Monday 2 November 2015

ಮುತ್ತಿನ ಸುತ್ತ ಮುತ್ತ.... ಮತ್ತೆ....?



ಈಗ ಪ್ರತಿಯೊಂದು ಚಾನೆಲಿನಲ್ಲೂ, ಸಾಮಾಜಿಕ ಜಾಲತಾಣದಲ್ಲೂ ಬರೀ ಒಂದೇ ಚರ್ಚೆ.... " ಕಿಸ್ ಆಫ್ ಲವ್ " ಬಹುಶಃ ಮೆಕಾಲೆಗೆ ಈಗ ಬಹಳಾನೇ ಖುಷಿ ಆಗುತ್ತಿರಬಹುದು. ಯಾವ ಸಾಂಸ್ಕೃತಿಕ ಭದ್ರ ಬುನಾದಿಯಿಂದಾಗಿ ಭಾರತ ಬ್ರಿಟಿಷರಿಗೆ ಬಿಡಿಸಲಾಗದ ಕಗ್ಗಂಟಾಗಿತ್ತೋ ಆ ಸಾಂಸ್ಕೃತಿಕ ಮೌಲ್ಯಗಳಲ್ಲಿ ಇಂದು ಬಿರುಕು ಮೂಡ ತೊಡಗಿದೆ. ನಿಸ್ಸಂಶಯವಾಗಿ ನಮ್ಮ ಶಿಕ್ಷಣ ಪದ್ಧತಿಯ ಬದಲಾವಣೆಯೇ ಇದಕ್ಕೆ ಮೂಲ ಕಾರಣ ಅಂತ ನನಗನಿಸುತ್ತದೆ. ಯಾಕೆಂದರೆ ಬರಿಯ ಸರ್ಟಿಫಿಕೇಟಿನ ಶಿಕ್ಷಣ ಪದ್ಧತಿಯನ್ನ ನಮ್ಮ ಮೇಲೆ ಹೇರಿ ಸಾಂಸ್ಕೃತಿಕ ಮೌಲ್ಯಗಳೆಲ್ಲಾ ನಮಗೆ ದಕ್ಕದ ಹಾಗೆ ಮಾಡೋಕೆ ನಾಂದಿ ಹಾಡಿದ್ದು ಬ್ರಿಟೀಷರೇ... ಅದು ಒಂದು ಆಯಾಮ ಬಿಡಿ, ಇಂದು ಅದೇನು ಈ ಫ್ರೀ ಥಿಂಕರ್ಸ್ ಅನ್ನೋ ಯುವ ಪಡೆ ಈ " ಕಿಸ್ ಆಫ್ ಲವ್ " ಅನ್ನೋ ಹೆಸರಿನಲ್ಲಿ ವಿಕೃತಿಯ ಪ್ರದರ್ಶನಕ್ಕೆ ತಯಾರು ನಡೆಸುತ್ತಿದ್ದಾರೋ ಅವರದೆಲ್ಲಾ ಬಲು ವಿಚಿತ್ರ ವಾದಗಳು. ತಮ್ಮ ತೆವಲು ತೀರಿಸೋಕೆ ಏನೇನೋ ಸಮಜಾಯಿಷಿಕೆ ಕೊಡುತ್ತಾರೆ.
ಅವುಗಳಲ್ಲಿ ಕೆಲವೆಲ್ಲಾ ನಗು ತರಿಸುವಂಥಾದ್ದು.. " ಭಾರತದಲ್ಲಿ ಸಾರ್ವಜನಿಕವಾಗಿ ಮೂತ್ರ ಮಾಡಬಹುದು ಆದರೆ ಸಾರ್ವಜನಿಕವಾಗಿ ಕಿಸ್ ಮಾಡಬಾರದಾ...? " , ಅಲ್ಲ ಸ್ವಾಮೀ ನನ್ನ ಮಟ್ಟಿಗೆ ಸಾರ್ವಜನಿಕವಾಗಿ ಮೂತ್ರ ಮಾಡುವವರೂ ಕೂಡ ಅದೆಲ್ಲೋ ರೋಡಿನ ಮೂಲೆಗಳಿಗೆ ಹೋಗುತ್ತಾರೆ, ಕಸದ ರಾಶಿಯಿದ್ದಲ್ಲೋ ಹೋಗುತ್ತಾರೆ ಅಥವಾ ಮರದ ಮೂಲೆಗೆ ಹೋಗುತ್ತಾರೆಯೇ ವಿನಹ ರಸ್ತೆಯಲ್ಲೇ ಮೂತ್ರ ಮಾಡುತ್ತಾರ....? ನನಗಂತೂ ಇಂತಹ ಘಟನೆ ನೋಡಿದ ನೆನಪೇ ಇಲ್ಲ. ಸರಿ ಸಾರ್ವಜನಿಕವಾಗಿ ಮೂತ್ರ ಮಾಡೋದು ಯಾರು...? ನೂರಕ್ಕೆ ನೂರು ಪ್ರತಿಶತ ಗಂಡಸರೇ, ಹಾಗಾದರೆ ಆ ವಾದವನ್ನಿಟ್ಟುಕೊಂಡು ಈ ಚಳುವಳಿ... ಛೇ ಚಳುವಳಿ ಅನ್ನೋ ಪದ ಪ್ರಯೋಗ ಮಾಡಿ ಅದರ ಗೌರವವನ್ನ ನಾನ್ಯಾಕೆ ಕಳೆಯಲಿ.... ಈ ವಿಕೃತಿಯನ್ನ ಆಚರಿಸೋರು ಬರೀ ಗಂಡಸರು ಮಾತ್ರಾನಾ...? ಹೆಂಗಸರು, ಹುಡುಗಿಯರು ಯಾಕೆ ಈ ವಿಕೃತಿಯಲ್ಲಿ ಪಾಲ್ಗೊಳ್ಳಬೇಕು...? ಯಾಕೆ ಇವರೆಲ್ಲಾ ಸಾರ್ವಜನಿಕಾವಾಗೇ ಮೂತ್ರ ಮಾಡುವವರಾ...? ಸರಿ ಸಾರ್ವಜನಿಕವಾಗಿ ಮೂತ್ರ ಮಾಡುವವರಿಗೆ ಸರ್ಕಾರಗಳೆಲ್ಲಾ ಬೆಂಬಲ ಅಥವಾ ರಕ್ಷಣೆ ಕೊಡುವ ಕ್ರಮವೇ ಇಲ್ಲ ನೀವ್ಯಾಕೆ ಹಾಗಿದ್ದರೆ ಸರ್ಕಾರದ ರಕ್ಷಣೆ ಬಯಸುತ್ತೀರಿ....? ಸಾರ್ವಜನಿಕವಾಗಿ ಮೂತ್ರ ಮಾಡುವವರನ್ನ ಒಂದಷ್ಟು ಜನ ತರಾಟೆ ತೆಗೆದುಕೊಂಡರೆ ಎಲ್ಲರೂ ತರಾಟೆ ತೆಗೆದುಕೊಂಡವರ ಪರವೇ ನಿಲ್ಲುತ್ತಾರೆ... ನೀವ್ಯಾಕೆ ಹಾಗಿದ್ದರೆ ಈಗ ನಿಮ್ಮನ್ನು ತರಾಟೆಗೆ ತೆಗೆದುಕೊಂಡವರ ವಿರುದ್ಧ ಉರಿದು ಬೀಳುತ್ತೀರಿ...? ಸಾರ್ವಜನಿಕವಾಗಿ ಮೂತ್ರ ಮಾಡೋದನ್ನ ನೆಪವಾಗಿಟ್ಟು ಕೊಂಡು ನೀವು ಇದನ್ನು ಮಾಡುತ್ತಿದ್ದೀರೆಂದರೆ ನಿಮಗೂ ಅವರಿಗೂ ಏನು ವ್ಯತ್ಯಾಸ....? ನೀವು ಅವರನ್ನು ಪ್ರೋತ್ಸಾಹಿಸಿದಂತೆಯೇ ಅಲ್ವಾ...?
ಎರಡನೆಯದಾಗಿ ಅವರ ವಾದ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಗಳಿರುತ್ತದೆ ಅದನ್ನೆಲ್ಲಾ ಒಪ್ಪಿಕೊಳ್ಳುತ್ತೀರಿ ಇದನ್ನ್ಯಾಕೆ ವಿರೋಧಿಸುತ್ತೀರಿ ಅಂತ. ಅಲ್ಲೂ ನೋಡೋಕೆ ಹೋದರೆ ಹಲವಾರು ಬಾರಿ ವಿರೋಧಗಳು ಪ್ರತಿಭಟನೆಗಳು ನಡೆದಿವೆ. ಇರಲಿ ಅದಾಗಿಯೂ ಬರುವ ಸಿನಿಮಾಗಳಿಗೆ ಮೊದಲೇ ನಮ್ಮಲ್ಲಿ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ಕೊಡುತ್ತದೆ. " ಯು " ಬಂದಾಗ ಕುಟುಂಬ ಸಹಿತರಾಗಿ ಹೋಗಬಹುದು ಅನ್ನೋ ಧೈರ್ಯ ನಮ್ಮಲ್ಲಿರುತ್ತದೆ. ಅದಾಗಿಯೂ ಈ ಸಿನಿಮಾಗಳು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಪ್ರಸಾರವಾಗೋದು. ಅದನ್ನು ಬೀದಿ ಬದಿಯಲ್ಲಿ ಪ್ರದರ್ಶಿಸಿದರೆ ಜನ ಛೀ... ಥೂ..... ಅಂತಾನೇ ಹೇಳುತ್ತಾರೆಯೇ ವಿನಹ ಸುಮ್ಮನಿರಲ್ಲ ಅಲ್ವಾ.... ಅಷ್ಟಾಗಿಯೂ ಮನೆಯಲ್ಲೇನಾದರೂ ಚಿತ್ರ ನೋಡೋವಾಗ ಮುತ್ತಿನ ದೃಶ್ಯ ಬಂದಾಗಲೆಲ್ಲಾ ಸಂಸ್ಕಾರಸ್ಥರ ಮನೆಯಲ್ಲಿ ಚಾನೆಲ್ ಚೇಂಜ್ ಆಗುತ್ತೆ . ಯಾಕೆ ಸಾರ್ವಜನಿಕವಾಗಿ ಇದು ಸಲ್ಲ ಅಂತಾನೇ ತಾನೇ...... ಹಾಗಿದ್ದರೆ ಇಂತಹಾ ವಿಕೃತಿ ಆಚರಿಸೋ ಚಪಲವ್ಯಾಕೆ...?
ಅಷ್ಟಕ್ಕೂ ಇದರ ಆಯೋಜನೆಯಾದರೂ ಯಾಕಾಗಿ....? ನೈತಿಕ ಪೋಲೀಸ್ ಗಿರಿ ನಿಲ್ಲಿಸೋಕೆ... ತಾನೇ... ವಿಕೃತಿ ಮಾಡಬೇಡಿ ಅಂದಿದ್ದನ್ನ , ಅಂದರವರ ಕ್ರಿಯೆಯನ್ನ ಜನರೇ ನೈತಿಕ ವಾದದ್ದು ಅಂದಿದ್ದಾರೆ.... ಅದರ ಅರ್ಥ ಈ ವಿಕೃತಿಯ ಆಚರಣೆ ಮಾಡುತ್ತಿರೋರ ಕೆಲಸವೇ ಅನೈತಿಕವಾದದ್ದು ತಾನೇ. ಒಂದು ಸಮಾಜದ ಸ್ವಾಸ್ಥ್ಯಕ್ಕೆ ಅನೈತಿಕವಾದದ್ದು ಇರಬೇಕಾ...? ಅನೈತಿಕವಾದದ್ದು ಇರಬೇಕಾ...? ಇರಲಿ ಅದನ್ನು ಬಿಟ್ಟು ಬಿಡೋಣ. ಯಾವುದೇ ಹೋರಾಟ ನಡೆಯಬೇಕಾದರೂ ಅದಕ್ಕೊಂದು ಉದ್ದೇಶ ಇದ್ದೇ ಇರುತ್ತದೆ. ಈ ವಿಕೃತಿಯ ಬೆಂಬಲಿಗರನ್ನ ನಾನು ಕೇಳೋದು.... ಈ ನಿಮ್ಮ ಹೋರಾಟದ ಉದ್ದೇಶ ಏನು...? ನೈತಿಕ ಪೋಲೀಸ್ ಗಿರಿ ನಿಲ್ಲಬೇಕು ಅಂತ ಅಲ್ವೇ.... ಹಾಗಿದ್ದರೆ ಇದಕ್ಕೆ ಸರಳ ಉಪಾಯ ನೈತಿಕವಾಗಿ ನಡೆದುಕೊಳ್ಳುವುದು.... ಅನೈತಿಕವಾದದ್ದು ನಡೆದರೆ ತಾನೇ ಅವರು ಪೋಲೀಸ್ ಗಿರಿ ತೋರಿಸೋದು. ಎಲ್ಲರೂ ನೈತಿಕವಾಗೇ ನಡೆದುಕೊಂಡರೆ ಯಾರಿಗೆ ತಾನೇ ನೈತಿಕ ಪೋಲೀಸ್ ಗಿರಿ ಮಾಡೋಕೆ ಅವಕಾಶ ಇರುತ್ತೆ...? ಆದರೆ ಅದನ್ನ ಬಿಟ್ಟು ನೀವು ಮಾಡುತ್ತಿರುವ ಕೆಲಸವಾದರೂ ಏನು...? ಮತ್ತೆ ಅನೈತಿಕವಾದದ್ದನ್ನ ಮಾಡೋದು. ಇಂಥಾದ್ದು ಆದಾಗಲೇ ನೈತಿಕ ಪೋಲೀಸ್ ಗಿರಿ ಕಾಣಿಸಿಕೊಳ್ಳುವುದು. ಅಂದರೆ ನೀವು ಬೆಂಕಿಯನ್ನ ಆರಿಸುವ ಬದಲಾಗಿ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದ್ದೀರಿ ಅಲ್ವಾ...
ಸರಿ ಅದೇನೋ ಮಾಡುತ್ತೀರಿ ಅಂತಾನೇ ಇಟ್ಟುಕೊಳ್ಳೋಣ ಅದರ ಫಲಿತಾಂಶ ಏನು...? ಬಹುಶ ಈಗ ನಡೆಯುತ್ತಿರುವ ಚರ್ಚೆಗಳಲ್ಲಿ ಇದರ ಅಡ್ಡ ಪರಿಣಾಮದ ಕುರಿತು ಜಾಸ್ತಿ ಮಾತುಕತೆ ಕೇಳಿದ ಹಾಗಿಲ್ಲ. ನಾನೂ ಇಲ್ಲಿ ಸ್ವಲ್ಪ ನಾಚಿಕೆ ಬಿಟ್ಟೇ ಬರೆಯುತ್ತಿದ್ದೇನೆ. ಕಾರಣ.... ಅಂತಹ ನಾಚಿಕೆಗೇಡಿನ ಕೆಲಸ ತಡಿಯಬೇಕಾದರೆ ಇದು ಅವಶ್ಯಕವೇನೋ ಅಂತನಿಸಿತು. ಸರಿ ನೀವೆಲ್ಲರೂ ಮುತ್ತಿಡೋಕೆ ಒಂದಾದಿರಿ... ಅಲ್ಲಿ ಹಲವಾರು ಜನ ಯುವತಿಯರು ಬರಬಹುದು ಯುವಕರು ಬರಬಹುದು. ಆದರೆ ಇಂತವರೇ ಬರಬೇಕು, ಅಂತವರು ಬರಬಾರದು ಅನ್ನುವ ನಿಯಮಗಳೇನೂ ಇಲ್ಲ. ಹಾಗಾಗಿ ಯಾರು ಬೇಕಿದ್ದರೂ ಬರಬಹುದು , ಬರುವವರೆಲ್ಲರೂ ನಾವೂ ನೈತಿಕ ಪೋಲೀಸ್ ಗಿರಿಯ ವಿರೋದ ಮಾಡುವವರು ಅಂದರಾಯಿತು ಅಷ್ಟೇ. ಸರಿ ನಾವು ನೈತಿಕ ಪೋಲೀಸ್ ಗಿರಿಯ ವಿರೋಧಿಗಳು ಅನ್ನೋ ಜನಾನೇ ಸೇರಿದರು... ಮುಂದೇನು...? ಮುತ್ತಿಡಲು ಶುರು ಮಾಡಿದಿರಿ. ನನಗನಿಸಿದಂತೆ ಅಲ್ಲಿ ಇಂತವರು ಇಂತವರಿಗಷ್ಟೇ ಮುತ್ತಿಡಬೇಕು ಅನ್ನುವ ನಿಯಮಗಳೇನೂ ಇಲ್ಲ, ಯಾರು ಯಾರಿಗೂ ಮುತ್ತಿಡಬಹುದು. ಅಲ್ವೇ ಹಾಗಿದ್ದರೆ ಅಲ್ಲಿಗೆ ಬರೋ ಹುಡುಗಿಯರಲ್ಲಿ ನನ್ನದೊಂದಿಷ್ಟು ಮಾತು. ಯಾಕೆ ಬರೀ ಹುಡುಗಿಯರಿಗೆ...? ಅನ್ನೋದಕ್ಕೆ ಬೇಕಿದ್ದರೆ ನನ್ನನ್ನು ಬೈಯ್ದುಕೊಳ್ಳಿ ಪರವಾಗಿಲ್ಲ. ಇದು ಸ್ತ್ರೀ ಶೋಷಣೆ ಅಂತನೂ ಡಂಗುರ ಸಾರಿ ನನಗೇನೂ ಬೇಜಾರಿಲ್ಲ ಆದರೂ ಇದು ಅವಶ್ಯಕ ಯಾಕಂದ್ರೆ ಸಮಾಜದಲ್ಲಿ ಹೆಣ್ಣು ಕೂಡ ಪ್ರಶ್ನಿಸೋದು ಹೆಣ್ನನ್ನೇ...
ಅಲ್ಲಿಗೆ ಬರೋ ಹುಡುಗಿಯರಿಗಾಗಿ ಈ ಮಾತುಗಳು : ಕಿಸ್ ಆಫ್ ಲವ್.... ನಮ್ಮಲ್ಲಿ ಬೇಕಾದಷ್ಟು ಜನರಿಗೆ ಈ ವಿಷಯ ಕೇಳಿ ವಿಪರೀತ ಆಸೆ ಹುಟ್ಟಿರಬಹುದು. ಹೇಳೋರಿಲ್ಲ ಕೇಳೋರಿಲ್ಲ ಹುಡುಗಿಯರೇ ಬಂದು ನಮಗೆ ಮುತ್ತು ಕೊಡುತ್ತಾರೆ ಅಂತಾದರೆ ನಮಗೇನು...???? ಅನ್ನೋ ಅಭಿಪ್ರಾಯ ಹೊಂದಿರೋ ಹುಡುಗರು ಬಂದರು ಅಂತಿಟ್ಟುಕೊಳ್ಳಿ, ಬೇಕಾಬಿಟ್ಟಿ ಮುತ್ತು ಕೊಟ್ಟರು ಅನ್ನಿ... ಅದೇನೋ ಹೊಸ ಅನುಭವ... ನಿಮ್ಮನ್ನ ಬಿಡಲೇ ಇಲ್ಲ ಮತ್ತೆ ಮತ್ತೆ ಬಂದು ನಿಮ್ಮ ಬಳಿ ಮುತ್ತಿಡೋಣ ಅಂದರೆ...?
ಸಾಮಾನ್ಯವಾಗಿ ಮುತ್ತು ಕೊಡೋದು ಕೂಡ ಗಂಡು ಹೆಣ್ಣಿನಲ್ಲಿ ಕಾಮವನ್ನ ಉತ್ತೇಜಿಸುತ್ತದೆ. ಕಾಮೋತ್ತೇಜಿತನಾದ ಹುಡುಗ ಮುಂದೇನು ಮಾಡಬಲ್ಲ...? ಅನ್ನೋದು ಸರ್ವೇ ಸಾಧಾರಣ ನಮಗೆ ಗೊತ್ತಿರುವಂಥಾದ್ದೇ... ಸರಿ ಅಲ್ಲೇನೂ ಮಾಡೋಲ್ಲ ಸುಮ್ಮನಿದ್ದ ಆದರೆ ಈ ರೀತಿಯ ವಿಕೃತಿಗಳಿಲ್ಲದೆಯೇ ಹಲವಾರು ಬಲಾತ್ಕಾರದ ಘಟನೆ ನಡೆಯುತ್ತದೆ ಅನ್ನುವಾಗ ಇದೂ ಆದ್ರೆ...? ಕಾಡಿಗೆ ಕಿಡಿ ಹಚ್ಚಿ ಮತ್ತೆ ಕಾಳ್ಗಿಚ್ಚು ಕಾಳ್ಗಿಚ್ಚು ಅನ್ನೋದು ಮೂರ್ಖತನ ಅಲ್ವಾ...
ಸರಿ ಇನ್ನೂ ಸ್ವಲ್ಪ ಇದರ ಕುರಿತೇ ಯೋಚಿಸಿ. ಒಬ್ಬಾತ ನಿಮ್ಮನ್ನ ಮುತ್ತಿಟ್ಟ ಆತನಿಗೋ ಬಹಳ ಖುಷಿಯಾಯಿತು. ನಿಮ್ಮನ್ನ ಮನಸ್ಸಿನಲ್ಲಿ ನೆನಪಿಟ್ಟುಕೊಂಡ. ಇದಾಗಿ ಹಲವು ದಿನಗಳ ಬಳಿಕ ಅದ್ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಾಗ, ನೀವೂ ನಿಮ್ಮ ಗೆಳತಿಯರ ಜೊತೆ, ಹೆತ್ತವರ ಜೊತೆ, ಅಥವಾ ಗಂಡನ ಅಥವಾ ಪ್ರಿಯಕರನ ಜೊತೆ ಇರುವಾಗ ನಿಮ್ಮ ಬಳಿ ಬಂದು... " ಹೇ ನನ್ನ ಪರಿಚಯ ಆಯ್ತಾ ನಾನು ಆವತ್ತು ನಿಮಗೆ ರೋಡ್ ನಲ್ಲೇ ಮುತ್ತು ಕೊಟ್ಟಿದ್ದೆ... ನೆನಪಾಯ್ತಾ...? ಅಂತಂದರೆ ನಿಮಗೆ ಹೇಗಾಗಬೇಡ...? ಇನ್ನೂ ಮುಂದುವರಿದು ರೀ ನನ್ನ ಫ್ರೆಂಡ್ಸ್ ಗಳೂ ಇದ್ದಾರೆ ಆವತ್ತು ಬರ್ಲಿಕ್ಕಾಗಲಿಲ್ಲ ಈವಾಗ ಅವರಿಗೆಲ್ಲಾ ಒಂದು ಮುತ್ತು ಕೊಡ್ರೀ ಅಂದ್ರೆ...??? ಅಯ್ಯೋ ನೀವು ಮಾತಾಡುವ ಹಾಗಿಲ್ಲ ಅವರು ಈಗಲೂ ನೀವು ಹೇಳೋ ಪ್ರೀತಿಯ ಅಭಿವ್ಯಕ್ತಿಯನ್ನೇ ಬಯಸುತ್ತಿರೋದು.... ಪ್ರೀತಿಯ ಅಭಿವ್ಯಕ್ತಿಗೆ ದಿನಗಳು ಮಹತ್ವ ಅಲ್ಲ ಅಲ್ವಾ.... ಸರಿ ಇನ್ನೂ ಮುಂದುವರಿದು ಯೋಚಿಸೋಣ... ನೀವು ಒಂಟಿಯಾಗಿ ಸಿಕ್ಕಾಗ ಇವರೆಲ್ಲಾ ಕುಡಿದು ಬಂದು ನಿಮಗೆ ಸಿಕ್ಕರು ಅನ್ನಿ... ನಿಮ್ಮನ್ನ ಬಲವಂತ ಪಡಿಸೋಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ.... ಆ ಕ್ಷಣಕ್ಕೆ ಅವರೆಲ್ಲರ ಪಾಲಿಗೆ ನೀವೊಬ್ಬ ವ್ಯಭಿಚಾರಿಣಿ ಆಗಿ ಬಿಡ್ತೀರಾ... ಇದರ ಸಂಭವನೀಯತೆಯನ್ನ ನೀವು ತಳ್ಳಿ ಹಾಕೋಗಾಗುತ್ತಾ...??? ಮುತ್ತು... ಮುತ್ತಿನ ಮತ್ತೇನು...???
ಈಗ ಇಡಿಯ ಮುತ್ತಿನ ಬೆಂಬಲಿಗರ ಕುರಿತು ಹೇಳೋದಾದರೆ... ನಿಮ್ಮ ಈ ವಿಕೃತಿಯಿಂದ ಸಮಾಜಕ್ಕೇನು ಲಾಭ....? ಯಾವುದನ್ನು ವಿರೋಧಿಸುತ್ತೀರೋ ಅದಂತೂ ನಿಲ್ಲೋದಿಲ್ಲ. ಬದಲಿಗೆ ನೀವು ಪಡೆಯುವಂಥಾದ್ದು ಏನು...? ನೈತಿಕ ಪೋಲೀಸ್ ಗಿರಿಗೆ ವಿರಾಮ ಹಾಕಿದ್ದೇವೆ ಅನ್ನೋ ಆತ್ಮ ಸಂತೃಪ್ತಿಯೂ ಇಲ್ಲ... ನಿಮಗೆ ಬೇರೆನು ಸಿಗುತ್ತದೆ.. ಅದರ ಬಗ್ಗೆಯೂ ಯೋಚಿಸೋಣ... ನಾನು ನಿಜಕ್ಕೂ ನಿಮ್ಮಷ್ಟು ವಿದ್ಯಾವಂತನಲ್ಲ, ಹಳ್ಳಿಯಲ್ಲಿ ಬೆಳೆದವನು. ಹಾಗಾಗಿ ಅಲ್ಪಜ್ನಾನಿಯೇ ಅಂತಿಟ್ಟುಕೊಳ್ಳಿ, ಆದರೆ ಹಿಂದೆ ನಾನೊಮ್ಮೆ ಏಡ್ಸ್ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ನಡೆದ ಘಟನೆ, ಸಭೆಯಲ್ಲಿ ಒಬ್ಬಾತ ಕೇಳಿದ " ಸರ್ ಮುತ್ತು ಕೊಡೋದರಿಂದ ಏಡ್ಸ್ ಬರುವ ಸಂಭವ ಇದೆಯಾ...? " ಅದಕ್ಕೆ ಅಲ್ಲಿದ್ದ ಡಾಕ್ಟರ್ ಅಂದರು " ಖಂಡಿತಾ ಇದೆ, ಒಂದು ವೇಳೆ HIV ಪೀಡಿತ ವ್ಯಕ್ತಿ ಮುತ್ತಿಡುವಾಗ ಇನ್ನೊಬ್ಬನ ಬಾಯಿಯಲ್ಲಿ ಗಾಯಗಳೇನಾದರೂ ಇದ್ದಲ್ಲಿ ಏಡ್ಸ್ ಸೋಂಕು ತಗಲೋ ಸಂಭವ ಇದೆ." ಈಗ ಹೇಳಿ ಇಲ್ಲಿ ಸಂಘಟಕರು ಏಡ್ಸ್ ಪೀಡಿತರು ಬರಕೂಡದು ಅಂತ ಎಲ್ಲಿ ಹೇಳಿದ್ದಾರೆ...? ಅಥವಾ ಅಲ್ಲಿಗೆ ಬರೋ ಜನರ ಆರೋಗ್ಯದ ಬಗ್ಗೆ ಯಾವ ಕಾಳಜಿಯನ್ನು ವಹಿಸುತ್ತಾರೆ. ಬರಿಯ ನಾನು ಬೆಂಬಲಿಸುತ್ತೇನೆ ಅಂತ ಹೇಳಿದ ಮಾತ್ರಕ್ಕೆ, ಭಾಗವಹಿಸಿದ ಮಾತ್ರಕ್ಕೆ ನೈತಿಕ ಪೋಲೀಸ್ ಗಿರಿ ನಿಲ್ಲೋದಿಲ್ಲ ಆದ್ರೆ ನಷ್ಟ ಅನುಭವಿಸುವವರು ಯಾರು...? ಎಜುಕೇಟೆಡ್ ಗಳು ಸ್ವಾಮೀ ನೀವುಗಳು ಇದನ್ನೆಲ್ಲಾ ಯೋಚಿಸಬೇಕಲ್ವಾ...
ವಾಸ್ತವದಲ್ಲಿ ಈ ಸಂಘಟಕರಿಗೆ ಆಗಲಿ ಅಥವಾ ಇದನ್ನ ಬೆಂಬಲಿಸುವವರಿಗಾಗಲೀ ಪ್ರೀತಿಯ ನಿಜವಾದ ಅರ್ಥವೇ ಗೊತ್ತಿಲ್ಲ. ಅದರಲ್ಲೂ ಇದಕ್ಕೆ ಬೆಂಬಲವಾಗಿ ನಿಲ್ಲೋ ಹೆಚ್ಚಿನವರಿಗೂ ಪ್ರೇಮ ಅನ್ನೋದು ಬರೀ ಆಕರ್ಷಣೆ... ಲಿವ್ ಇನ್ ರಿಲೇಶನ್ ಶಿಪ್ ಅನ್ನು ತಮ್ಮ ಸಿದ್ದಾಂತವನ್ನಗಿಸಿಕೊಂಡವರಿಂದ ಇನ್ನು ಹೆಚ್ಚೇನನ್ನು ಬಯಸೋಕೆ ಸಾಧ್ಯ...,? ಭಾರತ ಜಗತ್ತಿಗೆ ಪ್ರೇಮವನ್ನ ಧಾರೆಯೆರೆದ ನಾಡು. ಶ್ರೀಕೃಷ್ಣ ರಾಧೆಯರದ್ದು ಅಪೂರ್ವ ಪ್ರೇಮ ಶ್ರೀರಾಮಕೃಷ್ಣ ಪರಮಹಂಸರೂ ಶಾರಾದಾದೇವಿ ಪತಿ ಪತ್ನಿಯರಾಗಿದ್ದು ಜಗತ್ತಿಗೆ ಪ್ರೇಮ ಸಾರಿದರಲ್ವಾ ಅವರು ಯಾವತ್ತೂ ಒಬ್ಬರಿಗೊಬ್ಬರು ಮುತ್ತಿಟ್ಟಿರಲಿಲ್ಲ ಆದರೆ ಇಡಿಯ ಜಗತ್ತಿಗೆ ಪ್ರೇಮದ ಮಹತ್ವ ಹೇಳಿಕೊಟ್ಟಿಲ್ವಾ.... ಪ್ರೀತಿಯ ಅಭಿವ್ಯಕ್ತಿಗೆ ಮುತ್ತೇ ಬೇಕು ಅಂತಿಲ್ಲ ಅದೂ ರಸ್ತೆಯ ಮಧ್ಯದಲ್ಲೇ ಕೊಟ್ಟು ಯಾರಿಗಾಗಿ ಪ್ರೀತಿಯ ಭಾವವನ್ನು ತೋರಿಸೋದು... ವಾಸ್ತವದಲ್ಲಿ ಇಂಥವರೇ ಹೆಚ್ಚಾಗಿ ತಮ್ಮ ತಂದೆ ತಾಯಿಯರನ್ನ ಬಿಟ್ಟು ಬಂದು ಪ್ರತ್ಯೇಕ ಜೀವನ ನಡೆಸೋರು ಅಥವಾ ಅವರ ಮುದಿಪ್ರಾಯದಲ್ಲಿ ಆಶ್ರಮಗಳಿಗೆ ಕಳುಹಿಸುವವರು.... ನಿಮ್ಮ ರಕ್ತ ಸಂಬಂಧಿಗಳಿಗೇ ಪ್ರೀತಿ ಹಂಚಲಾರದ ಮೇಲೆ ಜಗತ್ತಿಗೇನು ಪ್ರೀತಿ ಹಂಚುತ್ತೀರಾ. ಇಷ್ಟಾಗಿಯೂ ನಮ್ಮ ಹಕ್ಕು ವೈಯಕ್ತಿಕ ಸ್ವಾತಂತ್ರ್ಯ ಅಂತೆಲ್ಲಾ ಬೊಬ್ಬಿಡುವವರಲ್ಲೆಲ್ಲಾ ಒಂದು ಕಳಕಳಿಯ ವಿನಂತಿ ನೀವು ಅದೇನು ಬೇಕಿದ್ದರೂ ಮಾಡಿ ನಿಮ್ಮನ್ನ ಯಾರೂ ಕೇಳೋದಿಲ್ಲ ಅದಕ್ಕೆ ಅಂತಹದ್ದೇ ಸಂಸ್ಕೃತಿಯ ದೇಶಗಳಿವೆ... ಆ ದೇಶಕ್ಕೆ ಹೋಗಿ ಏನು ಬೇಕಿದ್ದರೂ ಮಾಡಿ ಯಾರೂ ನಿಮ್ಮನ್ನ ತಡೆಯೋದಿಲ್ಲ. ನಾವುಗಳು ಕೂಡ ಭಾರತ ಇಂತಹ ವಿಕೃತಿಯಿಂದಲೂ ಸ್ವಚ್ಛವಾಗುತ್ತಿದೆ ಅನ್ನುತ್ತಾ ಖುಷಿ ಪಡುತ್ತೇವೆ.

No comments:

Post a Comment