Saturday 31 October 2015

ಕಾಳಜಿಯ ಹೆಸರಲ್ಲೊಂದು ಪ್ರಚಾರದಾಸೆ...



ಮೊನ್ನೆ ರಕ್ಷಾ ಬಂಧನದ ದಿನ ಟಿವಿ ಚಾನಲ್ ಚೇಂಜ್ ಮಾಡ್ತಾ ಇರಬೇಕಾದ್ರೆ " ರಾಜ್ ನ್ಯೂಸ್ " ಅನ್ನೋ ಚಾನಲ್ಲಿನಲ್ಲಿ ಒಂದು ಚರ್ಚೆ ಆಗ್ತಾ ಇತ್ತು. ವಿಚಿತ್ರ ಹೆಡ್ ಲೈನ್.... " ತಿರುಪತಿ ತಿಮ್ಮಪ್ಪನಿಗೆ ಕುಳಿತುಕೊಳ್ಳಲು ಕುರ್ಚಿ ಕೊಡಿ.... " ಯಾರೋ " ನರಸಿಂಹ ಮೂರ್ತಿ " ಎಂಬಾತ ಹೀಗೊಂದು ದೂರು ನೀಡಿದ್ದಾನಂತೆ, ಮಾನವ ಹಕ್ಕುಗಳ ಆಯೋಗಕ್ಕೆ. ಹಲವು ಶತಮಾನಗಳಿಂದ ತಿರುಪತಿಯ ತಿಮ್ಮಪ್ಪ ನಿಂತುಕೊಂಡೇ ಇದ್ದಾನೆ ಹಾಗಾಗಿ ಅವನಿಗೆ ಸಾಕಾಗಿರುತ್ತೆ, ಅವನಿಗೆ ಕುಳಿತುಕೊಳ್ಳಲು ಕುರ್ಚಿಯೊಂದನ್ನು ಕೊಡಬೇಕು ಅಂತ. ಅಬ್ಬಾ ಹೆಡ್ಡಿಂಗ್ ನೋಡಿದ ಕೂಡಲೇ ಛೇ... ಅದೇನು ಕಾಳಜಿ ಅಂತ ಯಾರಾದರೂ ತಿಳಿದುಕೊಂಡಾರು ಅಲ್ವಾ ಆದರೆ ಈ ವಿಚಿತ್ರ ವ್ಯಕ್ತಿಯ ಕಾಳಜಿಯ ಹಿಂದಿರುವ ಉದ್ದೇಶ ಬೇರೆಯೇ.. ಚರ್ಚೆ ಮುಂದುವರಿಯುತ್ತಿದ್ದಂತೆ ಆತನ ಕಾಳಜಿಯ ಪರದೆ ಹರಿಯತೊಡಗಿತ್ತು. ನೋಡ ಹೋದರೆ ಆತನೊಬ್ಬ ಪಕ್ಕಾ ನಾಸ್ತಿಕವಾದಿ. ನಿಜಕ್ಕೂ ಅವನನ್ನ ಕಾಡತೊಡಗಿದ್ದು ತಿಮ್ಮಪ್ಪನ ಕಾಲುನೋವಲ್ಲ ಅಲ್ಲಿ ಹೆಚ್ಚುತ್ತಿರುವ ಆಸ್ತಿಕರ ಆರಾಧನೆ.
ನಿಜಕ್ಕೂ ತಿರುಪತಿಯಲ್ಲೀಗ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಅಲ್ಲಿ ಬಂದು ತಮ್ಮ ಹರಕೆ ಸಲ್ಲಿಸಿ ಕೃತಾರ್ಥರಾದ ಭಾವದಿಂದ ಮನೆಗೆ ತೆರಳುತ್ತಾರೆ. ಬಹುಶ ಈ ನಾಸ್ತಿಕವಾದಿಗೆ ಇದು ಖಂಡಿತ ಹಿಡಿಸಿರಲಿಕ್ಕಿಲ್ಲ. ತಾನು ನಂಬಿರೋ ಸಿದ್ಧಾಂತದ ವಿರೋಧಿಗಳ ಪ್ರಾಬಲ್ಯ ಆತನಲ್ಲಿ ಹೊಟ್ಟೆಯುರಿ ತರಿಸಿರಬಹುದು. ಈ ಹೊಟ್ಟೆ ಉರಿ ಮತ್ತು ತನಗೆ ತನ್ನ ನಂಬಿಕೆಗೆ ಪ್ರಚಾರ ಸಿಗಬೇಕು ಅನ್ನೋ ದಾಹ, ಇವೆರಡೂ ಈತನನ್ನ ಈ ರೀತಿ ಮಾಡುವಂತೆ ಮಾಡಿರಬಹುದು. ಸುಮ್ಮನೆ ಆಸ್ತಿಕರ ಈ ಅರಾಧನೆಯ ಬಗ್ಗೆ ಹೇಗೆ ತಕರಾರು ಎತ್ತೋದು....? ಅದಕ್ಕೆ ಈ ವಾಮಮಾರ್ಗ. ದೇವರಿಗೆ ಕಾಲು ನೋಯುತ್ತೆ ಅವರಿಗೊಂದು ಕುರ್ಚಿ ಕೊಡಿ ಎಂದವ ಚರ್ಚೆಯಲ್ಲಿ ಹೇಳತೊಡಗಿದ್ದು ಬೇರೆಯೇ... ಇಲ್ಲದ ದೇವರಿಗೆ ಅಲ್ಲಿ ಪೂಜೆಯ ನೆಪದಲ್ಲಿ ಹಣ ಪೋಲಾಗುತ್ತಿದೆ ಎಂದ. ಅಲ್ಲಿಗೆ ಅವನ ನಾಸ್ತಿಕತನದ ನಿಜ ಬಣ್ಣ ಬಯಲಾಗಿತ್ತು.
ಆಸ್ತೀಕತೆ ಮತ್ತು ನಾಸ್ತಿಕತೆಯ ಬಗ್ಗೆ ಇನ್ನೊಮ್ಮೆ ಬರೆಯೋಣ ಈ ಬಾರಿ ಬೇಡ. ಆದರೆ ನಾನು ಕಂಡಂತೆ ಸಾಮಾನ್ಯವಾಗಿ ಆಸ್ತಿಕರಿಗೂ ನಾಸ್ತಿಕರಿಗೂ ಇರುವ ಒಂದು ಪ್ರಾಮುಖ್ಯವಾದ ವ್ಯತ್ಯಾಸ ಅಂದರೆ, ಅದು ಇನ್ನೊಬ್ಬರ ಭಾವನೆಗೆ ಗೌರವ ಕೊಡೋದು. ಒಬ್ಬ ಆಸ್ತಿಕ ನಾಸ್ತಿಕನ ನಂಬಿಕೆಗೆ ಬೆಲೆ ಕೊಟ್ಟು ಸುಮ್ಮನಿದ್ದು ಬಿಡುತ್ತಾನೆ, ಆದರೆ ನಾಸ್ತಿಕ ಹಾಗಲ್ಲ.. ಅವನಿಗೆ ಆಸ್ತಿಕನ ಆಚರಣೆಗಳನ್ನ ಮೂದಲಿಸೋದಂದರೆ ಪಂಚಪ್ರಾಣ. ಇಂತಹುದೇ ದೃಶ್ಯ ಈ ನಾಸ್ತಿಕನ ಮಾತಿನಲ್ಲೂ ಕಾಣಸಿಕ್ಕಿತ್ತು. ಎಲ್ಲಿಯವರೆಗೆ ಅಂದರೆ ಚರ್ಚೆಗೆಂದು ಬಂದಿದ್ದ ಧಾರ್ಮಿಕ ವ್ಯಕ್ತಿಯೊಬ್ಬರಿಗೆ ನಿಮಗೇನು ಗೊತ್ತು...? ಬರಿಯ ಗಂಟೆ ಹಿಡಕೊಂಡು ಅಲ್ಲಾಡಿಸೋದಷ್ಟೇ ಗೊತ್ತು ಅಂತೆಲ್ಲಾ ಹೇಳಿದ. ( ಪುಣ್ಯಕ್ಕೆ ನಿರೂಪಕಿ ಈ ವಿಚಾರವಾಗಿ ಆತನನ್ನ ತರಾಟೆಗೆ ತೆಗೆದುಕೊಂಡಿದ್ದು ಎಲ್ಲೋ ಒಂದಷ್ಟು ಸಮಾಧಾನ ಕೊಟ್ಟಿತು.)
ಇಂಥಾ ಜನಗಳೇ ಹಾಗೆ ಏನನ್ನಾದರೂ ಸಾಧಿಸಿ ಹೆಸರು ಗಳಿಸೋಕ್ಕೆ ಮನಸ್ಸು ಮಾಡೋದೇ ಇಲ್ಲ. ಅದು ಅಷ್ಟೇನು ಸುಲಭನೂ ಅಲ್ಲ ಅಲ್ವಾ...ಹಾಗಾಗೇ ಇಂಥಾ ಜನಗಳಿಗೆಲ್ಲಾ ಸುಲಭವಾಗಿ ಸಿಗೋದು ಒಂದೇ ದಾರಿ ಅಂತಂದ್ರೆ ಸನಾತನ ಧರ್ಮದ ಆಚರಣೆಯನ್ನೋ.... ದೇವರನ್ನೋ ದೂರೋದು... ಹೀಗಾದಾಗ ಒಂದಷ್ಟು ಜನ ಧರ್ಮದ ಬಗೆಗೆ ಶೃದ್ಧೆಯಿರುವವರು ವಿರೋಧಿಸುತ್ತಾರೆ. ಹೀಗೆ ವಿರೋಧಿಸಿದ ಕೂಡಲೇ ಒಂದಷ್ಟು ಜನ ಬುದ್ಧಿಜೀವಿಗಳು ಈ ಹೊಸ ಬುದ್ಧಿಜೀವಿಯ ಬೆಂಬಲಕ್ಕೆ ಬರುತ್ತಾರೆ... ಸರಿ ಅಲ್ಲಿಗೆ ಮುಗಿದೋಯ್ತು ಬಿಡಿ ಪ್ರಚಾರಾನೇ ಪ್ರಚಾರ... ಕೆಲವೊಂದು ಪೇಯ್ಡ್ ಮೀಡಿಯಾಗಳ ಪಾಲಿಗೆ ಇಂಥಾ ಪ್ರಚಾರಪ್ರಿಯರು ವಿದ್ವಾಂಸರಾಗಿ ಕಾಣಿಸಿ ಬಿಡ್ತಾರೆ. ಚರ್ಚೆ ಮಾಡ್ತಾ ಮಾಡ್ತಾ ಒಂದಷ್ಟು ಹಣಾನೂ ಮಾಡಬಹುದು... ಅಥವಾ ಟಿ. ಎನ್. ಸೀತಾರಾಂ ನಂಥವರ ಧಾರಾವಾಹಿಯಲ್ಲಿ ಒಂದು ರೋಲ್ ಕೂಡ ಸಿಗಬಹುದು... ಇಷ್ಟು ಆರಾಮದ ಹಾದಿ ಇರೋವಾಗ ಅದ್ಯಾರಿಗೆ ಬೇಕು ಅಲ್ವಾ ಸಾಧನೆಯ ಹಾದಿ.
ಆ ಚರ್ಚೆಯಲ್ಲಿ ಆ ವ್ಯಕ್ತಿ ಇನ್ನೊಂದು ವಿಚಿತ್ರ ವಾದ ಮಾಡಿದ್ದ... ಇಲ್ಲದ ದೇವರ ಹೆಸರಿನಲ್ಲಿ ತಿರುಪತಿಯಲ್ಲಿ ಧಂಧೆ ಆಗ್ತಿದೆ ಅಂತಾನೆ... ಅದೇ ದೂರು ನೀಡೋವಾಗ ತಿಮ್ಮಪ್ಪನಿಗೆ ಕಾಲು ನೋಯಬಹುದು ಅಂತಾನೆ... ಈ ದ್ವಂದ್ವ ಹೇಳಿಕೆಯನ್ನು ಸಮರ್ಥಿಕೊಳ್ಳೋಕೆ ಅವನ ಬಳಿ ಯಾವುದೇ ಬಲವಾದ ಕಾರಣಗಳಿಲ್ಲ. ಇದರ ಅರ್ಥ ಏನು... ಪ್ರಚಾರದ ದುರಾಸೆಯೇ ಅಲ್ವಾ...ಇಂಥಾ ಪ್ರಚಾರ ಪ್ರಿಯರೆಲ್ಲರೂ ಸ್ವಲ್ಪ ಬುದ್ಧಿವಂತರೇ ಕಾರಣ... ಜಾಣತನದಿಂದ ಹಿಂದೂ ಧರ್ಮದ ವಿರುದ್ಧವೇ ಮಾತಾಡುತ್ತಾರೆ... ಅಯ್ಯೋ ಅದೆಷ್ಟೋ ಸಮಯದಿಂದ ಏಸು ಕ್ರಿಸ್ತನ ಕೈಗೆ ಮೊಳೆ ಹೊಡೆಯಲಾಗಿದೆ ಅದನ್ನ ತೆಗೀರೀ ಅಂತಲೋ... ಅಥವಾ ಇನ್ನಾವುದೋ ಮಸೀದಿಯೊಂದರ ಸಮಾಧಿಯಲ್ಲಿರುವ ಸಂತರಿಗೆ ಉಸಿರುಕಟ್ಟಬಹುದು ಎಂದು ಎಬ್ಬಿಸಿ ಕೂರಿಸಿ ಅಂತಾನೋ... ಹೇಳೋದೇ ಇಲ್ಲ.... ಕಾರಣ ಪ್ರಾಣ ಭಯ... ಇನ್ನುಳಿದ ಧರ್ಮಗಳ ವಿರುದ್ಧ ಮಾತಾಡಿದರೆ ಆ ಧರ್ಮಾನುಯಾಯಿಗಳು ಸುಮ್ಮನೆ ಬಿಡೋದಿಲ್ಲ ಅಂತ ಅವರಿಗೂ ಗೊತ್ತಿದೆ. ಅದೇ ಹಿಂದೂಗಳಲ್ಲಾದರೆ.... ಒಂದಷ್ಟು ಜನ ವಿರೋಧಿಸಿ ತಣ್ಣಗಾಗಿ ಬಿಡುತ್ತಾರೆ ಅಷ್ಟೇ.. ನಿಜಕ್ಕೂ ಇಷ್ಟೊಂದು ಬುದ್ಧಿಜೀವಿಗಳ ಸೃಷ್ಟಿಗೆ ಎಲ್ಲೋ ನಮ್ಮ ಸನಾತನ ಧರ್ಮದ ಅತಿಯಾದ ಸಹನೆಯೇ ಕಾರಣ ಅಂತ ಘಂಟಾಘೋಶವಾಗಿ ಸಾರಬಹುದು.
ಅದೇನೇ ಇರಲಿ ಆ ತಿರುಪತಿ ತಿಮ್ಮಪ್ಪ ಮತ್ತು ಅವನ ಭಕ್ತಾದಿಗಳು ಇಂಥಾ ನಾಸ್ತಿಕನ ಅರಚಾಟಕ್ಕೆ ಕಿವಿಕೊಡಲಿಲ್ಲವಲ್ಲಾ ಅದೇ ಸಮಾಧಾನ.

No comments:

Post a Comment