Thursday 22 October 2015

ದೇಶಭಕ್ತ "ಸುಭಾಷರ ಕಣ್ಮರೆ" ... ಓ ಭಾರತೀಯ ಇನ್ನಾದರೂ ನೀ ಕಣ್ತೆರೆ..




" ಸುಭಾಷರ ಕಣ್ಮರೆ " ಡಾ. ಕೆ.ಎಸ್.ನಾರಾಯಣಾಚಾರ್ಯರ ಇತ್ತೀಚೆಗಿನ ಕೃತಿ. ಡಾ.ಕೆ.ಎಸ್ ನಾರಾಯಣಾಚಾರ್ಯರವರು ಅದ್ಭುತ ಲೇಖಕರು. ಪುರಾಣಗಳ ಕುರಿತಾಗಿ ಅಥವಾ ಇತಿಹಾಸದ ಕುರಿತಾಗಿ ಅಥವಾ ರಾಷ್ಟ್ರೀಯತೆಯ ಕುರಿತಾಗಿ ಸುಂದರವಾಗಿ , ಸ್ಪಷ್ಟವಾಗಿ ಬರೆಯುತ್ತಾರೆ. ಈ ಪುಸ್ತಕದಲ್ಲಿ ನೇತಾಜಿ ಕುರಿತಾದ ಹಲವು ವಿಷಯಗಳನ್ನೂ, ಅವರಿಗೆ ತಮ್ಮವರಿಂದಲೇ ಆದ ಅನ್ಯಾಯವನ್ನು ಹೇಳುತ್ತಾ ಸಾಗುತ್ತಾರೆ. ಈ ಪುಸ್ತಕದ ಒಂದು ವಿಶೇಷತೆ ಓದುತ್ತಿದ್ದಂತೆ ಓದುಗನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳನ್ನು ಅವರೇ ಕೈಗೆತ್ತಿಕೊಂಡು ಅದಕ್ಕುತ್ತರದ ರೂಪದಲ್ಲಿ ತಮ್ಮ ಲೇಖನ ಬರೆದಿರುವುದು. ನೀವೇ ಓದಿದಲ್ಲಿ ಬಲು ಒಳ್ಳೆಯದು ಆದರೂ ಕೆಲವೊಂದು ವಿಷಯ ಹಂಚಿಕೊಳ್ಳುತ್ತಿದ್ದೇನೆ.
ನೆಹರೂರವರ ಬ್ರಿಟಿಷ್ ಪ್ರೇಮ, ನೇತಾಜಿಯವರ ಕುರಿತಾದ ದ್ವೇಷ...
1. ಆಗಸ್ಟ್ 23, 1945 ರಂದು ಸುಭಾಷರು ರಷ್ಯಾ ಗಡಿ ತಲುಪಿದರು, ಈ ಸುದ್ದಿ ನೆಹರೂರವರ ಕಿವಿಗೆ ಬಿದ್ದಾಗ ಅವರು ಮಾಡಿದ ಮೊದಲ ಕೆಲಸ, ಬ್ರಿಟಿಷ್ ಸಾಮ್ರಾಜ್ಯದ ಮಹಾ ಪ್ರಧಾನಿಯಾಗಿದ್ದ " ಆಟ್ಲೀ " ಅವರಿಗೆ ಪತ್ರ ಬರೆದಿದ್ದು. ಆ ಪತ್ರ ಹೀಗಿದೆ.
ಪ್ರಿಯ ಶ್ರೀ ಆಟ್ಲೀಯವರೇ,
ನಂಬಲರ್ಹ ಮೂಲವೊಂದರಿಂದ ನನಗೆ ತಿಳಿದು ಬಂದಿರುವುದೇನೆಂದರೆ ಸುಭಾಷ್ ಚಂದ್ರ ಬೋಸರು, ನಿಮ್ಮ ಯುದ್ಧ ಅಪರಾಧಿಗಳು. ರಷ್ಯಾ ಪ್ರಾಂತಕ್ಕೆ ಪ್ರವೇಶಿಸಲು ಸ್ಟಾಲಿನ್ನರು ಅವಕಾಶ ನೀಡಿದ್ದಾರೆ. ಇದು ರಷ್ಯಾನ್ನರ ದ್ರೋಹ ಕೃತ್ಯ, ನಂಬಿಕೆ ದ್ರೋಹತನ. ರಷ್ಯಾವು ಬ್ರಿಟನ್- ಅಮೇರಿಕನ್ನರ ಯುದ್ಧ ಪಾಲುದಾರನಾದ ಪ್ರಯುಕ್ತ ಈ ರೀತಿ ಮಾಡಬಾರದಿತ್ತು. ಇದನ್ನು ಗಮನಿಸಿ ಯಾವುದು ಯುಕ್ತವೋ , ಅರ್ಹವೋ ಅದನ್ನು ಮಾಡಿ.
ನಿಮ್ಮ ನಂಬಿಕೆಯ,
ಜವಾಹರ ಲಾಲ್ ನೆಹರು.
2. ಸೆಪ್ಟೆಂಬರ್ 2, 1946 ರಲ್ಲಿ ಸ್ವಾತಂತ್ರ್ಯ ಘೋಷಣೆಗೆ ಹೆಚ್ಚು ಕಡಿಮೆ ಒಂದು ವರ್ಷ ಪೂರ್ವದಲ್ಲಿ, ಆಗ ತಾನೇ ರಚಿಸಲ್ಪಟ್ಟಿದ್ದ ತಾತ್ಕಾಲಿಕ ಸರ್ಕಾರದ ಪ್ರಥಮ ಪ್ರಧಾನಿಯಾಗಿ ನೆಹರೂರವರು ಸ್ವೀಕರಿಸಿದ್ದ ಪ್ರಮಾಣವಚನ -
" ದೊರೆ ಆರನೇ ಜಾರ್ಜರಿಗೂ ಅವರ ಉತ್ತರಾಧಿಕಾರಿ ಬ್ರಿಟಿಷ್ ಚಕ್ರಾಧಿಪತ್ಯದ ಸಾರ್ವಭೌಮರಿಗೂ ನಾನು ನಿಯತ್ತಾಗಿ, ವಿಧೇಯನಾಗಿ ನಿಜ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತೇನೆ.
3. ಭಾರತದ ಪ್ರಥಮ ಪ್ರಧಾನಿ ನೆಹ್ರೂ, ನೇತಾಜಿ ಬಗ್ಗೆ ತಳೆದಿದ್ದ ಧೋರಣೆಯ ಬಗ್ಗೆ " ಮಾನವತೀ ಆರ್ಯ " ಅವರು ಈ ರೀತಿ ಬರೆದಿದ್ದಾರೆ.
" ಕಾಂಗ್ರೆಸ್ ಪಕ್ಷವೂ, ನೆಹ್ರೂ ಸರ್ಕಾರವೂ ನೇತಾಜಿ ಮತ್ತು ಅವರ ಐ.ಎನ್.ಎ ಗೆ ಕುರಿತಾಗಿ ವಿರೋಧಿ ಧೋರಣೆಯನ್ನು ತಳೆದಿತ್ತು. ನೇತಾಜಿ ಕುರಿತ ಸತ್ಯ ಶೋಧನೆಯ ದಿಕ್ಕಿನಲ್ಲಿ ಆಗುತ್ತಿದ್ದ ಎಲ್ಲಾ ಯತ್ನಗಳನ್ನು ಹತ್ತಿಕ್ಕಲಾಗುತ್ತಿತ್ತು. ನೇತಾಜಿಯವರು ಭಾರತ ಸ್ವಾತಂತ್ರ್ಯಕ್ಕೆ ಕೊಟ್ಟ ಕಾಣಿಕೆಯನ್ನು ಕ್ರಮೇಣ ಜನರ ಮನಸಿಂದ ಅಳಿಸಿ ಹಾಕಲು ಯತ್ನಿಸಿತ್ತು. ಐ.ಎನ್.ಎ ಯ ಯೋಧರಿಗೂ ಭಾರತ ಸೇನೆಯಲ್ಲಿ ಸ್ಥಾನಮಾನ ದೊರೆಯದಂತೆ ನೋಡಿಕೊಳ್ಳಲಾಯಿತು. ಅವರನ್ನು ಸ್ವಾತಂತ್ರ್ಯ ಯೋಧರೆಂದು ಒಪ್ಪಿಕೊಳ್ಳಲು 1972ರವರೆಗೆ ಸರ್ಕಾರ ಸಹಕರಿಸಲಿಲ್ಲ, ಯಾವುದೇ ಸರ್ಕಾರಿ ಕಛೇರಿ, ಸಾರ್ವಜನಿಕ ಸ್ಥಳಗಳಲ್ಲಿ, ಸೇನಾ ಕಛೇರಿಗಳಲ್ಲಿ ನೇತಾಜಿಯವರ ಭಾವಚಿತ್ರ ಹಾಕದಂತೆ ನೋಡಿಕೊಳ್ಳಲಾಯಿತು. ಈ ಬಗ್ಗೆ ಫೆಬ್ರವರಿ 11, 1949ರಲ್ಲಿ " ಮೇಜರ್ ಜನರಲ್ ಪಿ.ಎನ್. ಖಂಡೂರಿ" ಯವರು ಒಂದು ರಹಸ್ಯಾದೇಶವನ್ನು ಹೊರಡಿಸಿಬಿಟ್ಟರು. " ನೇತಾಜಿಯವರ ಭಾವಚಿತ್ರಗಳನ್ನು ಎಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ, ಯೂನಿಟ್ ಗಳಲ್ಲಿ ಹಾಕುವಂತಿಲ್ಲ."
4. ನವೆಂಬರ್/ಡಿಸೆಂಬರ್ 1945ರ ನಡುವೆ ನೇರವಾಗಿ ರಷಿಯಾದಿಂದಲೇ ನೇತಾಜಿ ನೆಹ್ರೂಗೆ ಪತ್ರ ಬರೆದರು: " ಭಾರತಕ್ಕೆ ಬರುತ್ತೇನೆ , ಬರಲೇ..? " (Patriot Pg. 190 ) ಆದರೆ ನೆಹ್ರೂ ಬ್ರಿಟಿಷ್ ಪ್ರಧಾನಿಗೆ ಪತ್ರ ಬರೆದು " ಈ ಯುದ್ಧ ಕೈದಿಯನ್ನು ಬಂಧಿಸಿ" ಎಂದು ಚೀರಿದರು.
5. ನೇತಾಜಿಯವರ ರಷಿಯಾ ಅಜ್ನಾತವಾಸದ ತನಿಖೆಯ ಬಗ್ಗೆ ರಶ್ಯಾ ನೆಹ್ರೂ ಅಭಿಪ್ರಾಯವನ್ನು ಕೇಳಿತ್ತು. ನೆಹ್ರೂ " ಈ ವಿಷಯದಲ್ಲಿ ಪತ್ರ ವ್ಯವಹಾರ ಮುಂದುವರೆಸುವುದು ಬೇಡ" ಎಂದೇ ಬರೆದು ನೇತಾಜಿ ವಿಷಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದರು. ಒಂದು ವೇಳೆ ಇಂಡೋ- ರಷಿಯನ್ ವಿಚಾರಣಾ ಆಯೋಗ ರಚಿಸಿದ್ದರೆ ನೇತಾಜಿಯವರ ಕುರಿತಾದ ಅಪೂರ್ವ ಮಾಹಿತಿಗಳನ್ನು ರಷ್ಯಾ ಕೊಡಲು ತಯಾರಿತ್ತು ಆದರೆ ನೆಹರೂರವರು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸಿದರು.
6. 1956 ರ ವರೆಗೆ ನೇತಾಜಿ ಹೆಸರು ವಿಶ್ವ ಯುದ್ಧಖೈದಿಗಳ ಪಟ್ಟಿಯಲ್ಲಿತ್ತು. ಆಗ ಗೃಹಮಂತ್ರಿಯಾಗಿದ್ದ ಗೋವಿಂದ ವಲ್ಲಭ ಪಂತರು ರಹಸ್ಯವಾಗಿ ಬ್ರಿಟಿಷರೊಡನೆ ಒಪ್ಪಂದಕ್ಕೆ ಸಹಿ ಹಾಕಿದ್ದರು. " ನೇತಾಜಿ ಇನ್ನು ಹತ್ತು ವರ್ಷಗಳ ಒಳಗೆ ಭಾರತಕ್ಕೆ ಮರಳಿದರೆ, ನಿಮಗೆ ಒಪ್ಪಿಸುತ್ತೇವೆ ಎಂದು. ಇಂದಿರಾಗಾಂಧಿ ಇದನ್ನು 1966ರ ನಂತರ ಪುನರ್ನವೀಕರಣ ಮಾಡಿದರು.
ನೇತಾಜಿಯವರ ಬಗ್ಗೆ ಗಾಂಧೀಜಿ ಅಭಿಪ್ರಾಯಗಳು...
ಗಾಂಧೀಜಿ ತಮ್ಮ ಹರಿಜನ್ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ "... ಬೋಸರು ತಮಗೆ ಸರಿ ಎಂದು ಒಂದು ದಾರಿಯನ್ನು ಕಂಡುಕೊಂಡಿದ್ದಾರೆ. ಆ ದಾರಿಯಲ್ಲಿ ನಡೆಯುವುದು ಅವರ ಹಕ್ಕು. ಅದೇ ಅವರ ಕರ್ತವ್ಯ ಕೂಡ ಹೌದು. ಆ ದಾರಿ, ಕಾಂಗ್ರೆಸ್ಸಿಗೆ ಒಪ್ಪಿಗೆಯಾಗಲಿ ಬಿಡಲಿ ಅದು ಬೇರೆ ವಿಚಾರ ಅಷ್ಟೇ ಅಲ್ಲ ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿ ಭಾರತ ಸ್ವತಂತ್ರಗೊಂಡರೆ ಅವರ ಕ್ರಾಂತಿಯನ್ನು ಆ ದಾರಿ ಸಮರ್ಥಿಸಿದಂತೆಯೂ ಆಗುತ್ತದೆ. ಆಗ ಕಾಂಗ್ರೆಸ್ಸು ಆ ಕ್ರಾಂತಿಯನ್ನು ಖಂಡಿಸಲಾರದು, ಎಂಬುದಷ್ಟೇ ಅಲ್ಲ , ಪ್ರತಿಯಾಗಿ ಅವರನ್ನು ಭಾರತದ ರಕ್ಷಕ ಎಂದು ಸ್ವಾಗತಿಸುವುದು." ಈ ಮಾತಿನಲ್ಲಿನ ಕೊಂಕುಗಳನ್ನು ಲೇಖಕರು ಚೆನ್ನಾಗಿ ವಿವರಿಸುತ್ತಾರೆ.. ೧. ಬೋಸರ ದಾರಿ ನನಗೆ ಸರಿ ಕಾಣದು. ನಾನು ಎಂದರೆ ಕಾಂಗ್ರೆಸ್ಸು, ೨. ಬೋಸರ ಹಾದಿಗೆ ಜಯ ಸಿಗುವುದು ಅನುಮಾನ. ೩. ಒಂದು ವೇಲೆ ಯಶಸ್ಸು ಸಿಕ್ಕಲ್ಲಿ ನನಗೆ ಬೇರೆ ವಿಧಿಯಿಲ್ಲದೆ ಒಪ್ಪಿಕೊಳ್ಳುತ್ತೇನೆ.
ಕಾಂಗ್ರೆಸ್ ಅಧ್ಯಕ್ಷರಾದ ಮೇಲೂ ಬೋಸರ ನಿಲುವನ್ನು ಗಾಂಧೀಜಿ ಸಮರ್ಥಿಸುತ್ತಿರಲಿಲ್ಲ. ಗಾಂಧೀಜಿಯವರು ಬೋಸರ ವಿರುದ್ಧವೂ ಅಸಹಕಾರ ಚಳವಳಿ ಮಾಡುತ್ತಲೇ ಇದ್ದರು. ಎರಡನೇ ಬಾರಿಗೆ ಬೋಸರು ಆಯ್ಕೆಯಾಗುವುದು ಗಾಂಧೀಜಿಗೆ ಇಷ್ಟವಿರಲಿಲ್ಲ ಹಾಗಾಗಿ ಪಟ್ಟಾಭಿ ಸೀತಾರಾಮಯ್ಯ ಅವರನ್ನು ತಮ್ಮ ಅಭ್ಯರ್ಥಿಯೆಂದು ನಿಲ್ಲಿಸಿದರು. ಆದರೆ ಬೋಸರಿಗೆ ಪ್ರಚಂಡ ಗೆಲುವಾಯಿತು ಆದರೆ ಆ ಗೆಲುವೆ ಅವರಿಗೆ ಮುಳುವಾಯಿತು ಕೂಡ ಗಾಂಧೀಜಿಯ ಅಸಹಕಾರ ಚಳುವಳಿ ತೀವ್ರವಾಯಿತು.
1939 ಮಾರ್ಚ್ 11, 12, 13ರಲ್ಲಿ ಕಾಂಗ್ರೆಸ್ಸಿನ 52ನೇ ಅಧಿವೇಶನ ಆರಂಭವಾದಾಗ ನೇತಾಜಿ ಒಂದು ಗೊತ್ತುವಳಿ ಮಂಡಿಸಿದರು. " ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಈ ಕೂಡಲೇ ಬ್ರಿಟಿಷರಿಗೆ ಕೊನೆಯ ಎಚ್ಚರಿಕೆಯನ್ನು ನೀಡತಕ್ಕದ್ದು. ಆರು ತಿಂಗಳಿಗೊಳಗಾಗಿ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕು ಎಂದು. ಹಾಗೂ ಅದೇ ಕಾಲಕ್ಕೆ ರಾಷ್ಟ್ರಾದ್ಯಂತ ಹೋರಾಟಕ್ಕೂ ಸಿದ್ಧರಾಗಬೇಕು " ಎಂದು. ಎಂಥಾ ವಿಚಿತ್ರ ನೋಡಿ ಈಗಿನ ವಿರೋಧ ಪಕ್ಷಗಳಂತೆ ಆಗಿನ ಗಾಂಧಿ ನೆಹ್ರೂ ಪಡೆ ಇದಕ್ಕೂ ವಿರೋಧ ವ್ಯಕ್ತಪಡಿಸಿತು.ಆ ಕಾಲಕ್ಕೆ ಗಾಂಧೀಜಿಯವರು ಕಾಂಗ್ರೆಸ್ಸಿನ ಸದಸ್ಯರೂ ಕೂಡ ಆಗಿದ್ದಿರಲಿಲ್ಲವಂತೆ ಆದರೂ ನೇತಾಜಿಯವರ ಪ್ರತಿಯೊಂದು ನಿಲುವಿಗೂ ಗಾಂಧೀಜಿಯವರ ಸಮ್ಮತಿಯ ಅಗತ್ಯವಿತ್ತು. ಬಹುಶ ನೇತಾಜಿಯವರ ಕರೆಯಿಂದ ಸ್ವಾತಂತ್ರ್ಯ ಸಿಕ್ಕರೆ ಅನ್ನೋ ಭಯ ಅವರನ್ನ ಕಾಡಿತ್ತಿತ್ತೇನೋ. ಇಂಥಾ ದುಸ್ಥಿಯಲ್ಲಿದ್ದಾಗಲೇ ಬೋಸರು ಬರೆದಿದ್ದು "ದಿನದಿನವೂ ನಾನು ರಾತ್ರಿ ಹಗಲು ಅಯೋಗ್ಯ ಧೂರ್ತ ರಕ್ಕಸರೊಡನೆ ಹೊಡೆದಾಡಬೇಕಾಗಿದೆ. ಇದಾದ ನಂತರ ನೇತಾಜಿ ತಮ್ಮ ಪದವಿಗೆ ರಾಜೀನಾಮೆ ಇತ್ತರು. ಗಾಂಧೀಜಿಯವರ ಮುಖದಲ್ಲೊಂದು ನಗು ಮೂಡಿರಲೇ ಬೇಕು. ಅಂತೂ ತಮ್ಮ ಮನದಿಚ್ಛೆಯಂತೆ ಒಬ್ಬ ಮಹಾನ್ ನಾಯಕನನ್ನು ತಮ್ಮ ಅಹಿಂಸಾವಾದದ ನೆಪವೊಡ್ದಿ ಮೇಲೇಳದಂತೆ ಮಾಡಿ ಬಿಟ್ಟರು.
ಇಂತಹಾ ಅಚ್ಚರಿಯ ದಾಖಲೆಗಳನ್ನು ಲೇಖಕರಾದ ಡಾ. ಕೆ.ಎಸ್. ನಾರಾಯಣಾಚಾರ್ಯರು ಪುಸ್ತಕದಲ್ಲಿ ಕೊಡುತ್ತಾ ಹೋಗುತ್ತಾರೆ. ಇವುಗಳನೆಲ್ಲಾ ನೋಡಿದಾಗ ನನಗನಿಸುವುದು ನೇತಾಜಿಯವರ ಬಗೆಗಿನ ಅಭದ್ರತೆ ನೆಹರೂರವರನ್ನು ಅಥವಾ ಗಾಂಥೀಜಿಯವರನ್ನು ಅದೆಷ್ಟು ಕಾಡಿತ್ತೆಂದರೆ , ನೇತಾಜಿಯವರನ್ನು ಒಬ್ಬ ಶತ್ರುವನ್ನು ಕಂಡಂತೆಯೇ ಕಾಣತೊಡಗಿದ್ದರೇನೋ. ನೇತಾಜಿಯವರೊಳಗಿನ ಉತ್ಕಟ ದೇಶಪ್ರೇಮ ಬಹುಶಃ ಇವರಿಬ್ಬರಿಗೆ ಕಾಣಿಸಲೇ ಇಲ್ಲ ಅಥವಾ ಅಂಥಾ ದೇಶಪ್ರೇಮದ ಕುರಿತಾಗಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದರೇನೋ..? ಅಥವಾ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಾದರೆ ಅದು ತಮ್ಮಿಂದಲೇ ಸಿಗಬೇಕು ಅನ್ನುವ ಸ್ವಾರ್ಥವಿದ್ದಿತ್ತೋ ಏನೋ ಯಾಕೆಂದರೆ ಹಲವು ಬಾರಿ ಗಾಂಧೀಜಿ ಮತ್ತು ನೆಹ್ರೂರವರ ನಡವಳಿಕೆ ಆ ರೀತಿಯಾಗಿರುತಿತ್ತು. ಅದೇನೇ ಇರಲಿ ಬೋಸರಂಥಾ ಒಬ್ಬ ದೇಶಭಕ್ತನಿಗೆ ತನ್ನವರಿಂದಲೇ ಆದ ಮೋಸವನ್ನು ನೆನೆಸಿದಾಗಲೆಲ್ಲಾ ನನ್ನ ಮನಸ್ಸಿಗೆ ಬಿಕ್ಕಿ ಬಿಕ್ಕಿ ಅಳಬೇಕೆಂದಿನಿಸುತ್ತದೆ.

No comments:

Post a Comment