Monday 2 November 2015

ಉಗ್ರ ಶಿಕ್ಷೆಯೊಂದರಿಂದ ಮಹಿಳಾ ದೌರ್ಜನ್ಯವೆಂಬ ರೋಗವನ್ನು ಇಲ್ಲದಂತಾಗಿಸಲು ಸಾಧ್ಯವಿದೆಯೇ...???



ಮಹಿಳಾ ದೌರ್ಜನ್ಯಕ್ಕೆ ಪ್ರಬಲವಾದ ಕಾನೂನಿನ ಅಗತ್ಯತೆ ..... ಇದು ಇತ್ತೀಚೆಗೆ ಎಲ್ಲೆಡೆಯಲ್ಲಿಯೂ ಚರ್ಚೆಯಾಗುತ್ತಿರುವ ಸುದ್ದಿ... ವಿದ್ಯಾರ್ಥಿ ಮಿತ್ರರಂತೂ ಸ್ವಾತಂತ್ರ್ಯ ಹೋರಾಟದಂತೆ ತೊಡೆ ತಟ್ಟಿ ನಿಂತಿದ್ದಾರೆ. ಬಲಾತ್ಕಾರಿಗೆ ಅತಿ ಕಠಿಣ ಶಿಕ್ಷೆಯಾಗಬೇಕು ಎನ್ನುವ ಘೋಷಣೆ ಕೇಳುತ್ತಿದೆ, ಒಪ್ಪಲೇಬೇಕಾದ ಮಾತು ಕೂಡ ಯಾಕೆಂದರೆ ಈ ಉಗ್ರ ಶಿಕ್ಷೆಯ ಭಯ ತಪ್ಪು ಮಾಡಹೊರಟವರನ್ನು ತಪ್ಪು ಮಾಡದಂತೆ ತಡೆಯುವ ಸಂಭವವಿದೆ. ಆದರೂ ಈ ಶಿಕ್ಷೆಗಳ ಬೇಡಿಕೆಗಳನ್ನು ಮುಂದಿಡೋದು ಅಂದರೆ ಒಂದು ರೋಗಕ್ಕೆ ಇಂಗ್ಲೀಷ್ ಮೆಡಿಸಿನ್ ತೆಗೆದುಕೊಂಡ ಹಾಗೆ. ತಾತ್ಕಾಲಿಕ ಪರಿಣಾಮ ಬೀರುತ್ತೆ ಅಷ್ಟೇ. ಆ ರೋಗದ ಮೂಲ ಬೀಜವನ್ನು ಕಿತ್ತು ಹಾಕೋದಿಲ್ಲ . ನನಗನಿಸಿದಂತೆ ಇಲ್ಲಿ ನಾವು ಅನುಸರಿಸಬೇಕಾಗಿರುವುದು ಭಾರತೀಯ ಪದ್ಧತಿಯಾದ ಆಯುರ್ವೇದ ಚಿಕಿತ್ಸೆಯನ್ನು. ನನ್ನ ಮಾತಿನ ಅರ್ಥ ಬಲಾತ್ಕಾರದ ಮನೋಭಾವನೆಯನ್ನು ಇಲ್ಲದಂತಾಗಿಸಬೇಕು. ಯಾವ ರೀತಿ ಆಯುರ್ವೇದ ರೋಗದ ಮೂಲವನ್ನು ಇಲ್ಲವಾಗಿಸುವುದೋ ಅದೇ ರೀತಿ . ಅವಾಗ ಆ ಬಲಾತ್ಕಾರದ ಮನೋಭಾವವೆಂಬ ರೋಗ ನಿರ್ನಾಮವಾಗುತ್ತದೆ.
ಬಹುಶ ನನಗನ್ನಿಸಿದಂತೆ ಇಲ್ಲಿ ಬಹಳ ಜನ ಗಮನಿಸದೇ ಇರುವ ಅಂಶ ಎಲ್ಲೋ ಭಾರತೀಯ ಯುವಜನತೆಯಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ದೇಶ ನಮ್ಮತನವನ್ನು ಕಳೆದುಕೊಳ್ಳುತ್ತಿದೆ. ಇದೂ ಇಂತಹಾ ದುರ್ಘಟನೆಗಳಿಗೆ ಒಂದು ಕಾರಣ. ಹಣದ ಹಿಂದೆ ಓಡುತ್ತಿರುವ ತಂದೆ ತಾಯಿಗಳಿಗೆ ತನ್ನ ಮಗ ಅಥವಾ ಮಗಳು ಯಾವ ರೀತಿಯಲ್ಲಿ ಬೆಳೆಯುತ್ತಿದ್ದಾರೆ ಅನ್ನೋದೆ ಗೊತ್ತಿಲ್ಲ. ಒಬ್ಬ ಸಂಸ್ಕಾರವಂತ ಯುವಕ ಬಲತ್ಕಾರಿಯಾಗೋ ಸಾಧ್ಯತೆ ಬಹಳಷ್ಟು ಕಡಿಮೆ. ನಮ್ಮ ಆಚಾರ ವಿಚಾರಗಳನ್ನು ಕಲಿಸಿಕೊಡಬೇಕಾದ ತಂದೆ ತಾಯಿಯರೇ ಹಾದಿ ತಪ್ಪಿದರೆ ಮುಂದಿನ ಗತಿಯೇನು??? ಹೆಚ್ಚು ಹೆಚ್ಚು ಮುಖಾಮುಖಿಯಾಗದ ತಂದೆತಾಯಿಗಳಿಂದಾಗಿ ಮಕ್ಕಳಲ್ಲಿ ಅತಿಯಾದ ಸ್ವಾತಂತ್ರ್ಯ ಅರ್ಥಾತ್ ಸ್ವೇಚ್ಛಾಚಾರ ಬೆಳೆಯುತ್ತದೆ. ತಂದೆತಾಯಿಯರ ಮೇಲಿನ ಭಯವೇ ಕ್ರಮೇಣ ಕಡಿಮೆಯಾಗತೊಡಗುತ್ತದೆ. ಯಾವಾಗ ನಮ್ಮಲ್ಲಿ ನಮ್ಮ ಪೋಷಕರ ಮೇಲಿನ ಭಯ ಇಲ್ಲವಾಗುತ್ತದೋ ಆವಾಗ ಇಂತಹಾ ಅವಾಂತರಗಳೆಲ್ಲ ಶುರುವಾಗೋದು.
ಒಂದು ಉದಾಹರಣೆ ಕೊಡೋದಾದ್ರೆ " ಕುಡಿತ "ಅಥವಾ "ಮದ್ಯಪಾನ" ಈಗ ಹೆಚ್ಚಿನ ಕುಟುಂಬದೊಳಗೆ ಕೆಟ್ಟದ್ದು ಅನ್ನುವ ಭಾವನೆಯಾಗಿ ಉಳಿದಿಲ್ಲ. ಇದು ಎಡವುತ್ತಿರುವ ನಮ್ಮ ಸಂಸ್ಕಾರವನ್ನು ಬಿಂಬಿಸುತ್ತದೆ. ಅದೆಷ್ಟೋ ಘಟನೆಗಳು ಈ ಕುಡಿತದ ಅಮಲಿನಲ್ಲಿಯೇ ನಡೆಯುತ್ತದೆ. ಹಾಗಾಗಿ ನಾವು ಈ ಕುಡಿತಕ್ಕೆ ಕಡಿವಾಣ ಹಾಕುವುದು ಅಗತ್ಯ. ಆದರೆ ಇದರ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದಾರೇ...? ನನಗೇನೂ ಕಷ್ಟ ಅನ್ನಿಸುತ್ತಿದೆ ಯಾಕೆಂದರೆ ಇವತ್ತು ರಾತ್ರಿ ಪ್ರತಿಭಟನಾಕಾರರಲ್ಲಿ ಹಲವಾರು ಜನ ನಶೆ ಏರೇಸಿಕೊಂಡಿದ್ದಾರು. ವಿದೇಶೀ ಸಂಸ್ಕೃತಿ ಹೊಸ ವರುಷದ ನೆಪದಲ್ಲಿ ಕುಡಿಯೋಕೆ ಅನುಮತಿ ಕೊಟ್ಟಿದೆಯಲ್ವಾ... ಬರಿಯ ಹುಡುಗರೇಕೆ ಹುಡುಗಿಯರೇ ಎಷ್ಟೋ ಜನ ಈಗ ಮದ್ಯಪಾನ ಮಾಡೋದು ನಮಗೆಲ್ಲರಿಗೂ ಗೊತ್ತು. ಇವುಗಳೆಲ್ಲದಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಪ್ರಾಥಮಿಕವಾಗಿ ಸಿಗಬೇಕಾದ ಸಂಸ್ಕಾರವೇ ಸಿಗದಿದ್ದಾಗ ಯುವಕರು ಮದ್ಯಪಾನ ಒಳ್ಳೆಯದಲ್ಲ ಎನ್ನುವ ವಾಸ್ತವವನ್ನು ಮರೆತು ತಪ್ಪುಅ ಹಾದಿ ಹಿಡಿಯುತ್ತಾರೆ.
ಸಂಸ್ಕಾರದ ಕುರಿತಾಗಿ ಮಾತನಾಡುವಾಗ ನಾವು ಗಮನಿಸಬೇಕಾದ ಇನ್ನೊಂದು ಅಂಶ ಸಂಸ್ಕಾರವನ್ನು ಧಾರೆಯೆರೆಯಬೇಕಾದ ಹೆಣ್ಣೇ ತನ್ನ ಸಂಸ್ಕಾರ ಮರೆತ್ತಿರುವುದು. ಇದು ಎಲ್ಲೋ ಅವಳದೇ ಆದ ಹೆಣ್ಣು ಕುಲಕ್ಕೆ ತಿರುಗುಬಾಣವಾಗಿ ಬಿಡುತ್ತಿದೆ. ತಾಯಿ ಸರಿಯಾಗಿ ಕಿವಿ ಹಿಂಡದೇ ಇದ್ದಾಗ ಮುಂದಿನ ಪರಿಸ್ಥಿತಿ ಕೈ ಮೀರಿ ಹೋಗುವುದು ಸಹಜವೇ ಅಲ್ವಾ. ಈಗೆಲ್ಲ ಮೊದಲಿನಂತೆ ಕೂಡು ಕುಟುಂಬಗಳೂ ಕೂಡ ಇಲ್ಲ, ಹೆಣ್ಣಿನ ಬೆಲೆ ಏನು ಎಂಬುದನ್ನು ಅರ್ಥ ಮಾಡಿಸುವವರಾರಿಲ್ಲ . ಹಾಗಾಗಿ ಗಂಡು ಮಕ್ಕಳು ಎಡವುತ್ತಿದ್ದರೇನೋ. ಒಬ್ಬ ಹೆಣ್ಣಿನ ಬೆಲೆ ಅವಳ ಪೂಜನೀಯತೆಯ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಒಬ್ಬ ಗಂಡು ಯಾವುದೇ ಹೆಣ್ಣನ್ನು ಗೌರವಿಸತೊಡಗುತ್ತಾನೆ. ಇಲ್ಲವಾದಲ್ಲಿ ಮತ್ತೆ ಎಡವಿ ಬೀಳೋ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಯಾವ ರೀತಿ ಬಲತ್ಕಾರಿಗೆ ಕಠಿಣ ಶಿಕ್ಷೆ ಬೇಕು ಅಂತ ಚಳುವಳಿ ಮಾಡುತ್ತಿದ್ದೇವೋ ಅದೇ ರೀತಿ ಈ ಹಾಳು ರೋಗದ ನಾಶಕ್ಕಾಗಿ ನಾವು ಮತ್ತೆ ನಮ್ಮ ಸಂಸ್ಕಾರಗಳತ್ತ ಗಮನ ಹರಿಸುವುದೂ ಕೂಡ ಅಷ್ಟೇ ಅಗತ್ಯವಾಗಿದೆ. ಇಲ್ಲವಾದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ ಅಲ್ವಾ....ಹಾಗಾಗಿ ನಮ್ಮ ಸಂಸ್ಕೃತಿಯತ್ತ ಮುಖ ಮಾಡೋಣ..

No comments:

Post a Comment