Monday 2 November 2015

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತೇ....?



ಕರ್ನಾಟಕದ ಚುನಾವಣಾ ಸಮರ ಅಂತ್ಯಗೊಂಡಿದೆ. ಕರ್ನಾಟಕದ ಜನತೆ ತಮ್ಮನ್ನಾಳುವ ಹಕ್ಕನ್ನು " ಕೈ " ಗೆ ಕೊಟ್ಟಿದ್ದಾರೆ. ಈ ಫಲಿತಾಂಶ ಬಲಪಂಥೀಯರಿಗೆ ಆಘಾತವೇ... ಹಾಗಂತ ಇದು ಅನೀರೀಕ್ಷಿತವಾಗಿರಲಿಲ್ಲ. ಆದರೆ ಬಿಜೆಪಿಗೆ ಈ ರೀತಿಯ ಸೋಲು ಮತ್ತು ಕೈ ಪಾಳಯಕ್ಕೆ ಈ ಮಟ್ಟದ ಗೆಲುವನ್ನು ನಾನಂತೂ ನಿರೀಕ್ಷಿಸಿರಲಿಲ್ಲ. ಹಾಗೆಯೇ ಕಾರಣ ಹುಡುಕತೊಡಗಿದರೆ , ನನ್ನೆದುರು ಪ್ರತ್ಯಕ್ಷವಾಗಿದ್ದು ಮತ್ತದೇ ಹಳೆಯ ಭಾರತೀಯರ ವೀಕ್ ನೆಸ್... ಒಗ್ಗಟ್ಟಿನ ಕೊರತೆ, ಹಿಂದೆ ವಿದೇಶಿಯರು ಭಾರತವನ್ನ ತಮ್ಮದನ್ನಾಗಿಸಿದಾಗಲೂ , ಜಯ ಅವರಾಗೇ ಪಡೆಯಲಿಲ್ಲ ಬದಲಾಗಿ ನಾವೇ ಬಿಟ್ಟು ಕೊಟ್ಟೆವು. ಆಂತರಿಕ ಕಲಹ ಅನ್ನೋದು ನಮ್ಮನ್ನ ಗುಲಾಮರನ್ನಾಗಿ ಮಾಡಿಸಿತು. ಅದಾಗಿ ಗುಲಾಮತನದ ಬೇಗೆಯಲಿ ಬೆಂದು ಮತ್ತೆ ಸ್ವಾತಂತ್ರ್ಯವನ್ನೇನೋ ಪಡೆದೆವು ಆದರೆ ಆ ಆಂತರಿಕ ಕಲಹವೆನುವ ರೋಗಕ್ಕೆ ಮದ್ದು ಮಾಡಲೇ ಇಲ್ಲವೇನೋ ಅಂತನಿಸುತ್ತಿದೆ. ಒಂದು ವೇಳೆ ಮದ್ದು ಮಾಡಿದಿದ್ದರೆ ಈ ರೀತಿಯ ಫಲಿತಾಂಶ ಖಂಡಿತವಾಗಿಯೂ ಬರುತ್ತಿರಲಿಲ್ಲ.

ಬಹುಶ ಬಿಜೆಪಿಯ ಸೋಲಿನ ಮೂರು ಕಾರಣಗಳು
೧. ಪಕ್ಷದ ಹಿತಕ್ಕಿಂತಲೂ ತಮ್ಮ ಪ್ರತಿಷ್ಠೆ ದೊಡ್ಡದೆಂದುಕೊಂಡ ಒಂದಷ್ಟು ನಾಯಕರು
೨. ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಮಾಡಿದ ಪ್ರಹಸನಗಳು...
೩. ಪಕ್ಷ ನಿಷ್ಠರ ಕಡೆಗಣನೆ
ನಿಜಕ್ಕೂ ನಾಯಕರುಗಳ ಪ್ರತಿಷ್ಠೆಯ ಉಳಿವಿಗಾಗಿನ ಹೋರಾಟವೇ ಬಿಜೆಪಿಯ ಪಾಲಿಗೆ ಮುಳುವಾಯಿತು. ಬಿಜೆಪಿಯ ಮೊದಲ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು ಒಳ್ಳೆಯ ನಾಯಕರು ಒಪ್ಪಬೇಕಾದ ಮಾತು. ಆದರೆ ಅವರಲ್ಲಿನ "ನಾನು" ಅನ್ನುವ ಅಹಂ ಎಲ್ಲೋ ಸ್ವತಃ ಅವರಿಗೂ ಮತ್ತು ಬಿಜೆಪಿಗೂ ಕಂಟಕವಾಯಿತು.ಆದರೆ ಈ ಫಲಿತಾಂಶ ತಮ್ಮಿಂದಲೇ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದ್ದು ಎನ್ನುವ ಅವರ ಭ್ರಮೆಯನ್ನು ನುಚ್ಚುನೂರಾಗಿಸಿದೆ . ಅವರಿಂದಲೇ ಬಿಜೆಪಿ ಬಂದಿದ್ದು ಅಂತಾದರೆ ಈ ಬಾರಿ ತಮ್ಮ ಸ್ವಂತ ಪಕ್ಷ ಕೆಜೆಪಿ 80 ರಿಂದ 90 ರಷ್ಟಾದರೂ ಪಡೆಯಬೇಕಿತ್ತು. ಆ ರೀತಿ ಆಗಿದ್ದಿದ್ದರೆ ನಾವೂ ನಂಬಬಹುದಿತ್ತು ನಮ್ಮ ಜನರಿಗೆ ಪಕ್ಷ ಮುಖ್ಯವಲ್ಲ ಯಡಿಯೂರಪ್ಪನವರೇ ಮುಖ್ಯ ಅಂತ ಅವರು ಯಾವ ಪಕ್ಷದಲ್ಲಿದ್ದರೂ ಆ ಪಕ್ಷ ಅಷ್ಟೊಂದು ಸೀಟುಗಳನ್ನ ಗೆದ್ದುಕೊಳ್ಳುತ್ತದೆ ಅಂತ. ಆದರೆ ಆ ರೀತಿ ಆಗಿಲ್ಲ... ಅವರ ಕೆಜೆಪಿಗೆ ಸಿಕ್ಕಿದ್ದು 6 ಸೀಟುಗಳು, ಇದರ ಅರ್ಥ ಬಿಜೆಪಿಗೆ ಆ ಪಕ್ಷದ್ದಾದ ತತ್ವ ಸಿದ್ದಾಂತಗಳನ್ನ ನೋಡಿ ಓಟು ಹಾಕುವ ಜನರೇ ಅಧಿಕ ಅಂತ. ಹಾಗಂತ ಬಿಜೆಪಿಯು ಇವರಂತಾ ನಾಯಕರನ್ನ ಕಳಕೊಂಡ ಮೇಲೆ ಸೋಲನ್ನ ಕಂಡಿದೆ. ಅದರರ್ಥ ಏನು... ಯಾವರೀತಿ ಯಡಿಯೂರಪ್ಪನವರಿಗೆ ಪಕ್ಷದ ನೆರಳು ಬೇಕೋ ಅದೇ ರೀತಿ ಪಕ್ಷಕ್ಕೂ ಯಡಿಯೂರಪ್ಪನಂತವರ ಸಾರಥ್ಯ ಬೇಕು. ಇಲ್ಲಿ ಪಕ್ಷ ತಲೆಬಾಗುವ ಹಾಕಿಲ್ಲ ಕಾರಣ ಅದು ವ್ಯಕ್ತಿಗಿಂತ ದೊಡ್ದದು ಹಾಗಾದಾಗ ವ್ಯಕ್ತಿಗಳೇ ಪಕ್ಷಕ್ಕೆ ತಲೆಬಾಗೋದು ನ್ಯಾಯಯುತವಾಗುತ್ತದೆ.
ಬಿಜೆಪಿಯೊಳಗಿನ ಆಂತರಿಕ ಕಚ್ಚಾಟ ಹೇಗಿದೆಯೋ ಇದರ ಪರಿಪೂರ್ಣ ಮಾಹಿತಿ ನನಗಿಲ್ಲ ಆದರೂ ಮೇಲ್ನೋಟಕ್ಕೆ ಅನಂತಕುಮಾರ್ ಅವರು ತಮ್ಮ ಅಧಿಪತ್ಯ ಸ್ಥಾಪನೆಗಾಗಿ ಮುಸುಕಿನ ಹೋರಾಟ ಮಾಡುತ್ತಿರುವುದು, ಈಶ್ವರಪ್ಪ ಮತ್ತು ಸದಾನಂದ ಗೌಡರಂಥವರು ತಮ್ಮ ಪ್ರತಿಷ್ಠೆಗಾಗಿ ಇನ್ನೊಬ್ಬರ ಮೇಲೆ ಕೆಂಡ ಕಾರುವುದು ಕಂಡು ಬರುತ್ತದೆ. ಎಲ್ಲ ನಾಯಕರಲ್ಲೂ , ಈ ಪಕ್ಷದ ಮೇಲೆ ಅಭಿಮಾನ ಉಳ್ಳ ನನ್ನ ಕಳಕಳಿಯ ವಿನಂತಿ ಒಂದು ಸಾರಿ ಹಾಗೇಯೇ ಯೋಚಿಸಿ nODi... ನಿಮ್ಮ ಮೊಂಡು ಹಠದಿಂದಾಗಿ ಪಕ್ಷಕ್ಕೆ ಹಾನಿಯಾಗುತ್ತಿದೆ ತಾನೇ... ಈ ಪಕ್ಷದ ಹಿತಕ್ಕಾಗಿ ನಾನು ಸೋಲುತ್ತೇನೆ ಅನ್ನುವ ಪ್ರಜ್ನೆ ನಿಮ್ಮಲ್ಲೇಕೆ ಮೂಡುವುದಿಲ್ಲ...? ಇದು ಪಕ್ಷಕ್ಕೂ ಹಿತಕರ ಮತ್ತು ರಾಜ್ಯಕ್ಕೂ... ನಿಮ್ಮೀ ಜಗಳಗಳಿಂದಾಗಿ ಕಾರ್ಯಕರ್ತರಿಗೆ ಜನರನ್ನ ಎದುರಿಸಲು ಮುಜುಗರವಾಗುತ್ತದೆ ಅನ್ನೋ ಸಾಮಾನ್ಯ ಜ್ನಾನ ನಿಮಗೇಕಿಲ್ಲ....? ಜನಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡವರು ನೀವು , ಪಕ್ಷದ ಹೆಸರಿನಲ್ಲಿ ಸಾಧನೆ ಮಾಡಿ. ಸ್ವಂತ ಹೆಸರಿಗೆ ಅಥವಾ ಸ್ವಂತದ ಪ್ರತಿಷ್ಠೆಗೆ ಯಾಕೀ ಕಚ್ಚಾಟ...? ಇದರಿಂದಾಗಿ ಲಾಭ ಯಾರಿಗಾಯಿತು. ಹೇಳಿ...? ಯಾವ "ಕೈ" ಯಿಂದ ತಾಯಿ ಭಾರತಿಯನ್ನ ರಕ್ಷಿಸಬೇಕೆನ್ನುವ ಸಂಕಲ್ಪದಿಂದ ಪಕ್ಷದ ಉದಯವಾಯಿತೋ ಅದೇ ಕೈಗಳಿಗೆ ಅಧಿಕಾರ ಕೊಟ್ಟು ಬಿಟ್ಟೆವು. ಕನಿಷ್ಠ ದೇಶದ ಹಿತವನ್ನಾದರೂ ಅಲೋಚಿಸಬೇಕಿತ್ತಲ್ವಾ....?
ಇನ್ನು ಅಧಿಕಾರಕ್ಕಾಗಿ ಮಾಡಿದ ಪ್ರಹಸನಗಳು... ನಿಜಕ್ಕೂ ನಾನು ಕೇಳಿದಂತೆಲ್ಲ ಜನರಿಗೆ ಹೆಚ್ಚು ಬೇಸರ ತರಿಸಿದ್ದು ಇದೇ .... ಏನ್ ರೆಸಾರ್ಟ್ ರಾಜಕೀಯ ಇದು ... ಥೂ... ಅನ್ನುತ್ತಾ ಬಿಜೆಪಿಯನ್ನು ಸೋಲಿಸಲು ಸಂಕಲ್ಪ ತೊಟ್ಟರು ಜನ. ಈ ಸಮಯ ದಲ್ಲಿ ವಾಜಪೇಯಿಯವರ ದಿಟ್ಟ ನಡೆಯ ನೆನಪಾಗುತ್ತದೆ. ಕೇವಲ ಒಂದು ಸೀಟಿನ ಅಂತರದಲ್ಲಿ ಸೋತರೂ ಕೂಡ ಸಿದ್ಧಾಂತಗಳ ಬಲಿಗೆ ಮನ ಮಾಡಲಿಲ್ಲ... ಅದೇ ಅವರ ಮುಂದಿನ ಗೆಲುವಿಗೆ ಕಾರಣವಾಗಿದ್ದು. ಎಲ್ಲೋ ಈ ರೀತಿಯ ನಾಟಕಗಳನ್ನ ಜನ ಅಧಿಕಾರದ ಆಸೆ ಅಂದುಕೊಂಡರು. ಸಾಮಾನ್ಯ ಜನರು ತಿಳಿದುಕೊಳ್ಳೋದು ಏನು...? ಹಣ ಮಾಡೋದಿಕ್ಕಾಗೇ ಅಧಿಕಾರ ಬಯಸುತ್ತಾರೆ ಅಂತ ತಾನೇ...ಹಾಗಾಗಿ ಇನ್ನೈದು ವರ್ಷ ತಡವಾದರೂ ಪರವಾಗಿಲ್ಲ ನ್ಯಾಯಯುತವಾಗೇ ಪಡೆದುಕೊಳ್ಳೋಣ... ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತಗಳನ್ನು ಗಾಳಿ ತೂರುವವರನ್ನ ಪಕ್ಷದೊಳಕ್ಕೆ ಬಿಡುವುದು ಬೇಡ... ಶಿಸ್ತಿನ ಪಾಲನೆಯನ್ನ ತಪ್ಪಿಸೋದು ಬೇಡ.
ಇನ್ನು ಕೊನೆಯದಾಗಿ ಪಕ್ಷನಿಷ್ಠರ ಅವಗಣನೆ... ಅಧಿಕಾರದುಳಿವಿಗಾಗಿ ಯಾರು ಯಾರನ್ನೋ ಎತ್ತರಕ್ಕೇರಿಸಿ ಪಕ್ಷದ ಮೂಲ ಸದಸ್ಯರು ಅಥವಾ ಪಕ್ಷ ನಿಷ್ಠರ ಅವಗಣನೆ ಮಾಡಿದ್ದು ಕ್ಷಮಿಸಲಾರದ ತಪ್ಪು. ಅದೆಷ್ಟೋ ಜನ ಈ ಪಕ್ಷಕ್ಕೆ ಹಗಲಿರುಳು ದುಡಿದಿದ್ದಾರೆ ಅಂತವರನ್ನ ಹಿಂದಿರಿಸಿ ನಿನ್ನೆ ಮೊನ್ನೆ ಬಂದವರನ್ನ ಮುಂದಿರಿಸೋದು ಯಾವ ನ್ಯಾಯ. ಭ್ರಷ್ಟರಿಗೆ ಮಣೆ ಹಾಕಿ ನಿಷ್ಠರನ್ನು ಬದಿಗೊತ್ತುವುದು ಎಷ್ಟು ಸರಿ...? ಉದಾಹರಣೆಗಾಗಿ ಹಾಲಾಡಿ ಶ್ರೀನಿವಾಸ ಶೆಟ್ಟರು, ಸುಳ್ಯದ ಅಂಗಾರರು ಈ ರೀತಿ ಅದೆಷ್ಟೋ ವರ್ಷಗಳಿಂದ ಪಕ್ಷವನ್ನ ಗೆಲ್ಲಿಸುತ್ತಿದ್ದಾರೆ ಅಂತವರಿಗೆ ಸೂಕ್ತ ಸ್ಥಾನ ಮಾನ ಕೊಡುವುದು ಅಗತ್ಯ. ಯಾಕೆಂದರೆ ಅವರಿಗಾದ ಅವಮಾನವನ್ನ ಕಾರ್ಯಕರ್ತರು ತಮ್ಮ ಅವಮಾನವೆಂದೇ ಪರಿಗಣಿಸಬಹುದು .... ಕಾರ್ಯಕರ್ತರ ಮುನಿಸು ಪಕ್ಷಕ್ಕೆ ಹೇಗೆ ತಾನೆ ಹಿತಕರವಾಗಬಲ್ಲದು...?
ಇವೆಲ್ಲವನ್ನೂ ಸಮಗ್ರವಾಗಿ ಆಲೋಚಿಸಿ ಸಿದ್ದಾಂತಗಳನ್ನೇ ತಮ್ಮ ಮೂಲ ಧ್ಯೇಯವಾಗಿಸದರೆ ಖಂಡಿತ ಮತ್ತೆ ಅಧಿಕಾರ ಪಡೆಯಬಹುದು , ಆದರೆ ಆ ಸಿದ್ಧಾಂತ ಅನ್ನುವುದು ಪ್ರತಿಯೊಬ್ಬನಲ್ಲೂ ಕಾಣಿಸಬೇಕು. ಪ್ರತಿಯೊಬ್ಬನಲ್ಲೂ ಸಿದ್ದಾಂತವು ಮೈಗೂಡಿದಾಗ ಪಕ್ಷದ ವರ್ಚಸ್ಸು ಹೆಚ್ಚುತ್ತದೆ. ಇದೇ ಜನರನ್ನು ಪಕ್ಷದತ್ತ ವಾಲುವಂತೆ ಮಾಡುತ್ತದೆ ಅನ್ನೋದು ನನ್ನ ಅಭಿಪ್ರಾಯ. ತಾನು ದುಡಿಯುತ್ತಿರುವುದು ತಾಯಿ ಭಾರತಿಯ ಒಳಿತಿಗಾಗಿ ಅನ್ನುವ ಸಣ್ಣ ಪರಿಜ್ನಾನ ಸಾಕು, " ನಾನು " ಅನ್ನುವುದರ ಬದಲಾಗಿ " ನಾವು " ಅನ್ನುವ ಭಾವನೆ ಯಾವಾಗ ಮೂಡುತ್ತೋ ಆವಾಗಲೇ ಜಯ ಸಿಗಲು ಸಾಧ್ಯ. ಒಬ್ಬ ಸಾಮಾನ್ಯ ಪ್ರಜೆ ಮತ್ತು ತಾಯಿ ಭಾರತಿಯ ಸೇವೆಗಾಗಿರುವ ಪಕ್ಷ ಇದು ಅನ್ನುವ ಭಾವನೆಯಿಂದ ನನ್ನೊಳಗಿನ ಭಾವನೆಯನ್ನು ನಿಮ್ಮ ಮುಂದಿರಿಸಿದ್ದೇನೆ ಇದು ಸರಿಯಾಗಿರಲೂ ಬಹುದು ಅಥವಾ ತಪ್ಪು ಆಗಿರಬಹುದು . ಸಮಜಾಯಿಷಿಕೆ ಕೊಟ್ಟರೆ ನನ್ನ ನಾ ತಿದ್ದಿಕೊಳ್ಳಲು ಸಿದ್ದ. ಅದಕ್ಕಾಗೇ ಹೇಳಿದ್ದು ಗಂಡ ಹೆಂಡಿರ (ಪಕ್ಷದ ನಾಯಕರುಗಳು) ಜಗಳದಲ್ಲಿ ಕೂಸು( ಪ್ರಜೆಗಳು /ರಾಜ್ಯ/ ಕಾರ್ಯಕರ್ತರು) ಬಡವಾಯಿತು ಅಂತ. ಇದನ್ನು ಕೆಲವರು ಒಪ್ಪಿಕೊಳ್ಳದೆಯೇ ಇರಬಹುದು, ಆದರೆ ಸದ್ಯಕ್ಕೆ ರಾಜ್ಯದ ಪರಿಸ್ಥಿತಿ ನೋಡಿದರೆ ಗಂಡ ಹೆಂಡಿರ ಜಗಳದ ನಡುವೆ " ಗೋವು " ಬಡವಾಯಿತು. ಅನ್ನೋದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ.

No comments:

Post a Comment