Saturday 31 October 2015

ಇತಿಹಾಸದ ಗೋರಿ ಬಗೆದು ಬೇತಾಳ ಹೊರುವವರು--- ಒಂದಷ್ಟು ದ್ವಂದ್ವಗಳು



೧.ನೇತಾಜಿ ಸುಭಾಶ್ ಚಂದ್ರ ಬೋಸರ ಕಣ್ಮರೆ ರಹಸ್ಯ ಕುರಿತ ಚರ್ಚೆ ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಅಷ್ಟು ದಾಖಲೆಗಳಲ್ಲಿ ಇಷ್ಟು ಬಹಿರಂಗಗೊಂಡಿದೆ. ಅದರಲ್ಲಿ “ಜವಾಹರ್ ಲಾಲ್ ನೆಹರೂ ನೇತಾಜಿಗೆ ದ್ರೋಹ ಬಗೆದಿದ್ದು ಸಾಬೀತಾಗಿದೆ” ಇತ್ಯಾದಿ ಮಾತುಗಳು ಗುಂಪುಗಳಲ್ಲಿ ಚರ್ಚೆಯಾಗ್ತಿವೆ. ಇಷ್ಟಕ್ಕೂ ನೆಹರೂ ದ್ರೋಹ ಬಗೆದಿದ್ದರೆಂದೇ ಇಟ್ಟುಕೊಳ್ಳೋಣ. ಸಾಬೀತಾಗಿದೆಯೋ ಇಲ್ಲವೋ, ವಾದಕ್ಕೆ ಇಟ್ಟುಕೊಳ್ಳೋಣ. ಅವರ ಅಂದಿನ ದ್ರೋಹಕ್ಕೆ ಇಂದು ಶಿಕ್ಷಿಸೋದು ಯಾರನ್ನು?
ಚೇತನಾ ತೀರ್ಥಹಳ್ಳಿಯವರೇ... ನೀವೇ ನಿಮ್ಮ ಲೇಖನದಲ್ಲಿ ಹೇಳಿದಿರಿ ಇತಿಹಾಸವನ್ನ ಪಾಠಶಾಲೆಯಾಗಿ ಕಲಿಯಬೇಕು... ಹಾಗಾಗಿ ಈಗ ಹೊರ ಬಂದ ಸತ್ಯ ಕೇವಲ ಅರಿವಿಗಷ್ಟೇ, ಯಾರನ್ನೋ ಶಿಕ್ಷಿಸುವುದಕ್ಕೆ ಇಂದು ಸತ್ಯವನ್ನು ಹೊರತರಲಾಗುತ್ತಿದೆ ಅನ್ನುವ ಊಹೆ ನಿಮಗ್ಯಾಕೆ...? ನೆಹರೂರವರು ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅನ್ಯಾಯ ಮಾಡಿದ್ದು ಈಗಿನ ಭಾರತೀಯರಿಗೆ ಇಂದಿನ ಯುವ ಪೀಳಿಗೆಗೆ ತಿಳಿಯಿತು ಅಂತಾದರೆ ನಿಮಗ್ಯಾಕೆ ಹೊಟ್ಟೆಯುರಿ...? ಯಾವುದು ನಿಜವಾದ ಇತಿಹಾಸ ಯಾವುದು ಸುಳ್ಳು ಅನ್ನುವುದನ್ನು ಕಡತಗಳು ಸಾಬೀತು ಪಡಿಸುತ್ತವೆ ಎಂದಾದಾಗ ಜನರು ತಿಳಿದುಕೊಳ್ಳಲಿ... ಕನಿಷ್ಠ ಮುಂದಿನ ಪೀಳಿಗೆಗಾದರೂ ಪ್ರಥಮ ಪ್ರಧಾನಿ ಎನಿಸಿಕೊಂಡವರ ದೇಶನಿಷ್ಠೆ ಗೊತ್ತಾಗಲಿ... ಗೊತ್ತಾದೊಡನೆ ಯಾರೂ ಅವರ ಕುಟುಂಬಿಕರನ್ನ ಶಿಕ್ಷಿಸುವುದಿಲ್ಲ ಬಿಡಿ... ನಿಮ್ಮ ಪ್ರಕಾರ ಇತಿಹಾಸ ಅಂದರೆ ಯಾರನ್ನೋ ಶಿಕ್ಷಿಸುವುದಕ್ಕಾಗಿ ಇರುವಂಥಾದ್ದು ಅಂತಲೇ...?

೨.ಸುಭಾಷರು ಫ್ಲೈಟ್ ಕ್ರಾಷ್ ನಲ್ಲಿ ಕೊನೆಯಾಗಲಿಲ್ಲ ಅನ್ನುವ ಮಾತು ಇವತ್ತು ನೆನ್ನೆಯದಲ್ಲ. ಅವರು ಜೀವಂತ ಇರಬಹುದು ಅನ್ನುವ ಗುಮಾನಿ ಮತ್ತು ಸ್ವಾತಂತ್ರ್ಯ ಹೋರಾಟದ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಗಳಿಂದಾಗಿ ಅವರ ‘ಕಥೆ’ ಮುಗಿಸಲಾಗಿದೆ ಅನ್ನುವ ಊಹಾಪೋಹಗಳ ನಡುವೆಯೇ ಭಾರತೀಯರು ದಶಕಗಳನ್ನು ಕಳೆದಿದ್ದಾರೆ. ಈ ನಡುವೆ ಈ ಸಂಗತಿಯನ್ನು ಇಟ್ಟುಕೊಂಡೇ ರಾಜಕೀಯ ಲಾಭ ಮಾಡಿಕೊಳ್ಳುತ್ತ ಬಂದವರು ಅಧಿಕಾರ ಸಿಕ್ಕಮೇಲೆ ‘ವಿದೇಶೀ ಸಂಬಂಧಗಳಿಗೆ ಧಕ್ಕೆ’ ಅನ್ನುವ ಮತ್ತದೇ ಹಿಂದಿನ ಸರ್ಕಾರಗಳ ನೆಪವೊಡ್ಡಿದ್ದಾರೆ.

ನಿಮ್ಮ ಲೇಖನದಲ್ಲಿ ಒಂದು ಕಡೆ ಸತ್ಯದ ಅನಾವರಣ ಮಾಡಿರುವುದರಿಂದ ಏನು ಲಾಭ ಅನ್ನುವ ಪ್ರಶ್ನೆ ಎತ್ತುತ್ತಾ ಯಾರನ್ನು ಶಿಕ್ಷಿಸುತ್ತೀರಿ... ಅನ್ನುತ್ತೀರ, ಅದೇ ಮತ್ತೊಂದು ಕಡೆ ಕೇಂದ್ರ ಸರ್ಕಾರ ಇನ್ನೂ ಸತ್ಯ ಬಹಿರಂಗ ಪಡಿಸಿಲ್ಲ ಅನ್ನುತ್ತಾ ರಾಜಕೀಯ ಮಾಡುತ್ತಿದ್ದೀರಿ ಅನ್ನುತ್ತೀರಿ.... ವಾಸ್ತವದಲ್ಲಿ ನಿಮಗೆ ಬೇಕಾಗಿದ್ದು ಏನು...? ಸತ್ಯವೋ ಅಥವಾ ಕೇಂದ್ರ ಸರ್ಕಾರವನ್ನು ದೂರಲು ಒಂದು ನೆಪವೋ...?

೩.ಯಾವ ಇತಿಹಾಸ, ಪುರಾಣ ಅಥವಾ ಧರ್ಮಗ್ರಂಥ ಇಂದಿಗೂ ತನ್ನ ಪ್ರಭಾವ ಉಳಿಸಿಕೊಂಡು ಜನಜೀವನವನ್ನು ದುಸ್ತರವಾಗಿಸ್ತಿವೆಯೋ, ಯಾವ ಸ್ಮೃತಿಗಳ ಆದೇಶಗಳು ಜನರಲ್ಲಿ ಒಡಕು ಮೂಡಿಸ್ತವೆಯೋ, ಅಂಥವನ್ನು ಪ್ರಶ್ನಿಸುವ ಅಗತ್ಯವೂ ಖಂಡಿತ ಇದೆ. ಅವುಗಳ ಪೊಳ್ಳುತನವನ್ನು ಎತ್ತಿ ಆಡುವ, ಚರ್ಚಿಸುವ ಅಗತ್ಯ ಒಂದು ಹಂತದವರೆಗೆ ಇದ್ದೇ ಇದೆ.
ಖಂಡಿತ ಪ್ರಶ್ನಿಸಬಹುದು ಆದರೆ ಕೇವಲ ಒಂದು ಧರ್ಮದ್ದೇ ಪೊಳ್ಳುತನವನ್ನ ಪ್ರಶ್ನಿಸುವ ಕಾರ್ಯವಾಗುತ್ತಿದೆಯಲ್ಲಾ ಅದು ಯಾಕೆ...? ಇನ್ನಿತರ ಇತಿಹಾಸದಲ್ಲಿ ಪುರಾಣ ಅಥವಾ ಧರ್ಮಗ್ರಂಥದಲ್ಲಿ ಪೊಳ್ಳುತನವೇ ಇಲ್ಲವೇ ಅಥವಾ ಅದೇ ಸ್ಮೃತಿಗಳಲ್ಲಿ ಇರುವ ಒಳ್ಳೆಯ ಅಂಶಗಳನ್ನ ಪ್ರಚಾರಗೊಳಿಸೋ ಕಾರ್ಯ ಯಾಕೆ ಆಗುತ್ತಿಲ್ಲ...?

೪.ಗೋಡ್ಸೆಯ ಬಗ್ಗೆ ಹಿಟ್ಲರನ ಬಗ್ಗೆ ಯಾಕೆ ಮಾತಾಡಬೇಕು ಅಂದರೆ, ಇವತ್ತು ಕೂಡ ಜನಾಂಗೀಯ ದ್ವೇಷದ, ಸಿದ್ಧಾಂತ ರೋಷದ ಮಂದಿ ನಮ್ಮ ನಡುವೆ ಇದ್ದಾರೆ ಆದ್ದರಿಂದ. ಅಂಥವರಿಂದ ತೊಂದರೆ ಆಗ್ತಲೇ ಇರುವುದರಿಂದ.
ತೊಂದರೆ ಬರೀ ಒಂದು ಜನಾಂಗದ ಒಂದು ಸಿದ್ದಾಂತದ ರೋಷದ ಮಂದಿಯಿಂದಲೇ ಆಗುತ್ತಿದೆಯೇ...? ಇನ್ನೊಂದು ತುದಿಯಿಂದಲೂ ಇಂಥವುಗಳಾದಾಗ ತಾವು ಮಾತಾಡುತ್ತೀರಾ...?

೫. ಈ ಹೊತ್ತು ನೆನಪಾಗಿದ್ದು: “ಭೂತದಲ್ಲಿ ನೆಲೆಸಿರಬೇಡ. ಭವಿಷ್ಯವನ್ನು ಕನಸುತ್ತ ಕೂರಬೇಡ. ಈ ಕ್ಷಣವನ್ನು ಪರಿಪೂರ್ಣವಾಗಿ ಬದುಕು” ಅನ್ನುತ್ತಾನೆ ಬುದ್ಧ. ನಮ್ಮಲ್ಲಿ ಕೆಲವರು ಇತಿಹಾಸದಿಂದ ಪಾಠ ಕಲಿಯಲು ಬಯಸುತ್ತಿಲ್ಲ. ಇತಿಹಾಸದಲ್ಲೇ ಇದ್ದು ಚಡಪಡಿಸುವ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೇನು ಮದ್ದು?
ತಮ್ಮ ಇಡಿಯ ಲೇಖನವು ಈ ಕ್ಷಣದ ಕುರಿತಾಗಿ ಇಲ್ಲವಲ್ಲ.... ಯಾವುದೋ ಇತಿಹಾಸದ ಸತ್ಯ ಆಧಾರ ಸಹಿತ ಸಿಕ್ಕಿತೆನ್ನುವಾಗ ಆದ ನೋವನ್ನು ಹೇಳಿಕೊಂಡು ಸದಾ ನೀವು ನಿಮಗಾಗದ ಇತಿಹಾಸದಲ್ಲಿನ ಪಾತ್ರಗಳನ್ನ ದೂರುವುದಕ್ಕೆ ಕಾರಣಗಳನ್ನ ನೀವೆ ಕೊಡುವ ಕೆಲಸ ಮಾಡಿದ್ದೀರಿ ಅಷ್ಟೇ ತಾನೇ... ಹಾಗಾದರೆ ನೀವು ಇತಿಹಾಸದಿಂದ ಕಲಿತದ್ದು ಇದೇನಾ... ಇಡಿಯ ಲೇಖನದಲ್ಲಿ ನಿಮ್ಮ ಚಡಪಡಿಕೆ ಕಾಣಿಸುತ್ತಿದೆಯಲ್ಲ ಅದಕ್ಕೇನು ಮದ್ದಿದೆ...?

No comments:

Post a Comment