Monday 2 November 2015

ನಮಗೆ ಸ್ವದೇಶ ಏನೋ ಇದೆ ಆದರೆ ಸ್ವದೇಶೀಯತೆ....?



ಭಾರತೀಯರಿಗೆ ಸ್ವದೇಶ ಅಂದರೆ ಭಾರತ. ಬ್ರಿಟಿಷರ ಕಪಿಮುಷ್ಟಿಯಿಂದ ಭಾರತಮಾತೆಯನ್ನು ಬಿಡಿಸಿಕೊಳ್ಳಲು ನಮ್ಮ ಪೂರ್ವಜರು ಮಾಡಿದ ಬಲಿದಾನ ಸಾಮಾನ್ಯವಾದುದಲ್ಲ. ನೆತ್ತರಿನ ಹೊಳೆಯೇ ಹರಿದಿತ್ತು. ಅದರ ಫಲವೇ ನಮಗೆ ಸ್ವಂತ ದೇಶ, ಸ್ವದೇಶ ಸಿಕ್ಕಿರೋದು. ಆದರೆ ನನಗನ್ನಿಸುವುದು ಭಾರತವನ್ನು ಬಿಟ್ಟು ಹೋಗುವಾಗ, ಇಂಥಾ ಸಂಪದ್ಭರಿತ ದೇಶ ಕೈ ಬಿಟ್ಟು ಹೋಯಿತಲ್ಲಾ ಅನ್ನುತ್ತಾ ಹೊಟ್ಟೆ ಉರಿ ಉಂಟಾಗಿ ಬ್ರಿಟಿಷರು ಇಲ್ಲೊಂದು ವಿಷ ಬೀಜ ಬಿತ್ತಿಯೇ ಹೋಗಿದ್ದಾರೇನೋ.. ವಿದೇಶಿ ವ್ಯಾವೋಹ ಅನ್ನೋದೇ ಈ ವಿಷಬೀಜ.. ಅಂದು ಅವರು ಬಿತ್ತಿದ ಆ ವಿಷ ಬೀಜವೇ ಇಂದು ಬೃಹತ್ ಮರವಾಗಿ ಬೆಳೆದಿರೋದು. ಬರಿಯ ಬೆಳೆದಿರುವುದು ಮಾತ್ರವಲ್ಲ ತನ್ನ ವಿಷದಿಂದ ಇಡಿಯ ಭಾರತದಲ್ಲಿ ಸ್ವದೇಶಿತನವನ್ನು ಇಲ್ಲವಾಗಿಸುತ್ತಿರುವುದು. ಅವರು ತಾವಿದ್ದಾಗ ಮಾಡಬಯಸಿದ್ದನ್ನು ಅವರು ಬಿತ್ತಿದ ಬೀಜ ಮಾಡುತ್ತಿದೆ ಅಂದರೆ ತಪ್ಪಾಗಲಿಕ್ಕಿಲ್ಲ.
ಹೀಗೇಯೇ ಆಲೋಚಿಸೋಣ ಸ್ವದೇಶೀಯತೆ ಅಂದರೇನು..? ಸರಳವಾಗಿ ಹೇಳಬೇಕೆಂದರೆ ನಮ್ಮ ದೇಶದ ವಿಚಾರಕ್ಕೆ ಮನ್ನಣೆ ಕೊಡುವುದು. ನಮ್ಮ ದೇಶದ ಕಲೆಗೆ ಬೆಲೆ ಕೊಡುವುದು. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಒಟ್ಟಾಗಿ ನಾವು ನಮ್ಮತನವನ್ನು ಉಳಿಸಿಕೊಳ್ಳುವುದು. ಯಾಕೆ ನಮಗೆ ನಮ್ಮತನ ಬೇಕು..? ಇದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಅಮಿತಾಬ್ ಬಚ್ಚನ್ ನಮ್ಮ ದೇಶ ಕಂಡ ಮಹಾನ್ ನಟ, ಒಪ್ಪುವಂತಾ ಮಾತು. ಅವರದು ಒಂದು ವಿಶಿಷ್ಟ ಶೈಲಿಯ ಅಭಿನಯ. ಒಮ್ಮೆ ಯೋಚಿಸಿ ಭಾರತೀಯ ಚಲಚಿತ್ರದಲ್ಲಿ ಎಲ್ಲರೂ ಅವರಂತೆಯೇ ಅಭಿನಯಿಸಿದರೆ ಹೇಗಿದ್ದೀತು..? ಪ್ರತಿಯೊಬ್ಬ ನಟನ ನಟನಾ ಶೈಲಿಯು ಬೇರೆ ಬೇರೆ ಆಗಿದ್ದರೇನೆ ಚೆನ್ನ ಅಲ್ವಾ.. ಅದೇ ತರ ಇದು ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಸ್ವಂತಿಕೆ ಇರಬೇಕು. ಸ್ವಂತಿಕೆ ಬರುವುದು ನಮ್ಮದಾಗಿರುವುದನ್ನು ಬಳಸಿ ಉಳಿಸಿದಾಗ.
ಆದರೆ ಇತ್ತೀಚೆಗೆ ಭಾರತದಲ್ಲಿ ವಿದೇಶಿ ವ್ಯಾಮೋಹ ಅತಿಯಾಗತ್ತಾ ಇದೆ. ಎಲ್ಲವೂ ಸಂಸ್ಕಾರ, ಕಲೆ, ಸಾಹಿತ್ಯ, ವಿಚಾರಧಾರೆಯೂ ಬದಲಾಗುತ್ತಾ ಇರುವುದು ಕಳವಳಕಾರಿ ಅಲ್ವಾ. ನಾವು ಬಳಸುವ ವಸ್ತುಗಳು ...? ಬಹುಶ ದಿನನಿತ್ಯ ಗಾಳಿಯೊಂದನ್ನು ಬಿಟ್ಟರೆ ನಾವು ಬಳಸುವ ಮತ್ತೆಲ್ಲವೂ ವಿದೇಶಿಯದೇ ... ಟೂತ್ ಪೇಸ್ಟು, ಸಾಬೂನು, ಶ್ಯಾಂಪೂ, ಬೆಳಗಿನ ತಿಂಡಿಯ ನೂಡಲ್ಸ್, ಪಿಜ್ಜಾ... ಹೀಗೆ ಪಟ್ಟಿ ಮುಂದುವರಿಯುತ್ತಾನೇ ಹೋಗುತ್ತೆ. ಇವೆಲ್ಲಾ ಒಟ್ಟಾಗಿ ನಮ್ಮ ದೇಶದ ಬಲವನ್ನು ಕಡಿಮೆಗೊಳಿಸುತ್ತಾ ಇದೆ. ಇದುವರೆಗೂ ಭಾರತದ ಮೇಲೆ ಆದ ದಾಳಿಗಳಿಗೆ ಲೆಕ್ಕವೇ ಇರಲಿಕ್ಕಿಲ್ಲ. ಅಷ್ಟೊಂದು ದಾಳಿಯನ್ನು ಭಾರತ ಸಹಿಸಿಕೊಂಡು ಅಲುಗಾಡದೇ ನಿಂತಿರಲು ಮೂಲ ಕಾರಣವೇ ನಾವು ಹಿಂದೆ ಉಳಿಸಿಕೊಂಡಿದ್ದ ನಮ್ಮತನ. ಆದರೆ ಇಂದು ನಾವು ನಮ್ಮ ಕೈಯಾರೆ ನಮ್ಮ ಬುಡಕ್ಕೆ ಕೊಡಲಿಯೇಟು ಕೊಡುತ್ತಿದ್ದೇವೆ. ಇದೇ ರೀತಿ ಮುಂದುವರೆದರೆ ಕುಸಿದು ಬೀಳುವುದಕ್ಕೆ ನಾವು ಕ್ಷಣಗಣನೆ ಆರಂಭ ಮಾಡಬೇಕಾದೀತು.
ನನ್ನ ಹೆಚ್ಚಿನ ಗೆಳೆಯರಲ್ಲಿ ನಾನೇದರೂ ಸ್ವದೇಶಿ ವಸ್ತುಗಳನ್ನ ಉಪಯೋಗಿಸಿ ಅಂದಾಗ ಅವರ ಮೊದಲ ಪ್ರಶ್ನೆಗಳು " ಹಾಗಿದ್ದರೆ ನೀನು ಮೊಬೈಲ್, ಬೈಕ್, ಟೀವಿ ಇಂತಾದ್ದನ್ನೆಲ್ಲ ಉಪಯೋಗಿಸೋದಿಲ್ವಾ...? ಅವೆಲ್ಲಾ ಸ್ವದೇಶಿಗಳಾ..? " ಹಾ ಖಂಡಿತಾ ಅವೆಲ್ಲಾ ಸ್ವದೇಶಿಗಳಲ್ಲ. ಇಲ್ಲಿ ಸ್ವದೇಶಿಯರಾಗೋಣ ಅಂದ ಮಾತ್ರಕ್ಕೆ ಭಾರತದಲ್ಲದ್ದನ್ನು ಬಳಸಲೇಬಾರದು ಅನ್ನುವ ಕಟ್ಟುನಿಟ್ಟಿನ ನಿಯಮ ಅಂತೇನಲ್ಲ. ನಾಗಾಲೋಟದಲ್ಲಿರುವ ಈಗಿನ ವ್ಯವಸ್ಥೆಯಲ್ಲಿ ನಾವು ಕೆಲವೊಂದು ವಿದೇಶಿಯ ವಸ್ತು ಅಥವ ತಂತ್ರಜ್ಞಾನವನ್ನ ಅವಲಂಬಿಸಲೇಬೇಕಾಗುತ್ತದೆ. ಒಳ್ಳೆಯದನ್ನು ಎಲ್ಲೆಡೆಯಿಂದ ಸ್ವೀಕರಿಸು ಅಂದಿದ್ದಾರೆ ನಮ್ಮ ಋಉಶಿ ಮುನಿಗಳು.ಇಲ್ಲಿ ಒಳ್ಳೆಯದನ್ನು ಅನ್ನೋದು ಪ್ರಾಮುಖ್ಯವಾದದ್ದು ಆದರೆ ನಾವು ಅದನ್ನೇ ಮರೆತಿದ್ದೇವೆ. ಈಗ ಎಲ್ಲವೂ ಅವರದ್ದೇ ಅಂದತಾಗಿದೆ ಅಲ್ವಾ.
ಸಾಧಾರಣವಾಗಿ ಟೀವಿ, ಫ್ರಿಡ್ಜ್, ಕಾರು, ಮೊಬೈಲ್ ಬಟ್ಟೆಗಳು ಇವುಗಳನ್ನೆಲ್ಲಾ ಅಪರೂಪಕ್ಕೆ ಕೊಂಡು ಕೊಳ್ಳುತ್ತೇವೆ ಅಂದರೆ ಅದರ ಬಾಳಿಕೆಯ ಸಮಯ ಜಾಸ್ತಿ. ಹಾಗಾಗಿ ನನಗನ್ನಿಸಿದಂತೆ ಇದರಿಂದ ನಮ್ಮ ದೇಶಕ್ಕಾಗೋ ನಷ್ಟ ಕಡಿಮೆ. ನಮ್ಮ ದೇಶಕ್ಕೆ ಬಹಳವಾಗಿ ನಷ್ಟವಾಗುತ್ತಿರುವುದು ವಿದೇಶಿ ಕಂಪೆನಿಗಳ ದಿನ ನಿತ್ಯದ ವಸ್ತುಗಳ ಬಳಕೆಯಿಂದ. ನಾವೇನೋ ಸಣ್ಣ ವಸ್ತುಗಳು ಅಂತ ಇದ್ದು ಬಿಡುತ್ತೇವೆ ಅದರ ಬಳಕೆಯಲ್ಲಾಗುವ ಪ್ರಮಾಣ ಮತ್ತು ಅದರಿಂದಾಗಿ ನಮ್ಮ ದೇಶದಿಂದ ಹೊರಹೋಗುತ್ತಿರುವ ನಮ್ಮ ಹಣ ಎಷ್ಟೊಂದು ಇದೆ ಅಂದರೆ ಆಶ್ಚರ್ಯವಾಗುತ್ತದೆ. ನಾವು ಬದಲಾಗಬೇಕಾಗಿರೋದು ಈ ವಿಷಯದಲ್ಲಿ. ಬಹುಶ ನಾವು ನಮ್ಮದೇ ದೇಶದ ವಸ್ತುಗಳ ಬಳಕೆ ಮಾಡಿ ನಮ್ಮ ದೇಶವನ್ನು ಆರ್ಥಿಕವಾಗಿ ಸುಸ್ಥಿತಿಯೆಡೆಗೆ ಕೊಂಡೊಯ್ಯಬೇಕಾಗಿದೆ. ಇದೂ ಕೂಡ ಒಂದು ದೇಶ ಸೇವೆಯೇ.
ಸ್ವದೇಶಿಯತೆಯ ಬಗ್ಗೆ ಹೇಳುವಾಗ ಹೆಚ್ಚಿನವರು ಹೇಳೋ ಇನ್ನೊಂದು ವಿಷಯ ನಮ್ಮ ದೇಶದ ಪ್ರೊಡಕ್ಟ್ ಗಳಲ್ಲಿ ಕ್ವಾಲಿಟಿ ಇಲ್ಲ. ಇದೊಂದು ಬಗೆಯ ನೆಪ. ಹುಡುಕಿದರೆ ನಮ್ಮಲ್ಲಿ ಬೇಕಾದಷ್ಟು ಕ್ವಾಲಿಟಿಯ ಪ್ರೊಡಕ್ಟ್ ಸಿಗುತ್ತದೆ ಆದರೆ ಹುಡುಕಿ ತೆಗೆಯುವ ಅಥವಾ ಬಳಸಿ ನೋಡುವ ಮನೋಸ್ಥಿತಿ ಇರಬೇಕು ಆಗ ಮಾತ್ರ ನಮ್ಮಲ್ಲಿರುವ ವಿಶೇಷತೆ ಗೊತ್ತಾಗೋದು. ಚೆಂದದ ಪ್ಯಾಕೆಟ್ಟಿನಲ್ಲಿ ಪೊಳ್ಳುತನವ ತುಂಬಿ ವಿದೇಶಿ ಬ್ರ್ಯಾಂಡ್ ಅಂತ ಅಚ್ಚು ಹಾಕಿಸಿ ಕೊಟ್ಟರೆ ಸ್ವೀಕರಿಸೋ ನಾವು ನಮ್ಮದಾಗಿರುವ ಒಳ್ಳೆಯ ವಸ್ತುಗಳಲ್ಲಿ ಹುಳುಕನ್ನು ಹುಡುಕುತ್ತೇವೆ. ಇದೆಂಥಾ ವಿಪರ್ಯಾಸ. ನೀವು ನಿಮ್ಮ ಮನೆಯೊಳಗೆ ಇರುವ ವಸ್ತುವೊಂದನ್ನು ಬದಿ ಮನೆಯವರಿಂದ ಹಣ ಕೊಟ್ಟು ಕೊಳ್ಳುವ ಮೂಡತನ ಮಾಡುತ್ತೀರಾ. ಹಾಗಾದರೆ ದಿನನಿತ್ಯಕ್ಕೆ ಬಳಸುವ ವಸ್ತುಗಳ ವಿಷಯ ಬಂದಾಗ ಹೀಗೇಕೆ..?
ಇತ್ತೀಚೆಗೆ ನಾವುಗಳೆಲ್ಲವೂ FDI ಯನ್ನು ಬಲವಾಗಿ ವಿರೋಧಿಸುತ್ತಿದ್ದೇವೆ, ಆದರೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಮಗಿದೆಯೇ. ವಾಲ್ ಮಾರ್ಟ್ ನಂಥಾ ಚಿಲ್ಲರೆ ವ್ಯಾಪಾರದ ಕಂಪನಿ ಬರವು ಮುನ್ನವೇ ಹೆಚ್ಚಿನ ಜನರು ಬಳಸುತ್ತಿರುವುದು ವಿದೇಶಿ ಸರಕುಗಳನ್ನೇ ತಾನೇ. ಇದಕ್ಕಿರದ ವಿರೋಧ ಅದಕ್ಕೇಕೆ.(ಹಾಗಂತ ನಾನು ಅದನ್ನು ಸ್ವಾಗತಿಸುತ್ತೇನೆ ಅಂತಲ್ಲ, ನನ್ನದೂ ವಿರೋಧವೇ..) ನಾವು ನಮ್ಮದೇ ವಸ್ತುಗಳನ್ನು , ಹೆಚ್ಚು ಹೆಚ್ಚು ಸ್ವದೇಶಿ ವಸ್ತುಗಳನ್ನು ಬಳಸಿದಾಗ ಅದು ನಮ್ಮ ದೇಶಕ್ಕೇ ಪೂರಕವಾಗಿ.. ನಮ್ಮ ದೇಶವೇ ಬೆಳೆಯೋದು. ಅಂಥ ಸಂಧರ್ಭದಲ್ಲಿ ವಾಲ್ ಮಾರ್ಟ್ ಬಂದರೂ ಕೈ ಸುಟ್ಟುಕೊಂಡು ವಾಪಾಸು ಹೋಗುತ್ತದೆ.. ದೇಶದ ಪ್ರಗತಿ ನಮ್ಮ ಕೆಲಸವಲ್ಲ... ಅದೆಲ್ಲವೂ ರಾಜಕೀಯದವರ ಹೊಣೆ ಅನ್ನುವ ಮೂಢನಂಬಿಕೆಯನ್ನು ನಾವು ಮೊದಲು ತೊರೆಯಬೇಕಾಗಿದೆ ಅಲ್ವಾ. ನಾವು ಸ್ವದೇಶಿಯತೆಯನ್ನು ಬೆಳೆಸಿದಷ್ಟು ನಮಗೇ ನಮ್ಮ ದೇಶಕ್ಕೆ ಒಳ್ಳೆಯದು. ಹಾಗಂತ ವಿದೇಶಿ ವಸ್ತುಗಳನ್ನು ಮುಟ್ಟೋದೇ ಇಲ್ಲ ಅನ್ನುವ ಉಸಿರುಕಟ್ಟಿಸುವ ನಿಯಮ ಬೇಕಾಗಿಲ್ಲ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಬಳಸೋಣ. ಕ್ವಾಲಿಟಿ ಇಲ್ಲ, ಅನ್ನುವ ಮೊದಲು ಇರುವ ವಸ್ತುಗಳ ಕ್ವಾಲಿಟಿ ಪರೀಕ್ಷಿಸೋಣ. ಗುಣಮಟ್ಟದ ವಸ್ತುಗಳನ್ನು ಹುಡುಕೋಣ... ನಾವು ಪ್ರಯತ್ನ ಪಡದೇ ಆರೋಪ ಹೊರಿಸುವುದು ಬೇಡ.
ಇಂಥಾ ಸ್ವದೇಶಿಯತೆಯ ಭಾವನೆಯನ್ನು ಹುಟ್ಟು ಹಾಕಿ ಬ್ರಿಟಿಷರು ಬೆಳೆಸಿದ ಮರವನ್ನು ಕಿತ್ತೊಗೆಯುವ ಕೆಲಸ ಮಾಡಿದ ಮಹಾನ್ ದೇಶಭಕ್ತ, ಭಾರತ್ ಸ್ವಾಭಿಮಾನ್ ನ ಸೃಷ್ಟಿಕರ್ತ " ಶ್ರೀ ರಾಜೀವ ದೀಕ್ಷಿತ್ "ರ ಜನುಮ ದಿನ ಇಂದು. ಬಹುಶ ನಾವು ಸ್ವದೇಶಿಯರಾಗೋದು, ಸ್ವಾಭಿಮಾನಿಗಳಾಗೋದು... ಇವೆ ಅವರಿಗೆ ನಾವು ಕೊಡುವ ಬಲು ದೊಡ್ದ ಉಡುಗೊರೆ. ದಿನನಿತ್ಯ ಬಳಕೆಯಾಗುವ ವಸ್ತುಗಳನ್ನು ಇವರು ಮತ್ತು ಯೋಗಗುರು ಬಾಬಾ ರಾಮ್ ದೇವ್ ಅವರು ಉತ್ಪಾದಿಸುತ್ತಿದ್ದಾರೆ. ನಾನು ಅದನ್ನೇ ಬಳಸುತ್ತಿರೋದು ಬಹುಶ ಇಷ್ಟೊಂದು ಒಳ್ಳೆಯ ಉತ್ಪನ್ನಗಳು ನಮಗೆ ದೊರಕಿಸಿಕೊಡುತ್ತಿರುವ ಪತಂಜಲಿ ಪೀಠಕ್ಕೆ ನನ್ನದೊಂದು ದೊಡ್ದ ಪ್ರಣಾಮ. ಈ ಸ್ವದೇಶಿ ಭಾವನೆಯನ್ನು ನನ್ನಲ್ಲಿ ಉಂಟು ಮಾಡಿದ ರಾಜೀವ ದೀಕ್ಷೀತರ ವಾಗ್ಝರಿಗೆ ನನ್ನ ಮನದಾಳದ ನಮನಗಳು... ಮತ್ತೊಮ್ಮೆ ಹುಟ್ಟಿ ಬನ್ನಿ ರಾಜೀವ್......

No comments:

Post a Comment