Monday 2 November 2015

ಡಾ. ಸುಬ್ರಹ್ಮಣ್ಯ ಸ್ವಾಮಿಗಳ ಭಾಷಣದಲ್ಲಿನ ಅಚ್ಚರಿಗೊಳಿಸೋ ಅಂಶಗಳು....



ಮೊನ್ನೆಯ ದಿನ ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ಡಾ. ಸುಬ್ರಹ್ಮಣ್ಯ ಸ್ವಾಮಿಯವರ ಭಾಷಣ ಕೇಳೋಕೆ ನನ್ನ ಡ್ಯೂಟಿ ಬದಲಿಸಿ ಹೋಗಿದ್ದೆ. ಬಹುಶ ನನ್ನ ಸೌಭಾಗ್ಯವೇ ಸರಿ, ಇಂಥಾ ಯೋಗ ನನ್ನ ಪಾಲಿಗೆ ಒದಗಿದ್ದು. ಚಕ್ರವರ್ತಿ ಸೂಲಿಬೆಲೆಯವರ ಅದ್ಭುತ ನಿರೂಪಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ .... ಡಾ. ಸ್ವಾಮಿ ಮಾತಿಗೆ ನಿಲ್ಲುವಷ್ಟರಲ್ಲಿ ಕುತೂಹಲ ಮೇರೆ ಮೀರಿ ಹೋಗಿತ್ತು. ಬಹುಶ ಅವರ ಭಾಷಣ ಅಂದ್ರೆ ನಾವು ಗಮನ ಹರಿಸದೇ ಇರುವ ದಿಕ್ಕಿನತ್ತ ನಮ್ಮನ್ನ ಕೊಂಡೊಯ್ಯುವುದು ಅಂತಾನೇ ಹೇಳಬಹುದು. ನಿಜಕ್ಕೂ ಈ ರೀತಿಯಲ್ಲೂ ಆಗುತ್ತಲ್ವಾ ಎನ್ನುವ ನಿಬ್ಬೆರಗು ಕೇಳುಗರ ಮುಖದಲ್ಲಿ ಮೂಡಿರುತ್ತೆ.
ನಿಜಕ್ಕೂ ರಾಜಕೀಯ ವಲಯದಲ್ಲಿ ಮಸೂದೆಗಳೆಲ್ಲಾ ಯಾಕಾಗಿ ಬರುತ್ತೆ...? ಅನ್ನೋದರ ಪರಿಕಲ್ಪನೆಯೇ ನಮ್ಮಂಥಾ ಜನಸಾಮಾನ್ಯರಿಗಿಲ್ಲ. ಇಲ್ಲಿ ಯಾವ ರಾಜಕಾರಣಿಯ ಅಥವಾ ಯಾವ ಬಿಸಿನೆಸ್ ಮ್ಯಾನ್ ನ ಅಥವಾ ಅವರ ಸಂಬಂಧಿಕರ ಹಿತಾಸಕ್ತಿ ಅಡಗಿರುತ್ತದೋ ದೇವನೇ ಬಲ್ಲ. ಜನಸಾಮಾನ್ಯರಿಗಾಗಿ ತೆರಿಗೆ ವಿನಾಯಿತಿ ಮಾಡೋ ಬಗ್ಗೆ ಯೋಚಿಸದೆ ಇರೋ ರಾಜಕಾರಣಿಗಳು ಕೆಲವೊಮ್ಮೆ ತೆರಿಗೆ ವಿನಾಯಿತಿಯ ಬಿಲ್ ಪಾಸ್ ಮಾಡೋದು ತಮ್ಮ ಆಪ್ತರ ಅನುಕೂಲಕ್ಕಾಗಿಯೇ.... ಮಾರಿಷಸ್ ಮೂಲದ ಇನ್ವೆಸ್ಟರ್ ಗಳಿಗೆ ತೆರಿಗೆ ವಿನಾಯಿತಿ ನೀಡಿದ್ದರ ಹಿಂದಿನ ಮರ್ಮ ದೊಡ್ದ ದೊಡ್ದ ಶೇರು ಮಾರ್ಕೆಟ್ಟಿನ ಮಿಕಗಳಿಗೆ ತೆರಿಗೆ ಉಳಿಸುವುದೇ ಆಗಿದೆ ಎನ್ನುವುದು ನಮ್ಮಂತವರ ಊಹೆಗೂ ನಿಲುಕದ್ದು.... ಕೇವಲ ಮಾರಿಷಸ್ ನಲ್ಲೊಂದು ಬ್ರಾಂಚ್ ಓಪನ್ ಮಾಡಿ ಅಲ್ಲಿಂದ ಇನ್ವೆಸ್ಟ್ ಮಾಡಿದರೆ ಭಾರತೀಯ ಸರಕಾರಕ್ಕೆ ತೆರಿಗೆಯನ್ನೇ ಕೊಡಬೇಕಾಗಿಲ್ಲ .... ಇನ್ನೊಂದು ಮಸೂದೆ ಪಾರ್ಟಿಸಬೇಟರೀ ನೋಟೀಸ್ ಇದೂ ಕೂಡ ಇಲ್ಲಿನ ಕಪ್ಪುಹಣವನ್ನ ಬಿಳಿಯಹಣವನ್ನಾಗಿಸಿ ಮತ್ತೆ ನಮ್ಮ ಮಾರುಕಟ್ಟೆಯಲ್ಲಿ ತೊಡಗಿಸಿ ಅದರಿಂದ ಲಾಭ ಮಾಡಿಕೊಳ್ಳಲು ಸಹಾಕಾರಿಯಾಗಿರುವಂಥಾದ್ದು.
ಯಾವ ರೀತಿ ಕಪ್ಪು ಹಣದಿಂದಾಗಿ ಇಲ್ಲಿನ ಭೂಮಿಯ ಬೆಲೆ ಗಗನಕ್ಕೇರಿದೆ ಮತ್ತು ವೈಭೋಗಯುತ ವಸ್ತುಗಳ ಬೆಲೆ ಏರಿಕೆ ಆಗೋದನ್ನ ಬಿಚ್ಚಿಡುತ್ತಿದ್ದಂತೆ ನಮ್ಮಲೆಲ್ಲಾ ಅಚ್ಚರಿಯ ಭಾವ. ಯಾವ ರೀತಿ ರಾಬರ್ಟ್ ವಾದ್ರಾ ಮತ್ತು ಚಿದಂಬರಂ ಮಗ ರೂಪಾಯಿ ಬೆಲೆಯ ಕುಸಿತಕ್ಕೆ ಕಾರಣರಾಗಿದ್ದಾರೆ ಅನ್ನೋದನ್ನ ಕೂಡ ಬಯಲು ಗೊಳಿಸಿದರು. ೫೫ರಲ್ಲಿ ಡಾಲರನ್ನ ಪಡೆದು ೫೭ಕ್ಕೆ ಕೊಡುತ್ತೇವೆ ಎಂದು ಹೇಳಿ ತಮ್ಮ ಅಧಿಕಾರದಿಂದ ರಿಸರ್ವ್ ಬ್ಯಾಂಕು ಯಾವುದೇ ಕ್ರಮ ಕೈಗೊಳ್ಳದಿರುವಂತೆ ಮಾಡಿ ೫೮ ಮೌಲ್ಯ ಬಂದಾಗ ಅದರಲ್ಲಿ ೫೭ನ್ನು ಅವರಿಗೆ ಕೊಟ್ಟು ಕುಳಿತಲ್ಲೇ ಒಂದು ರೂಪಾಯಿ ಲಾಭ ಮಾಡುವಂಥಾ ರೀತಿ ನಿಜಕ್ಕೂ ಇಂಥಾ ದೇಶ ದ್ರೋಹಿಗಳ ತಲೆಗಷ್ಟೇ ಬರೋದು. ಒಂದು ರೂಪಾಯಿ ತಾನೇ ಅನ್ನೋ ಹಾಗಿಲ್ಲ ಇವರ ಇನ್ವೆಸ್ಟ್ ಮೆಂಟ್ ಗಳೆಲ್ಲಾ ಮಿಲಿಯನ್ ಗಳಲ್ಲಿರುತ್ತದಲ್ವಾ...
ಇಂಥಾ ಕಹಿ ಸತ್ಯ ಸಂಗತಿಗಳು ನಮ್ಮಂತಹವರ ತಲೆಗೇ ಹೊಳೆಯೋದಿಲ್ಲ ಅಂತಾದರಲ್ಲಿ ಜನಸಾಮಾನ್ಯರಿಗೆ ಹೇಗೆ ಗೊತ್ತಾದೀತು...? ಕಾರಣ ಒಬ್ಬ ರೈತ ಶೇರು ಮಾರುಕಟ್ಟೆಯ ಬಗ್ಗೆ ತಲೆಕೆಡಿಸಿಕೊಳ್ಳೋದೇ ಇಲ್ಲ. ಶೇರು ಮಾರುಕಟ್ಟೆಯ ವಾಸ್ತವಗಳೇನು ಅನ್ನೋದು ಬಹಳ ಜನಕ್ಕೆ ಅರ್ಥ ಆಗದಿರುವಂಥಾದ್ದು. ನನಗೂ ಇದು ಅರ್ಥವಾಗದ್ದು ಮತ್ತು ಇಷ್ಟವಾಗದ್ದು.... ಯಾಕೆ ಇಷ್ಟವಿಲ್ಲ ಅಂದರೆ ಏನೂ ದುಡಿಯದೆ ಆಟವಾಡಿ ಗಳಿಸುವ ಹಣ ಅಂತಂದರೆ ಅದು ನನ್ನದಲ್ಲದ ಭಾವ ನನ್ನನ್ನು ಕಾಡುತ್ತದೆ. ಅದು ಹಾಗಿರಲಿ ಬಿಡಿ ಆದರೆ ಈ ಶೇರು ಮಾರುಕಟ್ಟೆಯ ನೀತಿ ನಿಯಮಗಳ ಸದುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಪಂಗನಾಮ ಹಾಕುವವರಿಗೇನೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತದೆ ಅಂತಾದರೆ ಈ ದೇಶದ ಉದ್ದಾರ ಹೇಗೆ ಸಾಧ್ಯ....?
2G ಹಗರಣದ ತಿರುಳನ್ನ ನಮ್ಮೆದುರು ವಿಸ್ತಾರವಾಗಿ ಹೇಳಿದರು. ಯಾವ ರೀತಿ ಅಷ್ಟೊಂದು ಹಣ ನಮ್ಮ ಬೊಕ್ಕಸಕ್ಕೆ ಬರಲಿಲ್ಲ ಅಂತ. ಯಾವ ರೀತಿ ಇಲ್ಲಿ ತಮ್ಮ ಆಪ್ತರಿಗೆ ಹಂಚಿಕೆಗಳಾದವು ಮತ್ತು ಅವರು ಕುಳಿತಲ್ಲೆ ಹಲವು ಪಟ್ಟು ಲಾಭವನ್ನ ಹೇಗೆ ಮಾಡಿಕೊಂಡರು ಅನ್ನೋದನ್ನ ಎಳೆ ಎಳೆಯಾಗಿ ತಿಳಿಸಿದರು.. ಹೀಗೆ ಹತ್ತು ಹಲವು ವಿಷಯಗಳ ಸೂಕ್ಷ್ಮತೆಯನ್ನ ತಿಳಿಸುತ್ತಾ ಹೋದಂತೆಲ್ಲಾ ನನಗನಿಸತೊಡಗಿದ್ದು ರಾಜಕೀಯ ಅನ್ನೋದು ಬ್ಯುಸಿನೆಸ್ ಮ್ಯಾನ್ ಗಳ ಯೋಗಕ್ಷೇಮಕ್ಕಾಗಿ ಇರೋದೇನೋ ಅಂತ.
ಬಹುಶ ನಾನು ಅವರು ಹೇಳಿದ ಅಂಶಗಳನ್ನೆಲ್ಲಾ ಬರೆದಿಟ್ಟುಕೊಳ್ಳಬೇಕಾಗಿತ್ತು... ಆಗ ಇನ್ನಷ್ಟು ಬರೆಯಬಹುದಿತ್ತು... ಆದರೆ ಒಂದಂತೂ ನಿಜ ಕೇಂದ್ರ ಸರ್ಕಾರ ತನ್ನ ಸ್ವಾರ್ಥಪರ ವಿಷಗಳಿಗಷ್ಟೇ ಆಸಕ್ತವಾಗಿದೆ ಹೊರತು ದೇಶದ ಭವಿಷ್ಯದ ಕುರಿತಾದ ಚಿಂತೆ ಇಲ್ಲ. ತಮ್ಮ ಸ್ವಲಾಭಕ್ಕಾಗಿ ದೇಶದ ಪರಿಸ್ಥಿತಿಯನ್ನ ಎಷ್ಟು ಹಾಳು ಮಾಡಿದ್ದಾರೆಂದರೆ ಇದನ್ನ ಸರಿ ಪಡಿಸೋಕೆ ಒಬ್ಬ ಅದ್ಭುತ ಕುಶಲಕರ್ಮಿಯ ಅಗತ್ಯವಿದೆ.... ಇಂಥಾ ಯೋಗ್ಯತೆ ಇರೋದು ನಮ್ಮ ನರೇಂದ್ರ ಮೋದಿಗಲ್ಲದೇ ಮತ್ಯಾರಿಗೆ...?
ಕೊನೆಯದಾಗಿ ಹೇಳಬೇಕನ್ನಿಸೋ ಮಾತು... ಒಬ್ಬರ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ಸ್ವಾಮಿ ಹೇಳ್ತಾರೆ... ಈ ಬಾರಿ ನಿಮ್ಮ ಪ್ರದೇಶದಲ್ಲಿ ಒಂದು ವೇಳೆ ಕತ್ತೆಯನ್ನು ನಿಲ್ಲಿಸಿದರೂ ನೀವು ಮೋದಿಗಾಗಿ ವೋಟ್ ಮಾಡಿ... ಆ ಕತ್ತೆಯನ್ನ ಸರಿಮಾಡೋ ತಾಕತ್ತು ಮೋದಿಗಿದೆ.... ಮತ್ತು ಅದನ್ನ ಗುಜರಾತ್ ನಲ್ಲಿ ಮಾಡಿ ತೋರಿಸಿದ್ದಾರೆ.... ಇಂಥಾ ಅದ್ಭುತ ನಾಯಕರ ಸಮ್ಮಿಲನದ ಸರ್ಕಾರ ಬಂದು ಈ ದೇಶ ಮತ್ತೆ ಬೆಳಗಲಿ ಅನ್ನೋದೆ ನನ್ನ ಮನದಾಸೆ.

No comments:

Post a Comment