Monday 2 November 2015

ಎಚ್ಚರಗೊಳ್ಳಲು ಇದಕ್ಕಿಂತಲೂ ಒಳ್ಳೆಯ ಕಾಲ ಸಿಗಬಹುದೇ...




ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ತನ್ನ ಅಧ್ಭುತ ವ್ಯಕ್ತಿತ್ವವನ್ನು ಜಗದ ಮುಂದೆ ಬಿಚ್ಚಿಟ್ಟ ಸ್ವಾಮೀಜಿ, ಭಾರತದ ಮತ್ತು ಭಾರತದ ಸನಾತನ ಧರ್ಮದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ ಬಿಟ್ಟಿದ್ದರು. ಮುಂದೆ ಅಮೆರಿಕಾದ ಹಲವು ಕಡೆ ತನ್ನ ವಾಗ್ಝರಿಯನ್ನು ಹರಿಸಿ ಮತ್ತೆ ತನ್ನ ತಾಯ್ನಾಡ ಸೇರುವ ಆಸೆಯಿಂದ ಕಡಲ ಮಾರ್ಗವಾಗಿ ವಾಪಾಸು ಭಾರತಕ್ಕೆ ಬರುತ್ತಿದ್ದ ಸಂಧರ್ಭ, ಹಡಗಿನಲ್ಲಿ ಒಂದಿಬ್ಬರು ವಿದೇಶಿಯರು ವಿವೇಕಾನಂದರನ್ನು ಕಂಡು ಭಾರತದ ಕುರಿತಾಗಿ ಅಪಹಾಸ್ಯ ಮಾಡತೊಡಗಿದರಂತೆ , ಸ್ವಲ್ಪ ತಾಳ್ಮೆಯನ್ನು ಕಾಯ್ದುಕೊಂಡದ್ದೇನೋ ಹೌದು ಆದರೆ ಅವರಿಬ್ಬರ ಮುಂದುವರಿದ ಅಪಹಾಸ್ಯವನ್ನು ಕೇಳಿದಾಗ ಕೋಪದಿಂದ ಸಿಡಿಮಿಡಿಗೊಂಡ ಸ್ವಾಮೀಜಿ ತನ್ನೆರಡು ಕೈಗಳಲ್ಲಿ ಇಬ್ಬರ ಕುತ್ತಿಗೆಯಲ್ಲಿ ಹಿಡಿದು ಎತ್ತಿ ಹಿಡಿದುಕೊಂಡು ಗರ್ಜಿಸಿದರಂತೆ " ಇನ್ನೊಂದು ಮಾತು ನನ್ನ ದೇಶದ ಬಗ್ಗೆ ಕೆಟ್ಟದಾಗಿ ಬಂದಲ್ಲಿ ಹಾಗೆಯೇ ನಿಮ್ಮನ್ನು ಈ ಕಡಲಿಗೆ ಎತ್ತಿ ಬಿಸಾಡಿ ಬಿಡುತ್ತೇನೆ." ಸ್ವಾಮೀಜಿಯ ಈ ರೌದ್ರಾವತಾರ ಕಂಡ ವಿದೇಶಿಯರು ಹೆದರಿ ನಡುಗಿ ತೆಪ್ಪಗೆ ಕುಳಿತುಕೊಂಡರಂತೆ....
ತನ್ನ ದೇಶದ ಕುರಿತಾಗಿ ಕೆಟ್ಟ ಮಾತಾಡಿದೊಡನೆ ಸಂತರಾಗಿದ್ದವರೂ ಅದೆಂಥಾ ಪೌರುಷವನ್ನು ಪ್ರದರ್ಶಿಸಿದರಲ್ವಾ...ಇಂಥಾ ರೋಷ ನಮ್ಮಲ್ಲಿದೆಯೇ...? ರೋಷದ ಲವಲೇಶವೂ ಸಿಗಲಿಕ್ಕಿಲ್ಲ ಬದಲಾಗಿ ಆ ವಿದೇಶಿಯರು ಮಾಡಿದಕ್ಕಿಂತಲೂ ಹೆಚ್ಚಿನ ಅಪಹಾಸ್ಯ ಮಾಡುವುದಕ್ಕೆ ನಾವೆಲ್ಲ ತಯಾರ್... ಎಂಥಾ ವಿಚಿತ್ರ ಅಲ್ವಾ...ಬಹುಶ ಭಾರತ ಇಂದು ಈ ಪರಿಸ್ಥಿತಿಯಲ್ಲಿ ಇರೋದಿಕ್ಕೆ ನಮ್ಮೊಳಗೆ ಆ ರೋಷ ಇಲ್ಲದಿರುವುದೇ ಒಂದು ಕಾರಣವಾಗಿರಬಹುದು. ಒಂದಷ್ಟು ಮಾನವನಿಂದಾದ ಹುಳುಕು ಇರಬಹುದು ಅದನ್ನು ನಮ್ಮಷ್ಟಕ್ಕೆ ನಾವೇ ಪರಿಹರಿಸಿಕೊಳ್ಳಬೇಕೆ ಹೊರತು ಜಗಜ್ಜಾಹೀರು ಮಾಡೋದು ಮೂರ್ಖತನ. ಪ್ರತಿಯೊಬ್ಬನೂ ತನ್ನೊಳಗಿನ ಹುಳುಕನ್ನು ಬಿಚ್ಚಿಡುತ್ತಾನೆಯೇ ಇಲ್ಲ ಹಾಗಿದ್ದರೆ ದೇಶದ ಕುರಿತಾಗಿ ಭಿನ್ನ ಧೋರಣೆ ಏಕೆ. ಇದರ ಕುರಿತು ಯೋಚಿಸಬೇಕಾದ ಅಗತ್ಯತೆ ಇದೆಯಲ್ವಾ...
ಏಳಿ ಎದ್ದೇಳಿ ಗುರಿ ಮುಟ್ಟುವ ವರೆಗೆ ನಿಲ್ಲದಿರಿ ಅಂದಿದ್ದರು ಸ್ವಾಮೀಜಿ.... ಆದರೆ ನಾವಿನ್ನೂ ಕುಂಭಕರ್ಣನ ನಿದ್ರೆಯಲ್ಲಿದ್ದೇವೆ. ನಮ್ಮೊಳಗೆ ಆ ರೋಷವನ್ನು ಮತ್ತು ದೇಶಪ್ರೇಮವನ್ನು ತುಂಬಿಕೊಳ್ಳೋದು ಯಾವಾಗ. ಉಕ್ಕಿನ ಮಾಂಸಖಂಡಗಳ ಯುವ ಜನತೆ ವಿದೇಶೀಯ ಸಂಸ್ಕೃತಿಯತ್ತ ಮುಖಮಾಡಿದೆ, ಬರಿಯ I Love My India ಅನ್ನೋದನ್ನೇ ದೇಶಪ್ರೇಮವನ್ನಾಗಿಸಿಕೊಂಡಿದ್ದಾರೆ. ಇಂಥಾ ಗಾಢನಿದ್ರೆಯಿಂದ ಎಬ್ಬಿಸಲು ಬಹುಶ ಮತ್ತೊಮ್ಮೆ ವಿವೇಕಾನಂದರೇ ಹುಟ್ಟಿ ಬರಬೇಕೇನೋ. ಅವರ ಆಗಮನವಾದರೆ ಅದು ಸಂತಸವೇ ಆದರೆ ನಮ್ಮ ಪಾಲಿಗೆ ಅದು ನಾಚಿಕೆಗೇಡು, ಬಿಡಿಸಿ ಹೇಳಿದರು ಅರ್ಥೈಸಿಕೊಳ್ಳಲಾಗದ ಮತಿಹೀನರಾಗಿ ಬಿಡುತ್ತೇವೆ. ಅದು ಆಗುವುದು ಬೇಡ ಎಂದಾದಲ್ಲಿ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡಬೇಕು. ನಮ್ಮೀ ಮೊದಲ ಹೆಜ್ಜೆಗೆ ಸ್ವಾಮಿ ವಿವೇಕಾನಂದರ ಜನ್ಮದಿನಕ್ಕಿಂತಲೂ ಒಳ್ಳೆಯ ದಿನದ ಅವಶ್ಯಕತೆ ಇದೆಯೇ.... ಒಮ್ಮೆ ನಿಮ್ಮೊಳಗಿನ ಭಾರತೀಯನನ್ನು ಕೇಳಿ ನೋಡಿ....
ಬನ್ನಿ ಭಾರತೀಯರೇ "ವಿವೇಕ"ರಾಗೋಣ...
ಆಲಸ್ಯದ ನಿದಿರೆಯಿಂದ ಎಚ್ಚೆತ್ತು ನಿಲ್ಲೋಣ
ಮಸುಕುಗೊಂಡಿಹ ಭಾರತಿಯ ಮುಖದಲ್ಲಿ ನಗುವ ತರಿಸೋಣ
ಆಂಗ್ಲರ ದಾಸ್ಯದ ಕೈಕೋಳ ಕಡಿದರೂ
ಆಂಗ್ಲತನದ ವ್ಯಾಮೋಹ ನಮ್ಮಲಿನ್ನೂ ಉಳಿದಿದೆ
ಭ್ರಷ್ಟ ನೇತಾರ ಕುವರರ ಅಧಿಕಾರ ದಾಹವ
ಕಂಡ ಭೂತಾಯಿಯ ಮನ ನೊಂದು ಹೋಗಿದೆ
ಇದ ತಡೆಯುವುದಕಾಗಿ "ವಿವೇಕ"ರಾಗೋಣ
ಆಲಸ್ಯದ ನಿದಿರೆಯಿಂದ ಎಚ್ಚೆತ್ತು ನಿಲ್ಲೋಣ
ನಮ್ಮತನದ ಹಿರಿಮೆಯ ಆ ವೀರಸಂತ ಜಗಕೆ ತೋರಿದರೂ
ನಮಗೇಕೆ ಕಾಣಿಸುತಿಲ್ಲ...? ನಮ್ಮೊಳಗಿನ ಸಂಸ್ಕೃತಿಯ ಸಂಪತ್ತು
ನಾವು ನಾವಾಗಿದ್ದರೆ ಮಾತ್ರ ಚೆಲುವು ನಮ್ಮಯ ಜೀವನ
ಪಾಶ್ಚಿಮಾತ್ಯರ ಹಾದಿ ತುಳಿದರೆ ಮುಂದೆ ಸಿಗುವುದು ಆಪತ್ತು
ಇದ ತಪ್ಪಿಸುವುದಕಾಗಿ "ವಿವೇಕ"ರಾಗೋಣ
ಆಲಸ್ಯದ ನಿದಿರೆಯಿಂದ ಎಚ್ಚೆತ್ತು ನಿಲ್ಲೋಣ

(ವೀರ ಸನ್ಯಾಸಿ ವಿವೇಕಾನಂದರಿಗೊಂದು ನುಡಿ ನಮನ)

No comments:

Post a Comment