Saturday 24 October 2015

ಧರ್ಮಶ್ರೀ..



ಎಸ್.ಎಲ್.ಭೈರಪ್ಪ ಅವರು 1961ರಲ್ಲಿ ಬರೆದ ಕಾದಂಬರಿ... ನಾನು ಹುಟ್ಟುವ 21 ವರ್ಷಕ್ಕೆ ಮೊದಲು...ಬೆಳೆದು ಬುದ್ದಿ ತಿಳಿದ ಕೂಡಲೇ ಓದಬೇಕಿತ್ತಲ್ವಾ... ಅಂತ ಈಗ ಅನ್ನಿಸುತ್ತಿದೆ, ಇರಲಿ ಬಿಡಿ ಈಗಲಾದರೂ ಓದಿದೆನಲ್ಲ ಅನ್ನೋ ಸಮಾಧಾನ ಇದೆ. ಹಿಂದೂ ಧರ್ಮ, ಅದರ ಆಚರಣೆ, ಸಂಸ್ಕೃತಿ, ಮತ್ತು ಈ ಧರ್ಮವನ್ನು ಇಲ್ಲದಂತಾಗಿಸಲು ಪಾಶ್ಚಾತ್ಯ ಧರ್ಮ ನಡೆಸುವ ಸಂಚುಗಳು.... ಇವೆಲ್ಲವನ್ನೂ ಕಾದಂಬರಿಯ ರೂಪದಲ್ಲಿ ನಮ್ಮ ಮುಂದಿಟ್ಟರಲ್ಲ... ಭೈರಪ್ಪ ಅವರು... ಅವರ ಬರವಣಿಗೆಗೆ ಕೋಟಿ ನಮನಗಳು...
ಆರಂಭದಲ್ಲಿ ಕಥಾ ನಾಯಕ "ಸತ್ಯ" ತನ್ನ ಧರ್ಮದ ಬಗ್ಗೆ ತೋರಿಸುವ ಆಸಕ್ತಿಯನ್ನು ಕಂಡಾಗ, ನನ್ನದೇ ಪ್ರತಿಬಿಂಬ ಆ ಪಾತ್ರದಲ್ಲಿ ನನಗೆ ಕಂಡಿತ್ತು, ಆದರೆ ಆ ಭಾವನೆ ಒಂದು ಹಂತದ ನಂತರ ಇಲ್ಲವಾಯಿತು. .. ಕಾರಣ ಆ ನಾಯಕ ತನ್ನ ವಿಚಾರಧಾರೆಗಳಿಂದ ಪಾಶ್ಚಾತ್ಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡ ನಾಯಕಿಯ ಸ್ವಭಾವನ್ನೇ ಬದಲಾಯಿಸಿದರೂ, ಕೊನೆಯಲ್ಲಿ ಅವಳಲ್ಲಿ ಅನುರಕ್ತನಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾನೆ.(ಈ ಪ್ರೀತಿಗೆ ಧರ್ಮವನ್ನೇ ಬದಲಾಯಿಸೋ ಶಕ್ತಿ ಯಾರು ಕೊಟ್ಟರೋ...) ಧಾರ್ಮಿಕ ವಿಚಾರಗಳಿಂದ ತನ್ನ ನಿಲುವನ್ನು ಗಟ್ಟಿಗೊಳಿಸಿದ ವ್ಯಕ್ತಿ ಕೊನೆಗೆ ಹೀಗೆ ಆದನಲ್ಲ ಅಂತ ಓದುವಾಗ ನನ್ನ ಮನಸ್ಸಿಗೆ ಬೇಸರವಾದದ್ದಂತೂ ನಿಜ... ಆದರೆ ನನಗನ್ನಿಸುತ್ತೆ ಭೈರಪ್ಪನವರ ಈ ಕಾದಂಬರಿ ಬರೆಯಲು ಮೂಲ ಕಾರಣ ಮತಾಂತರಗೊಂಡ ವ್ಯಕ್ತಿಯ ತಳಮಳವನ್ನು ಜಗತ್ತಿಗೆ ತೋರಿಸುವುದಾಗಿತ್ತೋ ಏನೋ...
ಆರಂಭದಲ್ಲಿ ವಿಗ್ರಹಾರಾಧನೆಯ ಬಗ್ಗೆ ಮತ್ತು ಹಿಂದೂ ಧರ್ಮದ ಬಗೆಗಿನ ಶ್ರೇಷ್ಟತೆಯ ಬಗೆಗೆ ವಾದಗಳ ರೂಪದಲ್ಲಿ ಸ್ವಲ್ಪ ವಿಷಯವನ್ನು ಮುಂದಿಟ್ಟಾಗ ನನ್ನ ಆಸಕ್ತಿ ಹೆಚ್ಚಾಗಿತ್ತು ಆದರೆ ಮುಂದೆ ಕಥೆಯೇ ವಿಸ್ತಾರಗೊಳ್ಳುತ್ತಾ ಹೋಯಿತೇ ವಿನಹ ನಾನು ಬಯಸುತ್ತಿದ್ದ ವಿಚಾರಧಾರೆಗಳೇ ಕಾಣ ಸಿಗಲಿಲ್ಲ ಆಗ ಮನಸಿಗೆ ಸ್ವಲ್ಪ ಅಸಮಾಧಾನವೂ ಆಗಿತ್ತು, ನಾನು ಮುಂದೆ ಇರಬಹುದೇನೋ ಅಂತ ಓದುತ್ತಲೇ ಹೋದೆ, ನಾನು ಬಯಸಿದ್ದು ಸಿಗಲೇ ಇಲ್ಲ ಆದರೆ ಅದಕ್ಕೆ ಬದಲಾಗಿ ನಾನು ಬಯಸುತ್ತಿರುವ ಮಾಹಿತಿಗಳ ಬಗೆಗಿನ ಪುಸ್ತಕಗಳ ಹೆಸರನ್ನು ಭೈರಪ್ಪನವರು ಕಥೆಯಲ್ಲಿಯೇ ಸೂಚಿಸಿದ್ದರು.
ನನಗನ್ನಿಸಿದಂತೆ ಈ ಕಾದಂಬರಿಯ ಔಚಿತ್ಯ ಗೊತ್ತಾಗೋದು ಕಥೆಯ ಕೊನೆಯ ಕ್ಷಣಗಳಲ್ಲಿ ... ಮತಾಂತರಗೊಂಡ ನಾಯಕನ ಬಗೆಗೆ ಅವನ ಒಡಹುಟ್ಟಿದವಳ ಭಾವನೆಯಲ್ಲಾಗುವ ಬದಲಾವಣೆ, ಅವಳು ಮತಾಂತರಗೊಂಡ ಅಣ್ಣನನ್ನ ತನ್ನ ತಂದೆಯ ಶ್ರಾದ್ಧದ ದಿನ ನಡೆಸಿಕೊಳ್ಳುವ ರೀತಿ ಇವೆಲ್ಲವೂ ನಾಯಕನ ಮೇಲೆ ಅದೆಂತಾ ಪ್ರಭಾವ ಬೀರುತ್ತೆ ಅಂದರೆ ಆತ ರೋಗಿಯಾಗಿ ಹೋಗುತ್ತಾನೆ , ಕೊನೆಯಲ್ಲಿ ತನ್ನ ಧರ್ಮವನ್ನು ತೊರೆದು ತಾನು ತಪ್ಪು ಮಾಡಿದೆ ಎನ್ನುವ ಭಾವನೆ ಅವನನ್ನ ಕಾಡೋದು ಬೇಲೂರು ದೇವಸ್ಥಾನದ ವೈಭವನ್ನು ಕಂಡಾಗ... ಭಾರತದಲ್ಲಿರುವ ಇಂತಹಾ ಅದೆಷ್ಟೋ ದೇವಳಗಳ ಕಲಾವೈಭವ ತನ್ನ ಮಗನಿಗೆ ಹೆಮ್ಮೆಯ ವಿಷಯ ಅಗೋದಿಲ್ಲವಲ್ಲ ಎನ್ನುತ್ತಾ ಕೊರಗುವ ದೃಶ್ಯದ ವಿವರಣೆಯನ್ನು ಯಾವುದೇ ಮತಾಂತರಗೊಂಡ ವ್ಯಕ್ತಿ ಓದಿದ್ದೇ ಆದಲ್ಲಿ ಆತನ ಮಾತೃ ಧರ್ಮ ಪ್ರೇಮ ಜಾಗೃತವಾಗೋದರಲ್ಲಿ ಸಂಶಯನೇ ಇಲ್ಲ , ಅವನ ಮಾತುಗಳನ್ನು ಕೇಳಿ ಕಣ್ಣೀರಿಡುವ ನಾಯಕಿ ಅವಳೇ ಮುಂದೆ ಹೆಜ್ಜೆ ಇಟ್ಟು ಹಿಂದೂ ಧರ್ಮದ ಅಂಗವಾದ ಆರ್ಯ ಸಮಾಜ ಸೇರಲು ನಾಂದಿ ಹಾಕುತ್ತಾಳೆ ಇದರಿಂದ ಸಂತಸಗೊಂಡು ಮರಳಿ ತನ್ನ ಧರ್ಮವನ್ನು ಸೇರುವ ನಾಯಕ ತನ್ನ ಪತ್ನಿಗೆ "ಧರ್ಮಶ್ರೀ" ಅನ್ನುವ ಹೆಸರಿಡುವ ಮೂಲಕ ಕಥೆಯು ಮುಕ್ತಾಯವಾಗುತ್ತದೆ.
ಈ ಕಥೆಯ ಮೂಲಕ ಯಾವ ರೀತಿ ಒಬ್ಬ ವ್ಯಕ್ತಿಯನ್ನ ಮತಾಂತರ ಮಾಡಲಾಗುತ್ತದೆ ಅನ್ನೋದನ್ನ ವಿವರವಾಗಿ ಹೇಳಿದ್ದಾರೆ ಅದೇ ರೀತಿ ಯಾಕೆ ನಾವು ನಮ್ಮ ಮಾತೃ ಧರ್ಮದ ಬಗೆಗೆ ಅಭಿಮಾನ ಪಡಬೇಕು ಅನ್ನೋದನ್ನೂ ವಿವರಿಸಿದ್ದಾರೆ ಭೈರಪ್ಪನವರು, ಅವರದೇ ಬರಹವನ್ನು ಓದಿದಾಗ ಮಾತ್ರ ಈ ವಿಚಾರಗಳೆಲ್ಲ ನಮ್ಮ ತಲೆಗೆ ಹೊಳೆಯೋದು ಹಾಗಾಗಿ ಸಮಯ ಸಿಕ್ಕರೆ ಖಂಡಿತಾ ಓದಿ...
ಕೊನೆಯದಾಗಿ ಪುಸ್ತಕ ಓದಿ ಆದ ಮೇಲಿನ ನನ್ನ ಅನಿಸಿಕೆ.. ಅವರವರ ಧರ್ಮ ಅವರವರಿಗೆ ದೊಡ್ಡದೇ...ಈ ಭಾವನೆ ಅವರಿಗಷ್ಟೇ ಸೀಮಿತವಾಗಿದ್ದರೆ ಜಗತ್ತಿನಲ್ಲಿ ಈಗ ನಡೆಯುತ್ತಿರುವ ಧರ್ಮ ಧರ್ಮಗಳ ನಡುವಿನ ಕಲಹಗಳು ಅಗುತ್ತಿರಲಿಲ್ಲ , ಯಾವಾಗ ನನ್ನ ಧರ್ಮ ಮಾತ್ರ ಶ್ರೇಷ್ಟ ಅದನ್ನೇ ಉಳಿದವರೂ ಪಾಲಿಸಬೇಕು ಅನ್ನುವ ಭಾವನೆ ಮೂಡುತ್ತದೋ ಅದೇ ಅನಾಹುತವನ್ನುಂಟು ಮಾಡುತ್ತದೆ.

No comments:

Post a Comment