Thursday 22 October 2015

ಸನ್ಮಾನ್ಯ ರಾಷ್ಟ್ರಪತಿಗಳಿಗೊಂದು ಪತ್ರ....


.
ಸನ್ಮಾನ್ಯ ರಾಷ್ಟ್ರಪತಿಗಳಿಗೆ ನನ್ನ ಸಾದರದ ಪ್ರಣಾಮಗಳು. ನನ್ನ ಹೆಸರು ಕೆ. ಗುರುಪ್ರಸಾದ್ ಆಚಾರ್ಯ. ಭಾರತದ ಕರ್ನಾಟಕದ ನಿವಾಸಿ. ನನ್ನ ಧರ್ಮ ಹಿಂದೂ ಧರ್ಮ. ನಿಮಗೆ ತಿಳಿದಿರುವಂತೆ ಭಾರತದ ಮೂಲ ಧರ್ಮ.... ಹಿಂದೂ ಧರ್ಮ. ಈ ಧರ್ಮ ಈ ದೇಶಕ್ಕೆ ಕೊಟ್ಟ ಮತ್ತು ಕೊಡುತ್ತಿರುವ ಕೊಡುಗೆಗಳು ಅಪಾರ. ಭಾರತಕ್ಕೆ ಜನ ಪ್ರವಾಸಿಗರಾಗಿ ಬರುತ್ತಿದ್ದಾರೆ ಅನ್ನುವುದಾದರೆ ಅದು ಇಲ್ಲಿನ ದೇವಾಲಯಗಳ ಅಪೂರ್ವ ಶಿಲ್ಪಕಲೆ ಮತ್ತು ಈ ದೇಶದ ವಿಶಿಷ್ಟ ಮತ್ತು ಪ್ರಾಚೀನ ಸಂಸ್ಕೃತಿಯ ಆಸ್ವಾದನೆಗಾಗಿ. ಮತ್ತು ಹಿಂದೂ ಧರ್ಮದ ಆಧ್ಯಾತ್ಮಿಕ ಜ್ನಾನಕ್ಕಾಗಿ. ಭಾರತ ಇಂದು ಸರ್ವ ಧರ್ಮಗಳ ಬೀಡು ಆಗಿರೋದರಲ್ಲೂ ಇಲ್ಲಿನ ಮೂಲ ನಿವಾಸಿಗಳಾದ ಹಿಂದೂಗಳ ಹೃದಯ ವೈಶಾಲ್ಯತೆ ಮತ್ತು ಧರ್ಮ ಸಹಿಷ್ಣುತೆಯೇ ಕಾರಣ ಅಂದರೆ ಅದು ಅತಿಶಯೋಕ್ತಿ ಆಗಲಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ನನ್ನನ್ನು ನಾನು ಹಿಂದೂ ಎನ್ನಲು ಅಭಿಮಾನ ಪಡುತ್ತೇನೆ. ಹಾಗೆಂದು ನನಗೆ ಇತರ ಧರ್ಮಗಳ ಬಗ್ಗೆ ದ್ವೇಷ ಇಲ್ಲ. ಎಲ್ಲಾರಿಗೂ ಅವರವರ ಧರ್ಮವೇ ದೊಡ್ದದು.... ಅನ್ನೋದು ನನ್ನ ಅಭಿಪ್ರಾಯ . ಈ ರೀತಿ ನಿಮಗೆ ಹಿಂದೂ ಧರ್ಮದ ಕುರಿತಾಗಿ ಯಾಕೆ ಹೇಳುತ್ತಿದ್ದೇನೆ ಅನ್ನುವ ಅನುಮಾನ ನಿಮ್ಮನ್ನು ಕಾಡುತ್ತಿರಬಹುದು, ಕಾರಣ ಇದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ನೋಡುವಾಗ ಯಾಕೋ ಹಿಂದೂಗಳ ಮೇಲಿನ ದೌರ್ಜನ್ಯ ಅತಿಯಾಗುತ್ತಿದೆ ಹಾಗೂ ಇದನ್ನು ನಿಮ್ಮ ಗಮನಕ್ಕೆ ತರಬೇಕು ಅಂತನಿಸಿತು. ಇದರ ಪಟ್ಟಿ ಮಾಡಲು ಬಯಸುವುದಿಲ್ಲ.( ಮಾಡಹೊರಟರೆ ಮುಗಿಯುವುದೋ ಇಲ್ಲವೋ ಎನ್ನುವ ಅನುಮಾನವೂ ಇದೆ ) ಈ ಪತ್ರ ಬರೆಯಲು ಪ್ರೇರಣೆ ಕೊಟ್ಟಿದ್ದು " ರಾಮಸೇತು "
ಬಹುಶ ಸಾಹಿತ್ಯ ಲೋಕಕ್ಕೆ ಭಾರತದ ಮಹಾನ್ ಕೊಡುಗೆಗಳಲ್ಲಿ " ಮಹಾಭಾರತ " ಮತ್ತು " ರಾಮಾಯಣ " ಅಗ್ರಗಣ್ಯವಾದದ್ದು. ಇದು ಬರಿಯ ಸಾಹಿತ್ಯವಾಗಿರದೆ ಹಿಂದೂಗಳಿಗೆ ಧರ್ಮಗ್ರಂಥವೇ ಆಗಿದೆ. ಇಂತಹಾ ರಾಮಾಯಣದ ಘಟನೆಗಳಿಗೆ ಮಹತ್ವದ ಸಾಕ್ಷಿಯಂತಿರುವ ರಾಮಸೇತು, ಭಾರತದಿಂದ ಲಂಕಾದವರೆಗಿನ ಮಾನವ ನಿರ್ಮಿತ ಸೇತುವೆಯನ್ನ ಕೇಂದ್ರ ಸರ್ಕಾರ ಒಡೆಯಲು ನಿರ್ಧರಿಸಿ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟುತ್ತಿರುವ ಆಘಾತಕರ ಸುದ್ದಿ ಕೇಳಿ ನನ್ನಿಂದ ತಡೆಯಲಾಗಲಿಲ್ಲ. ಹಾಗಾಗಿ ನಿಮಗೀ ಪತ್ರ ಬರೆಯುತ್ತಿದ್ದೇನೆ. ಇತ್ತೀಚೆಗಷ್ಟೇ ಇಬ್ಬರು ಕುಖ್ಯಾತ ಉಗ್ರರಿಗೆ ಮರಣದಂಡನೆ ವಿಧಿಸಿರುವ ನಿಮ್ಮಿಂದ ನ್ಯಾಯದ ನಿರೀಕ್ಷೆಯಲ್ಲಿದ್ದೇನೆ. ( ತುಟಿ ಪಿಟಿಕ್ ಅನ್ನಲೂ ವಿದೇಶಿ ಮಹಿಳೆಯೊಬ್ಬಳ ಆದೇಶಕ್ಕೆ ಕಾಯುವ ನಮ್ಮ ದೇಶದ ಪ್ರಧಾನ ಮಂತ್ರಿಯಿಂದ ನ್ಯಾಯ ದೊರಕುತ್ತದೆಂಬ ಎಳ್ಳಷ್ಟೂ ನಂಬಿಕೆ ನನಗಿಲ್ಲ.)
ರಾಮಸೇತು ಅನ್ನುವುದು ಈ ದೇಶದ ಬಹುಸಂಖ್ಯಾತರ ಶ್ರದ್ಧೆಯ ವಿಚಾರ. ಒಂದು ದೇಶ ಅಥವಾ ರಾಜ್ಯ ಹೇಗಿರಬೇಕು ಅಂತಂದರೆ ಸಾಕು ಯಾರೇ ಆಗಲಿ ಹೇಳುವುದು "ರಾಮ ರಾಜ್ಯ" ದ ಹಾಗಿರಬೇಕು ಅಂತ . ಈ ದೇಶದ ರಾಷ್ಟ್ರಪಿತ ಗಾಂಧೀಜಿಯವರ ಕನಸು ಕೂಡ ಭಾರತ ರಾಮರಾಜ್ಯವಾಗಬೇಕೆಂಬುದೇ ಆಗಿತ್ತಲ್ಲ. ಅಂತಹಾ ಶ್ರೀ ರಾಮನಿಂದ ನಿರ್ಮಿಸಲ್ಪಟ್ಟ ಸೇತುವೆಯೇ ರಾಮಸೇತು. ಬಹುಶ ಸಾಗರಕ್ಕೆ ಸೇತುವೆಯನ್ನು ನಾವು ಪುರಾಣಗಳ ಕಾಲದಲ್ಲೇ ಕಟ್ಟಿದ್ದೆವು ಅನ್ನುವುದು ನಮಗೆ ಅಭಿಮಾನದ ಮಾತಾಗಬೇಕಿತ್ತು. ಅದರಲ್ಲೂ ಅಚ್ಚರಿಯೆಂಬಂತೆ ಕೆಲವು ದೊಡ್ದ ದೊಡ್ಡ ಕಲ್ಲುಗಳು ನೀರಿನಲ್ಲಿ ಮುಳುಗದೇ ತೇಲುತ್ತಿರುವುದು ಇಂದಿನ ವಿಜ್ನಾನ ಲೋಕಕ್ಕೂ ಒಂದು ಸವಾಲೇ ಸರಿ. ಈ ರೀತಿ ಹಲವು ಅದ್ಭುತಗಳಿಗೆ ಕಾರಣವಾದ ರಾಮಸೇತುವನ್ನ ಜಗತ್ತಿನ ಅದ್ಭುತಗಳಲ್ಲಿನ ಪಟ್ಟಿಯಲ್ಲಿ ಸೇರಿಸುವ ಕೆಲಸ ಮಾಡಬೇಕಾಗಿದ್ದ ಸರ್ಕಾರವೇ ....ಹಡಗುಗಳ ಪ್ರಯಾಣದಲ್ಲಿನ ಉಳಿತಾಯ ಮತ್ತು ಥೋರಿಯಂ ನಿಕ್ಷೇಪ ಇದೆ ಅನ್ನೋ ಕಾರಣಕ್ಕಾಗಿ ಒಡೆದು ಹಾಕಲು ಹೊರಟಿರುವುದು ಎಂತಹಾ ದುರಂತ...
ಮಾನ್ಯರೇ,... ಬಹುಶ ಹಿಂದೂ ಧರ್ಮೀಯರು ಅನ್ಯ ಧರ್ಮಗಳ ಆಕ್ರಮಣಕ್ಕೊಳಗಾಗಿ ತಮ್ಮ ಹಲವಾರು ಮಠ ಮಂದಿರಗಳನ್ನ , ಪುಣ್ಯಕ್ಷೇತ್ರಗಳನ್ನ ಕಳೆದು ಕೊಂಡಾಗಿದೆ. ಈ ಎಲ್ಲಾ ದಾಳಿಗಳನ್ನು ಸಹಿಸಿಕೊಂಡು ಉಳಿದಿರುವ ಅಲ್ಪ ಸ್ವಲ್ಪವನ್ನಾದರೂ ಸಂರಕ್ಷಿಸಬೇಕಾದದ್ದು ನಮ್ಮ ಕರ್ತವ್ಯ ಅಲ್ಲವೇ...? ಅದ್ಯಾರೋ ಹೊರದೇಶದ ಲೂಟಿಕೋರನ ಹೆಸರಿನಲ್ಲಿ ನಿರ್ಮಾಣವಾಗಿದ್ದ ಮಸೀದಿಯನ್ನು ಕೆಡವಿದುದನ್ನು ಹೇಯಕೃತ್ಯ ಎಂದೆನ್ನುವ ಸರ್ಕಾರ , ಇಂದು ತಾನೇ ಬಹುಸಂಖ್ಯಾತರ ಶ್ರದ್ಧೆಗೆ ಕೊಡಲಿಯೇಟು ಕೊಡಲು ಹೊರಟಿರುವುದು ನಿಮಗೆ ಸರಿಯೆಂದನಿಸುತ್ತದೆಯೇ...? ಇರಲಿ ಶ್ರದ್ಧೆಯ ವಿಚಾರವನ್ನು ಬದಿಗಿರಿಸಿ ವಿಜ್ನಾನಿಗಳ ಮಾತನ್ನಾಲಿಸಿದರೂ ರಾಮಸೇತುವನ್ನು ಒಡೆಯುವುದು ಮೂರ್ಖತನದ ಕೆಲಸ. ಕಾರಣ ಸುನಾಮಿಯಂತಹಾ ಪ್ರಾಕೃತಿಕ ವಿಕೋಪಗಳಿಂದ ಭಾರತವನ್ನ ರಕ್ಷಿಸುವ ಮಹತ್ತರದ ಕೆಲಸ ರಾಮಸೇತುವಿನಿಂದಾಗುತ್ತಿದೆ. ಇದು ಹಿಂದೂಗಳ ಧರ್ಮ ಪ್ರೇಮಾಧಾರಿತ ಕಥೆಯಲ್ಲ. ವಿಜ್ನಾನಿಗಳ ಅಧ್ಯಯನದ ಫಲಶ್ರುತಿ. ಇದನ್ನು ಒಡೆಯುವ ಮೂಲಕ ಭಾರತೀಯರ ಜೀವನದ ಜೊತೆ ಆಟವಾಡಲು ಹೊರಟಿದೆಯೇ ಸರ್ಕಾರ...?
ಸ್ವಾಮೀ....ಥೋರಿಯಂ ನಿಕ್ಷೇಪ ಅಧಿಕವಿದೆ... ಹಲವು ವರ್ಷಗಳ ವರೆಗೆ ವಿದ್ಯುತ್ ಸಮಸ್ಯೆ ನಿವಾರಿಸಬಹುದು ಎಂದೆನ್ನುವ ಸರ್ಕಾರಕ್ಕೆ ನಿಮ್ಮ ಮೂಲಕ ಪ್ರಶ್ನೆಯೊಂದನ್ನ ಕೇಳ ಬಯಸುತ್ತೇನೆ... ಮುಂದೊಂದು ದಿನ ತಾಜ್ ಮಹಲ್ ಅಡಿಯಲ್ಲಿ ಇಂತಹುದ್ದೇ ಅಮೂಲ್ಯ ಖನಿಜವೊಂದರ ನಿಕ್ಷೇಪ ಇದೆ ಎಂದು ಗೊತ್ತಾದಲ್ಲಿ ಅದನ್ನೂ ಒಡೆದು ಹಾಕುತ್ತಾರೆಯೇ... ಖಂಡಿತ ಇಲ್ಲ ತಾನೆ. (ಇಂತಹಾ ತಾರತಮ್ಯದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿವೆ. ) ಹಾಗಿದ್ದ ಮೇಲೆ ಬಹುಸಂಖ್ಯಾತರ ಭಾವನೆಗಳ ಜೊತೆ ಈ ರೀತಿಯ ಚೆಲ್ಲಾಟವೇಕೆ. ಇಡಿಯ ಜಗತ್ತೇ ಅಚ್ಚರಿ ಪಡುವ ಐತಿಹಾಸಿಕ ತಾಣವೊಂದರ ನಾಶವನ್ನು ನಾವು ನಮ್ಮ ಕೈಯಾರೆ ಮಾಡಿದರೆ ಲೋಕ ನಮ್ಮನ್ನು ಕಂಡು ನಗಲಿಕ್ಕಿಲ್ಲವೇ. ಇದೇ ಒಂದು ವೇಳೆ ವಿದೇಶದಲ್ಲಿದ್ದಿದ್ದರೆ ಅವರು ಅದನ್ನು ಅವರ ಅಭಿಮಾನದ ಸಂಕೇತವಾಗಿರಿಸುತ್ತಿದ್ದರು. ಹಾಗಿದ್ದರೆ ನಮ್ಮ ಸರ್ಕಾರಕ್ಕೆ ಯಾಕೆ ಅದು ಅಭಿಮಾನದ ಸಂಕೇತವಾಗಿಲ್ಲ.
ನನ್ನಂಥಾ ಅದೆಷ್ಟೋ ಹಿಂದೂಗಳ ಭಾವನೆಯ ಜೊತೆ ಆಟವಾಡಲು ಹೊರಟಿರುವ ಕೇಂದ್ರ ಸರ್ಕಾರದ ಕಿವಿ ಹಿಂಡಿ ಬುದ್ಧಿ ಮಾತನ್ನು ಹೇಳುತ್ತೀರಿ ಎನ್ನುವ ನಂಬಿಕೆಯಿಂದ ನಿಮಗೆ ಈ ಪತ್ರ ಬರೆದಿದ್ದೇನೆ. ಹಾಗಂತ ನೀವು ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಲದೇ ಸುಮ್ಮನಿದ್ದರೆ ನಾವು ಕೂಡ ಸುಮ್ಮನಿರುತ್ತೇವೆ ಎಂದರ್ಥವಲ್ಲ. ಸಹನೆ ಎನ್ನುವುದು ಹಿಂದೂಗಳ ಹಲವು ಗುಣಗಳಲ್ಲಿ ಒಂದು. ಈ ಸಮಾಧಾನದ ಮಾತು ಬರಿಯ ಸರ್ಕಾರದ ಆಲೋಚನೆಯನ್ನು ಬದಲಾಯಿಸುವ ಸಲುವಾಗಿ ಮಾತ್ರ. ಒಂದು ವೇಳೆ ಈ ಯೋಜನೆಯನ್ನ ಕೈಗೆತ್ತಿಕೊಳ್ಳುವುದು ನಿಜಾವಾದಲ್ಲಿ ಹಿಂದೂಗಳ ಕೋಪದ ವಿರಾಟ್ ರೂಪವನ್ನು ತೋರಿಸಬೇಕಾಗುತ್ತದೆ..ಹಾ ಇದು ಬರಿಯ ಮಾತಲ್ಲ ನೂರಕ್ಕೆ ನೂರು ಸತ್ಯ... ನೀವು ಸುಮ್ಮನಿದ್ದರೂ ರಾಮಸೇತುವನ್ನ ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇವೆ.
ಇಂತೀ,
ಗುರುಪ್ರಸಾದ್ ಆಚಾರ್ಯ, ಕುಂಜೂರು

No comments:

Post a Comment