Monday 2 November 2015

ಒಂದೆಡೆ ಎಡವುತ್ತಿರುವ ಭಾರತ.... ಇನ್ನೊಂದೆಡೆ ಮೈಕೊಡವುತ್ತಿರುವ ಭಾರತ...



ಫೆಬ್ರವರಿ ಹದಿನಾಲ್ಕು....ಬಹುಶ ಒಂದಷ್ಟು ಯುವ ಜನತೆಯಲ್ಲಿ ಸಂಚಲನವನ್ನ ತರಿಸೋ ದಿನ. ಈ ತಿಂಗಳ ಆರಂಭದಿಂದಲೇ ಇದರ ಆಚರಣೆಗೆ ಭರ್ಜರಿ ತಯಾರಿಗಳು ನಡೆಯತೊಡಗುತ್ತದೆ. " ಪ್ರೀತಿಸೋದರಲ್ಲಿ ತಪ್ಪೇನು....? " ಅನ್ನುವ ವಾದವನ್ನಿಡುತ್ತಾ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತಾರೆ. ನಿಜ ಪ್ರೀತಿ ಅನ್ನೋದು ಒಂದು ಭಾವನೆ, ಅದನ್ನ ಇದೇ ದೇಶದ್ದು ಅಥವಾ ಇದೇ ಪ್ರದೇಶದ್ದು ಅಂತ ಸೀಮಿತಗೊಳಿಸುವ ಹಾಗಿಲ್ಲ. ಪ್ರೀತಿ ಎನ್ನುವುದು ಜಗದ್ವ್ಯಾಪಿ. ಅದರಲ್ಲೂ ಭಾರತ ಪ್ರೀತಿ ಪ್ರೇಮದ ಬಹು ದೊಡ್ದ ಗಣಿ. ನಮ್ಮ ಸಂಸ್ಕೃತಿಯು ಬರಿಯ ಜೀವ ಇರುವಂತಾದ್ದನ್ನು ಮಾತ್ರವಲ್ಲ ಹಲವಾರು ಜಡವಸ್ತುಗಳನ್ನು ಕೂಡ ಪ್ರೀತಿಸಿ ಅನ್ನುತ್ತೆ. ಹಾಗಿದ್ದೂ ಕೂಡ ಯಾಕೆ ಭಾರತದಲ್ಲಿ " ಪ್ರೇಮಿಗಳ ದಿನ " ಅನ್ನೋ ಆಚರಣೆ ಇಲ್ಲ. ಯಾಕೆ ಇದನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ...? ಕಾರಣ ಬಹಳಷ್ಟಿದೆ. ನಾನು ಕಂಡು ಕೊಂಡಂತೆ ಇಲ್ಲಿ ಪ್ರೀತಿ ಅನ್ನೋದು ಪ್ರತಿಯೊಂದು ಸಂಬಂಧಗಳಲ್ಲೂ ಇದೆ, ಬರಿಯ ಗಂಡು ಹೆಣ್ಣಿನ ನಡುವಿನ ಭಾವನೆ ಅನ್ನುವ ದೃಷ್ಟಿಯಲ್ಲಿ ನೋಡೋದಿಲ್ಲ, ಇನ್ನೊಂದು ಪ್ರೀತಿ ಅನ್ನುವ ಭಾವನೆ ನಿರಂತರವಾಗಿರಬೇಕಾದದ್ದು, ಯಾವ ಕಾಲಕ್ಕೂ ಸಮಾನವಾಗಿರಬೇಕಾದಂಥದ್ದು ಅನ್ನೋ ಭಾವನೆ. ಹಾಗಾಗಿ ಇಲ್ಲಿ ಪ್ರೀತಿಯೆನುವ ಶ್ರೇಷ್ಠ ಭಾವನೆಯನ್ನ ಒಂದು ದಿನ ಬಂಧನದಲ್ಲಿಡುವುದಿಲ್ಲ. ಇನ್ನೂ ಒಂದು ಕಾರಣ ಭಾರತ ಭಾವನಾಜೀವಿ... ಅಂದರೆ ನಾವು ಭಾವನೆಗಳನ್ನ ಬೆಲೆ ಕಟ್ಟಲಾಗದ್ದು ಎಂದು ಕೊಳ್ಳುತ್ತೇವೆ, ಹಾಗಾಗಿ ಈ ಪ್ರೀತಿ ಎನುವ ಭಾವನೆಯ ವ್ಯಾಪಾರೀಕರಣ ಮಾಡೋದಿಲ್ಲ.
ಈಗಿನ ಯುವ ಭಾರತೀಯರು.... ವಿದೇಶಿಯರು "ಪ್ರೇಮಿಗಳ ದಿನ" ಅನ್ನೋ ಆಚರಣೆ ಮಾಡುತ್ತಾರೆ.... ವಾಹ್ ಎಂಥಾ ರಾಷ್ಟ್ರಗಳು.... ಪ್ರೀತಿಗೆ ಬೆಲೆಯಿದೆ ಅಲ್ಲಿ...ನಮ್ಮ ದೇಶದ ತರ ಜಾತಿಗೆ ಬೆಲೆ ಕೊಡೋರಲ್ಲ ಅನ್ನುತ್ತಾ... ವಿದೇಶಿಯ ಸಂಸ್ಕೃತಿಯನ್ನು ಹಾಡಿ ಕೊಂಡಾಡಿ ಅಪ್ಪಿಕೊಂಡು ಬಿಡುತ್ತಾರೆ. ಇಂಥಾ ಬೇಕಾದಷ್ಟು ಜನ ದೈಹಿಕವಾಗಿ ಮಾತ್ರ ಭಾರತೀಯರಾಗಿದ್ದುಕೊಂಡು ಮಾನಸಿಕವಾಗಿ ವಿದೇಶಿಯರಾಗಿದ್ದವರಿದ್ದಾರೆ, ಇಂಥವರನ್ನೇ ನಾನು ಎಡವುತ್ತಿರುವ ಭಾರತ ಅಂದಿದ್ದು. ಈ ಆಚರಣೆಗಳನ್ನು ಮಾಡಿದರೆ ಭಾರತ ಎಡವುತ್ತಿದೆ ಅಂತ ಯಾಕೆ ಹೇಳಬೇಕು...? ಅನ್ನೋ ಪ್ರಶ್ನೆ ಖಂಡಿತ ಏಳುತ್ತೆ. ಅದಕ್ಕೆ ಉತ್ತರ ಹೀಗೆ ಅಂತ ನಾವೇನಾದ್ರೂ ಹೇಳಿದ್ರೂ ....ನಾನ್ ಸೆನ್ಸ್ ಅಂದುಬಿಡುತ್ತಾರೆ. ವ್ಯಾಪಾರಿ ಮನೋಭಾವನೆಯುಳ್ಳ ವಿದೇಶಿಯರು ತಮ್ಮ ವ್ಯಾಪಾರಾಭಿವೃದ್ಧಿ ಮಾಡಿಕೊಳ್ಳಲೋಸುಗವಾಗೇ ಮಾಡಿಕೊಂಡಿರುವ ಆಚರಣೆಗಳೇ....ಈ ಹಲವಾರು..." .....ಡೇ " ಗಳು. ಹಾಗೇ ಆಲೋಚನೆ ಮಾಡಿ ಇಂದಿನ ದಿನ ಅದೆಷ್ಟು ಜನರಿಗೆ ವ್ಯಾಪಾರ ಆಗುತ್ತೆ.... ಕಾರ್ಡ್ಸ್ ಗಳ ವ್ಯಾಪಾರಿಗೆ, ಗಿಫ್ಟ್ ಮಾರಾಟಗಾರರಿಗೆ, ಗುಲಾಬಿ ಅಥವಾ ಹೂವಿನ ವ್ಯಾಪಾರಿಗೆ, ಪಾರ್ಕುಗಳಿಗೆ, ಅಮ್ಯೂಸ್ ಮೆಂಟ್ ಪಾರ್ಕುಗಳಿಗೆ, ಸಿನಿಮಾ ಹಾಲ್ ಗಳಿಗೆ , ಐಸ್ ಕ್ರೀಮ್ ಪಾರ್ಲರ್ ಗಳಿಗೆ, ಪಬ್ ಗಳಿಗೆ , ಬಾರ್ ಗಳಿಗೆ.... ಮರುದಿನ ಮೆಡಿಕಲ್ ಶಾಪಿನವರಿಗೆ (???). ಹೀಗೆ ಖರ್ಚಿನ ಮಾತೆತ್ತಿದರೆ...." ಅಯ್ಯೋ ಖರ್ಚು ಮಾಡಲಿ , ಅವರವರ ದುಡ್ಡು ಹೇಗೆ ಖರ್ಚು ಮಾಡೋದಿಕ್ಕೂ ಅವರು ಸ್ವತಂತ್ರರು..." ಅನ್ನೋ ಪ್ರಶ್ನೆ ಬರುತ್ತೆ ... ಖಂಡಿತ ಸ್ವಂತ ಹಣ ಏನು ಬೇಕಿದ್ರೂ ಮಾಡಲಿ ... ಕೇಳೋದಿಕ್ಕೆ ನಾವ್ಯಾರು .... ಆದರೂ ಒಂದು ಅಂಶವನ್ನ ಗಮನಿಸಿ.... ಈ ಆಚರಣೆಯನ್ನ ಮಾಡೋರಲ್ಲಿ ಬಹುಪಾಲು ಜನ ವಿದ್ಯಾರ್ಥಿಗಳು.... ದುಡಿಯದ ಇವರ ಕೈಯಲ್ಲಿ ಇವಕ್ಕೆಲ್ಲಾ ಎಲ್ಲಿಂದ ಹಣ ಬಂತು....? ಮನೆಯವರು ಕೊಟ್ಟರು ಅಂದಿಟ್ಟುಕೊಳ್ಳಿ.... ಇಂಥಾದಕ್ಕೆಲ್ಲ ಖರ್ಚು ಮಾಡೋದಿಕ್ಕಿದೆ ಅಂತ ಹೇಳಿ ಕೇಳಿಯಾರಾ...? ಸಂಭವ ಬಹಳಷ್ಟು ಕಡಿಮೆ .... ಆ ಪ್ರೊಜೆಕ್ಟ್ ಇದೆ ...ಈ ಫೀಸ್ ಕಟ್ಟೋದಿದೆ..... ಹಾಗೆ ಹೀಗೆ ಅಂತ ಮನೆಯವರಲ್ಲಿ ಸುಳ್ಳು ಹೇಳಿ ಹಣ ಪಡೆದುಕೊಳ್ಳುತ್ತಾರೆ, ಕಾಲೇಜಿಗೆ ರಜೆ ಇರದಿದ್ದರೂ ಈ ದಿನ ಹಾಜರಾಗೋದಿಲ್ಲ....ಇನ್ನೂ ಕೆಲವರು ಮನೆಯಿಂದ ಹಣ ಸಿಗದೇ ಇದ್ದಾಗ ಅಡ್ದ ದಾರಿ ಹಿಡಿಯುವ ಸಂಭವವೂ ಇದೆ ....ಕದಿಯುವುದು, ಬೆಟ್ಟಿಂಗ್ ಗಳು, ಸಾಲ ಪಡೆದುಕೊಳ್ಳುವುದು...ಕೊನೆಗೆ ಮಾದಕ ದ್ರವ್ಯಗಳ ಮಾರಾಟ ಮಾಡುವುದು....ಈ ಮೂಲಕವಾದರೂ ಹಣ ಸಂಪಾದಿಸುತ್ತಾರೆ ಒಮ್ಮೆ ಈ ರೀತಿ ಆದರೆ ಅದು ಅವರ ರಕ್ತಗತ ಸ್ವಭಾವವೇ ಆಗಿ ಬಿಡುತ್ತದಲ್ವಾ....ಈಗ ಹೇಳಿ ಈ ಜನ ಎಡವುತ್ತಿಲ್ಲವೇ....?
ಬಹಳಷ್ಟು ಜನ ಪ್ರೇಮಿಗಳಿಗೆ ತಮ್ಮ ದೈಹಿಕ ಕಾಮನೆಗಳನ್ನ ಈಡೇರಿಸೋದಿಕ್ಕೆ ವೇದಿಕೆ ಈ ಪ್ರೇಮಿಗಳ ದಿನ. ಹೆಚ್ಚಿನವರು ತಮ್ಮ ಸಂಗಾತಿಯ ಬೆಲೆಬಾಳುವ ಗಿಫ್ಟ್ ಅಥವಾ ಟ್ರೀಟ್ ಗಳಿಗೆ ಕಟ್ಟು ಬಿದ್ದು ತಮ್ಮ ಸಂಯಮವನ್ನ ಕಳೆದುಕೊಂಡು ಬಿಡುತ್ತಾರೆ. ( ಬಹುಶ ಇವತ್ತಿನ ದಿನ ಪಾರ್ಕುಗಳಿಗೆ ಹೋದರೆ ಇಂತಹಾ ಅಸಹ್ಯ ವರ್ತನೆಯ ದೃಶ್ಯ ಕಾಣಬಹುದೇನೋ...) ಒಮ್ಮೆ ಈ ರೀತಿ ಎಡವಿದ ನಂತರ ಈ ತಪ್ಪುಗಳು ಮರುಕಳಿಸುತ್ತಲೇ ಇರುತ್ತದೆ. ಇದು "ಪ್ರೀತಿ" ಆಗೋದಿಕ್ಕೆ ಸಾಧ್ಯವಿದೆಯಾ...? ತನ್ನ ದೈಹಿಕ ಕಾಮನೆಗಳನ್ನ ಈಡೇರಿಸಿಕೊಳ್ಳುವುದಕ್ಕ್ಕಾಗಿಯೇ ಹಲವಾರು ಜನ ಪ್ರೀತಿಯ ನಾಟಕವಾಡುತ್ತಾರೆ. ಮತ್ತು ಅಂಥವರಿಗೆ ತಮ್ಮ ಶೀಲದ ಬಗ್ಗೆ ಅಂಥಾ ಪಾವಿತ್ರ್ಯ ಭಾವವೂ ಇರೋದಿಲ್ಲ. ಈ ವ್ಯಾಲೆಂಟೈನ್ ಡೇ ಪಾರ್ಟಿಗಳಲ್ಲಿ ಪಾನಮತ್ತರಾಗಿ ತಮ್ಮ ಶೀಲಕಳೆದುಕೊಳ್ಳುವ ಹುಡುಗಿಯರ ಸಂಖ್ಯೆ ಅದೆಷ್ಟೋ... ಆದರೂ "ಸೋ...ವಾಟ್ " ಅಂದು ಸುಮ್ಮನಿರುತ್ತಾರಲ್ವಾ... ನಿಮಗನ್ನಿಸುತ್ತಿಲ್ವಾ ಇದು ಎಡವುತ್ತಿರುವವರ ಲಕ್ಷಣ ಅಂತ...ಅದಕ್ಕಾಗಿಯೇ ತಾನೇ ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾದ ಭಾರತೀಯ ಸಂಸ್ಕೃತಿಯಲ್ಲಿ ಇಂಥಾ ಗೊಡ್ಡು ಆಚರಣೆಗಳಿಗೆ ನೆಲೆ ಇಲ್ಲದಿರೋದು...
ಪ್ರೀತಿಸುವುದು ತಪ್ಪಲ್ಲ ಖಂಡಿತ ಒಪ್ಪಿಕೊಳ್ಳೋಣ..ಪ್ರೀತಿಸೋದು ಬೇಡ ಅಂತಾನೂ ನಾನು ಹೇಳೋದಿಲ್ಲ , ಆದರೆ ಆ ಪ್ರೀತಿಯ ಆಚರಣೆಗೆ ಒಂದು ಚೌಕಟ್ಟಿರುತ್ತದೆ. ಅದನ್ನ ಮೀರುವುದು ಸರಿಯಲ್ಲ ಅನ್ನೋದಷ್ಟೇ ನನ್ನ ಅಭಿಪ್ರಾಯ. . ಇಲ್ಲಿ ಯಾವ ಪ್ರಾಯದಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಕೊಡಬೇಕು ಅನ್ನೋದು ಕೂಡ ಮುಖ್ಯ . ವಿದ್ಯಾರ್ಜನೆಯ ಸಮಯದಲ್ಲಿ ಜ್ನಾನದಾಹವಿರಬೇಕೇ ಹೊರತು ಇನ್ನಿತರ ವಿಷಯಗಳಲ್ಲ. ಹಾಗಂತ ಈ " ಕೋ ಎಜುಕೇಶನ್ " ಸಿಸ್ಟಂ ಗಳಲ್ಲಿ ಆಕರ್ಷಣೆಗಳು ಆಗೋದು ಸ್ವಾಭಾವಿಕ , ವಯಸ್ಸಿನ ದೋಷ ಅಂತದ್ರೂ ಅದನ್ನ ನಿಯಂತ್ರಣದಲ್ಲಿಡಬೇಕಾದದ್ದು ನಮ್ಮ ಕರ್ತವ್ಯ... ಈ ನಿಯಂತ್ರಣ ಶಕ್ತಿ ನಮಗೆ ಸಿಗೋದು ನಾವು ಪಡೆದಿರೋ ಸಂಸ್ಕಾರದಿಂದ, ಪೋಷಕರ ಮೇಲಿನ ಭಯ ಭಕ್ತಿಯಿಂದ. ನಾವು ಕಲಿತ ಶಿಸ್ತಿನಿಂದ. ತನ್ನ ವಿಧ್ಯಾಭ್ಯಾಸಕ್ಕಾಗಿ ತನ್ನ ಹೆತ್ತವರು ಯಾವ ರೀತಿ ಕಷ್ಟ ಪಡುತ್ತಿದ್ದಾರೆ ಅನ್ನೋ ಅರಿವು ಇದ್ದಾಗ ಈ ನಿಯಂತ್ರಣ ಶಕ್ತಿ ಬಂದೇ ಬರುತ್ತದೆ ( ಇಲ್ಲಿ ಪೋಷಕರ ಪಾತ್ರವೂ ಮುಖ್ಯವಾದದ್ದು ಮುದ್ದು ಮಾಡುವುದಕ್ಕೂ ಮಿತಿ ಇರಬೇಕು) ಅಂಥಾ ನಿಗ್ರಹ ಶಕ್ತಿ ನಮ್ಮ ಸಂಸ್ಕಾರಕ್ಕಿದೆ, ಆದರೆ ಸಂಸ್ಕಾರ ಕೊಡುವ ಕಾರ್ಯ ಆಗಬೇಕಿದೆ. ಅದಾಗದೇ ಇದ್ದಾಗ ನಮ್ಮ ಪೀಳಿಗೆ ಮುಂದೆ ಹಲವು ರೋಗಗ್ರಸ್ತವಾಗೋದು ನಿಶ್ಚಿತ. ಯುವ ಪೀಳಿಗೆಯೇ ರೋಗಪೀಡಿತವಾಯಿತು ಅಂತಾದರೆ ದೇಶ ಹೇಗೆ ಚೈತನ್ಯಮಯವಾಗಿರಲು ಸಾಧ್ಯ...?
ಈ ಸಂಸ್ಕಾರ ಮತ್ತು ಶಿಸ್ತಿನ ಮಾತುಗಳನ್ನಾಡುವಾಗ ಥಟ್ಟನೆ ನೆನಪಾಗೋದು " ಸಂಘ " ಮತ್ತು " ಸ್ವಯಂಸೇವಕರು ". ಯುವಜನತೆ ಒಂದು ಬದಿಯಲ್ಲಿ ಹಾಳಾಗುತ್ತಿದೆಯಲ್ಲಾ ಅಂದುಕೊಂಡಾಗಲೆಲ್ಲಾ ಮೊನ್ನೆಯ ಸಾಂಘಿಕ್ ನಲ್ಲಿನ ಯುವ ಸ್ವಯಂಸೇವಕರ ಬಳಗವನ್ನ ನೆನೆದಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರಕುತ್ತದೆ. ಅಬ್ಬಾ.... ನಮ್ಮ ಸಂಸ್ಕೃತಿಯ ರಕ್ಷಣೆಗಾಗಿ ತುಡಿಯುವ , ಮಿಡಿಯುವ ಯುವ ಹೃದಯಗಳಿವೆಯಲ್ಲಾ.... ಅನ್ನೋ ಸಣ್ಣ ಸಮಾಧಾನ. ಕಾರಣ ಸ್ವಯಂಸೇವಕರಾಗಿರುವ ಯುವ ಪೀಳಿಗೆಗೆ ಆತ್ಮ ನಿಗ್ರಹ ಚೆನ್ನಾಗಿ ಗೊತ್ತಿರುತ್ತದೆ. ಹಾಗಂತ ಸ್ವಯಂಸೇವಕರು ಪ್ರೀತಿಸೋದಿಲ್ಲ ಅಂತೇನಿಲ್ಲ.... ಆದರೆ ಅವರ ಹೃದಯದಲ್ಲಿ ಮೊದಲ ಸ್ಥಾನ ತಾಯಿ ಭಾರತಿಗೆ... ಅವರ ಪ್ರೀತಿ ಶ್ರೀಕೃಷ್ಣ ಮತ್ತು ರಾಧೆಯರಂಥಾ ಪ್ರೀತಿ. ಅಲ್ಲಿ ಕಾಮದ ವಾಸನೆ ಇರೋದಿಲ್ಲ. ಪರಿಶುದ್ಧ ಪ್ರೀತಿ ಇದ್ದಾಗ ಮಾತ್ರ ಸಂಬಂಧಗಳು ಬಹುಕಾಲ ಬಾಳೋದು ಅಲ್ವಾ. ಸಂಬಂಧಗಳು ಬೆಳೆದಾಗ ದೇಶಕ್ಕೆ ಒಳಿತು... ಈ ರೀತಿ ಮೈಕೊಡವಿಕೊಂಡು ತಾಯಿ ಭಾರತಿಯ ಸೇವೆಗಾಗಿ ಜೀವನ ಮುಡಿಪಾಗಿಟ್ಟವರನ್ನು ಕಂಡಾಗ ಸಂತೋಷವಾದರೂ... ಆ ಸಂಖ್ಯಾಬಲ ಸಾಕಾಗುವುದಿಲ್ಲವೇನೋ ಅಂತನಿಸುತ್ತದೆ. ಕಾರಣ ಎಡವುತ್ತಿರುವವರ ಸಂಖ್ಯೆ ಬಹಳಷ್ಟಿದೆ. ಅವರನ್ನ ಎಡುವುವಂತೆ ಮಾಡುವ ಕಾಣದ ಕೈಗಳೂ ಬೇಕಾದಷ್ಟಿವೆ. ಆ ಕೈಗಳಿಗೆ ಬೇಕಾಗಿರೋದು ಬರಿಯ ವ್ಯಾಪಾರ. ಇದರ ಅರಿವು ಆಗದೆ ನಾವು ಮೈಕೊಡವಲು ಸಾಧ್ಯವಿಲ್ಲ ಅಲ್ವಾ...? ಈಗ ನೀವು ನಿರ್ಧರಿಸಿ ನೀವು ಯಾವ ಗುಂಪಿನವರಾಗಬೇಕೆಂದು...? ಎಡವುತ್ತಿರುವವರ ಗುಂಪೋ.... ಮೈಕೊಡವಿಕೊಳ್ಳುತ್ತಿರುವವರ ಗುಂಪೋ....
ಯಾವತ್ತಿಗೂ ನಿಜವಾದ ಪ್ರೀತಿಗೆ ಇದೆ ನನ್ನ ಬೆಂಬಲ
ಪರಿಶುದ್ಧ ಪ್ರೀತಿ ಮಾತ್ರ ಉಳಿಯಲಿ... ಎನುವುದೇ ನನ್ನ ಹಂಬಲ

No comments:

Post a Comment