Monday 2 November 2015

ಯಾನದೊಳಗೆ ನನ್ನ ಯಾನ....



ಯಾನ ನನ್ನ ಕೈ ಸೇರಿದಾಗ ನನ್ನ ಹಲವಾರು ಬರಹಗಾರ ಮಿತ್ರರು, ಅದನ್ನೋದಿ... ಅದರ ಕುರಿತಾದ ವಿಮರ್ಶೆಯನ್ನು ಬರೆದಾಗಿತ್ತು. ನಾನು ಅಷ್ಟೊಂದು ಸ್ಲೋ ಓದೋದರಲ್ಲಿ ಅದಿರಲಿ ಬಿಡಿ.... ಆದರೆ ನಾನು ಆ ವಿಮರ್ಶೆಗಳನ್ನು ಓದಿದಾಗ ಹೆಚ್ಚಿನ ಜನ, ಭೈರಪ್ಪನವರ ಉಳಿದ ಕಾದಂಬರಿಗಿಂತ ಇದು ಸ್ವಲ್ಪ ಸಪ್ಪೆ ಅನ್ನುವಂತೆ ಬರೆದಿದ್ದರು. ಕಾರಣ ಅವರು ಭೈರಪ್ಪನವರ ಎಲ್ಲಾ ಕಾದಂಬರಿಯನ್ನು ಓದಿದವರು... ಹಾಗಾಗಿ ಅವರಿಗೆ ಆ ರೀತಿ ಅನಿಸಿತ್ತೋ ಏನೋ.... ವಿಮರ್ಶೆ ಏನಾದರಾಗಿರಲಿ ಭೈರಪ್ಪನವರ ಕಾದಂಬರಿ ಓದದಿರಲು ಸಾಧ್ಯವೇ ಅದೂ ಬೇರೆ ನಾನು ಬರಿಯ ಎರಡು ಮೂರು ಕಾದಂಬರಿಗಳನಷ್ಟೇ ಓದಿದ್ದು ಹಾಗಾಗಿ ಯಾನದ ಯಾನವನ್ನ ಆರಂಭಿಸಿಯೇ ಬಿಟ್ಟೆ...
ಓದಿ ಮುಗಿಸಿದಾಗ ಅದೇನೋ ಸಂಭ್ರಮ.... ಒಂದಷ್ಟು ಬೇಸರ... ಆದರೆ ಒಟ್ಟಾರೆಯಾಗಿ ಯಾನದ ವಿಮರ್ಶೆಗಳೇ ನನ್ನ ಪಾಲಿಗೆ ಸಪ್ಪೆ ಅಂತನಿಸಿತ್ತು.... ಕಾರಣ ಇಲ್ಲಿ ಒಂದಷ್ಟು ವಿಜ್ಞಾನವಿದೆ.... ಒಂದಷ್ಟು ಆಧ್ಯಾತ್ಮವಿದೆ... ಒಂದಷ್ಟು ಕಲ್ಪನೆಗಳಿವೆ... ಅವರ ಕಲ್ಪನೆಗಳೇ ಅದ್ಭುತ.... ಓಹ್ ಈ ದಿಕ್ಕಿನಲ್ಲೂ ಯೋಚಿಸಬಹುದಲ್ವಾ ಅನ್ನಿಸುವಂತೆ ಮಾಡುತ್ತದೆ.... ಉದಾಹರಣೆ ನಾಯಕ ಅಂಟಾರ್ಟಿಕದಲ್ಲಿ ಕಳೆಯೋ ಸಮಯ... ಬರಿಯ ಆರು ತಿಂಗಳು ಕತ್ತಲಿನಲ್ಲೇ ಇರಬೇಕಾದಂತಹ ಪರಿಸ್ಥಿಯ ಜೀವನವನ್ನು ಕಲ್ಪಿಸಿ ಬರೆಯುವುದಿದೆಯಲ್ಲಾ ಅದು ಸಾಮಾನ್ಯರಿಂದ ಸಾಧ್ಯವಿಲ್ಲ... ಅಂತರಿಕ್ಷದ ಬದುಕು ಅದೂ ಆ ರೀತಿಯ ಯಾನವೊಂದು ವೈಜ್ಞಾನಿಕವಾಗಿಯೂ ಸಾಧ್ಯ ಎನ್ನಿಸುವಂತ ಕಲ್ಪನೆಯನ್ನು ಬರಹವಾಗಿಸೋಕೆ ಭೈರಪ್ಪನವರಿಗಷ್ಟೇ ಸಾಧ್ಯ....
ಅದರಲ್ಲೂ ಅಷ್ಟೊಂದು ದೀರ್ಘಕಾಲೀನ ಯಾನದಲ್ಲಿನ ಸಂತತಿಯ ಬೆಳವಣಿಗೆಯ ಕುರಿತಾಗಿ ಅವರು ಕೊಡುವ ವಿವರಣೆ ನಮಗೆ ಮುಜುಗರವೆನಿಸಿದರೂ ವೈಜ್ಞಾನಿಕವಾಗಿ ಅದನ್ನು ನಿರೂಪಿಸುವ ಶೈಲಿ ಅದ್ಭುತ.... ನಾಯಕಿ ಆಧುನಿಕಳಾದರೂ ಅವಳಲ್ಲೊಂದು ಭಾರತೀಯ ನಾರಿಯ ಛಾಪನ್ನು ಮೂಡಿಸಿ ತನ್ನ ಸಂಗಾತಿಯ ಬಗೆಗಿನ ಆಯ್ಕೆಯಲ್ಲಿ ಆ ಪಾತ್ರದೊಳಗಿನ ತೊಳಲಾಟವನ್ನು ಅದ್ಭುತವಾಗಿ ಬರಹವಾಗಿಸಿದ್ದಾರೆ ಅಂತ ನನಗನಿಸಿತು... ಅದರಲ್ಲೂ ನಾಯಕಿ ಹೇಳುವ ಒಂದು ಮಾತು " ಭೂಮಿಯ ಮೇಲೆ ಕೊಟ್ಟ ಮಾತಿಗೆ ಸೂರ್ಯನ ಕಕ್ಷೆಯನ್ನು ದಾಟಿ ಬಂದಾಗ ಅದಕ್ಕೆ ಬೆಲೆ ಕೊಡಬೇಕಾಗಿಲ್ಲ " ಅನ್ನುವ ಮಾತು ಅಬ್ಬಾ ಎಂಥಾ ಯೋಚನೆ ಅಂತನಿಸಿ ನಮ್ಮ ದಂಗಾಗಿಸಿಬಿಡುತ್ತದೆ.
ಭೈರಪ್ಪನವರ ಕಾದಂಬರಿ ಅಂತಂದರೆ ಅಲ್ಲಿ ನಮಗೊಂದಷ್ಟು ಜ್ಞಾನ ಸಿಕ್ಕೇ ಸಿಗುತ್ತದೆ... ತಮ್ಮ ಅಧ್ಯಯನದಿಂದ ಪಡೆದ ಜ್ಞಾನ ಸಂಪತ್ತನ್ನು ಅವರು ತಮ್ಮ ಪಾತ್ರಗಳ ಮೂಲಕ ಹಂಚುತ್ತಾರೆ... ಇದೇ ಅವರನ್ನ ನಾನು ಬಹುವಾಗಿ ಮೆಚ್ಚಲು ಕಾರಣ... ಉದಾಹರಣೆಗಾಗಿ ಈ ಸಾಲುಗಳನ್ನೇ ನೋಡಿ... " ಶಾಸ್ತ್ರದಲ್ಲಿ ಏನಿದೆ ? ಮಕ್ಕಳ ಜವಾಬ್ದಾರಿಯನ್ನು ಮುಗಿಸಿ ಹೆಂಡತಿಯ ಅನುಮತಿ ಪಡೆಯದವನಿಗೆ ಸಂನ್ಯಾಸ ಕೊಡಕೂಡದು ಅಂತ ಇದೆ. ಯಾವ ಹೆಂಡತಿ ತಾನೇ ಅನುಮತಿ ಕೊಡುತ್ತಾಳೆ ? ಕೊಟ್ಟರೂ ಸಂನ್ಯಾಸಿಯಾದ ಮೇಲೂ ಅವನ ಮನಸ್ಸು ಬಿಟ್ಟು ಬಂದ ಹೆಂಡತಿ ಮಕ್ಕಳ ಕಡೆಗೆ ಎಳೆಯುವುದಿಲ್ಲವೇ ? ಅದಕ್ಕೇ ನೇರವಾಗಿ ಬ್ರಹ್ಮಾಚಾರಿಗೆ ಸಂನ್ಯಾಸ ಕೊಡುವ ಪದ್ಧತಿ ಬೆಳೀತು. " ಇಲ್ಲಿ ಸಂನ್ಯಾಸದ ಕುರಿತು ನಮ್ಮಲ್ಲಿನ ಮೂಲ ಸತ್ಯ ಮತ್ತು ಈಗಿನ ಪದ್ಧತಿ ಬೆಳೆದು ಬಂದ ಹಿನ್ನಲೆಯನ್ನ ನಮಗೆ ವಿವರಿಸುತ್ತಾರೆ..
ಹಿಮಾಲಯದ ಉಗಮ ಹೇಗಾಯಿತು... ಅನ್ನುವುದನ್ನು ವಿವರಿಸುತ್ತಾ ಅಲ್ಲಿನ ಈಗಿನ ಪರಿಸ್ಥಿತಿಯನ್ನ ವಿವರಿಸಿ ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ಕಡಿಮೆಮಾಡಬೇಕಾಗಿದೆ.... ನಮ್ಮ ಪುಣ್ಯ ಕ್ಷೇತ್ರಗಳನ್ನ ಉಳಿಸಿಕೊಳ್ಳಬೇಕಾಗಿದೆ ಅನ್ನುವುದನ್ನ ನಮಗೆ ತಿಳಿಹೇಳುತ್ತಾರೆ...ಬರಿಯ ಇದಿಷ್ಟೇ ಅಲ್ಲ ಸೂರ್ಯ ಅಂದರೆ ವೈಜ್ಞಾನಿಕ ವಾಗಿ ಏನು ಅನ್ನುವುದನ್ನ ವಿವರಿಸಿ ಅದಕ್ಕೂ ನಮ್ಮ ಹಿರಿಯರು ಮಾತಿಗೆ ಸೂರ್ಯ ಚಂದ್ರರನ್ನು ಆಧಾರವಾಗಿರಿಸುವುದರ ಕುರಿತು ಅದ್ಭುತ ಮಾಹಿತಿ ಕೊಡುತ್ತಾರೆ... ಅದನ್ನೆಲ್ಲಾ ಓದಿಯೇ ನಾವು ತಿಳಿದುಕೊಳ್ಳಬೇಕು...ಅಧ್ಯಾತ್ಮ ಅಂದರೆ ಏನು ? ಅಹಿಂಸೆ ಎಂದರೆ ಏನು ? ಎಲ್ಲವುದನ್ನೂ ವಿವರಿಸಿ ನಮಗೆ ತಿಳಿಹೇಳುತ್ತಾರೆ... ನಮ್ಮ ವೇದ ಉಪನಿಷತ್ತುಗಳಲ್ಲಿನ ಜ್ಞಾನವನ್ನೂ ನಮಗೆ ಉಣಬಡಿಸುತ್ತಾರೆ.
ಇದರ ಹೊರತಾಗಿಯೂ ಭಾರತದಲ್ಲಿ ವಿಜ್ಞಾನದಲ್ಲೇ ತೊಡಗಿಸಿಕೊಂಡವರ ನಂಬಿಕೆ ಮತ್ತು ನಮ್ಮ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಿಂದಾಗುವ ಪರಿಣಾಮಗಳೆಲ್ಲದರ ಅದ್ಭುತ ಚಿತ್ರಣ ಇಲ್ಲಿ ಸಿಗುತ್ತದೆ. ಕೊನೆಯಲ್ಲಿ ನಾಯಕನ ಮಗನಿಗೆ ತನ್ನ ನಿಜವಾದ ಹೆತ್ತವರ ಕುಳಿತು ತಿಳಿದುಕೊಳ್ಳಬೇಕೆನುವ ಛಲ ಉಂಟಾದಾಗ ಆಗುವ ತಳಮಳ.... ಮತ್ತು ಕೊನೆಯಲ್ಲಿ ವ್ಯಕ್ತಿಯೊಳಗಾಗುವ ಒಂಟಿತನದ ಕುರಿತು ಭೈರಪ್ಪನವರು ನೀಡೋ ವಿವರಣೆ ಬಹಳಾನೇ ಖುಷಿ ಕೊಡುತ್ತದೆ...
ಹಾಗಾಗಿ ಇಲ್ಲಿ ಯಾನ ಅನ್ನುವ ಶೀರ್ಷಿಕೆ ನೋಡಿ ಮುಳಪುಟದ ಚಿತ್ರ ನೋಡಿ ಬರಿಯ ಹಾಲಿವುಡ್ ಸಿನಿಮಾಗಳ ಕಲ್ಪನೆ ಮಾಡಿಕೊಂಡಿದ್ದವರಿಗೆ ಸ್ವಲ್ಪ ಸಪ್ಪೆಯಾಗಿದೆ ಅಂತನಿಸುವುದೋ ಏನೋ ಆದರೆ ವಿಜ್ಞಾನ, ಭಾರತೀಯ ಯೋಚನ ವಿಧಾನ ಜೀವನ ಶೈಲಿ ಮತ್ತು ಭಾರತೀಯ ಜ್ಞಾನ ಮತ್ತು ಆಧ್ಯಾತ್ಮದ ಹಸಿವನ್ನು ಇಟ್ಟುಕೊಂಡಿರುವವರಿಗೆ ಇದೊಂದು ಭೂರೀ ಭೋಜವಾಗುವುದರಲ್ಲಿ ನನಗೇನೂ ಸಂದೇಹವಿಲ್ಲ . ಹಾ.... ಒಂದಂತೂ ಸತ್ಯ ಕೊನೆಯಲ್ಲಿ ಛೇ.... ಮುಗಿದೇ ಹೋಯಿತಾ...!!! ಅನ್ನುವ ಭಾವ ಕಾಡಿಯೇ ಕಾಡುತ್ತದೆ...ಯಾಕೆಂದರೆ ಲಕ್ಷ ಕಿಮೀ ಪ್ರತಿ ಘಂಟೆಯ ವೇಗದಲ್ಲಿ ಹೋಗುತ್ತಿದ್ದ ಯಾನಕ್ಕೆ, ಸಡನ್ ಆಗಿ ಬ್ರೇಕ್ ಹಾಕಿದರೆ ಹೇಗಿರುತ್ತೆ...???? ಆ ಥರ ಎಂಡಿಂಗ್ ಇದೆ.... ಅಯ್ಯೋ ನಿಂತೇ ಬಿಟ್ಟಿತಲ್ಲ... ಅನ್ನುವ ಬೇಸರದಿಂದ ಯಾನದೊಳಗಿನ ನಮ್ಮ ಯಾನವನ್ನೂ ನಾವು ನಿಲ್ಲಿಸಬೇಕಾಗುತ್ತದೆ. ಇನ್ನೂ ಓದದವರು ಖಂಡಿತವಾಗಿಯೂ ಓದಿ ಅನ್ನುವ ಉಚಿತ ಮತ್ತು ಉಪಯುಕ್ತ ಸಲಹೆಯೊಂದಿಗೆ ನಾನು ನನ್ನ ಯಾನವನ್ನು ಮುಗಿಸುತ್ತೇನೆ....

No comments:

Post a Comment