Monday 2 November 2015

ನಾ ಕಂಡ ಮಂಗಳೂರು ವಿಭಾಗ ಸಾಂಘಿಕ್...



ಅಬ್ಬಾ.... ಅದ್ಭುತ...... ಪರಮಾದ್ಭುತ.... ಕಣ್ಣು ಹಾಯಿಸಿದೆಲ್ಲೆಡೆ ಸ್ವಯಂಸೇವಕರದೇ ದಂಡು... ಅದೂ ಕುಳಿತಲ್ಲಿಂದ ಅಷ್ಟ ದಿಕ್ಕಿನತ್ತ ಕಣ್ಣು ಹಾಯಿಸಿದರೂ ಒಬ್ಬನೇ ಕುಳಿತಂತೆ ಕಾಣುವ ರೀತಿಯಲ್ಲಿ ಶಿಸ್ತು ಬದ್ಧವಾಗಿ ಕುಳಿತಿದ್ದ ತಾಯಿ ಭಾರತಿ ಆಂತರಿಕ ಸೇನೆಯನ್ನ ಕಂಡಾಗ ಇಂಥ ಆಶ್ಚರ್ಯಜನಕ ಮಾತುಗಳು ಮಾತ್ರ ಬಂದೀತೂ...ಅದೆಷ್ಟು ದಿನದ ಪರಿಶ್ರಮವೋ ಏನೋ...ಯಶಸ್ಸಿನ ಕನಸು ಕಂಡವರೆಲ್ಲರಿಗೂ ಇದು ಕನಸೋ ನನಸೋ ಅನ್ನುವ ರೀತಿಯಲ್ಲಿ ಕಾರ್ಯಕ್ರಮ ಸಾಕಾರಗೊಂಡಿತ್ತು. ಅಬ್ಬಾ ಈ ಕಾರ್ಯಕ್ರಮವನ್ನ ತಪ್ಪಿಸಿಕೊಂಡವವರ ಬಗೆಗೆ ಕನಿಕರ ಅನ್ನಿಸುತ್ತೆ.
ನಿನ್ನೆ ಬೆಳಿಗ್ಗೆ ಉಡುಪಿಯತ್ತ ಹೋಗುತ್ತಿದ್ದೆ , ಬೆಳಗಿನ ಹನ್ನೊಂದು ಗಂಟೆ ಆಗಿದ್ದಿರಬಹುದು ಆಗಲೇ ಸ್ವಯಂಸೇವಕರ ದಂಡು ಕೇಂಜಾರಿನತ್ತ ಹೊರಟಿತ್ತು. ಸಾಧಾರಣವಾಗಿ ಪಬ್ಲಿಕ್ ಗಾಗಿ ಇದ್ದ ಬಸ್ಸುಗಳೇ ಕಾಣಿಸುತ್ತಿರಲಿಲ್ಲ. ಹೆಚ್ಚಿನ ಬಸ್ಸುಗಳೆಲೆಲ್ಲಾ ಆ ಶಾಖೆ ಈ ಶಾಖೆ ಅನ್ನುವ ದೊಡ್ಡ ಚೀಟಿ ಅಂಟಿಸಿರುತಿತ್ತು... ಇನ್ನೊಂದಷ್ಟು ಬಸ್ಸುಗಳಲ್ಲಿ ಭಗವಾಧ್ವಜ ತಂಗಾಳಿಗೆ ಮೈಯೊಡ್ದಿ ಕುಣಿದಾಡುತಿತ್ತು. ಇದನ್ನೆಲ್ಲಾ ನೋಡುತ್ತಿದ್ದಂತೆ ಅಬ್ಬಾ ನಾನೂ ಈಗಲೇ ಗಣವೇಷ ಹಾಕಿ ಬಿಡ್ಲಾ... ಅನ್ನುವಷ್ಟು ಆಸೆ ಆಗುತಿತ್ತು. ಮೆಲ್ಲ ಮೆಲ್ಲಗೆ ಸರಿಯುತಿದ್ದ ಘಂಟೆ ನನಗೂ ಆ ಅವಕಾಶವನ್ನ ಕೊಟ್ಟೇ ಬಿಟ್ಟಿತು...
ನಿನ್ನೆ ದಿನ ಹಿಂದೂ ಪಂಚಾಗದ ರೀತಿಯಲ್ಲಿ ನೋಡಿದ್ರೆ ವಿವೇಕಾನಂದರ ಜನ್ಮ ತಿಥಿಯ ದಿನ... ಅದೇ ದಿನ ವಿಭಾಗ ಸಾಂಘಿಕ್ ನ ದಿನ ನಿಶ್ಚಯವಾಗಿದ್ದು ಯೋಗಾಯೋಗ ಅಲ್ಲದೆ ಮತ್ತಿನ್ನೇನು...? ಮುಹೂರ್ತದ ದಿನವೂ ಆಗಿದ್ದರಿಂದ ಹಲವು ಮದುವೆಗಳಿದ್ದವು. ನನಗೂ ಎರಡು ಮದುವೆಯ ಸಮಾರಂಭಕ್ಕೆ ಹೋಗೋದಿತ್ತು. ಹೋದವನೆ ಬೇಕಾದವರಿಗೆ ಮುಖ ತೋರಿಸಿ ಊಟ ಮಾಡಿ ಹೊರಡೋಣ ಎಂದಿದ್ದೆ, ಆದರೆ ಕೈ ಮೀರಿ ಹೋಗುತ್ತಿದ್ದ ಸಮಯವನ್ನ ನೋಡಿ ಬರಿಯ ಯಜಮಾನರನ್ನ ಮಾತನಾಡಿಸಿ ಹಾಗೆ ಹೊರಟು ಬಿಟ್ಟೆ. ಸರಿಯಾಗಿ ಒಂದೂ ಮುಕ್ಕಾಲರ ಹೊತ್ತಿಗೆ ಶಾರದಾ ಭಜನಾ ಮಂದಿರ, ಕಾಟಿಪಳ್ಳ ತಲುಪಿದ್ದೆ. ಬೇಗ ಬೇಗನೆ ಗಣ ವೇಷಧಾರಿಯಾಗಿ ನಮ್ಮ ತಂಡವಾದ " ಚಿಂತನ ಗಣೇಶಪುರ"ದ ನಮ್ಮವರೆಲ್ಲರ ಜೊತೆಗೂಡಿ ಹೊರಟೇ ಬಿಟ್ಟೆವು. ಅದೂ " ಬೋಲೋ ಭಾರತ್ ಮಾತಾ ಕೀ .... ಜೈ " ಅನ್ನುವ ಘೋಷಣೆಗಳೊಂದಿಗೆ. ನಾವು ಸೇರಬೇಕಾಗಿದ್ದ ಜಾಗ ಸುತ್ತಲೂ ಎತ್ತರದ ಗುಡ್ಡಗಳಿಂದಾವೃತವಾಗಿತ್ತು. ನೋಡುನೋಡುತ್ತಿದ್ದಂತೆಯೇ ಕಾಣಿಸತೊಡಗಿತು ಅಲ್ಲಿ ದೃಶ್ಯವೈಭವ.... ಅಬ್ಬಾ ಶಿಸ್ತಿನ ಸ್ವಯಂಸೇವಕರು ಮೇಲಿನಿಂದ ನೋಡುವಾಗ ಇರುವೆಗಳೋಪಾದಿಯಲ್ಲಿ ಕಾಣಿಸುತ್ತಿದ್ದರು , ಮೈ ರೋಮಾಂಚನಗೊಂಡಿತು, ಆಯಾಯ ತಾಲೂಕುಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿತ್ತು. ನಮ್ಮದು ಮಂಗಳೂರು ನಗರ ವಿಭಾಗ ಸರಿಯಾಗಿ ಸ್ಟೇಜಿನ ಮಧ್ಯಭಾಗದಲ್ಲಿತ್ತು. ನಮ್ಮ ಸ್ಥಳವನ್ನು ನೋಡಿದ ಕೂಡಲೇ ಬಹಳ ಖುಷಿಯಾಯಿತು. ಎಲ್ಲವೂ ಚೆನ್ನಾಗಿ ಕಾಣಿಸುತ್ತೆ ಅಂತ. ಮಾರ್ಕ್ ಮಾಡಲಾಗಿದ್ದ ಜಾಗದಲ್ಲೇ ಕುಳಿತುಕೊಳ್ಳುವಂತೆ ನಮಗೆ ಆಜ್ನೆ ಇತ್ತು.ಅದನ್ನ ಕಟ್ಟು ನಿಟ್ಟಾಗಿ ಪಾಲಿಸಿ ಕುಳಿತು ಕೊಂಡಿದ್ದಂತೆ ನಮಗೆ ಕುಳಿತಲ್ಲಿಗೇ ಮಜ್ಜಿಗೆ , ನೀರು ಮತ್ತು ಬನ್ನು ಸಿಕ್ಕಿತ್ತು. ತಿಂದವರೇ ಸಾಮೂಹಿಕ ಗೀತೆ ಮತ್ತು ಉಪವಿಷ್ಟ ವ್ಯಾಯಾಮದ ಅಭ್ಯಾಸ ಮಾಡತೊಡಗಿದೆವು.
ಅತ್ತಿತ್ತ ನೋಡಿದರೆ ಜನ ಸಾಗರ, ಮಂಗಳೂರು ವಿಭಾಗದ ಮೂಲೆಮೂಲೆಗಳಿಂದ ಸ್ವಯಂಸೇವಕರ ದಂಡು ನಿರಂತರವಾಗಿ ಕೇಂಜಾರೆನುವ ಸಾಗರವನ್ನ ಸೇರುತ್ತಲೇ ಇತ್ತು . ಕಣುಂಬಿಕೊಳ್ಳುತ್ತಲೇ ಸರ ಸಂಘಚಾಲಕರ ಆಗಮನದ ನಿರೀಕ್ಷೆ ಇತ್ತು. ಸಂಘದ ವಿಶಿಷ್ಟ ಗುಣಗಳಲ್ಲಿ ಪ್ರಮುಖವಾದುದು ಸಮಯ ಪರಿಪಾಲನೆ. ಸಂಘದಲ್ಲಿ ಇಂಡಿಯನ್ ಟೈಮಿಂಗ್ ( ಲೇಟ್ ಆಗೋದು ) ಅನ್ನುವ ಮಾತೇ ಇಲ್ಲ ಯಾಕೆಂದರೆ ಇಲ್ಲಿರುವವರೆಲ್ಲರೂ ಭಾರತೀಯರಲ್ವಾ... ಸರಿಯಾಗಿ ನಾಲ್ಕು ಮೂವತ್ತಕ್ಕೆ ಸರ ಸಂಘಚಾಲಕ " ಮೋಹನ್ ಭಾಗವತ್ " ಜೀ ವೇದಿಕೆಯನ್ನೇರುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಮತ್ತೊಂದು ಕ್ಷಣದಲ್ಲಿ ಮೈ ರೋಮಾಂಚನಗೊಳ್ಳುವಂತೆ ಪ್ರತೊಯೊಂದು ರೋಮಗಳು ಸೆಟೆದು ನಿಲ್ಲುವಂತೆ ಆಗಸಕ್ಕೇರತೊಡಗಿತು ಭಗವಾಧ್ವಜ. ಪುಳ್ಕಿತರಾದವರೆಲ್ಲರ ಬಾಯಿಂದ ಮತ್ತೆ ಹೊರಡತೊಡಗಿತು ಪ್ರಾರ್ಥನೆ...." ನಮಸ್ತೇ ಸದಾ ವತ್ಸಲೇ... ಮಾತೃ ಭೂಮೇ..." ತಾಯಿ ನಾಡಿನ ಬಗೆಗೆ ಈ ಸ್ವಯಂಸೇವಕರಲ್ಲಿ ಅದೆಂಥಾ ಭಕ್ತಿ ....ನಿಗದಿತ ಕಾರ್ಯಕ್ರಮದಂತೆ ಸ್ವಯಂಸೇವಕರಿಂದಾದ ಕವಾಯತು ಅಹಾ ಮನಸೂರೆಗೊಳ್ಲುತ್ತಿತ್ತು ಏಕ ಕಾಲಕ್ಕೆ ಲಕ್ಷಕ್ಕೂ ಮೀರಿದ ಸ್ವಯಂಸೇವಕರ ಕವಾಯತೂ ನೋಡೋದಿಕ್ಕೆ ಎರಡು ಕಣ್ಣು ಸಾಕಾಗೋದಿಲ್ಲ ಅಂತನಿಸಿದ್ದು ಅತಿಶಯವಲ್ಲ.
ಆನಂತರ ಸರಸಂಘ ಚಾಲಕರ ಬೈಠಕ್.... ಹಿತವಾಗಿ ಮಿತವಾಗಿ ಮಾತನಾಡಿದ ಮೋಹನ್ ಜೀ ... ಈ ವಿಭಾಗ ಸಾಂಘಿಕ್ ಶಕ್ತಿ ಪ್ರದರ್ಶನವಲ್ಲ, ಶಕ್ತಿ ಪ್ರದರ್ಶನ ಮಾಡುವ ಅಗತ್ಯವೂ ಸಂಘಕ್ಕಿಲ್ಲ, ಸಂಘ ಮಾಡೋದು ಸೇವಾ ಕಾರ್ಯ ಅಂತದರು. ಹೌದಲ್ವಾ ತಾಯಿ ಭಾರತಿ ಮತ್ತು ಅವಳ ಮಕ್ಕಳಾದ ಭಾರತೀಯ ಸೇವೆ ಮಾಡೊಕೆ ಬೇಕಾಗಿದ್ದು ಸೇವಾಭಾವನೆಯೇ ಹೊರತು ಶಕ್ತಿ ಅಲ್ಲ. ಮುಂದುವರಿಸುತ್ತ ಅವರಂದರು... ವಿವೇಕಾನಂದರ ಜೀವನದ ಸಂಕಲ್ಪವನ್ನೇ ಸಂಘ ಮಾಡುತ್ತಿದೆ ಅಂತ. ಅದಕ್ಕೆ ಸರಿಯಾಗುವಂತೆ ಸಂಘದ ಪ್ರಾರ್ಥನೆಯ ಅರ್ಥವನ್ನು ಬಿಡಿಸಿ ಹೇಳುತ್ತಾ ಬಂದವರೆಲ್ಲರಿಗೂ ಮನದಟ್ಟು ಮಾಡಿಸಿದರು. ಪ್ರತಿಯೊಬ್ಬ ಸ್ವಯಂಸೇವಕನೂ ಆತ್ಮಾವಲೋಕನ ಮಾಡಿಕೊಳ್ಳಬೇಕು, ನಾವೆಲ್ಲರೂ ಸಂಘಟಿತರಾಗಿರಬೇಕು ಅಂದರು. ಬಹುಷ ಒಂದು ಲಕ್ಷಕ್ಕೂ ಮೀರಿದ ಸ್ವಯಂಸೇವಕರಿಗಾಗಿ ಮಾಡಿದ ಈ ಭಾಷಣ ಸ್ವಲ್ಪ ಸಪ್ಪೆಯಾಯಿತೇನೋ ಅಂತ ನನಗನಿಸಿತು. ಆದರೆ ಸದಾ ಒಂದಲ್ಲ ಇನ್ನೊಂದು ರೀತಿಯಲ್ಲಿ ತಿರುಚಿ ಜನರಿಗೆ ನೀಡೋಣ ಅಂತ ಕಾಯುತ್ತಿರುವ ಮಾಧ್ಯಮದ ಹಸಿವನ್ನು ಕಂಡಾಗ ಇಲ್ಲ ಇದು ಸರಿಯಾಗೇ ಇದೆ ಅಂತನಿಸಿತು. ಅಂತೂ ಇಂತೂ ಅದೆಷ್ಟೋ ಜನರ ಪರಿಶ್ರಮ ಸಾಕಾರಗೊಂಡಿತ್ತು. ಸಂಕಲ್ಪತೊಟ್ಟಿದ್ದ ಲಕ್ಷ ಸ್ವಯಂಸೇವಕರ ಸಂಖ್ಯೆ ದಾಟಿ ಬಿಟ್ಟಿತ್ತು. ಅದೆಷ್ಟೋ ಜನ ದೂರದೂರದ ಎತ್ತರದ ಪ್ರದೇಶದಲ್ಲಿ ನಿಂತು ಈ ವೈಭವದ ದೃಶ್ಯಗಳನ್ನ ಕಣ್ತುಂಬಿಕೊಳ್ಳುತ್ತಿದ್ದರು. ಅದ್ಯಾವ ಕೆಮಾರಕ್ಕೂ ಪೂರ್ತಿ ಸ್ವಯಂಸೇವಕರ ದಂಡನ್ನು ಸೆರೆ ಹಿಡಿಯೋಕೆ ಸಾಧ್ಯವಾಗಲಿಲ್ಲವೇನೋ ಆದರೆ ತಾಯಿ ಭಾರತಿ ಮಾತ್ರ ಈ ದೃಶ್ಯಗಳನ್ನು ಕಂಡು ಒಂದಷ್ಟು ನಿಟ್ಟುಸಿರು ಬಿಟ್ಟಿರಬಹುದು. ತನಗಾಗಿ ಮಿಡಿವ ಇಷ್ಟೊಂದು ಜೀವಗಳಿದೆಯಲ್ವಾ ಅಂತನಿಸಿರಬಹುದು.
ಇಷ್ಟಾದರೂ ಮನಸ್ಸಿಗೆ ಸ್ವಲ್ಪ ಬೇಸರವಾಗಿದ್ದು ನನ್ನ ಫೇಸ್ ಬುಕ್ ಗೆಳೆಯರಾದ ಮೋಹನ್ ಚಂದ್ರ ಪಂಜಿಗಾರ್, ಚೇತನ್ ಎಮ್.ಎನ್.ಜಿ, ಮತ್ತು ಶ್ರೀಕಾಂತ್ ಹುದ್ದಾರ್ ಇವರೆಗಳನ್ನ ಭೇಟಿ ಮಾಡಲಾಗದೆ ಇದ್ದುದು, ಇದಕ್ಕೆ ಕಾರಣ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಯೋಗಾಯೋಗವೆಂಬಂತೆ ಪಿ.ಪಿ. ಹೆಗ್ಡೆಯವರ ಭೇಟಿ ಮನಸ್ಸಿಗೆ ಖುಶಿ ಕೊಟ್ಟಿತ್ತು.ಖಂಡಿತವಾಗಿಯೂ ನಮ್ಮ ತಂಡ "ಚಿಂತನ ಗಣೇಶಪುರ" ಕ್ಕೆ ಭೇಟಿ ಕೊಡುತ್ತೇನೆ ಅನ್ನುವ ಮಾತು ನಮ್ಮ ಉತ್ಸಾಹವನ್ನು ದ್ವಿಗುಣಗೊಳಿಸಿತ್ತು. ತುಂಬಿದ ಮನಸ್ಸಿನಿಂದ ನಾವು ಮತ್ತೆ ನಮ್ಮ ದಿನನಿತ್ಯದ ಜೀವನಕ್ಕೆ ಹಿಂತಿರುಗತೊಡಗಿದೆವು.... ತಾಯಿ ಭಾರತಿಯ ಸೇವೆ ನಿರಂತರವಾಗಿರಬೇಕು ಅನ್ನೋ ನಮ್ಮ ಮನಸ್ಸಿನ ಸಂಕಲ್ಪ ಮತ್ತಷ್ಟು ಗಟ್ಟಿಯಾಗಿತ್ತು.

No comments:

Post a Comment