Saturday 24 October 2015

ಉಘೇ ವೀರ ಭೂಮಿಗೆ.... ಎಂದವನಿಗೊಂದು ಉಘೇ ಹೇಳೋಣವೇ.



ನಮ್ಮ ಕಂಪನಿಯ ಸಮಾನ ಮನಸ್ಕ ಸಹೋದ್ಯೋಗಿ ಮಿತ್ರರುಗಳೆಲ್ಲಾ ಒಂದಾಗಿ ಚಿಂತನ ಅನ್ನುವ ಸಣ್ಣ ತಂಡವನ್ನ ಕಟ್ಟಿಕೊಂಡಿದ್ದೇವೆ. ರಾಷ್ಟ್ರೀಯ ವಿಚಾರಗಳತ್ತ ನಮ್ಮ ಸದಸ್ಯರನ್ನ ಸೆಳೆಯುವುದು, ರಾಷ್ಟ್ರ ಕಾರ್ಯದಲ್ಲಿ ಕೈಜೋಡಿಸುವುದು ಈ ತಂಡದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಸಂಪನ್ಮೂಲ ವ್ಯಕ್ತಿಗಳನ್ನ ಕರೆಸಿ ಪ್ರಸ್ತುತ ವಿಷಯಗಳ ಬಗ್ಗೆ ಚಿಂತನೆ ನಡೆಸುತ್ತೇವೆ. ವಿಚಾರಗಳನ್ನ ಬದಲಿಸಿಕೊಳ್ಳುತ್ತೇವೆ. ಇದೇ ರೀತಿಯಾಗಿ ಬಹಳ ಹಿಂದೊಮ್ಮೆ " ಹೊಸ ದಿಗಂತ " ಪತ್ರಿಕೆಯಿಂದ ನಮ್ಮ ಮಾಸಿಕ ಮಿಲನಕ್ಕೆ ವ್ಯಕ್ತಿಗಳಿಬ್ಬರು ಬಂದಿದ್ದರು. ಹೊಸ ದಿಗಂತ ರಾಷ್ಟ್ರೀಯ ವಿಷಯಗಳನ್ನ ಬಿತ್ತರಿಸುವ ಉತ್ತಮ ಪತ್ರಿಕೆಯಾದ್ದರಿಂದ ನಿಮ್ಮ ತಂಡದ ಸದಸ್ಯರು ತರಿಸಿಕೊಳ್ಳಿ ಅಂದಿದ್ದರು. ಅದಕ್ಕೆ ಒಪ್ಪಿಕೊಂಡ ನಾವುಗಳು ಈ ಪತ್ರಿಕೆಯನ್ನು ತರೆಸಿ ಓದಲು ತೊಡಗಿದೆವು... ಈ ರೀತಿಯಾಗಿ ಹೊಸದಿಗಂತ ಓದೋಕೆ ಶುರುಮಾಡಿದ ನನ್ನ ಒಬ್ಬ ಅಂಕಣಕಾರ ಬಹಳಾನೇ ಸೆಳೆದುಬಿಟ್ಟರು. ಪ್ರತಿ ಬಾರಿಯೂ ಅವರ ಅಂಕಣಕ್ಕೆ ಕಾಯುವಂತೆ ಮಾಡಿದ್ದರು. ಅದೇ " ಹಾದು ಹೋಗುವ ಹಾಳೆಗಳು " ಅನ್ನುವ ಹೆಸರಿನಲ್ಲಿ ಅಂಕಣ ಬರೆಯುತ್ತಿದ್ದ " ಶ್ರೀ. ಸಂತೋಷ್ ತಮ್ಮಯ್ಯ ".
ಕಂಪನಿಗೆ ಬರುತ್ತಿದ್ದ ಹೊಸದಿಗಂತದ ಇವರ ಅಂಕಣಗಳನ್ನು ಓದುತ್ತಾ ಓದುತ್ತಾ ಹೊಸದಿಗಂತದ ಮೇಲಿನ ಸೆಳೆವು ಅದ್ಯಾವ ರೀತಿಯಾಲ್ಲಾಯಿತು ಅಂತಂದರೆ ನನ್ನ ಮನೆಯಲ್ಲೂ ಪತ್ರಿಕೆ ಬದಲಾವಣೆಯಾಗಿ ಹೊಸದಿಗಂತ ತರೆಸಿಕೊಳ್ಳತೊಡಗಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಮನಸ್ಸಿನ ಮೂಲಕವೂ ಹಾದು ಹೋಗುವ ಸಂತೋಷ್ ತಮ್ಮಯ್ಯ ಅವರ " ಹಾದು ಹೋಗುವ ಹಾಳೆಗಳು " ( ಓದುತ್ತಾ ಹೋದಂತೆ ಈಗ ಎಲ್ಲಾ ಅಂಕಣಕಾರರು ತಮ್ಮ ಬರಹದ ಮೂಲಕ ಕಾಡತೊಡಗಿದ್ದಾರೆ ). ಅದೇನೋ ಸೆಳೆತ ಇವರ ಪದಗಳಲ್ಲಿ ಕಾಣಿಸುತ್ತೆ. ತನ್ನ ತಾಯಿನಾಡಿನ ಬಗೆಗಿರುವ ಅಪಾರ ಗೌರವ, ತನ್ನ ಮಾತೃಧರ್ಮದ ಮೋಲಿನ ಅಪಾರ ಶೃದ್ಧೆಯ ಕಂಪು ಇವರ ಲೇಖನಗಳನ್ನ ಆಘ್ರಾಣಿಸಿದವನಿಗೆ ಸ್ಪಷ್ಟವಾಗಿ ಅರಿವಾಗುತ್ತದೆ. ಇದೇ ಇವರ ಬರವಣಿಗೆಯ ಯಶಸ್ಸಿನ ಹಿಂದಿರುವ ಗುಟ್ಟು ಅಂತ ನನಗನಿಸುತ್ತದೆ.
ತಮ್ಮ "ಹಾದು ಹೋಗುವ ಹಾಳೆಗಳು " ಲೇಖನಗಳನ್ನ ಒಂದುಗೂಡಿಸಿ ಉಳಿದು ಹೋಗುವ ಹಾಳೆಯಾದ ಪುಸ್ತಕ ರೂಪದಲ್ಲಿ ತಂದಿರೋದು ನಮ್ಮಂತ ಅವರ ಲೇಖನದ ಅಭಿಮಾನಿಗಳಿಗೆ ಬಹಳಾನೆ ಖುಶಿ.. ಬರಹಗಳೇ ಅದ್ಭುತವಾಗಿರುವಾಗ ಅವುಗಳ ಸಂಗ್ರಹ ಕೂಡ ಅದ್ಭುತವಾಗಿರಲೇಬೇಕಲ್ಲ. ಖಂಡಿತವಾಗಿಯೂ " ಉಘೇ ವೀರ ಭೂಮಿಗೆ .." ಪುಸ್ತಕ ಅದ್ಭುತವಾಗಿ ಮೂಡಿ ಬಂದಿದೆ. ಚಂದದ ಮುಖಪುಟ, ಮುಕುಂದರ ಮುನ್ನುಡಿ, ಪ್ರತಾಪ್ ಸಿಂಹರ ಬೆನ್ನುಡಿ... ಇವೆಲ್ಲದಕೂ ಎಣೆ ಇಲ್ಲದಂತೆ ನಡುವೆ ಹರಿದ ಸಂತೋಷರ ವಿಚಾರ ಧಾರೆ... ನಿಜಕ್ಕೂ ಮನಸ್ಸಿಗೆ ನಾಟುತ್ತದೆ. ಸಂತೋಷ್ ತಮ್ಮಯ್ಯರ ಲೇಖನದ ಸೆಳೆತವೇ ಹಾಗೆ ಒಂದು ವಿಷಯದ ಒಳಹೊಕ್ಕರೆ ಅದರ ಎಲ್ಲಾ ಮಜಲುಗಳನ್ನ ನಮ್ಮ ಮುಂದಿಡುತ್ತಾರೆ. ವಿಸ್ತ್ರುತವಾಗಿ ಆ ಕುರಿತು ಬರೆದು ನಿಮ್ಮ ಮುಂದೆ ಒಂದೊಳ್ಳೆಯ ಚಿತ್ರಣ ಕೊಡುತ್ತಾರೆ.
ಒಟ್ಟು ಮೂವತ್ತೆರಡು ಲೇಖನಗಳು...ಮೊದಲ ಲೇಖನವೇ ಈ ವೀರಭೂಮಿಗೆ ನಮ್ಮ ಇತಿಹಾಸಕಾರರಿಂದಾದ ದ್ರೋಹ... ಬಹಳ ಚೆನ್ನಾಗಿ ಬರೆದಿದ್ದಾರೆ. ಬರೀ ವೀರಭೂಮಿಯ ಕುರಿತು ಮಾತ್ರ ಬರೆದಿರುವುದಲ್ಲ. ವಿಭಿನ್ನ ವಿಷಯಗಳ ಕುರಿತಾದ ಲೇಖನಗಳಿವೆ. ಇವರ ಆಯ್ಕೆಯ ವಿಷಯಗಳೂ ಕೂಡ ಅಷ್ಟೇ ವೈವಿಧ್ಯಮಯ... ಒಮ್ಮೆ ಗಂಗೆಯ ಕುರಿತು ಬರೆದರೆ ಇನ್ನೊಮ್ಮೆ ಜಾಗತೀಕರಣದ ಬಗ್ಗೆ ಬರೆಯುತ್ತಾರೆ. ಮತ್ತೊಮ್ಮೆ ಜಪಾನಿನ ಸೋನಿ ಕಂಪನಿಯ ಬಗ್ಗೆ ಬರೆದರೆ ಇನ್ನೊಮ್ಮೆ ಆರ್ಥಿಕ ವಲಯ ತಂದಿಡುವ ಪೇಚುಗಳ ಕುರಿತಾಗಿ ಬರೆಯುತ್ತಾರೆ. ಪ್ರತಿಯೊಂದು ವಿಷಯದ ಕುರಿತಾಗಿ ಬರೆದಾಗಲೂ ಆ ವಿಷಯದಲ್ಲಿ ತಾನೋರ್ವ ಪರಿಣತ ಅನ್ನುವ ರೀತಿಯಲ್ಲಿ ಇರುತ್ತೆ ಅವರ ಲೇಖನ...
ಬಲಪಂಥೀಯ ಚಿಂತನೆ ಇವರ ಬರವಣಿಗೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ. ಹಾಗಂತ ಅದು ಬರಿಯ ವಿರೋದ ಪಕ್ಷದವರ ವಿರೋದವಾಗಿರದೆ, ವಸ್ತುನಿಷ್ಠವಾಗಿರೋದು ನನಗೆ ಖುಷಿ ಕೊಡುತ್ತದೆ. ಇವರ ಲೇಖನಗಳಲ್ಲಿ ವೀರ ಕೊಡವನ ವೀರತ್ವವನ್ನ ಸ್ಪಷ್ಟವಾಗಿ ಕಾಣಬಹುದು. ಅವರು ತಮ್ಮ " ನನ್ನುಡಿ" ಯಲ್ಲಿ ಹೇಳಿದಂತೆ ತೋಡಿಕೊಳ್ಳಲು ಮುಲಾಜಿಲ್ಲ ... ಅನ್ನುವುದು ಬರಿಯ ಮಾತಷ್ಟೇ ಅಂತನಿಸದೆ ಅವರ ಬರವಣಿಗೆಯಲ್ಲೂ ಗೋಚರಿಸುತ್ತದೆ. ಇವರ ಇಂತಹಾ ಗುಣಗಳೇ ನನ್ನನ್ನ ಅವರ ಅಭಿಮಾನಿಯಾಗಿಸಿದ್ದು. ಯಾಕೆಂದರೆ ಹಣದ ಹಿಂದೋಡಿ ಪತ್ರಿಕೆಯ ಬಿಕರಿ ಜಾಸ್ತಿಯಾಗುವ ರೀತಿ ಬರೆಯುವ ಇತರ ಪತ್ರಕರ್ತರಂತೆ ಇವರಿಲ್ಲವಲ್ಲ.
ಬಹುಶ ನನ್ನ ಸುಯೋಗವೋ ಏನೋ ಇವರ ಸಖ್ಯ ನನಗೆ ದೊರೆತಿದೆ. ವಿಶೇಷ ಅಂದರೆ ಇವರ ಈ ಕಟು ಬರವಣಿಗೆಯ ಕಠೋರತೆ ಅವರ ಮಾತುಗಳಲ್ಲಿ ಕಾಣಸಿಗುವುದಿಲ್ಲ ಅಂದರೆ ಅಷ್ಟು ಸೌಮ್ಯವಾಗಿ ಮಾತನಾಡುತ್ತಾರೆ. ಬಹುಶಃ ಇದು ಅವರು ಪಡಕೊಂಡಿರುವ ಸಂಸ್ಕಾರದ ಫಲವೋ ಏನೋ... ನಿಜಕ್ಕೂ ಇಂಥಾ ಒಬ್ಬ ಲೇಖಕನ ವಿಚಾರಧಾರೆಯನ್ನ ನಾವೆಲ್ಲರೂ ಓದಲೇ ಬೇಕು ಅನ್ನೊದು ನನ್ನ ಅಭಿಪ್ರಾಯ ಹಾಗಾಗಿಯೇ ಹೇಳಿದ್ದು " ಉಘೇ ವೀರಭೂಮಿಗೆ..." ಎಂದು ಬರೆದವನಿಗೆ ಉಘೇ ಎನ್ನೋಣವೇ... ಎಂದು. ಸಮಯ ಸಿಕ್ಕರೆ ತಪ್ಪದೇ ಓದಿ...

No comments:

Post a Comment