Saturday 31 October 2015

ವಾತ್ಯಲ್ಯದ ವ್ಯಾಪಾರ ಸಾಧ್ಯಾನಾ...?



ಇವತ್ತು ನ್ಯೂಸ್ ಚಾನಲ್ ಒಂದರಲ್ಲಿ ನೋಡ್ತಾ ಇದ್ದೆ ಬೇಬಿ ಸ್ಕೂಲ್ ಮತ್ತು ಪ್ಲೇ ಸ್ಕೂಲ್ ಗಳಲ್ಲಿ ಪುಟ್ಟ ಮಕ್ಕಳನ್ನ ಮಲಗಿಸೋಕೆ ಅಂತ ಅವರ ಆಹಾರದಲ್ಲಿ ನಿದ್ದೆ ಮಾತ್ರೆಯನ್ನ ಹುಡಿ ಮಾಡಿ ಹಾಕಿ ಮಕ್ಕಳಿಗೆ ಕೊಡ್ತಾರಂತೆ.... ಆ ಕ್ಷಣಕ್ಕೆ ನನ್ನ ಮನಸ್ಸಿಗಾದ ಆಘಾತ ಅಷ್ಟಿಷ್ಟಲ್ಲ... ಮನಸ್ಸಿನಲ್ಲಿ ಹಲವಾರು ವಿಚಾರಗಳು ತಿರುಗಾಡತೊಡಗಿತು... ಅದನ್ನೇ ಹೇಳ ಹೊರಟದ್ದು... ಬಹುಶ ಹಲವರ ಪಾಲಿಗೆ ನಾನು ತಪ್ಪು, ಅಂತ ಅನಿಸಬಹುದು, ಇರಲಿ ಬಿಡಿ ಆದರೆ ನಾನು ಹೇಳ ಹೊರಟಿರುವುದು ನನಗನಿಸಿದ ತೀರಾ ವೈಯಕ್ತಿಕ ಅಭಿಪ್ರಾಯ. ಅವರವರಿಗೆ ಅವರ ಚಿಂತನೆಯೇ ಸರಿ ನಾನು ಅದನ್ನ ಒಪ್ಪಿಕೊಳ್ಳುತ್ತೇನೆ ಆದರೂ ಹೇಳೋಣ ಅಂತನಿಸಿದ್ದನ್ನ ಬರೆದಿದ್ದೇನೆ...
ನನ್ನ ಪ್ರಕಾರ ಒಬ್ಬ ತಾಯಿ ಮತ್ತು ಮಗುವಿನ ಸಂಬಂಧ ಅಥವಾ ತಂದೆ ಮಗುವಿನ ಸಂಬಂಧಕ್ಕೆ ಪರ್ಯಾಯ ವ್ಯವಸ್ಥೆ ಅಂತ ಮಾಡೋಕೆ ಸಾಧ್ಯವೇ ಇಲ್ಲ... ಯಾವುದೇ ತಾಯಿ ತಂದೆ ಆಗಲಿ ತಮ್ಮ ಮಕ್ಕಳನ್ನ ಅದೆಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರಮಾಣದಲ್ಲಿ ಇನ್ನೊಬ್ಬರು ಪ್ರೀತಿಸೋಕೆ ಸಾಧ್ಯವಿಲ್ಲ. ಅದೇ ರಕ್ತ ಸಂಬಂಧ ಅನ್ನೋದು... ಆದರೆ ಇಂದು ಅದೂ ವ್ಯಾಪಾರಕ್ಕಿಡಲಾಗುತ್ತಿದೆಯೇನೋ ಅಂತನಿಸತೊಡಗಿದೆ.... ಹಾಗನಿಸೋಕೆ ಕಾರಣ ಇದೆ... ತಮ್ಮ ಪುಟ್ಟ ಪುಟ್ಟ ಕಂದಮ್ಮಗಳನ್ನು ಇಂಥಾ ಯಾವುದೋ ಸಂಸ್ಥೆಗಳ ಕೈಗೆ ಒಪ್ಪಿಸುತ್ತಾರಲ್ವಾ... ಇದು ನನ್ನ ಪಾಲಿಗೆ ವಾತ್ಸಲ್ಯದ ವ್ಯಾಪಾರದಂತೆಯೇ ಅನಿಸುತ್ತದೆ.. ನಾನಿಷ್ಟು ಹಣಕೊಡುತ್ತೇವೆ... ನೀವು ಚೆನ್ನಾಗಿ ನೋಡಿಕೊಳ್ಳಿ ಅಂತ. ತಾವು ದುಡಿದುದರಲ್ಲಿ ಒಂದಿಷ್ಟು ಖರ್ಚು ಮಾಡೋದು ಯಾರಿಗೂ ತಪ್ಪು ಅನಿಸೋದಿಲ್ಲ ಯಾಕೆಂದರೆ ಖರ್ಚಾದ ಹಣ ನಮ್ಮ ಜವಾಬ್ದಾರಿಯನ್ನು ಕಮ್ಮಿ ಮಾಡುತ್ತದೆ ಮತ್ತು ನೋಡಿಕೊಳ್ಳೋರಿಗೆ ತಾವು ದುಡಿದ ಪೂರ್ತಿ ಹಣವನ್ನೇನೂ ಕೊಡೋದಿಲ್ಲ ತಾನೇ... ಅನ್ನೋ ಸಮಾಧಾನ.
ಇಂಥಾದಕ್ಕೆಲ್ಲಾ ಬುದ್ಧಿ ಮಾತು ಹೇಳೋಕೆ ಹೋದರೆ ನಾವೆಲ್ಲ ಯಾಕೆ ದುಡಿಯುತ್ತಿರೋದು...? ನಮ್ಮ ಮಕ್ಕಳ ಭವ್ಯ ಭವಿಷ್ಯತ್ತಿಗಾಗಿ ತಾನೆ...? ಅನ್ನೋ ಸಿದ್ಧ ಉತ್ತರ ಸಿಗುತ್ತದೆ... ಆದ್ರೆ ಈ ತರಹದ ಘಟನೆಗಳನ್ನ ನೋಡೋವಾಗ ಆ ಭವಿಷ್ಯದ ಸಮಯವನ್ನ ತಲುಪುವಷ್ಟರಲ್ಲಿ ಆ ಕಂದಮ್ಮಗಳೆಲ್ಲಾ ಹಾಸಿಗೆ ಹಿಡಿದಿರುತ್ತಾರೆನೋ ಅಥವಾ ಮಾನಸಿಕವಾಗಿ ಖಿನ್ನರಾಗಿರುತ್ತಾರೆನೋ ಅಥವಾ ತಪ್ಪು ಹಾದಿ ಹಿಡಿದಿರುತ್ತಾರೆನೋ... ಆಮೇಲೆ ಎಂಥಾ ಭವ್ಯ ಭವಿಷ್ಯ....? ಇಲ್ಲಿ ಭವಿಷ್ಯ ಅನ್ನೋದು ಹಲವಾರು ಜನರಿಗೆ ಹಣ ಆಸ್ತಿ ಮತ್ತು ಆಧುನಿಕ ಸೌಲಭ್ಯಗಳಷ್ಟೇ ಆಗಿರೋದು ವಿಪರ್ಯಾಸ.
ಅದೊಂದು ಮಾತಿತ್ತು ನೀವು ನಿಮ್ಮ ಮಕ್ಕಳ ಚರಿತ್ರೆ ನಿರ್ಮಾಣ ಮಾಡೋಕೆ ನೋಡಿ ಭವಿಷ್ಯ ನಿರ್ಮಾಣ ಅಲ್ಲ ಅಂತ. ಆದ್ರೆ ಒಳ್ಲೆಯ ಮಾತುಗಳೆಲ್ಲವೂ ಕೇಳಿ ಬಿಡೋದಿಕ್ಕೆ ಅಂತಾಗಿದೆ. ಇರಲಿ ಬಿಡಿ ಆದರೆ ನಮ್ಮಲ್ಲೀಗ ಹಣದ ಹಸಿವು ತೀರ ಬೆಳೆದು ಬಿಟ್ಟಿದೆ... ಕಷ್ಟ ಪಡೋಕೆ ಯಾರೂ ತಯಾರಿಲ್ಲ ಅಥವಾ ತಾವು ಕಷ್ಟ ಪಟ್ಟರೂ ತಮ್ಮ ಮಕ್ಕಳು ಕಷ್ಟಪಡಬಾರದು... ಇದಕ್ಕೆ ಪರಿಹಾರ ಗಂಡ ಹೆಂಡತಿ ಇಬ್ಬರೂ ದುಡಿಯೋದು... ಇನ್ನೂ ಕೆಲವು ಕಡೆ ಆರ್ಥಿಕ ವಾಗಿ ಸಬಲರಾಗಿದ್ದರೂ " ನನ್ನ ಕೆರೀಯರ್ " ಅನ್ನೋ ವಿಚಿತ್ರ ಗುರಿ ಆದರೆ ಇವೆಲ್ಲವುದರ ಪರಿಣಾಮ ನಮ್ಮ ಮಕ್ಕಳ ಮೇಲಾಗುತ್ತಿದೆಯೇನೋ.
ಇವತ್ತಿನ ಸುದ್ದಿಯನ್ನೇ ತೆಗೆದುಕೊಳ್ಳೋಣ ಆ ಪುಟ್ಟ ಮಕ್ಕಳಿಗೆ ಇಷ್ಟು ಸಣ್ಣ ಪ್ರಾಯದಲ್ಲಿ ನಿದ್ದೆ ಮಾತ್ರೆಯ ಅಭ್ಯಾಸವಾದರೆ ಆ ಮಗುವಿನ ಆರೋಗ್ಯ ಏನಾಗಬೇಡ... ನೀವು ನಿಮ್ಮ ಹಣವನ್ನ ಮಕ್ಕಳ ಅನಾರೋಗ್ಯಕ್ಕಾಗಿ ಖರ್ಚು ಮಾಡಲು ಇಷ್ಟ ಪಡುತ್ತೀರಾ...? ಯೋಚಿಸಿ ನಿಮ್ಮ ಮಗುವಿನ ಯೌವನಾವಸ್ಥೆಗಾಗಿ ದುಡಿಯೋ ನೀವು ಆ ಮಗು ಯೌವನದವರೆಗೂ ಬದುಕಬೇಕು ಅಂತ ನಿರೀಕ್ಷೆ ಇಡಲು ಸಾಧ್ಯವೇ...? ಹಾಗಾದರೆ ಈ ದುಡಿತ ಯಾರಿಗಾಗಿ... ?
ಎಲ್ಲೋ ನಾವು ನಮ್ಮ ಜೀವನ ವಿಧಾನವನ್ನ ನಮ್ಮ ಜೀವನದ ಉದ್ದೇಶವನ್ನ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳಬೇಕು ಅಂತನಿಸೋದಿಲ್ವಾ... ಮೊದಲೇ ನಾವು ಅವಿಭಕ್ತ ಕುಟುಂಬ ಪದ್ದತಿಯನ್ನ ಧಿಕ್ಕರಿಸಿ ಕಾಲಿನಿಂದ ಒದ್ದಿದ್ದೇವೆ... ಅಲ್ಲಾದರೂ ನಮ್ಮ ರಕ್ತಸಂಬಂಧಿಗಳೇ ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಅನ್ನುವ ಸಮಾಧಾನವಿತ್ತು. ಆದ್ರೆ ಇಲ್ಲಿ ಹಾಗಲ್ಲ ಬರಿಯ ಹಣಕ್ಕಾಗಿ ವಾತ್ಸಲ್ಯ ತೋರಿಸುವಿಕೆ. ಮಕ್ಕಳ ಉಪಟಳ ಜಾಸ್ತಿ ಆದ್ರೆ ಕೈ ಎತ್ತೋಕೆ ಹಿಂಜರಿಯೋ ಪ್ರಶ್ನೆಯೇ ಇಲ್ಲ... ಅಂತಹ ಒಂದು ಕೂಪಕ್ಕೆ ನಮ್ಮ ಎಳೆ ಮನಸ್ಸಿನ ಮಕ್ಕಳನ್ನ ತಳ್ಳುತ್ತೇವಲ್ಲಾ.... ನಮ್ಮದೂ ವಾತ್ಸಲ್ಯವೇ ಅನ್ನೋ ಸಂಶಯ ಕಾಡುತ್ತೆ.. ಅಲ್ವಾ.
ಜಗತ್ತು ವೇಗವಾಗಿ ಓಡುತ್ತಿದೆ ರೀ... ಈ ಸ್ಪರ್ಧಾತ್ಮಕ ಜೀವನದಲ್ಲಿ ನಮ್ಮ ಮಕ್ಕಳನ್ನ ಬೆಳೆಸಬೇಕು.. ಅದಕ್ಕೆ ನಾವು ದುಡಿಯಲೇಬೇಕು ಅಂತ ವಿತಂಡವಾದ ಮಾಡೋರಿಗೆ ನನ್ನ ಪ್ರಶ್ನೆ ಇಷ್ಟೇ... ಸರಿ ನಿಮ್ಮ ಮಗುವಿನ ಆಯುಷ್ಯ ಇಷ್ಟು ಅಂತ ಹೇಳಬಲ್ಲಿರಾ...? ಮರುಕ್ಷಣದಲ್ಲಿ ನಾವಿರುತ್ತೇವೋ ಇಲ್ಲವೋ ಅನ್ನುವುದೇ ನಮಗೆ ಗೊತ್ತಿಲ್ಲದಿರುವಾಗ ಅದ್ಯಾವುದೋ ಭವಿಷ್ಯತ್ತಿಗೆ ನಮ್ಮ ಮುಗ್ಧ ಮಕ್ಕಳ ಈಗಿನ ಬಾಳನ್ನ ಹಾಳು ಮಾಡಬೇಕೇ... ದೊಡ್ದವರಾದ ಮೇಲಾದರೂ ಮಕ್ಕಳಿಗೆ ಏನು ಸರಿ ಏನು ತಪ್ಪು ಯಾವುದು ಬೇಕು ಯಾವುದು ಬೇಡ ಅನ್ನೋದು ಗೊತ್ತಾಗುತ್ತದೆ ಆದರೆ ನಾವೀಗ ಮಾಡುತ್ತಿರುವುದು ಅವುಗಳ ಬಾಲ್ಯವನ್ನೇ ಸುಖಮಯವಾಗಿಸುತ್ತಿಲ್ಲವಲ್ಲ.
ಮಕ್ಕಳು ಎಳೆಯ ಪ್ರಾಯದಲ್ಲಿ ಬರೀ ವಾತ್ಸಲ್ಯ, ಪ್ರೀತಿ ಮಮಕಾರವನ್ನಷ್ಟೇ ಬಯಸುತ್ತಾರೆ. ಅದನ್ನ ಅದರ ನಿಜವಾದ ಪೋಷಕರು ಮಾತ್ರ ಕೊಡೋಕೆ ಸಾಧ್ಯ. ಹಾಗಾಗಿ ನಾವೀಗಲೇ ಆಯ್ಕೆ ಮಾಡಬೇಕಾಗಿದೆ. ನಮ್ಮ ಮಕ್ಕಳಿಗೆ ಆಯಾಯ ಕಾಲಕ್ಕೆ ಬೇಕಾದುದನ್ನೇ ಕೊಟ್ಟು ಒಬ್ಬ ಒಳ್ಳೆಯ ನಾಗರೀಕನನ್ನಾಗಿ ಮಾಡುವುದು ಒಳ್ಳೆಯದೋ ಅಥವಾ ಕರಗಲಾರದ ಆಸ್ತಿ ಮಾಡಿಟ್ಟು ಮಕ್ಕಳ ನೈಜ ಕೋರಿಕೆಗಳನ್ನ ಬಲಿಕೊಡೋದಾ ಅಂತ. ಮಕ್ಕಳಿಗೆ ಕಷ್ಟದ ಅರಿವಾಗಲೇಬಾರದು ಅನ್ನೋದೇ ಈಗಿನ ಬಹು ದೊಡ್ದ ಸಮಸ್ಯೆ. ಎಳವೆಯಿಂದಲೂ ನಾವು ನಮ್ಮ ಕೈ ಮೀರಿ ಖರ್ಚು ಮಾಡಿ ಕಷ್ಟ ಅಂದರೇನು ಅನ್ನೋದನ್ನ ಅವರಿಗೆ ತೋರಿಸದಂತೆ ಸಾಕುತ್ತೇವೆ. ಮುಂದೆಂದಾದರೂ ಅವರಿಗೆ ಆ ಪರಿಸ್ಥಿತಿ ಎದುರಾದಾಗ ಅದನ್ನ ಎದುರಿಸೋ ಶಕ್ತಿಯೇ ಅವರಲ್ಲಿರುವುದಿಲ್ಲ. ಆಗ ಅವರು ಶರಣಾಗೋದು ಆತ್ಮಹತ್ಯೆಗೇ...
ಇರಲಿ ಬಿಡಿ ಯಾವುದು ಸರಿ ಯಾವುದು ತಪ್ಪು ಅನ್ನೋದು ಅವರವರಿಗೆ ಬಿಟ್ಟದ್ದು ಆದರೆ ಹಣವೇ ಎಲ್ಲಾ ಅನ್ನೋ ಮಾನಸಿಕತೆಯಿಂದ ಹೊರಬಂದು... ಅಕ್ಕಪಕ್ಕದವರ ಮನೆಯಲ್ಲಿದ್ದದ್ದೆಲ್ಲವೂ ನಮಗೆ ಬೇಕು... ಅಂತಹುದೇ ಜೀವನ ಶೈಲಿ ನಮಗೆ ಬೇಕು ಅನ್ನೋ ಹುಚ್ಚು ಕಲ್ಪನೆಗಳಿಂದ ಹೊರಬಂದಾಗಲಷ್ಟೇ ಒಂದೊಳ್ಳೆಯ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗೋದು... ಆದರೆ ನಿಮ್ಮ ನಿರ್ಧಾರ ಮಕ್ಕಳ ಭವಿಷ್ಯಕ್ಕಿಂತಲೂ ಹೆಚ್ಚಾಗಿ ವರ್ತಮಾನವನ್ನ ಸುಂದರಗೊಳಿಸುವ ಕಡೆಗಿರಲಿ ಎನ್ನುವುದೇ ನನ್ನ ಹಾರೈಕೆ.

No comments:

Post a Comment