Monday 2 November 2015

" ಓ ಮೈ ಗಾಡ್ " ಪುಳಿಯೋಗರೆಯಾದರೆ " ಪಿಕೆ " ಚಿತ್ರಾನ್ನ.



ಅಂತೂ ಇಂತೂ "ಪಿಕೆ" ನೋಡೇ ಬಿಟ್ಟೆ... ಅದೂ ನಮ್ಮ ಯುಪಿ ಸಿಎಂ ಥರಾ.... ಅಯ್ಯೋ ನಾನೇ ಡೌನ್ ಲೋಡ್ ಮಾಡ್ಲಿಲ್ಲಾರೀ... ಯಾರೋ ಮಾಡಿ ಕೊಟ್ಟರು ಬಿಡಿ.... ಆದರೆ ನೋಡಿದ ಕೂಡಲೇ ನನಗನಿಸಿದ್ದು ಮುನ್ನೂರು ಕೋಟಿ ರೂಪಾಯಿ ವಹಿವಾಟು ಮಾಡುವಂಥಾದ್ದು ಅದರಲ್ಲೇನಿದೆ...? ನೀವೊಂದು ವೇಳೆ " ಓ ಮೈ ಗಾಡ್ " ಸಿನಿಮಾ ನೋಡಿದ್ದವರಾಗಿದ್ದಲ್ಲಿ ಬೋರು ಹೊಡೆಸೋದು ಗ್ಯಾರಂಟಿ... ಅದು ಪುಳಿಯೋಗರೆ ಆದರೆ ಇದು ಚಿತ್ರಾನ್ನ.... ಅದರೊಳಗಿರೋ ಹೆಚ್ಚಿನ ವಸ್ತುಗಳೆಲ್ಲಾ ಒಂದೇ, ಆದರೆ ಸ್ವಲ್ಪ ರುಚಿ ಬೇರೆ... ಧಾರ್ಮಿಕ ವಿಚಾರಗಳನ್ನು ಬದಿಗಿರಿಸಿದರೂ ಮುನ್ನಾಭಾಯ್ ಮತ್ತು ತ್ರೀ ಈಡಿಯಟ್ಸ್ ನಂತಹಾ ಸಿನಿಮಾ ಕೊಟ್ಟಂತಹ ನಿರ್ದೇಶಕನಿಂದ ನಮಗೆ ನಿರೀಕ್ಷೆಯ ತುಂಬಾನೇ ಇರುತ್ತದೆಯಲ್ವಾ ಆ ನಿರೀಕ್ಷೆಯೂ ಈಡೇರುವುದಿಲ್ಲ... ಆ ಚಿತ್ರಗಳನ್ನು ಅದೆಷ್ಟು ಬಾರಿಯಾದರೂ ನೋಡಬಹುದು ಆದರೆ ಇದು ಒಮ್ಮೆ ನೋಡಿದರೆ ಮುಗಿಯಿತು. ಮತ್ತೆ ನೋಡಬೇಕೆನಿಸೋದಿಲ್ಲ.
ಧಾರ್ಮಿಕ ವಿಚಾರಗಳೆಲ್ಲವೂ " ಓ ಮೈ ಗಾಡ್ "ನಲ್ಲಿರುವಂಥಾದ್ದೇ... ಮೂರ್ತಿ ಪೂಜೆ, ಅಭಿಷೇಕ ಅನ್ನೋದು ವೇಸ್ಟ್...ದೇವಸ್ಠಾನಗಳೆಲ್ಲಾ ಅಗತ್ಯವಿಲ್ಲ, ಸ್ವಾಮೀಜಿಗಳೆಲ್ಲಾ ಕಳ್ಳರು... ಹೀಗೆ ಎಲ್ಲೋ ನಿಮ್ಮೊಳಗಿನ ಆಸ್ತೀಕನನ್ನು ಕಾಡುತ್ತದೆಯಾದರೂ ಇವೆಲ್ಲಕ್ಕೂ ಓ ಮೈ ಗಾಡ್ ಸಿನಿಮಾದ ವಿಮರ್ಶೆಯಲ್ಲಿ ಉತ್ತರ ಹೇಳಿಯಾಗಿರೋದರಿಂದ ಮತ್ತೆ ಮತ್ತೆ ಅದನ್ನೇ ಹೇಳೋಕೆ ಯಾಕೋ ಬೋರು... ಹಾ ಹೇಳೋರು ಖಂಡಿತಾ ಇಲ್ಲಿ ಎಲ್ಲಾ ಧರ್ಮಗಳ ಹುಳುಕನ್ನೂ ತೋರಿಸಲಾಗಿದೆ ಅನ್ನುತ್ತಾರಾದರೂ ಅವೆಲ್ಲಾ ಎಲೆಯಲ್ಲಿ ಬಡಿಸೋ ಪಲ್ಯ ಉಪ್ಪು ಉಪ್ಪಿನಕಾಯಿ ಥರಾ... ಹೆಚ್ಚಿನ ಪಾಲು ಹಿಂದೂ ಧರ್ಮಕ್ಕೆ ಮೀಸಲು.... ಹೇಗೂ " ಓ ಮೈ ಗಾಡ್ " ನಲ್ಲಿ ಸ್ವಾಮೀಜಿಗಳನ್ನ ಟಾರ್ಗೆಟ್ ಮಾಡಿ ಆಗಿದೆ... ನಮ್ಮ ಸಿನಿಮಾದಲ್ಲಾದರೂ ಉಳಿದ ಧರ್ಮದ ಗುರುಗಳನ್ನ ಕಟಕಟೆಯಲ್ಲಿ ನಿಲ್ಲಿಸೋಣ ಅಂತ ರಾಜ್ ಕುಮಾರ್ ಹಿರಾನಿಗೂ ಅನ್ನಿಸದಿರೋದು ಅಥವಾ ಆಮೀರ್ ಖಾನ್ ಗೂ ಅನ್ನಿಸದಿರೋದು ನಮ್ಮ ದುರಂತ... ಆದರೆ ವಿಚಿತ್ರ ಏನಪ್ಪಾ ಅಂದರೆ ಚಿತ್ರದ ಮೊದಲಿಗೆ ಹೆಸರು ಬೀಳುವಾಗ ಅಲ್ಲಿ ರವಿಶಂಕರ್ ಗುರೂಜಿಗೆ ವಿಶೇಷ ವಂದನೆಗಳನ್ನ ಕೊಡಲಾಗಿದೆ... ನನಗನಿಸುತ್ತೆ ಅದನ್ನ ಮೊದಲು ಯಾಕೆ ಹಾಕಿದ್ದಾರೆ ಅಂದರೆ... ಕೊನೆಯಲ್ಲೇನಾದರೂ ಹಾಕಿದ್ದಾರೆ ಪ್ರೇಕ್ಷಕರೇ.... " ಯೇ ರಾಂಗ್ ನಂಬರ್ ಹೈ..." ಅಂತ ಅಂದು ಬಿಟ್ಟರೆ...??? ಅನ್ನೋ ಕಾರಣಕ್ಕಾಗಿ ಇರಬಹುದು.
ದಯವಿಟ್ಟು ನನ್ನನ್ನು ತಪ್ಪು ತಿಳಿಯಬೇಡಿ. ರವಿಶಂಕರ್ ಗುರೂಜಿಯವರ ಮೇಲೆ ನನಗೆ ಗೌರವ ಇದ್ದೇ ಇದೆ... ಆದರೆ ನಾನವರ ಅನುಯಾಯಿ ಅಥವಾ ಪರಮ ಭಕ್ತ ಅಲ್ಲ. ಹಾಗಂತ ಅವರನ್ನ ಸಂಶಯಿಸುತ್ತೇನೆ ಅಂತಲೂ ಅಲ್ಲ. ಅದನ್ನ ಬದಿಗಿಡೋಣ, ರಾಜ್ ಕುಮಾರ್ ಹಿರಾನಿಯವರನ್ನ ಹೀಗೆಯೇ ಒಂದು ಪ್ರಶ್ನೆ ಕೇಳ ಬಯಸುತ್ತೇನೆ... ನೀವು ನಂಬುವ ಸ್ವಾಮೀಜಿ ಮಾತ್ರ ಒಳ್ಳೆಯವರು ಜನ ನಂಬೋರು ಮಾತ್ರ ಕೆಟ್ಟವರಾ...? ಈ ಹಿಂದೆಯೂ ಹೇಳಿದ್ದೆ... ಧರ್ಮಗುರುಗಳು ಯಾರೇ ಆಗಲಿ ಬೆಳೆಯುತ್ತಿದ್ದಾರೆಂದರೆ ಅಲ್ಲಿಗೆ ಬರೋ ಭಕ್ತರಿಗೆ ಏನಾದರೂ ಲಾಭ ಆಗಿದ್ದರಲೇಬೇಕು... ನಮ್ಮವರೆಲ್ಲಾ ಈಗ ಲಾಭದ ಲೆಕ್ಕಾಚಾರವನ್ನೇ ಹಾಕೋದು ಸ್ವಾಮೀ... ( ಈಗ ಹಿರಾನಿ ಸಾಹೇಬ್ರನ್ನೇ ನೋಡಿ... ಯಾಕೆ ಇಂಥಾ ಸಬ್ಜೆಕ್ಟನ್ನೇ ಆಯ್ಕೆ ಮಾಡಿಕೊಂಡ್ರು... ಲಾಭಕ್ಕಾಗೇ ಅಲ್ವಾ.... ಬರೋಬ್ಬರಿ ಮುನ್ನೂರು ಕೋಟಿ ಗಳಿಸಿಕೊಂಡ್ರು ನೋಡಿ...) ಹಾಗಾಗಿ ಒಬ್ಬ ಧರ್ಮಗುರುಗಳಲ್ಲಿ ಏನೇನೂ ವರ್ಚಸ್ಸಿಲ್ಲ ಅನ್ನುವವರ ಕಡೆ ಯಾರೂ ಹೋಗಲ್ಲ. ಭಕ್ತರು ಒಂದು ವೇಳೆ ಹೋಗುತ್ತಾರೆಂದರೆ ಅವರಿಗೇನೋ ಸಿಕ್ಕಿದೆ ಅಂತಾನೇ ಅಲ್ವಾ...ಕನಿಷ್ಠ ಮನಃಶಾಂತಿಯಾದರೂ ಖಂಡಿತಾ ಸಿಕ್ಕಿರುತ್ತೆ. ಇದರಿಂದಾಗಿ ಸಮಾಜಕ್ಕೇನು ನಷ್ಟವಾಯಿತು...? ಸಮಾಜಕ್ಕೆ ನಷ್ಟವನ್ನುಂಟು ಮಾಡುತ್ತಿರೋದು ಜನರ ಆಸ್ತಿಕತೆ ಅಲ್ಲ... ಅದು ಮತಾಂಧತೆ ಅಲ್ವಾ..ಆದರೆ ನಿರ್ದೇಶಕರು ಅಂಥಾ ಮತಾಂಧತೆಯ ಕುರಿತು ಇಡಿಯ ಸಿನಿಮಾದಲ್ಲಿ ಏನೇನೂ ಹೇಳೋದಿಲ್ಲ. ಮತಾಂದತೆಗಿಂತಲೂ ಸ್ವಾಮೀಜಿಗಳ ಬಣ್ಣ ಬಯಲು ಮಾಡೋದರಲ್ಲೇ ಲಾಭ ಇದೆ ಅಂತ ನಿರ್ದೇಶಕರು ಯೋಚಿಸೋದಾದ್ರೆ ಸ್ವಾಮೀಜಿಗಳು ಕೂಡ ಲಾಭದ ಬಗ್ಗೆ ಯಾಕೆ ಯೋಚಿಸಬಾರದು... ಸ್ವಾಮೀಜಿಗಳ ಕೆಲಸ ಅದಲ್ಲ ಅನ್ನೋರಿಗೆ ನಾನೂ ಕೇಳಬಲ್ಲೆ... ಒಬ್ಬ ನಿರ್ದೇಶಕನಾಗಿ ಸಮಾಜಕ್ಕೆ ಕಂಟಕಪ್ರಾಯವಾಗಿರೋದರ ಕುರಿತು ಹೇಳದೆ ಹಾನಿಕರವಲ್ಲದ್ದರ ಬಗ್ಗೆ ಇವರ್ಯಾಕೆ ಹೇಳುತ್ತಾರೆ..?
ಮನೋರಂಜನೆಗಾಗಿ ಮಾಡಿರುವಂಥಾದ್ದು ಅಂದರೂ ಧಾರ್ಮಿಕ ವಿಚಾರಗಳು ಈ ಕಥೆಯ ಮೂಲ ಸತ್ವ ಆಗಿರುವುದರಿಂದ ಗೊಂದಲಗಳು ಕಾಣಿಸಿಯೇ ಕಾಣಿಸುತ್ತದೆ. ಉದಾಹರಣೆಗೆ ಹಿಂದೂ ದೇವಸ್ಥಾನದಲ್ಲಿ ಕೆನ್ನೆಗೆ ಹೊಡೆಯದಂತೆ ಮಾಡಲು ಕೆನ್ನೆಗೆ ಹಿಂದೂ ದೇವರ ಫೋಟೋ ಅಂಟಿಸಿಕೊಳ್ಳಬೇಕು ಅನ್ನೋ ಬುದ್ದಿಶಕ್ತಿ ಇರುವಾತನಿಗೆ ಇನ್ನುಳಿದ ಆಚರಣೆಗಳನ್ನೂ ಸಹ ಆಯಾಯಾ ದೇವಾಲಯಗಳಲ್ಲೇ ಆಚರಿಸಬೇಕು ಅನ್ನೋದು ಗೊತ್ತಾಗೋದಿಲ್ಲ. ಇರಲಿ ಬಿಡಿ. ಇಂಥಾದ್ದು ಹುಡುಕಿದರೆ ನಾನು ಕೋಮುವಾದಿ ಅಂತನಿಸಬೇಕಾಗುತ್ತೆ. ಬೇಸರವಾಗೋದು ಅದಲ್ಲ ಆಸ್ತಿಕತೆಯೇ ಭಾರತದ ಮೂಲ ಜೀವಾಳವಾಗಿರುವಾಗ ನಾಸ್ತಿಕತೆಯ ವೈಭವೀಕರಣ ಆಗುತ್ತಲ್ಲ. ಹೇಗೂ ಯುವ ಜನತೆ ಹೆಚ್ಚಾಗಿ ದೇವಸ್ಥಾನಗಳ ಬಳಿ ಸುಳಿಯೋದಿಲ್ಲ ಅಂಥವರಿಗೆಲ್ಲಾ ಇದೊಂದು ನೆಪ ಆಗುತ್ತೆ ಅಷ್ಟೇ. ಈ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಅನ್ನುವುದಕ್ಕಿಂತಲೂ ಆಸ್ತೀಕ ಭಾವನೆಗೆ ಧಕ್ಕೆಯಂತೂ ಇದ್ದೇ ಇದೆ. ಈಗಿನ ಕಾಲಕ್ಕೆ ತಕ್ಕಂತೆ ಯೋಚಿಸಬೇಕು ಅನ್ನೋರಿಗೆಲ್ಲಾ ಇದರಲ್ಲಿ ಅಂಥಾದ್ದೇನಿಲ್ಲ ಅನ್ನಿಸಬಹುದು. ಅಥವಾ ಇವರು ಹೇಳಿದ ಕೂಡಲೇ ಭಾರತದಲ್ಲಿ ಹಿಂದುತ್ವ ನಶಿಸುತ್ತೆ ಅಂತ ನಾನು ಹೇಳುತ್ತಿಲ್ಲ. ಹಾಗೇನಾದರೂ ಆಗುವಂಥಿದ್ದರೆ ಓ ಮೈ ಗಾಡ್ ಸಿನಿಮಾ ಬಂದಾಗಲೇ ಆಗಿರುತಿತ್ತು.
ಹಾಗಂತ ಈ ಚಿತ್ರದಲ್ಲೆಲ್ಲಾ ಹಿಂದೂ ವಿರೋಧಿ ಭಾವನೆಗಳೇ ತುಂಬಿವೆ ಅಂತಲೂ ನಾನು ಹೇಳೋಲ್ಲ. ಕೆಲವೊಂದು ಒಳ್ಳೆಯ ಪ್ರಶ್ನೆಗಳನ್ನ ಕೈಗೆತ್ತಿಕೊಂಡಿದ್ದಾರೆ. ಉದಾಹರಣೆಗೆ ಯಾರು ಯಾವ ಧರ್ಮದವ ಅಂತ ಹೇಗೆ ಗೊತ್ತಾಗುತ್ತೆ...? ಅನ್ನೋಕೆ ಯಾವುದಾದರೂ ಗುರುತಿದೆಯಾ ಅನ್ನೋ ಪ್ರಶ್ನೆ, ನಿಜಕ್ಕೂ ಒಳ್ಳೆಯ ಪ್ರಶ್ನೆ... ಆದರೆ ಕೇಳುವಂತವರು ಯಾರು ಅನ್ನೋದು ಮುಖ್ಯ ಅಲ್ಲವೇ...? ನನ್ನ ಬಳಿ ಈಗ ಅದರ ಫೋಟೋ ಇಲ್ಲ ಆದರೆ ಹಿಂದೊಮ್ಮೆ ಓದಿದ್ದೆ... ಅಮೀರ್ ಖಾನ್ ಅವರು ನೀಡಿದ್ದ ಹೇಳಿಕೆ... " ನನ್ನ ಪತ್ನಿ ಕಿರಣ್ ರಾವ್ ಹಿಂದೂವಾಗಿದ್ದರೂ ನನ್ನ ಮಕ್ಕಳು ಮುಸ್ಲಿಮರಾಗೇ ಇರುತ್ತಾರೆ ಅಂತ. " ಈಗ ಅದೇ ಪ್ರಶ್ನೆಯನ್ನ ನಾನು ಅಮೀರ್ ಖಾನ್ ರಿಗೆ ಕೇಳಿದರೆ ಹೇಗಿರುತ್ತೆ... ಎಲ್ಲಿದೆ ಸ್ವಾಮಿ ಆ ಧರ್ಮದ ಗುರುತು ಅಂತ. ನನಗೆ ಅವರಿಂದ ಉತ್ತರ ಸಿಕ್ಕೀತೋ... ಇನ್ನು ಅವರು ತಮ್ಮ ಆರಾಧನಾಲಯಕ್ಕೆ ಹೋಗಿರುವ ಚಿತ್ರಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ ಬಿಡಿ... ಅದನ್ನು ಚರ್ಚಿಸೋದು ಬೇಡ.. ನಿರ್ದೇಶಕರದ್ದು ಹಾಗೆಯೇ ತಾವು ಸ್ವಾಮೀಜಿಗಳ ಆಶೀರ್ವಾದ ಪಡೆದು ಸಿನಿಮಾ ಮಾಡುತ್ತಾರೆ ಆದರೆ ಜನರಿಗೆ ಸ್ವಾಮೀಜಿಗಳೆಲ್ಲಾ " ದೇವರನ್ನ ರಾಂಗ್ ಕನೆಕ್ಟ್ " ಮಾಡೋರು ಅನ್ನುವಾಗ ನಗು ಬರೋದಿಲ್ಲವಾ....ಹೇಳುವುದು ಒಂದು ಮಾಡುವುದು ಇನ್ನೊಂದು ಅಂತಾಗುತ್ತೆ.
ಇನ್ನೊಂದು ಕಿವಿಮಾತು ಭಯ ಇದ್ದೋರು ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ ಅನ್ನೋದು ನಂಬತಕ್ಕ ಮಾತಲ್ಲ. ಮಂದಿರಕ್ಕೆ ಹೋಗೋದರ ಹಿಂದೆ ಶತಮಾನಗಳ ನಂಬಿಕೆ ಇದೆ ಶ್ರದ್ಧೆ ಇದೆ. ಮಂದಿರಗಳೂ ಜನರಿಗೆ ಶಕ್ತಿ ಕೊಡುವ ಕೇಂದ್ರ. ಜನರನ್ನ ಸುಲಿಯೋ ಕೇಂದ್ರವಲ್ಲ. ಅದು ಎಲ್ಲೂ ಸೇವೆಗಳನ್ನ ಖಡ್ಡಾಯಗೊಳಿಸಿಲ್ಲ. ಮಂದಿರಗಳ ಬಗ್ಗೆ ಅಪಸ್ವರ ಎತ್ತುವುದಕ್ಕೂ ಮುನ್ನ ದಕ್ಷಿಣ ಭಾರತದ ದೇವಾಲಯಗಳತ್ತ ಒಮ್ಮೆ ಬಂದು ನೋಡಲಿ... " ನಿತ್ಯ ಅನ್ನ ಸಂತರ್ಪಣೆಯ " ಮೂಲಕ ಅದೆಷ್ಟೋ ಲಕ್ಷ ಜನರ ಹಸಿವನ್ನು ನೀಗುವುದು ಇದೇ ಮಂದಿರಗಳು ಅಂತ. ಮಠಗಳ ಸ್ವಾಮೀಜಿಗಳು ಅದೆಷ್ಟು ಜನರಿಗೆ ವಿದ್ಯಾದಾನ ಮಾಡುತ್ತೆ ಅಂತ. ವಾಸ್ತವದಲ್ಲಿ ಪಿಕೆ ಅಥವಾ ಓ ಮೈ ಗಾಡ್ ನ ಕಾಂಜಿಯ ಸ್ವಾರ್ಥ ಜನರ ಕಣ್ಣಿಗೆ ಕಾಣಿಸುವುದೇ ಇಲ್ಲ . ಇಲ್ಲಿ ಪಿಕೆಗೆ ತನ್ನ ಗ್ರಹಕ್ಕೆ ಮರಳಿ ಹೋಗಬೇಕು ಅನ್ನೋ ಸ್ವಾರ್ಥ ಕಾಂಜಿಗೆ ಕಳೆದುಹೋದ ಆಸ್ತಿ ಪಡೆದುಕೊಳ್ಳೋ ಸ್ವಾರ್ಥ. ಭಾರತ ದೇಶದ ಮೂಲ ಧರ್ಮ ಹೇಳಿಕೊಡೋದು ಸ್ವಾರ್ಥ ರಹಿತನಾಗಿರು ಅಂತಾನೇ ಅಲ್ವಾ.
ಈ ಧಾರ್ಮಿಕತೆಯನ್ನೆಲ್ಲಾ ಬಿಟ್ಟು ಸಿನಿಮಾ ಬಗ್ಗೆ ಹೇಳೋಕೆ ಹೊರಟರೆ ಏನೇನೂ ಇಲ್ಲ ಬರೀ ಸಪ್ಪೆ ಸಪ್ಪೆ.... ಅಮೀರ್ ಖಾನ್ ನಟನೆ ಅದ್ಭುತ ಅಂತೇನಿಲ್ಲ... ಅನುಷ್ಕಾ ಶರ್ಮಾರ ಅಗಲ ಬಾಯಿಯನ್ನ ನೋಡೋಕೆ ಬಹಳಾನೇ ಕಷ್ಟಪಡಬೇಕಾಗುತ್ತದೆ. ಮತ್ತೇನುಂಟು ಸರ್ಫರಾಜ್ ಅನ್ನೋ ಪಾತ್ರದಾರಿಯ ನಟನೆ ಖುಷಿ ಕೊಡುತ್ತದೆಯಾದರೂ ಯಾಕೋ ಈ ಪಾಕಿಸ್ಥಾನಿಗಳನ್ನ ಒಳ್ಳೆಯವರು ಅಂತ ನಂಬೋಕೆ ಬಹಳಾನೆ ಹಿಂಸೆಯಾಗುತ್ತೆ ರೀ... ಇದಕ್ಕೆ ಇತ್ತೀಚೆಗಷ್ಟೇ ಪೇಶಾವರದಲ್ಲಿ ಮಕ್ಕಳನ್ನ ಕಳಕೊಂಡ ಪೋಷಕರೊಬ್ಬರು ಹೇಳಿದ ಮಾತೂ ಕಾರಣ. ಅವರು ಹೇಳಿದ್ದರು... ನಮ್ಮ ಮಕ್ಕಳನ್ನ ಕೊಲ್ಲೋ ಬದಲು ಭಾರತದ ಹಿಂದೂ ಮಕ್ಕಳನ್ನಾದರೂ ಕೊಲ್ಲಬಹುದಿತ್ತು ಅಂತ.. ಇಂಥವರನ್ನೆಲ್ಲಾ ಒಳ್ಲೆಯವರನ್ನಾಗಿ ತೋರಿಸೋದು ಬೇಕಾ...? ಹಾಗಂತ ಇಲ್ಲವೇ ಇಲ್ಲ ಅಂದರೂ ತಪ್ಪಾಗುತ್ತದೆ. ಅವ ಒಬ್ಬ ಇದ್ದ ಅಂತಾನೆ ಅಂದುಕೊಂಡರಾಯಿತು ಬಿಡಿ. ಕೊನೆಗೆ ಏಲಿಯನ್ಸ್ ಗೂ ಸುಳ್ಳು ಹೇಳೋಕೆ ಕಲಿಸಿಕೊಡುವಾಗ ಮಾತ್ರ ಅಪ್ಪಟ ಬಾಲಿವುಡ್ ತನ ಪ್ರದರ್ಶಿಸುತ್ತಾರೆ ನಿರ್ದೇಶಕ ಮಹಾಶಯರು. ಹೀಗಿದೆ ನಾ ಕಂಡ ಪಿಕೆ.
ಕೊನೆಯದಾಗಿ... ನೀವು ಆಸ್ತಿಕರಾಗಿದ್ದಲ್ಲಿ ಸ್ವಲ್ಪ ಬೇಸರವಾದರೂ ಒಂದಂತೂ ಸತ್ಯ ಇಂತಹಾ ನೂರು ಸಿನಿಮಾ ಬಂದರೂ ಅಷ್ಟು ಸುಲಭವಾಗಿ ನಮ್ಮೊಳಗಿನ ಆಸ್ತಿಕತೆಯನ್ನ ಕೊನೆಗಾಣಿಸೋಕೆ ಆಗೋಲ್ಲ ರೀ ಇವರಿಗೆ... ಯಾಕೆಂದರೆ ಅದೆಷ್ಟೋ ಋಷಿ ಮುನಿಗಳ ತಪಶ್ಶಕ್ತಿ ಈ ನೆಲದಲ್ಲಿದೆ ಅಲ್ವಾ...

No comments:

Post a Comment