Sunday 1 November 2015

ನಮ್ಮ ಮಕ್ಕಳನ್ನ ಹತ್ತನೆಯ ತರಗತಿಯವರೆಗಾದರೂ ಕನ್ನಡ ಮಾಧ್ಯಮದಲ್ಲೇ ಕಲಿಸುವ ಪಣ ತೊಡಲಾದೀತೇ...?



ಸಾಮಾನ್ಯವಾಗಿ ನವಂಬರ್ ತಿಂಗಳ ಮೊದಲನೇ ತಾರೀಖಿಗೆ ಕನ್ನಡತನ, ಕನ್ನಡಾಭಿಮಾನ ಅನ್ನೋದು ತಾರಕಕ್ಕೇರಿರುತ್ತದೆ. ಮತ್ತೆ  ಆ ತಿಂಗಳ ದಿನಗಳು ಉರುಳುತ್ತಿದ್ದ ಹಾಗೇನೆ ಈ ಭಾಷಾಭಿಮಾನ ಕಡಿಮೆಯಾಗುತ್ತಾ ಸಾಗುತ್ತದೆ.  ಹಲವರಲ್ಲಿ ಕನ್ನಡ ಉಳಿದು ಬೆಳೆಯಬೇಕೆಂಬ ಹಂಬಲ ಇರುವುದು ಸುಳ್ಳಲ್ಲ, ಆದರೆ ಕನ್ನಡವನ್ನ ಉಳಿಸಿಬೆಳೆಸಲು ತಾವೇನು ಮಾಡಬಹುದು...? ಅನ್ನೋ ವಿಚಾರವನ್ನು ಮಾತ್ರ ಗಂಭೀರವಾಗಿ ಯೋಚಿಸುವುದಿಲ್ಲ. ಉದಾಹರಣೆಗೆ ನಮ್ಮ ರಾಜ್ಯದ ನಾಯಕರುಗಳನ್ನೇ ತೆಗೆದುಕೊಳ್ಳಿ... ಅಥವಾ ಕನ್ನಡ ಸಿನಿಮಾ ರಂಗದ ನಟ, ನಟಿಯರನ್ನೇ ತೆಗೆದುಕೊಳ್ಳಿ... ನಾಯಕರುಗಳು ತಮ್ಮ ಭಾಷಣದಲ್ಲಿ ಮತ್ತು ನಟ, ನಟಿಯರು ತಮ್ಮ ಸಿನಿಮಾಗಳಲ್ಲಿ ತೋರಿಸಿದಷ್ಟು ಭಾಷಾ ಪ್ರೇಮವನ್ನು ನಿಜ ಜೀವನದಲ್ಲಿ ತೋರಿಸೋದಿಲ್ಲ... ಕನ್ನಡ ಉಳಿಯಲು ಮೂಲವಾಗಿ ಬೇಕಾಗಿರೋದು ಅದರ ಬಳಕೆ ಅಷ್ಟೇ... ದಿನನಿತ್ಯದಲ್ಲಿ ಕನ್ನಡ ಎಷ್ಟು ಬಳಸಲ್ಪಡುತ್ತದೋ ಅಷ್ಟು ಸಮಯ ಕನ್ನಡ ಬದುಕುತ್ತದೆ...
ಇದಕ್ಕಾಗಿ ಕನ್ನಡದ ಅರಿವಿನ ಅಗತ್ಯ ಇದ್ದೇ ಇದೆ. ಈ ಅರಿವು ಎಳವೆಯಲ್ಲಿಯೇ ಮೂಡಿದಾಗ ಮಾತ್ರ ಕನ್ನಡದ ಆಯಸ್ಸು ಹೆಚ್ಚಾಗೋದು. ಹಾಗಾಗಿ ಕನ್ನಡದ ಆಯಸ್ಸು ಹೆಚ್ಚಿಸಲು ಮುಂದಿನ ಪೀಳಿಗೆಯನ್ನ ಕನ್ನಡ ಮಾಧ್ಯದಲ್ಲಿ ಓದಿಸುವುದು ಈಗಿನ ಅಗತ್ಯಗಳಲ್ಲಿ ಪ್ರಾಮುಖ್ಯವಾದದ್ದು. ಆದರೆ ಎಲ್ಲೋ ಕನ್ನಡದ  ಪರ ಮಾತನಾಡುವವರೇ ಹೆಚ್ಚಾಗಿ ತಮ್ಮ ಮಕ್ಕಳನ್ನ ಕನ್ನಡ ಶಾಲೆಗಳಿಗೆ ಕಳುಹಿಸುದಕ್ಕೆ ಹಿಂದೇಟು ಹಾಕುತ್ತಾರೆ. ಯಾಕೆ...? ಅಂತಂದರೆ ಅವರ ಬಳಿ ಉತ್ತರದ ಪ್ರತಿ ಸಿದ್ಧವಾಗಿರುತ್ತದೆ... ಕನ್ನಡ ಮಾಧ್ಯಮದಲ್ಲಿ ಕಲಿಸೋ ಉತ್ತಮ ಶಾಲೆಗಳು ಯಾವುದಿದೆ ರೀ...? ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನ ಕಳುಹಿಸುವುದಕ್ಕಾಗುತ್ತದೆಯೇ...?  ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಸಿಗುವಂಥಾ  ಸೌಲಭ್ಯಗಳು ಇರುತ್ತದೆಯಾ...? ಹೀಗೆ ಒಟ್ಟಾರೆಯಾಗಿ ನಾವು ವಿಧಿಯಿಲ್ಲದೆ ಆಂಗ್ಲ ಮಾಧ್ಯಮಕ್ಕೆ ಕಳುಹಿಸುತ್ತಿದ್ದೇವೆ ಅನ್ನುವ ಮಾತು ಕೇಳಿ ಬರುತ್ತದೆ.. ಒಂದು ಮಟ್ಟಿಗೆ ಒಪ್ಪಲೇಬೇಕು ಆದರೆ ನನಗನಿಸೋದು ಈ ವಿಧಿಯಿಲ್ಲ ಅನ್ನುವ ಮಾತಿದೆಯಲ್ಲಾ ಇದರಿಂದಾಗಿಯೇ ಈ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿರೋದು.. ಅದರಿಂದಾಗಿ ಎಲ್ಲರೂ ಈ ಪದವನ್ನೇ ಮುಂದಿಡತೊಡಗಿದ್ದಾರೆ.... ಉದಾಹರಣೆಗೆ ಸರ್ಕಾರಿ ಶಾಲೆಗೆ ಸೇರಿಸದೆ ಇರುವ ಹೆತ್ತವರು ಹೇಳುತ್ತಾರೆ ಅಯ್ಯೋ ವಿಧಿಯಿಲ್ಲಾ ರೀ ಅಲ್ಲಿ ಸೌಲಭ್ಯ ಏನೇನೂ ಇಲ್ಲ... ಅದೇ ಸರ್ಕಾರಿ ಶಾಲೆಯವರು ಹೇಳುತ್ತಾರೆ ಅಯ್ಯೋ ಸೌಲಭ್ಯ ಕೊಡಿಸೊದು ಹೇಗೆ ರೀ ಮಕ್ಕಳ ಸಂಖ್ಯೆ ಇಲ್ಲ, ನಮಗೂ ಇದ್ದದ್ದರಲ್ಲೇ ಶಾಲೆ ನಡೆಸಬೇಕಾಗುತ್ತದೆ ಏನು ಮಾಡೋದು ವಿಧಿಯಿಲ್ಲ... ಆಂಗ್ಲ ಮಾಧ್ಯಮದವರಾದರೂ ಕನ್ನಡ ಬೆಳೆಸುತ್ತಾರಾ...? ಅವರೂ ಹೇಳುತ್ತಾರೆ ಅಯ್ಯೋ ಏನ್ ಮಾಡೋದು ರೀ ನಮಗೆ ಕನ್ನಡ ಜಾಸ್ತಿಯಾಗಿ ಬಳಸುವ ಹಾಗಿಲ್ಲ ಆಡಳಿತ ಮಂಡಳಿ ಗರಂ ಆಗುತ್ತೆ... ಹಾಗಾಗಿ ವಿಧಿಯಿಲ್ಲದೆ ಇಂಗ್ಲೀಷಲ್ಲೇ ಮಾತಾಡಬೇಕಾಗುತ್ತದೆ. ಹೀಗೆ ವಿಧಿಯಿಲ್ಲ ವಿಧಿಯಿಲ್ಲ ಅನ್ನೋದು  ಸಾರ್ವತ್ರಿಕವಾಗಿ ಬಳಕೆಯಾಗ್ತಾ ಇದೆ.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ... ಖಂಡಿತಾ ಪರಿಹಾರ ಇದ್ದೇ ಇದೆ. ನನಗನಿಸಿದಂತೆ ಈ ವಿಧಿಯಿಲ್ಲ ಅನ್ನೋದನ್ನ ಬದಿಗಿಟ್ಟರೆ ಖಂಡಿತಾ ಸಾಧ್ಯ... ಹತ್ತನೆಯ ತರಗತಿಯವರೆಗೆ ನಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಸೇರಿಸುತ್ತೇವೆ ಅನ್ನೋ ಸಂಕಲ್ಪ ಇದ್ದರೆ ಸಾಕು... ಸವಲತ್ತುಗಳು ತನ್ನಿಂತಾನೇ ಬರುತ್ತಾ ಹೋಗುತ್ತದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಿ ಸವಲತ್ತುಗಳೆಲ್ಲಾ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಹೇಗೆ ಬರುತ್ತದೆ...? ಉತ್ತರ ಸಿಗೋದು ದೊಡ್ಡ ಕಷ್ಟವೇನಲ್ಲ... ಅಯ್ಯೋ ಅಷ್ಟೊಂದು ಡೊನೇಶನ್ ತೆಗೆದುಕೊಳ್ಳುತ್ತಾರಲ್ಲ... ಅಂದರೆ ನಮ್ಮದೇ ದುಡ್ಡಿಂದ ಅವರು ಸವಲತ್ತನ್ನ ಒದಗಿಸುತ್ತಿದ್ದಾರೆ... ( ಸರಿಯಾಗಿ ಲೆಕ್ಕ ಹಾಕಿದರೆ ನಾವು ಕೊಡುವ ದುಡ್ಡಿಗೆ ಅವರು ಕೊಡುವ ಸವಲತ್ತು ಏನೇನೂ ಅಲ್ಲ ) ಅದೇ ಹಣವನ್ನ ನಮ್ಮಲ್ಲಿನ ಸರಕಾರೀ ಶಾಲೆಗೋ ಅಥವಾ ಕನ್ನಡ ಮಾಧ್ಯಮ ಶಾಲೆಗೋ ನಾವು ಕೊಡಲು ಸಿದ್ಧರಿದ್ದೇವೆಯೇ...? ಛೇ ಎಲ್ಲಾದ್ರೂ ಉಂಟೇ... ಸಾಧ್ಯವೇ ಇಲ್ಲ... ವಿಚಿತ್ರ ಅಲ್ವಾ ನಮ್ಮದೇ ದುಡ್ದು ಪಡಕೊಂಡ ಆಂಗ್ಲ ಮಾಧ್ಯಮದ ಶಾಲೆ ಶ್ರೇಷ್ಠವಾಗುತ್ತದೆ ಆದರೆ ಅದೇ ಹಣವನ್ನ ಕೊಟ್ಟು ನಮ್ಮ ಕನ್ನಡ ಮಾಧ್ಯಮ ಶಾಲೆಯನ್ನ ಎತ್ತರಕ್ಕೇರಿಸಲು ನಮಗಾಗೋದಿಲ್ಲ...
ಇರಲಿ ಬಿಡಿ ಆ ವಿಷಯ ಬದಿಗಿಡೋಣ ಈಗ ಹಳ್ಳಿಯೊಂದರಲ್ಲಿ ಒಂದು ಅಂಗಡಿಯಿದೆ  ಅಂತ ಯೋಚಿಸಿ ಅಲ್ಲಿ ಕೊಂಡುಕೊಳ್ಳುವವರ ಸಂಖ್ಯೆಯ ಮೇಲೆ  ಆ ಅಂಗಡಿಯಾತ  ಮಾರಬಹುದಾದ ವಸ್ತುಗಳನ್ನ ಇಟ್ಟಿರುತ್ತಾನೆ. ಅಲ್ಲಿ ಮಾರಾಟವೇ ಇಲ್ಲ ಅಂತಾದಾಗ ತಂದಿಟ್ಟುಕೊಳ್ಳುವುದರಿಂದ ಲಾಭ ಏನು...? ಅನ್ನೋ ಯೋಚನೆ ಸಾಮಾನ್ಯ ತಾನೇ... ಹಾಗೆಯೇ ಒಂದು ಹಳ್ಳಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳೇ ಇರದಿದ್ದರೆ ಸವಲತ್ತುಗಳು ಇದ್ದರೇನು ಇಲ್ಲದಿದ್ದರೇನು...? ಅದೇ ಜನರೆಲ್ಲರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ಗ್ರಾಮ ಪಂಚಾಯತು ಸಭೆಯಲ್ಲಿ ನಮ್ಮ ಮಕ್ಕಳಿಗೆ ನಮ್ಮ ಊರಿನ ಶಾಲೆಗೆ ಇಂತಿಂಥಾ ಸೌಲಭ್ಯಗಳ ಅಗತ್ಯವಿದೆ ಎಂದು  ಜನಪ್ರತಿನಿಧಿಗಳನ್ನ ಒತ್ತಾಯಿಸಿದರೆ ಆಗ ಅವರು ಸೌಲಭ್ಯ ಕೊಡುವಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ... ಆ ಜನಪ್ರತಿನಿಧಿಗಳ ಮಕ್ಕಳೂ ಇದ್ದಾಗ ಸವಲತ್ತುಗಳು ಬಂದೇ ಬರುತ್ತದೆ ಅಲ್ವಾ... ಹಾಗಿದ್ದರೆ ನಮ್ಮ ಕನ್ನಡ ಮಾಧ್ಯಮವೂ ಉತ್ತಮ ದರ್ಜೆಗೇರಬಲ್ಲದು ಅದು ಏರುವಂತೆ  ಮಾಡಿಸಲೂ ಬಹುದು ಆದರೆ ನಾವೇ ನಮ್ಮ ಮಕ್ಕಳನ್ನು ಕಳುಹಿಸದಿದ್ದರೆ...???? ಇದು ಒಂದಕ್ಕೊಂದು ಪೂರಕ... ಶಾಲೆಯ ಬೆಳವಣಿಗೆ ಮಕ್ಕಳಿಂದ ಮಕ್ಕಳ ಬೆಳವಣಿಗೆ ಶಾಲೆಯಿಂದ... ಇದನ್ನ ಅರಿತುಕೊಂಡರೆ ಸಾಕು.
ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ವಿಚಾರ ತಮ್ಮ ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಆಂಗ್ಲ ಮಾಧ್ಯಮವೇ ಅನಿವಾರ್ಯ ಅನ್ನೋ ಭಾವನೆ ಹಲವಾರು ಜನರಲ್ಲಿ ಮನೆ ಮಾಡಿ ಆಗಿದೆ... ಆದರೆ ನಿಮ್ಮ ಮಕ್ಕಳು ಮುಂದೆ ಏನಾಗುತ್ತಾರೆ ಅನ್ನೋದು ನಮಗೆಲ್ಲಿ ಗೊತ್ತು...? ನಿಮ್ಮ ಮಗ ಅತ್ಯುತ್ತಮ ಚಿತ್ರಕಲಾವಿದನಾಗುತ್ತಾನೆ ಅಂತಿಟ್ಟುಕೊಳ್ಳಿ.... ಅವನಿಗೆ ಆಂಗ್ಲ ಮಾಧ್ಯಮದಲ್ಲಿಯೇ ಶಿಕ್ಷಣ ಸಿಕ್ಕರೆ ಮಾತ್ರ ಆತ ಉತ್ತಮ ಚಿತ್ರಕಾರ ಆಗೋದು ಅಂತೇನಾದರೂ ಇದೆಯಾ... ನಿಮ್ಮ ಮಗುವಿನೊಳಗೆ ಒಬ್ಬ ಶಿಲ್ಪಿ ಇದ್ದರೆ...ನಿಮ್ಮ ಮಗುವಿನೊಳಗೆ ಕವಿ ಇದ್ದರೆ...  ಒಬ್ಬ ಕವಿಯಾಗಬೇಕಾದರೂ ಆತ ಕನ್ನಡದಲ್ಲಿ ಕಲಿತರೆ ತಾನೇ ಕನ್ನಡದ ಪದಗಳ ಪರಿಚಯ ಆಗೋದು... ಇನ್ನೂ ಒಂದಿದೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಾನೆ ಎಂದ ಕೂಡಲೇ ಆಂಗ್ಲ ಭಾಷೆಯ ಗಂಧ ಗಾಳಿಯೆ ಗೊತ್ತಿರುವುದಿಲ್ಲ ಅಂತೇನಿಲ್ಲವಲ್ಲ... ಐದನೆಯ ತರಗತಿಯಿಂದಾ ಆಂಗ್ಲ ಮಾಧ್ಯಮ ಕಲಿಸಿಯೇ ಕಲಿಸುತ್ತಾರೆ. ಒಂದು ವೇಳೆ ನಿಮ್ಮ ಮಗುವೇ ಕಲಿಯಲಿಲ್ಲಾ ಅಂತಾದರೆ...? ಯಾವ ಆಂಗ್ಲ ಮಾಧ್ಯಮದ ಸಂಸ್ಥೆಯಾದರೂ ನಿಮ್ಮ ಮಕ್ಕಳನ್ನ ಇದೇ ರೀತಿಯಾಗಿ ಮಾಡಿಸುತ್ತೇವೆ ಇಷ್ಟು ಮಾರ್ಕು ತೆಗೆದು ಪಾಸಾಗುವಂತೆ ಮಾಡುತ್ತೇವೆ ಅನ್ನೋ ಗ್ಯಾರಂಟಿ ಕೊಡುತ್ತಾರಾ...? ಹಾಗಿದ್ದರೆ ಮಕ್ಕಳ ಭವಿಷ್ಯ ಅವರ ಕೈಯಲ್ಲಿದೆ...
ನನ್ನ ಪ್ರಕಾರ ಹತ್ತನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ನಮ್ಮ ಮಕ್ಕಳನ ಕಲಿಸುವ ಪಣ ತೊಟ್ಟರೆ ಕನ್ನಡ ಉಳಿದೀತು... ಆಧ್ಯಾತ್ಮಿಕವಾಗಿ ಯೋಚಿಸಿದರೂ ನಮ್ಮ ಮಕ್ಕಳು ಅದೇನಾಗಬೇಕೆಂದಿದೆಯೋ ಬಲ್ಲವರು ಯಾರು...?  ಉತ್ತಮ ಪಾಲಕರಾಗಿ ನಾವು ಮಾಡಬೇಕಾಗಿರೋದು ಮಕ್ಕಳನ್ನ ಸಂಸ್ಕಾರವಂತರನ್ನಾಗಿ ಮಾಡುವುದೇ ಹೊರತು ಅವರಿಗೆ ನಾವೇ ಭವ್ಯ ಭವಿಷ್ಯ ಕಟ್ಟಿಕೊಡುವುದಲ್ಲ... ಹಾಗಾಗೇ ಹೆಚ್ಚಿನ ಸಿರಿವಂತರ ಮಕ್ಕಳು ನೈತಿಕವಾಗಿ ಎಡವುತ್ತಿರೊದು ಇತ್ತೀಚೆಗೆ ಸಾಮಾನ್ಯವಾಗಿರೋದು ( ಇದಕ್ಕೆ ಅಪವಾದ ಅನ್ನುವಂತೆಯೂ ಕೆಲವರು ಅಂತಿರುತ್ತಾರೆ ಇಲ್ಲವೆಂದಲ್ಲ ) ಅವರ ಭವಿಷ್ಯವನ್ನ ಅವರೇ ರೂಪಿಸಿಕೊಳ್ಳಲಿ ನಮಗೆ ಅವರನ್ನ ಅದಕ್ಕೆ ಸಮರ್ಥರನ್ನಾಗಿಸುವುದಷ್ಟೇ ಕೆಲಸ ... ಎಲ್ಲವನ್ನೂ ನಾವೇ ಮಾಡಿ ಮುಗಿಸಿದರೆ ಅವರಿಗೆ ಸಾಧಿಸಲು ಇರುವುದಾದರೂ ಏನು ಅಲ್ವಾ...?
ಹೀಗಿದ್ದೂ ಆಸು ಪಾಸಿನಲ್ಲಿ ಉತ್ತಮ ಕನ್ನಡ ಶಾಲೆಯೇ ಇಲ್ಲದೆ ಹೆಣಗಾಡುವವರಿಗೂ ಒಂದು ಮಾರ್ಗವಿದೆ ಆದರೆ ಅವರು ಒಂದಷ್ಟು ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಅಷ್ಟೇ.. ನಮ್ಮ ಕರ್ನಾಟಕದಲ್ಲಿಯೇ ಹಲವಾರು ವಿದ್ಯಾಸಂಸ್ಥೆಗಳಿವೆ. ವಿದ್ಯಾರ್ಥಿಗಳನ್ನ ಅಲ್ಲಿಯೇ ಉಳಿಸಿಕೊಂಡು ವಿದ್ಯೆಯನ್ನ ಕೊಡುತ್ತಾರೆ. ಅಂಥಾ ಶಾಲೆಗಳಿಗೆ ಕಳುಹಿಸಿದಾಗ  ತಮ್ಮ ಮಕ್ಕಳಿಗೆ ಉತ್ತಮ ಕನ್ನಡ ಸಂಸ್ಕಾರ ಕೊಡಲು ಸಾಧ್ಯ... ಆದರೆ ಆವಾಗ ಮಕ್ಕಳನ್ನ ದೂರದ ಪ್ರದೇಶಕ್ಕೆ ಕಳುಹಿಸಬೇಕಾದೀತು... ಅವರ ಅಗಲುವಿಕೆಯನ್ನ ಸ್ವಲ್ಪ ಕಾಲ ತಡೆದುಕೊಳ್ಲಬೇಕಾದೀತು ಆದರೆ ಮಕ್ಕಳನ್ನ ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ಇಷ್ಟು ಮಾಡಲೇಬೇಕಾಗುತ್ತದೆ.. ಉದಾಹರಣೆಗೆ ಶೃಂಗೇರಿ ಸಮೀಪದಲ್ಲಿ ಗುರುಕುಲ ಅನ್ನೋ ವಿದ್ಯಾಸಂಸ್ಥೆ ಇದೆ. ಅಲ್ಲಿ ನಮ್ಮ ಸಂಪ್ರದಾಯ ಬದ್ಧವಾದ ಶಿಕ್ಷಣ ಒದಗಿಸಲಾಗುತ್ತದೆ. ಅಲ್ಲಿಗೆ ಕಳುಹಿಸಿಕೊಡುವ ಮನಸ್ಸು ಮಾಡಿದಲ್ಲಿ ಇದು ಸಾಧ್ಯ. ಅಥವಾ ಕಲ್ಲಡ್ಕದಲ್ಲೊಂದು ಶ್ರೀರಾಮ ವಿದ್ಯಾಕೇಂದ್ರ ಅನ್ನೋ ಸಂಸ್ಥೆ ಇದೆ ಅಲ್ಲೇ ಇದ್ದು ವಿದ್ಯೆಯನ್ನ ಪಡೆಯುವ ಸೌಲಭ್ಯ ಇದೆ. ಹೀಗೆ ಹುಡುಕುವ ಮನಸ್ಸಿದ್ದರೆ ಮಾರ್ಗಗಳು ಇದ್ದೇ ಇದೆ ಆದರೆ ಮನಸ್ಸು ಇಲ್ಲದೇ ಹೋದರೆ... " ವಿಧಿಯಿಲ್ಲ " ಅನ್ನೋ ಶಬ್ದವನ್ನ ಗಟ್ಟಿಯಾಗಿ ಹಿಡಿಕೊಂಡು ಕನ್ನಡದ ಅಳಿವಿಗೆ ಅಳಿಲುಸೇವೆ ಮಾಡಬೇಕಾಗುತ್ತದೆ.... ಅಲ್ವೇ...

No comments:

Post a Comment