Monday 2 November 2015

ನಿಮ್ಮಾ " ಐ "ಯಾರೆ " ಐ " ನೋಡಿ ಬನ್ನಿ...



ಕಳೆದ ಬುಧವಾರ ಶಂಕರ್ ನಿರ್ದೇಶನದ , ವಿಕ್ರಮ್ ಅಭಿನಯದ ಬಹು ನಿರೀಕ್ಷಿತ ಚಿತ್ರ " ಐ " ಬಿಡುಗಡೆಯಾಗಿತ್ತು. ಗುರುವಾರ ಸಿನಿಮಾ ನೋಡಿದವನೇ ಹೇಳಿಕೊಳ್ಳೋದಿದೆ ಇದರ ಬಗ್ಗೆ ಅಂದಿದ್ದೆ. ನಿಜವಾಗಿಯೂ ನಾನೇನು ಚಿತ್ರ ವಿಮರ್ಶಕನಲ್ಲ... ಆದರೆ ಸಿನಿಮಾ ನನ್ನ ಮಟ್ಟಿಗೆ ಹೇಗನಿಸಿತು ಅಂತ ಮಾತ್ರ ಹೇಳಬಲ್ಲೆ... ಒಂದು ಮಾತಿನಲ್ಲಿ ಹೇಳೋದಾದ್ರೆ ಚಿತ್ರ ಬಹಳ ಚೆನ್ನಾಗಿದೆ. ಇದಕ್ಕೆ ಮುಖ್ಯ ಕಾರಣ ಶಂಕರ್ ಮತ್ತು ವಿಕ್ರಮ್. ಸಾಮಾನ್ಯ ಕಥೆಯೊಂದನ್ನು ಕೂಡ ಅಸಮಾನ್ಯ ಹೇಗೆ ಮಾಡಬಹುದು ಅನ್ನೋದನ್ನ ನಿರ್ದೇಶಕ ಶಂಕರ್ ಅವರಿಂದ ಕಲಿಯಬೇಕು... ಅದಕ್ಕೆ ಜೊತೆ ನೀಡಿದವರು ನಾಯಕ ನಟ ವಿಕ್ರಮ್. ನಿಜವಾಗಿ ಹೇಳಬೇಕೆಂದರೆ ಒಂದಷ್ಟು ನೆಗೆಟಿವ್ ಅಂಶಗಳೂ ಶಂಕರ್ ಸಿನಿಮಾದಲ್ಲಿ ಕಾಣಸಿಗುತ್ತದೆ. ಆದರೆ ಅದನ್ನೂ ಮೀರುವ ಹಾಗೆ ಶಂಕರ್ ನಿರ್ದೇಶನವಿದೆ.
ಸಿನಿಮಾದ ಕಥೆ ಹೇಳೋದಿಲ್ಲ... ನೀವೆಲ್ಲಾ ನೋಡಿ ಅನ್ನೋದೆ ನನ್ನ ಉದ್ದೇಶ... ಹಾಗಿದ್ದರೂ ಇಲ್ಲಿ ಉಲ್ಲೇಖಿಸುವ ಕೆಲವು ಅಂಶಗಳು ಸಿನಿಮಾ ನೋಡದವರಿಗೆ ಅರ್ಥವಾಗಲಿಕ್ಕಿಲ್ಲ... ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗಬೇಡಿ... ಸಿನಿಮಾ ನೋಡಿ.... ಮತ್ತೆ ಬಂದು ಓದಿ... ಆಗ ನನ್ನ ಮಾತು ಸರಿ ಕಂಡರೂ ಕಾಣಬಹುದು...
ಮೊದಲು ಈ ಚಿತ್ರದ ನೆಗೆಟಿವ್ ಪಾಯಿಂಟ್ ಹೇಳೋದಾದ್ರೆ... ಬಾಡಿ ಬಿಲ್ಡರ್ ಆಗಿ ವಿಕ್ರಮ್ ನಮ್ಮನ್ನ ಆಕರ್ಷಿಸುವುದಿಲ್ಲ ಕಾರಣ ಆತ ಸಾಧಿಸಿಕೊಳ್ಳುವ ದೇಹದಾರ್ಡ್ಯಕ್ಕೆ " ಮಿಸ್ಟರ್ ತಮಿಳುನಾಡು " ಪ್ರಶಸ್ತಿ ಸಿಗುತ್ತದೆ ಅನ್ನುವಾಗ ಯಾಕೋ ನಂಬಬೇಕು ಅನ್ನಿಸೋಲ್ಲ. ಕಾರಣ ಅದೇ ಸ್ಪರ್ಧೆಯಲ್ಲಿ ಬೇಕಾದಷ್ಟು ಜನ ಒಳ್ಳೆಯ ಬಾಡಿ ಬಿಲ್ಡರ್ ಗಳು ಕಾಣಸಿಗುತ್ತಾರೆ. ಹಾಗೆಯೇ ನಾವು ಅದೆಷ್ಟೋ ಸಿನಿಮಾ ಹೀರೋಗಳನ್ನ ಬಾಡಿ ಬಿಲ್ಡ್ ಮಾಡಿರೋದನ್ನ ನೋಡಿದ್ದೇವೆ... ಅದರೆದುರು ವಿಕ್ರಮ್ ಬಾಡಿ ಸಪ್ಪೆಯಾಗಿ ಕಾಣುತ್ತದೆ. ಹಾಗೆ ಇನ್ನೊಂದು ಮೈನಸ್ ಪಾಯಿಂಟ್ ನಾಯಕಿ... ಶಂಕರ್ ಯಾಕೆ ಅಮಿ ಜಾಕ್ಸನ್ ಆಯ್ಕೆ ಮಾಡಿದರೋ ಗೊತ್ತಾಗುತ್ತಿಲ್ಲ... ಮುದ್ದು ಮುಖ ಇದ್ದರೂನೂ ಸಹಜಾಭಿನಯಕ್ಕೆ ಕಷ್ಟ ಪಡುತ್ತಿದ್ದುದು ಎದ್ದು ಕಾಣಿಸುತ್ತೆ... ಅದೂ ವಿಕ್ರಮ್ ನಂತಹ ಪಳಗಿದ ಪಟುವಿನೆದುರು ಇನ್ನೂ ಹೆಚ್ಚು ಅಸಹನೀಯವಾಗುತ್ತದೆ. ಇಲ್ಲೂ ಗಮನಿಸಬೇಕಾದದ್ದು ವಿಕ್ರಮ್ ಕೂಡಾ ಮೊದಲರ್ಧ ಭಾಗದಲ್ಲಿ ಹೆಚ್ಚಾಗಿ ಮನಸೆಳೆಯೋದಿಲ್ಲ... ದ್ವಿತೀಯಾರ್ಧದಲ್ಲೇ ಫುಲ್ ಜೋಶ್. ಮೊದಲ ಹಳ್ಳಿಯ ಲುಕ್ ನಿಂದ ಸ್ಟೈಲಿಶ್ ಲುಕ್ ಗೆ ಬದಲಾಗೋ ವಿಕ್ರಮ್ ತನ್ನ ಅಭಿನಯದಲ್ಲೂ ಸ್ಟೈಲ್ ತೋರಿಸುತ್ತಾರೆ. ಸಂತಾನಂ ಗೆ ಕಾಮಿಡಿಯಲ್ಲಿ ಹೇಳಿಕೊಳ್ಳುವಂಥಾ ಸ್ಕೋಪ್ ಇಲ್ಲ...
ಇದಕ್ಕಿಂತಲೂ ಹೆಚ್ಚಾಗಿ ಅಸಮಾಧಾನ ತರುವಂಥಾದ್ದು ಅಂದ್ರೆ ಚಿತ್ರಕಥೆಯಲ್ಲಿ ನಾವು ಯೋಚಿಸಿದ್ದು...ಕಡೆಯವರೆಗೂ ಇಲ್ಲದಿರೋದು. ಶಂಕರ್ ಸದಾ ತನ್ನ ಚಿತ್ರಗಳಲ್ಲಿ ತೋರಿಸುವಂತಾ ಮೆಸೇಜು ಬಲವಾಗಿಲ್ಲದೆ ಇರೋದು... ಹಾ ಜಾಹೀರಾತು ಲೋಕದ ವಿಷಯಗಳನ್ನೆಲ್ಲಾ ಹೇಳುವಾಗ ನಮಗೂ ಎಲ್ಲೋ ಕುತೂಹಲ ಜಾಹೀರಾತು ಲೋಕದ ಕೊಳಕನ್ನೆಲ್ಲಾ ಹೊರಹಾಕಿಯಾರೇನೋ ಅಂತ... ಆದರೆ ಅದು ಬರಿಯ ಒಂದು ಸಂದೇಶಕ್ಕೆ ಮುಗಿದುಬಿಡುತ್ತದೆ ಅನ್ನೋದೇ ಬೇಜಾರು... ಹಿಂದೆಲ್ಲಾ ಶಂಕರ್ ಯಾವುದಾದರೂ ಒಂದು ಸಾಮಾಜಿಕ ವಿಷಯವನ್ನ ಕೈಗೊಂಡರೆ ಅದರ ಕೊಳಕನ್ನೆಲ್ಲಾ ಹೊರಹಾಕಿ ಅದಕ್ಕೊಂದು ಪರ್ಯಾಯ ಮಾರ್ಗ ಸೂಚಿಸುತ್ತಿದ್ದರು.. ಅದು ವಾಸ್ತವದಲ್ಲಿ ಸಾಧ್ಯವೋ ಅಸಾಧ್ಯವೋ ಅಂತೂ ಅದೇನೋ ನೋಡುಗರಲ್ಲಿ ಹೊಸ ಸಂಚಲನವನ್ನುಂಟುಮಾಡುತಿತ್ತು. ಕೊನೆಯದಾಗಿ ಚಿತ್ರದ ನೆಗೆಟಿವ್ ಪಾಯಿಂಟ್ ಅಂದರೆ ಎಲ್ಲೋ ಅನುಮಾನ ಪಡುವಂತೆಯೇ ಸಾಗುವ ಕಥೆ...
ಇನ್ನು ಸಿನಿಮಾದ ಪ್ಲಸ್ ಪಾಯಿಂಟಿಗೆ ಬರೋಣ... ಮೊದಲೇ ಹೇಳಿದ ಹಾಗೆ ಚಿತ್ರದ ಪ್ಲಸ್ ಪಾಯಿಂಟ್ ಶಂಕರ್ ಮತ್ತು ವಿಕ್ರಮ್... ಕಥೆಗೆ ಬೇಕಾದ ದೃಶ್ಯವೈಭವವನ್ನ ಅದ್ಧೂರಿಯಾಗಿ ಕಟ್ಟಿಕೊಡುತ್ತಾರೆ ಶಂಕರ್.. ಚೀನಾದ ಹೂಗಳ ತೋಟ ಇರಲಿ
ಗಡಿಯಾರದ ಸೆಟ್... ಹಾಗೆಯೇ ಕೆಲವೊಂದು ಕಚಗುಳಿಯಿಡುವ ಜಾಹೀರಾತಿನ ಪರಿಕಲ್ಪನೆ...ಇವೆಲ್ಲಾ ಶಂಕರ್ ಕೈಕೆಳಗೆ ಮಾತ್ರ ಸಾಧ್ಯವೋ ಏನೋ... ಮತ್ತು ದ್ವಿತೀಯಾರ್ಧದಲ್ಲಿ ಚಿತ್ರ ಇನ್ನಷ್ಟು ರೋಮಾಂಚನಕಾರಿಯಾಗುತ್ತದೆ. ವಿಕ್ರಮ್ ತನ್ನ ಅಭಿನಯದಿಂದ ಚಿತ್ರವನ್ನ ರೋಮಾಂಚನಕಾರಿಯನ್ನಾಗಿಸುತ್ತಾರೆ... ಇಲ್ಲಿ ನನ್ನ ಇನ್ನೊಂದು ಶಹಭಾಶ್ ಗಿರಿ ಮೇಕಪ್ ಮ್ಯಾನ್ ಗೆ ಸಲ್ಲುತ್ತೆ.. ಅದ್ಭುತ... ಈ ಪಾತ್ರಕ್ಕಾಗಿ ಶಂಕರ್ ಮತ್ತು ವಿಕ್ರಮ್ ಪಟ್ಟ ಶ್ರಮ ಅಭಿನಂದನಾರ್ಹ... ಮತ್ತೂ ಖುಷಿ ಕೊಡುವ ಅಂಶ...ಚಿತ್ರದಲ್ಲಿ ಜಾಹಿರಾತುಗಳು ಹೇಗೆ ಸಾಮಾನ್ಯರನ್ನ ಆಕರ್ಷಿಸುತ್ತದೆ... ಸ್ಟಾರ್ ಗಳು ಹಣ ಪಡೆದು ಅಭಿನಯಿಸುವಾಗ ಯಾವ ಸಾಮಾಜಿಕ ಕಳಕಳಿ ಹೊಂದಿರಬೇಕು ಅನ್ನೋದನ್ನ ಸಾರುತ್ತದೆ ಸಿನಿಮಾ. ನಟರಿಗೆ ಇರಬೇಕಾದ ನೈತಿಕತೆಯನ್ನ ಎತ್ತಿ ತೋರಿಸುತ್ತದೆ ಸಿನಿಮಾ . ಕೆಲವರಿಗೆ ಹಾಗಲ್ಲ ತಾವು ಮಾಡೋದೆಲ್ಲಾ ಸರಿ ಜನರು ಮಾಡುತ್ತಿರೋದು ಮಾತ್ರ ತಪ್ಪಾಗಿ ಕಾಣಿಸುತ್ತದೆ ಉದಾಹರಣೆಗೆ ಕೈಯಲ್ಲಿ ವಿಷಕಾರಿ ಕೋಕಾಕೋಲಾ ಹಿಡಿದು ಇದನ್ನೇ ಕುಡಿಯಿರಿ ಅಂತ ಹೇಳುತ್ತಾ... ಸ್ವಾಮೀಜಿಗಳು ಈ ದೇಶಾನ ಕೆಡಿಸುತ್ತಿದ್ದಾರೆ ಅನ್ನೋ ಸಂದೇಶ ಕೊಡೋರೆಲ್ಲಾ ನೋಡಲೇ ಬೇಕಾದ ಸಿನಿಮಾ ಮತ್ತು ಎಲ್ಲಿಯೂ ಲಾಜಿಕ್ ಇಲ್ಲದ ಸೀನುಗಳಿಗಿಲ್ಲ. ಈ ರೀತಿಯಾಗಿ ಒಟ್ಟಾರೆಯಾಗಿ ಸಿನಿಮಾ ಮುಗಿಸಿ ಹೊರಬರುವಾಗ ಅದೇನೋ ಖುಷಿ ನಿಮ್ಮನ್ನಾವರಿಸುತ್ತದೆ.
ಮನೋರಂಜನೆಗೆ ಇರಬೇಕಾದದ್ದು ಇದರಲ್ಲಿ ಬೇಕಾದಷ್ಟಿದೆ... ಯಾವುದೇ ಕಥೆಯಾಗಲಿ ಅದು ನಿರ್ದೇಶಕನ ಕ್ರಿಯಾಶೀಲತೆಗೊಳಪಟ್ಟಾಗ ಅದು ಯಶಸ್ಸನ್ನ ಗಳಿಸುತ್ತದೆ. ಅದಕ್ಕೆ ತಕ್ಕಂತೆಯೇ ತನ್ನ ಕ್ರಿಯಾಶಿಲತೆಯಿಂದ ನೆಗೆಟಿವ್ ಪಾಯಿಂಟುಗಳನೆಲ್ಲಾ ಸಣ್ಣದಾಗಿಸಿ ತಾಂತ್ರಿಕತೆಯಿಂದ ಶ್ರೀಮಂತಗೊಳಿಸಿ ನಿಮ್ಮ ಮನ ಮುದಗೊಳಿಸೋ ಸಿನಿಮಾವನ್ನ ಶಂಕರ್ ಕೊಟ್ಟಿದ್ದಾರೆ ಆ ವೈಭವ ನೋಡಲಿಕ್ಕಾಗಿಯೇ ನಾನು ಹೇಳೋದು "ಐ"ಯನ್ನ ನಿಮ್ಮ " ಐ (EYE)ಯಾರೆ" ನೋಡಿ ಅಂತ

No comments:

Post a Comment