Monday 2 November 2015

ರಾಜ್ಯಕ್ಕೆ ರಾಹುಲ್ ಗಾಂಧಿಯ ಭೇಟಿ ತಂದಿಟ್ಟ ಪ್ರಶ್ನೆಗಳ ಸರಮಾಲೆ...



ಇಂದಿನ ವಿಜಯವಾಣಿ ಕೈಗೆತ್ತಿಕೊಂಡ ಕೂಡಲೇ ಕಾಣಿಸಿದ್ದು... " ರಾಹುಲ್ ಭೇಟಿ ಫಲಶ್ರುತಿ.... ಸುಸ್ತಿ ಬಡ್ಡಿ ಮನ್ನಾ..." ಅಂತೂ ರೈತರ ಪಾಲಿಗೆ ಒಂದಷ್ಟು ಖುಷಿಯ ವಿಚಾರ ಸಿಕ್ಕಿತಲ್ಲಾ... ಅಂತ ನಿರಾಳನಾದರೂ ಅಂತರ್ಮುಖಿಯಾಗಿ ಯೋಚಿಸಿದಾಗ ಪ್ರಶ್ನೆಗಳ ಸರಮಾಲೆಯೇ ನನ್ನ ಮುಂದೆ ಬಂದು ನಿಂತಿತು. ನನ್ನ ಮುಂದೆ ಬಂದ ಪ್ರಶ್ನೆ ಹಲವರಿಗೂ ಬಂದಿದ್ದಿರಬಹುದು ಅದಕ್ಕಾಗೇ ಈ ಕುರಿತಾಗಿ ಒಂದಷ್ಟು  ಯೋಚಿಸೋಣ.
ವಾಸ್ತವದಲ್ಲಿ ರಾಹುಲ್ ಗಾಂಧಿ ಹೇಳಿದರು ಅಂತ ಸರ್ಕಾರ ಸುಸ್ತಿ ಬಡ್ಡಿ ಮನ್ನಾ ಮಾಡುವ  ಕ್ರಮ ಕೈಗೊಂಡಿತೇ...? ಹೌದು ಅಂತಾದರೆ.... ಕೇವಲ ತಮ್ಮ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು ಅನ್ನೋದಕ್ಕಾಗೇ... ಮನ್ನಾ ಮಾಡಿದ್ದು , ಸರ್ಕಾರಕ್ಕೆ ಸುಸ್ತಿ ಬಡ್ಡಿ ಮನ್ನಾ ಮಾಡೋ ಮನಸಿದ್ದಿರಲಿಲ್ಲವೇ...? ಇಲ್ಲ ಸರ್ಕಾರಕ್ಕೂ ಮನಸ್ಸಿತ್ತು...ಅಂತಿಟ್ಟುಕೊಳ್ಳೋಣ ಹಾಗಾದರೆ ರೈತರ ಆತ್ಮಹತ್ಯೆಯಾಗಲು ಶುರುವಾಗಿ ಎಷ್ಟೋ ಸಮಯವಾಯಿತು, ಆವಾಗಲೇ ಯಾಕೆ ಈ ಕ್ರಮ ಕೈಗೊಳ್ಳಲಿಲ್ಲ...? ಇಲ್ಲ ಕೊಡುವ ಮನಸ್ಸಿದ್ದರೂ ರಾಹುಲ್ ಗಾಂಧಿ ಬರುವವರಿದ್ದರಲ್ಲ... ಆ ಹೊತ್ತಿನಲ್ಲಿ ಘೋಷಿಸೋಣ ಅಂತ ಯೋಚಿಸಿದೆವು ಅಂತ ಹೇಳಿದರು ಅಂತಿಟ್ಟುಕೊಳ್ಳಿ... ಹಾಗಾದರೆ ರೈತರ ತುರ್ತಿಗಿಂತಲೂ ತಮ್ಮ ನಾಯಕ ಬರುವುದು, ಅವರ ಮಾತಿನ ಮೂಲಕ ಜಾರಿಗೆಗೊಳಿಸುವುದು ಸರ್ಕಾರದ ನಿಲುವೇ...? ( ಇದು ಹೇಗಾಯಿತು ಅಂದರೆ ಒಬ್ಬಾತ ಮುಳುಗಿತ್ತಿದ್ದೇನೆ ಮೇಲೆತ್ತಿ ಅಂತ ಕೂಗುತ್ತಿದ್ದರೂ.. ನಿಲ್ಲಿ, ಫೋಟೋ ತೆಗೆಯುವವರು ಬರಲಿ ಇಲ್ಲಾಂದ್ರೆ ಬಚಾವ್ ಮಾಡಿದ್ದಕ್ಕೆ ಆಧಾರ ಇರೋದಿಲ್ಲ ಅಂದ ಹಾಗೆ ಅಲ್ವೇ )
ಇಲ್ಲ ಹಾಗೇನಿಲ್ಲ , ಆವಾಗ ರಾಜ್ಯ ಆರ್ಥಿಕ ಸಂಕಷ್ಟದಲ್ಲಿತ್ತು . ಇಷ್ಟೊಂದು ಹಣ ಸರ್ಕಾರದ ಬಳಿ ಇದ್ದಿರಲಿಲ್ಲ, ಹಾಗಾಗಿ ತಡವಾಯಿತು ಅಂತ ಹೇಳಿದರು ಅಂತಿಟ್ಟುಕೊಳ್ಳಿ ಆಗಲೂ ಪ್ರಶ್ನೆ ಬರುತ್ತದೆ...ಏನಪ್ಪಾ ಅಂದ್ರೆ ಈಗ ರಾಹುಲ್ ಗಾಂಧಿ ಬಂದ ಕೂಡಲೇ ದಿಢೀರನೇ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗೆ ಸುಧಾರಿತು...? ರಾಜ್ಯದ ಬೊಕ್ಕಸಕ್ಕೇ ಖಜಾನೆ ಭಾಗ್ಯದಂತಹಾ ಯಾವ ಸ್ಕೀಮು ತರಲಾಯಿತು...? ಇಲ್ಲ, ಆಗಲೂ ರಾಜ್ಯ ಆರ್ಥಿಕವಾಗಿ ಸಕ್ಷಮವಾಗಿಯೇ ಇತ್ತು ಅಂತ ಸರಕಾರ ಹೇಳಿತು...... ಅಂತಾದರೆ ಪರಿಹಾರ ಘೋಷಣೆಗೆ ಯಾಕೆ ಇಷ್ಟೊಂದು  ವಿಳಂಬವಾಗಿದ್ದು...? ಕ್ಲಪ್ತ ಸಮಯಕ್ಕೆ ರೈತರಿಗೆ ನೆರವು ಯಾಕೆ ಒದಗಿಸಲಿಲ್ಲ, ಅದೂ ರಾಜ್ಯ ಸರ್ಕಾರ ಸಕ್ಷವಾಗಿದ್ದು ಇಂಥಾ ಕ್ರಮ ಕೈಗೊಳ್ಳಲಿಲ್ಲವೇಕೆ...? ಸರಿ, ಇದನ್ನ ಇಲ್ಲೇ ಬಿಟ್ಟು ಬಿಡೋಣ... ರಾಹುಲ್ ಗಾಂಧಿಯವರಿಗೆ ಕರ್ನಾಟಕದ ರೈತರ ಮೇಲೆ ಕಾಳಜಿ ಇದೆ ಅದಕ್ಕಾಗೇ ಅವರು ಒತ್ತಡ ಹಾಕಿ ಈ ಘೋಷಣೆ ಮಾಡಿಸಿದರು ಅಂತಿಟ್ಟುಕೊಳ್ಳೋಣ... ಹಾಗಿದ್ದರೆ ದೆಹಲಿಯ ರಾಹುಲ್ ಗಾಂಧಿಗೆ ನಮ್ಮ ರೈತರ ಮೇಲೆ ಕಾಳಜಿ ಇರುವಷ್ಟು ನಮ್ಮ ಇಲ್ಲಿನ ನಾಯಕರಿಗಿಲ್ಲವೇ...? ಇಲ್ಲ ನಮ್ಮ ನಾಯಕರಿಗೆ ಅವರಿಗಿಂತ ಜಾಸ್ತಿಯೇ ಇದೆ ಅಂತಾದರೆ ಮತ್ತದೇ ಪ್ರಶ್ನೆ ಸುಸ್ತಿ ಬಡ್ಡಿ ಮನ್ನಾ ಯಾಕೆ ಇಷ್ಟೊಂದು ವಿಳಂಬವಾಗಿದ್ದು..?
ಇಲ್ಲ ರೀ ನಮ್ಮ ಯುವನಾಯಕನಿಗಿರುವ ರೈತ ಕಾಳಜಿಯನ್ನ ತೋರಿಸಬೇಕಿತ್ತು ಅದಕ್ಕಾಗಿ ಅವರು ಬರೋ ತನಕ ಕಾದಿದ್ದು ಅಂತ ನಿಷ್ಠುರವಾಗಿ ಹೇಳಿದರು ಅಂತಿಟ್ಟುಕೊಳ್ಳೋಣ... ಆಗಲೂ ಪ್ರಶ್ನೆ ಏಳುತ್ತದೆ... ಈ ಘೋಷಣೆಯನ್ನೆಲ್ಲಾ ಸರಕಾರವೇ ಯೋಚಿಸಿ ತಮ್ಮ ಯುವನಾಯಕನ ಬಾಯಲ್ಲಿ ಹೇಳಿಸಿದ್ದೇ...? ಹಾಗಾದರೆ ವಾಸ್ತವದಲ್ಲಿ ಈ ಯುವನಾಯಕನಿಗೆ ರೈತರ ಬಗ್ಗೆ ಕಾಳಜಿ ಇದೆಯೇ...? ಯಾಕೆಂದರೆ ಇವೆಲ್ಲವನ್ನೂ ಯೋಚಿಸಿದ್ದು ನಮ್ಮ ಸರಕಾರ ತಾನೇ...? ಇಲ್ಲ... ಅವರಿಗೆ ರೈತರ ಬಗ್ಗೆ ಕಾಳಜಿ ಇರೋದು ನಿಜ ಅವರೇ ಈ ಯೋಜನೆ ಮಾಡುವಂತೆ ಹೇಳಿದ್ದು ಅಂತಿಟ್ಟುಕೊಳ್ಳೋಣ.... ಹಾಗಿದ್ದರೆ ನಮ್ಮ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲವೇ ಅಥವಾ ತಮ್ಮ ರಾಜ್ಯದ ರೈತರ ಬಗೆಗಿನ ಕಾಳಜಿಗಿಂತ ತಮ್ಮ ಯುವನಾಯಕನ ಬಗೆಗೇ ಕಾಳಜಿ ಹೆಚ್ಚಾಯಿತೇ...?
ಹೀಗೆ ನಮ್ಮೊಳಗೆ ಏಳುವ ಪ್ರಶ್ನೆಗಳು ಹಲವಾರು... ಯಾವುದಕ್ಕೆ ಉತ್ತರಿಸಿದರೂ ಇನ್ನೊಂದು ಪ್ರಶ್ನೆಯಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರಿಗೆ ಮುಜುಗರ ಆಗಲೇಬೇಕು... ನಾನೇನೂ ರಾಜಕೀಯದ ಪ್ರಖರ ವಿಶ್ಲೇಷಕ ಅಲ್ಲವೇ ಅಲ್ಲ... ದಿನನಿತ್ಯದ ರಾಜಕೀಯವನ್ನ ಗಮನಿಸುವವ ಅಷ್ಟೇ... ಯಾವ ಪಕ್ಷದ ಬೆಂಬಲಿಗನೂ ಆಗದೆಯೇ ಒಬ್ಬ ತಟಸ್ಥ ವ್ಯಕ್ತಿಯಾಗಿ ಈ ಘಟನೆಯನ್ನ ನೋಡಿದರೆ ನಮಗೆಲ್ಲೋ ಇದು ರಾಹುಲ್ ಗಾಂಧಿಯವರ ವರ್ಚಸ್ಸನ್ನ ಹೆಚ್ಚಿಸುವ ನಾಟಕ ಅಂತ ಗೊತ್ತಾಗಿಯೇ ಆಗುತ್ತದೆ. ನಿಜವಾಗಿಯೂ ಆತನಿಗೆ ರೈತರ ಕಾಳಜಿ ಇದ್ದಿದ್ದರೆ ಅವರು ಯಾವಗಲೋ ಬರಬೇಕಿತ್ತು... ಬರಬೇಕಾದ ಹೊತ್ತಿನಲ್ಲಿ ಬರಲೇ ಇಲ್ಲ.... ಈಗ ಅವರು ಬರುವ ಮುನ್ನವೇ ಮಾಧ್ಯಮಗಳಲ್ಲಿ ಸಾಲ ಮನ್ನಾ ಘೋಷಣೆ ಸಾಧ್ಯತೆ ಅನ್ನುವ ಸುದ್ದಿ ಪ್ರಸಾರವಾಗುವಾಗಲೇ ಗೊತ್ತಾಗುತ್ತದೆ, ಇದು ಆತನ ರಾಜಕೀಯ ವರ್ಚಸ್ಸಿನ ಉದ್ದೀಪನಕ್ಕೆ ಕಾಂಗ್ರೆಸ್ ಪಕ್ಷ ಮಾಡುತ್ತಿರೋ ಪ್ರಯತ್ನ ಎಂದು. ನಿಜವಾಗಿಯೂ ಅವರಿಗೆ ಕಾಳಜಿ ಇದ್ದಿದ್ದರೆ ರೈತರು ಆತ್ಮಹತ್ಯೆ ಮಾಡತೊಡಗಿದ್ದಾಗಲೇ ಈ ಕ್ರಮಗಳನ್ನ ಕೈಗೊಳ್ಳಲು ಸೂಚಿಸಬಹುದಾಗಿತ್ತು... ಸರಿ ಅದೇನೋ ಕಾರ್ಯಕ್ರಮಗಳ ಒತ್ತಡ ಬರಲಾಗಲಿಲ್ಲ ಅಂತಾನೇ ಇಟ್ಟುಕೊಳ್ಳೋಣ... ಅವರು ಬಂದೇ ಪರಿಹಾರ ಘೋಷಣೆ ಆಗಬೇಕು ಅಂತೇನಿಲ್ಲವಲ್ಲ.... ಬಾಯಾರಿದವನಿಗೆ ಸಕಾಲದಲ್ಲಿ ನೀರು ಕೊಡಿಸುವುದಷ್ಟೇ ಮುಖ್ಯ , ಯಾವುದೇ ಆದರೂ ಸಕಾಲದಲ್ಲಿ ಕೆಲಸವಾಗಬೇಕೇ ಹೊರತು.. ಇಂತವರೇ ಬಂದು ಕೊಡಬೇಕು ಅಂತೇನಿಲ್ಲವಲ್ಲ. ಫೋನಿನ ಮುಖಾಂತರವೋ ಅಥವಾ ಮೈಲ್ ಮುಖಾಂತವರವೋ ಈ ಕೆಲಸ ಮಾಡಲು ಹೇಳಬಹುದಿತ್ತು. ತನ್ನ ಹೆಸರು ಉಲ್ಲೇಖವಾಗದಂತೆಯೇ ಹೋಳುವುದು ನಿಜವಾದ ಕಾಳಜಿಯಾಗಿರುತ್ತಿತ್ತು. ಆದರೂ ಅದನ್ನ ಮಾಡಲೇ ಇಲ್ಲ.
ಇಲ್ಲಿ ಇನ್ನೊಂದು ವಿಪರ್ಯಾಸ ಅಂದರೆ ತಮ್ಮ ಯುವನಾಯಕನ ವರ್ಚಸ್ಸನ್ನ ಏರಿಸುವ ಭರದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ವರ್ಚಸ್ಸನ್ನ ಕಳೆದುಕೊಳ್ಳುತ್ತಿದ್ದಾರೆ. ಇಲ್ಲವಾದರೆ  ಉಪಾಧ್ಯಕ್ಷರು  ಹೇಳಿಯೇ ಮಾಡಬೇಕು ಅಂತೇನಿದೆ... ರಾಜ್ಯಕ್ಕೆ ಆರ್ಥಿಕ ಸದೃಡತೆ ಇದೆ ಅಂತಾದರೆ ಪರಿಹಾರ ಘೋಷಣೆ ಮಾಡುವುದೇ ಒಬ್ಬ ಜನನಾಯಕ ಕೆಲಸ... ಇಲ್ಲ ಪರಿಹಾರ ಘೋಷಣೆ ಸಾಧ್ಯವೇ ಇಲ್ಲ ಅಂತಿದ್ದದ್ದು ರಾಜ್ಯದ ಆರ್ಥಿಕತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಅಂತಿದ್ದದ್ದು ಇವರು ಬಂದ ಕೂಡಲೇ ಪರಿಸ್ಥಿತಿ ಅನುಕೂಲಕರವಾದದ್ದು ಹೇಗೆ...? ... ಆವಾಗ ಆಗದ್ದು ಈಗ ಆಗಲು ಹೇಗೆ ಸಾಧ್ಯ... ರಾಹುಲ್ ಗಾಂಧಿಯವರೇನೂ ತಮ್ಮ ಕೈಯಿಂದ ಹಣ ಕೊಡಲಿಲ್ಲ ತಾನೆ , ಈಗಲೂ ಖರ್ಚಾಗುತ್ತಿರೋದು ರಾಜ್ಯದ ಬೊಕ್ಕಸದ್ದೇ ಅಲ್ವೇ... ಇದರರ್ಥ ಆಗಲೂ ಸಾಧ್ಯವಿತ್ತು ಆದರೂ ಮಾಡಲಿಲ್ಲ. ತಮ್ಮ ನಾಯಕ ಹೇಳಿದ ಮೇಲೆ ಮಾಡುತ್ತಿದ್ದೇವೆ ಅನ್ನುವುದನ್ನ ರಾಜ್ಯದ ನಾಯಕರು ತೋರಿಸಿಕೊಂಡರು. ಆ ಮೂಲಕ ಬಯಲಾದ ಕಟು ಸತ್ಯ ಏನೆಂದರೆ  ನಮ್ಮ ರಾಜ್ಯದ ಜನನಾಯಕರಿಗೆ ತಮಗೆ ವೋಟು ಹಾಕಿದ ಜನರಿಗಿಂತಲೂ ಅವರಿಗೆ ಟಿಕೇಟು ನೀಡಿದ ನಾಯಕರ ಪಾಲಿಗೇ ಅವರ ನಿಷ್ಠೆ ಅನ್ನುವುದು.
ಇಷ್ಟಾದ ಮೇಲೆ ನಮ್ಮೆಲ್ಲರಲ್ಲಿ ಹುಟ್ಟಲೇ ಬೇಕಾದ ಒಂದೇ ಒಂದು ಪ್ರಶ್ನೆ ಇಂತಹಾ ಕುಟುಂಬ ನಿಷ್ಠೆ ಹೊಂದಿದ ಪಕ್ಷವೂ ಮತ್ತು ಆ ಕುಟುಂಬದ ಕುಡಿಯನ್ನ ಜನನಾಯಕ ಅಂತ ಬಿಂಬಿಸುವುದಕ್ಕೆ ಏನು ಬೇಕಿದ್ದರೂ ಮಾಡಬಲ್ಲ, ತಮ್ಮದೇ ರಾಜ್ಯದ ಜನರ ಹಿತಾಸಕ್ತಿಯನ್ನ ಬದಿಗೊತ್ತಬಲ್ಲ ತಮ್ಮದೇ ವರ್ಚಸ್ಸನ್ನ ಕಳೆದುಕೊಳ್ಳಬಲ್ಲ ನಾಯಕರಿಂದ ನಮ್ಮ ರಾಜ್ಯದ ಉದ್ಧಾರ ಸಾಧ್ಯವೇ...? ಇಂತವರನ್ನೂ ನಾವು ಆಯ್ಕೆ ಮಾಡಬಹುದೇ...? ಈ ಪ್ರಶ್ನೆಗಳಷ್ಟನ್ನೂ ನಿಮಗೆ ನೀವೇ ಕೇಳಿಕೊಂಡು ಕೊನೆಯ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಕಂಡುಕೊಳ್ಳಿ.... ಇಲ್ಲವೇ ಮುಂದಿನ ಬಾರಿ ಇವರು ವೋಟು ಕೇಳಿಕೊಂಡು ಬರುತ್ತಾರಲ್ಲ ಆವಾಗ ಅವರಿಗೆ ಈ ಎಲ್ಲ ಪ್ರಶ್ನೆಯನ್ನ ಕೇಳಿ ಉತ್ತರ ಪಡೆದುಕೊಳ್ಳಿ. ಅದನ್ನ ಇನ್ನೂ ಮಾಡದೇ ಹೋದರೆ ರಾಜ್ಯದ ಅಭಿವೃದ್ಧಿ ಗಗನ ಕುಸುಮವೇ...

No comments:

Post a Comment