Saturday 31 October 2015

ಸ್ವಾತಂತ್ರ್ಯ ಮಾತ್ರ ಸಾಕೇ... ??



ಅರವತ್ತೈದು ವರ್ಷದ ಹಿಂದೆ ಭಾರತ ಆಂಗ್ಲರ ಕಪಿಮುಷ್ಟಿಯಿಂದ ಸ್ವತಂತ್ರವಾಯಿತು...ಅಹಿಂಸೆಯಿಂದಲೇ ನಾವು ಸ್ವಾತಂತ್ರ್ಯ ಪಡೆದೆವು ಅನ್ನುವುದು ನಮ್ಮ ಹೇಳಿಕೆಯಾದರೂ ನಮ್ಮ ಅಹಿಂಸಾತ್ಮಕ ನಿಲುವಿಗೆ ಸಿಕ್ಕ ಜಯ ಇದು ಅಂತ ಖಡಾಖಂಡಿತವಾಗಿ ಹೇಳುವಂತಿಲ್ಲ ಕ್ರಾಂತಿಕಾರಿ ಚಟುವಟಿಕೆಯಿಂದಾದ ಹಾನಿ... ಸುಭಾಶ್ ಚಂದ್ರ ಬೋಸರ ಸೈನ್ಯದ ಸಣ್ಣ ಜಯ ... ನಾವಿಕ ಪಡೆಯಲ್ಲಿ ಸುಳಿದಾಡಿದ ಬಂಡಾಯದ ಹೊಗೆ ಇವೆಲ್ಲವನ್ನೂ ಮನಗಂಡ ಬ್ರಿಟಿಷರು ಒಳಗೊಳಗೇ ಹೆದರಿ ಹೋದದ್ದು ನಮ್ಮ ಸ್ವಾತಂತ್ರ್ಯಕ್ಕೆ ನಾಂದಿ ಅಂದರೂ ಅದು ತಪ್ಪಾಗಲಿಕ್ಕಿಲ್ಲ.. ಹೀಗೆ ಸ್ವಾತಂತ್ರ್ಯ ಸಿಕ್ಕಾಗ ಆಗಿನ ಭಾರತೀಯರ ಆನಂದಕ್ಕೆ ಪಾರವೇ ಇರಲಿಲ್ಲ.. ಯಾಕೆಂದರೆ ತಮ್ಮ ಮನೆ ಮಠ ಇವೆಲ್ಲವನ್ನೂ ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡವರು ಅದೆಷ್ಟೋ...ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಅರ್ಪಿಸಿದವರೂ ಹಲವರು... ಇಂತಹಾ ಬಲಿದಾನ ಹೋರಾಟ ಇನ್ನು ಬೇಕಾಗಿಲ್ಲವಲ್ಲ ಅನ್ನೋ ಸಂತಸ ಒಂಡೆಡೆಯಾದರೆ ಇನ್ನು ನಮ್ಮದೇ ಆಡಳಿತ.. ಪ್ರಜೆಗಳೇ ಪ್ರಭುಗಳು... ಇನ್ನು ಮುಂದೆ ಸುಖಕರ ಜೀವನ ನಮ್ಮದು ಅನ್ನೋ ಕಲ್ಪನೆ ಸಂತಸದಲ್ಲಿ ತೇಲಾಡಿರಬಹುದು.(ಹೋರಾಟಗಳು ಮುಗಿದವು ಅನ್ನೋದು ಮಾತ್ರ ಸುಳ್ಳಾಗಿ ಹೋಯಿತು.ಇಂದಿಗೂ ಹೋರಾಟ ಮುಂದುವರಿದಿದೆ..ಧನಪಿಪಾಸು ರಾಜಕಾರಣಿಗಳೆನುವ ಆಂಗ್ಲರ ವಿರುದ್ಧ ಹೋರಾಟ ಸಾಗುತ್ತಾ ಇದೆ ಇನ್ನು ಅದೆಷ್ಟು ವರ್ಷಗಳವರೆಗೆ ಸಾಗಲಿಕ್ಕಿದೆಯೋ..?) 65 ವರ್ಷಗಳಾಗಿವೆ ಈಗಿನ ಪರಿಸ್ತಿತಿಯನ್ನು ಒಮ್ಮೆ ಅವಲೋಕಿಸಿದರೆ ಆವತ್ತಿನ ಸಂತಸ ಈಗ ನಮ್ಮಲ್ಲಿದೆಯಾ...? ಸ್ವತಂತ್ರರು ಅನ್ನೋ ಭಾವನೆ ನಮ್ಮಿಂದ ಏನೆಲ್ಲಾ ಮಾಡಿಸುತ್ತಿದೆ. ಆಗಸ್ಟ್ 15 ಒಂದು ಸರ್ಕಾರಿ ರಜಾ ದಿನವಾಗಿದೆಯೇ ಹೊರತು ಸ್ವಾತಂತ್ರ್ಯಕ್ಕಾಗಿ ದುಡಿದು ಹೋರಾಡಿ ಮಡಿದವರ ಸ್ಮರಣೆ ..ದೇಶ ಭಕ್ತಿಯ ಮಾರ್ಗದ ಅನುಕರಣೆ ಆಗುತ್ತಿಲ್ಲ..ಒಂದು ರೀತಿಯಲ್ಲಿ ಹೇಳೋದಾದರೆ ನಾವೆಲ್ಲ ಕೃತಘ್ನರು... ಸ್ವಾತಂತ್ರ್ಯದ ಅಮೂಲ್ಯ ಉಡುಗೊರೆ ಕೊಟ್ಟವರನ್ನು ಮರೆತು ಬಿಡುತ್ತಿದ್ದೇವೆ... ಬೇಗ ಬೇಗನೆ ಧ್ವಜ ಹಾರಿಸೋದು... ಸಿಹಿ ತಿಂಡಿ ವಿತರಿಸೋದು.. ಮನೆಗೆ ಹೋಗಿ ರಜೆಯ ಆನಂದವನು ಅನುಭವಿಸುವಲ್ಲಿ ಆತುರರಾಗೋದು.. (ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸೋದು ಬಹಳಾನೆ ಅಪರೂಪ...ಎಂತಹಾ ದುರಾದೃಷ್ಟ ಅಲ್ವಾ...) ಇವೆಷ್ಟೇ ನಮ್ಮ ಸ್ವಾತಂತ್ರ್ಯ ದಿನದ ವೇಳಾಪಟ್ಟಿ... ಇನ್ನು ಕೆಲವರು ಕದ್ದು ಕುಡಿದು (ಮದ್ಯದಂಗಡಿ ಬಂದ್ ಆಗಿರೋ ಕಾರಣ) ಅದರ ಮೂಲಕ ಸ್ವಾತಂತ್ರ್ಯದ ಆಚರಣೆಗೆ ತೊಡಗುತ್ತಾರೆ.. ಬಹುಶಃ ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಮ್ಮ ದೇಶಕ್ಕಾಗಿ ಮಡಿದವರೆಲ್ಲರ ಹೊಟ್ಟೆ ಚುರುಕ್ ಅಂದೀತು .. ಇಂತಹಾ ಭಾರತಕ್ಕಾಗಿ ನಾವು ನಮ್ಮ ಪ್ರಾಣವನ್ನೇ ಕೊಟ್ಟೆವಾ..ಎಂದು ಮನಸ್ಸಲ್ಲೇ ನೊಂದುಕೊಂಡಾರು... ನಮ್ಮ ಬಟ್ಟೆ , ನಮ್ಮ ಉಪ್ಪು... ನಮ್ಮ ಸಂಸ್ಕೃತಿ ಬೇಕು... ನಿಮ್ಮದಾವುದೂ ನಮಗೆ ಬೇಡ.. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಅಂತೆಲ್ಲ ಹೋರಾಡಿದವರಿಗೆ ಇಂದು ಕಾಣಿಸುವುದು ಆಂಗ್ಲರ ಇಲ್ಲವೇ ಪಾಶ್ಚಿಮಾತ್ಯರ ಸಂಸ್ಕ್ರತಿ...ನಮ್ಮ ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದಾರೆ ...ನಮಗೆ ನಮ್ಮ ಸಂಸ್ಕೃತಿಯ ರೀತಿಯಲ್ಲಿ ಬದುಕಲು ಬಿಡುತ್ತಿಲ್ಲ ಅನ್ನೋದಕ್ಕೆ ತಾನೆ ನಮ್ಮ ಹಿರಿಯರು ಸ್ವಾತಂತ್ರ್ಯದ ಹೋರಾಟ ನಡೆಸಿದ್ದು...ತಮ್ಮ ರಕ್ತವನ್ನು ಬೆವರಿನಂತೆ ಹರಿಸಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟದ್ದು...ಆ ದೃಷ್ಟಿಯಲ್ಲಿ ನೋಡುವಾಗ ನಾವು ಎಲ್ಲೋ ಸ್ವಾತಂತ್ರ್ಯದ ಸೀಮಿತ ಪರಿಧಿಯನ್ನು ದಾಟಿ ಮುಂದುವರಿದಿದ್ದೇವೆ ಅಂತ ಅನ್ನಿಸೋದಿಲ್ಲವಾ..ನಿಜಕ್ಕೂ ನಮಗೇನು ಹಕ್ಕಿದೆ ಯಾರೋ ದುಡಿದು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸೋಕೆ...ಅವರಂತೆ ದೇಶಕ್ಕಾಗಿ ಹೋರಾಡಿ ಪ್ರಾಣ ತೆರುವಂತಾ ದೇಶಪ್ರೇಮದ ಪ್ರದರ್ಶನ ಮಾಡುವುದು ಬೇಡ ..ಕಡೇ ಪಕ್ಷ ಅವರು ನೆನೆಸಿಕೊಂಡ ಅವರ ಕನಸಿನ ಭಾರತದ ಕಲ್ಪನೆಯನ್ನು ಸಾಕಾರಗೊಳಿಸೋದು ನಮ್ಮ ಕರ್ತವ್ಯ ಅಲ್ವಾ...ಸಾಂವಿಧಾನಾತ್ಮಕ ಸ್ವಾತಂತ್ರ್ಯ ಇದೆ... ನಾವು ಏನು ಬೇಕಾದರೂ ಮಾಡಬಹುದು ಅನ್ನೋ ನಾವು... ಸ್ವಾತಂತ್ರ್ಯ ಕೊಟ್ಟ ದೇಶದ ಪ್ರತಿ ನಮಗೆ ಕೆಲವು ಕರ್ತವ್ಯಗಳೂ ಕೂಡ ಇದೆ ಅನ್ನೋದನ್ನು ಯಾಕೆ ಮರೆಯುತ್ತಿದ್ದೇವೆ...?? 65 ವರ್ಷಗಳಾದ ಮೇಲಾದರೂ ಸ್ವಾತಂತ್ರ್ಯಕ್ಕೆ ಮಾತ್ರ ಗಮನ ಹರಿಸದೇ ನಮ್ಮ ಕರ್ತವ್ಯದ ಕಡೆಗೂ ಗಮನ ಹರಿಸಬೇಕಲ್ವಾ... ಬೇರೇನೂ ಬೇಡ " ನನಗೆಷ್ಟೇ ಕಷ್ಟವಾದರೂ ಪರವಾಗಿಲ್ಲ.. ನನ್ನ ದೇಶದ ಮಾನ, ಗೌರವ, ಘನತೆ, ಸಂಸ್ಕೃತಿ ಮತ್ತು ಭದ್ರತೆಗೆ ಅಪಾಯವಾಗುವಂತಾ ಯಾವುದೇ ಕೆಲಸ ಮಾಡಬಾರದು " ಅನ್ನೋ ಕರ್ತವ್ಯ ಪ್ರಜ್ನೆ ಸಾಕು. ಪ್ರತಿಯೊಬ್ಬ ಭಾರತೀಯನೂ ಈ ಕರ್ತವ್ಯದ ಪಾಲನೆ ಮಾಡಿದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗೋದರಲ್ಲಿ ಯಾವ ಅನುಮಾನವೂ ಇಲ್ಲ ... ಬನ್ನಿ ಈ ಬಾರಿಯಾದರೂ ನಮ್ಮ ಕರ್ತವ್ಯ ಪಾಲನೆಯತ್ತ ಗಮನ ಹರಿಸೋಣ
ಸಮಸ್ತ ಭಾರತೀಯರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು

No comments:

Post a Comment