Thursday 22 October 2015

ಹೀಗೋಬ್ಬ ಮಹಾನ್ ತಂದೆ..



ಇವತ್ತು ಅಪ್ಪಟ ಭಾರತೀಯರಿಗೆ ಬಹಳ ಸಂತೋಷದ ದಿನ ಅಂದರೆ ತಪ್ಪಾಗಲಿಕ್ಕಿಲ್ಲ. ಭಾರತಾಂಬೆಗೆ ಹಲ್ಲೆ ಮಾಡಿ, ನಾಲ್ಕು ವರ್ಷ ಜೈಲು ಎನುವ ಸ್ಟಾರ್ ಹೋಟೇಲಿನ ಆತಿಥ್ಯದಲ್ಲಿದ್ದ ಕಸಬ್ ಕತ್ತು ಕೊನೆಗೂ ಯಮ ಪಾಶಕ್ಕೆ ಸಿಕ್ಕಿ ಹಾಕಿಕೊಂಡಿತು. ಬೆಳಿಗ್ಗೆ ಬಂದ ಮೆಸೇಜ್ ಒಂದನ್ನು ನೋಡಿದ ಕೂಡಲೇ ನ್ಯೂಸ್ ಚಾನಲ್ ಹಾಕಿ ನೋಡಿದೆ ಅವರಾಗಲೇ ದೊಡ್ಡ ಭಕ್ಷ್ಯವೊಂದು ಸಿಕ್ಕ ರೀತಿಯಲ್ಲಿ ಮುಗಿಬಿದ್ದು ತಮ್ಮ ಹಸಿವನ್ನು ನೀಗಿಸತೊಡಗಿದ್ದರು. ಕಸಬ್ .... ಕಸಬ್... ಕಸಬ್... ಅವರಿವರ ಜೊತೆ ಮಾತುಕತೆ ನಿಮ್ಮ ಅಭಿಪ್ರಯ ಅಂತೆಲ್ಲಾ ಶುರು ಮಾಡಿಕೊಂಡಿದ್ದರು . ಒಬ್ಬ ಉಗ್ರವಾದಿಗೆ ಶಿಕ್ಷೆ ಆಗಿದೆ ಅನ್ನೋದು ಸಾಮಾನ್ಯವಾದ ಸಮಾಚಾರ ಆಗಬೇಕಿತ್ತು ಆದರೆ ಇವರು ಇದನ್ನೆ ಎರಡು ಕೋಮಿನ ನಡುವಿನ ವೈಷಮ್ಯದ ಅಗ್ನಿಗೆ ತುಪ್ಪ ಸುರಿಯೋ ನ್ಯೂಸ್ ಅನ್ನಾಗಿ ಪರಿವರ್ತಿಸುತ್ತಿದ್ದಾರೇನೋ ಅನ್ನಿಸಿತು.ಹಾಳಾಗಿ ಹೋಗಲಿ ಈ ಮಾಧ್ಯಮದವರು ಸರಿಹೋಗೋದಿಲ್ಲ ಅಂದು ಕೊಂಡು ಕಸಬನ ಸಾವಿಗೆ ಖುಷಿಪಟ್ಟು ಟಿ.ವಿ ಬಂದ್ ಮಾಡುವಷ್ಟರಲ್ಲಿ ಪಬ್ಲಿಕ್ ಟಿ.ವಿಯ ವರದಿಗಾರ "ಸಂದೀಪ್ ಉನ್ನಿಕೃಷ್ಣನ್" ಅವರ ತಂದೆಯ ಇಂಟರ್ ವ್ಯೂ ಮಾಡಹೊರಟ ... ಹಾಗೇಯೇ ನೋಡೋಣ ಏನು ಹೇಳುತ್ತಾರೆ ಅಂತ ಕುತೂಹಲದಿಂದ ನೋಡಿದೆ... ಅಬ್ಬಾ.... ಬಹುಶ ನಾನು ಟಿವಿ ಬಂದ್ ಮಾಡಿದ್ದರೆ ಒಬ್ಬ ವೀರ ಯೋಧನ ಮಹಾನ್ ತಂದೆಯ ನಿಜವಾದ ವ್ಯಕ್ತಿತ್ವದ ಪರಿಚಯವಾಗೋದರಿಂದ ವಂಚಿತನಾಗುತ್ತಿದ್ದೆನೇನೋ...
ನಮಗೆಲ್ಲಾ ಗೊತ್ತು ಸಂದೀಪ್ ಉನ್ನಿಕೃಷ್ಣನ್ ಎಂಥಾ ಮಹಾನ್ ಸೈನಿಕ ಅಂತ ಆದರೆ ಆತನ ತಂದೆಯ ವಿಶೇಷತೆ ಗೊತ್ತೇ ಇಲ್ಲವೇನೋ... ತನ್ನ ಮಗನ ಸಾವಿಗೆ ಕಾರಣಕರ್ತನಾದವನ ಮರಣ ಅವರಲ್ಲಿ ವಿಶೇಷ ಬದಲಾವಣೆ ತಂದಿರಲಿಲ್ಲ ಮಾಧ್ಯಮದವರ ಪ್ರಶ್ನೆಗೆ ಅವರ ಉತ್ತರಗಳು ನನ್ನನ್ನು ಆಶ್ಚರ್ಯಚಕಿತರನ್ನಾಗಿಸಿತ್ತು... ಅವರು ಹೇಳಿದರು ನನ್ನ ಮಗನಿಗಾಗಿ ಕಸಬ್ ಗೆ ಶಿಕ್ಷೆ ಆಗಬೇಕು ಅಂತ ನಾನು ಬಯಸಲಿಲ್ಲ ... ನಾನು ಬಯಸುತ್ತಿದ್ದುದು ನಿರಾಯುಧರಾಗಿದ್ದು ಸಮಾಜದಲ್ಲಿ ಓಡಾಡೋ ಜನಸಾಮಾನ್ಯರಿಗಾಗಿ, ಈ ಶಿಕ್ಷೆ ಆಗಬೇಕೆಂದು ಬಯಸಿದ್ದೆ... ನನ್ನ ಮಗನಾದರೋ ಶಸ್ತ್ರಧಾರಿಯಾಗಿದ್ದು ಹೋರಾಡಿ ಸತ್ತ ಆದರೆ ಜನ ಸಾಮಾನ್ಯರ ಪಾಡೇನು... ಕಸಬ್ ನ ಸಾವು ಒಬ್ಬ ತಂದೆಯಾಗಿ ಅವರಿಗೆ ವಿಶೇಷ ಅನ್ನಿಸಲಿಲ್ಲವಂತೆ ಆದರೆ ಭಾರತೀಯ ನಾಗರಿಕನಾಗಿ ಖುಷಿ ತಂದಿದೆ ಅಂದರು .... ಅಬ್ಬಾ ಎಂಥಾ ವಿಚಾರಧಾರೆ ಅಲ್ವಾ.... ಶಿಕ್ಷೆ ಆಗಿದ್ದೇನೋ ನಿಜ ಆದರೆ ತುಂಬಾ ತಡವಾಯಿತಲ್ಲ ಅನ್ನೋ ಪ್ರಶ್ನೆಗೆ... ಅವರ ಉತ್ತರ ಹಾ ಸ್ವಲ್ಪ ತಡವಾಯಿತು ಎರಡು ವರ್ಷದೊಳಗಾಗಿದ್ದರೆ ಒಳ್ಳೇದಿತ್ತು... ನಿರ್ಭಾವುಕ ಉತ್ತರ...ಕೊನೆಯಲ್ಲಿ ಇಂದಿನ ಯುವಕರಿಗೆ ಏನು ಸಂದೇಶ ಕೊಡುತ್ತೀರಿ ಅಂದಿದ್ದಕ್ಕೆ ಅವರ ಉತ್ತರ ಸರಳ ಮತ್ತು ಸುಂದರವಾಗಿತ್ತು... ಎಚ್ಚರದಿಂದಿರಿ ... ಜಾಗರೂಕರಾಗಿರಿ... ತಪ್ಪು ಹಾದಿ ಹಿಡಿಯಬೇಡಿ... ಎಂಥಾ ಮಾತುಗಳು ತನ್ನ ಮಗನ ಸಾವಿಗಿಂತಲೂ ಭಾರತೀಯರ ಬಗ್ಗೆ ಅತಿಯಾದ ಕಳಕಳಿಕಂಡು ನನಗೆ ಮೈ ರೋಮಾಂಚನವಾದದ್ದಂತು ಹೌದು. ಮಾಧ್ಯಮದವರು ಇವರ ಭಾವನೆಗಳ ಜೊತೆ ಚೆಲ್ಲಾಟವಾಡಬೇಕೆಂದು ಬಯಸಿದ್ದರೂ ಆ ಸುಳಿಯಲ್ಲಿ ಅವರು ಸರಾಗವಾಗಿ ಈಜಿ ದಡ ಸೇರಿದ್ದರು. ಅವರೊಳಗಿನ ಅಪ್ಪಟ ಭಾರತೀಯನ ಪರಿಚಯ ನನಗಾಯಿತು... ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಅನ್ನೋದು ಎಷ್ಟು ನಿಜ ಅಲ್ವಾ.... ಇಂತಹಾ ಮಹಾನ್ ತಂದೆಗೆ ನನ್ನ ಹೃದಯಾಂತರಾಳದ ನಮನಗಳು.....

No comments:

Post a Comment