Monday 2 November 2015

ಪುರಾಣಗಳನ್ನ ಒಳಗಣ್ಣಿನಿಂದ ನೋಡಿದರೆ ಮಾತ್ರ ಅದರ ರುಚಿ ಗೊತ್ತಾಗೋದು...



ಫೇಸ್ ಬುಕ್ಕಿನ ಮಿತ್ರರೂ ಮತ್ತು ಅದ್ಭುತ ಕವಿತಾ ರಚನೆಗಾರರೂ ಆದ ಸುಮಾ ಮಾವಹಳ್ಳಿ
ಅವರ ಒಂದು ಕವಿತೆ ಹೀಗಿದೆ...
ಅವರ ಕವಿತೆ
ದಿನವೂ ಹೆಂಗೆಳೆಯರು
ಅತ್ಯಾಚಾರ ನಿಲ್ಲಿಸುವ
ಮೊರೆಹೊತ್ತು
ತುಳಸಿಕಟ್ಟೆ ಪ್ರದಕ್ಷಿಣೆ
ಮಾಡುತ್ತಿದ್ದಾರೆ
ಎಂಥಾ ವಿಪರ್ಯಾಸ...
( ಇಲ್ಲಿ ನಾನವರ ಕವಿತೆಯನ್ನ ವಿಮರ್ಷಿಸುತ್ತಿಲ್ಲ... ಅಂಥಾ ಯೋಗ್ಯತೆಯೂ ನನ್ನದಲ್ಲ... ಬದಲಾಗಿ ಇವರು ಹೇಳಿರುವ ಮೂಲ ಅಂಶದ ಬಗೆಗೆ ನನಗೆ ಗೊತ್ತಿರುವ ಸ್ಪಷ್ಟೀಕರಣ ಕೊಡುವುದು ಅಷ್ಟೇ... ಕವಿಯತ್ರಿಯವ್ರು ಅನ್ಯಥಾ ಭಾವಿಸಬಾರದು...)
ಕವಿತೆಯ ಹಿನ್ನಲೆ... ತುಳಸಿ ವಿಷ್ಣುವಿನಿಂದ ಅತ್ಯಾಚಾರಕ್ಕೊಳಗಾಗಿದ್ದಳು ಅಂತ... ಈ ಒಂದು ವಾಕ್ಯವನ್ನೇ ನೋಡಿ ಬಿಟ್ಟರೆ ದೇವರೆ ಇಂಥಾದ್ದು ಮಾಡಿಬಿಟ್ಟರೆ ಇನ್ನೇನು...? ಅಂತ ಖಂಡಿತವಾಗಿಯೂ ಅನಿಸುತ್ತದೆ... ಆದರೆ ಅದರ ಹಿಂದಿರುವ ವಾಸ್ತವ ಏನು...? ಅದನ್ನೂ ನೋಡಬೇಕು... ತುಳಸಿ ಒಬ್ಬ ದೊಡ್ದ ಪತಿವೃತೆ... ಅವಳ ಪತಿ ಒಬ್ಬ ರಾಕ್ಷಸನಾಗಿದ್ದು ಲೋಕಕಂಟಕನಾಗಿದ್ದ... ಆದರೆ ಇವಳ ಪಾತಿವೃತ್ಯದ ಕವಚದಿಂದಾಗಿ ಅವನನ್ನ ಸಂಹರಿಸುವುದು ಕಷ್ಟವಾಗಿತ್ತು... ಹಾಗಾಗಿ ಅವಳ ಪಾತಿವೃತ್ಯವನ್ನ ಭಂಗಗೊಳಿಸದೇ ಲೋಕಕಲ್ಯಾಣವಾಗುತ್ತಿರಲಿಲ್ಲ... ಇದನ್ನ ಮನಗಂಡೇ ವಿಷ್ಣು ಈ ತುಳಸಿಯನ್ನ ಅತ್ಯಾಚಾರ ಮಾಡುತ್ತಾನೆ.... ಲೋಕಕಂಟಕನನ್ನು ಬೆಂಬಲಿಸಿದ ಕಾರಣದಿಂದಾಗಿಯೇ ಅವಳಿಗೆ ಆ ಶಿಕ್ಷೆ ಸಿಕ್ಕಿರಬಹುದಲ್ವಾ...? ಹಾಗಾಗಿ ನಾವು ಪುರಾಣಗಳ ಕಥೆಯ ಒಳ ತಿರುಳನ್ನ ನೋಡಬೇಕೆ ಹೊರತು ಮೇಲ್ನೋಟವನ್ನಲ್ಲ...
ಅದೇ ಕವಿತೆಗೆ ಪಾಲಾಕ್ಷ ಅನ್ನುವವರು ಕಮೆಂಟು ಮಾಡುತ್ತಾ ಪುರಾಣದಲ್ಲಿನ ಸ್ತ್ರೀ ದೌರ್ಜನ್ಯದ ಕುರಿತಾಗಿ ಹಲವು ಉದಾಹರಣೆಗಳನ್ನ ಕೊಡುತ್ತಾರೆ ಅವುಗಳಿಗೆ ಉತ್ತರಿಸುವ ಸಣ್ಣ ಪ್ರಯತ್ನ...
೧. ಗೌತಮ ಮಹರ್ಷಿಯ ಪತ್ನಿಯನ್ನ ಇಂದ್ರ ಕೆಡಿಸಿದ್ದು...
ಗೌತಮ ಮಹರ್ಷಿ ಶ್ರೇಷ್ಠ ತಪಸ್ವಿ... ಆ ಹೊತ್ತಿಗೆ ಅವರ ತಪಶ್ಶಕ್ತಿ ಯಾವ ಹಂತವನ್ನ ತಲುಪಿತ್ತೆಂದರೆ ಅದನ್ನ ಕಡಿಮೆಗೊಳಿಸದೇ ಇದ್ದಿದ್ದರೆ ಅವರ ದೇಹಕ್ಕೆ ಅದು ಹಾನಿಯಾಗಿರುತ್ತಿತ್ತು... ಯಾವ ರೀತಿ ಅಂದರೆ ಕಡಿಮೆ ವೋಲ್ಟಿನ ಬಲ್ಬಿನಲ್ಲಿ ಜಾಸ್ತಿ ವಿದ್ಯುತ್ ಹರಿಸಿದಂತೆ...ಅದಕ್ಕಾಗಿ ದೈವ ನಿರ್ಣಯದಂತೆ ಇಂದ್ರ ಅಹಲ್ಯೆಯ ಬಳಿ ಹೋಗಿದ್ದು.. ಅಹಲ್ಯೆಯೂ ಗೊತ್ತಿದ್ದೇ ಒಪ್ಪಿಕೊಂಡದ್ದು... ಇದನ್ನು ನೋಡಿದ ಗೌತಮ ಮಹರ್ಷಿ ಶಾಪ ಕೊಟ್ಟು ತಾನು ಸಂಪಾದಿಸಿದ ಶಕ್ತಿಯ ಬಹುಪಾಲನ್ನು ನಷ್ಟಮಾಡಿಕೊಂಡ... ತನ್ನ ಪತಿಯ ಹಿತಕ್ಕಾಗಿ ಮಾಡಿದುದರಿಂದ ಅದು ಸರಿಯಾಗಿತ್ತು... ಮೇಲ್ನೋಟಕ್ಕೆ ಅಹಲ್ಯೆಗೆ ಕೆಡುಕಾದರೂ ಒಬ್ಬ ತಪಸ್ವಿಗೆ ಒಳಿತಾಗಿತ್ತು ಅದರಿಂದಾಗಿ ಲೋಕ ಕಲ್ಯಾಣವಾಯಿತು..

೨. ತ್ರಿಮೂರ್ತಿಗಳು ಅನುಸೂಯೆಯನ್ನು ಕೆಡಿಸಿದ್ದು...
ತ್ರೀಮೂರ್ತಿಗಳು ಎಂದೂ ಅನುಸೂಯೆಯನ್ನು ಕೆಡಿಸಲಿಲ್ಲ... ಇದು ಅವರ ತಪ್ಪು ಕಲ್ಪನೆ...ಬದಲಾಗಿ ಆಕೆಯ ಬಳಿ ಮೊಲೆ ಹಾಲು ಕುಡಿಸೆಂದಾಗ... ತ್ರಿಮೂರ್ತಿಗಳನ್ನೇ ಆಕೆ ಮಗುವಾಗಿಸಿ ಹಾಲು ಕುಡಿಸಿದಳು... ಇಲ್ಲಿ ತ್ರಿಮೂರ್ತಿಗಳಿಂದಾಗಿ ಅವಳ ಪಾತಿವೃತ್ಯದ ಶಕ್ತಿ ಜಗತ್ತಿಗೆ ಗೊತ್ತಾಯಿತು...

೩. ರಂಬೆ ಮೇನಕಾದಿ ಅಪ್ಸರೆಯರು ಕೈಲಾಸದಲ್ಲಿ ಬೆತ್ತಲೆ ನರ್ತನ ಮಾಡುವುದು...
ಅಪ್ಸರೆಯರು ಕೈಲಾಸದಲ್ಲಿ ನೃತ್ಯ ಮಾಡುವುದಿಲ್ಲ... ಅವರು ದೇವಲೋಕದ ನರ್ತಕಿಯರು... ಅದೂ ಬೆತ್ತಲಾಗಿ ನರ್ತನ ಮಾಡಿದ ಉಲ್ಲೇಖ ನನಗಂತೂ ಸಿಗಲಿಲ್ಲ...( ಪ್ರಶ್ನಿಸಿದವರು ಯಾವ ಪುರಾಣದಲ್ಲಿದೆ ಅಂತ ತಿಳಿಸಿದರೆ ನೋಡಬಹುದು..).

೪.ರಾಮ ಲಕ್ಷ್ಮಣರು ಶೂರ್ಪನಖಿಯ ಮೂಗು ಕಿವಿ ಮೊಲೆ ಕತ್ತರಿಸಿದ್ದು...
ಮೊದಲಾಗಿ ರಾಮಲಕ್ಷ್ಮಣರು ಆಕೆ ಸಿಕ್ಕೊಡನೆ ಆ ರೀತಿ ಮಾಡಿದ್ದಲ್ಲ... ಅವಳಿಗೆ ತಿಳಿಹೇಳಿದ ನಂತರವೂ ಕೇಳದೆ ಇದ್ದುದಕ್ಕಾಗಿ ಅವರ ಕಿವಿ ಮೂಗನ್ನ ತೆಗೆದರೇ ಹೊರತು ಸುಮ್ಮ ಸುಮ್ಮನೆ ತೆಗೆಯಲಿಲ್ಲ ತಾನೇ... ರಾಕ್ಷಸಿಯನ್ನೂ ನೋಯಿಸಬಾರದೆಂದರೆ ಅದು ಲೋಕಕಂಟಕವೇ ಅಲ್ವೇ... ( ಅದರದೇ ಆಧಾರದ ಮೇಲೆ ನೋಡೋದಾದರೆ ಈ ಬಲಾತ್ಕಾರಿಗಳನ್ನೂ ಬಿಟ್ಟು ಬಿಡಿ ಅಂದ ಹಾಗಾಯ್ತು... ಅಲ್ವೇ...)

೫. ಹದಿನಾರು ಸಾವಿರ ಗೋಪಿಕಾ ಸ್ತ್ರೀಯರನ್ನ ಶ್ರೀಕೃಷ್ಣ ಮದುವೆಯಾಗಿದ್ದು...
ಆ ಹದಿನಾರು ಸಾವಿರ ಸ್ತ್ರೀಯರು ನರಕಾಸುರನ ಬಂಧನದಲ್ಲಿದ್ದವರು...ಆತ ಯಾವ ರೀತಿ ಅವರನ್ನ ಬಳಸಿಕೊಂಡಿದ್ದನೋ ಯಾರಿಗೆ ಗೊತ್ತು.... ಅದಾಗಿಯೂ ಅವರನ್ನ ವರಿಸಿದನಲ್ಲ ಕೃಷ್ಣ.... ನಮ್ಮಿಂದ ಇಂತಾದ್ದು ಸಾಧ್ಯವೇ.... ಒಬ್ಬಾಕೆ ಸೂಳೆಗೇರಿಯಲ್ಲಿ ಒಂದು ದಿನ ಇದ್ದು ಬಂದವರನ್ನ ನಾವೇನಾದರೂ ವರಿಸಲು ಸಾಧ್ಯವೇ... ಅಂಥಾದ್ದನ್ನು ಮಾಡಿ ಜಗತ್ತಿಗೆ ಆದರ್ಶನಾದ ಶ್ರೀಕೃಷ್ಣನನ್ನು ದೌರ್ಜನ್ಯ ಮಾಡಿದವ ಅಂದರೆ ನಗಬೇಕೋ ಅಳಬೇಕೋ ಅರ್ಥವಾಗುವುದಿಲ್ಲ... ಹಾಗಾದರೆ ಮದುವೆಯಾಗುವುದು ಅಂದರೆ ಹೆಣ್ಣನ್ನ ದೌರ್ಜನ್ಯ ಮಾಡುವುದು ಅಂತಾನಾ...

೬.ಮಾತೃ ಸಮಾನರಾದ ಗೋಪಿಕೆಯ ಬಟ್ಟೆ ಕದ್ದಿದ್ದು...
ಇಲ್ಲೊಂದು ಕುಹಕ ನೋಡಿ ತಾಯಿಯನ್ನು ಮಗು ಬೆತ್ಲಾಗಿ ನೋಡಿದರೆ ಏನು ತಪ್ಪು...? ಪುಟ್ಟ ಬಾಲಕ ಅವ... ಅದು ಯಾವ ರೀತಿಯ ದೌರ್ಜನ್ಯವಾಯಿತು... ವಾಸ್ತವವಾಗಿ ಆ ಘಟನೆಯ ಒಳಾರ್ಥ.... ಕೃಷ್ಣನನ್ನೇ ದೇವರೆಂದು ಕೊಂಡವರು... ತಮ್ಮ ಸಂಪೂರ್ಣ ಸಮರ್ಪಣೆಯ ಪರೀಕ್ಷೆ ಮಾಡಿದ್ದು... ಎಲ್ಲವನ್ನೂ ಅವನಲ್ಲಿ ಅರ್ಪಿಸಿಕೊಂದವರಿಗೆ ಬೆತ್ತಲಾಗುವುದರಲ್ಲೇನು ಹಿಂಜರಿಕೆ ನಾಚಿಕೆ ಅನ್ನುವುದು ನಮ್ಮವರಲ್ಲದವರಲ್ಲಿ ತಾನೇ... ದಿಗಂಬರರು ಯಾಕೆ ಬೆತ್ತಲಾಗುತ್ತಾರೆ.... ??? ಈ ರೀತಿ ಯೋಚಸಿ ನೋಡಿ...

೭.ದ್ರೌಪದಿಯನ್ನ ಐದು ಜನ ಮದುವೆಯಾದರು...
ದ್ರೌಪದಿಯ ವಿಷಯ ಬಂದಾಗ ಅವಳೇ ಪೂರ್ವ ಜನ್ಮದಲ್ಲಿ ಕೇಳಿದ ವರದಿಂದಾಗಿ ಅವಳಿಗೆ ಐವರು ಗಂಡಂದಿರು ಸಿಕ್ಕಿದ್ದು... ಅದಾಗಿಯೂ ಒಂದು ವರ್ಷಕ್ಕೆ ಒಬ್ಬ ಮಾತ್ರ ಪತಿಯ ಸ್ಥಾನದಲ್ಲಿರುತ್ತಿದ್ದ... ಅದೆಷ್ಟು ಕಟ್ಟುನಿಟ್ತಾಗಿ ಆ ಶಿಸ್ತನ್ನು ಪಾಂಡವರು ಪಾಲನೆ ಮಾಡಿದರೆಂದರೆ ಒಳ್ಳೆಯ ಕೆಲಸಕ್ಕಾಗಿಯೇ ಬಿಲ್ಲು ತೆಗೆಯಲು ದ್ರೌಪದಿ ಯುಧಿಷ್ಠಿರ ಕೋಣೆಯನ್ನ ಹೊಕ್ಕ ಅರ್ಜುನ ತೀರ್ಥಯಾತ್ರೆಗೆ ಹೋದ... ಹಾಗಿದ್ದರೆ ದೌರ್ಜನ್ಯ ಎಲ್ಲಿಯಾಯಿತು...?

೭.ದ್ರೌಪದಿಯ ಸೀರೆ ಎಳೆದ ಕೌರವರು...
ಹಾ ಇವರು ಮಾಡಿದ್ದು ದೌರ್ಜನ್ಯವೇ... ಅವರಿಗೆ ಸಿಕ್ಕ ಗತಿಯೇ ಈಗಿನ ಬಲಾತ್ಕಾರಿಗಳಿಗೂ ಸಿಗಬೇಕು... ಅನ್ನೋದು ನನ್ನ ಅಭಿಮತ...
ಇದರಲ್ಲಿ ಒಂದು ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗಲಿಲ್ಲ... ಬ್ರಹ್ಮ ತನ್ನ ಮಗಳನ್ನೇ ಮದುವೆಯಾದ ಅನ್ನೋದು... ಇಲ್ಲಿ ನನ್ನ ಊಹೆಯ ಪ್ರಕಾರ ತನಗಾಗಿ ಬ್ರಹ್ಮ ಪತ್ನಿಯನ್ನೇ ಸೃಷ್ಟಿಸಿದ್ದಿರಬಹುದು.... ಸೃಷ್ಟಿಸಿದ್ದೆಲ್ಲವೂ ಮಕ್ಕಳಾಗಲೇಬೇಕು ಅಂತೇನಿಲ್ಲವಲ್ಲ... ಇದು ನನ್ನ ಊಹೆ ಅಷ್ಟೇ...
ಆದರೆ ಒಟ್ಟಾರೆಯಾಗಿ ಈಗಿನ ಸಮಾಜವನ್ನ ನೋಡುವಾಗ ನಮ್ಮದೇ ಪುರಾಣಗಳನ್ನ ನಾವೇ ಅಣಕ ಮಾಡುವ ವಿಚಿತ್ರ ಪ್ರವೃತ್ತಿಯನ್ನ ಕಾಣುತ್ತೇವೆ... ಮೊದಲಾಗಿ ತಿಳಿದುಕೊಳ್ಳೋಣ ಅದೇನನ್ನು ಹೇಳುತ್ತಿದೆ ಅಂತ... ಅಧ್ಯಯನ ಮಾಡೋಣ ತಿಳಿದವರನ್ನ ಕೇಳಿ ತಿಳಿಯೋಣ... ಅದು ಬಿಟ್ಟು ತಿಳಿಯದೇ ಪುರಾಣಗಳನ್ನ ಅಣಕಮಾಡೋದು ಬೇಡ... ಇದು ಯಾವ ರೀತಿ ಆಗುತ್ತದೆ ಎಂದರೆ ಕುರುಡರು ಆನೆಯನ್ನ ಮುಟ್ಟಿ ಹೇಗಿದೆ ಅಂತ ಹೇಳಿದ ರೀತಿ.... ಮೊದಲು ನಾವು ಕಣ್ಣು ಬಿಟ್ಟು ನೋಡಬೇಕಾಗಿದೆ... ಬರಿಯ ಹೊರಕಣ್ಣು ಅಲ್ಲ... ಒಳಗಣ್ಣಿನಿಂದ ನೋಡಿದರೆ ಒಳಾರ್ಥಗಳು ತಿಳಿದೀತು ಅಲ್ವಾ... ಅವುಗಳು ಹೇಳುವ ನೀತಿಯನ್ನ ನಮ್ಮ ಬದುಕಿನ ಅನುಕೂಲಕ್ಕಾಗಿ ಅಳವಡಿಸಬೇಕಲ್ಲವೇ...

No comments:

Post a Comment