Thursday 22 October 2015

ಹಿಂದುತ್ವದ ಸರ್ಕಾರ ಮಾತ್ರ ಭಾರತವನ್ನ ವಿಶ್ವಗುರುವನ್ನಾಗಿಸಬಹುದು.


ತನ್ನ ಹಳೆಯ ವೈಭವವನ್ನ ಕಳೆದುಕೊಂಡಿರುವ ಭಾರತ ಮತ್ತೆ ತನ್ನದಾದ ವಿಶ್ವಗುರುವಿನ ಸ್ಥಾನವನ್ನ ಪಡೆಯಬೇಕು ಅನ್ನುವುದು ಒಬ್ಬ ಅಪ್ಪಟ ದೇಶಪ್ರೇಮಿಯ ಕನಸಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತ ವಿಶ್ವಗುರುವಾಗಿತ್ತು ಈಗ ಆಗಿಲ್ಲ ಅನ್ನುವುದರ ಕುರಿತಾಗಿ ಯೋಚಿಸುವಾಗ ನಾವು ಎರಡು ಅಂಶಗಳನ್ನ ಗಮನಿಸಬೇಕಾಗುತ್ತೆ.
೧. ಭಾರತ ಯಾವ ಕಾರಣದಿಂದಾಗಿ ತನ್ನ ವಿಶ್ವಗುರುವಿನ ಸ್ಥಾನವನ್ನ ಕಳೆದುಕೊಂಡಿತು...?
೨. ಅದನ್ನ ಮರಳಿ ಪಡೆಯಬೇಕು ಅನ್ನುವಲ್ಲಿ ನಾವು ಮಾಡಬೇಕಾಗಿರುವುದೇನು...?
ಮೊದಲನೆಯದರ ಕುರಿತು ಯೋಚಿಸೋಣ... ಭಾರತಕ್ಕೆ ಆ ಸ್ಥಾನ ಯಾಕೆ ತಪ್ಪಿತು...? ನನ್ನಾಭಿಪ್ರಾಯದಂತೆ ಭಾರತಕ್ಕೆ ಮೊದಲ ಹೊಡೆತ ಬಿದ್ದಿದ್ದು, ಆಕ್ರಮಣಕಾರಿಗಳಿಂದ... ಮತ್ತು ನಮಗೆ ಸಿಕ್ಕ ಗುಲಾಮತನದಿಂದ. ಈ ದಾಸ್ಯತನ ನಮ್ಮಿಂದ ಕಸಿದುಕೊಂಡದ್ದು ಬೇಕಾದಷ್ಟಿದೆ... ನೆತ್ತರ ಹೊಳೆಯನ್ನ ಹರಿಸಿ ನಾವೇನೋ ಸ್ವಾತಂತ್ರ್ಯ ಗಿಟ್ಟಿಸಿಕೊಂಡೆವು ಆದರೆ ಆದರೆ ಕುತಂತ್ರಿಗಳಾದ ಆಂಗ್ಲರು ನಮ್ಮ ಸಂಸ್ಕೃತಿಗೆ ಬಲು ದೊಡ್ಡ ಪೆಟ್ಟು ಕೊಟ್ಟರು. ನಮ್ಮ ಶಿಕ್ಷಣ ಪದ್ಧತಿ, ನಮ್ಮ ಆಚಾರ ವಿಚಾರಗಳೆಲ್ಲದರಲ್ಲೂ ಅಪನಂಬಿಕೆಯನ್ನ ಮೂಡಿಸಿ ನಮ್ಮ ನಮ್ಮೊಳಗೆ ದ್ವೇಷವನ್ನ ಬಿತ್ತಿ ಹೊರಟು ಹೋದರು. ಅದರಿಂದಾಗಿಯೇ ನಾವು ನಮ್ಮ ಜೀವನ ಧರ್ಮವನ್ನ ಮರೆತು ಬಿಟ್ಟೆವು... ನಮಗೆ ವಿಶ್ವಗುರು ಸ್ಥಾನ ಸಿಕ್ಕಿದ್ದೇ ನಮ್ಮದ್ದಾಗಿದ್ದ ಜೀವನ ಧರ್ಮದಿಂದಾಗಿ. ಇಲ್ಲಿನ ಮೂಲ ನಿವಾಸಿಗಳು ಅಳವಡಿಸಿಕೊಂಡಿದ್ದ ಜೀವನ ಧರ್ಮವೇ " ಹಿಂದುತ್ವ ".
ಬಹುಶ ಈಗ ಭಾರತದಲ್ಲಿ " ಹಿಂದುತ್ವ " ಅನ್ನುವ ಶಬ್ದ ಕೇಳಿದೊಡನೆ ಮೈಯೆಲ್ಲಾ ಪರಚುವ ಜನಗಳು ಸಿಗುತ್ತಾರೆ. ಹೇಳಿದವನಿಗೆ ಕೋಮುವಾದಿಯ ಕಿರೀಟ ತೊಡಿಸೋಕೆ ಬರೋರು ಬೇಕಾದಷ್ಟು ಜನರಿದ್ದಾರೆ. ಆದರೆ ಅವರ ಬಳಿ ಹಿಂದುತ್ವ ಅಂದರೇನು...? ಅಂತ ಕೇಳಿದರೆ ಸರಿಯಾದ ಉತ್ತರವೇ ಇರೋದಿಲ್ಲ... ಆಂಗ್ಲರು ಅನುವಾದಿಸಿದ ಶಬ್ದಾರ್ಥವನ್ನೇ ಹಿಡಿದು ನೇತಾಡುತ್ತಾರೆ. ಹಿಂದುತ್ವ ಅಂದರೆ ಇನ್ನುಳಿದ ಮತಗಳವರನ್ನ ದಮನಿಸೋದು ಅಂತಾನೂ ಹೇಳುವ ಜನರಿದ್ದಾರೆ.. ಅದರ ವಾಸ್ತವಿಕ ಅರ್ಥದ ಬಗ್ಗೆ ತಲೆಕೆಡಿಸಿಕೊಳ್ಳೋದೇ ಇಲ್ಲ.
ಮೊದಲು ನಾವು ತಿಳಿದುಕೊಳ್ಳಬೇಕಾಗಿರುವುದೇ ಹಿಂದುತ್ವ ಅಂದರೇನು ? ಅನ್ನುವುದನ್ನು. ಹಿಂದುತ್ವ ಅಂದರೆ ಅದು ಹಿಂದೂಗಳು ಅಥವಾ ವೈದಿಕ ಧರ್ಮದವರು ಆಚರಿಸುವಂಥಾ ಆಚರಣೆಗಳು ಅನ್ನೋದು ಅವರ ಅನಿಸಿಕೆ. ವಾಸ್ತವ ಅದಲ್ಲ ಹಿಂದುತ್ವ ಅಂದರೆ ಒಂದು ಶ್ರೇಷ್ಠ ಜೀವನ ಧರ್ಮ. ಅದು ಮತವಲ್ಲ... ಈಗ ಸತ್ಯವನ್ನೇ ಹೇಳಬೇಕು ಅನ್ನೋದು ಜೀವನ ಧರ್ಮವಾಗುತ್ತೆಯೇ ಹೊರತು ಒಂದು ಮತದ ಸ್ವತ್ತಲ್ಲ... ಅಲ್ವಾ.. ಹಾಗೆಯೇ.. ಯಾವ ರೀತಿ ನ್ಯಾಯಯುತವಾಗಿ ಸೌಹಾರ್ದಯುತವಾಗಿ ನಾವು ಬಾಳಬೇಕು... ಅನ್ನೋದನ್ನ ಹಿರಿಯರಿಂದ ನಾವು ಕಲಿತಿರುವಂಥಾದ್ದೇ ಈ ಹಿಂದುತ್ವ.
ಇದರ ಹಿಂದೆ ಸನಾತನ ಧರ್ಮದ ಹಲವು ಋಷಿಗಳ ತಪಸ್ಸಿದೆ. ಆದರೆ ಇದು ಮಾನವರಿಗಾಗಿಯೇ ಹೊರತು ಒಂದು ಮತದವರಿಗಾಗಿ ಅಲ್ಲ. ಬೆಳಗಾತ ಬೇಗ ಏಳಬೇಕು ಅನ್ನೋ ನಿಯಮ ನಮ್ಮ ಅರೋಗ್ಯದ ದೃಷ್ಟಿಯಿಂದ ಬಹಳ ಹಿತಕಾರಿ... ರಾತ್ರಿ ಬೇಗ ಮಲಗಿ ಬೇಗ ಏಳೋದು ಆರೋಗ್ಯಕ್ಕೆ ಉತ್ತಮ ಅನ್ನೋದು ಈಗಿನ ವಿಜ್ಞಾನದ ಅಭಿಮತವೂ ಕೂಡ ಆಗಿದೆ ತಾನೆ. ಆದರೆ ನಾವೇನೀಗ ರಾತ್ರಿ ತಡವಾಗಿ ಮಲಗಿ ಬೆಳಗ್ಗೆಯೂ ತಡವಾಗಿ ಏಳುತ್ತೇವೋ ಇದು ನಮ್ಮ ಜೀವನ ಶೈಲಿ ಅಲ್ಲ. ಹಿಂದುತ್ವ ಇದಲ್ಲ. ಹಾಗಾಗಿ ಪಾಶ್ಚಿಮಾತ್ಯರ ಜೀವನ ಧರ್ಮವನ್ನ ಅನುಸರಿಸುವವರಿಗೆ ರೋಗ ಕಟ್ಟಿಟ್ಟ ಬುತ್ತಿ.
ಉದಾಹರಣೆಯಾಗಿ ಕೆಲವೊಂದು ಅಂಶಗಳನ್ನ ನೋಡೋಣ... ಅತಿಥಿ ದೇವೋಭವ... ಇದು ಹಿಂದುತ್ವದ ಒಂದು ಭಾಗ. ಅತಿಥಿಗಳನ್ನ ದೇವರಂತೆ ನೋಡಿಕೊಳ್ಳೀ ಅಂತ ಈಗ ಇದು ಬರಿಯ ಹಿಂದೂಗಳಿಗಷ್ಟೇ ಸೀಮಿತವಲ್ಲ... ಮುಸ್ಲಿಮರು ಕ್ರಿಶ್ಚಿಯನ್ನರು ಅತಿಥಿಗಳನ್ನ ದೇವರಂತೆ ಸತ್ಕರಿಸುತ್ತಾರಲ್ಲ.... ಹಾಗಿದ್ದರೆ ಅತಿಥಿಗಳನ್ನ ಯಾರೆಲ್ಲ ದೇವರಂತೆ ಸತ್ಕರಿಸುತ್ತರೋ ಅವರೆಲ್ಲಾ ಹಿಂದೂಗಳಾದರೆ...? ಇಲ್ಲವಲ್ಲ. ಪ್ರಕೃತಿಯನ್ನ ಪ್ರೀತಿಸೋದು ಹಿಂದುತ್ವದ ಭಾಗ ನಮ್ಮಲ್ಲಿ ಕೃಷಿಯನ್ನೇ ನಂಬಿದ ಬೇಕಾದಷ್ಟು ಕುಟುಂಬಗಳಿವೆ. ಈ ಕೃಷಿಕರೆಲ್ಲಾ " ತೆನೆ ಹಬ್ಬ " ಅಂತ ಆಚರಿಸುತ್ತಾರೆ. ಮೂಲ ಕ್ರಿಶ್ಚಿಯನ್ ಧರ್ಮದಲ್ಲಿ ತೆನೆಯನ್ನ ಪೂಜಿಸೋ ಆಚರಣೆಗಳಿಲ್ಲದಿದ್ದರೂ ಇಲ್ಲಿ ಅನೇಕ ಕ್ರಿಶ್ಚಿಯನ್ ಕುಟುಂಬಗಳು ಇದನ್ನ ಆಚರಿಸುತ್ತದೆ. ಯಾಕೆ ಚರ್ಚುಗಳಲ್ಲೇ ಅದರ ಆಚರಣೆ ವಿಜೃಂಭಣೆಯಿಂದ ಆಗುತ್ತದೆ. ಇದು ಹೇಗೆ ಸಾಧ್ಯ....? ಯಾಕೆಂದರೆ ಈ ಆಚರಣೆಗಳು ನಮ್ಮ ಪ್ರಕೃತಿಯ ಪ್ರೇಮವನ್ನ ತೋರಿಸುತ್ತದೆಯೇ ಹೊರತು ಯಾವುದೇ ಮತದ ಆಚರಣೆಯಾಗಿ ಕಾಣಿಸೋಲ್ಲ. ಅದೇ ರೀತಿ ಭಾರತದಲ್ಲಿ ಇಂಥಾ ಅನೇಕ ಆಚರಣೆಗಳು ಅಥವಾ ನಿಯಮಗಳಿವೆ ಇವೆಲ್ಲವೂ ಮತ ಆಧಾರಿತವಾಗಿಲ್ಲ. ಇದನ್ನೇ ನಾನು ಹಿಂದುತ್ವ ಅನ್ನೋದು
ಅದೊಂದು ಜೀವನ ಶೈಲಿ. ಪ್ರತಿಯೊಂದು ಜೀವಿಯನ್ನೂ ಪ್ರೀತಿಸು. ಎಲ್ಲರನ್ನೂ ಗೌರವಿಸು, ನಿನ್ನ ಸಂಸ್ಕೃತಿಯನ್ನ ಅನುಸರಿಸು ಅನ್ನೋದು. ವಿಶ್ವವೇ ಒಂದು ಕುಟುಂಬ ಎನ್ನುವ ಅದ್ಭುತ ಯೋಚನೆ ಹೊಳೆದಿದ್ದು ಇಲ್ಲಿನ ಸನಾತನ ಧರ್ಮೀಯರಿಗೆ... ಅದನ್ನ ಪಾಲಿಸಿದ ಕೀರ್ತಿಯೂ ಅವರಿಗಿದೆ. ಅದಕ್ಕೆ ಉದಾಹರಣೆಯಾಗಿಯೇ ಇಂದು ಭಾರತ ಸರ್ವಧರ್ಮಗಳನ್ನ ಕಾಣಲು ಸಾಧ್ಯವಾಗಿದ್ದು. ಯಾವ ಮತವೇ ಆಗಲಿ ಭಾರತದ ಆಶ್ರಯವನ್ನ ಕೇಳಿದಾಗ ಭಾರತ ಅವರೆಲ್ಲರಿಗೂ ಆಶ್ರಯ ಕೊಟ್ಟಿದೆ ಕಾರಣ... ಇಲ್ಲಿನ ಮೂಲ ನಿವಾಸಿಗಳ ಜೀವನ ಧರ್ಮ... ಅದುವೇ ಹಿಂದುತ್ವ...
ಬ್ರಿಟಿಷರು ಸ್ವಾತಂತ್ರ್ಯವನ್ನ ಬಿಟ್ಟು ಕೊಡುವಾಗ ನಮ್ಮವರಲ್ಲಿ ಅವರದ್ದಾಗಿರೋ ವ್ಯಾಪಾರಿ ಮನೋಭಾವನೆಯನ್ನ ತುಂಬಿ ಬಿಟ್ಟರು. ಅಲ್ಲಿಂದ ನಾವು ನಮ್ಮದಾದ ಅಧ್ಯಾತ್ಮಿಕ ಜ್ಞಾನದ ಹಾದಿಯನ್ನ ಬಿಟ್ಟು ಅವರ ದಾರಿಯಲ್ಲೇ ಸಾಗುತ್ತಿದ್ದೇವೆ. ಅದೇ ಇಂದು ನಮ್ಮನ್ನ ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಈ ವ್ಯಾಪಾರಿ ಭಾವನೆಯಿಂದಲೇ ನಮ್ಮಲ್ಲಿ " ನನಗೇನು ಲಾಭ...? " ಅನ್ನೋ ಚಿಂತನೆ ಬೆಳೆದಿದ್ದು. ಯಾವಾಗ ನಾನು ನನ್ನದೆನುವ ಮೋಹದಲ್ಲೇ ಇರುತ್ತೇವೋ ಆವಾಗ ಈ ಹಣದ ರುಚಿ ನಮ್ಮಿಂದ ಮಾಡಬಾರದನ್ನೆಲ್ಲಾ ಮಾಡಿಸುತ್ತೆ. ಅದರಿಂದಾಗಿಯೇ ಇಂದು ಭಾರತಕ್ಕೆ ಈ ಪರಿಸ್ಥಿತಿ.
ಈಗ ಮೊದಲು ಹೇಳಿದ ಕಾರಣದಲ್ಲಿನ ಎರಡನೆಯ ಭಾಗವನ್ನ ಎತ್ತಿಕೊಳ್ಳೋಣ.... ಭಾರತವನ್ನ ಹೇಗೆ ಮತ್ತೆ ವಿಶ್ವಗುರುವನಾಗಿಸೋದು...? ಮತ್ತದೇ ಹಿಂದುತ್ವ.... ಯಾವ ಹಿಂದುತ್ವವನ್ನ ನಾವು ಕಳೆದು ವ್ಯಾಪಾರಿ ಮನೋಭಾವನೆಯನ್ನ ಬೆಳೆಸಿಕೊಂಡಿದ್ದೇವೋ ಆ ವ್ಯಾಪಾರಿ ಮನೋಭಾವನೆಯನ್ನ ಕಿತ್ತೆಸೆದು ಹಿಂದುತ್ವದ ಮನೋಭಾವನೇಯನ್ನ ಮತ್ತೆ ಬೆಳೆಸಿಕೊಳ್ಳಬೇಕು.
ಈ ಕಾರಣಕ್ಕಾಗೇ ಈ ಲೇಖನಕ್ಕೆ ಶೀರ್ಷಿಕೆ ಕೊಟ್ಟಿದ್ದು... ಹಿಂದುತ್ವದ ಸರಕಾರದಿಂದ ಮಾತ್ರ ಭಾರತವನ್ನ ವಿಶ್ವಗುರುವನ್ನಾಗಿಸಲು ಸಾಧ್ಯ ಅಂತ. ಸರಕಾರಕ್ಕೂ ಹಿಂದುತ್ವಕ್ಕೂ ಏನು ಸಂಬಂಧ...? ಬಹಳ ಸರಳ.... ಇಡಿಯ ದೇಶದಲ್ಲಿ ಹಿಂದುತ್ವದ ಭಾವನೆ ಮೂಡಿಸುವಲ್ಲಿ ಸರಕಾರದ ಪಾತ್ರ ಪ್ರಾಮುಖ್ಯವಾದದ್ದು... ಅದರ ಜೊತೆಗೆ ಇಡಿಯ ದೇಶವನ್ನ ಪ್ರಗತಿಯತ್ತ ಕೂಡ ಕೊಂಡೊಯ್ಯಬೇಕು... ಪ್ರಗತಿಯತ್ತ ಸಾಗಬೇಕಾದರೆ ನಾವು ಕೈಗೊಳ್ಳೋ ಯೋಜನೆಗಳು ಇಡಿಯ ದೇಶದ ಹಿತದಲ್ಲಿರಬೇಕೇ ಹೊರತು ಯಾವುದೋ ಒಂದು ಸಮುದಾಯದ ಹಿತದಲ್ಲಿರಬಾರದು.. ಹಿಂದುತ್ವದ ಬಹು ದೊಡ್ಡ ನಿಯಮ ದೇಶ ಮೊದಲು... ರಾಷ್ಟ್ರಹಿತವೇ ಪ್ರಾಮುಖ್ಯ ಅಂತ. ಯಾವಾಗ ಸಮುದಾಯದ ಹಿತದೃಷ್ಟಿಯಿಂದ ಯೋಜನೆಗಳು ರೂಪುಗೊಳ್ಳುತ್ತಿರುತ್ತದೋ ಅಲ್ಲಿಯವರೆಗೆ ಆಯಾಯಾ ಸಮುದಾಯಗಳಷ್ಟೇ ಮುಂದುವರಿಯುತ್ತೆ ಆದರೆ ದೇಶ ಮುಂದುವರಿಯೋಲ್ಲ... ಸರ್ವ ಸಮಾನತೆ ಹಿಂದುತ್ವದ ಲಕ್ಷಣ. ಶಿಷ್ಟರ ರಕ್ಷಣೆ ಎಷ್ಟು ಪ್ರಾಮುಖ್ಯವೋ... ದುಷ್ಟ ಶಿಕ್ಷಣ ಕೂಡ ಅಷ್ಟೇ ಮುಖ್ಯ... ಶಾಂತಿ ನಮ್ಮ ಮೊದಲ ಪ್ರಾಶಸ್ತ್ಯವಾಗಬೇಕು, ಆದರೆ ಆ ಶಾಂತಿ ಸಹನೆ ನಮ್ಮ ಹೇಡಿತನದ ಮುಖವಾಡವಾಗಬಾರದು. ದೇಶ ಸುರಕ್ಷಿತ ಅಂತಂದರೆ ನಾವು ಸುರಕ್ಷಿತ ಅಂತ ತಾನೇ.. ದೇಶ ಬೆಳೆಯಿತು ಅಂತಂದರೆ ನಾವೂ ಬೆಳೆದಂತೆ ತಾನೇ...
ಈಗಿನ ರಾಜಕೀಯದ ಯೋಜನೆಗಳೆಲ್ಲಾ ಪಕ್ಷ ಅಥವಾ ವ್ಯಕ್ತಿಯ ಲಾಭದ ಯೋಜನೆಗಳು... ಯಾವ ಸಮುದಾಯಕ್ಕೆ ಕೊಡುಗೆ ಕೊಟ್ಟರೆ ಅದು ನಮಗೆ ಮತವಾಗಿ ಪರಿವರ್ತನೆಯಾಗಬಹುದು.... ಅದರಿಂದ ನನಗೇನು ಲಾಭವಾಗಬಹುದೆನ್ನುವ ವ್ಯಾಪಾರಿ ಮನೋಭಾವನೆ. ಇದು ಎಲ್ಲಿಯವರೆಗೂ ಬೆಳೆದಿದೆ ಅಂದರೆ ಭಯೋತ್ಪಾದನೆಯನ್ನೂ ಸಹಿಸಿಕೊಳ್ಳುವಂತೆ ಮಾಡಿಬಿಟ್ಟಿದೆ. ನಮ್ಮ ಸೈನಿಕರ ರುಂಡ ಚೆಂಡಾಡಿದರೂ ಸುಮ್ಮನಿರುವಂತೆ ಮಾಡುವ ಶಂಡತನ ತಂದು ಕೊಟ್ಟಿದೆ. ಹಾಗಾಗಿ ಇದೆಲ್ಲವೂ ನಿಲ್ಲಬೇಕಾದರೆ ನಮ್ಮ ಮುಂದಿರುವುದೊಂದೇ ಮಾರ್ಗ ಹಿಂದುತ್ವದ ಸರ್ಕಾರ.
ಇದೇ ಹಿಂದುತ್ವದ ಸರ್ಕಾರದ ಕನಸನ್ನ ಕಾಣುತ್ತಿರೋ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಮತ್ತದರ ಮಿತ್ರ ಪಕ್ಷಗಳಿಂದ ಇದು ಸಾಧ್ಯ ಅನ್ನೋ ಭರವಸೆಯೊಂದಿದೆ. ಕಾರಣ ನಾನು ಕೊಡಬಲ್ಲೆ ಅವರು ಗುಜರಾತಿನಲ್ಲಿ ಇಪ್ಪತ್ತನಾಲ್ಕು ಘಂಟೆ ವಿಧ್ಯುತ್ ಕೊಡುತ್ತಿದ್ದಾರಲ್ಲ ಅದು ಇಡಿಯ ಗುಜರಾತಿಗೆಯೇ ಹೊರತು ಬರಿಯ ಹಿಂದೂಗಳಿರೋ ಕಾಲನಿಗಳಿಗೆ ಮಾತ್ರವಲ್ಲ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿದೆ. ನರ್ಮದಾ ನದಿಯ ನೀರು ಪ್ರತಿಯೊಬ್ಬರಿಗೂ ಸಿಗುತ್ತಿದೆಯೇ ಹೊರತು ಯಾವುದೋ ಒಂದು ಸಮುದಾಯಕ್ಕೆ ಮೀಸಲಾಗಿಲ್ಲ. ಇಂತಹಾ ಯೋಜನೆಗಳೇ ಬರಬೇಕು ಹೊರತು ಓಲೈಕೆಯ ಯೋಜನೆ ಈ ದೇಶದ ಸಮಗ್ರತೆಗೆ ಮಾರಕ. ಅದು ನಮ್ಮ ನಮ್ಮಲ್ಲಿ ಬಿರುಕನ್ನುಂಟು ಮಾಡಿಸುತ್ತದೆ. ಅದೇ ಬಿರುಕು ಮುಂದೆ ದೇಶಕ್ಕೆ ಹಾನಿಯುಂಟು ಮಾಡುತ್ತದೆ. ದೇಶದ ವಿರುದ್ಧ ಪಿತೂರಿ ಮಾಡುವವರ್ಯಾರೇ ಆಗಲಿ ಅವರ ಮತವನ್ನ ನೋಡದೆ ಶಿಕ್ಷಿಸುವ ಎದೆಗಾರಿಕೆ ಒಬ್ಬ ಹಿಂದುತ್ವದ ಅನುಯಾಯಿಯಲ್ಲಿ ಮಾತ್ರ ಕಾಣಲು ಸಾಧ್ಯ. ಯಾವಾಗ ನಾವು ನಮ್ಮ ದೇಶದ ಹಿತದಲ್ಲೇ ನಮ್ಮ ನಿರ್ಣಯಗಳನ್ನ ಕೈಗೊಳ್ಳುತ್ತೇವೋ ಆವಾಗಲೇ ಈ ದೇಶ ಉತ್ತುಂಗದ ಸ್ಥಿತಿಗೇರುತ್ತದೆ ಮತ್ತು ವಿಶ್ವಗುರುವಾಗಲು ಅರ್ಹತೆಯನ್ನ ಪಡೆಯುತ್ತದೆ ಯಾಕೆಂದರೆ ಇದು ದೇವರ ನಾಡು ಇಲ್ಲಿ ನೈಸರ್ಗಿಕ ಸಂಪತ್ತಿಗೇನೂ ಕೊರತೆಯಿಲ್ಲ ಆದರೆ ಅದನ್ನ ದೇಶದ ಹಿತಕ್ಕಾಗಿ ಬಳಸಿಕೊಳ್ಳುವ ಮನಸ್ಸು ಬೇಕು.
ಹಾಗಾಗಿ ಮಿತ್ರರೇ ಹಿಂದುತ್ವದ ನಿಜವಾದ ಅರ್ಥವನ್ನ ತಿಳಿದುಕೊಳ್ಳೋಣ... ಈ ಬಾರಿ ಹಿಂದುತ್ವದ ಸರ್ಕಾರವನ್ನ ಕೇಂದ್ರದಲ್ಲಿ ಸ್ಥಾಪನೆ ಮಾಡೋಣ... ನರೇಂದ್ರ ಮೋದಿಗೆ ನಮ್ಮ ಅಮೂಲ್ಯವಾದ ಮತವನ್ನ ಕೊಡೋಣ... ಅನ್ನೋದು ನನ್ನ ಪ್ರಾರ್ಥನೆ. ಜಾತಿ ಮತಗಳನ್ನ ಬದಿಗಿಟ್ಟು ಭಾರತದ ಭವ್ಯ ಭವಿಷ್ಯತ್ತಿಗಾಗಿ ಮತ ನೀಡೋಣ
ಭಾರತ್ ಮಾತಾ ಕೀ ಜೈ

No comments:

Post a Comment