Monday 2 November 2015

ಭಾಂಧವ್ಯಗಳ ಬೆಸೆಯುತಿದ್ದ ಬೇಸಿಗೆ ರಜೆ.....



ಬೇಸಿಗೆಯ ರಜೆ ಅಂತಂದರೇನೆ ಸಾಕು ಮನದ ತುಂಬೆಲ್ಲಾ ಖುಶಿಯ ವಾತಾವರಣ. ಎಪ್ರಿಲ್ 10 ರ ಫಲಿತಾಂಶದ ದಿನದಿಂದ ಶುರುವಾಗುತ್ತಿದ್ದ ಈ ಸಡಗರ ಸರಿ ಸುಮಾರು ಐವತ್ತು ದಿನಗಳವರೆಗೆ ವಿಸ್ತರಿಸುತಿತ್ತು. ಸಾಮಾನ್ಯವಾಗಿ ನಾವೆಲ್ಲ " ದೊಡ್ದ ರಜೆ " ಅಂತಾನೇ ಕರೆಯುತಿದ್ದುದು. ಇನ್ನೊಂದು ಮದ್ಯಾವಧಿ ರಜೆ, ಈಗ ಬಹುಶ ಅದು ಕ್ರಿಸ್ ಮಸ್ ರಜೆ ಆಗಿದೆ. ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅದು ಕ್ರಿಸ್ ಮಸ್ ರಜೆ ಆಗುತ್ತಿರಲಿಲ್ಲ ಕಾರಣ ಈ ರಜೆ ಅಕ್ಟೋಬರ್ ತಿಂಗಳಲ್ಲಿ ಬರುತಿತ್ತು. ಹೆಚ್ಚಾಗಿ ನವರಾತ್ರಿ ಬರುತ್ತಿದುದು ಇದೇ ಸಂಧರ್ಭದಲ್ಲಿ. ಈ ಮಧ್ಯಾವಧಿ ರಜೆಯನ್ನ ಸಣ್ಣ ರಜೆ ಅಂತ ಕರೆಯದಿದ್ರೂ ಬೇಸಿಗೆಯ ರಜೆಯನ್ನ " ದೊಡ್ಡ ರಜೆ " ಅಂತಾನೇ ಕರೆಯುತ್ತಿದ್ದೆವು.
ದೊಡ್ಡ ರಜೆ ಬಂತೆಂದರೆ ಸಾಕು ಚಿಣ್ಣರಿಂದ ಹಿಡಿದು ಹಿರಿಯವರೆಲ್ಲರಿಗೂ ಸಡಗರ. ಶಾಲಾ ಮಕ್ಕಳಿಗಂತೂ " ಅಜ್ಜಿ ಮನೆ" ಗೆ ಹೋಗೋ ಕಾತರ. ಅಜ್ಜಿ ಮನೆ ಅಂತಂದ ಕೂಡಲೇ ನನಗೆ ನಾ ಕಲಿತ ಪಾಠವೊಂದರ ಅಸ್ಪಷ್ಟ ನೆನಪು ಹಾದು ಹೋಗುತ್ತದೆ, ಆದರೆ ಅಜ್ಜಿ ಮನೆಗೆ ಹೊರಟ ಮಕ್ಕಳು ಎತ್ತಿನ ಗಾಡಿಯಲ್ಲಿ ಹಳ್ಳಿಯ ಸೇತುವೆಯೊಂದನ್ನು ದಾಟಿ ಹೋಗುತ್ತಿದ್ದ ಚಿತ್ರ ಮಾತ್ರ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹೆಚ್ಚಾಗಿ ದೊಡ್ದ ರಜೆಯಲ್ಲಿ ಮಕ್ಕಳೆಲ್ಲರೂ ತಮ್ಮ ತಮ್ಮ ಅಜ್ಜಿ ಮನೆಗೆ ಹೋಗೋದು ಅಲಿಖಿತ ನಿಯಮ. ಪರಿವಾರ ಪೂರ್ತಿ ಹೋಗದಿದ್ದರೂ ಅಪ್ಪ ಅಮ್ಮ ಸೇರಿ ಮಕ್ಕಳನ್ನ ಅಜ್ಜಿ ಮನೆಯಲ್ಲಿ ಬಿಟ್ಟಾದರೂ ಬರುತ್ತಿದ್ದರು. ಅಜ್ಜಿ ಮನೆಗೆ ಹೋಗೋದು ವಿಳಂಬವಾದರೆ ಅದೇನು ರಂಪಾಟ ಅಂತೀರಾ... ಅದೆಷ್ಟೋ ಅಮ್ಮಂದಿರು " ಒಮ್ಮೆ ಕರ್ಕೊಂಡು ಹೋಗಿ..." ಅಂತ ಸುಸ್ತಾಗಿ ನುಡಿಯುತ್ತಿದ್ದುದನ್ನ ನೀವೂ ಕೇಳಿರಬಹುದು. ಅಜ್ಜಿ ಮತ್ತು ಮೊಮ್ಮಕ್ಕಳ ಭಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದ್ದುದು ಈ ದೊಡ್ಡ ರಜೆಯಲ್ಲಿ. ಈ ಮಕ್ಕಳಿಗೆ ತಿಂಡಿ ತಿನಿಸೇ ಪ್ರಿತಿಯ ಸಂಕೇತ. ತನ್ನ ಕರೆದು ತಿಂಡಿ ಕೊಟ್ಟರೆ ಸಾಕು ನನ್ನ ಅಜ್ಜಿ ನನ್ನನ್ನು ಎಷ್ಟೊಂದು ಪ್ರೀತಿಸುತ್ತಾರೆ ಗೊತ್ತಾ ಅಂದು ಬಿಡುತ್ತಾರೆ. ಆದರೆ ನಿಜವಾಗಿ ಅಜ್ಜಿಯ ಪ್ರೀತಿಯನ್ನ ತಿನಿಸಿನ ಮೂಲಕ ಅಳೆಯೋಕೆ ಸಾಧ್ಯವೇ..? ಆದರೇನು ಮಾಡೋದು ಮಕ್ಕಳಿಗೆ ಅರ್ಥವಾಗೋದೇ ಅಷ್ಟು . ಒಂದಷ್ಟು ತಿಂಡಿ ಕೊಡೋದು, ತಪ್ಪಿದ್ದರೂ ಬೈಯದೇ ಇರೋದು, ಅಪ್ಪ ಅಮ್ಮನ ಹೊಡೆತವನ್ನ ತಪ್ಪಿಸೋದು ಇದೇ ಪ್ರೀತಿಯ ದ್ಯೋತಕ . ಈ ಅಜ್ಜಿ ಮೊಮ್ಮಕ್ಕಳ ಭಾಂಧವ್ಯದ ಹೂ ಪೂರ್ತಿಯಾಗಿ ಅರಳುವುದು ಈ ದೊಡ್ದ ರಜೆಯಲ್ಲೇ ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಬೇಸರ ಏನಂದರೆ ನನಗೆ ಈ ಭಾಂಧವ್ಯದ ರುಚಿ ಸಿಕ್ಕಿರಲೇ ಇಲ್ಲ. ಕಾರಣ ನಾನು ಹುಟ್ಟುವಷ್ಟರಲ್ಲಿ ಎರಡು ಕಡೆಯ ಅಜ್ಜ ಅಜ್ಜಿಯರು ಸ್ವರ್ಗ ಸೇರಿದ್ದರು.
ಇನ್ನು ಪರವೂರಿನಲ್ಲಿ ನೆಲೆಸುತ್ತಿದ್ದ ಬಂಧುಗಳು ಕೂಡ ಊರಿಗೆ ಬರುತ್ತಿದ್ದುದು ದೊಡ್ದ ರಜೆಯಲ್ಲೇ. ರಜೆ ಪಡೆಯಲು ಸಾಧ್ಯವಾಗೋ ದುಡಿಯುವ ಗಂಡಸರು ಊರಿಗೆ ಬರುತ್ತಿದ್ದರು , ಸಾಧ್ಯವಾಗಿಲ್ಲ ಅಂತಾದರೆ ನಗರದಲ್ಲಿ ಕೆಲವು ದಿನಗಳ ಮಟ್ಟಿಗೆ ಅವರು ಒಂಟಿ. ಕಾರಣ ತಾಯಿ ಮಕ್ಕಳಂತೂ ಊರಿಗೆ ಬರೋದು ಗ್ಯಾರಂಟಿ ಅಲ್ವಾ. ಅವರಲ್ಲೂ ಸಂಭ್ರಮ... ಊರಿನವರಲ್ಲೂ ಸಂಭ್ರಮ. ಅದೇಷ್ಟೋ ಸಮಯದ ಬಳಿಕ ಒಬ್ಬರನ್ನೊಬ್ಬರು ಪರಸ್ಪರ ನೋಡಿಕೊಳ್ಳುವ ತವಕ. ನಮ್ಮ ಮನೆಗೆ ನಮ್ಮ ಚಿಕ್ಕಮ್ಮ ಮತ್ತು ಅಕ್ಕ , ಅಣ್ಣ ಬರುತ್ತಿದ್ದರು. ಆ ನಸು ಬೆಳಕಿನ ಹೊತ್ತಿಗೆ ರಿಕ್ಷದ ಸದ್ದಾಯಿತೆಂದರೆ ಸಾಕು ಬೇಗನೆ ಬಾಗಿಲು ತೆರೆದು ಅವರ ದೊಡ್ದ ದೊಡ್ಡ ಸೂಟ್ ಕೇಸನ್ನ ಕಷ್ಟಪಟ್ಟು ಒಳಗೆ ತಂದಿಡೋ ಖುಷಿ ಮತ್ಯಾವುದರಲ್ಲೂ ಸಿಗುತ್ತಿರಲಿಲ್ಲ. ಅವರು ತರೋ ಅಲ್ಲಿನ ಸಿಹಿ ತಿಂಡಿಗಳು ಚಪ್ಪರಿಸೋ ತವಕ. ನನಗೀಗಲೂ ನೆನಪಾಗುತ್ತದೆ ಆ ಮಧುರ ಕ್ಷಣಗಳು ಅವರು ಬರುತಿದ್ದಾಗ ಇನ್ನೂ ಸೂರ್ಯೋದಯವಾಗುತ್ತಿರಲಿಲ್ಲ. ಹಾಗೆಯೇ ಹಾಸಿದ್ದ ಚಾಪೆಯಲ್ಲಿ ಬಂದು ಮತ್ತೆ ಬೀಳೋದು... ನಿದಿರೆ ಅಂತಲ್ಲ ಉದಾಸೀನತೆ.... ಅವರು ಬಂದ ದಿನ ಮನೆಯಲ್ಲಿ ಯಾವಗಲೂ ಸಿಗುವ ಸಮಯಕ್ಕೆ ತಿಂಡಿ ಸಿಗೋ ಸಾಧ್ಯತೆ ತುಂಬಾನೇ ಕಮ್ಮಿ.
ಈ ರೀತಿ ಬಂಧುಗಳು ಒಟ್ಟಾದರೆ ಸಾಕು ರಜೆಯ ಖುಷಿ ಗಗನವನ್ನ ಮುಟ್ಟುತ್ತಿತ್ತು. ನಮ್ಮದೇ ವಿಶಿಷ್ಟ ಆಟಗಳನ್ನ ಆಡುತ್ತಿದ್ದೆವು... ಸಂಜೆಯ ಹೊತ್ತಲ್ಲಿ ಚೀಟಿ ಯಲ್ಲಿ ಸಿನಿಮಾದ ನಾಯಕರ ಹೆಸರುಗಳನ್ನ ಬರೆದು ನಾಲ್ಕು ಸಿಗುವವರೆಗೆ ಪಾಸ್ ಮಾಡೋದು... ಯಾರಿದ್ದು ಮೊದಲು ಆಗುತ್ತೋ ಅವರು ವಿಜೇತರು... ಚೀಟಿಯಲ್ಲಿನ ಕಳ್ಳ ಪೋಲೀಸ್ ಆಟ. ಜುಬುಲಿ, ಮರಕೋತಿ, ಲೂಡೋ.. ಹೀಗೆ ಸಮಯವನ್ನ ನಾನಾ ಬಗೆಯಲ್ಲಿ ಕೊಲ್ಲುತ್ತಿದ್ದೆವು. ಇನ್ನು ತಿನ್ನೋ ವಿಷಯದಲ್ಲಿ ಹೇಳೋದೇ ಬೇಡ ಮಾವಿನ ಹಣ್ಣಿನ , ಹಲಸಿನ ಹಣ್ಣಿನ ಕಾಲ.... ಒಮ್ಮೆ ತೋಟ ತಿರುಗಾಡಿದರೆ ಹೊಟ್ಟೆಗೇನಾದ್ರೂ ಬೀಳೊದಿದ್ದೇ ಇದೆ. ಅದೂ ಅಲ್ಲದೆ ಎಲ್ಲ ಮಕ್ಕಳು ಒಟ್ಟಾಗಿ ನಮ್ಮ ಮನೆಯೆದುರಿನ ಗುಡ್ಡೆಗೆ ಹೋಗುತ್ತಿದ್ದೆವು. ಕರಂಡೆ ಹಣ್ಣು, ಕುಂಟಲ ಹಣ್ಣು, ಬಿಕೋಜಾಯಿ, ಚೂರಿಮುಳ್ಳು, ನೇರಳೆ ಹಣ್ಣು, ಗೇರುಹಣ್ಣು ಹೀಗೆ ಇವೆ ನಮ್ಮ ತಿಂಡಿಗಳು... (ಇವೆಲ್ಲಾ ನಾವು ಬಳಸೋ ಪದ ಇದಕ್ಕೆ ಸಮಾನವಾದ ಪದಗಳು ನನಗೆ ಗೊತ್ತಿಲ್ಲ). ಈಗಿನ ನೂಡಲ್ಸ್ ಗಳ ಹಾವಳಿಯೇ ಇದ್ದಿರಲಿಲ್ಲ. ಏನಿದ್ರೂ ಮಾವಿನಕಾಯಿಯನ್ನ ಸಣ್ಣದಾಗಿ ತುಂಡು ಮಾಡಿ ಅದಕ್ಕೆ ಹಳದಿ ಹುಡಿ, ಮೆಣಸಿನಹುಡಿ , ಉಪ್ಪು , ಸ್ವಲ್ಪ ಎಣ್ಣೆ ಬೆರೆಸಿ ಬಾಯಿಗೆ ಹಾಕುತ್ತಾ ಇದ್ರೆ ಆಯ್ತು ಅದಕ್ಕಿಂತ ರುಚಿಯದ್ದು ಇನ್ನೇನಿದೆ. ಮತ್ತೆ ಈ ದೊಡ್ದ ರಜೆಯಲ್ಲಿ ಒಂದು ಬಾರಿಯಾದರೂ ಬೀಚ್ ಭೇಟಿ ಇದ್ದೇ ಇರುತಿತ್ತು. ಮರಳ ರಾಶಿಯಲ್ಲಿ ಆಡಿ ವಾಪಾಸ್ ಬರೋಕೆ ಮನಸ್ಸಿಲ್ಲದೇ ಲೇಟಾಗಿ ಕತ್ತಲಿಗೆ ಮೆಲ್ಲನೆ ಬಂದು ಮನೆಯ ಹಿರಿಯರಿಂದ ಬೈಗುಳ ತಿಂದ ಮೇಲೇನೇ ಮನಸ್ಸಿಗೆ ಸಮಾಧಾನ. ಕತ್ತಲಾದರೆ ಸಾಕು ಅಂಗಳದಲ್ಲೇ ಚಾಪೆ ಹಾಕಿಕೊಂಡು ಅಂತಾಕ್ಷರಿ ಆಟ ಶುರುವಾಗುತಿತ್ತು.
ಸಾಧಾರಣವಾಗಿ ಪರವೂರಿಂದ ಬಂದವರು ತಮ್ಮ ಎಲ್ಲಾ ಹತ್ತಿರ ಸಂಬಂಧಿಗಳ ಮನೆಗೊಂದು ಭೇಟಿ ಕೊಡೋದು ಸಾಮಾನ್ಯವೇ. ಎಲ್ಲಾ ಕಡೆ ಆತಿಥ್ಯ ಸ್ವೀಕರಿಸಿ ಹೊಟ್ಟೆಗೂ ಖುಷಿ ಮನಸಿಗೂ ಖುಶಿ. ಇನ್ನು ಇದೇ ರಜೆಯ ಸಮಯದಲ್ಲೇ ಮದುವೆಗಳ ಸೀಸನ್ ಬರೋದು ಅಲ್ವಾ...ದಿನ ಬಿಟ್ಟು ದಿನ ಮದುವೆಗೆ ಹೋಗಿ ಅಲ್ಲೊಂದಿಷ್ಟು ಬಂಧು ಮಿತ್ರರ ಭೇಟಿ ಅದೇನ್ ಮಜಾ ಕೊಡುತ್ತಿತ್ತಂದರೆ ನಿಜಕ್ಕೂ ಈ ಎಲ್ಲಾ ನೆನಪುಗಳನ್ನೇ ಮೆಲುಕು ಹಾಕೋದೇ ಅದೆಷ್ಟು ಖುಶಿ ಕೊಡುತ್ತೆ. ಅದಿಕ್ಕೆ ಹೇಳಿದ್ದು ಈ ಬೇಸಿಗೆ ರಜೆ ಭಾಂಧವ್ಯದ ಬೆಸುಗೆಯನ್ನ ಗಟ್ಟಿಗೊಳಿಸುತ್ತಿತ್ತು ಅಂತ. ಬಹುಶ ಈಗ ಆ ಭಾಂಧವ್ಯಗಳು ಜನರಿಗೆ ಸಂಕೋಲೆ ಆಗತೊಡಗಿದೆಯೋ ಏನೋ. ನಗರವಾಸಿಗಳಿಗೆ ಬೇಸಿಗೆ ರಜೆ ಅಂತದಂದ್ರೆ ಯಾವುದಾದ್ರೂ ಪ್ರವಾಸಕ್ಕೆ ಹೋಗುತ್ತಾರೆಯೇ ಹೊರತು ಹಳ್ಳಿ ಕಡೆ ತಲೆ ಹಾಕುವವರಿಲ್ಲ. ಅವರಿಗೆಲ್ಲ ಬಂಧುಗಳು ಬೇಕಾಗಿಲ್ಲ. ಅವರಿಗೆ ಗೊತ್ತಿರೋದು ಗೆಳೆತನದ ಲೋಕ ಮಾತ್ರ. ಗೆಳೆತನಕ್ಕೆ ಮತ್ತು ಬಂಧು ಮಿತ್ರರ ಭಾಂಧವ್ಯಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ ಅದನ್ನ ಅನುಭವಿಸಿದವರಿಗಷ್ಟೇ ಗೊತ್ತು. ಈ ಬದಲಾಗುತ್ತಿರುವ ಈ ಜೀವನ ಶೈಲಿಯಲ್ಲಿ ನಾವೆಲ್ಲೋ ಇಂಥ ಸಣ್ನ ಪುಟ್ಟ ಖುಷಿಗಳನ್ನ ಕಳೆದುಕೊಳ್ಳುತ್ತಿದ್ದೇವೇನೋ ಅನ್ನಿಸುತ್ತಿದೆ. ಇನ್ನು ಮಕ್ಕಳಿಗೂ ಹಾಗೇಯೇ ರಜೆ ಅನ್ನೋದು ಬರಿ ನೆಪ ಮಾತ್ರ ಟ್ಯೂಶನ್, ಕ್ಯಾಂಪು , ಕೋಚಿಂಗ್ ಕ್ಲಾಸ್ ಹೀಗೆ ಹತ್ತು ಹಲವು ತೊಡರುಗಳು. ಅದೆಲ್ಲಾ ಆಗಿ ಸಮಯ ಸಿಕ್ಕರೂ ಹೆಚ್ಚಿನವರಿಗೆ ಹಳ್ಳಿಯ ಕಡೆ ತಲೆ ಹಾಕೋ ಮನಸಿರಲ್ಲ. ಇದರಲ್ಲಿ ಅವರ ತಪ್ಪು ಇದೆ ಅಂತಲ್ಲ ಅವರನ್ನ ಅದೇ ರೀತಿಯಲ್ಲಿ ಬೆಳೆಸಲಾಗುತ್ತದೆಯಲ್ವಾ. ಇರಲಿ ಬಿಡಿ ನನಗಂತೂ ಈಗಲೂ ಆ ಬೇಸಿಗೆಯ ರಜೆಯ ಕ್ಷಣಗಳು ನೆನಸಿಕೊಂದರೆ ಹೇಳಲಾಗದಷ್ಟು ಖುಶಿ... ನಿಮಗೂ ಹಾಗೇ ಆಗುತ್ತಾ.....?

No comments:

Post a Comment