Monday 2 November 2015

ನಾನು ಮತ್ತು ಫೇಸ್ ಬುಕ್ಕು....



ನನಗೆ ಸರಿಯಾಗಿ ಎಷ್ಟು ಸಮಯದ ಹಿಂದಿನ ಮಾತು ಅಂತ ನೆನಪಿಲ್ಲ. ನನ್ನ ನೆನಪಿನ ಶಕ್ತಿ ತುಂಬಾನೇ ವೀಕು... ಅಂತೂ ನಾನು ಕಂಪ್ಯೂಟರ್ ತೆಗೆದುಕೊಂಡ ಹೊಸತರಲ್ಲಿ ಗೆಳೆಯನೊಬ್ಬ ಅರ್ಕುಟ್ ನಲ್ಲಿ ಅಕೌಂಟ್ ಒಂದನ್ನ ಓಪನ್ ಮಾಡಿ ಕೊಟ್ಟಿದ್ದ.. ಅದರಲ್ಲಿ ಖುಷಿ ಪಡುತ್ತಿದ್ದ ಸ್ವಲ್ಪ ಸಮಯದಲ್ಲೇ ಇನ್ನೊಬ್ಬ ಗೆಳೆಯ " ಫೇಸ್ ಬುಕ್ " ನೋಡು ಚೆನ್ನಾಗಿದೆ ಅಂತ ಹೇಳಿದ. ಹಾಗೇ ಅದರಲ್ಲೂ ಒಂದು ಅಕೌಂಟ್ ಓಪನ್ ಮಾಡಿದ್ದೆ... ಬರು ಬರುತ್ತಾ ಈ ಅರ್ಕುಟ್ ಅನ್ನೋದು ಹೇಗೆ ಮರೆಯಾಯಿತೋ ನನಗೇ ಗೊತ್ತಿಲ್ಲ... ಫೇಸ್ ಬುಕ್ ಅನ್ನೋದು ನನ್ನ ಜೀವನದ ಒಂದಷ್ಟು ಸಮಯವನ್ನ ತನ್ನತ್ತ ಸೆಳೆಯಲು ಶುರು ಮಾಡಿತ್ತು. ಈ ಸಮಯ ಸದುಪಯೋಗವಾದದ್ದೋ ಅಥವಾ ದುರುಪಯೋಗವಾದದ್ದೋ ಅನ್ನುವಂತಾದ್ದನ್ನ ಅವರವರಿಗೆ ಬಿಟ್ಟು ಬಿಡಬೇಕು ಅನ್ನೋದು ನನ್ನ ಅಭಿಪ್ರಾಯ.... ಕಾರಣ ನನ್ನ ಪಾಲಿಗಿದು ಸದುಪಯೋಗವೇ... ಹೇಗೆ...?
ಕಾಲೇಜು ದಿನಗಳಲ್ಲಿ ಸಹಜವಾಗಿ ಮೂಡುವ ಹುಚ್ಚು ಯೌವನದ ಆಸೆಗಳನ್ನೆಲ್ಲಾ ಹಾಳೆಗಳಲ್ಲಿ ಗೀಚಿ ನಮ್ಮ ಕಾಲೇಜಿನ ನೋಟೀಸು ಬೋರ್ಡಿನಲ್ಲಿ ಹಾಕೋದು ನನ್ನ ಆಗಿನ ಹವ್ಯಾಸವಾಗಿತ್ತು. ಆಗ ನನ್ನ ಪಾಲಿಗೆ ಅದೇ ಸ್ಟೇಟಸ್ ಅಪ್ ಡೇಟ್... ಬೆಳಿಗ್ಗೆ ಓದೋಕೆ ಅಂತ ಬೇಗ ಏಳೋದು.... ಹಾಗೇ ಏನೇನೋ ಕಲ್ಪಿಸಿಕೊಂಡು ಗೀಚೋದು... ಮತ್ತೆ ಅದನ್ನ ನೋಟೀಸ್ ಬೋರ್ಡಿಗಾಗಿ ಕೊಡೋದು...ಇದು ನಡೀತಾನೇ ಇತ್ತು... ಅದಕ್ಕೆ ನನ್ನ ಗೆಳೆಯರ ಶಹಬ್ಬಾಸ್ ಗಿರಿನೂ ಕಾರಣ. ಈ ಹವ್ಯಾಸಕ್ಕೆ ಬ್ರೇಕ್ ಬಿದ್ದಿದ್ದು.... ಕಾಲೇಜು ಜೀವನ ಮುಗಿಸಿ, ದುಡಿಯೋಕೆ ಶುರುಮಾಡಿದಾಗ. ಕೆಲಸ ಅಂತ ಶುರು ಆದಾಗ ಈ ಗೀಚೋದೆಲ್ಲಾ ನಿಂತೇ ಹೋಗಿತ್ತು. ಅದರಲ್ಲೂ ನನ್ನದು ಕಂಪನಿಯ ಶಿಫ್ಟ್ ಜೀವನ. ನಮ್ಮ ಲೈಫ್ ಸ್ಟೈಲೇ ಒಂದು ಥರಾ.... ಜಗತ್ತು ಮಲಗಿರುವಾಗ ನಾವ್ ಎದ್ದಿರ್ತೇವೆ, ಜಗತ್ತು ಎಚ್ಚರವಾಗಿರುವಾಗ ಮನೆಯಲ್ಲಿ ಅಂಗಾಲ ಬಿದ್ದಿರುತ್ತೇವೆ. ಇವೆಲ್ಲದರ ನಡುವೆ ಬರವಣಿಗೆ ನಿಜಕ್ಕೂ ನಿಂತೇ ಹೋಗಿತ್ತು.
ಹೀಗೆ ಒಣಗಿ ಇನ್ನೇನು ಸಾಯಲು ತಯಾರಾಗಿದ್ದ ಬರವಣಿಗೆಯ ಮರವನ್ನ ಮತ್ತೆ ಚಿಗುರುವಂತೆ ಮಾಡಿದ್ದು ಈ "ಫೇಸ್ ಬುಕ್ " ಅಂತ ನಾನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಇದಕ್ಕೆ ಸ್ಪೂರ್ತಿ ನೀಡಿದ್ದು ನನ್ನ ಆತ್ಮೀಯ ಮಿತ್ರರಾಗಿರೋ ರವೀಂದ್ರ ನಾಯಕ್. ಅವರ ಒಂದು ಸ್ಪೂರ್ತಿದಾಯಕ ಮಾತಿನಿಂದ ನಾನು ಮತ್ತೆ ಗೀಚೋಕೆ ಶುರು ಮಾಡಿದೆ.... ನನ್ನ ಪಾಲಿಗೆ ಈ ಫೇಸ್ ಬುಕ್ ಕಾಲೇಜು ದಿನಗಳ ನೋಟೀಸ್ ಬೋರ್ಡ್ ಆಗಿ ಹೋಗಿತ್ತು. ಬಹುಶ ಗೆಳೆಯರ ಬೆನ್ನು ತಟ್ಟುವಿಕೆ ಯಾವ ರೀತಿ ಫಲ ಕೊಡುತ್ತೆ ಅನ್ನೋದು ಗೊತ್ತಾಗಬೇಕಾದರೆ ಫೇಸ್ ಬುಕ್ ಗೆ ಬರಬೇಕೇನೋ...
ಅಂಥಾ ದೊಡ್ದ ಗೆಳೆಯರ ಬಳಗವೇ ಸಿಗುತ್ತಾ ಹೋಯಿತು...... ಅದೆಲ್ಲೋ ಕಳೆದೇ ಹೋಗಿದ್ದಾರೆ ಅನ್ನುವಷ್ಟರ ಮಟ್ಟಿಗೆ ಮರೆತು ಹೋಗಿದ್ದ ಬಾಲ್ಯದ ಸ್ನೇಹಿತರನ್ನ ಮತ್ತೆ ಒಂದು ಮಾಡುವ ಕೆಲಸ ಈ ಫೇಸ್ ಬುಕ್ ಮಾಡುತ್ತೆ ಅಂದರೆ ಅದರ ತಾಕತ್ತು ಸುಮ್ನೇನಾ... ಬಹುಶ ಈ ಬಾಲ್ಯದ ಸ್ನೇಹಿತರು ಮತ್ತು ಅವರೊಂದಿಗೆ ಮರುಕಳಿಸೋ ಆ ಹಳೆಯ ನೆನಪುಗಳು ನಮಗೆ ಕೊಡೋ ಖುಷಿ ಹೇಳಿಕೊಳ್ಳೋಕೆ ಖಂಡಿತಾ ಸಾಧ್ಯವಿಲ್ಲ...ಬರಿಯ ಗೆಳೆಯರಷ್ಟೇ ಅಲ್ಲ.. ನನಗಂತೂ ಈ ಫೇಸ್ ಬುಕ್ ಹಲವು ಅಕ್ಕಂದಿರನ್ನ, ಅಣ್ಣನಂತೆ ನೋಡಿಕೊಳ್ಳೋ ಹಿತೈಷಿಗಳನ್ನ ಒಂದಷ್ಟು ಗೆಳೆಯ ಗೆಳತಿಯರನ್ನ ಮುದ್ದು ತಂಗಿಯರನ್ನೂ ಕೊಟ್ಟಿದೆ. ಇದೆಲ್ಲಾ ಫೇಸ್ ಬುಕ್ಕಿನ ಭಾರತೀಕರಣದಿಂದಾಗಿದ್ದು ಅನ್ನಬಹುದು. ಅದರಲ್ಲೂ ಬರವಣಿಗೆಯ ಲೋಕದಲ್ಲಿ ತಮ್ಮ ಹೆಸರನ್ನ ಎತ್ತರಕ್ಕೇರಿಸಿಕೊಂಡವರ ಜೊತೆ ಸಿಕ್ಕ ಸಖ್ಯ, ಅವರ ಸಲಹೆಗಳು ಅವರ ಹಿತವಾದ ಮಾತು ಇದೆಲ್ಲಾ ನನ್ನ ಪಾಲಿಗೆ ಸಿಗುತ್ತೆ ಅಂತ ನಾನು ನಿಜಕ್ಕೂ ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ.
ಇವರೆಲ್ಲರೂ ನನ್ನ ಗೀಚುವಿಕೆಯನ್ನ ಮೆಚ್ಚಿ ಪ್ರೋತ್ಸಾಹಿಸುತ್ತಾರೆ. ಇವರ ಮೆಚ್ಚುಗೆಯೇ ಬಹುಶ ನನ್ನನ್ನ ಮತ್ತಷ್ಟು ಬರೆಯುವಂತೆ ಮಾಡುತ್ತೆ. ಹೀಗಾಗಿ ಮೊದಲೆಲ್ಲಾ ನಾಲ್ಕು ಸಾಲಿನ ಕವನಗಳನ್ನ ಬರೆಯುತ್ತಿದ್ದವ... ಹುಚ್ಚು ಧೈರ್ಯ ಮಾಡಿ ಉದ್ದನೆಯ ಲೇಖನ ಬರೆಯೋಕು ಕೈ ಹಾಕಿದೆ... ನಾಲ್ಕೈದು ಜನರ ಮೆಚ್ಚುಗೇನೇ ನನ್ನ ಪಾಲಿಗೆ ದೊಡ್ದದು. ಅಂತಾದರಲ್ಲಿ ಒಮ್ಮೆ ಪ್ರಸಿದ್ಧ ಅಂಕಣಕಾರರಾದ ಸಂತೋಷ್ ತಮ್ಮಯ್ಯ ಅವರು ತಮ್ಮ ಅಸೀಮಾಕ್ಕೆ ನನ್ನ ಲೇಖನವೊಂದನ್ನ ಕೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು...ಹೀಗೆ ನನ್ನೊಳಗಿನ ಸಣ್ಣ ಲೇಖಕನಿಗೆ ಫೇಸ್ ಬುಕ್ ಕೊಟ್ಟ ಖುಶಿ ಅಷ್ಟಿಷ್ಟಲ್ಲ.... ಹಾಗಾಗೇ ಕೆಲವೊಮ್ಮೆ ಜನ ನನ್ನನ್ನ ಯಾವಾಗ ನೋಡಿದರೂ ಫೇಸ್ ಬುಕ್ ನಲ್ಲೇ ಇರ್ತೀಯಾ ಅಂತದರೂ ನಾನು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದೆ ಇಲ್ಲ.
ಕೆಲವೊಂದು ಸ್ನೇಹಿತರು ಅಭಿಮಾನದಿಂದ ಮಾತನಾಡಿಸುವಾಗ ತುಂಬಾನೇ ಖುಷಿಯಾಗುತ್ತದೆ. ಇಂದೇನಾದರೂ ನಾನು ಒಂದಷ್ಟು ಸಾಲುಗಳನ್ನ ಬರೆಯುತ್ತಿದ್ದೇನೆ ಅಂತಾದರೆ ಅದಕ್ಕೆ ಕಾರಣ ಈ ಫೇಸ್ ಬುಕ್. ಹಾಗಂತ ನಾನೊಬ್ಬ ದೊಡ್ದ ಲೇಖಕನಾಗಿದ್ದೇನೆ ಅಂತಲ್ಲ. ನನ್ನ ಕಂಪನಿಯಲ್ಲೇ ನನಗಿಂತ ಪ್ರಬುದ್ಧ ಲೇಕಕರಿದ್ದಾರೆ... ಆದರೆ ಅವರಿಗೆ ಅಷ್ಟು ಸಮಯ ಕೊಡೋದಿಕ್ಕೆ ಆಗುತ್ತಿಲ್ಲ ಅಷ್ಟೇ... ಯಾವುದೇ ವಿಷಯಗಳಿರಲಿ ಅದರಲ್ಲಿ ಒಳ್ಳೆಯದೂ ಇರುತ್ತೆ ಕೆಟ್ಟದೂ ಇರುತ್ತೆ, ನಮಗೆ ಬೇಕಾದ ಹಾಗೆ ಬರಿಯ ಒಳ್ಳೆಯದನ್ನ ಆಯ್ಕೆ ಮಾಡಿಕೊಳ್ಳತೊಡಗಿದರೆ. ಎಲ್ಲವೂ ಒಳ್ಳೆಯದೇ ಆಗುತ್ತದೆ ಅಲ್ವೇ... ನಾನೂ ಕೂಡ ಫೇಸ್ ಬುಕ್ಕಿನ ಒಳ್ಳೆಯ ಅಂಶಗಲನ್ನೇ ಹೀರುತ್ತಿದ್ದೇನೆ... ಅಂದ ಹಾಗೆ ಇವತ್ತ್ಯಾಕೆ ಫೇಸ್ ಬುಕ್ ಬಗ್ಗೆ ಬಾರೀ ಬರೀತಿದಾನೆ ಅಂತ ನಿಮಗನ್ನಿಸುತ್ತಿದ್ದಿರಬಹುದು, ಕಾರಣ ಇಷ್ಟೇ ಇವತ್ತು " ಫೇಸ್ ಬುಕ್" ನ ಹತ್ತನೇ ಹುಟ್ಟು ಹಬ್ಬವಂತೆ. ನನ್ನ ಜೀವನದಲ್ಲಿ ಒಂದೊಳ್ಳೆ ತಿರುವು ಕೊಟ್ಟ ಈ ಸಾಮಾಜಿಕ ಜಾಲತಾಣಕ್ಕೆ ಒಂದು ಸಲಾಮ್ ಹೊಡೆಯೋಣ ಅಂತನಿಸಿತು.
ಚಿರಋಣಿ ನಿನಗೆ "ಫೇಸ್ ಬುಕ್" ಹಾಗೇನೇ ಹತ್ತನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ...

No comments:

Post a Comment