Tuesday 3 November 2015

ವೇದವ್ಯಾಸರ ಕರ್ಣ - ಒಂದು ವಿಶ್ಲೇಷಣೆ - ಭಾಗ ೨



ಕರ್ಣನ ಕುರಿತು ಸಕಾರಾತ್ಮಕವಾಗಿ ಮಾತನಾಡುವವರು ಅಥವಾ ಆತನ ಪರ ವಹಿಸಿ ಮಾತಾಡುವವರು ಆತನ ಹಲವಾರು ದುರ್ಗುಣಗಳನ್ನ ಮರೆತೇ ಬಿಡುತ್ತಾರೆ... ಅರಗಿನ ಅರಮನೆಯಲ್ಲಿ ಪಾಂಡವರನ್ನ ಕೊಲ್ಲಲು ಸಂಚು ರೂಪಿಸಿದಾಗ ಇವನು ಕೈ ಜೋಡಿಸಿಲ್ಲವೇ... ದ್ಯೂತದಲ್ಲಿ ಪಾಂಡವರು ಸೋತಾಗ ದ್ರೌಪದಿಯನ್ನು ಸಭೆಗೆ ಎಳೆದು ತಂದೊಡನೆ ಅವಳ ಸೀರೆ ಎಳೆಯೋದಿಕ್ಕೆ ಮೊದಲು ಪ್ರೇರಣೆ ನೀಡಿದ್ದು ಇವನೇ ಅನ್ನೋದು ಮರೆಯೋದ್ಯಾಕೆ....? ಒಬ್ಬ ಹೆಣ್ಣು ತನ್ನನ್ನು ತಿರಸ್ಕರಿಸಿದಳು ಅಂದ ಮಾತ್ರಕ್ಕೆ ಇಡೀ ರಾಜಸಭೆಯಲ್ಲಿ ವಸ್ತ್ರಾಪಹರಣ ಮಾಡಿಸೋ ಮನಸ್ಥಿತಿ ಹೊಂದಿದ ವ್ಯಕ್ತಿತ್ವದವನಿಗೆ ಹೆಣ್ಣು ಮಕ್ಕಳೇ ಹೆಚ್ಚು ಮರುಕಪಡುತ್ತಾರೆ ಅಂದರೆ ನನಗೇಕೋ ವಿಚಿತ್ರ ಅನ್ನಿಸುತ್ತೆ.. ಇದೂ ಉತ್ತಮರ ಲಕ್ಷಣವೇ...?
ನನಗೆ ಮತ್ತಷ್ಟು ವಿಚಿತ್ರ ಅನ್ನಿಸೋದು ಕರ್ಣನಿಗೆ ಪಾಂಡವರ ಮೇಲಿದ್ದ ದ್ವೇಷ... ಅದರಲ್ಲೂ ವಿಶೇಷವಾಗಿ ಅರ್ಜುನನ ಮೇಲೆ... ಈ ದ್ವೇಷ ಯಾಕಾಗಿ.... ಇಡಿಯ ಮಹಾಭಾರತದಲ್ಲಿ ಪಾಂಡು ಪುತ್ರರು ಯಾರೊಬ್ಬರೂ ಕರ್ಣನನ್ನ ದ್ವೇಷಿಸಿಲ್ಲ ಅವಮಾನಿಸಿಲ್ಲ ಹಾಗಿದ್ದು ಅವನಿಗ್ಯಾಕೆ ಇಂತಹಾ ದ್ವೇಷ.... ನನಗೆ ಸಿಗೋದು ಒಂದೇ ಕಾರಣ... ಅರ್ಜುನ ತನಗಿಂತ ಶ್ರೇಷ್ಠ ಧನುರ್ಧಾರಿ ಎಂದು... ನಾವಾಡುವ ಭಾಷೆಯ ಪ್ರಯೋಗ ಮಾಡಿದರೆ ಇದನ್ನ ಹೊಟ್ಟೆಕಿಚ್ಚು ಅನ್ನುತ್ತೇವೆ. ಸಿದ್ಧಿಯನ್ನು ತಾನು ಸಾಧಿಸಿ ಪಡೆಯಬೇಕೇ ಹೊರತು ಇನ್ನೊಬ್ಬನ ಬಳಿ ಇರುವುದರ ಕುರಿತಾಗಿ ಮತ್ಸರ ಪಡೋದು ಉತ್ತಮರ ಲಕ್ಷಣವೇ...? ಅವನ ದ್ವೇಷ ಎಲ್ಲಿಯವರೆಗಿತ್ತು ಅಂದರೆ ಕೊನೆಯಲ್ಲಿ ಕುಂತಿ ತನ್ನ ಮಕ್ಕಳನ್ನ ಉಳಿಸು ಅಂದಾಗ ಅರ್ಜುನನನ್ನು ಮಾತ್ರ ಬಿಡಲಾರೆ ಅನ್ನುತ್ತಾನೆ. ಇಂಥಾ ದ್ವೇಷದ ಪರಾಕಾಷ್ಠೆಗೆ ಕಾರಣ.... ನನ್ನ ಕಣ್ಣಿಗೆ ಕಾಣಿಸೋದು ಬರೀ ಮತ್ಸರವಷ್ಟೇ...
ಮಿತ್ರತ್ವದ ವಿಷಯ ಬಂದಾಗ ಕರ್ಣ ದುರ್ಯೋಧನರದ್ದು ಅಪೂರ್ವ ಮಿತ್ರತ್ವ ಅನ್ನುತ್ತಾರೆ. ಕೆಟ್ಟಗುಣಗಳವರು ಉತ್ತಮ ಮಿತ್ರರಾಗೋದರಲ್ಲಿ ವಿಚಿತ್ರವೇನಿಲ್ಲ... ಆದರೆ ಅಲ್ಲೂ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೂ ಲೋಪ ತೋರಿಸಬಹುದು. ವಿರಾಟ ನಗರದಲ್ಲಾದ ಯುದ್ದದಲ್ಲಿ ಮಿತ್ರನನ್ನೂ ಬಿಟ್ಟು ಮೊದಲಿಗನಾಗಿ ಓಡಿದಾಗ ಅವನ ಮಿತ್ರತ್ವ ಯಾಕೋ ಸಪ್ಪೆಯಾಗುತ್ತದೆ.. ಇನ್ನೂ ಹೇಳೋದಾದರೆ ದುರ್ಯೋಧನನಿಗೆ ಎಲ್ಲಾ ಪಾಂಡವರ ಮೇಲೆ ಸಿಟ್ಟು ಇದ್ದರೂ... ಬದ್ಧ ವೈರತ್ವವಿದ್ದುದು ಭೀಮನ ಮೇಲೆ... ಆದರೆ ತನ್ನ ಮಿತ್ರನ ಪರಮ ವೈರಿಯ ಸಂಹಾರವನ್ನ ತನ್ನ ಪರಮ ಗುರಿಯಾಗಿಸಲಿಲ್ಲ.... ಅಲ್ಲೂ ಆತನಿಗಿದ್ದಿದು ಸ್ವಾರ್ಥವೇ ಅಲ್ವಾ... ಇದೇ ಮಿತ್ರನಿಗಾಗಿ ಏನನ್ನು ಬೇಕಿದ್ದರೂ ಮಾಡಬಲ್ಲೆ ಅನ್ನುವ ಕರ್ಣ ಭೀಷ್ಮನ ಸೇನಾಧಿಪತ್ಯವನ್ನ ಒಪ್ಪಿಕೊಳ್ಳದೇ ಮಹಾಭಾರತದಲ್ಲಿ ಹನ್ನೊಂದು ದಿನಗಳವರೆಗೆ ರಣರಂಗಕ್ಕೆ ಬರೋದೇ ಇಲ್ಲ.... ಅಲ್ಲೂ ಆತನ ಅಹಂ ಅಡ್ಡ ಬರುತ್ತದೆ.... ವಾಸ್ತವದಲ್ಲಿ ಕರ್ಣನಿಗಿಂತ ಭೀಷ್ಮನೇ ಪರಾಕ್ರಮಿ... ಇದೇ ಕಾರಣ ಅವನು ಭಾಗವಹಿಸದೇ ಇರೋದಿಕ್ಕೆ...ಅಲ್ಲೂ ಮಿತ್ರತ್ವಕ್ಕಾಗಿನ ತ್ಯಾಗ ಕಾಣಿಸೋದೆ ಇಲ್ಲ. ಮಿತ್ರತ್ವಕ್ಕಿಂತಲೂ ಸ್ವಪ್ರತಿಷ್ಠೆ ಹೆಚ್ಚಾಗಿ ಹೋಯಿತು.
ಇನ್ನು ಆತನ ಶೂರತ್ವ... ಮಿತ್ರರೊಬ್ಬರು ಕಮೆಂಟಿಸಿದ್ದರು ಕುಂತಿಗೆ ಕೊಟ್ಟ ಮಾತು ಮುರಿದು ಕರ್ಣ ಯುದ್ದ ಮಾಡಿದ್ದರೆ ಪಾಂಡವರನ್ನು ಮುಗಿಸಿಬಿಡುತ್ತಿದ್ದ ಅಂತ.... ಹ ಹ ನಿಜಕ್ಕೂ ಇದು ಹಾಸ್ಯಾಸ್ಪದವೇ ಸರಿ... ಕರ್ಣ ಒಳ್ಳೆಯ ಧನುರ್ಧಾರಿ ಒಪ್ಪೋ ಮಾತು. ಆದರೆ ಅರ್ಜುನನಿಗಿಂತಲೂ ಶಕ್ತಿಶಾಲಿ ಅನ್ನೋದನ್ನ ನಾನು ನಂಬೋಲ್ಲ... ಇದಕ್ಕೆ ಪ್ರತ್ಯಕ್ಷ ಪ್ರಮಾಣ ಮಹಾಭಾರತದಲ್ಲೇ ಸಿಗುತ್ತದೆ. ಕುರುಕ್ಷೇತ್ರಕ್ಕೂ ಮುನ್ನ ಎರಡು ಬಾರಿ ಮುಖಾಮುಖಿಯಾದಗಲೂ ಕರ್ಣ ಅರ್ಜುನನ ಬಳಿ ಸೋತವನೇ... ಅದರಲ್ಲೂ ಅಜ್ಞಾತವಾಸ ಮುಗಿಯುವ ಹಂತದಲ್ಲಿ ವಿರಾಟನಗರಿಯಲ್ಲಾದ ಯುದ್ದದಲ್ಲಂತೂ ಮೊದಲು ಓಡಿದವನೇ ಕರ್ಣ.... ಅರ್ಜುನನನ್ನು ಬಿಡಿ ಅವನ ಎಳೆಯ ಮಗ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಹಿಂದಿನಿಂದ ಕೊಂದಂತಹಾ ಕರ್ಣ ಹೇಗೆ ಶೂರನಾದಾನು....?
ಕರ್ಣ ಜನರ ಸಹಾನುಭೂತಿಯನ್ನು ಪಡೆಯುವ ಇನ್ನೊಂದು ಕ್ಷಣ... ಕುಂತಿ ಕರ್ಣನ ಬಳಿ ಹೋಗಿ ನೀನು ನನ್ನ ಮಗನೆಂದು ಹೇಳಿಕೊಳ್ಳುವುದು. ಇದನ್ನ ಕೆಲವರು ಆಕೆಯ ಮೊಸಳೆ ಕಣ್ಣೀರು ಅನ್ನುತ್ತಾರೆ. ಆದರೆ ಇದನ್ನ ಸಕಾರಾತ್ಮಕವಾಗಿ ನೋಡಬೇಕು ಅಂತನಿಸುತ್ತದೆ. ದುಷ್ಟರ ಸಂಘದಲ್ಲಿದ್ದವನನ್ನ ಮತ್ತೆ ಧರ್ಮದ ಕಡೆಗೆ ಎಳೆದು ತರುವ ತಾಯಿಯ ನಿಸ್ವಾರ್ಥ ಪ್ರಯತ್ನ... ಒಂದು ವೇಳೆ ಕರ್ಣ ತನ್ನ ತಾಯಿಯ ಮಾತಿಗೆ ಬೆಲೆ ಕೊಟ್ಟು ಧರ್ಮದ ಜೊತೆ ನಡೆದಿದ್ದರೆ ಆತ ಬದುಕುಳಿಯುತಿದ್ದುದಷ್ಟೇ ಅಲ್ಲ ರಾಜನಾಗುವ ಯೋಗವೂ ಸಿಗಬಹುದಿತ್ತೇನೋ ಯಾಕೆಂದರೆ ಯುಧಿಷ್ಠಿರ ಅಂತಹ ಧರ್ಮನಿಷ್ಠ. ಅಷ್ಟಕ್ಕೂ ಆಕೆ ಕೇಳೋದು ತನ್ನ ಮಕ್ಕಳನ್ನು ಉಳಿಸು ಎಂದು ಯಾವ ಯಾವ ಮಕ್ಕಳನ್ನು ಉಳಿಸಬೇಕು ಅನ್ನುವುದನ್ನ ಹೇಳಿಲ್ಲ... ಅಧರ್ಮದ ಜೊತೆ ಸೇರಿ ನೀನು ನಾಶವಾಗಬೇಡವೆಂಬ ಗೂಢಾರ್ಥ ಬಲುಬೇಗ ಕಣ್ಣಿಗೆ ಕಾಣಿಸೋದೆ ಇಲ್ಲ. ಆದರೂ ಆತ ತನಗೆ ಸಿಕ್ಕ ಕೊನೆಯ ಅವಕಾಶವನ್ನೂ ಕೈ ಚೆಲ್ಲಿದ. ಮತ್ತೂ ಆತ ಹೊರಟಿದ್ದು ಅಧರ್ಮದ ಕಡೆಗೇ... ಒಬ್ಬ ಉತ್ತಮ ವ್ಯಕ್ತಿ ಧರ್ಮಕ್ಕೆ ಪ್ರಾಮುಖ್ಯತೆ ಕೊಡಬೇಕೇ ಹೊರತು ಅಧರ್ಮದ ಮಿತ್ರತ್ವಕ್ಕಲ್ಲ...ಅಧರ್ಮಿಗಷ್ಟೇ.... ಅಧರ್ಮದಲ್ಲೂ ಧರ್ಮ ಕಾಣಿಸೋದು ಅಲ್ವೇ...
ಇನ್ನೂ ಮುಗಿದಿಲ್ಲ....

No comments:

Post a Comment