Monday 2 November 2015

ಮಕರ ಸಂಕ್ರಾಂತಿ



ನನ್ನೆಲ್ಲಾ ಮಿತ್ರರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು...ಕಳೆದ ವರ್ಷ ಸಂಕ್ರಾಂತಿಗೆ ಈ ಲೇಖನ ಪೋಸ್ಟ್ ಮಾಡಿದ್ದೆ. ಒಂದು ವರ್ಷದಲ್ಲಿ ಅದೆಷ್ಟೋ ಹೊಸ ಗೆಳೆಯರು ಸಿಕ್ಕಿದ್ದಾರೆ, ಅವರಿಗೋಸ್ಕರ ಇದನ್ನು ಮತ್ತೊಮ್ಮೆ ಪೋಸ್ಟ್ ಮಾಡುತ್ತಿದ್ದೇನೆ. ನಮ್ಮ ಸಂಪ್ರಾದಾಯಗಳು ಮತ್ತು ಅದರ ಮಹತ್ವವನ್ನು ತಿಳಿದು ಉಳಿದವರಿಗೆ ತಿಳಿಸಬೇಕಾದದ್ದು ಅದನ್ನು ಮುಂದಿನ ಪೀಳಿಗೆಗೆ ಕೊಡಬೇಕಾದದ್ದು ನಮ್ಮ ಕರ್ತವ್ಯ. ಯಾರಾದರೂ ಗೊಡ್ಡು ಸಂಪ್ರದಾಯ ಅಂದಾಗ ಎದೆಯುಬ್ಬಿಸಿ ನಮ್ಮ ಸಂಪ್ರದಾಯಗಳ ಮಹತ್ವವನ್ನು ಹೇಳಿ ನಿಂದಕರ ಬಾಯಿ ಮುಚ್ಚಿಸೋಣ...
ಇಂದು ಮಕರ ಸಂಕ್ರಾಂತಿ, ಉತ್ತರಾಯಣ ಶುರು ಆಗುತ್ತೆ( ಅಂದ್ರೆ ಸೂರ್ಯ ಉತ್ತರದಿಕ್ಕಿಗೆ ಪ್ರಯಾಣ ಮಾಡುತಾನೆ ಅಂತ). ಎಲ್ಲರೂ ಎಳ್ಳು ಬೆಲ್ಲ, ಎಳ್ಳು ಬೆಲ್ಲ ಅಂತ ಹಂಚಿಕೊಳ್ಳುತ್ತೇವೆ. ಯಾಕೆ...? ಅಂದ್ರೆ... ಅದು ಸಂಪ್ರದಾಯ ಅಂತ ಹೇಳ್ತೀವಿ... ಅದರ ಹಿಂದಿರುವ ವೈಜ್ನಾನಿಕ ಹಿನ್ನಲೆ ಗೊತ್ತಿರೋರು ಸ್ವಲ್ಪ ಕಮ್ಮೀನೆ...ನಾನು ಅದೇ ತರ ಇದ್ದಾಗ ಇದಕ್ಕಿರುವ ಉತ್ತರಗಳ ಪುಸ್ತಕವೊಂದು ಸಿಕ್ಕಿತು (ಲೇಖಕರು: ಹೆಚ್.ಕೆ.ಎಸ್.ರಾವ್) ಅದರಲ್ಲಿ ಓದಿ ತಿಳ್ಕೊಂಡಿರೋದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ...
ಯಾಕೆ ಎಳ್ಳು ಬೆಲ್ಲಾನೇ ತಿನ್ನಬೇಕು...??
ಮೇಲೆ ಹೇಳಿದಂತೆ ಉತ್ತರಾಯಣ ಪ್ರಾರಂಭವಾಗುತ್ತೆ, ಅದರ ಜೊತೆಗೆ ಹವಾಮಾನ ಬದಲಾವಣೆಯು ಆಗುತ್ತೆ. ಈ ಹವಮಾನ ಬದಲಾವಣೆ ಮಾನವನ ಮೇಲೆ ಪ್ರಭಾವ ಬೀರುತ್ತೆ. ಈ ಧನುರ್ಮಾಸ ಕಳೆದು ಮಕರ ಮಾಸ ಪ್ರಾರಂಭವಾಗುವ ಹೊತ್ತಿಗೆ ಮನುಷ್ಯನ ದೇಹದಲ್ಲಿ ಕೊಬ್ಬಿನ ಅಂಶ ಎಷ್ಟು ಬೇಕೋ ಅಷ್ಟು ಇದ್ದಿರುವುದಿಲ್ಲ. ಸ್ವಲ್ಪ ಕಡಿಮೆಯಾಗಿರುತ್ತದೆ. ಉತ್ತರಾಯಣ ಕಾಲದಲ್ಲಿ ಶೆಖೆ ಪ್ರಾರಂಭವಾಗುವುದರಿಂದ ಈ ಕಾಲದಲ್ಲಿ ದೇಹಕ್ಕೆ ಅತ್ಯವಶ್ಯವಾದ ಕೊಬ್ಬಿನ ಅಂಶ ಸರಿತೂಗಿಸದಿದ್ದರೆ ಮುಂದೆ ಬಿಸಿಲಿನ ತಾಪಕ್ಕೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಇದನ್ನು ತಪ್ಪಿಸುವುದಕ್ಕಾಗಿ ಮುಂಜಾಗರೂಕತಾ ಕ್ರಮವಾಗಿ ಎಳ್ಳನ್ನು ಸೇವಿಸಬೇಕು.ವೈದ್ಯಶಾಸ್ತ್ರ ಮತ್ತು ಆಹಾರ ಶಾಸ್ತ್ರ ಪ್ರಕಾರ ಶರೀರದ ಚರ್ಮನೇತ್ರ ಮತ್ತು ಅಸ್ತಿ ಇವುಗಳ ಬೆಳವಣಿಗೆಗೆ ಮತ್ತು ಇವುಗಳು ಸರಿಯಾದ ಸ್ಥಿತಿಯಲ್ಲಿರುವುದಕ್ಕೆ ’ಎ’ ಮತ್ತು ’ಬಿ’ ವಿಟಮಿನ್ ಗಳು ಬೇಕು. ತೈಲ ಧಾನ್ಯವಾದ ಎಳ್ಳಿನಲ್ಲಿ ಇದು ಹೇರಳವಾಗಿದೆ. ಆದುದರಿಂದ ಇದರ ಸೇವನೆಯನ್ನು ಹಬ್ಬದ ಆಚರಣೆಯನ್ನಾಗಿಸಿದರು.
ಆಯುರ್ವೇದ ಪಂಡಿತರ ಪ್ರಕಾರ ಉತ್ತರಾಯಣದಲ್ಲಿ ಶರೀರದ ಉಷ್ಣವು ಹೆಚ್ಚು ಶೇಖರಿಸಲ್ಪಡುತ್ತದೆ. ದಕ್ಷಿಣಾಯನದಲ್ಲಿ ದೇಹದ ಉಷ್ಣತೆ ಹೆಚ್ಚಿಗೆ ವಿಸರ್ಜಿಸಲ್ಪಡುತ್ತದೆ.ಹಾಗಾಗಿ ಈಗ ದಕ್ಷಿಣಾಯನ ಮುಗಿಯೋ ಹೊತ್ತಿಗೆ ನಮ್ಮ ದೇಹದ ಹೆಚ್ಚಿನ ಉಷ್ಣತೆಯನ್ನು ನಾವು ಕಳಕೊಂಡಿರುತ್ತೇವೆ.ಈ ಕೊರತೆಯನ್ನು ನಿವಾರಿಸಲು ಉಷ್ಣ ಪದಾರ್ಥವಾಗಿರುವ ಎಳ್ಳಿನ ಸೇವನೆಗೆ ಒತ್ತು ಕೊಟ್ಟರು.
ಎಳ್ಳು ತಿನ್ನಲು ಹೇಳಿದ್ದ್ದು ನಿಜ ಆದ್ರೆ ಎಳ್ಳಿನ ಇನ್ನೊಂದು ಗುಣ ಪಿತ್ತ. ಹೆಚ್ಚು ತಿಂದಲ್ಲಿ ಪಿತ್ತ ಜಾಸ್ತಿಯಾಗುತ್ತೆ.ಆದ್ದರಿಂದ ಪಿತ್ತ ಹರವಾದ ಬೆಲ್ಲವನ್ನು ಜೊತೆಯಲ್ಲಿ ತೆಗೆದುಕೊಂಡರೆ ಶರೀರದಲ್ಲಿ ಕೊರತೆ ಉಂಟಾಗಿರುವ ಕೊಬ್ಬಿನ ಅಂಶವು ಸರಿತೂಗಿಸಲ್ಪಡುತ್ತದೆ.( ಗುಣದಲ್ಲಿ ಬೆಲ್ಲವೂ ಪಿತ್ತಗುಣವುಳ್ಳದ್ದಾದರೂ ಎಳ್ಳಿನ ಜೊತೆ ತೆಗೆದುಕೊಂಡಾಗ ಅದು ಪಿತ್ತಹರವಾಗುತ್ತೆ.diamond cuts diamond ಅನ್ನೋ ತರ ಪಿತ್ತವನ್ನು ಪಿತ್ತದಿಂದ ನಾಶಮಾಡುವುದೇ "ಎಳ್ಳು-ಬೆಲ್ಲ")
ಹಸಿ ಎಳ್ಳಿನಲ್ಲಿರುವ ದೋಷಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಹುರಿದ ಎಳ್ಳನ್ನು ಸೇವನೆ ಮಾಡಬೇಕು ಅಂದಿದ್ದಾರೆ. ಇದರಿಂದ ಸೇವನೆಗೂ ಹಿತವಾಗುತ್ತೆ. ಇದರ ಜೊತೆಗೆ ರುಚಿಗೋಸ್ಕರವೂ ಮತ್ತು ಕೊಬ್ಬಿನ ಅಂಶ ಇರುವ ಕಡಲೇಕಾಯಿ ಬೀಜ, ಕೊಬ್ಬರಿ ಇತ್ಯಾದಿಗಳನ್ನು ಬೆರೆಸಿ ತಿನ್ನುವಂತೆ ಹೇಳಿದ್ದಾರೆ.
ಹಾಗೆ ನಮ್ಮ ಪೂರ್ವಜರ ಅರೋಗ್ಯ ಕಾಳಜಿಯ ಬಗ್ಗೆ ಎಷ್ಟು ಹೇಳಿಕೊಂಡರೂ ಕಮ್ಮಿಯೇ.. ಈ ಬಾರಿ ಎಳ್ಳು - ಬೆಲ್ಲ ತಿನ್ನೋವಾಗ ಅದರ ಮಹತ್ವ ಅರಿತು ತಿನ್ನೋಣ, ಎಳ್ಳು-ಬೆಲ್ಲ ಹಂಚುವಾಗ ಅದರ ಹಿಂದಿನ ವೈಜ್ನಾನಿಕ ಮಹತ್ವವನ್ನು ಹೇಳಿ ಹಂಚೋಣ....
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು....

No comments:

Post a Comment