Monday 2 November 2015

ನಮೋ ಉತ್ಸವ....



ನಿನ್ನೆ ನನ್ನ ವಾರದ ರಜಾ ದಿನ...ಮಧ್ಯಾಹ್ನದವರೆಗೂ ಒಂದಷ್ಟು ಕೆಲಸಗಳಿತ್ತು... ಅದನ್ನೆಲ್ಲಾ ಮೂರು ಗಂಟೆಯೊಳಗೆ ಮುಗಿಸಿ, ಕೆಮಾರಾ ಕೈಗೆತ್ತಿಕೊಂಡು ಹೊರಟೇ ಬಿಟ್ಟೆ...ಮಲ್ಪೆಯಲ್ಲಿನ ನಮೋ ಉತ್ಸವಕ್ಕೆ... ಉಡುಪಿಯಲ್ಲಿ ಬಸ್ಸಿನಿಂದ ಇಳಿಯಬೇಕಾದರೆ ತಟ್ಟನೆ ಹೊಳೆಯಿತು... ಅಯ್ಯೋ ಚಾರ್ಜಿಗಿಟ್ಟಿದ್ದ ಕೆಮಾರಾ ಬ್ಯಾಟರಿ ಮನೆಯಲ್ಲೇ ಬಾಕಿ ಅಂತ.... ಇನ್ನೇನು ಮಾಡೋದು ಒಂದಷ್ಟು ಅಂಗಡಿ ಸುತ್ತಾಡಿ ಬ್ಯಾಟರಿ ಖರೀದಿಸಿ ಮಲ್ಪೆಯ ಬಸ್ಸು ಹತ್ತಿದೆ... ಹಾಗೇ .... ನಮೋ ಉತ್ಸವದ ಸ್ಥಳದ ಸಮೀಪಿಸುತ್ತಿರುವಂತೆಲ್ಲಾ ಮೋದಿ ಮತ್ತು ವಾಜಪೇಯಿಯವರ ಭಾವಚಿತ್ರಗಳು ರಾರಾಜಿಸತೊಡಗಿತ್ತು.... ಬ್ಯಾನರುಗಳು... ಸಾಲು ಗೂಡು ದೀಪಗಳು.... ವಾಹ್ ಅವನ್ನೆಲ್ಲಾ ದಾಟಿ ಕಡಲ ತಡಿಯಲ್ಲಿ ಅಡಿಯಿಡುತ್ತಿದ್ದಂತೆ ನೀಲಾಕಾಶದಲ್ಲಿ ಹಾರಾಡುತ್ತಿದ್ದ ಗಾಳಿಪಟ... ವಾಹ್ ಅಲ್ಲೂ ರಾರಾಜಿಸುತ್ತಿದ್ದದ್ದು ಮೋದಿಯೇ.... ನನ್ನ ಕೆಮೆರಾಕ್ಕೆ ಸೆರೆ ಹಿಡಿಯೋ ಕೆಲಸ ಕೊಡುತ್ತಾ ಹೋದೆ...
ಹಾಗೆ ಮುನ್ನಡೆದಾಗ ಮರಳಶಿಲ್ಪಗಳು ನನ್ನನ್ನಾಕರ್ಷಿಸತೊಡಗಿತ್ತು... ಕಲಾವಿದರು ತಮ್ಮದೇ ಕಲ್ಪನೆಯಲ್ಲಿ ಮರಳಿನಲ್ಲಿ ತಮ್ಮ ಭವಿಷ್ಯದ ನಾಯಕನನ್ನ ಬಿಂಬಿಸಿದ್ದರು.... ಮತ್ತೆ ಮುಂದೆ ಸಾಗಿದರೆ ಕ್ಯಾನ್ವಾಸಿನಲ್ಲಿ ಮೂಡಿದ ಮೋದಿ ಚಿತ್ರಗಳು... ಅತ್ತ ಬದಿಯಲ್ಲಿ ನಿಜವಾದ " ಭಾರತ ರತ್ನ " ನ ಅಪೂರ್ವ ಚಿತ್ರ ಸಂಗ್ರಹ... ಅದೇ ನಮ್ಮ ಅಟಲ್ ಜೀ ಯದು... ಅವರ ಮಾತೇ ಚೆಂದ ಆ ಮಾತಿಗೆ ಜೊತೆ ನೀಡುವ ಭಾವಾಭಿವ್ಯಕ್ತಿ ಹೇಳೋದೇ ಬೇಡ ಬಿಡಿ...ಅದೆಲ್ಲಾ ನೋಡಿ ಎರಡು ಮೋದಿ ಟಿ ಶರ್ಟ್ ಮತ್ತು ಮೋದಿ ಪೆನ್ ತೆಗೆದುಕೊಂಡು ಬಂದು ವೇದಿಕೆಯ ಮುಂಭಾಗದಲ್ಲಿ ಕೂತೆ....ಅಷ್ಟು ಹೊತ್ತಿಗೆ ವೇದಿಕೆಯಲ್ಲಿ ಸಾರ್ವಜನಿಕರಿಗಾಗಿ ರಸಪ್ರಶ್ನೆ ಕಾರ್ಯಕ್ರಮ ನಡೀತಾ ಇತ್ತು .... ಹಾಗೆ ಅತ್ತಿತ್ತ ನೋಡಿದರೆ ನೀಲಿ ಬಣ್ಣದ ಖಾದಿ ಡ್ರೆಸ್ ಕೋಡ್ ನಲ್ಲಿ ನಮೋ ಬ್ರಿಗೇಡ್ ತಂಡ ಚುರುಕಿನ ಓಡಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿಸುತ್ತಿದ್ದರು...
ಅವರಲ್ಲೇ ಒಂದಷ್ಟು ಜನ ನಮೋ ಚಹಾ ಹಂಚುತ್ತಿದ್ದರು.... ನಾನು ಒಂದು ವರ್ಷಗಳ ಬಳಿಕ ಚಹಾ ದ ಸವಿ ನೋಡಿದೆ... ಮೋದಿಯ ಹೆಸರಿನ ಚಹಾ ಅಲ್ವಾ.... ಅದರ ರುಚಿಯೇ ಅದ್ಭುತ... ನನಗಂತೂ ಇದರ ರುಚಿ ನೋಡಿದೊಡನೆ ಏನೋ ಜೋಶ್ ಬಂದ ಹಾಗನಿಸಿದ್ದು ಸುಳ್ಲಲ್ಲ... ಈ ನಡುವೆ ನನ್ನ ಮಿತ್ರರಾಗಿರುವ ಮತ್ತು ನಮೋ ಬ್ರಿಗೇಡ್ ನ ಸಕ್ರಿಯ ಕಾರ್ಯಕರ್ತರಾಗಿರೋ ಚೇತನ್ ಅವರಿಗೆ ಕರೆ ಮಾಡಿದ್ದೆ ಮತ್ತೆ ಭೇಟಿ ಮಾಡಿ ಅಂದಿದ್ದರು... ಹಾ ಅಂದವನೇ ಸೂರ್ಯ ಮೆಲ್ಲನೆ ಕಡಲೊಳಗೆ ಜಾರುತ್ತಿದ್ದುದನ್ನು ಕಂಡು ಫೋಟೋ ತೆಗೆಯಲೆಂದು ಅತ್ತ ಹೋಗಿ ಸೆರೆಹಿಡಿದು ಬಂದೆ.
ಅಷ್ಟು ಹೊತ್ತಿಗೆ ಚಕ್ರವರ್ತಿಯವರು ವೇದಿಕೆಯನ್ನೇರಿದ್ದರು....ಈ ಸಮಾರಂಭವನ್ನ ನೋಡಲಿಕ್ಕಾಗೇ ಗುಜರಾತಿನಿಂದ ಬಂದ ಅತಿಥಿಗಳೆಲ್ಲ ವೇದಿಕೆ ಏರಿ ತಮ್ಮ ಅನಿಸಿಕೆ ಹೇಳಿದರು...ಮತ್ತು ವಾಜಪೇಯಿಯವರ ಹುಟ್ಟಿದ ದಿನದ ನೆನಪಾಗಿ ಸಾವಿರ ಸಾವಿರ ಬಲೂನ್ ಗಳನ್ನ ಆಗಸಕ್ಕೆ ಬಿಡಲಾಯಿತು. ಗುಜರಾತ್ ಯುವ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ಸಿಂಘ್ ವಾಘೇಲಾ ಅವರು ಇಲ್ಲೂ ಮೋದಿ ಭಕ್ತರೇ ಇರೋದು ಅಂದಾಗ ಜನಸಾಗರ ರೋಮಾಂಚನಗೊಂಡಿತು...
ಇದಾದ ನಂತರ ವಿಶಿಷ್ಟ ಎನ್ನುವಂತೆ " ಇವರಂತಾಗಲಿ ಭಾರತ " ಅನ್ನೋ ಕಲ್ಪನೆಯ " ದೇಹಧಾರ್ಡ್ಯ ಪ್ರದರ್ಶನ " ಕೊನೆಯಲ್ಲಿ ಅವರೆಲ್ಲಾ ಸೇರಿ ಭಾರತದಲ್ಲಿರುವ ಹಲವು ಸಂಕಟಗಳನ್ನ ಕಿತ್ತು ಹರಿದು ಬಿಡುವ ಸಾಂಕೇತಿಕ ದೃಶ್ಯಾವಳಿ ದೇಶಭಕ್ತಿಯನ್ನ ಮತ್ತೆ ಜಾಗೃತವಾಗಿಸತೊಡಗಿತು.... ಇನ್ನೇನು ಚಕ್ರವರ್ತಿ ಸೂಲಿಬೆಲೆ ತಮ್ಮ ಮಾತಿನ ಮೋಡಿಯಿಂದ ನಮ್ಮನ್ನ ಮಂತ್ರ ಮುಗ್ಧರನ್ನಾಗಿಸುವ ಕ್ಷಣ ಮುನ್ನ.... ನನ್ನ ಆತ್ಮೀಯ ಮಿತ್ರರಾದ ಚೇತನ್ ಅವರು ಇನ್ನೊಬ್ಬ ಮಿತ್ರರಾಗಿರುವ ರಾಜೇಶ್ ರಾವ್ ಅವರನ್ನ ನನ್ನ ಬಳಿ ಕರಕೊಂಡು ಬಂದರು.... ಇಬ್ಬರೂ ಈ ದೇಶಸೇವೆಯ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವರು.... ಅವರ ಈ ಕಾರ್ಯನಿಷ್ಟೆ ನೋಡುವಾಗ ನನಗೆ ನನ್ನ ಬಗ್ಗೆ ಬೇಸರವಾಗುತ್ತೆ.... ನಾನು ಸುಮ್ಮನಿದ್ದೇನೆಯೇ ಹೊರತು ಮತ್ತಿನ್ನೇನು ಮಾಡುತ್ತಿಲ್ಲ ... ಇರಲಿ ಬಿಡಿ ಕೆಲವೊಂದು ವೈಯಕ್ತಿಕ ಕಾರಣಗಳಿದ್ದೇ ಇರುತ್ತದೆ... ರಾಜೇಶ್ ಅವರನ್ನ ಮೊದಲ ಬಾರಿಗೆ ಭೇಟಿಯಾಗಿದ್ದು....ಅದೂ ಮೋದಿ ನೆಪದಲ್ಲೇ.... ಈ ಭೇಟಿ ಮನಸ್ಸಿಗೆ ಕೊಟ್ಟ ಆನಂದವೇ ಹೇಳಲಾಗದಂತಾದ್ದು.... ಅವರೂ ಹೊರಡೋ ತಯಾರಿ ಮಾಡುತ್ತಿದ್ದರು ಹಾಗಾಗಿ ಹೆಚ್ಚು ಹೊತ್ತು ನಮ್ಮ ಭೇಟಿ ಸಾಗಲಿಲ್ಲ....
ಇದಾದ ಮೇಲೆ ಚಕ್ರವರ್ತಿಯವರು ತಮ್ಮ ಜಾದೂ ಶುರು ಮಾಡಿದರು.... ಅವರ ಮಾತನ್ನ ಕೇಳೋದಂದರೆ ನಮ್ಮೊಳಗೆ ದೇಶಪ್ರೇಮದ ಕಿಡಿ ಹೊತ್ತಿ ಉರಿದಂತೆ.... ಇದನ್ನೆಲ್ಲಾ ಕೇಳುತ್ತಾ ನೋಡುತ್ತಾ ಹೋದಂತೆ ಈ ಎಲ್ಲಾ ಕಾರ್ಯಕ್ರಮಗಳನ್ನ ಮಲ್ಪೆಯ ಜನತೆಗೆ ಒದಗಿಸಿಕೊಟ್ಟಂತಹಾ ನಮೋ ಬ್ರಿಗೇಡ್, ಮಲ್ಪೆ ತಂಡಕ್ಕೆ ಒಂದು ಸೆಲ್ಯೂಟ್ ಹೊಡೆಯಲೇ ಬೇಕಲ್ವಾ ಅಂತನಿಸಿತು... ಕಾರಣ ಅವರ ಸಾಧನೆ ಒಂದೆರಡಲ್ಲ.... ಅವರು ಮಾಡಿದ ಕೆಲವೊಂದು ಕೆಲಸಗಳನ್ನ ಗಮನಿಸಿ.
* 20000 ಲಡ್ಡು ಹಂಚಿಕೆ ವಾಜಪೇಯಿ ಹುಟ್ಟಿದ ದಿನದ ಲೆಕ್ಕದಲ್ಲಿ
* ಸರಿ ಸುಮಾರು ಒಂದು ಲಕ್ಷದವರೆಗಿನ ಬಹುಮಾನ ವಿತರಣೆ ಸ್ಪರ್ಧಾ ವಿಜೇತರಿಗೆ
* ಬಂದವರಿಗೆಲ್ಲಾ ಉಚಿತ ನಮೋ ಚಾಯ್ ವಿತರಣೆ
* ವಾಜಪೇಯಿ ಅವರ ಅಪರೂಪದ ಫೋಟೋ ಒಂದನ್ನು ಹರಾಜು ಹಾಕಿ ಆ ಮೊತ್ತವನ್ನ ಉಡುಪಿಯ ಹೆಲ್ತ್ ಎನ್.ಜಿ.ಓ ಗೆ ಕೊಡುವ ಸಂಕಲ್ಪ ( ಹರಾಜಾದ ಮೊತ್ತ ರೂ.65000)
* ಗಿನ್ನೆಸ್ ದಾಖಲೆಯ ಈಜುಗಾರ " ಗೋಪಾಲ ಖಾರ್ವಿ" ಗೆ ಸನ್ಮಾನ.
ಇಷ್ಟಕ್ಕೂ ಇವೆಲ್ಲವನ್ನೂ ಹೇಗೆ ಮಾಡಿದರಪ್ಪಾ ಎಂದನಿಸಿಕೊಳ್ಲುವಾಗಲೇ ಮಲ್ಪೆ ನಮೋ ಬ್ರಿಗೇಡ್ ತಂಡದ ಯೋಗೀಶ್ ಅವರ ಮಾತು ನೆನಪಾಯಿತು.ಇವೆಲ್ಲವನ್ನೂ ಹಮ್ಮಿಕೊಂಡಿದ್ದ ಅಲ್ಲಿನ ತಂಡದ ಪ್ರಮುಖರಾದ ಯೋಗೀಶ್ ಅವರನ್ನ ಭೇಟಿಯಾಗೋ ಅವಕಾಶ ನನಗೆ ಹದಿನೈದು ದಿನ ಮುಂಚಿತವಾಗಿಯೇ ಸಿಕ್ಕಿತ್ತು... ಕಾರಣ ಅವರಿಗೆ ಮೋದಿ ಬಗೆಗಾಗಿ ಹಾಡು ಬರೆದು ಕೊಡಬೇಕಾಗಿತ್ತು.... ನಾನು ಆತುರಾತುರದಲ್ಲಿ ಅದೇನೋ ಗೀಚಿ ಕೊಟ್ತಿದ್ದೆ.... ಅದನ್ನ ಕೊಡಲು ಹೋಗಿದ್ದಾಗ ಅವರ ಒಂದು ಮಾತು ನನ್ನನ್ನ ಅಚ್ಚರಿಗೊಳಿಸಿತ್ತು.... ಆ ಕಾರ್ಯಕ್ರಮದ ಯೋಜನೆ ಹಾಕಿಕೊಂಡು ಹೆಚ್ಚು ದಿನವಾಗಿರಲಿಲ್ಲವಂತೆ ಬೇಗಬೇಗನೆ ಇದರ ಕುರಿತು ಯೋಚಿಸಿ ಧುಮುಕಿಯೇ ಬಿಟ್ತಿದ್ದರಂತೆ ಅವರು ಹೇಳುತ್ತಾರೆ.... " ಇದೆಲ್ಲಾ ಹೇಗೆ ಆಗುತ್ತೆ ಅನ್ನೋದು ಗೊತ್ತಿಲ್ಲ ಆದರೆ ಮೋದಿ ಅನ್ನೋದು ಬರಿ ವ್ಯಕ್ತಿ ಅಲ್ಲ... ಅದೊಂದು ಶಕ್ತಿ... ಆ ಶಕ್ತಿ ನಮ್ಮ ಕೈಯಲ್ಲಿ ಇದೆಲ್ಲವನ್ನ ಮಾಡಿಸುತ್ತೆ " ಅಂತ. ನಿಜಕ್ಕೂ ಅವರು ಮೋದಿಯನ್ನ ಅರ್ಥೈಸಿಕೊಂಡ ರೀತಿಯನ್ನ ಕಂಡು ನನಗಾಶ್ಚರ್ಯವಾಗಿದ್ದಂತೂ ಸತ್ಯ. ಅವರು ಹೇಳಿದ್ದು ಸತ್ಯವೇ ಇರಬೇಕು ಇಲ್ಲವಾದಲ್ಲಿ ಅಷ್ಟು ಕಮ್ಮಿ ಸಮಯದಲ್ಲಿ ಇಂತ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಸರಿಸುಮಾರು 25000 ಜನರ ಮನಸ್ಸನ್ನ ಗೆಲ್ಲೋದಿಕ್ಕಾಗುತ್ತಾ....? ಹಾಗಾಗಿ ಇವರಿಗೊಂದು ಸೆಲ್ಯೂಟ್ ಕೊಡಲೇ ಬೇಕು. ಅವರೇನೋ ನೀವು ಉತ್ಸವಕ್ಕೆ ಬಂದರೆ ಕರೆಮಾಡಿ ಅಂದಿದ್ದರು ಆದರೆ ನಾನೆ ಅವರ ಓಡಾಟ ನೋಡಿ ಸುಮ್ಮನಾಗಿ ಬಿಟ್ಟೆ.... ಈ ನಡುವೆ ನಾನು ಬರೆದ ಹಾಡಿನ ಸಣ್ಣ ಝುಲಕ್ ಕೇಳಿಸಿಕೊಂಡೆ... ಕಂಚಿನ ಕಂಠದ ಕಲಾವಿದೆ ಅದಕ್ಕೆ ಮತ್ತಷ್ಟು ಮೆರುಗು ಕೊಟ್ಟ ಹಾಗನಿಸಿತ್ತು... ಪೂರ್ತಿ ಕೇಳೋಕೆ ಆಗಲೆ ಇಲ್ಲ... ಕಾರಣ ಮನೆಗೆ ಹೋಗೋಕೆ ತಡವಾಗುತ್ತಲಿತ್ತು.... ಆದರೆ ಕಾರ್ಯಕ್ರಮಗಳೋ ಮುಗಿಯೋ ಹಾಗೆ ಕಾಣಿಸುತ್ತಲೇ ಇರಲಿಲ್ಲ... ಲೇಸರ್ ಶೋ... ಸುಡು ಮದ್ದು ಪ್ರದರ್ಶನ ಅವೆಲ್ಲಾ ಮತ್ತೆ ನಡೆಯಲಿಕ್ಕಿತ್ತು.... ಅವನ್ನೆಲ್ಲಾ ನೋಡಲಾಗೋದಿಲ್ಲ ವಲ್ಲ ಅನ್ನೊ ಭಾರದ ಮನಸ್ಸಿನಿಂದಲೇ ಮನೆ ಕಡೆ ಹೆಜ್ಜೆ ಹಾಕಿದೆ... ಹೋಗುವಾಗ ನನ್ನ ಮನಸ್ಸು ದೇವರಲ್ಲಿ ಪ್ರಾರ್ತಿಸಿದ್ದಿಷ್ಟೇ.... ಒಬ್ಬ ವ್ಯಕ್ತಿಯ ಮೇಲೆ ಜನ ಇಂಥಾ ಪ್ರೀತಿಯನ್ನಟ್ಟಿದ್ದಾರೆ... ಅಷ್ಟೊಂದು ಕನಸು ಕಟ್ಟಿಕೊಂಡಿದ್ದಾರೆ.... ಅವೆಲ್ಲವನ್ನೂ ಸಾಕಾರಗೊಳಿಸಪ್ಪಾ ಅಂತಾನೇ....

No comments:

Post a Comment