ಮೊತ್ತದ ಅಥವಾ ಅದಕ್ಕಿಂತಲೂ ಹೆಚ್ಚು/ಕಡಿಮೆ ಮೊತ್ತದ ವಹಿವಾಟು ಆಗುತ್ತದೆ. ಇಲ್ಲಿ ಸಿನಿಮಾ ಕಲಾ ಮಾಧ್ಯಮ ಯಾರಿಗೆ...? ಒಬ್ಬ ನಿರ್ದೇಶಕನಿಗೆ ಒಂದಷ್ಟು ಕಲಾವಿದರಿಗೆ, ಹಾಡುಗಾರರಿಗೆ... ಹೀಗೆ ಒಂದಷ್ಟು ಜನರಿಗೆ ತಮ್ಮ ಕಲೆಯನ್ನ ಅಭಿವ್ಯಕ್ತಿಗೊಳಿಸೋ ಮಾರ್ಗ... ಅದೇ ಆ ಸಿನಿಮಾ ನಿರ್ಮಾಪಕನಿಗೆ ಸಿನಿಮಾ ಅನ್ನೋದು ಅವನ ಆದಾಯದ ಮೂಲ... ಇದಕ್ಕೆ ವ್ಯತಿರಿಕ್ತ ಅನ್ನುವವರಿರಬಹುದು... ಇಲ್ಲ ಅಂತಲ್ಲ ಆದರೆ... ತೊಂಬತ್ತೊಂಬತ್ತು ಶೇಕಡಾ ನಿರ್ಮಾಪಕರಿಗೆ ಸಿನಿಮಾ ಒಂದು ಉದ್ಯಮ... ಅವರ ಆಲೋಚನೆ ಆ ಸಿನಿಮಾ ತನಗೆ ಹೇಗೆ ಹಣ ತರಬಲ್ಲದು... ಅನ್ನೋದಷ್ಟೇ...ಹಾಗಾಗಿ ಕಲಾವಿದರು ನಿರ್ದೇಶಕರ ಕೈಗೊಂಬೆಯಾದರೆ ನಿರ್ದೇಶಕ ನಿರ್ಮಾಪಕರ ಕೈಗೊಂಬೆಯಾಗುತ್ತಾನೆ... ಒಂದು ವೇಳೆ ನಿರ್ದೇಶಕ ನಿರ್ಮಾಪಕ ಹೇಳಿದಂತೆ ಕುಣಿಯುತ್ತಿಲ್ಲ ಅಂತಂದರೆ ಆತ ಏನೇ ಮಾಡಿದರೂ ತನಗೆ ಹಣ ಗಳಿಸಿ ಕೊಡುತ್ತಾನೆ ಅನ್ನೋ ವಿಶ್ವಾಸ ಆ ನಿರ್ಮಾಪಕನಿಗೆ ನಿರ್ದೇಶಕನ ಮೇಲಿದೆ ಅಂತ ಅರ್ಥ.... ಈ ವಿಶ್ವಾಸಕ್ಕೆ ನಿರ್ದೇಶಕನ ಹಲವು ಗೆಲುವುಗಳೇ ಕಾರಣವಾಗಿರುತ್ತದೆ ಅನ್ನೋದನ್ನೇನು ಬಿಡಿಸಿ ಹೇಳಬೇಕಿಲ್ಲ ತಾನೆ.
ಹಾಗೆ ಸಿನಿಮಾ ಅನ್ನೋದು ಕಲೆ ಅಂತಾದರೂ ಅದು ನಿಂತಿರುವುದು ಹಣ ಗಳಿಕೆಯ ಉದ್ದೇಶದ ಮೇಲೆ... ಇಂತಹಾ ಹಣ ಗಳಿಕೆಯ ಮೂಲ ಉದ್ದೇಶವಿರೋ ಸಿನಿಮಾ ಭಾಷೆಯ ಬೆಳವಣಿಗೆಗೆ ಪೂರಕವೇ...? ಹಾ ಒಂದು ನಿಮಿಷದ ಮಟ್ಟಿಗೆ ಒಪ್ಪೋಣ ಕನ್ನಡ ಭಾಷೆಯ ಸಿನಿಮಾ ನೋಡುವಾಗ ಕನ್ನಡ ಭಾಷೆಯ ಪ್ರಚಾರವಾಗುತ್ತದೆ... ಹಾಗಾಗಿ ಹೆಚ್ಚು ಹೆಚ್ಚು ಕನ್ನಡ ಸಿನಿಮಾ ನೋಡುವುದರಿಂದ ಹೆಚ್ಚೆಚ್ಚು ಕನ್ನಡದ ಪ್ರಚಾರ ಆಗುತ್ತದೆ... ಆದರೆ ಇಲ್ಲಿ ನಾವು ಇನ್ನೂ ಗಮನಿಸಬೇಕಾದದ್ದು ಸಿನಿಮಾದಲ್ಲಿನ ಕನ್ನಡ ಭಾಷೆ ಎಷ್ಟು ಪರಿಶುದ್ಧವಾಗಿದೆ...? ಭಾಷೆಯ ಸೊಬಗನ್ನು ಯಾವ ರೀತಿ ಬಳಸಲಾಗಿದೆ...? ಈಗ ಒಮ್ಮೆ ನಮ್ಮ ಇತ್ತೀಚಿನ ಸಿನಿಮಾಗಳ ಕನ್ನಡ ಭಾಷೆಯನ್ನ ನೋಡೋಣ... " ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫು.... ಆಚೆ ಹಾಕ್ಕವ್ಳೆ ವೈಫು..." " ಹೀ ಇಸ್ ಅಣ್ಣ ಬಾಂಡ್... " ( ಇಂತಹವುಗಳ ನಡುವೆ ಒಂದೋ ಎರಡೋ ಉತ್ತಮ ಹಾಡು ಇರುತ್ತದೆ ಅನ್ನೋದು ಸತ್ಯ ) ಇಂತವುಗಳಾದರೆ... ಸಂಭಾಷಣೆಯ ತುಂಬಾ ಮಚ್ಚು ಲಾಂಗುಗಳ ದರ್ಬಾರು... ಶೀರ್ಷಿಕೆಯಲ್ಲಿ ಸ್ವಲ್ಪ ಕನ್ನಡ ಕಂಡರೂ ಅದಕ್ಕೊಂದು ಉಪಶೀರ್ಷಿಕೆ ಕೊಟ್ಟು ಅದರಲ್ಲಿ ಇಂಗ್ಲೀಷನ್ನು ತುರುಕಿಯೇ ತುರುಕುತ್ತಾರೆ.... ಹೀಗೆ ಇಂತಹಾ ಭಾಷೆಗಳಿಂದ ಕನ್ನಡದ ಉಳಿವು ಸಾಧ್ಯಾನಾ....? ಸರಿ ಬಿಡಿ ಇಷ್ಟಾದರೂ ಉಳೀಲಿ ಅನ್ನೋ ವಾದವನ್ನೂ ಒಪ್ಪೋಣ.... ಆದರೆ ಭಾಷೆಯ ಉಳಿವಿಗಾಗಿ ಸಿನಿಮಾ ನೋಡಬೇಕಾ....? ಭಾಷೆಯ ಉಳಿವಿಗಾಗಿ ನಾನು ಕನ್ನಡ ಸಿನಿಮಾ ನೋಡೋದು ಅಂತ ಎಷ್ಟು ಜನ ಹೇಳುತ್ತಾರೆ... ಕನ್ನಡ ಸಿನಿಮಾ ನೋಡಿ ಅಂತ ಹೇಳೋ ಸಿನಿಮಾ ಭಾಷಾಭಿಮಾನಿಗಳು ಕನ್ನಡವನ್ನೇ ಹೆಚ್ಚಾಗಿ ಬಳಸೋ ಕಲಾತ್ಮಕ ಚಿತ್ರವನ್ನು ನೋಡುತ್ತಾರಾ....?
ಸಿನಿಮಾ ಮನೋರಂಜನೆಗಾಗಿ ಹುಟ್ಟಿದ್ದು.... ನಮ್ಮ ಮನಸ್ಸಿಗೆ ಖುಷಿ ಸಿಗುತ್ತದೆ ಅನ್ನೋ ಕಾರಣಕ್ಕಾಗಿ ತಾನೆ ನಾವು ಹಣ ಕೊಡೋದು... ಒಂದು ಸಿನಿಮಾದಲ್ಲಿ ಮನೋರಂಜನೆಯೆ ಇಲ್ಲ ಅಂತ ಮೊದಲೇ ಗೊತ್ತಾಯಿತೆನ್ನಿ... ಹಾಗಾದಾಗ ನೀವು ಹಣ ಕೊಟ್ಟು ಆ ಚಿತ್ರವನ್ನು ನೋಡುತ್ತೀರಾ...? ಒಂದು ಕ್ಷಣ ಭಾವನಾತ್ಮಕವಾಗಿ ಯೋಚಿಸದೇ ಪ್ರಾಕ್ಟಿಕಲ್ ಆಗಿ ಯೋಚಿಸಿ.... ಸಿನಿಮಾದ ನಿರ್ಮಾಣ ಮಾಡಿದವ ಹಣ ಗಳಿಕೆಗಾಗಿ ಸಿನಿಮಾ ಮಾಡುತ್ತಿದ್ದಾನೆ... ಅದರಲ್ಲಿರುವ ಕಲಾವಿದರು ತಮ್ಮ ಹಣ ಗಳಿಕೆಗಾಗಿ ತಮ್ಮ ಕಲೆಯ ಪ್ರದರ್ಶನ ಮಾಡುತ್ತಾರೆ... ತಂತ್ರಜ್ಞರು ತಮ್ಮ ಸಂಪಾದನೆಗಾಗಿಯೇ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.... ನಿರ್ದೇಶಕನೂ ತನ್ನ ಸಂಪಾದನೆಗಾಗಿಯೇ ನಿರ್ದೇಶನ ಮಾಡುತ್ತಾನೆ... ( ಇಲ್ಲಿ ಕೆಲವೊಂದು ನಿರ್ದೇಶಕರು ಹೇಗಿರುತ್ತಾರೆಂದರೆ ತಮ್ಮ ಸಂಪಾದನೆಯೂ ಆಗಬೇಕು ಅದರ ಜೊತೆ ಸಮಾಜಕ್ಕೆ ಒಳ್ಳೆಯ ಸಂದೇಶವೂ ಕೊಡಬೇಕು ಅಂದು ಕೊಳ್ಳುತ್ತಾರೆ.... ಅದಕ್ಕೆ ತಕ್ಕಂತೆ ತಮ್ಮ ಸೃಜನಶೀಲತೆಯನ್ನು ವ್ಯಕ್ತ ಪಡಿಸುತ್ತಾರೆ ) ಹೀಗೆ ಹೆಚ್ಚಿನವರೆಲ್ಲರದ್ದೂ ಆದಾಯವೇ ಮೂಲ ಆಗಿರುವಾಗ ಪ್ರೇಕ್ಷಕ ಮಾತ್ರ ಯಾಕೆ ಭಾಷಾಭಿಮಾನಕ್ಕಾಗಿ ಸಿನಿಮಾ ನೋಡಬೇಕು...? ಅವನೂ ಬೆವರು ಸುರಿಸಿ ದುಡಿದಿರುವ ಹಣವನ್ನು ಸುಮ್ಮನೆ ಯಾಕೆ ಪೋಲು ಮಾಡಬೇಕು...? ಯಾರಿಗೂ ಹಣ ಹೆಚ್ಚಾಗಿದೆ ಅದಕ್ಕೆ ಸಿನಿಮಾ ನೋಡೋದು ಅನ್ನೋ ಭಾವನೆಯೇನೂ ಬರೋದಿಲ್ಲ ಅಲ್ವಾ.... ಇನ್ನೂ ಒಂದು ರೀತಿಯಲ್ಲಿ ಯೋಚಿಸಿ ನೋಡಿ.... ಗೆಳೆಯರೆಲ್ಲಾ ಒಂದಾಗಿ ಮಾತಾಡಿಕೊಳ್ಳುತ್ತಾರೆ..." ಹೇ ಬೋರ್ ಆಗ್ತಿದೆ... ಮೂವಿಗೆ ಹೋಗೋಣ..." ಅಥವಾ ಕುಟುಂಬದಲ್ಲಿ ಯಾವುದೋ ಖುಷಿಯ ಸಮಾರಂಭ ಇದ್ದಾಗ ಎಲ್ಲರೂ ಸೇರಿ ಸಿನಿಮಾಗೆ ಹೋಗೋಣ..... ಅಂತ ಮಾತಾಡಿಕೊಳ್ಳುತ್ತಾರೆಯೇ ಹೊರತು ಬನ್ನಿ ಗೆಳೆಯರೇ ಕನ್ನಡ ಭಾಷೆಯ ಉಳಿವಿಗಾಗಿ ಸಿನಿಮಾಗೆ ಹೋಗೋಣ... ಅಂತಲೋ ಬನ್ನಿ ಕುಟುಂಬಿಕರೇ ಕನ್ನಡ ಭಾಷೆಯ ಉಳಿವಿಗಾಗಿ ಸಿನಿಮಾಗೆ ಹೋಗೋಣ ಅಂತ ಮಾತಾಡಿಕೊಳ್ಳೋದಿಲ್ಲ ಅಲ್ವಾ.... ಹಾಗೇನಾದರೂ ಆಗಿದಿದ್ದರೆ ಕನ್ನಡ ಪ್ರಾಧ್ಯಾಪಕರು ತಮ್ಮ ಕ್ಲಾಸ್ ಬಂಕ್ ಮಾಡಿ ಕನ್ನಡ ಸಿನಿಮಾ ನೋಡಲು ಹೋದ ವಿದ್ಯಾರ್ಥಿಗಳನ್ನು ಅಭಿನಂದಿಸಬೇಕಾಗಿತ್ತು.. ಅಥವಾ ಬನ್ನಿ ವಿದ್ಯಾರ್ಥಿಗಳೇ ಕನ್ನಡ ಸಿನಿಮಾ ನೋಡಿ ಕನ್ನಡ ಭಾಷೆಯನ್ನುಳಿಸೋಣ ಅನ್ನಬೇಕಾಗಿತ್ತು.....
ಇಲ್ಲಿ ನಾನು ಹೇಳಬಯಸುವುದು ಇಷ್ಟೇ... ಸಿನಿಮಾ ನೋಡೋದು ಬರಿಯ ಮನರಂಜನೆಗಾಗಿ... ಒಂದು ವೇಳೆ ಸಮಾಜಕ್ಕೆ ಬೇಕಾದಂತಹ ಅಂಶಗಳಿದ್ದರೆ ಅದನ್ನ ಜನ ಸ್ವೀಕರಿಸುತ್ತಾರೆಯೇ ಹೊರತು ಆ ಅಂಶ ಯಾವ ಭಾಷೆಯ ಮೂಲಕ ಹೇಳಲ್ಪಟ್ಟಿತು ಅನ್ನೋದನ್ನ ಅಲ್ಲ.... ಉದಾಹರಣೆಗೆ ದೇಶಭಕ್ತಿಯ ಸಿನಿಮಾ ಯಾವುದೇ ಭಾಷೆಯಲ್ಲಿರಲಿ ಅದು ನಮ್ಮಲ್ಲಿ ದೇಶಾಭಿಮಾನ ಮೂಡಿಸಿಯೇ ಮೂಡಿಸುತ್ತದೆ.... ವರದಕ್ಷಿಣಾ ವಿರೋಧಿ ಸಿನಿಮಾ ನೋಡಿದರೆ... ನಾನು ವರದಕ್ಷಿಣೆ ತೆಗೆದುಕೊಳ್ಳೋದಿಲ್ಲ ಅನ್ನೋ ಭಾವನೆ ಮೂಡಿಸುತ್ತದೆ..... ಭಯೋತ್ಪಾದನೆಯನ್ನು ತೋರಿಸೋ ಸಿನಿಮಾ ಭಯೋತ್ಪಾದಕರನ್ನ ದಮನಿಸೋ ಕೆಚ್ಚನ್ನು ನಮ್ಮಲ್ಲಿ ಮೂಡಿಸುತ್ತದೆ. ಈ ರೀತಿ ಆ ಸಿನಿಮಾ ಕೊಡೋ ಸಂದೇಶವನ್ನು ಸ್ವೀಕರಿಸೋದೆ ಹೊರತು ಭಾಷೆಯನ್ನಲ್ಲ ... ಒಂದು ವೇಳೆ ಕನ್ನಡದ ಮಹತ್ವವನ್ನ ತಿಳಿಸೋ ವಸ್ತುವಿಷಯವನ್ನಿಟ್ಟು ಚಿತ್ರಕಥೆ ಹೆಣೆದಾಗ ಜನ ಕನ್ನಡ ಭಾಷೆಯನ್ನ ಉಳಿಸಬೇಕು ಅಂತ ಮನಸ್ಸಿನಲ್ಲಿಯೇ ಮೆಲುಕು ಹಾಕಿಕೊಂಡಾರೇ ಹೊರತು ಭಾಷೆಯಿಂದಾಗಿ ಸಿನಿಮಾವನ್ನ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ... ಸರಳವಾಗಿ ಹೇಳೋದಾದರೆ ಒಂದು ಸಿನಿಮಾದ ಚಿತ್ರಕಥೆ ಏನು ಹೇಳುತ್ತದೆ ಅನ್ನೋದು ಜನರನ್ನ ತಲುಪುತ್ತದೆಯೇ ಹೊರತು ಅದು ಯಾವ ಭಾಷೆಯಲ್ಲಿ ಹೇಳಲ್ಪಟ್ಟಿದೋ ಆ ಭಾಷೆ ಜನರ ಮನಸ್ಸಿನಲ್ಲಿ ಉಳಿಯುವುದಲ್ಲ... ಆದರೆ ಇಂತಹಾ ಸಿನಿಮಾಗಳು ಬರುವುದು ಅಪರೂಪ... ಎಲ್ಲವೂ ಪ್ರೀತಿ, ಸೆಕ್ಸು, ಕ್ರೌರ್ಯ, ಸಾಹಸ ಇಂತಹದರ ಮೇಲೆ ಹೆಣೆದಿರೋ ಸಿನಿಮಾಗಳೇ ಜಾಸ್ತಿ.... ಯಾಕೆ....??? ಯಾಕಂದರೆ ಅದೇ ತಾನೆ ನಿರ್ಮಾಪಕರಿಗೆ ಹಣ ಗಳಿಸಿ ಕೊಡೋದು...
ಹಾಗಾಗಿ ಸಿನಿಮಾ ಅದು ಮನರಂಜನೆಯ ಅಧಾರದ ಮೇಲೆಯೇ ನಿಂತಿರುವುದು ಅನ್ನೋದನ್ನ ಮನಗಾಣಬಹುದು.... ಹಾಗಾಗಿ ನನ್ನ ವೈಯಕ್ತಿಕ ಅಭಿಪ್ರಾಯದಂತೆ ಸಿನಿಮಾ ಭಾಷೆಯನ್ನ ಉಳಿಸುತ್ತದೆ ಅನ್ನೋದು ತಪ್ಪು... ಯಾರೇ ಆಗಲಿ ಸಿನಿಮಾವನ್ನ ನೋಡಿ ಬಂದವರು ಭಾಷೆಯ ಕಂಪಿಗಿಂತಲೂ ಆ ಚಿತ್ರದ ವಸ್ತು ವಿಷಯದ ಮೆಲುಕು ಹಾಕುತ್ತಾರೆ.... ದೃಷ್ಯ ವೈಭವದ ಮೆಲುಕು ಹಾಕುತ್ತಾರಷ್ಟೇ.... ಅದೇ ನಮ್ಮ ಮನದಲ್ಲಿ ಅತಿ ಹೆಚ್ಚು ಸಮಯ ಉಳಿಯೋದು ವಿನಹ ಭಾಷೆಯಲ್ಲ...ಹಾಗಿದ್ದು ನಮ್ಮಲ್ಲಿ ಕನ್ನಡ ಸಿನಿಮಾ ನೋಡಿ, ಪರಭಾಷೆಗಳಿಗೆ ಮನ್ನಣೆ ಕೊಡಬೇಡಿ ಅನ್ನೋ ಕೂಗು ಅವಾಗಾವಾಗ ಬರೋದು ಯಾಕೆ...? ಇಲ್ಲಿ ಸಮಸ್ಯೆ ಬೇರೆಯೇ.... ಸಾಮಾನ್ಯವಾಗಿ ಪರಭಾಷಾ ವಿರೋಧಿಗಳ ವಿರೋಧ ಮತ್ತು ಸಿಟ್ಟು ಇರುವುದು ಚಿತ್ರಮಂದಿರದವರ ಮೇಲೆ.... ಯಾಕಂದರೆ ಪರಭಾಷಾ ಸಿನಿಮಾ ಬಂದ ಕೂಡಲೇ ಚಿತ್ರಮಂದಿರದ ಮಾಲಕರು ಕನ್ನಡ ಸಿನಿಮಾಗೆ ಅವಕಾಶ ಕೊಡೋದಿಲ್ಲ ಅಥವಾ ಬೇಕು ಅಂತಲೇ ಕನ್ನಡ ಸಿನಿಮಾವನ್ನ ತೆಗೆದು ಇನ್ನುಳಿದ ಭಾಷೆಯ ಸಿನಿಮಾಗೆ ಅವಕಾಶ ಕೊಡುತ್ತಾರೆ... ಅನ್ನೋದು ಅವರನ್ನ ಕಾಡೋ ವಿಷಯ... ಇಲ್ಲೂ ವಿಷಯ ಸರಳ.... ಚಿತ್ರ ಮಂದಿರದ ಮಾಲಕ ಕಲಾಸೇವೆಗಾಗಿ ಚಿತ್ರಮಂದಿರ ತೆರೆಯುವುದಲ್ಲ... ಅವನ ಮೂಲ ಉದ್ದೇಶ ಹಣ ಗಳಿಕೆ.... ಆ ಚಿತ್ರಮಂದಿರದ ಮಾಲಕನಿಗೇನು ಬೇಕು...? ಎಲ್ಲಾ ಟಿಕೇಟು ಮಾರಾಟವಾಗೋದು ಆತನ ಉದ್ದೇಶ... ಯಾವ ಭಾಷೆಯ ಸಿನಿಮಾ ಆದರೆ ಅವನಿಗೇನಂತೆ ಹೌಸ್ ಫುಲ್ ಪ್ರದರ್ಶನ ಅಂದರೆ ಆಯ್ತು ತಾನೇ. ಹಾಗಾಗಿ ಆತ ಯಾವ ಸಿನಿಮಾ ತನಗೆ ಉತ್ತಮ ಆದಾಯ ತರಬಲ್ಲದೋ ಅದನ್ನೇ ಪ್ರಸಾರ ಮಾಡುತ್ತಾನೆ.... ಒಂದು ವೇಳೆ ಕನ್ನಡ ಸಿನಿಮಾವೊಂದು ಉತ್ತಮ ಭರವಸೆ ಮೂಡಿಸಿ ಹಣ ಗಳಿಸಿ ಕೊಟ್ಟೀತು ಅನ್ನುವ ಆತ್ಮ ವಿಶ್ವಾಸ ಮೂಡಿದರೆ.... ಯಾರೇ ಆದರೂ ಅದನ್ನ ಪ್ರಸಾರ ಮಾಡಿಯೇ ಮಾಡುತ್ತಾರೆ ಅಲ್ವಾ...ಹಾಗಾಗಿ ಇಲ್ಲಿ ಸಿನಿಮಾ ನೋಡುಗರಿಗೂ ಚಿತ್ರಮಂದಿರದ ಮಾಲಕರಿಗೂ ಬೇಕಾಗಿರುವುದು ಉತ್ತಮ ಚಿತ್ರವೇ ಹೊರತು ಯಾವ ಭಾಷೆಯ ಸಿನಿಮಾ ಅನ್ನುವುದಲ್ಲ.... ನೋಡುಗನಿಗೆ ತಾನು ಕೊಡುತ್ತಿರುವ ಹಣಕ್ಕೆ ಬೇಕಾದಷ್ಟು ಮನರಂಜನೆ ಸಿಗುವುದು ಮುಖ್ಯವಾಗಿರುತ್ತದೆ.... ಚಿತ್ರಮಂದಿರದ ಮಾಲಕನಿಗೆ ತಾನು ಪ್ರದರ್ಶಿಸುತ್ತಿರೋ ಸಿನಿಮಾ ಉತ್ತಮ ಆದಾಯ ಗಳಿಸಿಕೊಡಬೇಕೇನುವ ಆಸೆ... ಅಷ್ಟೇ... ಇವರಿಬ್ಬರ ಆಸೆಯನ್ನ ಒಂದು ಉತ್ತಮ ಸಿನಿಮಾವಷ್ಟೇ ಪೂರೈಸಬಲ್ಲುದು ತಾನೇ.
ನಾನು ಸಣ್ಣ ತರಗತಿಯಲ್ಲಿದ್ದಾಗ ನನ್ನ ಮೇಷ್ಟ್ರು ಒಂದೊಳ್ಳೆಯ ನೀತಿಕಥೆಯನ್ನ ಪ್ರಶ್ನೆಯ ರೂಪದಲ್ಲಿ ಕೇಳಿದ್ದರು... ಬೋರ್ಡಿನಲ್ಲಿ ಒಂದು ಗೆರೆಯೆಳೆದು " ಇದನ್ನ ಮುಟ್ಟದೆಯೇ ಸಣ್ಣದು ಮಾಡಿ " ಅಂತಂದರು... ಏನು ಯೋಚಿಸಿದರು ನಮ್ಮ ತಲೆಗೆ ಹೊಳೆಯಲೇ ಇಲ್ಲ, ಕೊನೆಗೆ ಅದರ ಪಕ್ಕ ಉದ್ದನೆಯ ಗೆರೆಯೊಂದನ್ನ ಎಳೆದು ಅವರೇ ಹೇಳಿದರು " ಈಗ ನೋಡಿ ಆ ಗೆರೆ ಸಣ್ಣದಾಯಿತು " ಅಂತ... ಇದರ ನೀತಿಯನ್ನು ಹೇಳುತ್ತಾ ನಮಗೆಲ್ಲರಿಗೂ ಕಿವಿಮಾತು ಹೇಳಿದ್ದರು.... ಒಬ್ಬರನ್ನು ಸಣ್ಣದು ಮಾಡುವುದು ಅಂದರೆ ನಾವು ಅವರಿಗಿಂತಲೂ ಎತ್ತರಕ್ಕೆ ಏರುವುದು ಅಗ ಇನ್ನೊಬ್ಬರು ತನ್ನಿಂತಾನೇ ಸಣ್ಣದಾಗುತ್ತಾರೆ... ನಾವಿಲ್ಲಿ ಮಾಡಬೇಕಾಗಿರೋದು ಇದನ್ನೇ.... ಪರಭಾಷಾ ಸಿನಿಮಾವನ್ನ ನೋಡಬೇಡಿ ಅನ್ನೋದಕ್ಕಿಂತಲೂ ನಮ್ಮ ಚಿತ್ರರಂಗಕ್ಕೆ ಉತ್ತಮವಾದದುದನ್ನ ಮಾಡೋಕೆ ಪ್ರೋತ್ಸಾಹ ಕೊಡಬೇಕೇ ಹೊರತು ಇನ್ನುಳಿದವರನ್ನು ದೂರೋದು ಅಲ್ಲ.... ನಮ್ಮ ಸಿನಿಮಾದ ಗುಣಮಟ್ಟವನ್ನ... ಅದ್ಧೂರಿತನವನ್ನ ಕ್ರಿಯಾಶೀಲತೆಯನ್ನ ಬೆಳೆಸಬೇಕೇ ಹೊರತು ಇನ್ನೊಬ್ಬರ ಕ್ರಿಯಾಶೀಲತೆಯನ್ನು ಹಳಿಯುವುದಲ್ಲ.... ಯಾವಾಗ ಚಿತ್ರೋದ್ಯಮಿಗಳಿಗೆ ಕನ್ನಡ ಸಿನಿಮಾ ಕೂಡಾ ಉತ್ತಮ ಆದಾಯ ಗಳಿಸಿಕೊಡಬಲ್ಲುದು ಅನ್ನೋ ನಂಬಿಕೆ ಮೂಡುತ್ತೋ ಅಂದು ಅವರು ಪರಭಾಷ ಚಿತ್ರಗಳಿಗೆ ಮಣೆ ಹಾಕೋದನ್ನು ನಿಲ್ಲಿಸುತ್ತಾರೆ. ಯಾರಿಗೇ ಆಗಲಿ ತನ್ನ ಹಣವನ್ನ ವೃಥಾ ಪೋಲು ಮಾಡೋದಿಲ್ಲ.... ತಾನು ಹಾಕಿದ ಹಣಕ್ಕೆ ಅಷ್ಟೇ ಮೌಲ್ಯದ್ದೇನಾದರೂ ಸಿಗಬೇಕು ಇದೇ ಲಾಜಿಕ್ ಎಲ್ಲರದ್ದೂ ಅಲ್ವೇ.
ಇನ್ನು ಕನ್ನಡ ಚಿತ್ರರಂಗವನ್ನು ಉಳಿಸಬೇಕು ಅನ್ನುವ ಕಳಕಳಿಯ ಪ್ರದರ್ಶನಕ್ಕೂ ನಾನು ಹೇಳುವುದಿಷ್ಟೇ... ಚಿತ್ರರಂಗವನ್ನು ಉಳಿಸುವುದು ಅವರ ಕೈಯಲ್ಲೇ ಇದೆ.. ಕ್ರಿಯಾಶೀಲ ವ್ಯಕ್ತಿಗಳನ್ನ ಹುಡುಕಿ ಕನ್ನಡದಲ್ಲೂ ಅತ್ಯುತ್ತಮ ಸಿನಿಮಾ ಮಾಡಲು ತೊಡಗಿದರೆ ತನ್ನಿಂತಾನೇ ಉದ್ಯಮ ಬೆಳೆಯತೊಡಗುತ್ತದೆ. ಕನ್ನಡ ಸಿನಿಮಾ ನೋಡಿ ಕನ್ನಡ ಉಳಿಸಿ ಅನ್ನುವ ವಾದ ಮಾಡುವವರು ಒಮ್ಮೆ ಕನ್ನಡ ಚಿತ್ರರಂಗದವರು ಎಷ್ಟು ಕನ್ನಡವನ್ನ ತಮ್ಮದಾಗಿಸಿಕೊಳ್ಳುತ್ತಾರೆ ಅನ್ನುವುದರ ಕುರಿತಾಗಿಯೂ ಗಮನ ಹರಿಸಬೇಕು... ತಮ್ಮ ಕನ್ನಡ ಸಿನಿಮಾಗಳಲ್ಲಿ ಎಷ್ಟು ಕನ್ನಡತನವನ್ನ ಕನ್ನಡದ ಹೊಸ ಶಬ್ದ ಪ್ರಯೋಗವನ್ನ ಮಾಡುತ್ತಾರೆ... ಸಿನಿಮಾದ ಹೊರತಾಗಿ ಕನ್ನಡವನ್ನು ಅವರೆಷ್ಟು ಮಾತಾಡುತ್ತಾರೆ ಅನ್ನೋದನ್ನು ಯೋಚಿಸಿ ಅವರಲ್ಲಿ ನಿಜವಾಗಿಯೂ ಕನ್ನಡದ ಮೇಲೆ ಅಭಿಮಾನ ಇದೆ ಅನ್ನೋದು ಗೊತ್ತಾದಾಗ ಅವರ ಬೆಂಬಲಕ್ಕೆ ನಿಲ್ಲಲಿ... ಸಿನಿಮಾದಲ್ಲೆಲ್ಲಾ " ಕನ್ನಡ ನನ್ನ ಉಸಿರು " ಅಂತ ಹೇಳಿಕೊಂಡು ಆ ಸಿನಿಮಾದ ಬಗೆಗಿನ ಸಂದರ್ಶನದಲ್ಲಿ ಮಾತು ಮಾತಿಗೂ ಇಂಗ್ಲೀಷು ಬಳಸೋರಿಂದ ಕನ್ನಡ ಬೆಳೆಯಲು ಸಾಧ್ಯವಿಲ್ಲ. ಎಷ್ಟು ಜನ ನಟರು ತಮ್ಮ ಮಕ್ಕಳನ್ನ ಕನ್ನಡ ಮಾಧ್ಯಮದ ಶಾಲೆಗೆ ಕಳುಹಿಸುತ್ತಾರೆ ಎನ್ನುವುದೂ ಲೆಕ್ಕ ಹಾಕಿ ನೋಡಲಿ... ಹೀಗೆ ನೋಡಿದಾಗ ಅವರ ನಡೆ ನುಡಿಗಳಲ್ಲಿ ಕನ್ನಡ ಇಲ್ಲವೆಂದಾದಾಗ ಅವರು ಸಿನಿಮಾವನ್ನ ಉದ್ಯಮವನ್ನಾಗಿಸಿದ್ದಾರೆ ಅನ್ನೋದು ಧೃಢವಾಗುತ್ತದೆ ತಾನೆ.... ಭಾಷೆಯ ಬೆಳವಣಿಗೆಗಾಗಿ ಅವರು ಸಿನಿಮಾ ಮಾಡದಿರುವಾಗ ಅದನ್ನ ನೋಡುವುದರಿಂದ ಹೇಗೆ ಭಾಷೆ ಬೆಳೆಯುತ್ತದೆ...ಅವರೆಲ್ಲರಿಗೂ ಸಿನಿಮಾ ಅನ್ನೋದು ಉದ್ಯಮವಾದಾಗ ಒಬ್ಬ ಪ್ರೇಕ್ಷಕ ಕೂಡಾ ಸಿನಿಮಾವನ್ನ ಉದ್ಯಮವನ್ನಾಗೇ ನೋಡಿದರೆ ತಪ್ಪೇನು...?
ಇಷ್ಟಾಗಿಯೂ ವಾಸ್ತವದಲ್ಲಿ ಕನ್ನಡವನ್ನ ಉಳಿಸಿ ಬೆಳೆಸಬೇಕು ಅನ್ನುವ ಮನಸ್ಸಿದ್ದವರು ಕನ್ನಡ ಪುಸ್ತಕಗಳ ಪ್ರಚಾರ ಮಾಡೋದನ್ನ ಕಲಿತರೆ ಒಳ್ಳೆಯದೇನೋ... ಯಾಕಂದರೆ ಕನ್ನಡ ಪುಸ್ತಕಗಳಲ್ಲಿ ಯಥೇಚ್ಛ ಕನ್ನಡ ಬಳಸಲ್ಪಡುತ್ತದೆ. ಹೊಸ ಹೊಸ ಶಬ್ದ ಪ್ರಯೋಗಗಳು ಕಾವ್ಯಮಯ ಪದಗಳು ಇವೆಲ್ಲಾ ಓದುವುದರಿಂದ ನಮ್ಮ ಶಬ್ದ ಭಂಡಾರ ಜಾಸ್ತಿಯಾಗಿ ಆಗ ನಮ್ಮೊಳಗೆ ಹೆಚ್ಚು ಹೆಚ್ಚು ಕನ್ನಡ ಬಳಸಬೇಕೆನ್ನುವ ತುಡಿತ ಬರುತ್ತದೆ. ಕನ್ನಡದ ಸೇವೆಯನ್ನ ಮಾಡುವ ನೈಜ ಸಾಹಿತಿಗಳವರ ಸಾಹಿತ್ಯ ಓದುವುದರಿಂದ ನಮ್ಮ ಭಾಷೆಯ ಸಿರಿವಂತಿಕೆ ಅರ್ಥವಾಗುತ್ತದೆಯೇ ಹೊರತು ಕನ್ನಡ ಸಿನಿಮಾದಲ್ಲಿ ಅಂಥದ್ದೇ ವೈಭವ ನೋಡಲು ಸಿಗೋದು ತೀರಾ ವಿರಳ. ನಾವು ಇಂಥಾದ್ದರ ಪ್ರಚಾರ ಮಾಡಿ ನಮ್ಮ ಮನೆಯಲ್ಲೇ ನಮ್ಮ ಮುಂದಿನ ಪೀಳಿಗೆಯವರ ಜೊತೆ ಜೊತೆ ಹೆಚ್ಚು ಹೆಚ್ಚು ಕನ್ನಡವನ್ನು ಬಳಸಿದಾಗ ಮಾತ್ರ ಕನ್ನಡ ಉಳಿದು ಬೆಳೆಯುತ್ತದೆಯೇ ಹೊರತು ಸಿನಿಮಾ ಎನ್ನುವ ಮನೋರಂಜನೆಯ ಉದ್ಯಮದಿಂದಲ್ಲ.... ಭಾಷಾ ಪ್ರೇಮವನ್ನು ಮಕ್ಕಳಲ್ಲಿ ಎಳವೆಯಲ್ಲಿಯೇ ಮೂಡಿಸಿದಾಗ ಅದು ಅವರ ಮನಸ್ಸಲ್ಲಿ ಅಚ್ಚಳಿಯದೇ ಉಳಿದು ಬೆಳೆಯುತ್ತದೆ... ಹೊರ ಪ್ರಪಂಚದಲ್ಲಿ ತಲೆಯೆತ್ತಿ ನಿಲ್ಲಲು ಇಂಗ್ಲೀಷು ಅಗತ್ಯ ಅನ್ನುತ್ತಾ ಎಳವೆಯಲ್ಲಿಯೇ ಇಂಗ್ಲೀಷಿನ ದಾಸರನ್ನಾಗಿಸಿ ಮತ್ತೆ ಕನ್ನಡ ಸಿನಿಮಾ ತೋರಿಸಿ ಕನ್ನಡ ಬೆಳೆಸುತ್ತೇವೆ ಅಂದರೆ ಅದು ಹೇಗೆ ಸಾಧ್ಯ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುತ್ತದೆಯೇ.... ?
ನನಗೂ ಕನ್ನಡ ಭಾಷೆಯ ಬಳಕೆಯಲ್ಲಾಗುತ್ತಿರುವ ಇಳಿಕೆಯ ಪ್ರಮಾಣ ಕಂಡು ಆತಂಕವಾಗುತ್ತದೆ... ಹಾಗಂತ ಯಾವುದನ್ನೋ ಯಾವುದಕ್ಕೋ ಹೋಲಿಸಿ ಇಲ್ಲ ಸಲ್ಲದ ಲಾಜಿಕ್ಕನ್ನು ಮುಂದಿಡುತ್ತಾ ಭಾಷೆಯನ್ನು ಉಳಿಸೋಣ ಅನ್ನೋದು ಸರಿ ಕಾಣಿಸುವುದಿಲ್ಲ.... ನನ್ನದೇನಿದ್ದರೂ ಹೆಚ್ಚು ಹೆಚ್ಚು ಕನ್ನಡದಲ್ಲಿಯೇ ವ್ಯವಹರಿಸಿ ಕನ್ನಡವನ್ನು ಉಳಿಸೋ ಲಾಜಿಕ್.... ಅದನ್ನ ನಾನು ಮಾಡುತ್ತಾ ಬಂದಿದ್ದೇನೆ... ಸಿನಿಮಾ ನನಗೆ ಮನೋರಂಜನೆ ಕೊಡಬೇಕು.... ಅಷ್ಟೇ... ಯಾವ ಉತ್ತಮ ಸಿನಿಮಾಗಳು ನನಗೆ ಮನೋರಂಜನೆ ಕೊಡುತ್ತದೋ ಅದನ್ನ ನೋಡಿಯೇ ತೀರುತ್ತೇನೆ.... ಇಷ್ಟಾಗಿಯೂ ಕನ್ನಡ ಸಿನಿಮಾ ನೋಡುವುದರಿಂದಲೇ ಕನ್ನಡ ಉಳಿಯೋದು ಅನ್ನೋರಿದ್ದರೆ... ಸರಿ ಬಿಡಿ... ಅವರವರಿಗೆ ಅವರವರ ಲಾಜಿಕ್ಕೇ ಸರಿ...

1 comment: