Saturday 31 October 2015

OH MY GOD.... ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು...ಭಾಗ 2



ಹಿಂದಿನ ಬಾರಿ ಹೇಳಿದಂತೆ ಕಾಂಜೀಯ ದೇವರ ಮೇಲಿನ ಕೇಸ್ ಅನ್ನು ಜಡ್ಜ್ ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದಂತಹ ಆಸ್ತಿಕರ ನಾಡಿನಲ್ಲಿ ದೇವರ ಮೇಲೆ ಕೇಸ್ ಹಾಕಿದರೆ ಬದುಕಿಯಾನೆ...? ಅವನ ಮೇಲೆ ರಾಜಕೀಯ ಪ್ರೇರಿತ ಆಕ್ರಮಣವಾಗುತ್ತೆ. ಹಾಗೂ ಹೀಗೂ ತಲೆ ತಪ್ಪಿಸಿ ಓಡುತ್ತಿರುವಾಗ ಆತನ ರಕ್ಷೆಗಾಗಿ ಬರುವವನೇ ಆಧುನಿಕ ಧಿರಿಸಿನ ಭಗವಂತ. ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ... ಹಾ ಭಗವಂತನೇ ಈತನ ಸಹಾಯಕ್ಕಾಗಿ ಬರುತ್ತಾನೆ.
ಇತ್ತ "Act of God " ನಿಂದಾಗಿ ಕಷ್ಟಕ್ಕೊಳಗಾದವರೆಲ್ಲಾ ಕಾಂಜೀಯ ಸಹಾಯದಿಂದ ಮಸೀದಿ , ಚರ್ಚುಗಳಿಗೆ ನೋಟೀಸು ಕಳುಹಿಸುತ್ತಾರೆ. ಒಂದು ಹೊತ್ತಿನಲ್ಲಿ ಮೀಡಿಯಾಗಳಿಗೆ ಸುದ್ದಿಯ ವಿಷಯ ಆಗೋದಿಲ್ಲ ಅಂದಿದ್ದ ಕಾಂಜೀ "ಶ್ರೀ ಕೃಷ್ಣನ" ಮಾತು ಕೇಳಿ ಟೀವಿ ಚಾನಲ್ ಒಂದಕ್ಕೆ ಸಂದರ್ಶನ ಕೊಡುತ್ತಾನೆ. ಅಲ್ಲಿ ಆತ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿ ಜನರ ಬೆಂಬಲ ಗಳಿಸುತ್ತಾನೆ. ಅಲ್ಲಿನ ಕೆಲವೊಂದು ಗೊಂದಲಗಳು ಹೀಗಿವೆ. ಒಂದು ಪ್ರಶ್ನೆಗೆ ಉತ್ತರಿಸುತ್ತಾ ಕಾಂಜೀ ಹೇಳುತ್ತಾನೆ, ಜನ ನನಗೆ ಸಣ್ಣದಿನಿಂದಲೂ ದೇವರು ನಮ್ಮ ತಂದೆಯ ಹಾಗೆ ಅಂತ ಹೇಳಿಕೊಟ್ಟಿದ್ದಾರೆ. ಹಾಗಾಗಿ ನಾನು ನನ್ನ ತಂದೆಯನ್ನು ನನ್ನ ಹಕ್ಕಿನ ಕುರಿತಾಗಿ ಕೇಳುತ್ತಿದ್ದೇನೆ ಅಂತ ಹೇಳುತ್ತಾನೆ... ವಿಚಿತ್ರ ನೋಡಿ ತನ್ನ ಸುಳ್ಳಿನ ಮೂಲಕ ಉತ್ತಮ ವ್ಯಾಪಾರ ಆಗುತ್ತಿದ್ದಾಗ ಭಗವಂತನಿಲ್ಲ ಅನ್ನುತ್ತಿದ್ದಾಗ ಬಾಲ್ಯದಲ್ಲಿ ದೇವರ ಬಗೆಗೆ ಹೇಳಿಕೊಟ್ಟಿದ್ದು ನೆನಪಾಗುತ್ತಿರಲಿಲ್ಲ, ಹಠಾತ್ ಅಂಗಡಿ ಬಿದ್ದು ನಷ್ಟವಾಗಿದೆ ಅಂದಾಗ ಮಾತ್ರ , ದೇವರು ಅಂದರೆ ನನ್ನ ತಂದೆ ಅನ್ನೋ ಬಾಲ್ಯದ ಮಾತು ನೆನಪಾಗುತ್ತೆ.... ಮುಂದೆ ಹರಕೆಗೆ ಕೂದಲು ಅರ್ಪಿಸುವುದರ ಬಗ್ಗೆ ಹೇಳುತ್ತಾ, ನೀವು ಶ್ರದ್ಧೆಯಿಂದ ಅರ್ಪಿಸಿದ ಕೂದಲನ್ನು ವಿದೇಶಗಳಿಗೆ ಮಾರಲಾಗುತ್ತದೆ, ನಿಮ್ಮ ಶ್ರದ್ಧೆಯ ವ್ಯಾಪಾರವಾಗುತ್ತದೆ ಅನ್ನುತ್ತಾನೆ. ಇಲ್ಲೊಂದು ವಿಷಯ ಗಮನಿಸಿ, ದೇವರ ವಿಗ್ರಹದ ಮೇಲಿನ ನಂಬಿಕೆ ಅಥವಾ ಶ್ರದ್ಧೆಯಿಂದ ಅದನ್ನು ಕೊಳ್ಳಲು ಬಂದವರಿಗೆ ಕಟ್ಟು ಕಥೆ ಹೇಳಿ ಅಧಿಕ ಬೆಲೆಗೆ ಮಾರುವುದು ಮತ್ತು ತಾವು ಹರಕೆಯಾಗಿ ಒಪ್ಪಿಸಿದ ನಿರುಪಯೋಗಿ ಕೂದಲನ್ನು ( ಕೂದಲಂತೂ ಕೆಲವು ಸಮಯದ ನಂತರ ಬಂದೇ ಬರುತ್ತದೆ) ವಿದೇಶಕ್ಕೆ ಮಾರುವುದು ಇವುಗಳೆರಡರಲ್ಲಿ ಯಾವುದು ಶ್ರದ್ಧೆಗೆ ಅಪಚಾರವಾಗುವಂತದು ?.... ಮುಂದೆ ಕೆಲವು ಜ್ಯೋತಿಷಿಗಳ ಬಗ್ಗೆ ಅಥವಾ ಮಂದಿರಗಳ ಬಗ್ಗೆ ಹೇಳುತ್ತಾ ಕಾಂಜೀ ಹೇಳುತ್ತಾನೆ " ಮಾಫಿಯಾದವರು ಯಾವರೀತಿ ಗನ್ ತೋರಿಸಿ ಹೆದರಿಸುತ್ತಾರೋ ಅದೇ ರೀತಿ ಈ ಮಂದಿರದವರು ಭಗವಂತನನ್ನು ತೋರಿಸಿ ಹೆದರಿಸುತ್ತಾರೆ " ಆದ್ರೆ ಮಾಫಿಯಾದವರು ನಿಮ್ಮ ಮನೆಗೆ ಬಂದು ಹೆದರಿಸಿದಂತೆ ಮಂದಿರದವರು ಎಲ್ಲೂ ಮನೆಗೆ ಬಂದು ಹೆದರಿಸುವ ಪರಿಪಾಠ ಎಲ್ಲೂ ಇಲ್ಲವಲ್ಲ. ನಂಬಿಕೆ ಇದ್ದವ ಮಾತ್ರ ಹೋಗೋದು , ಜನರೇ ಹೋಗುತ್ತಿದ್ದಾರೆ ಅಂತಾದಲ್ಲಿ ಮಂದಿರಗಳನ್ನು ದೂರುವುದರಲ್ಲಿ ಅರ್ಥವಿದೆಯೇ? ಮುಂದುವರಿದು ಆತನಲ್ಲಿ ಧರ್ಮದ ಪರಿಭಾಷೆ ಏನು ಅಂತ ಕೇಳಿದಾಗ ಕಾಂಜೀ ಹೇಳೋದು " ಎಲ್ಲಿ ಧರ್ಮವಿದೆಯೋ ಅಲ್ಲಿ ಸತ್ಯ ಇರುವುದಿಲ್ಲ, ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ" ಅಂತ. ಆತನ ಎರಡನೇ ವಾಕ್ಯ ಒಪ್ಪಬಹುದೇನೋ ಆದರೆ ಮೊದನೆಯದು ಧರ್ಮ ಅನ್ನೋದರ ಅರ್ಥ ಗೊತ್ತಿರದವ ಮಾತ್ರ ಹಾಗೆ ಹೇಳಲು ಸಾಧ್ಯ ಅನ್ನೊದು ನನ್ನ ಅಭಿಪ್ರಾಯ.ಕೊನೆಯ ಪ್ರಶ್ನೆಯಾಗಿ ನಿರೂಪಕಿ ಧರ್ಮ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ಕೆಲಸ ಮಾಡುತ್ತೆ ಅನ್ನೋದಕ್ಕೆ ಕಾಂಜೀಯ ಉತ್ತರ ಧರ್ಮ ಒಂದೋ ವ್ಯಕ್ತಿಯನ್ನು ನಿಸ್ಸಹಾಯಕನನ್ನಾಗಿ ಮಾಡುತ್ತೆ ಅಥವಾ ಆತಂಕವಾದಿಯನ್ನಾಗಿ ಮಾಡುತ್ತದೆ ಅನ್ನುತ್ತಾನೆ. ಆದರೆ ನನಗೆ ತಿಳಿದಂತೆ ಯಾವುದೇ ಧರ್ಮವನ್ನು ಸರಿಯಾಗಿ ಓದಿ ಅದರೊಳಗಿನ ತಿರುಳನ್ನು ನಿಜವಾಗಿ ಅರ್ಥೈಸಿಕೊಂಡರೆ ಆತ ನಿಸ್ಸಹಾಯಕ ಅಥವಾ ಆತಂಕವಾದಿಯಾಗಲೂ ಸಾಧ್ಯವೇ ಇಲ್ಲ. ಬರಿಯ ತಪ್ಪು ಕಲ್ಪನೆಯಿಂದ ಮಾತ್ರ ಹಾಗಾಗಲು ಸಾಧ್ಯ.
ಮುಂದೆ ಕೋರ್ಟಿನಲ್ಲಿ ವಾದ ನಡೆಸೋ ಹೊತ್ತಿಗೆ ಮಂದಿರಗಳ ಬಗ್ಗೆ ಒಂದಷ್ಟು ಕುಹಕ ಮಾಡುತ್ತಾನೆ ಉದಾಹರಣೆಗೆ ಮಂದಿರವನ್ನು ಶಾಪಿಂಗ್ ಮಾಲ್ ಅನ್ನೋದು, ಶಿವಲಿಂಗವನ್ನು ಬರಿಯ ಕಲ್ಲು ಅನ್ನೋದು ( ಈ ರೀತಿ ಹೇಳುವಾಗ ಟೀವಿ ಮುಂದೆ ನಾನು ಎಲ್ಲ ಧರ್ಮವನ್ನೂ ಗೌರವಿಸುತ್ತೇನೆ ಎಂದಿದ್ದನ್ನು ಮರೆತು ಬಿಡುತ್ತಾನೋ ಏನೋ). ಮುಂದೆ ಮೂರ್ತಿಗೆ ಮಾಡೋ ಹಾಲಿನಾಭಿಷೇಕದ ಬಗ್ಗೆ ಹೇಳುತ್ತಾ, ಜನರು ಸಾಲು ಸಾಲಾಗಿ ಕಲ್ಲಿಗೆ ಹಾಲು ಎರೆಯುತ್ತಾರೆ, ಅದೆಲ್ಲ ಚರಂಡಿಗೆ ಹೋಗಿ ಹಾಳಾಗುತ್ತದೆ. ಆದರೆ ಹೊರಗಿರೋ ಭಿಕ್ಷುಕನಿಗೆ ಮಾತ್ರ ಯಾರೂ ಕೊಡಲ್ಲ, ಹಾಲನ್ನು ವೇಸ್ಟ್ ಮಾಡಲಾಗುತ್ತದೆ ಅನ್ನುತ್ತಾನೆ. (ದೇವಳದ ಮಹತ್ವ ಅದರ ಹಿಂದಿರೋ ವೈಜ್ನಾನಿಕತೆಯ ಬಗ್ಗೆ ಇನ್ನೊಮ್ಮೆ ಪೋಸ್ಟ್ ಮಾಡುತ್ತೇನೆ). ನನ್ನ ಪ್ರಶ್ನೆ ಹಾಲಿನ ಅಭಿಷೇಕ ಅಥವ ದೇವರ ಮೂರ್ತಿಗೆ ಮಾಡೋ ಅಭಿಷೇಕದ ಮಹತ್ವ ಏನೆಂದರಿಯದೇ ವೇಸ್ಟ್ ಅಂತ ಹೇಗೆ ಹೇಳುತ್ತೀರಾ... ಹಾಗೆ ನೋಡಿದರೆ ಪಂಚತಾರ ಹೋಟೇಲಿನಲ್ಲಿ, ಅಥವಾ ಶ್ರೀಮಂತರ ಮದುವೆಯಲ್ಲಿ, ದೊಡ್ಡ ದೊಡ್ದ ಕಂಪನಿಗಳ ಪಾರ್ಟಿಗಳಲ್ಲಿ ಆಗೋ ವೇಸ್ಟ್ ಇದರ ಮುಂದೆ ಕಾಲ ಕಸಕ್ಕೆ ಸಮ ಅಲ್ವಾ ಅದನ್ನು ಯಾಕೆ ಪ್ರಶ್ನಿಸೋಲ್ಲ ? ಭಿಕ್ಷುಕನಿಗೆ ತನ್ನ ಹಾಲನ್ನು ಕೊಟ್ಟೆ ಅನ್ನುತ್ತಾನೆ ಆದರೆ ಅದುವರೆಗಿನ ಅವನ ವ್ಯಕ್ತಿತ್ವವನ್ನು ಗಮನಿಸಿದರೆ ಆ ರೀತಿ ಮಾಡುವ ಸಾಧ್ಯತೆಯನ್ನು ಮನಸೇಕೋ ಒಪ್ಪಿಕೊಳ್ಳುವುದಿಲ್ಲ. ( ಇಲ್ಲಿ ಮತ್ತೊಂದು ವಿಷಯ ಆತ ಯಾವ ರೀತಿ ಅರ್ಪಿಸಿದ ಕೂದಲಿನ ಧಂಧೆಯ ಬಗ್ಗೆ ಮಾಹಿತಿ ಕೊಡುತ್ತಾನೋ ಅದೇ ರೀತಿ ಭಿಕ್ಷೆಯ ವಿಷಯದಲ್ಲೂ ದಂಧೆ ನಡೆಯುತ್ತೆ ಅನ್ನೋದನ್ನು ಹೇಳಬೇಕಿತ್ತು ಆದರೇಕೋ ಅದರ ಪ್ರಸ್ತಾವನೆಯೇ ಬರುವುದಿಲ್ಲ)
ಹಾಗೆ ವಾದ ಮುಂದುವರಿಯುತ್ತಾ ಇರುವಾಗ ಎದುರುಗಡೆ ಲಾಯರ್ ಈ ಭೂಕಂಪವನ್ನು ದೇವರೇ ಮಾಡಿದ್ದು ಅನ್ನೋದಕ್ಕೆ ಸಾಕ್ಷಿ ಕೊಡಿ ಅನ್ನುತ್ತಾರೆ.... ಆಗ ಕಾಂಜೀ ನಿರುತ್ತರನಾಗುತ್ತಾನೆ. ಕೋರ್ಟ್ ಒಂದು ತಿಂಗಳ ಅವಧಿಯನ್ನು ಕೊಡುತ್ತದೆ.
ಮುಂದೇನಾಗುತ್ತೆ ಮತ್ತು ನನ್ನ ಇನ್ನಷ್ಟು ಗೊಂದಲಗಳನ್ನು ಮುಂದೆ ಇನ್ನೊಮ್ಮೆ ಪೋಸ್ಟ್ ಮಾಡುತ್ತೇನೆ.

No comments:

Post a Comment