Saturday 31 October 2015

"ಭಾರತ"ದೊಳಗಿನ ಅರ್ಥ ಇಷ್ಟೊಂದು ಇದೆ.... ಇಂಡಿಯಾದಲ್ಲೇನಿದೆ...?



ಇತ್ತೀಚಿಗೆ Proud to be INDIAN ಅನ್ನೋ ಬದಲು ನಮ್ಮತನದಿಂದ ಭಾರತೀಯ ಎನ್ನೋಣ ಅಂದಿದ್ದೆ .... ಯಾಕೆ ಭಾರತೀಯ ಅನ್ನಬೇಕು India ಅಂದರೂ ಭಾರತವೇ ತಾನೆ ಅನ್ನುವವರು ಹಲವು ಜನ ಇದ್ದಾರು... ಒಪ್ಪಿಕೊಳ್ಳೋಣ India ಅಂದರೂ ಭಾರತಾನೇ.... ಈ ರೀತಿಯ ತರ್ಕವೆತ್ತುವವರಲ್ಲಿ ನನ್ನದೊಂದು ಪ್ರಶ್ನೆ...ನಿಮನ್ನ ನಿಮ್ಮ ತಂದೆ ತಾಯಿಯರು ಇಟ್ಟ ಹೆಸರಿಗೆ ಬದಲಾಗಿ ಬೇರಾವುದೋ ಹೆಸರಿನಿಂದ ಕರೆಯ ತೊಡಗಿದರೆ ನೀವು ಸಹಿಸಿಕೊಳ್ಳುತ್ತೀರಾ...? ನಿಮ್ಮ ತಂದೆ ತಾಯಿಯರು ಯೋಚಿಸಿ ಅರ್ಥವತ್ತಾಗಿರುವ ಹೆಸರಿಟ್ಟಿರುತ್ತಾರೆ, ಅದಕ್ಕೆ ಬದಲಾಗಿ ಯಾರೋ ಅವರಿಗೆ ಕರಿಯೋಕೆ ಕಷ್ಟವಾಗುತ್ತೆ ಅನ್ನೋ ಕಾರಣಕ್ಕೆ ಅವರಿಗೆ ಬೇಕಾದಂತೆ ಇಟ್ಟ ಹೆಸರನ್ನ ಕರಿಯೋಕೆ ಬಿಡುತ್ತೀರಾ... ನಮ್ಮ ಹೆಸರಿನ ಕುರಿತಾದ ನಿಲುವಿನಲ್ಲೂ, ನಮ್ಮ ದೇಶದ ಹೆಸರಿನ ಕುರಿತಾದ ನಿಲುವಿನಲ್ಲೂ ವ್ಯತ್ಯಾಸ ಏಕೆ...? ಯೋಚಿಸಬೇಕಾದ ಅಗತ್ಯವಿದೆಯಲ್ಲವೇ...
ನಿಜವಾಗಿ " ಭಾರತ " ಅನ್ನುವ ಹೆಸರೇ , ಇದು ನಮ್ಮ ತಾಯಿ ಎಂಬುದನ್ನು ಸೂಚಿಸುತ್ತದೆ. ಭಾರತವನ್ನು ಅಜನಾಭವರ್ಷ, ಹೈಮತವರ್ಷ ಮತ್ತು ಭರತವರ್ಷ ಅಂತಲೂ ಕರೆಯುತ್ತಾರೆ. ಭರತನಿಂದಾಗಿ ಈ ನಾಡು ಭಾರತವಾಯಿತು. ಸ್ವಾಯಂಭುವ ಮನುವಿನ ಮಗ ಪ್ರಿಯವ್ರತ, ಪ್ರಿಯವ್ರತನ ಮಗ ನಾಭಿ , ನಾಭಿಯ ಮಗ ಋಷಭ, ಋಷಭನ ಜ್ಯೇಷ್ಠ ಪುತ್ರ ಭರತ. ಇವನೇ ಈ ಭೂಮಿಯ ಚಕ್ರವರ್ತಿ ಎನಿಸಿದ. ಆ ಪರಾಕ್ರಮಿಯಿಂದ ಈ ನಾಡು ಭಾರತವಾಯಿತು ಅಂತ ವಾಯುಪುರಾಣದಲ್ಲಿದೆ. ಭಾಗವತ ಮತ್ತು ಮಾರ್ಕಾಂಡೇಯ ಪುರಾಣಗಳೂ ಈ ಮಾತಿಗೆ ಪುಷ್ಟಿ ನೀಡುತ್ತದೆ.
ಮತ್ತೊಬ್ಬ ಪರಾಕ್ರಮಿ ರಾಜನಾದ, ದುಷ್ಯಂತ ಶಕುಂತಲೆಯರ ಮಗನಾದ ಭರತನಿಂದಲೂ ನಮ್ಮ ದೇಶ ಭಾರತವಾಯಿತು ಅನ್ನೋ ಪ್ರತೀತಿಯೂ ಇದೆ. ಇಬ್ಬರೂ ಮಹಾಪುರುಷರೇ...
" ಭರತ " ಎಂಬ ಪದದ ಮೂಲ ಪೋಷಿಸು, ಭರಿಸು ಎಂಬ ಅರ್ಥವುಳ್ಲ "ಭೃ" ಧಾತುವಿನಲ್ಲಿದೆ. ಇದಕ್ಕೆ ಬೆಳಕು ನೀಡು ಜ್ಞಾನ ನೀಡು, ಭಗವಂತ ಎಂಬ ಅರ್ಥಗಳೂ ಇದೆ. ಆದ್ದರಿಂದ ವಿಶ್ವವನ್ನು ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ , ಜ್ಞಾನ ನೀಡಿದ ಭಗವಂತನ ನಾಡು ಭಾರತ ವಾಯಿತು. ಈ ಶಬ್ದದ ಅರ್ಥವ್ಯಾಪ್ತಿ ಬಹು ವಿಶಾಲವಾಗಿದೆ. ಭಾರತ ಇದು ಪ್ರಗತಿಯ ಚಿಹ್ನೆ. ಭಾರತ ನಾಟ್ಯ ಶಾಸ್ತ್ರದಲ್ಲೂ ಹೆಚ್ಚಿನ ಅರ್ಥ ಪಡೆದಿದೆ. ಭಾ-ರ-ತ ಈ ಮೂರು ಅಕ್ಷರಗಳು " ಭಾವ-ರಾಗ-ತಾಳ" ಗಳನ್ನು ಪ್ರತಿನಿಧಿಸುತ್ತದೆ. ಇವು ಪರಸ್ಪರ ಹೊಂದಿಕೊಂಡಾಗ ಸಂಗೀತದಲ್ಲಿ ಸಾಮರಸ್ಯ.
ಇಂತಹಾ ವಿಶಿಷ್ಠ ಮೂಲಾರ್ಥಗಳನ್ನು ಹೊಂದಿರುವ ನಮ್ಮ ದೇಶದ ಹೆಸರನ್ನು ಬದಿಗೊತ್ತಿ ಬ್ರಿಟಿಷರು ಇಟ್ಟಿರೋ ಇಂಡಿಯಾ ಗೆ ಜೋತು ಬಿದ್ದಿದ್ದೇವಲ್ಲಾ....??? ಯಾಕೆ ಇನ್ನು ನಾವು ಅವರ ಗುಲಾಮತನದಲ್ಲಿದ್ದೇವೆ...? ಇಂಡಿಯಾ ಅನ್ನೋ ಪದಕ್ಕೆ ಈ ರೀತಿಯ ವಿಶ್ಲೇಷಣೆ ನನಗಂತೂ ಸಿಕ್ಕಿಲ್ಲ... ಇಂಡಿಯನ್ನರು ಯಾರಾದರೂ ತಿಳಿಸಿಯಾರಾ....?

(ಈ ಮಾಹಿತಿ ಸಿಕ್ಕಿದ್ದು " ಬಿ. ವಿದ್ಯಾನಂದ ಶೆಣೈ " ಅವರ " ಭಾರತ ದರ್ಶನ " ಅನ್ನೋ ಪುಸ್ತಕದಲ್ಲಿ

No comments:

Post a Comment