Monday 2 November 2015

ಒಂದು ಸಣ್ಣ ಕಥೆ... ಕಥೆಯೊಳಗಡಗಿದೆ ಒಂದಿಷ್ಟು ವ್ಯಥೆ



ಸಣ್ಣ ಕಥೆ - " ಭಾರತ್ ಬಂದ್ "

ಅದಾಗ ತಾನೇ ಸುದ್ದಿ ಕಾಳ್ಗಿಚ್ಚಿನಂತೆ ಹರಡತೊಡಗಿತ್ತು. ನಾಳೆ ಭಾರತ್ ಬಂದ್ ಅಂತೆ.... ಬಸ್ಸಿನಲ್ಲಿ, ಮಾರ್ಕೆಟ್ಟಿನಲ್ಲಿ, ಆಫೀಸಿನಲ್ಲಿ ಎಲ್ಲರ ಬಾಯಲ್ಲೂ ಇದೇ ಮಾತು... ಒಂದಷ್ಟು ಜನ ನಾಳಿನ ದಿನ ಕೆಲಸಕ್ಕೆ ಹೇಗೆ ಹೋಗೋದು ಅನ್ನೋ ಚಿಂತೆಯಲ್ಲಿ ಮಗ್ನರಾದರೆ, ಇನ್ನೊಂದಷ್ಟು ಜನ " ಆಹಾ.... ನಾಳೆ ಕೆಲಸಕ್ಕೆ ರಜಾ " ಅಂತ ಒಳಗೊಳಗೇ ಸಂಭ್ರಮ ಪಡತೊಡಗಿದರು... ಇವೆಲ್ಲರದ ನಡುವೆ  ಮರುದಿನದ ಹೋರಾಟಕ್ಕೆ ಸಜ್ಜಾಗತೊಡಗಿದ್ದ.... ಗೌರವ್.  ಗೌರವ್ ಬಿಸಿರಕ್ತದ ಯುವಕ, ಬೆಂಗಳೂರಿನ ದೊಡ್ಡ ಉತ್ಪಾದನಾ ಘಟಕವೊಂದರಲ್ಲಿ ಕೆಲಸಕ್ಕಿದ್ದ. ಸ್ವಲ್ಪ ಎಡಪಂಥೀಯ ವಿಚಾರಧಾರೆಗೆ ಮನಸೋತವ... ತಾನಿದ್ದ ಕಂಪನಿಯಲ್ಲಿ ಒಳ್ಳೆಯ ವೇತನವನ್ನೇ ಪಡೆಯುತ್ತಿದ್ದರೂ... ಮಾಲೀಕರು ಯಾವತ್ತಿಗೂ ಕಾರ್ಮಿಕರನ್ನ ಚೆನ್ನಾಗಿ ನೋಡಿಕೊಳ್ಳೋದಿಲ್ಲ ಅನ್ನುತ್ತಲೇ ತನ್ನ ಸಂಗಡಿಗರ ಜೊತೆ ಚರ್ಚೆ ಮಾಡುತ್ತಲಿದ್ದ... ಆತನ ಇಂಥಾ ವಿಚಾರಧಾರೆ ಮತ್ತು ನಿಷ್ಠುರವಾದಂತಹ ಮಾತುಗಳೇ ಅವನನ್ನ ಕಾರ್ಮಿಕರ ಸಂಘದ ನಾಯಕನನ್ನಾಗಿಸಿತ್ತು.... ಇತ್ತೀಚಿಗೆ ಕೇಂದ್ರ ಸರ್ಕಾರದ ಅದ್ಯಾವುದೋ ಕಾನೂನು ಕಾರ್ಮಿಕರ ಪಾಲಿಗೆ ವಿನಾಶಕಾರಿಯಾಗಲಿದೆ ಅನ್ನುವುದನ್ನ ತನ್ನೆಲ್ಲಾ ಸಹೋದ್ಯೋಗಿಗಳಿಗೆ ಮನದಟ್ಟು ಮಾಡಿ ಎಲ್ಲರನ್ನೂ ಮರುದಿನದ ಹೋರಾಟಕ್ಕೆ ಬರವುಂತೆ ಕೇಳಿಕೊಳ್ಳುತ್ತಿದ್ದ.... ಅದರ ತಯಾರಿಯಲ್ಲೇ ತನ್ನನ್ನ ತಾನೂ ಪೂರ್ಣವಾಗಿ ಮರೆತಿದ್ದ.
ದಿನಗಳೆದು ಸೂರ್ಯ ಮತ್ತೆ ಕೆಂಪು ಕೆಂಪಾಗಿ ಮೂಡಣದಲ್ಲಿ ಮೂಡಿ ಬರುವ ಹೊತ್ತು.... ಎಂದಿಗಿಂತಲೂ ಬೇಗನೆ ಎದ್ದು ಹೊರಟು ಬಂದಿದ್ದ ಗೌರವ್ ತನ್ನ ಆಪ್ತರನ್ನೆಲ್ಲಾ ಒಟ್ಟುಗೂಡಿಸಿ ಆ ದಿನದ ಯೋಜನೆಗಳನೆಲ್ಲಾ ಹೇಳುತ್ತಿದ್ದ....
" ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ಮೆರವಣಿಗೆ ಮಾಡೋಕಿದೆ.... ಈ ಬಾರಿ ನಾವು ನಮ್ಮ ಹೋರಾಟದ ಕೆಚ್ಚನ್ನ ತೋರಿಸದೇ ಹೋದಲ್ಲಿ ಖಂಡಿತವಾಗಿಯೂ ಸರ್ಕಾರ ನಮ್ಮನ್ನ ತುಳಿಯಲಿದೆ.... ಹಾಗಾಗಿ ಅದೇನೇ ಆಗಲಿ ನಮ್ಮ ಬಲ ಪ್ರದರ್ಶನ ಆಗಿಯೇ ತೀರಬೇಕು.... ತಡೆಯುವ ಪ್ರಯತ್ನವನ್ನ ಅವರು ಮಾಡೇ ಮಾಡುತ್ತಾರೆ... ಬಿಡಬಾರದು. ಉಗ್ರವಾದ ಹೋರಾಟವೇ ನಡೆಯಲಿ....ನಮ್ಮನ್ನ ತುಳಿಯೋಕೆ ಬಂದವರನ್ನ ನಮ್ಮ ಕಾಲಿನಡಿ ಹೊಸಕಿ ಹಾಕೋಣ....ನಮ್ಮ ಹಕ್ಕನ್ನ ಪಡೆದೇ ತೀರೋಣ...."
ಹೀಗೆ ರೋಷಭರಿತವಾಗಿ ಹೇಳುತ್ತಿದ್ದರೆ...ಅವನ ಸಂಗಡಿಗರ ರಕ್ತವೂ ಕುದಿಯತೊಡಗಿತ್ತು...
ಕಾಲ ಸರಿಯುತ್ತಿದ್ದಂತೆ ಗೌರವನ ಅನುಯಾಯಿಗಳ ಸಂಖ್ಯೆ ಏರುತ್ತಲೇ ಹೋಯಿತು... ಘೋಷ ವಾಕ್ಯಗಳು ಮುಗಿಲು ಮುಟ್ಟತೊಡಗಿದವು... ಸರಿಯಾಗಿ ಒಂಭತ್ತು ಗಂಟೆಯ ಹೊತ್ತಿಗೆ ಸರ್ಕಾರಿ ವಿರೋಧಿ ಹೇಳಿಕೆಗಳ ಘೋಷವಾಕ್ಯದ ಜೊತೆಗೇನೇ ಮೆರವಣಿಗೆ ಸಾಗಿತು... ಕಾರ್ಮಿಕ ಸಂಘಟನೆ ಕೊಟ್ಟ ಕರೆಗೆ ಮಿಶ್ರ ಪ್ರತಿಕ್ರಿಯೆ ಇದ್ದಿತ್ತು.. ಬಸ್ ಗಳ ಸಂಚಾರ ವಿರಳವಾಗಿತ್ತು... ಮೆರವಣಿಗೆಯ ಹಾದಿಯಲ್ಲಿ ಕೆಲವೊಂದು ಅಂಗಡಿಗಳಷ್ಟೇ ಮುಚ್ಚಿದ್ದವು... ತೆರೆದಿದ್ದ ಅಂಗಡಿಯ ಕಡೆಗೆಲ್ಲಾ ಗೌರವ್ ತನ್ನ ಅನುಯಾಯಿಗಳನ್ನ ಕಳುಹಿಸುತ್ತಿದ್ದ.... ಹೆದರಿಸಿ ಬೆದರಿಸಿ ಅಂಗಡಿಗಳನ್ನ ಅವರು  ಮುಚ್ಚಿಸುತ್ತಿದ್ದರು... ಹೀಗೆಯೇ ಮೆರವಣಿಗೆ ಮುಂದುವರಿಯುತ್ತಿದ್ದಂತೆ ಗೌರವ್ ಮತ್ತವನ ಸಂಗಡಿಗರ ಪುಂಡಾಟಿಕೆ ಜಾಸ್ತಿಯಾಗುತ್ತಲೇ ಹೋಯಿತು...
ಮುಂದೆ ಹೋಗುತ್ತಿದ್ದಂತೆ ಎದುರಿಗೆ ಒಬ್ಬ ಸಣ್ಣ ಹುಡುಗ ,ನೀಲಿ ವಸ್ತ್ರ ಧರಿಸಿದ್ದಾತ ಒಂದು ಸ್ವಿಫ್ಟ್ ಕಾರನ್ನ ಚಲಾಯಿಸಿಕೊಂಡು ಅಲ್ಲೇ ಮುಂದಿದ್ದ ಗ್ಯಾರೇಜಿಗೆ ತೆಗೆದುಕೊಂಡು ಹೋಗುವುದಕ್ಕಾಗಿ ಇವರ ಮೆರವಣಿಗೆ ಸಾಗುವುದನ್ನೇ ಕಾಯುತ್ತಿದ್ದ.. ಅದೇನಾಯಿತೋ ಆ ಹುಡಗನ ಕೈ ಕಾರಿನ ಹಾರನ್ ಬಟನಿಗೆ ತಾಗಿ ದೊಡ್ದದಾಗಿ ಹಾರನ್ ಸದ್ದಾಯಿತು ... ಹಾರನ್ ಸದ್ದು ಕೇಳಿಸಿದ್ದೇ ಗೌರವನ ಸಿಟ್ಟು ನೆತ್ತಿಗೇರಿತು..... ಕೂಡಲೇ ಆ ಗ್ಯಾರೇಜಿನ ಹುಡುಗನನ್ನ ಕೆಳಗಿಳಿಸಿ ಅಲ್ಲೇ ಇದ್ದ ದೊಡ್ಡ ಕಲ್ಲೊಂದನ್ನ ಕಾರಿನ ಗ್ಲಾಸಿನ ಮೇಲೆ ಹಾಕಿಯೇ ಬಿಟ್ಟ... ಕಾರಿನ ಗಾಜು ಒಡೆದು ಚೂರಾಗಿಬಿಟ್ಟಿತು... " ಹೊತ್ತಿಸಿ ಹಾಕಿರೋ ಕಾರ್ಮಿಕರ ನೋವು ಇಂತವರಿಗೆಲ್ಲಾ ಅರಿವಾಗಬೇಕಾದರೆ ಇದೆಲ್ಲಾ ಮಾಡಿಯೇ ಗೊತ್ತಾಗಬೇಕು " ಅಂತ ತನ್ನ ಗೆಳೆಯರಿಗೆ ಹೇಳಿ, ಗೌರವ್ ಮೆರವಣಿಗೆಯಲ್ಲಿ ಸಾಗತೊಡಗಿದ.... ಆ ಹುಡುಗ " ಬೇಡ ಸಾರ್ ಕಸ್ಟಮರ್ ಕಾರು ಸಾರ್... ಪ್ಲೀಸ್ ಬೇಡಿ ಸಾರ್... " ಅಂತ ಗೋಗರೆಯುತ್ತಲೇ ಇದ್ದ. ಆದರೆ ಆತನ ಮಾತನ್ನ ಕೇಳುವವರ್ಯಾರು...? ಗೌರವನ ಸಂಗಡಿಗರು ಅದೆಲ್ಲಿಂದಲೋ ಪೆಟ್ರೋಲು ತಂದು ಆ ಕಾರನ್ನು ಸುಟ್ಟು ಹಾಕಿಯೇ ಬಿಟ್ಟರು... ಅವರೆಲ್ಲರಿಗೂ ಅದೇನೋ ದೊಡ್ಡ ಸಾಧನೆ ಮಾಡಿದಂತಾಗಿತ್ತು..... ಮುಂದೆ ಮೆರವಣಿಗೆಯೂ ಸಾಗಿ ಹೋರಾಟಕ್ಕೆ ಮತ್ತಷ್ಟು ಕಳೆ ಬಂದಿತ್ತು... ಗೌರವ್ ಮತ್ತು ಅವನ ಸಂಗಡಿಗರ ಪಾಲಿಗೆ ತಮ್ಮ ಹೋರಾಟ ಯಶಸ್ವಿಯಾಗಿದೆ ಅಂತಲೇ ಅನ್ನಿಸತೊಡಗಿತ್ತು. ದಿನ ಪೂರ್ತಿ ಹೋರಾಟದ ಕಾವು ಕಂಡ ಸೂರ್ಯನಿಗೂ ಬೇಸರವಾಗಿತ್ತೋ ಏನೋ ಮೆಲ್ಲಗೆ ಮೋಡಗಳ ಅಡ್ದದಲ್ಲಿ ಪಶ್ಚಿಮದ ಕಡಲಲ್ಲಿ ಇಳಿದು ಬಿಟ್ಟ.
ಮರುದಿನ ಗೌರವ್ ಬೆಳಗೆದ್ದವನೇ ಮನೆಯ ಅಂಗಳದಲ್ಲಿ ಬಿದ್ದಿದ್ದ ಪೇಪರ್ ತೆಗೆದುಕೊಂಡು ನಿನ್ನೆಯ ಹೋರಾಟದ ಪರಿಣಾಮಗಳ ವಿವರವನ್ನ ಓದುತ್ತಲೇ ಒಳಗೊಳಗಿಂದ ಬೀಗುತ್ತಲಿದ್ದ... ಅಷ್ಟಿಷ್ಟಲ್ಲ ಸರ್ಕಾರಕ್ಕೆ ಭರ್ತಿ ಇಪ್ಪತ್ತು ಸಾವಿರ ಕೋಟಿ ನಷ್ಟ ಅನ್ನುವುದನ್ನು ಓದಿದಾಗಲಂತೂ ಅವನಿಗಾದ ಖುಷಿ ಅಷ್ಟಿಷ್ಟಲ್ಲ.... ಪೇಪರ್ ಮಡಚಿ ಬೆಳಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಮುಗಿಸಿದವನೇ ಆಫೀಸಿಗೆ ಹೊರಡತೊಡಗಿದ... ಅಷ್ಟರಲ್ಲಿ ಆತನ ಮೊಬೈಲ್ ಸದ್ದು ಮಾಡತೊಡಗಿತು... ಕಾಲ್ ರಿಸೀವ್ ಮಾಡಿದವನೇ...
" ಹಾ ಹೇಳಿ.. ರಾಕೇಶ್ ರೇ.. " ಅಂದ
ಅತ್ತ ಕಡೆಯಿಂದ
" ಸಾರ್... ನಿನ್ನೆ ಸಂಜೆ ನಿಮಗೆ ಕಾಲ್ ಮಾಡಿದ್ದೆ ನೀವು ಕಾಲ್ ರಿಸೀವ್ ಮಾಡಲಿಲ್ಲ "
" ಹೌದು ರಾಕೇಶ್ ರೇ, ನಿನ್ನೆ ನಾನು ಬಂದ್ ಮೆರವಣಿಗೆಯಲ್ಲಿ ಬಿಜಿಯಾಗಿದ್ದೆ. ಹಾಗಾಗಿ ಮೊಬೈಲ್ ನೋಡಲಿಲ್ಲ. ಹೇಳಿ ನನ್ನ ಗಾಡಿ ರೆಡಿನಾ ನಾಡಿದ್ದು ಕೊಡ್ತೇನೆ ಅಂದಿದ್ದಿರಿ. "
" ಇದೇ ವಿಚಾರವಾಗಿ ಮಾತಾಡೋಕೆ ಇತ್ತು ಸಮಯ ಮಾಡಿಕೊಂಡು ನಮ್ಮ ಗ್ಯಾರೇಜಿಗೆ ಬರ್ತೀರಾ."
" ಸರಿ ಆಫೀಸಿಗೆ ಹೊರಟಿದ್ದೇನೆ... ನಿಮ್ಮಲ್ಲಿಗೆ ಬಂದು ಹೋಗ್ತೇನೆ " ಅಂದವನೇ ಕಾಲ್ ಕಟ್ ಮಾಡಿದ.
ಆಫೀಸಿಗೆ ಹೋಗುವ ಮಾರ್ಗ ಮಧ್ಯೆ ಗ್ಯಾರೇಜಿನ ಮುಂದೆ ಆಟೋದಿಂದ ಇಳಿದವನೇ ಮಾಲಕರ ಆಫೀಸಿಗೆ ಹೋದ.
" ಮತ್ತೆ ಏನು ಕರೆದಿದ್ದು...? ಯಾವಾಗ ರೆಡಿಯಾಗುತ್ತೆ ನನ್ನ ಕಾರು ?"
"ಸಾರ್ ಹೇಗೆ ಹೇಳ್ಬೇಕು ಅಂತಾನೇ ಗೊತ್ತಾಗ್ತಾ ಇಲ್ಲ ನೀವು ಕೋಪ ಮಾಡ್ಬೇಡಿ... ನಿನ್ನೆ ಬಂದ್ ಅಷ್ಟು ಜೋರಾಗಲಿಕ್ಕಿಲ್ಲ ಅಂತ ಗ್ಯಾರೇಜ್ ಓಪನ್ ಮಾಡಿ  ಪೈಂಟ್ ಆಗಿ ರೆಡಿಯಾಗಿದ್ದ ನಿಮ್ಮ ಗಾಡಿ ತರೋಕೆ ನಮ್ಮ ಹುಡುಗನನ್ನ ಕಳಿಸಿದ್ದೆ ಇನ್ನೇನು ನಮ್ಮ ಗ್ಯಾರೇಜ್ ಒಳಗೆ ತರಬೇಕು ಅನ್ನುವಷ್ಟರಲ್ಲಿ ಕಿಡಿಗೇಡಿಗಳು ನಿಮ್ಮ ಗಾಡಿ ಒಡೆದು ಬೆಂಕಿ ಹಚ್ಚಿಬಿಟ್ರು ಸಾರ್... "
" ರೀ ನಿಮ್ಗೆ ತಲೆಗಿಲೆ ಕೆಟ್ಟಿದೆಯೇನ್ರೀ.... ಬಂದ್ ಇರೋವಾಗ ಗಾಡಿ ತರೋದಾ...? ನನಗೊತ್ತಿಲ್ಲ ಸರಿ ಮಾಡಿ ಕೊಡಿ "
" ಅದು ಹೇಗಾಗುತ್ತೆ ಸಾರ್... ನಮ್ಮ ಹುಡುಗ ಬಂದು ಹೀಗೀಗಾಯ್ತು ಅಂದಾಗ ನಮ್ಮ ಗ್ಯಾರೇಜಿನ ಹೊರಭಾಗದ ಸಿಸಿಟಿವಿ ಫೂಟೇಜ್ ತೆಗೆದು ನೋಡಿದೆ ಸಾರ್.... ವಿಚಿತ್ರ ಅಂದ್ರೆ ನೀವೇ ನಿಮ್ಮ ಕೈಯಾರೆ ಗಾಜು ಒಡೆದಿದ್ರಿ ಸಾರ್... ಆಮೇಲೆ ನಿಮ್ಮ ಜನಗಳು ಅದನ್ನ ಸುಟ್ಟು ಹಾಕಿದ್ದು ಸಾರ್, ನನ್ನತ್ರ ಅದರ ಕಾಪಿ ಇದೆ ಬೇಕಿದ್ರೆ ತೋರಿಸ್ತೀನಿ ನೋಡಿ ಸಾರ್ " ಅಂದ.
ಹಾಗಂದಾಗ ಗೌರವ್ ಗೆ ತಲೆ ಧಿಮ್ ಅಂತು.... ಆತನಿಗೆ ಅಭಿಮಾನದ ಕ್ಷಣವಾಗಿದ್ದ ಘಟನೆಗಳು ಅವನ ಕಣ್ಣಿನ ಮುಂದೆ ಮತ್ತೆ ಬರತೊಡಗಿತು.... ಹಾರನ್ ಸದ್ದು... ಹುಡುಗನನ್ನ ಹೊರಗೆಳೆದದ್ದು... ಕಲ್ಲು ತೆಗೆದು ಗಾಜನ್ನ ಒಡೆದು ಸುಟ್ಟು ಹಾಕ್ರೋ.... ಅಂದಿದ್ದು... ಎಲ್ಲವೂ ನೆನಪಾಯಿತು. ಅದಕ್ಕಾಗೇ ಏನೋ ಆತ ಸಿಸಿಟಿವಿ ಫೂಟೇಜ್ ನೋಡೋಕೆ ಆಸಕ್ತಿ ತೋರಿಸಲಿಲ್ಲ.
ಗೌರವ್ ಆಕ್ಷಣ ಏನೂ ಮಾತಾಡಲಿಲ್ಲ, ಗ್ಯಾರೇಜ್ ಮಾಲೀಕರಿಗೆ ಮುಖ ತೋರಿಸಲಾಗದೇ " ಸರಿ ಬಿಡಿ " ಅಂದವನೇ ಅಲ್ಲಿಂದ ಆಫೀಸಿನತ್ತ ಹೆಜ್ಜೆ ಹಾಕಿದ.... ಯಾಕೋ ಆತ ಬೆಳಗ್ಗೆ ಓದಿದ " ಇಪ್ಪತ್ತು ಸಾವಿರ ಕೋಟಿ ನಷ್ಟ " ಎನ್ನುವ ಸಾಲು ಆತನ ಹೃದಯವನ್ನು ಚುಚ್ಚತೊಡಗಿತು. ಮನಸಿನ ಮೂಲೆಯಲ್ಲಿ ಸರಿ ತಪ್ಪುಗಳ ಯೋಚನೆಗಳು ಕುಣಿಯಲಾರಂಭಿಸಿತು. ಈ ಗೊಂದಲದಲ್ಲಿ ಆತ ಆಫೀಸಿನತ್ತ ಹೆಜ್ಜೆ ಹಾಕಿದ... ಆಫೀಸು ಸೇರುವಷ್ಟರಲ್ಲಿ ಮನಸ್ಸಿನಲ್ಲೊಂದು ಸ್ಪಷ್ಟವಾದ ಚಿಂತನೆ ತನ್ನ ಬೇರನ್ನ ಮತ್ತಷ್ಟು ಆಳಕ್ಕಿಳಿಸತೊಡಗಿತ್ತು... ಹಾ ಇನ್ನು ಮುಂದಿನ ಹೋರಾಟಗಳಲ್ಲಿ ಯಾವತ್ತಿಗೂ ಸರ್ಕಾರದ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನ ನಾನು ಖಂಡಿತ ಮಾಡುವುದಿಲ್ಲ. ಎನ್ನುವ ನಿರ್ಧಾರವೊಂದು ಗಟ್ಟಿಯಾಗಿ ಬಿಟ್ಟಿತ್ತು.
                                 ---   ---  ---  ---  ---  ---  --- ---  ---  ---  ---  ---  ---  --- ---

ನಿಜಕ್ಕೂ ಹೇಳಬೇಕೆಂದರೆ ನಾನು ಕಥೆಗಾರನಲ್ಲ. ಆದರೆ ಒಂದಷ್ಟು ಬೇಸರದ ವಿಚಾರಗಳನ್ನ ಹೇಳಿಕೊಳ್ಳಬೇಕೆಂದು ಯೋಚಿಸುತ್ತಿದ್ದಾಗ ಯಾಕೋ ಕಥೆಯ ಮೂಲಕ ಹೇಳೋಣ ಅಂತನಿಸಿತು... ನಾನು ಹೇಳಬೇಕೆಂದಿದ್ದ ವಿಚಾರ ಮುಟ್ಟಿದೆಯೋ ಇಲ್ಲವೋ.... ಅನ್ನೋ ಗೊಂದಲ... ಯಾಕೆಂದರೆ ನನ್ನ ಕಥೆಯ ಮೇಲೆ ನನಗಷ್ಟು ವಿಶ್ವಾಸವಿಲ್ಲ...ವಾಸ್ತವದಲ್ಲಿ ನಾನು ಹೇಳಬೇಕಾಗಿದ್ದದ್ದನ್ನ ಸರಳವಾಗಿ ಹೇಳಿಬಿಡುತ್ತೇನೆ. ನಮ್ಮ ಹಕ್ಕಿಗಾಗಿ ಹೋರಾಡೋದು ನಮ್ಮೆಲ್ಲರ ಕರ್ತವ್ಯ .... ಅದನ್ನ ನಾನು ಯಾವತ್ತು ಅಲ್ಲಗಳೆಯೋಲ್ಲ... ಆದರೆ ಇತ್ತೀಚಿಗೆ ಹೋರಾಟ ಮತ್ತು ಭಾರತ್ ಬಂದ್ ಅನ್ನುವ ನೆಪದಲ್ಲಿ ದೇಶಕ್ಕಾಗುತ್ತಿರುವ ನಷ್ಟವನ್ನ ಕಾಣುವಾಗ ಮನಸ್ಸಿಗೆ ಬಹಳಾನೇ ಬೇಸರವಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿಯನ್ನ, ಸರ್ಕಾರಿ ಆಸ್ತಿಪಾಸ್ತಿಯನ್ನ ಹಾಳುಗೆಡವೋದರಿಂದ ನಮ್ಮ ಹೋರಾಟಕ್ಕೆ ಬಲ ಬರುತ್ತದೆ ಅನ್ನೋದಾದರೆ ಅಂತ ಹೋರಾಟಕ್ಕೆ ನನ್ನ ವಿರೋಧವಿದೆ. ಇಂಥಾ ಪುಂಡಾಟಿಕೆಯಿಂದ ನಮಗೆ ಸಿಗೋದಾದರೂ ಏನು...? ಈ ವಿಚಾರವಾಗಿ ಬೀದಿಗಿಳಿದು ಹೋರಾಟ ಮಾಡುವವರು ಒಮ್ಮೆ ಆಲೋಚಿಸಬೇಕು... ಒಂದು ವೇಳೆ ನಮ್ಮದೇ ಸ್ವಂತದ ವಸ್ತುವಾಗಿದ್ದರೆ ನಾವು ಈ ರೀತಿ ಮಾಡುತ್ತಿದ್ದೆವಾ...? ಅನ್ನೋ ಒಂದು ಪ್ರಶ್ನೆ ನಮಗೆ ನಾವೇ ಹಾಕಿಕೊಂಡರೆ ಸಾಕು ಇಂತಾ ಅನಾಹುತಗಳನ್ನ ತಪ್ಪಿಸಬಹುದು ಅಲ್ವಾ... ಒಮ್ಮೆ ಯೋಚಿಸಿ ನೋಡಿ....

---ಗುರುಪ್ರಸಾದ್ ಆಚಾರ್ಯ, ಕುಂಜೂರು

2 comments: