Saturday 31 October 2015

OH MY GOD ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು ಭಾಗ 3



ಹಿಂದಿನ ಪೋಸ್ಟಿನಲ್ಲಿ ಹೇಳಿದ್ದೆ ಈ ಭೂಕಂಪವನ್ನು ಭಗವಂತನೇ ಮಾಡಿಸಿದ್ದು ಅನ್ನೋದಕ್ಕೆ ಪ್ರೂಫ್ ತೋರಿಸಿ ಅನ್ನುತ್ತಾರೆ ಎದುರುಗಡೆ ಲಾಯರ್.ಕಾಂಜೀ ನಿಜಕ್ಕೂ ಚಿಂತಿತನಾಗುತ್ತಾನೆ. ಈ ಹಂತದಲ್ಲಿ ಶ್ರೀಕೃಷ್ಣ ಕಾಂಜೀಗೆ ಮತ್ತೆ ಸಹಾಯ ಮಾಡುತ್ತಾ... ಭಗವದ್ಗೀತವನ್ನೊಮ್ಮೆ ಓದಿ ನೋಡು ಅದರಲ್ಲಿ ಜೀವನದ ಎಲ್ಲ ಸಮಸ್ಯೆಗೂ ಪರಿಹಾರವಿದೆ ಅನ್ನುತ್ತಾನೆ. ಹಾಗೆ ಗೀತೆ, ಬೈಬಲ್, ಕುರಾನ್ ಮೂರನ್ನು ಒಂದು ತಿಂಗಳ ಅವಧಿಯಲ್ಲಿ ಓದಿಸುತ್ತಾನೆ. ತದನಂತರ ವಾದದಲ್ಲಿ ಕಾಂಜೀ ಗೀತೆ, ಖುರಾನ್ ಮತ್ತು ಬೈಬಲ್ ಗಳಲ್ಲಿನ ಕೆಲವೊಂದು ಮಾತುಗಳನ್ನು ಮುಂದಿಟ್ಟು ಭೂಕಂಪ ದೇವರೇ ಮಾಡಿದ್ದು ಅನ್ನೋದನ್ನ ಪ್ರೂವ್ ಮಾಡುತ್ತಾನೆ. ಹಾಗೇ ಸ್ವಾಮೀಜಿಗಳ ಅಪಹಾಸ್ಯವೂ ಮಾಡುತ್ತಾನೆ. ಈಗಿನ ಸ್ವಾಮೀಜಿಗಳಿಗೆ ನಿಜವಾದ ಭಗವದ್ಗೀತೆಯ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ ಅನ್ನುತ್ತಾ ಗೀತೆಯಲ್ಲಿನ ಶ್ಲೋಕಗಳನ್ನು ಹೇಳುತ್ತಾ ಎಲ್ಲರನ್ನೂ ಆಶ್ಚರ್ಯಚಕಿತನನ್ನಾಗಿಸುತ್ತಾನೆ. ಈ ಹಂತದಲ್ಲಿ ಚಿತ್ರದ ನಿರ್ದೇಶಕರು ಒಂದಷ್ಟು ಅತಿರೇಕದ ಸಂಭಾಷಣೆಯನ್ನು ಸೇರಿಸಿದ್ದಾರೇನೋ ಅಂತ ನನಗನ್ನಿಸುತ್ತದೆ ಕಾರಣ ಇನ್ಸೂರೆನ್ಸ್ ಕಂಪೆನಿಗೂ ಸ್ವಾಮೀಜಿಗಳಿಗೂ ಜಗಳವಾಗಿಸುವ ದೃಶ್ಯ ಚಿತ್ರೀಕರಿಸುತ್ತಾ ಸ್ವಾಮೀಜಿಯೊಬ್ಬರ ಕೈಯಲ್ಲಿ " ದೇವರ ಮೇಲೆ ನಮ್ಮದೇ ಕಾಪಿರೈಟ್ ಇದೆ " ಅನ್ನುತ್ತಾನೆ... ಬಹುಶ ಎಂಥಾ ಡೋಂಗೀ ಸನ್ಯಾಸಿಯಾದರೂ ಕೋರ್ಟಿನಲ್ಲಿ, ಅದೂ ಹಲವು ಜನಗಳ ಮುಂದೆ ಇಂಥಾ ಮಾತುಗಳನ್ನು ಆಡಲು ಸಾಧ್ಯವೇ....? ನನ್ನ ಮನಸಂತೂ ಇದನ್ನೇಕೋ ಒಪ್ಪುತ್ತಿಲ್ಲ. ಇರಲಿ ಬಿಡಿ...ಆ ಸ್ವಾಮೀಜಿಯ ಮಾತು ಕೇಳಿ ಬೇಸರಗೊಳ್ಳುವ ಕಾಂಜೀ ಹೀಗನ್ನುತ್ತಾನೆ... ನನಗನ್ನಿಸುತ್ತದೆ ನಿಜವಾಗಿಯೂ ಭಗವಂತ ಇರಲು ಸಾಧ್ಯವೇ ಇಲ್ಲ, ಇರುತ್ತಿದ್ದರೆ ಇಂತಹಾ ಸ್ವಾಮೀಜಿಗಳನೆಲ್ಲಾ ಸುಮ್ಮನೆ ಬಿಡುತ್ತಿರಲಿಲ್ಲ ಅನ್ನುತ್ತಾನೆ.(ಇಲ್ಲಿ ಸ್ಪಷ್ಟವಾಗುತ್ತದೆ ನಿರ್ದೇಶಕರಿಗೆ ಭಗವಂತನ ಅಸ್ತಿತ್ವದ ಬಗ್ಗೆ ಹೇಳುವುದಕ್ಕಿಂತಲು ಸ್ವಾಮೀಜಿಗಳ ಬಗ್ಗೆ ದೂರುವುದರಲ್ಲೇ ಆಸಕ್ತಿ ಜಾಸ್ತಿ ಅಂತ.) ಹಾಗೇ ಕಾಂಜೀ ಭಗವಂತ ಇರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಂತೆ ಆತನಿಗೆ ಲಕ್ವ ಹೊಡೆಯುತ್ತದೆ. ಆಸ್ಪತ್ರೆಗೆ ಸೇರಿಸಿದ ನಂತರ ಯಾರನ್ನೂ ಒಳಬಿಡದ (ಹೆಂಡತಿ ಮಕ್ಕಳಿಗೂ ಬಿಡೋದಿಲ್ಲ) ಡಾಕ್ಟರ್ ಕಾಂಜೀ ಕೋಮಾದಲ್ಲಿದ್ದಾರೆ ಅನ್ನುತ್ತಾರೆ. ಇಲ್ಲಿಂದ ಮುಂದೆ ಹಲವು ನಾಟಕೀಯ ದೃಶ್ಯಗಳಿವೆ. ಶ್ರೀಕೃಷ್ಣ ಪವಾಡದ ಮೂಲಕ ಕಾಂಜೀಯ ಲಕ್ವಾವನ್ನು ಸರಿ ಪಡಿಸೋದು, ತನ್ನ ನಿಜರೂಪವನ್ನು (ಪುರಾಣದಲ್ಲಿನ ಶ್ರೀಕೃಷ್ಣನಂತೆ) ತೋರಿಸೋದು, ಒಂದು ತಿಂಗಳ ಅವಧಿಯಲ್ಲಿ ಕಾಂಜೀಯ ಜೀವನದಲ್ಲಾದ ಘಟನೆಗಳನ್ನು ತೋರಿಸೋದು... ಆ ಒಂದು ತಿಂಗಳಲ್ಲಿ ಮೊದಲಿಗೆ ಕೋರ್ಟು ಕಾಂಜೀ ಪರವಾಗಿ ಕೇಸು ಹಾಕಿದವರ ಎಲ್ಲರ ಪರವಾಗಿ ತೀರ್ಪು ಕೋಡುತ್ತದೆ. ಮಠ ಮಂದಿರಗಳು ಎಲ್ಲರ ಹಣವನ್ನೂ ಪಾವತಿಸುತ್ತದೆ. ಅದೇ ಹೊತ್ತಿನಲ್ಲಿ ಸ್ವಾಮೀಜಿಗಳೆಲ್ಲ ಸೇರಿ ಕಾಂಜೀಯನ್ನೆ ದೇವರ ಅವತಾರ ಎಂದು ಪ್ರಚಾರ ಮಾಡುತ್ತಾರೆ (ಕಾಂಜೀ ಚಿತ್ರ, ಭಕ್ತಿಗೀತೆಗಳನ್ನು ಮಾಡೋದರಲ್ಲಿ ಒಂದಷ್ಟು ಅತಿಯಾದ ಅಪಹಾಸ್ಯ್ವಿದೆ) ಒಂದು ತಿಂಗಳ ನಂತರ ಕಾಂಜೀ ಸಮಾಧಿಯಾಗಲಿದ್ದಾರೆ ಅನ್ನುತ್ತಾ ಪ್ರಚಾರ ಮಾಡುತ್ತಾರೆ. ಆಗ ಕಾಂಜೀ ಶ್ರೀಕೃಷ್ಣನನ್ನು ಪ್ರಶ್ನಿಸುತ್ತಾನೆ ನೀನೇಕೆ ಇದನ್ನು ತಡಿಯಲಿಲ್ಲ ಎಂದು, ಆಗ ಶ್ರೀಕೃಷ್ಣ ನನಗೆ ಜನರಿಗೆ ಅರಿವು ನೀಡುವುದಷ್ಟೇ ನನ್ನ ಕೆಲಸ, ಮಾಡಬೇಕಾದದ್ದು ನೀನೆ ಅನ್ನುತ್ತಾ ಆತನ ಸಮಾಧಿಯಾಗಬೇಕಾದ ಜಾಗಕ್ಕೆ ತಲುಪಿಸುತ್ತಾನೆ. ಅಲ್ಲಿ ಕಾಂಜೀಯ ಮೂರ್ತಿ ಮಾಡಿ ದೇವಸ್ಥಾನ ಮಾಡುವ ಆತುರದಲ್ಲಿದ್ದ ಜನರಿಗೆ ಕಾಂಜೀ ಬುದ್ಧಿ ಹೇಳುತ್ತಾನೆ. ದೇವರು ಕಲ್ಲಿನ ಮೂರ್ತಿಗಳಲ್ಲಿ ಇರುವುದಿಲ್ಲ. ಜನರಲ್ಲಿ ದೇವರನ್ನು ಕಾಣಿ ಆಗ ಭಗವಂತ ಸಿಗುತ್ತಾನೆ. ಹಾ ಖಂಡಿತ ಒಪ್ಪಲೇಬೇಕಾದ ಮಾತು ಇದರಲ್ಲಿ ಸಂಶಯವೇ ಇಲ್ಲ. ಅಲ್ಲಿ ನೆರೆದಿದ್ದ ಸ್ವಾಮೀಜಿಗಳನೆಲ್ಲಾ ಹೊಡೆಯಲು ಮುಂದಾಗುವ ಜನರನ್ನು ತಡೆದು ಅವರನ್ನು ಹೋಗಲೂ ಬಿಡುತ್ತಾನೆ. ಹಾ ಹಾಗೆಯೇ ಇನ್ನು ಮುಂದೆ ಯಾರೂ ಸ್ವಾಮೀಜಿಗಳ ಆಶ್ರಮಕ್ಕೆ ಹೋಗಬೇಡಿ ಮತ್ತು ಮಠ ಮಂದಿರಗಳಿಗೆ ಚಂದಾ ಅಥವಾ ಹಣಕೊಡಬೇಡಿ ಎಂದು ಜನರಿಗೆ ಆದೇಶ ಮಾಡುತ್ತಾನೆ. ಈ ರೀತಿ ಚಿತ್ರ ಕೊನೆಗೊಳ್ಳುತ್ತದೆ. ( ಆಶ್ರಮಗಳಿಗೆ ಹೋಗಬೇಡಿ ಎಂದು ನಿರ್ದೇಶಕರು ಹೇಳಿದರೂ ಅವರಿಗೆ ಜನರು ಅದೇ ರೀತಿ ಮಾಡಿಯಾರೂ ಅನ್ನೋ ನಂಬಿಕೆ ಇಲ್ಲ , ಅದೇ ಕಾರಣಕ್ಕೆ ಸ್ವಾಮೀಜಿಯವರೊಬ್ಬರಲ್ಲಿ ಈ ರೀತಿ ಹೇಳಿಸುತ್ತಾರೆ. ಜನರಿಗೆ ದೇವರ ಮೇಲೆ ಇರೋದು ಭಕ್ತಿಯಲ್ಲ , ಭಯ ಹಾಗಾಗಿ ಜನ ಬಂದೇ ಬಂದಾರು ಅಂತ... ಹಾ ಇದಂತೂ ಅಪ್ಪಟ ಸತ್ಯ... ನಾವು ಎಡವೋದು ಇಲ್ಲೇ ಅಂತ ನನಗೂ ಅನ್ನಿಸಿದೆ)
ಈಗಿನ ಯುವ ಜನತೆಗೆ ಬಹಳ ಹಿಡಿಸಿದ ಚಿತ್ರ ಇದು, ಕಾರಣ ಎಲ್ಲರಿಗೂ ದೇವರು ಅನ್ನೋ ಕಾನ್ಸೆಪ್ಟ್ ಅಷ್ಟು ಹಿಡಿಸೋದಿಲ್ಲವಲ್ಲ. ಮಜಾ ಮಾಡೋದೆ ಹವ್ಯಾಸ ದೇವಸ್ಥಾನಕ್ಕೆ ಹೋಗದಿರಲು ಹೊಸ ಕಾರಣ ಸಿಕ್ಕ ಹಾಗಾಯ್ತು ಅಲ್ವಾ.ನನಗೆ ಕಂಡ ಹಾಗೆ ನಿರ್ದೇಶಕರು ಒಂದಷ್ಟು ವಿಷಯವನ್ನು ಜನರ ಮುಂದಿಟ್ಟಿದ್ದಾರೆ.
1. ಭಗವಂತ ಇದ್ದಾನೆ, ಆದರೆ ಆತ ಮಠ ಮಂದಿರಗಳಲ್ಲಿ ಇಲ್ಲ. ಹಾಗಾಗಿ ದೇವಸ್ಥಾನಕ್ಕೆ ಹೋಗೋದು, ಹಣ ಹಾಕೋದು ಇವೆಲ್ಲ ವ್ಯರ್ಥ.
2. ವಿಗ್ರಹಾರಾಧನೆಯಲ್ಲಿ ಅರ್ಥವೇ ಇಲ್ಲ, ಈ ಆಚರಣೆಗಳೆಲ್ಲವೂ ಭಗವಂತನಿಗೇ ಇಷ್ಟವಿಲ್ಲ.( ಕಾಂಜೀ ಮೂಲತಃ ವಿಗ್ರಹ ವ್ಯಾಪಾರಿ ಆತ ತನ್ನ ಮುಂದಿನ ಜೀವನೋಪಾಯಕ್ಕೆ ವಿಗ್ರಹಗಳನ್ನು ಮಾರುತ್ತಾನಾ ? ಅನ್ನೋದೊಂದೊ ಯಕ್ಷಪ್ರಶ್ನೆ ಆಗಿ ಬಿಡುತ್ತದೆ)
3. ಈ ಸ್ವಾಮೀಜಿಗಳೆಲ್ಲರೂ ಡೋಂಗಿಗಳು ಅವರ ಸೇವೆ ಮತ್ತು ಆಶ್ರಮಕ್ಕೆ ಭೇಟಿ ಕೊಡುವುದು ನಿಷ್ಪ್ರಯೋಜಕ.
ಹಿಂದಿನ ಕಾಲದಿಂದಲೂ ಭಗವಂತ ಇದ್ದಾನೆ ಅಥವಾ ಇಲ್ಲ ಅನ್ನೋದು ಬಹು ಚರ್ಚಿತ ವಿಷಯ ಮತ್ತು ವೈಯಕ್ತಿಕ, ಅದನ್ನು ಅವರವರ ಮನಸ್ಸಿಗೆ ಬಿಡೋಣ. ಆದರೆ ದೇವಸ್ಥಾನದ ಪರಿಕಲ್ಪನೆ ಮತ್ತು ವಿಗ್ರಹಾರಾಧನೆ ಇವೆಲ್ಲವೂ ಮಾನವನ ಶಕ್ತಿಯ ಉದ್ದೀಪನಕ್ಕಾಗಿಯೇ ನಿರ್ಮಾಣವಾದಂತವು. ಇವೆಲ್ಲವನ್ನು ಸಾರಾಸಗಟಾಗಿ ಬೇಕಾಗೇ ಇಲ್ಲ, ಅಂತ ಹೇಳೋದು ತಪ್ಪು ಅನ್ನೋದು ನನ್ನ ಭಾವನೆ ( ದೇವಸ್ಥಾನಗಳು ಹೇಗೆ ನಮ್ಮ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ ಅನ್ನೋದನ್ನು ಇನ್ನೊಂದು ಪೋಸ್ಟಿನಲ್ಲಿ ವಿಸ್ತಾರವಾಗಿ ಇನ್ನೊಮ್ಮೆ ಹಾಕುತ್ತೇನೆ)
ವಿಗ್ರಹಾರಾಧನೆಯ ಬಗ್ಗೆ ಪ್ರಖ್ಯಾತ ಕಾದಂಬರಿಕಾರ ಭೈರಪ್ಪ ಅವರು ತಮ್ಮ ಧರ್ಮಶ್ರೀ ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸುತ್ತಾರೆ. ದೇವರು ನಿರಾಕಾರ ಅನ್ನೋದು ಒಪ್ಪಿಕೊಳ್ಳುವ ವಿಷಯವಾದರೂ ಸಾಮಾನ್ಯ ಜನರಿಗೆ ಅದನ್ನು ಪರಿಕಲ್ಪಿಸಿ ದೇವರ ಬಗೆಗೆ ಚಿಂತಿಸುವುದು ಕಷ್ಟ ಸಾಧ್ಯ, ಹಾಗಾಗಿ ವಿಗ್ರಹಾರಾಧನೆ ಸಾಮಾನ್ಯ ಜನರ ಸುಲಭಕ್ಕಾಗಿ ಮಾಡಿರುವಂತದ್ದು. ನೀವು ಆಧ್ಯಾತ್ಮಿಕವಾಗಿ ಸಾಧನೆ ಮಾಡಿದವರಾಗಿದ್ದರೆ ನಿಮಗೆ ನಿರಾಕಾರ ರೂಪಿ ಭಗವಂತನನ್ನು ಆರಾಧಿಸುವುದು ಸಾಧ್ಯವಾದೀತು. ಆದರೆ ಜನ ಸಾಮಾನ್ಯರ ಪಾಡೇನು? ಸರಳವಾಗಿ ಹೇಳಬೇಕೆಂದರೆ.... ನಿಮಗೆ ಯಾವುದೋ ಒಂದು ಊರಿಗೆ ಹೋಗಬೇಕಾಗಿದೆ. ದಾರಿ ಇಲ್ಲದೇ ನೀವೆ ದಾರಿಯನ್ನು ಮಾಡಿಕೊಂದು ಹೋಗಲೂ ಬಹುದು ಅಥವಾ ಆ ಊರಿಗೆ ಹೋಗುವ ದಾರಿಯಲ್ಲಿ ಹೋಗಬಹುದು. ವಿಗ್ರಹಾರಾಧನೆ ಅನ್ನೋದು ಭಗವಂತನನ್ನು ಸೇರಲು ಇರುವ ದಾರಿ ಇದ್ದ ಹಾಗೆ. ಆ ಹಾದಿಯಲ್ಲಿ ಭಗವಂತ ನೆನುವ ಊರನ್ನು ಸೇರುವುದು ಸುಲಭ. ಇನ್ನು ಪೂಜೆ ಅನ್ನೋದರ ನಿಜವಾದ ಅರ್ಥ ನಮಗೆ ಒಳಿತು ಮಾಡಿದ ಭಗವಂತನಿಗೆ ಕೃತಜ್ಞತಾರ್ಪಣೆ ಮಾಡುವ ಒಂದು ಪರಿಕಲ್ಪನೆ. ಕೃತಜ್ಞತೆ ಅರ್ಪಿಸಿದಾಗ ಸಿಗುವ ಮನಶ್ಶಾಂತಿಗೆ ಸರಿಸಾಟಿ ಯಾವುದಿದೆ ಅಲ್ವಾ.
ಯಾವ ಭಗವದ್ಗೀತೆಯ ಶ್ಲೋಕವನ್ನು ಆಧರಿಸಿ ಕಾಂಜೀ ವಾದ ಮಾಡಿ ಜಯಗಳಿಸುತ್ತಾನೋ, ಅದೇ ಭಗವದ್ಗೀತೆಯ 17 ನೇ ಅಧ್ಯಾಯದಲ್ಲಿ ಬರುವ ವಿಷಯಗಳೆಲ್ಲವೂ ನಿರ್ದೇಶಕರಿಗೆ ಗೌಣವಾಗುತ್ತದೆ ಅದು ಯಾಕೆ ಅನ್ನೋದು ನನ್ನ ಗೊಂದಲಗಳಲ್ಲೊಂದು. " ಒಂದು ಪೂಜಾ ವಿಧಾನವನ್ನೇ ಶ್ರದ್ಧೆಯಿಂದ ಆಚರಿಸಿಕೊಂಡು ಬಂದವನು ಕ್ರಮೇಣ ಜ್ಞಾನದ ಹಂತಕ್ಕೆ ಏರುತ್ತಾನೆ ಮತ್ತು ಶಾಂತಿ ಶ್ರೇಯಸ್ಸುಗಳ ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸುತ್ತಾನೆ" 17 ಅಧ್ಯಾಯದ ಮೊದಲನೇ ಶ್ಲೋಕದ ಭಾವರ್ಥವಿದು ಅದಕ್ಕೆ ಉತ್ತರವಾಗಿ ಶ್ರೀಕೃಷ್ಣ ಹೇಳುವುದು " ಸದ್ಗುರುವಿನ ಸಹವಾಸವನ್ನು ಅವನ ನಿಯಮಗಳಿಗೆ, ಶಾಸ್ತ್ರಗ್ರಂಥಗಳಿಗೆ ವಿಧೇಯವಾಗಿ ನಡೆದುಕೊಂಡರೆ ವ್ಯಕ್ತಿಯ ಸ್ವಭಾವವನ್ನು ಬದಲಿಸಬಹುದು." ಇವು ಚಿತ್ರದ ಅಂತ್ಯದಲ್ಲಿ ವಿಧಿಸಲ್ಪಟ್ಟ ಉತ್ತರಕ್ಕೆ ವಿರುದ್ಧವಾಗಿದೆಯಲ್ವಾ ಇದಕ್ಕೆ ನಿರ್ದೇಶಕರ ಉತ್ತರ ಏನು...?
ಯಾವುದೇ ವ್ಯಕ್ತಿಯಾಗಲಿ ಪರಿಪೂರ್ಣನಲ್ಲ ಆತನನ್ನು ಪರಿಪೂರ್ಣನನ್ನಾಗಿ ಮಾಡುವುದು ಭಗವಂತನ ಚಿಂತನೆ. ಆ ಚಿಂತನೆಯನ್ನು ಸಮರ್ಪಕವಾಗಿ ಒಬ್ಬ ವ್ಯಕ್ತಿಯಲ್ಲಿ ತುಂಬುವುದು ಗುರುಗಳು.... ಇಲ್ಲಿ ಎಲ್ಲಾ ಸ್ವಾಮೀಜಿಗಳು ಡೋಂಗಿಗಳು ಅನ್ನುವ ಸಂದೇಶವಿದೆ. ಆದರೆ ವಾಸ್ತವ ಹಾಗಿಲ್ಲ. ಯಾರು ಸರಿಯಾದವರು ಯಾರು ಡೋಂಗಿಗಳು ಅನ್ನೋದನ್ನು ಜನರಿಗೆ ತಿಳಿಸಿಕೊಡಬೇಕಾಗಿತ್ತೇ ವಿನಹ ಸ್ವಾಮೀಜಿಗಳಲ್ಲಿ ಹೋಗಲೇಬೇಡಿ ಅನ್ನೋದು ಸರಿ ಅಲ್ಲ ಅನ್ನೋದು ನನ್ನ ಭಾವನೆ. ದೇವಸ್ಥಾನದ ಕುರಿತಾಗಿಯೂ ಹಾಗೆಯೇ ಯಾವುದೇ ದೇವಸ್ಥಾನವೂ ಕೂಡ ನಮ್ಮಲ್ಲಿಗೆ ಬನ್ನಿ ಬನ್ನಿ ಅಂತ ಗೋಗರೆಯುವುದಿಲ್ಲ, ಹೋದ ನಂತರ ಸೇವೆಗಳನ್ನು ಮಾಡಲೇಬೇಕು ಅನ್ನುವ ಕಡ್ದಾಯವಿರುವುದಿಲ್ಲ. ಅವರವರ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳಬಹುದು. ಹೋಗಬೇಡಿ ಅಂದದ್ದು ನನಗೇನೋ ಸರಿ ಅನ್ನಿಸಲಿಲ್ಲ. ಇನ್ನಿ ಅಭಿಷೇಕಗಳೆಲ್ಲವೂ ವೇಸ್ಟ್ ಅಂದದ್ದು... ನನ್ನ ಪ್ರಕಾರ ಅಕ್ಕಿ ಕಡೆದು ದೋಸೆ ಮಾಡಿ ತಿಂದು ಅಕ್ಕಿ ವೇಸ್ಟ್ ಆಯಿತು ಅಂದ ಹಾಗಾಯಿತು... ಅದರ ಇನ್ನೊಂದು ಲಾಭವನ್ನು ಕುರಿತು ಸಹ ನಾವು ನೋಡಬೇಕು... ಈ ಸಿನಿಮಾದಲ್ಲಿ "ಗೋ ಗೋ ಗೋವಿಂದ" ಅನ್ನೋ ಹಾಡಿದೆ ನಿಜಕ್ಕೂ ಅದಕ್ಕೆ ಮಾಡಿದ ಹಣ ವೇಸ್ಟು ಅಂತ ನಾನು ಹೇಳಬಹುದು... ಆದರೆ ಆ ಹಾಡಿನಿಂದಾಗುವ ಲಾಭ ನಿರ್ಮಾಪಕರಿಗೆ ಮಾತ್ರ ಗೊತ್ತು ... ಇದೂ ಕೂಡ ಅದೇ ಥರ....
ಚಿತ್ರದ ಕೊನೆಯಲ್ಲಿ ಶ್ರೀ ಕೃಷ್ಣ ಕಾಂಜೀ ಗೆ ಹೇಳುತ್ತಾನೆ ಬೀಳುವ ಮಳೆಯಲ್ಲಿ, ಇರುವೆಗಳ ತುತ್ತಿನಲ್ಲಿ, ಹಕ್ಕಿಗಳಗೂಡಿನಲ್ಲಿ ಎಲ್ಲೆಡೆಯಲ್ಲಿಯೂ ನಾನಿದ್ದೇನೆ ಅಂತ... ಹಾಗಾದರೆ ನನ್ನ ಪ್ರಶ್ನೆ.... ಗುಡಿಯೊಳಗಿನ ಶಿಲೆಯಲ್ಲೂ, ಗಂಟೆಯಾ ನಾದದಲ್ಲೂ ಭಗವಂತ ಇರಲೇಬೇಕಲ್ವಾ... ಹಾಗದರೆ ಅವನ್ನು ಆ ರೀತಿ ಆರಾಧಿಸೋದರಲ್ಲಿ ತಪ್ಪೇನು....? ಈ ರೀತಿಯ ಗೊಂದಲಗಳಿದ್ದರೂ ಚಿತ್ರಕ್ಕೆ ದೇವರು ಒಳ್ಳೇ ಫಲವನ್ನೇ ಕೊಟ್ಟಿದ್ದಾನೆ ಚಿತ್ರ ಸಖತ್ ಹಿಟ್ ಅಂತೆ.ಕೊನೆಯಲ್ಲಿ ಈ ಚಿತ್ರದ ನಂಬಲೇ ಬೇಕಾದ ಒಂದು ಸತ್ಯ, ಒಂದು ವೇಳೆ ಭಗವಂತ ಈಗೇನಾದರೂ ಭೂಮಿಗಿಳಿದು ನಾನೇ ಭಗವಂತ ಅಂದರೆ ಖಂಡಿತಾ ಯಾರೂ ನಂಬಲಿಕ್ಕಿಲ್ಲ ನೀವೇನಂತೀರಾ.....

No comments:

Post a Comment