Saturday 31 October 2015

ಇದೇನಾ....? ಆಧುನಿಕ ಗೆಳೆತನ ..... ?



ಮಂಗಳೂರಿನಲ್ಲಿ ಮಾದಕ ದ್ರವ್ಯದ ಜಾಲಕ್ಕೆ ಸಿಲುಕಿ ಒಬ್ಬ ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ. ಆ ಸಾವಿನ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಶುರು ಮಾಡಿದ್ದಾರೆ... ಪೋಲೀಸರ ವಿರುದ್ಧ ಘೋಷಣೆ ಕೂಗ್ತಾ ಇದ್ದಾರೆ, ಆದರೆ ಈಗ ಕೂಗಿ ಏನು ಪ್ರಯೋಜನ. ಸತ್ತವಳು ಮತ್ತೆ ಎದ್ದು ಬರುತ್ತಾಳೆಯೇ....? ಅವಳು ಬದುಕಿದ್ದಾಗ ಅವಳ ಆಪ್ತ ಮಿತ್ರರಿಗೆ ಅವಳು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾಳೆ ಅನ್ನೋ ಸಣ್ಣ ಸುಳಿವಾದರೂ ಸಿಕ್ಕಿರಲೇ ಇಲ್ವೇ. ಅಥವಾ ಗೊತ್ತಿದ್ದೂ ಸುಮ್ಮನಿದ್ದರೇ. ಒಂದು ವೇಳೆ ಗೊತ್ತಿದ್ದೂ ಸುಮ್ಮನಿದ್ದರು ಅಂತಾದಲ್ಲಿ ಈಗ ಅದ್ಯಾವ ಮುಖವನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ...?
ಈಗಿನ ಗೆಳೆತನವೇ ಹಾಗೆ ಕೆಟ್ಟದರ ಕಡೆ ಹೋಗೋದನ್ನ ತಡೆಯುವ ಬದಲಾಗಿ ಕೆಟ್ಟದರ ಕಡೆ ಕೊಂಡೊಯ್ಯೊ ಗೆಳೆಯ/ತಿ ಯೇ ಪ್ರಾಣ ಸ್ನೇಹಿತರಾಗುತ್ತಾರೆ. ಶಾಲಾ ಕಾಲೇಜುಗಳಲ್ಲಿನ ತರಗತಿಯನ್ನ ತಪ್ಪಿಸಿಕೊಂಡು ಸಿನಿಮಾಗೋ ಇನ್ನೆಲ್ಲಿಗೋ ಹೋದರೆ ಅವರು ಜಿಗರಿ ದೋಸ್ತುಗಳು. ಅಪ್ರಾಪ್ತ ವಯಸ್ಸಿನಲ್ಲಿಯೇ ಕುಡಿಯೋಕೆ ಶುರು ಮಾಡೋ ಇವರಿಗೆ ತನ್ನ ಗೆಳೆಯನೊಬ್ಬ ಕುಡಿಯಲ್ಲ ಅನ್ನೋದು ಗೊತ್ತಾದರೆ ಸಾಕು ಅಪಹಾಸ್ಯ ಮಾಡಿ ಕುಡಿತದ ಚಟ ಶುರು ಮಾಡಿಸಿಯೇ ಸಿದ್ಧ... ಇಲ್ಲವಾದಲ್ಲಿ " ಅವನೋ ದೊಡ್ದ ಗಾಂಧಿ " ಅನ್ನೂ ಹಣೆಪಟ್ಟಿ ಕಟ್ಟಿ ಬಿಡುತ್ತಾರೆ. ಇವರಿಗೆಲ್ಲಾ ಗೆಳೆತನ ಅಂದರೆ ತನ್ನ ಮಿತ್ರರಿಗೆ ಪರೀಕ್ಷೆಯಲ್ಲಿ ಕಾಪಿ ಮಾಡೋಕೆ ಸಹಾಯ ಮಾಡೋನು/ಳು, ಹೋಮ್ ವರ್ಕ್ ಮಾಡದೇ ಇದ್ದಾಗ ನೀನೂ ಮಾಡಬೇಡ ಅನ್ನುತ್ತಾ ಕಾಲೇಜಿನಿಂದ ಹೊರ ಹೋಗೋದಿಕ್ಕೆ ಕಂಪೆನಿ ಕೊಡೋದು , ತಾನು ಮೆಚ್ಚಿದ ಹುಡುಗಿ/ಗನಿಗೆ ಲವ್ ಲೆಟರ್ ಕೊಡೋಕೆ ಹೆಲ್ಪ್ ಮಾಡೋದು ಇವೇ ಗೆಳೆತನದ ನಿದರ್ಶನಗಳು.
ಗೆಳೆತನ ಅಂದರೆ ಬರಿಯ ಫ್ರೆಂಡ್ ಶಿಪ್ ಡೇ ಗೆ ವಿಶ್ ಮಾಡಿ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟೋದಲ್ಲ, ಒಬ್ಬ ಗೆಳೆಯನ ಸುಖ ದುಃಖಗಳೆರಡರಲ್ಲೂ ಭಾಗಿಯಾಗುವವನೆ ನಿಜವಾದ ಗೆಳೆಯ/ತಿ. ಬಹುಷ ಹೆತ್ತವರಿಗೆ ಗೊತ್ತಿರದ ಅದೆಷ್ಟೋ ವಿಷಯಗಳನ್ನ ಒಬ್ಬಾತ/ಕೆ ಅವರ ಗೆಳೆಯರಲ್ಲಿ ಹಂಚಿಕೊಳ್ಳುತ್ತಾರೆ. ಒಬ್ಬಾತ ತಪ್ಪು ಹೆಜ್ಜೆಯನ್ನಿಟ್ಟಿದ್ದಾನೋ ಇಲ್ಲವೋ ಅನ್ನೋದು ಗೆಳೆಯನಿಗೆ ಮೊದಲು ಗೊತ್ತಗೋಗುತ್ತೆ. ಅಂಥಾ ಸಂಧರ್ಭದಲ್ಲಿ ಹಾದಿ ತಪ್ಪದಂತೆ ನೋಡಿಕೊಳ್ಳುದು ನಿಜವಾದ ಗೆಳೆಯನ ಕರ್ತವ್ಯ ಅಲ್ವಾ.
ಮೊನ್ನೆಯ ಘಟನೆಯ ಕುರಿತೇ ಯೋಚಿಸೋಣ, ಆಕೆ ಡ್ರಗ್ಸ್ ಜಾಲಕ್ಕೆ ಸಿಲುಕಿ ಬಿದ್ದಾಗ ಅವಳಿಗೆ ಅದೆಲ್ಲಿಂದ ಸಿಗುತ್ತೆ ಅನ್ನೋದನ್ನ ಅವಳ ಗೆಳೆಯರು ಯಾಕೆ ಪತ್ತೆ ಹಚ್ಚಲಿಲ್ಲ.ಒಬ್ಬ ಹೆಣ್ಣು ಮಗಳಿಗೆ ಡ್ರಗ್ಸ್ ಸಿಗ್ತಾ ಇತ್ತು ಅಂದರೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಅದು ಎಲ್ಲಿ ಸಿಗುತ್ತೆ ಅನ್ನೋದು ಗೊತ್ತಿರಲೇಬೇಕಲ್ವಾ . ಎಲ್ಲೋ ಅವಳ ಗೆಳೆಯರೇ ಇದನ್ನ ತಂದುಕೊಟ್ಟಿರಬೇಕಲ್ವಾ ಹಾಗಿದ್ದರೆ ಈಗ ಈ ಪ್ರತಿಭಟನೆಗಳೆಲ್ಲಾ ಯಾವ ಪುರುಷಾರ್ಥಕ್ಕೆ...? ಈ ಮೊಸಳೆ ಕಣ್ಣೀರು, ನಮಗೇನು ಗೊತ್ತಿಲ್ಲ ಅನ್ನೋದನ್ನ ತೋರಿಸುವುದಕ್ಕಾಗಿಯೇ....?
ವಿದ್ಯಾರ್ಥಿಗಳೇ ಅದೆಷ್ಟು ಕೇಳುತ್ತೀರೋ ಗೊತ್ತಿಲ್ಲ .. ಆದರೆ ನೀವು ನಡೆಯುತ್ತಿರುವ ದಾರಿ ಸರಿಯಿಲ್ಲ, ಈಗಲೇ ಎಚ್ಚೆತ್ತುಕೊಳ್ಳಿ... ಈ ಅನಾಹುತಕ್ಕೆಲ್ಲ ಮೂಲ ನಾವು ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿರುವುದು. ಈ ಪಬ್ ಸಂಸ್ಕೃತಿ ನಮ್ಮ ದೇಶಕ್ಕೆ ಸರಿಯಾಗೋದಿಲ್ಲ. ಇವೆಲ್ಲವೂ ನಮ್ಮನ್ನ ಮಾದಕ ವಸ್ತುಗಳ ದಾಸರನ್ನಾಗಿಸಿ ನಮ್ಮ ಅಂತಃ ಶಕ್ತಿಯನ್ನು ಇಲ್ಲವಾಗಿಸುವ ಹುನ್ನಾರ. ಈ ಕುಡಿತ, ಮೋಜು ಆ ಕ್ಷಣಕ್ಕಷ್ಟೇ ಸುಖವನ್ನ ಕೊಡೋದು, ಆದರೆ ಅದರ ಕೆಟ್ಟ ಪರಿಣಾಮ ಜೀವನ ಪೂರ್ತಿ ನಿಮ್ಮನ್ನ ಕಾಡುತ್ತೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಬರಿಯ ಪ್ರತಿಭಟನೆ ಮಾಡುವ ಬದಲು ಆ "ಡ್ರಗ್ಸ್" ಎಲ್ಲೆಲ್ಲಿ ಸಿಗುತ್ತೆ ಅನ್ನೋದನ್ನ ಪೋಲೀಸರಿಗೆ ಹೇಳೋ ಕೆಲಸ ಮಾಡಿ. ಒಬ್ಬಳನ್ನೆಂತೂ ಕಳೆದುಕೊಂಡಿದ್ದಾಯ್ತು ಇನ್ನು ಮುಂದಾದರೂ ಇಂಥಾ ಘಟನೆಗಳು ಮರುಕಳಿಸದಿರಲಿ, ಯಾಕೆಂದರೆ ನಿಮ್ಮೊಳಗೆ ಇದನ್ನ ಸರಬರಾಜು ಮಾಡುವವರಿರುತ್ತಾರೆ, ನೀವು ಹುಡುಕಬೇಕಷ್ಟೇ.
ನೀವುಗಳು ತಾನೆ ಭವ್ಯಭಾರತದ ಭವಿಷ್ಯ... ನೀವೇ ಮಾದಕ ದ್ರವ್ಯದ ದಾಸರಾದಲ್ಲಿ ದೇಶವನ್ನ ಕಾಪಾಡುವವರ್ಯಾರು...? ಒಮ್ಮೆ ಆತ್ಮ ಚಿಂತನೆ ಮಾಡಿಕೊಳ್ಳಿ. ಅದೆಷ್ಟೋ ಶತಮಾನಗಳಿಂದ ನಮ್ಮ ಸಂಸ್ಕೃತಿ ನಮಗೆ ಒಳ್ಳೆಯದನ್ನೇ ಮಾಡುತ್ತಾ ಬಂದಿದೆ. ಆ ಹಾದಿಯನ್ನೇ ತುಳಿಯೋಣ.
ಇನ್ನು ಪೋಷಕರೇ ನಿಮಗೆ ಕಿವಿ ಮಾತನ್ನು ಹೇಳುವಷ್ಟು ದೊಡ್ದ ವ್ಯಕ್ತಿ ನಾನಲ್ಲ, ಆದರೂ ನಿಮ್ಮ ಮಕ್ಕಳು ಬಾಳಿ ಬದುಕಿ ಈ ದೇಶದ ಹೆಸರನ್ನ ಇನ್ನಷ್ಟು ಎತ್ತರಕ್ಕೇರಿಸಬೇಕಾದವರು, ನಿಮ್ಮ ಅತಿಯಾದ ಮುದ್ದಿನಿಂದ ನಿಮ್ಮದೇ ಕಂದಮ್ಮಗಳನ್ನ ಅಳಿವಿನಂಚಿಗೆ ದೂಡದಿರಿ. ಈ ಪಬ್ ಗಳು ಬರಿಯ ಮನೋರಂಜನಾ ತಾಣವಲ್ಲ. ಅದು ಮಾದಕ ದ್ರವ್ಯಗಳ ವ್ಯಸನಿಗಳನ್ನ ತಯಾರು ಮಾಡೋ ಕೇಂದ್ರ. " ನನ್ನ , ಮಕ್ಕಳು ನಾನು ದುಡಿದ ಹಣವನ್ನ ಖರ್ಚು ಮಾಡೋದು... ನಿಮ್ಮ ಗಂಟೇನು ಹೋಗುತ್ತೆ " ಅನ್ನೋ ಮೊಂಡು ವಾದಗಳು ಬೇಡ. ಒಬ್ಬ ಉತ್ತಮ ಪ್ರಜೆಯನ್ನ ರೂಪಿಸೋದರಲ್ಲಿ ನಿಮ್ಮ ಪಾತ್ರವೂ ಮಹತ್ತರವಾದುದು. ಎಚ್ಚೆತ್ತುಕೊಳ್ಳಿ.. ಭವ್ಯ ಭಾರತದ ಸಂಸ್ಕೃತಿಯನ್ನ ಉಳಿಸೋಣ. ನಿಮ್ಮ ಮಕ್ಕಳಲ್ಲಿ ಅದನ್ನೇ ತುಂಬುವ ಮೂಲಕ ಯುಗ ಯುಗಕ್ಕೂ ಭಾರತವು ಬೆಳಗುವಂತೆ ಮಾಡೋಣ.

No comments:

Post a Comment