Saturday, 16 July 2016

ದೂಷಿಸುತ್ತಿರೋರೂ ನಮ್ಮವರೇ ಆದರೂ ನಾನು ಚಕ್ರವರ್ತಿಯವರ ಪರ...... ಯಾಕಂದರೆ...


..
ನಾಲ್ಕೈದು ದಿನಗಳಿಂದೀಚೆ ಚಕ್ರವರ್ತಿ ಸೂಲಿಬೆಲೆಯವರ ಕುರಿತಾಗಿ ಹಲವು ಅಪಸ್ವರಗಳನ್ನ ಕೇಳುತ್ತಿದ್ದೇನೆ. ನಮ್ಮವರೆನಿಸಿಕೊಂಡವರಿಂದಲೇ ಇಂತಹಾ ಮಾತುಗಳು ಕೇಳಿಬರುತ್ತಿರುವುದು ಕಂಡಾಗ ಬಹಳ ಬೇಸರವೆನಿಸುತ್ತದೆ. ನಾನಿಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಅಭಿಮಾನಿ ಅಂತನಿಸಿಕೊಂಡು ನನ್ನ ಅನಿಸಿಕೆಯನ್ನ ಹೇಳಿಕೊಳ್ಳುತ್ತಿಲ್ಲ ನಮ್ಮವರ ನಡುವೆಯೇ ಉಂಟಾಗುತ್ತಿರುವ ಭಿನ್ನಾಭಿಪ್ರಾಯವನ್ನ ದೂರ ಮಾಡಿಸುವ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನ. ಇಷ್ಟಾಗಿಯೂ ನಮ್ಮದೇ ಸರಿ ನಾವೇ ಸರಿ ಅನ್ನುವವರ ಬಗ್ಗೆ ನನ್ನದೇನೂ ತಕರಾರಿಲ್ಲ. ಅವರೇನೂ ಹಠಾತ್ ಆಗಿ ನನ್ನ ವಿರೋಧಿಗಳಾಗೋದಿಲ್ಲ.
ಇಷ್ಟಕ್ಕೂ ಈ ರೀತಿಯ ಅಪಸ್ವರಗಳು ಏಳೋಕೆ ಶುರುವಾಗಿದ್ದು " ಅಂಬೆಯ ಕೂಗು " ಅನ್ನೋ ಕಾರ್ಯಕ್ರಮದಿಂದ ಅನ್ನೋದು ನನ್ನ ಊಹೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಅಂಬೆಯ ಕೂಗು ಕಾರ್ಯಕ್ರಮ ನಡೆದಾಗ ನಾನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಿಜ ನನ್ನ ಹಲವು ಮಿತ್ರರು ಹೇಳುವಂತೆ ಅಲ್ಲೂ ಫಯಾಜ್ ಖಾನ್ ಅವರು " ಟಿಪ್ಪು ಸುಲ್ತಾನ್ ಗೋಹತ್ಯೆ ನಿಷೇಧ ಮಾಡಿದ್ದ " ಅಂದಿದ್ದರು. ಆದರೆ ಯಾಕೆ ಅವರು ಆ ಮಾತನ್ನಾಡಿದರು ಅಂತ ಸ್ವಲ್ಪ ವಿವೇಚಿಸಿದರೆ ನಮಗೆ ಗೊತ್ತಾಗುತ್ತದೆ... ಟಿಪ್ಪುವಿನ ಅಭಿಮಾನಿಗಳು ಅಂತ ಹೇಳಿಕೊಳ್ಳುವವರಿಗೆ ಗೋಹತ್ಯೆಯ ವಿರುದ್ಧವಾಗಿ ನಿಲ್ಲೋದು ಮುಜುಗರ ತಂದೀತೋ ಇಲ್ಲವೋ....??? ಒಂದು ಕಡೆ ಟಿಪ್ಪುವನ್ನು ಅಭಿನಂದಿಸಿದರೆ ಗೋಹತ್ಯೆಯನ್ನ ನಿಲ್ಲಿಸಬೇಕಾಗೋ ಇಕ್ಕಟ್ಟಿನ ಸ್ಥಿತಿಗೆ ಸಿಲುಕಬೇಕಾಗುತ್ತದೆ ತಾನೇ... ಅಷ್ಟಕ್ಕೂ ಫಯಾಜ್ ಖಾನ್ ತಮ್ಮ ಮಾತಿನಲ್ಲಿ ಎಲ್ಲೂ ಟಿಪ್ಪೂ ಸುಲ್ತಾನನನ್ನ ವೈಭವೀಕರಿಸಿಲ್ಲ. ಅಲ್ಲಿ ಕೇವಲ ಅವರ ಹೆಸರು ಉಲ್ಲೇಖಗೊಂಡಿತು. ಟಿಪ್ಪು ಕುರಿತಾದ ಚರ್ಚೆಯಲ್ಲೂ ಹಲವರು ಆತ ಶೃಂಗೇರಿಯ ದೇವಳಕ್ಕೆ ಆರ್ಥಿಕ ಸಹಾಯ ಮಾಡಿದ್ದ ಅನ್ನುವಾಗ ನಮಗದನ್ನು ತಳ್ಳಿಹಾಕಲು ಸಾಧ್ಯವಿದೆಯೇ...? ಹಾಗಂತ ನಾನಾತನ ಪರ ಅನ್ನುವುದಿಲ್ಲ. ಆತ ಒಂದೆರಡು ಒಳ್ಳೆಯ ಕೆಲಸ ಮಾಡಿದ್ದ ಎಂದ ಕೂಡಲೇ ಆತ ಉತ್ತಮ ವ್ಯಕ್ತಿ ಅಂತಾಗುವುದಿಲ್ಲ. ಒಟ್ಟಾರೆ ಆತನ ಜೀವನದಲ್ಲಿನ ಸರಿ ತಪ್ಪುಗಳನ್ನ ತೂಗಿ ನೋಡಬೇಕು ಅಲ್ವೇ.. ಸ್ವಾಮಿ ವಿವೇಕಾನಂದರೂ ನಿಮ್ಮೆಲ್ಲಾ ದೇವರನ್ನು ಮೂಲೆಗೆಸೆಯಿರಿ ಅಂದಿದ್ದರು... ಇದು ಪೂರ್ತಿ ಹೇಳಿಕೆಯಲ್ಲದಿರಬಹುದು ಆದರೆ ಇಷ್ಟನ್ನೆ ತೆಗೆದುಕೊಂಡು ಆತ ಹಿಂದೂ ದ್ವೇಷಿ ಅಂತ ಹೇಳಿದರೆ ಹೇಗೆ....? (ಅಂತಹಾ ಕೀಳು ಯೋಚನೆ ಎಡಪಂಥೀಯರಿಗಷ್ಟೇ ಇರಲಿ .) ಅದೇ ರೀತಿ ಫಯಾಜ್ ಖಾನ್ ಟಿಪ್ಪು ಸುಲ್ತಾನ ಗೋ ಹತ್ಯೆ ನಿಷೇಧಿಸಿದ್ದ ಅಂದ ಮಾತ್ರಕ್ಕೆ ಫಯಾಜ್ ಖಾನ್ ಅವರು ಟಿಪ್ಪು ಪರ ಅಂತ ತಿಳಿದುಕೊಳ್ಳಬೇಕಾಗಿಲ್ಲ. ಅವರ ಕಳಕಳಿ ಇದ್ದದ್ದು ಗೋಹತ್ಯೆಯ ಮೇಲೆಯೇ.
ಫಯಾಜ್ ಖಾನ್ ಅವರ ಮಾತುಗಳನ್ನ ನೇರವಾಗಿ ನಾನೇ ಕೇಳಿರುವುದರಿಂದ, ನಾನು ಹೇಳಬಲ್ಲೆ ಭಾರತದಲ್ಲಿ ಮುಸ್ಲಿಂರಾಗಿ ಇರಬೇಕಾದಂತವರು ಯಾರೆಂದರೆ ಅದು ಫಯಾಜ್ ಖಾನ್ ನಂತವರು. ಯಾರೇ ಆಗಲಿ ಅವರ ಮಾತು ಕೇಳಿದವರನ್ನ ಕೇಳಿ ನೋಡಿ.... ಭಾಷಣದ ಕೊನೆಯಲ್ಲಿ " ಮಾ ಜಗದಂಬಾ ಕೀ.... ಜೈ " ಅನ್ನೋ ಜೈಕಾರ ಹಾಕುವಾಗಿನ ಅವರ ಸ್ವರ ತರಂಗದಲ್ಲಿ ಯಾವುದೇ ನಾಟಕೀಯತೆ ಕಾಣಿಸುವುದಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು ಅನ್ನುವುದನ್ನ ಅವರು ಯಾವುದೇ ಭಯವಿಲ್ಲದೇ ಹೇಳುತ್ತಾರೆ. ಖಂಡ ತುಂಡವಾಗಿ ಹೇಳುತ್ತಾರೆ. ಅಷ್ಟಕ್ಕೂ ಯುವಾ ಬ್ರಿಗೇಡ್ ತನ್ನ ಸದ್ಭಾವನಾ ಅನ್ನೋ ಚಿಂತನೆಯಡಿಯಲ್ಲಿ ರಾಷ್ಟ್ರಭಕ್ತ ಮುಸ್ಲಿಂರನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನ ಮಾಡಿದರೆ ತಪ್ಪೇನು...? ಇದು ಒಂದು ವೇದಿಕೆಯಷ್ಟೇ... ಇಂದಿನ ಪರಿಸ್ಥಿತಿಯಲ್ಲಿ ಮುಸ್ಲಿಮರೆಲ್ಲರನ್ನೂ ಈ ದೇಶದಿಂದ ಹೊರಗಟ್ಟುವ ಮಾತಾಡಿದರೆ ಅದು ಸಾಧ್ಯವಾಗದ ಮಾತು ಮತ್ತು ಮಾಡಲೂ ಕೂಡಾ ಬಾರದು ರಾಷ್ಟ್ರಭಕ್ತರು ಯಾವ ಸಮುದಾಯದವರೇ ಆಗಿರಲಿ ಅವರು ಹಿಂದೂಗಳೇ ತಾನೇ.... ಇದೇ ತಾನೇ ಹಿಂದುತ್ವ. ಇದನ್ನೇ ಅರ್ಥ ಮಾಡಿಕೊಳ್ಳದಿದ್ದರೆ ನಾವು ನಿಜವಾದ ಹಿಂದೂಗಳು ಅನ್ನುತ್ತಾ ಎದೆತಟ್ಟುವುದು ಕೂಡಾ ಹಾಸ್ಯಾಸ್ಪದವಾಗುತ್ತದೆ ತಾನೇ. ಅಬ್ದುಲ್ ಕಲಾಂ ರನ್ನು ನಾವ್ಯಾವತ್ತೂ ಮುಸ್ಲಿಮನಾಗಿ ನೋಡಲೇ ಇಲ್ಲ ತಾನೇ.
ಇನ್ನು ಚಕ್ರವರ್ತಿಯವರು ಜಾತ್ಯಾತೀತರಾಗುತ್ತಿದ್ದಾರೆ ಅನ್ನೋ ಟೀಕೆ.... ಹೀಗೆ ಟೀಕಿಸುತ್ತಿರುವವರಿಗೆಲ್ಲಾ ಒಂದು ಮಾತನ್ನ ಹೇಳ ಬಯಸುತ್ತೇನೆ... ಮಂಗಳೂರಿನಲ್ಲಿ ನಡೆದ ಅಂಬೆಯ ಕೂಗು ಕಾರ್ಯಕ್ರಮದಲ್ಲಿ ಚಕ್ರವರ್ತಿಯವರು ಮಾತನಾಡುತ್ತಾ ಹೇಳಿದ ಸಾಲುಗಳು.... " ನಾವು ಹೆಚ್ಚೇನೂ ಕೇಳೋದಿಲ್ಲ... ಅಯೋಧ್ಯೆ ಮತ್ತು ಮಥುರಾ ಮತ್ತು ಕಾಶಿ... ಇವುಗಳನ್ನ ಬಿಟ್ಟುಕೊಡಿ " ಅಂತ. ದೇಶದೆಲ್ಲೆಡೆ ಅಯೋಧ್ಯೆಯ ವಿಷಯ ಮಾತ್ರವಿದ್ದಾಗಲೂ ಚಕ್ರವರ್ತಿಯವರು ಮಥುರಾ ಮತ್ತು ಕಾಶಿಯನ್ನೂ ಕೇಳಿದ್ದು ಅವರ ಧರ್ಮ ಭ್ರಷ್ಟತೆಯನ್ನ ತೋರಿಸುತ್ತದೆಯೇ...? ನಿಜಕ್ಕೂ ನಾವಿಲ್ಲಿ ಜಾತ್ಯಾತೀತತೆಯ ಅರ್ಥ ತಿಳಿದುಕೊಳ್ಳಬೇಕು.. ಮುಸ್ಲಿಮರ ಓಲೈಕೆಯನ್ನ ಜಾತ್ಯಾತೀತತೆಗೆ ಹೋಲಿಸುವುದಾದರೆ ಅಂತಹಾ ಓಲೈಕೆ ಚಕ್ರವರ್ತಿಯವರು ಮಾಡುತ್ತಿಲ್ಲ.... ಯಾವ ಧರ್ಮ ಗ್ರಂಥದ ಆಧಾರವನ್ನಿಟ್ಟು ಗೋ ಹತ್ಯೆ ನಮ್ಮ ಹಕ್ಕು ಅಂತ ಮುಸ್ಲಿಮರು ಹೇಳುತ್ತಾರೋ ಅದೇ ಧರ್ಮ ಗ್ರಂಥ ಓದಿಕೊಂಡವರಿಂದ ಹಾಗೇನೂ ಇಲ್ಲ ಅಂತ ಹೇಳಿಸುವ ಕೆಲಸ ಚಕ್ರವರ್ತಿಯವರು ಮಾಡುತ್ತಿದ್ದಾರೆ ಅಷ್ಟೇ. ಅಷ್ಟಕ್ಕೇ ಯಾಕೆ ಅವರನ್ನ ಧರ್ಮ ಭ್ರಷ್ಟರನ್ನಾಗಿಸೋದು...?
ಮೊನ್ನೆಯವರೆಗೂ ನಮ್ಮ ಪಾಲಿಗೆ ಆದರ್ಶ ವ್ಯಕ್ತಿಯಾಗಿದ್ದವರು ಹಠಾತ್ ಆಗಿ ಯಾಕೆ ನಮಗೆ ಕೇವಲ ಭಾಷಣಕಾರ ಅಂತನಿಸೋಕೆ ಶುರುವಾಗುತ್ತದೆ...? ನಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ವ್ಯವಹರಿಸುತ್ತಿಲ್ಲ ಅಂತಾನಾ... ಒಮ್ಮೆ ನಾವು ಅವರನ್ನೂ ನಮ್ಮನ್ನೂ ತುಲನೆ ಮಾಡಿಕೊಳ್ಳೋಣ... ಭಾಷಣವೇ ಮಾಡೋದು ಅಂತಿರಲಿ ಅವರಿಂದಾಗಿ ರಾಷ್ಟ್ರಭಕ್ತಿ ಹೆಚ್ಚಿಸಿಕೊಂಡವರ ಸಂಖ್ಯೆ ಎಷ್ಟಿದ್ದೀತು.... ನಮ್ಮ ಸ್ಟೇಟಸ್ ಗಳಿಂದ ರಾಷ್ಟ್ರಭಕ್ತಿ ಹೆಚ್ಚಿಸಿದವರ ಸಂಖ್ಯೆ ಎಷ್ಟಿದ್ದೀತು...? ಅವರು ಕೇವಲ ಭಾಷಣ ಬಿಗಿಯೋಕಷ್ಟೇ ಅಂತಾದರೆ ನಾವುಗಳು ಕೇವಲ ಸ್ಟೇಟಸ್ ಹಾಕೋಕಷ್ಟೇ ಅಂತಾಗೋದಿಲ್ಲವೇ.... ಅವರು ತಮ್ಮ ಮಾತಿನಿಂದ ಹಲವು ಯುವಜನರನ್ನ ರಾಷ್ಟ್ರ ಚಿಂತನೆ ಮಾಡುವಂತೆ ಮಾಡಿದ್ದಾರೆ ಅನ್ನೋದು ನಾವು ಯಾವತ್ತು ಮರೆಯಬಾರದು. ನಮ್ಮ ಈ ಅಸಮಾಧಾನದಿಂದಾಗಿ ನಷ್ಟ ಆಗುತ್ತಿರೋದು ಹಿಂದುತ್ವಕ್ಕೇ ತಾನೇ. ಹಾಗಿರುವಾಗ ನಾವ್ಯಾಕೆ ಅವರ ಸಧ್ಬಾವನಾ ಹೆಜ್ಜೆಯನ್ನೆ ಸಕಾರಾತ್ಮಕವಾಗಿ ನೋಡಬಾರದು.... ರಾಷ್ಟ್ರ‍ೀಯ ಸ್ವಯಂ ಸೇವಕ ಸಂಘವೂ ಕೂಡಾ " ರಾಷ್ಟ್ರ‍ೀಯ ಮುಸ್ಲಿಂ ಮಂಚ್ " ಅನ್ನೋ ವಿಭಾಗವನ್ನೇ ಮಾಡಿಕೊಂಡಿದೆ, ಹಾಗಿದ್ದರೆ ಸಂಘವೂ ಸೋ ಕಾಲ್ಡ್ ಸೆಕ್ಯುಲರ್ ಆಗುತ್ತದೆಯೇ....?
ಇನ್ನೂ ಕೆಲವರ ತರ್ಕ ಯೋಧ ನಿರಂಜನ್ ಅವರ ಅಂತ್ಯ ಸಂಸ್ಕಾರ ದಿನವೇ ಮಾತುಕತೆಯ ಅವಶ್ಯಕತೆ ಇತ್ತೇ...? ಇದು ಅತ್ಯಂತ ಸರಳವಾದ ವಿಚಾರ ಫಯಾಜ್ ಖಾನ್ ಅವರು ದಕ್ಷಿಣ ಭಾರತದ ಯಾತ್ರೆಯಲ್ಲಿರುವಾಗ ಹಮ್ಮಿಕೊಂಡ ಕಾರ್ಯಕ್ರಮಗಳು ಅವುಗಳ ನಿಗದಿತ ದಿನಾಂಕದಂತೆ ನಡೆದಿದೆ... ಅಷ್ಟಕ್ಕೂ ಇವರು ಮಾತುಕತೆ ನಡೆಸಿದ್ದು ಯೋಧ ನಿರಂಜನ್ ಸಾವಿಗೆ ಕಾರಣರಾದ ಭಯೋತ್ಪಾದಕರ ಜೊತೆ ಅಲ್ಲವಲ್ಲ.... ನಿರಂಜನ್ ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿಲ್ಲ ಅಂದ ಮಾತ್ರಕ್ಕೆ ಚಕ್ರವರ್ತಿಯವರಿಗೆ ಯೋಧರ ಬಗ್ಗೆ ಗೌರವ ಇಲ್ಲ ಅನ್ನುವುದು ಬಾಲಿಶ ಹೇಳಿಕೆ ಅಂತಾಗೋದಿಲ್ಲವೇ... ಯೋಧರ ಬಗ್ಗೆ ಅವರಿಗಿರುವ ಕಾಳಜಿ ಏನು ಎನ್ನುವುದು ಗೊತ್ತಾಗಬೇಕಾದರೆ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ತಾಯಿಯರನ್ನ ಕೇಳಿ ನೋಡಿ... ಅವರ ಭಾವುಕ ಮಾತುಗಳಿಂದಲೇ ಇವರ ಸೈನಿಕರ ಪರವಾದ ಕಾಳಜಿಯ ಅರಿವಾಗುತ್ತದೆ.
ಇಷ್ಟೆಲ್ಲಾ ಹೇಳುತ್ತಿರೋದು ಚಕ್ರವರ್ತಿಯವರ ಮೇಲಿನ ಅಂಧಾಭಿಮಾನದ ಕನ್ನಡಕ ಹಾಕಿಕೊಂಡು ಅಂತ ಯೋಚಿಸುವುದೇ ಬೇಡ... ವ್ಯಕ್ತಿ ಪೂಜೆಯಲ್ಲ ವ್ಯಕ್ತಿತ್ವದ ಪೂಜೆ ಮಾಡಬೇಕು ಅನ್ನೋದನ್ನ ಸಂಘದಿಂದ ಕಲಿತವನು ನಾನು ಆ ನಿಟ್ಟಿನಲ್ಲಿ ಅಭಿಮಾನಿಯಾಗಿರದೇ ಒಬ್ಬ ಸಾಮಾನ್ಯನಾಗಿ ಅವರ ನಿಲುವನ್ನು ನೋಡಿದಾಗ ಚಕ್ರವರ್ತಿ ಸೂಲಿಬೆಲೆಯವರು ಹಿಂದೂ ವಿರೋಧಿಯಾಗುತ್ತಿದ್ದಾರೆ ಅಂತ ನನಗನಿಸುತ್ತಿಲ್ಲ. ಅದನ್ನೇ ಹೇಳುತ್ತಿದ್ದೇನೆ. ನಾವೀಗ ಯಾವ ಕಾಲಘಟ್ಟದಲ್ಲಿದ್ದೇವೆ ಅಂದರೆ ಭಾರತವನ್ನ ಬರಿಯ ಹಿಂದೂಗಳು ವಾಸಿಸುವ ದೇಶ ಅನ್ನೋ ಕಲ್ಪನೆಯನ್ನೂ ಮಾಡಲಾಗದಂತಹಾ ಸನ್ನಿವೇಶದಲ್ಲಿದ್ದೇವೆ... ಮಾಡಬೇಕಾಗಿಯೂ ಇಲ್ಲ.... ದೇಶಪ್ರೇಮವೇ ರಾಷ್ಟ್ರನಿಷ್ಠೆಯೇ ಈ ದೇಶದಲ್ಲಿ ವಾಸಿಸೋಕೆ ಅರ್ಹತೆಯಾಗಬೇಕು ಅನ್ನೋ ನಿಲುವಿನವನು ನಾನು... ಹಾಗಾಗಿ ಯಾರೆಲ್ಲಾ ತಮ್ಮ ಮತದ ನಿಷ್ಠೆಯನ್ನ ಇಟ್ಟುಕೊಂಡು ದೇಶದ್ರೋಹಿ ಕೆಲಸಗಳನ್ನು ಮಾಡುತ್ತಾರೋ ಅಂತವರನ್ನು ಮಾತ್ರ ದೇಶದಿಂದ ಒದ್ದೋಡಿಸುವ ಕೆಲಸ ಆಗಬೇಕು. ಅದಕ್ಕಾಗಿ ರಾಷ್ಟ್ರನಿಷ್ಟರ ಕೂಟ ಬಲವಾಗುತ್ತಾ ಹೋಗಬೇಕು. ಎಲ್ಲ ಸಮುದಾಯದವರಲ್ಲೂ ರಾಷ್ಟ್ರನಿಷ್ಟರು ಇದ್ದೇ ಇರುತ್ತಾರೆ. ಅವರನ್ನೆಲ್ಲಾ ಕಲೆಹಾಕುವ ಕೆಲಸವಾಗಬೇಕು. ಹಾಗಾದಾಗಲೇ ಭಾರತ ವಿಶ್ವಗುರುವಾಗಲು ಸಾಧ್ಯ.
ಈ ನಿಟ್ಟಿನಲ್ಲಿ ಅವಲೋಕಿಸಿ ನೋಡಿ ಚಕ್ರವರ್ತಿಯವರ ಸದ್ಭಾವನ ಕಾರ್ಯಕ್ರಮ ಒಂದು ಉತ್ತಮ ನಡೆ ಅಂತನಿಸದಿರದು. ನಮ್ಮೆಲ್ಲಾ ಯೋಚನೆಗಳನ್ನ ರಾಷ್ಟ್ರ ನಿಷ್ಟೆಯ ರಾಷ್ಟ್ರಹಿತದ ಗುರಿಯಲ್ಲಿಟ್ಟು ತೂಗಿ ಅಳೆದು ನೋಡಿದಲ್ಲಿ ಇಂತಹಾ ಭಿನ್ನಾಭಿಪ್ರಾಯಗಳು ನಮ್ಮಲ್ಲೇ ಒಡಕು ತಂದು ಭಾರತ ವಿಶ್ವಗುರುವಾಗುವಲ್ಲಿ ಮತ್ತಷ್ಟು ವಿಳಂಬವಾದೀತೇನೋ. ಹಾಗಾಗಿ ನಮ್ಮ ನಡೆ ಹೇಗಿರಬೇಕು ಅನ್ನುವುದನ್ನ ವಿವೇಚಿಸಿ ರಾಷ್ಟ್ರಹಿತಕ್ಕಾಗಿ ಒಗ್ಗೂಡೋಣ... ನಮ್ಮೆಲ್ಲರ ಗುರಿ ಒಂದೇ ಅದರ ಸಾಧನೆಗೆ ನಮ್ಮಲ್ಲಿನ ಏಕತೆ, ಒಗ್ಗಟ್ಟು ಹೆಚ್ಚಿದ್ದಷ್ಟು ಉತ್ತಮ ಅಲ್ವೇ...??

ಪ್ರೇಮವೊಂದು ಸಶಕ್ತ ಚಳವಳಿ ಚೇತನಾ ತೀರ್ಥಹಳ್ಳಿಯವರ ಲೇಖನವೊಂದರಲ್ಲಿನ ಅಸಂಬದ್ಧಗಳು..


..
ಅವರೇ ಹೇಳುವಂತೆ ಅವರಿಗೆ ಪ್ರೇಮಿಗಳ ದಿನ ಆಚರಿಸಲೇಬೇಕು ಅನ್ನುವ ಹಠ ಶುರುವಾಗಿದ್ದು ಶ್ರೀರಾಮ ಸೇನೆ ಪ್ರೇಮಿಗಳ ದಿನಕ್ಕೆ ವಿರೋಧ ಮಾಡೋದನ್ನು ನೋಡಿದಾಗ... ಅಂದರೆ ಯಾವ ಶೀರ್ಷಿಕೆ ಕೊಟ್ಟು ಈ ಬರಹ ಬರೆಯುತ್ತಾರೋ ಆ ಪ್ರೇಮ ಭಾವನೆಯೇ ಅವರೊಳಗಿಲ್ಲ ಎಂದಾಯಿತಲ್ಲ... ಪ್ರೇಮದ ಭಾವ ಹಂಚುವುದಕ್ಕಾಗಿ ನಾನು ಪ್ರೇಮಿಗಳ ದಿನ ಆಚರಿಸುತ್ತೇನೆ ವಿರೋಧಿಗಳ ಹೊಟ್ಟೆ ಉರಿಸಲು ಅಲ್ಲ ಅನ್ನುವುದನ್ನ ಹೇಳಿಕೊಂಡಿದ್ದರೆ " ಪ್ರೇಮವೊಂದು ಸಶಕ್ತ ಚಳವಳಿ " ಸಕ್ರಿಯ ಹೋರಾಟಗಾರ್ತಿಯಾಗುತ್ತಿದ್ದರೋ ಏನೋ ಆದರೆ ಅವರ ಆಚರಣೆಯ ಉದ್ದೇಶವೇ.... ವಿರೋಧಿಗಳ ಮೇಲಿನ " ದ್ವೇಷ " ಹಾಗಿದ್ದರೆ ಇವರಿಂದ ಪ್ರೇಮ ಎನ್ನುವ ಸಶಕ್ತ ಚಳವಳಿ ನಡೆಯುವುದು ಹೇಗೆ...?
ಅವರ ಬರಹದಲ್ಲಿ ಪ್ರೇಮಿಗಳ ದಿನವನ್ನ್ಯಾಕೆ ಒಂದೇ ದಿನ ಮಾಡೋದು ಅನ್ನುವ ಪ್ರಶ್ನೆ ಕೇಳುವವರಿಗೆ....ಚೌತಿಯನ್ಯಾಕೆ ಅದೇ ದಿನ ಮಾಡೋದು ಎಲ್ಲ ದಿನವೂ ಗಣಪತಿಯನ್ನ ಪೂಜಿಸೋಣ ಗುರು ಪೂರ್ಣಿಮೆ ಯಾಕೆ ಆ ದಿನವೇ ಆಚರಿಸೋದು ಅನ್ನುವ ಪ್ರಶ್ನೆಯನ್ನ ಸಮರ್ಥವಾದ ವಾದ ಅನ್ನುವ ರೀತಿ ಕೇಳಲಿಕ್ಕಾಗುವುದಿಲ್ಲ ಅನ್ನುತ್ತಾ ಕೇಳಿಯೇ ಬಿಟ್ಟಿದ್ದಾರೆ.. ಆದರೆ ಯಾರಿಗೆ ತಮ್ಮ ಹುಟ್ಟಿದ ಹಬ್ಬವನ್ನ ಹುಟ್ಟಿದ ದಿನವೇ ಯಾಕೆ ಆಚರಿಸಬೇಕು ಅನ್ನುವ ಅರಿವು ಇರುತ್ತದೋ ಅವರಿಗೆ ಆಚರಿಸುತ್ತೀರಾ...? ಇದಕ್ಕೆ ... ಚೌತಿ ಯಾಕೆ ಒಂದೇ ದಿನ ಅನ್ನೋ ಪ್ರಶ್ನೆಗೆ ಉತ್ತರ ತನ್ನಿಂತಾನೇ ಹೊಳೆದಿರುತ್ತದೆ. ಅದಾಗಿಯೂ ಆ ಪ್ರಶ್ನೆ ಎತ್ತಿದ್ದಾರೆ ಅಂತಂದರೆ... ವಿರೋಧಿಗಳ ವಾದಕ್ಕೆ ಸಮನಾದ ಪ್ರತಿವಾದ ಅವರ ಬಳಿ ಇಲ್ಲ ಅಂತಲೇ ಆಗುತ್ತದೆ.
ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುತ್ತಿರುವವರು ನೆರೆರಾಷ್ಟ್ರದಲ್ಲಿ ಭೂಕಂಪವಾದರೂ ಮಾತಾಡೋದಿಲ್ಲ... ಅನ್ನುತ್ತಾರೆ. ( ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವವರು ಅನ್ನುತ್ತಾ ತಾವೇ ತಮ್ಮನ್ನ ರಾಷ್ಟ್ರವನ್ನ ಪ್ರೇಮಿಸುವವರಲ್ಲ ಅನ್ನುವ ಘೋಷಣೆ ಮಾಡಿದ್ದಾರೆ... ನೇರವಾಗಿ ಹೇಳಿಲ್ಲ ಅನ್ನುವ ಕಾರಣಕ್ಕೆ ಬಿಟ್ಟು ಬಿಡೋಣ ) ನೆರೆಯ ರಾಷ್ಟ್ರಗಳಲ್ಲಿ ಭೂಕಂಪವಾದರೆ ಮಾತಾಡೋದಿಲ್ಲ ಅನ್ನುವ ಇವರು ತಮ್ಮ ಸಿದ್ಧಾಂತಗಳಲ್ಲದಿರುವವರ ಬಗ್ಗೆ ಎಷ್ಟು ಮಾತಾಡುತ್ತಾರೆ...? ಯಾವತ್ತೂ ರಾಷ್ಟ್ರಪ್ರೇಮಿಗಳು ಪಾಕಿಸ್ಥಾನದ ಕುರಿತು ಅಲ್ಲೇನಾದರೂ ವಿಪತ್ತು ನಡೆದಾಗ ಮಾತನ್ನಾಡೋದು ಆ ದೇಶ ನಮ್ಮವರ ಮೇಲೆ ಮಾಡಿದ ಅನ್ಯಾಯಗಳ ಕುರಿತಾಗಿ.... ಇನ್ಯಾವುದೋ ದೇಶದಲ್ಲಿ ಅನಾಹುತವಾದರೆ ಮಿಡಿಯುವುದಿಲ್ಲವೇ ರಾಷ್ಟ್ರಪ್ರೇಮಿಗಳು...??? ಅವರ ಗುಂಪನ್ನೇ ತೆಗೆದುಕೊಂಡು ನೋಡಿದರೆ.... ರಾಷ್ಟ್ರದ್ರೋಹಿ ಯಾಕೂಬ್ ಪರ ನಿಂತಿರುವವರ ಬಗ್ಗೆ ಬೆಂಬಲ ಸೂಚಿಸೋ ಇವರು ಸೈನಿಕರ ಬಗ್ಗೆ ಸಂತಾಪ ಸೂಚಿಸುತ್ತಾರಾ.... ? ಹಾಗಿದ್ದರೆ ಈ ರಾಷ್ಟ್ರಕ್ಕೆ ಅನ್ಯಾಯವೆಸಗುವವರ ಪಾಲಿಗೆ ಮಿಡಿಯದ ಹೃದಯ ರಾಷ್ಟ್ರಪ್ರೇಮಿಗಳದ್ದು ಅನ್ನುವ ನೈತಿಕ ಹಕ್ಕು ಇವರಿಗಿದೆಯಾ...? ರಾಷ್ಟ್ರವನ್ನು ಪ್ರೀತಿಸೋ ಎಲ್ಲರನ್ನೂ ರಾಷ್ಟ್ರಪ್ರೇಮಿಗಳು ಬೆಂಬಲಿಸುತ್ತಾರೆ.... ಆದರೆ ತಮ್ಮ ಸಿದ್ಧಾಂತವನ್ನು ಬಿಟ್ಟು ಇನ್ಯಾವುದೋ ಸಿದ್ಧಾಂತಕ್ಕೆ ಬೆಲೆಕೊಡೋ ನಮ್ಮ ದೇಶಿಯರನ್ನೇ ಇವರು ಬೆಂಬಲಿಸುತ್ತಾರಾ...? ಹಾಗಿದ್ದರೆ ಇವರದ್ದು ಯಾವ ರೀತಿಯ ಪ್ರೇಮ....? ಅದು ಹೇಗೆ ಸಶಕ್ತ ಚಳವಳಿಯಾಗೋದು...???
ಅಷ್ಟಕ್ಕೂ ಆ ಲೇಖನದ ಕೊನೆಯಲ್ಲಿ ಒಂದು ಮಾತನ್ನ ಸರಿಯಾಗಿ ಹೇಳಿದ್ದಾರೆ... ಮೊದಲು ನಮಗೆ ಬುದ್ಧನಾಗುವ ಅರ್ಹತೆ ಇದೆಯಾ ಅನ್ನುವ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಂಡಿದ್ದಾರೆ.... ನಿಜಕ್ಕೂ ಇಲ್ಲಿ ಅವರಿಗೆ ಬುದ್ಧ ಒಬ್ಬ ಆದರ್ಶವಾದಿಯಾಗಿ ಕಾಣುವುದು ಕೇವಲ ಸನಾತನ ಧರ್ಮದ ಆಚರಣೆಯನ್ನು ಟೀಕಿಸಿದ್ದ ಅನ್ನುವ ಕಾರಣಕ್ಕಾಗಿಯೇ ಹೊರತು ಇನ್ಯಾವುದೇ ಕಾರಣಕ್ಕಾಗಿ ಅಲ್ಲ. ಅದಕ್ಕೆ ಅಲ್ವಾ.... ಪುರೋಹಿತಶಾಹಿ ವಿರುದ್ಧ ಹೋರಾಟ ಅನ್ನುವಾಗ ಬುದ್ಧಂ ಶರಣಂ ಗಚ್ಛಾಮಿ ಅನ್ನುವ ಇವರು.... ದೇಶಪ್ರೇಮದ ವಿಚಾರ ಬರುವಾಗ " ಮೌನಂ ಶರಣಂ ಗಚ್ಛಾಮಿ " ಅನ್ನೋದು. ಮೊದಲು ಪ್ರೇಮದ ನಿಜವಾದ ಅರ್ಥ ತಿಳಿದು ಚಳುವಳಿಗೆ ಇಳಿದರೆ ಅದು ಯಶಸ್ವಿಯಾದೀತು ವಿರೋಧಿಗಳ ಪಾಲಿನ ದ್ವೇಷವನ್ನೇ ತಮ್ಮ ಆದರ್ಶ ಸಿದ್ಧಾಂತವನ್ನಾಗಿಸಿರುವವರಿಂದ ಪ್ರೇಮ ಅನ್ನುವ ಸಶಕ್ತ ಚಳುವಳಿ ಸಾಧ್ಯವೇ.... ನನಗನಿಸಿದಂತೆ ಖಂಡಿತಾ ಸಾಧ್ಯವಿಲ್ಲ. ಅಲ್ವೇ.

ಎನ್.ಡಿ.ಟಿ.ವಿ ಯ ರವೀಶ್ ಕುಮಾರ್ ಅವರಿಗೊಂದಿಷ್ಟು ಪ್ರಶ್ನೆಗಳು.... ಭಾಗ ೨೬. ಕಾಶ್ಮೀರದಲ್ಲಿ ಭಾರತ ವಿರೋಧಿ ಹೇಳಿಕೆಗಳು ಕೇಳುತ್ತಲೇ ಇರುತ್ತದೆ. ಆದರೆ ಅಲ್ಲಿ ಬಂಧನ ಆಗುತ್ತಿದೆಯಾ...? ಅನ್ನುತ್ತಾರೆ.... ಇವರ ಮನಸ್ಥಿತಿ ಎಂಥಾ ಕೆಳಮಟ್ಟದ್ದು ನೋಡಿ ನಿಜವಾಗಿಯೂ ಇವರಲ್ಲಿ ದೇಶಪ್ರೇಮವಿದ್ದರೆ ಭಾರತ ವಿರೋಧಿ ಹೇಳಿಕೆ ದೇಶದ ಯಾವ ಮೂಲೆಯಲ್ಲೇ ಕೊಡಲಿ ಅವರ ಬಂಧನವಾಗಲಿ ಅನ್ನುವ ಮಾತನ್ನ ಹೇಳುಬೇಕಿತ್ತೇ ಹೊರತು ಅಲ್ಲಿ ಬಂಧನವಾಗಿಲ್ಲ ಅನ್ನುವ ಕಾರಣಕ್ಕೆ ಇಲ್ಲಿಯೂ ಬಂಧನವಾಗದಿರಲಿ ಅನ್ನುವುದೇ....??? ಹಾಗಾದರೆ ಇಡಿಯ ಕಾಶ್ಮೀರದ ಒಂದೆರಡು ತಪ್ಪನ್ನ ಆಧಾರವಾಗಿಟ್ಟುಕೊಂಡು ದೇಶದಲ್ಲೆಲ್ಲೂ ದೇಶವಿರೋಧಿ ಹೇಳಿಕೆಗೆ ಶಿಕ್ಷೆ ಆಗಬಾರದೇ...???
೭. ಕಾಶ್ಮೀರದ ಸಮಸ್ಯೆಗೂ ಭಾರತದಲ್ಲಿನ ಅನ್ಯ ಮುಸ್ಲಿಮರಿಗೂ ಏನು ಸಂಬಂಧ... ಏನೇನೂ ಇಲ್ಲ..? ಕಾಶ್ಮೀರದ ಸಮಸ್ಯೆ ಸರ್ಕಾರದ ಸಮಸ್ಯೆ ಅದನ್ನ ಸರ್ಕಾರವೇ ಬಗೆಹರಿಸಲಿ... ಎನ್ನುತ್ತಾರೆ.... ಮೊದಲ ಸಾಲನ್ನ ನೋಡೋಣ... ಇಲ್ಲಿ ಕಾಶ್ಮೀರದ ಸಮಸ್ಯೆಯನ್ನ ಬರಿಯ ಮುಸ್ಲಿಮರ ಜೊತೆ ಮಾತ್ರ ಯಾಕೆ ತಾಳೆ ಹಾಕಲಾಗುತ್ತಿದೆ...? ಅದು ಕೇವಲ ಮುಸ್ಲಿಮರದ್ದೇ.... ಯಾಕೆ ಕಾಶ್ಮೀರಿ ಪಂಡಿತರ ಕುರಿತು ಮಾತಾಡೋದಿಲ್ಲ. ಅದನ್ನೂ ಬದಿಗಿಡೋಣ. ಕಾಶ್ಮೀರದ ಸಮಸ್ಯೆಯನ್ನ ಸರ್ಕಾರಕ್ಕೆ ಬಿಟ್ಟು ಬಿಡೋದು ಎಷ್ಟು ಸರಿ ಮತ್ತೆಲ್ಲದರಲ್ಲೂ ಮಾಧ್ಯಮ ಮೂಗು ತೂರಿಸುತ್ತದೆ. ಇದರ ಕುರಿತಾಗಿ ಮಾಧ್ಯಮವೇಕೆ ನಮ್ಮದಲ್ಲ ಅಂತಿರಬೇಕು...? ಇಡಿಯ ದೇಶ ಭಾರತೀಯರದ್ದಾಗಿರುವಾಗ ಕಾಶ್ಮೀರದ ಸಮಸ್ಯೆ ನಮ್ಮೆಲ್ಲರ ಸಮಸ್ಯೆ ತಾನೇ...? ಸರ್ಕಾರಕ್ಕೇ ಸಮಸ್ಯೆಯನ್ನ ಬಿಟ್ಟು ಕೊಡುವವರು ಜೆ.ಎನ್.ಯು ಸಮಸ್ಯೆಯನ್ನೇಕೆ ತನ್ನದೇ ಸಮಸ್ಯೆ ಅನ್ನುವಂತೆ ವಿಶ್ಲೇಷಿಸುತ್ತದೆ...? ಇವರ್ಯಾಕೆ ಕಾಶ್ಮೀರದ ಸಮಸ್ಯೆಯನ್ನ ಪ್ರಶ್ನಿಸುತ್ತಿದ್ದ ವಿದ್ಯಾರ್ಥಿಗಳ ಪರ ಏಕೆ ನಿಲ್ಲುತ್ತಾರೆ...?
೮. ಮೊದಲು ನಮಗೆ ಹೇಳಲಾಗಿತ್ತು ಸಾಮಾಜಿಕ ಸಾಮರಸ್ಯ ಕದಡೋ ಸುದ್ದಿಯನ್ನ ತೋರಿಸಬಾರದು ಆದರೆ ಈಗ ಆ ನಿಯಮವನ್ನ ಗಾಳಿಗೆ ತೂರಲಾಗುತ್ತಿದೆ ಅಂತ ಹೇಳುತ್ತಾರೆ... ಈ ನಿಯಮದ ನೆನಪು ಇನ್ಯಾವುದೋ ಚಾನಲ್ ನೋಡುವಾಗ ಮಾತ್ರ ನೆನಪಾಗುತ್ತದಾ...? ಒಮ್ಮೆ ಹಿಂದಿನ ನೆನಪನ್ನ ಕೆದಕಿ... ಬಾಂಬೆ ದಾಳಿಯಾದಾಗ ಕಮಾಂಡೊಗಳ ನಡೆಯನ್ನೇ ಜಗತ್ತಿಗೆ ತೋರಿಸಿದವರು ನೀವು... ಈಗ ಮಾಧ್ಯಮಗಳು ಪಾಲಿಸಬೇಕಾದ ನೀತಿ ನಿಯಮಗಳು ನೆನಪಾಗೋದು ಹಾಸ್ಯಾಸ್ಪದ ಅಂತನಿಸೋದಿಲ್ವಾ...?
೯. ಕನ್ಹಯ್ಯಾ ಅವರ ವೀಡಿಯೋವನ್ನ ತಿರುಚಿ ತೋರಿಸಲಾಗಿತ್ತು... ಮೀಡಿಯಾಗಳಿಗೆ ಆ ವೀಡಿಯೋಗಳ ಸತ್ಯಾಸತ್ಯತೆಯನ್ನ ಪರೀಕ್ಷಿಸೋ ತಾಳ್ಮೆಯೇ ಇಲ್ಲವಾ...? ಅಂದಿರಿ.... ನಿಜಕ್ಕೂ ಕೇಳಬೇಕಾದ ಪ್ರಶ್ನೆಯೇ.... ಆದರೆ ಉಳಿದವರು ತೋರಿಸಿದ್ದು ಮಾತ್ರ ತಿರುಚಲ್ಪಟ್ಟದ್ದಾ...? ನೀವು ತೋರಿಸಿದ್ದು ನಿಜವಾದದ್ದಾ...? ಅಷ್ಟಕ್ಕೂ ನಿಮ್ಮದೇ ಚಾನಲ್ ತೆಗೆದುಕೊಳ್ಳಿ.... ಈ ತಿರುಚಲ್ಪಟ್ಟ ವೀಡಿಯೋಗಳ ಪತ್ತೆಗಾಗಿ ಯಾವ ಸಾಧನ ಇಟ್ಟುಕೊಂಡಿದ್ದೀರಾ...? ಅದನ್ನ ಸ್ಪಷ್ಟಪಡಿಸದೇ ನಿಮ್ಮ ಚಾನಲಿನಲ್ಲಿರೋ ವೀಡಿಯೋ ಸರಿಯಾದದ್ದು ಅನ್ನೋದನ್ನ ನಾವು ಹೇಗೆ ನಂಬೋದು...? ಅದೂ ಪಕ್ಕಕ್ಕಿಡಿ.... ವೀಡಿಯೋ ಸುಳ್ಳೋ ಸತ್ಯವೋ ಅನ್ನುವುದನ್ನ ನ್ಯಾಯಾಲಯ ತೀರ್ಮಾನಿಸದೇ ಅದು ಸುಳ್ಳೆಂದೇ ತೀರ್ಮಾನಿಸುವುದು ನೀವೇ ಹೇಳುತ್ತಿರುವ ಕಾದು ನೋಡುವ ತಾಳ್ಮೆ ಇಲ್ಲ ಅನ್ನುವ ವಾದಕ್ಕೆ ವಿರುದ್ಧವಾದದ್ದು ಅಲ್ವಾ...???
೧೦. " ಲೇಕೆ ರಹೇಂಗೆ ಆಜಾದಿ " ಅನ್ನೋದಕ್ಕೆ ಈ ದೇಶದಿಂದ ಆಜಾದಿ ಬೇಕು.... ಅನ್ನುವ ಅರ್ಥ ಹೇಗೆ ಕೊಟ್ಟಿರಿ...? ಅನ್ನುವ ಪ್ರಶ್ನೆ ಮಾಡಿದ್ದೀರಾ... ಅದೆಷ್ಟೋ ಬಡವರಿಗೆ ಬಡತನದಿಂದ ಆಜಾದಿ ಬೇಕಾಗಿದೆಯಲ್ವಾ.... ಅಂತಾನೂ ಹೇಳುತ್ತಾ ಇದ್ದೀರಾ.... ಸ್ವಾಮೀ ಇದು ತೀರಾ ನಗೆ ತರಿಸೋ ವಾದ... ಆ ಕಾರ್ಯಕ್ರಮದಲ್ಲಿ ಕಾಶ್ಮೀರದ ಕುರಿತು ಘೋಷಣೆ ಕೇಳುತ್ತದೆ, ಅಫ್ಜಲ್ ಗುರು ಪರವಾಗಿ ಘೋಷಣೆ ಕೇಳುತ್ತದೆ ಇದರ ನಡುವೆ ಬಡತನದಿಂದ ಸ್ವಾತಂತ್ರ್ಯ ಬೇಕು ಅನ್ನುವ ಘೋಷಣೆ ಆ ಸ್ಥಳದಿಂದ ನಿರೀಕ್ಷಿಸಲಾಗುತ್ತದಾ...? ಸಾಮಾನ್ಯನಿಗೂ ಇದು ಅರ್ಥವಾಗುವಂಥಾ ಸತ್ಯ ಆದರೆ ಎಲ್ಲೋ ಆ ವಿದ್ಯಾರ್ಥಿಗಳ ಪರ ಅಥವಾ ಆ ಸಿದ್ಧಾಂತದ ಪರ ನಿಲ್ಲುವ ಆವೇಶದಲ್ಲಿ ಈ ರೀತಿಯ ಹೊಸ ಅರ್ಥದ ನಿಮ್ಮ ಹುಡುಕಾಟ ಇಲ್ಲದ ಸತ್ಯವನ್ನು ಹುಡುಕುವಂಥಾ ಪ್ರಯತ್ನ ಅಂತನಿಸೋದಿಲ್ವಾ...?
೧೧. ವಿದ್ಯಾರ್ಥಿಗಳ ಪರ ಮಾತಾಡಿದವರನ್ನೆಲ್ಲಾ ದೇಶದ್ರೋಹಿಗಳು ಅನ್ನಲಾಗುತ್ತಿದೆ ಇದು ಆತಂಕಕಾರಿ... ಅಂದಿರಿ ಅಯ್ಯೋ ಇದೊಳ್ಳೆ ವಿಚಾರ " ಭಾರತ್ ತೇರೆ ತುಕ್ಡೇ ಹೋಂಗೇ ಇನ್ಷಾ ಅಲ್ಲಾ ಇನ್ಷಾ ಅಲ್ಲಾ... " ಅಂದವರ ಪರ ನಿಲ್ಲುವುದು ಅಂದರೆ ಅದು ದೇಶದ್ರೋಹವೇ ತಾನೇ... ಇದನ್ನು ಸಿದ್ಧಪಡಿಸಲೂ ಕೋರ್ಟ್ ಬೇಕಾ...?
೧೨. ಕೇಸು ನ್ಯಾಯಾಲಯದಲ್ಲಿ ತೀರ್ಮಾನವಾಗುವ ಮುನ್ನವೇ ನಿರ್ಣಯಕ್ಕೆ ಬರೋದು ಎಷ್ಟು ಸರಿ ಅಂದಿರಿ... ನಿಜ ಆದರೆ ಅಫ್ಜಲ್ ಗುರುವಿನ ಕುರಿತು ನ್ಯಾಯಾಲಯದ ತೀರ್ಪು ಬಂದಿತ್ತು ಅಲ್ವಾ.... ಹಾಗಾದರೆ ಅವನ ಪರವಾಗಿ ನಿಲ್ಲೋದು ನ್ಯಾಯಾಂಗ ನಿಂದನೆ ಅಲ್ವಾ.... ಹಾಗಿದ್ದ ಮೇಲೆ ಅವರ ಪರ ನಿಮ್ಮ ನಿಲುವು ಎಷ್ಟು ಸರಿ...? ಇರಲಿ ಈ ಕೇಸಿನಲ್ಲಿ ತೀರ್ಪು ಬರುವ ತನಕ ಕಾಯಬೇಕು ಅನ್ನುವ ನೀವು ಇದೇ ನಿಯಮವನ್ನ ಉಳಿದೆಲ್ಲಾ ಸಂಧರ್ಭದಲ್ಲಿ ಕಾಯ್ದುಕೊಳ್ಳುತ್ತೀರಾ...?
೧೩. ವಕೀಲರು ರ್ಯಾಲಿ ಮಾಡುತ್ತಿದ್ದಾರೆ, ಹಿಂಸೆಗೆ ಇಳಿದಿದ್ದಾರೆ.... ಅನ್ನುತ್ತಿದ್ದೀರಾ... ಹಿಂಸೆ ಮಾಡಿದ್ದಾದರೂ ಯಾರ ವಿರುದ್ಧ....? ಈ ಹಿಂಸೆಯನ್ನ ನಿಮಗೆ ಸಹಿಸೋದಿಕ್ಕೆ ಆಗುತ್ತಿಲ್ಲ ಆದರೆ ಸಂಸತ್ತಿಗೆ ಬಾಂಬ್ ಇಟ್ಟು ಅಲ್ಲಿ ಇದ್ದವರನ್ನೆಲ್ಲಾ ಕೊಲ್ಲಲು ಬಯಸೋದು ಹಿಂಸೆ ಅಲ್ಲವೇನೂ...? ಅವನ ಪರವಾಗಿ ನಿಲ್ಲುವವರು ಆ ಹಿಂಸೆಯನ್ನೇ ಬೆಂಬಲಿಸಿದ ಹಾಗಲ್ವಾ.... ನಿಮ್ಮದಿದೆಂಥಾ ದ್ವಂದ್ವ ನಿಲುವು ಸ್ವಾಮೀ....
೧೪. ಸಂವಿಧಾನ ಬದ್ಧವಾಗಿರೋದು ದೇಶದ್ರೋಹವೇ....? ಅನ್ನುವ ಪ್ರಶ್ನೆ ಹಾಕಿಕೊಳ್ಳುತ್ತಿದ್ದೀರಾ.... ಹಾಗಿದ್ದರೆ ನೀವು ಅನುಸರಿಸೋ ಸಂವಿಧಾನದಲ್ಲಿ ದೇಶದ ವಿರುದ್ಧ ಘೋಷಣೆ ಕೂಗೋದು, ನ್ಯಾಯಾಂಗ ನಿಂದನೆ ಇವೆಲ್ಲಾ ದೇಶದ್ರೋಹಿ ಚಟುವಟಿಕೆ ಅಲ್ಲವೋ....? ಮೊದಲು ಸಂವಿಧಾನದಲ್ಲಿರೋ ಆ ಸಾಲುಗಳನ್ನ ತೋರಿಸಿ ಆಮೇಲೆ ನಾವು ನಿಮ್ಮ ಮಾತಿಗೆ ಬೆಲೆ ಕೊಡೋಣ.
೧೫. ನಾನು ದೇಶಭಕ್ತನಲ್ಲ ಯಾಕೆಂದರೆ ನಾನು ಪಕ್ಷಗಳ ಆಧಾರದಲ್ಲಿ ಸುದ್ದಿಯನ್ನ ವಿಶ್ಲೇಷಿಸುವುದಿಲ್ಲ ಅನ್ನುತ್ತಾ ಕಾರ್ಯಕ್ರಮವನ್ನ ಮುಕ್ತಾಯಗೊಳಿಸುತ್ತೀರಿ.... ಆದರೆ ಅದೆಷ್ಟೋ ವಿಷಯಗಳಲ್ಲಿ ಮೋದಿಯವರ ವಿರುದ್ಧವಾಗಿಯೇ ಕೆಲಸ ಮಾಡಿರುವುದು ನಮಗೆಲ್ಲಾ ತಿಳಿದಿರುವ ವಿಷಯವೇ... ಅದೇನೂ ಹೊಸತಲ್ಲ ಅಷ್ಟೇ ಏಕೆ ಮೋದಿ ಅವರು ನಿರ್ದೋಷಿ ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದ್ದರೂ ಅವರ ವಿರುದ್ಧ ಟೀಕೆಗಳನ್ನ ನಡೆಸುತ್ತಲೇ ಬರುವವರು ನೀವು ನೀವು ಪಕ್ಷಾತೀತ ಚಿಂತನೆಯವರು ಅನ್ನುವುದನ್ನ ಕೇಳುವಾಗಲೇ ಸಾಮಾನ್ಯ ಮನುಷ್ಯರಿಗೂ ನಗು ಬರಲೇಬೇಕು....
ಹೀಗೆ ದ್ವಂದ್ವಗಳನ್ನೇ ಇಟ್ಟುಕೊಂಡು ಅದೇನನ್ನ ಸಾಬೀತುಪಡಿಸಬೇಕು ಅಂತಿದ್ದರೋ ನನಗೆ ಗೊತ್ತಾಗಿಲ್ಲ ಕೆಲವೊಮ್ಮೆ ನಾನು ತಪ್ಪು ಮಾಡಿರಬಹುದು ಅನ್ನುತ್ತಾರೆ, ನಾನೇನು ಮಾಧ್ಯಮವನ್ನ ಸರಿ ಮಾಡಲು ಇರುವವ ಅಲ್ಲ ಅನ್ನುತ್ತಾರೆ ಆದರೂ ಇತರ ಮಾಧ್ಯಮದ ತಪ್ಪನ್ನ ಎತ್ತಿ ಹಿಡಿಯುತ್ತಾರೆ.... ಹೀಗೆ ಒಟ್ಟಾರೆ ಒಂದಷ್ಟು ಗೊಂದಲ.... ಆದರೆ ನಿಜವಾಗಿಯೂ ದೇಶಪ್ರೇಮ ಅನ್ನುವುದು ಇಂಥಾ ಗೊಂದಲಗಳ ನಡುವೆ ಸಿಕ್ಕಿಬೀಳುವಂಥಾದ್ದೇ ಅಲ್ಲ.... ಪಕ್ಷಾತೀತವಾಗಿ ಜಾತ್ಯಾತೀತವಾಗಿ ಒಂದೇ ಸ್ವರವಾಗಿ ಬರಬೇಕಾದದ್ದು ದೇಶಪ್ರೇಮ ಆದರೆ ಅದನ್ನ ಜಗತ್ತಿಗೆ ತೋರಿಸವುದಕ್ಕೆ ಬದಲಾಗಿ ಯಾವುದೋ ಸಿದ್ಧಾಂತದ ಮುಖವಾಡವನ್ನಿಟ್ಟುಕೊಂಡು .... " .... ಹಾ ನಾನೊಬ್ಬ ದೇಶದ್ರೋಹಿ ...." ಅಂತ ಹೇಳಿಕೊಳ್ಳುವುದಕ್ಕೆ ಇಂತಹಾ ಕಾರ್ಯಕ್ರಮ ಮಾಡೋದು ಈ ದೇಶದ ದುರಂತವೇ ಸರಿ....

ಎನ್.ಡಿ.ಟಿ.ವಿ ಯ ರವೀಶ್ ಕುಮಾರ್ ಅವರಿಗೊಂದಿಷ್ಟು ಪ್ರಶ್ನೆಗಳು.... ಭಾಗ ೧ಜೆ.ಎನ್.ಯು ವಿವಾದ ತಾರಕಕ್ಕೇರಿದೆ. ಯಾವುದೇ ವಿವಾದವಾಗಲಿ ಸಾಮಾನ್ಯವಾಗಿ ದೊಡ್ದ ಪ್ರಚಾರ ಪಡೆಯೋದು ಮಾಧ್ಯಮಗಳಿಂದಲೇ.... " ಬ್ರೇಕಿಂಗ್ ನ್ಯೂಸ್ " ನ ಆಸೆ ಬುರುಕರಿಂದ ಸಣ್ಣ ಸುದ್ದಿಯೂ ಕೆಲವೊಮ್ಮೆ ದೊಡ್ಡದಾಗುತ್ತದೆ. ಇನ್ನು ಕೆಲವೊಮ್ಮೆ ದೊಡ್ಡ ಸುದ್ದಿಯೂ ಟುಸ್ಸಾಗುತ್ತದೆ. ಆದರೆ ಈ ಬಾರಿ ವಿಚಿತ್ರ ಅಂತಂದರೆ ಮಾಧ್ಯಮದಲ್ಲೇ ಎರಡು ಬಣವಾಗಿರೋದು... ನಿಜಕ್ಕೂ ನೋಡಿದರೆ ಇಂಥಾ ಪರಿಸ್ಥಿತಿಯಲ್ಲಿ ಮಾಧ್ಯಮ ಎರಡಾಗಬಾರದಿತ್ತು, ಪಕ್ಷಗಳೂ ಎರಡಾಗಬಾರದಿತ್ತು ಯಾಕಂದರೆ ಇದು ದೇಶನಿಷ್ಠೆಯ ಪ್ರಶ್ನೆ, ದೇಶಪ್ರೇಮದ ಪ್ರಶ್ನೆ ಆದರೂ ಈ ದೇಶದ ದೌರ್ಭಾಗ್ಯ " ಹಾ ನಾವು ದೇಶದ್ರೋಹಿಗಳೇ " ಅಂತ ಎದೆ ತಟ್ಟಿ ಹೇಳೋರು ಕಾಣಿಸಿಕೊಳ್ಳುತ್ತಿದ್ದಾರೆ. ದೇಶದ್ರೋಹದ ಸಂಚು ಮಾಡಿದವರ ಬೆನ್ನ ಹಿಂದೆ ನಿಂತು ರಕ್ಷಣೆಗೆ ಕಟಿಬದ್ಧರಾಗಿದ್ದಾರೆ.
ಹೀಗೆ ಹಲವು ಸುದ್ದಿ ಮಾಧ್ಯಮದ ಲಿಂಕ್ ಗಳನ್ನ ನೋಡುತ್ತಿದ್ದಾಗ ಎನ್.ಡಿ.ಟಿ.ವಿಯ ರವೀಶ್ ಅನ್ನೋರ ಸುದ್ದಿ ವಿಶ್ಲೇಷಣೆ ಸಿಕ್ಕಿತು. ಸರಿ ಸುಮಾರು ನಲವತ್ತು ನಿಮಿಷದ ವಿಡೀಯೋ.... ಇಡಿಯ ಕಾರ್ಯಕ್ರಮವೇ ಹಲವು ಗೊಂದಲಗಳಿಂದ ಕೂಡಿತ್ತು.... ಅದರಲ್ಲಿ ಆತ ಎತ್ತಿದ ಮೂಲ ಅಂಶ ತುಂಬಾ ಚೆನ್ನಾಗಿತ್ತು... ಮಾಧ್ಯಮಗಳು ಘಟನೆಯ ತೀರ್ಪುರಾಗಬಹುದಾ...? ಅಂತ. ನಿಜ ಮಾಧ್ಯಮ ಸತ್ಯವನ್ನ ತೋರಿಸುವವರಾಗಬೇಕೇ ಹೊರತು ತೀರ್ಪು ನೀಡುವವರಾಗಬಾರದು. ಆದರೆ ಕಾರ್ಯಕ್ರಮದ ಉದ್ದೇಶ ಅದನ್ನೇ ಸಾಬೀತು ಪಡಿಸುವುದಾಗಿದ್ದರೆ ಚೆನ್ನಾಗಿತ್ತು ಆದರೆ ಆತನ ಉದ್ದೇಶ ಅದಾಗಿರಲಿಲ್ಲ.... ಅವರ ಉದ್ದೇಶ.... ಇನ್ಯಾವುದೋ ಚಾನಲ್ ನ ಸುದ್ದಿ ವಿಶ್ಲೇಷಕ ಜನಪ್ರಿಯತೆಯನ್ನು ಗಳಿಸುತ್ತಿದ್ದಾನಲ್ಲ ಅದನ್ನ ತಡೆಯೋದು ಹೇಗೆ ಅನ್ನುವ ಅಸೂಯೆ ಅಷ್ಟೇ ಆಗಿತ್ತು ಅನ್ನುವುದಕ್ಕೆ ಅವರದೇ ವೀಡಿಯೋದಲ್ಲಿನ ದ್ವಂದ್ವಗಳೇ ಸಾಕ್ಷಿ. ಹೇಗೆ ಅನ್ನುವುದನ್ನ ಸ್ವಲ್ಪ ವಿಶ್ಲೇಷಿಸುವ ಮನಸ್ಸಾಯಿತು. ಆತ ಕೇಳಿದ ಪ್ರಶ್ನೆಗಳನ್ನೇ ಒಂದೊಂದಾಗಿ ವಿಶ್ಲೇಷಿಸುತ್ತಾ ಹೋಗೋಣ...
೧.ಅವರ ಕಾರ್ಯಕ್ರಮ ಶುರುವಾಗೋದೇ " ಟಿವಿ ಬೀಮಾರ್ ಹೋಗಯಾ ಹೈ... ಟಿವಿ ಕೋ ಟಿಬಿ ಹೋಗಯಾ ಹೈ " ಅನ್ನುವ ಮಾತಿನಿಂದ ಮಾಧ್ಯಮಕ್ಕೆ ಯಾವುದನ್ನ ತೋರಿಸಬೇಕು ಯಾವುದನ್ನು ತೋರಿಸಬಾರದು ಅನ್ನುವುದರ ಪರಿವೆಯಿಲ್ಲ ಅದಕ್ಕಾಗಿ ನಾವೀಗ ಪರದೆಯಲ್ಲಿ ಏನನ್ನು ತೋರಿಸದೆ ಕತ್ತಲಾಗಿಸುತ್ತೇವೆ. ನೀವು ಬರಿಯ ಮಾತುಗಳನ್ನಷ್ಟೇ ಕೇಳಿ... ಅನ್ನುತ್ತಾ ಪರದೆಯನ್ನ ಕಪ್ಪಾಗಾಗಿಸುತ್ತಾರೆ. ಇಡಿಯ ಕಾರ್ಯಕ್ರಮದಲ್ಲಿ " ಚೀರಾಟ " ಅನ್ನೋ ಪದವನ್ನ ಹಲವಾರು ಬಾರಿ ಪ್ರಯೋಗಿಸಿದ್ದಾರೆ. ಅದರ ಅರ್ಥ ಯಾರೋ ಒಬ್ಬ ವ್ಯಕ್ತಿಯನ್ನ ಗುರಿಯನ್ನಾಗಿಸಿ ಈ ಕಾರ್ಯಕ್ರಮ ಮಾಡಿದೆಯೆಂದೇ ತಾನೇ.... ಒಂದೆರಡು ಬಾರಿ ಈ ಪದ ಪ್ರಯೋಗ ಆಗಿದ್ದರೆ ನಾನು ಅನುಮಾನಿಸುತ್ತಿರಲಿಲ್ಲ ಆದರೆ ಇಡಿಯ ಕಾರ್ಯಕ್ರಮ ನೋಡಿದಾಗ ಚೀಕ್ ಚಿಲ್ಲಾಹಟ್ ಶಬ್ದಗಳು ಬೇಕಾಬಿಟ್ಟಿ ಬಳಕೆಯಾಗಿದೆ...ಇಲ್ಲಿ ಆಂಕರ್ ಗಳೇ ಜಡ್ಜ್ ಗಳಾಗುತ್ತಿದ್ದಾರೆ ಅನ್ನುತ್ತಾರೆ... ನಿಜ ಆಗಬಾರದು, ಆದರೆ ನೋಡುಗರೇನೂ ಯಾವುದೇ ಆಂಕರ್ ನ ಚರ್ಚೆಯನ್ನ ತೀರ್ಪನ್ನ ಜಡ್ಜ್ ನ ತೀರ್ಪು ಅನ್ನುವಂತೆ ನೋಡುವುದಿಲ್ಲವಲ್ಲ ಹಾಗಿದ್ದರೆ ಇವರು ಯಾರ ಮೇಲೆ ಕೋಪವನ್ನ ವ್ಯಕ್ತ ಪಡಿಸುತ್ತಿದ್ದಾರೆ...?
೨. ಆಂಕರ್ ಗಳ ಕೆಲಸ ಜನರಿಗೆ ಹೊಸ ಹೊಸ ಯೋಚನೆಯನ್ನ ತೋರಿಸುವುದು ಅಷ್ಟೇ ವಿನಹಾ ತೀರ್ಪು ಕೊಡುವುದಲ್ಲ ಅನ್ನುತ್ತಾರೆ. ಸರ್ಕಾರವನ್ನ ಪ್ರಶ್ನಿಸುವುದಷ್ಟೇ ನಮ್ಮ ಕೆಲಸ ಅನ್ನುತ್ತಾರೆ. ಆದರೆ ವಿಪರ್ಯಾಸ ನೋಡಿ ಯಾವ ಪ್ರಕರಣಕ್ಕೆ ಯಾವ ಸರ್ಕಾರವನ್ನ ಪ್ರಶ್ನಿಸಬೇಕು ಅನ್ನುವುದು ಇವರಿಗೆ ಗೊತ್ತೇ ಇಲ್ಲ.... ಹಿಂದೆ ಗುಜರಾತ್ ನಲ್ಲಿ ಗಲಭೆಯಾದಾಗ ರಾಜ್ಯ ಸರ್ಕಾರವನ್ನ ಪ್ರಶ್ನಿಸಿದರೆ ದಾದ್ರಿ ಘಟನೆಗೆ ಕೇಂದ್ರವನ್ನ ಪ್ರಶ್ನಿಸುತ್ತದೆ.... ಅಂದರೆ ಇವರ ಪ್ರಶ್ನೆಗೆ ನೈತಿಕತೆ ಇಲ್ಲ ಅನ್ನೋದು ಸಿದ್ಧವಾಯಿತಲ್ಲ. ತನ್ನ ಚಾನಲ್ ನಲ್ಲಿ ಇಂತಹಾ ನಿಯಮವನ್ನಿಟ್ಟುಕೊಂಡವನಾಗಿದ್ದಿದ್ದರೆ ಇನ್ನೊಂದು ಸುದ್ದಿ ವಿಶ್ಲೇಷಕನ ನಡೆಯನ್ನ ಪ್ರಶ್ನಿಸಬಹುದಿತ್ತು ಆದರೆ ತಾನೇ ಬೇಕಾದಷ್ಟು ಬಾರಿ ಇಂತಹ ಕೆಲಸ ಮಾಡಿದ್ದವರು ಈಗ ಮಾತ್ರ ಈ ರೀತಿ ವಿಶ್ಲೇಷಿಸುವುದಕ್ಕೆ ಕಾರಣವೇನು...?
೩. ಈಗಿನ ಆಂಕರ್ ಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಬೊಬ್ಬೆ ಹೊಡೆಯುವುದರಿಂದ ಪರಿಹಾರ ಸಾಧ್ಯವಾಗಿದ್ದರೆ ಪ್ರಧಾನ ಮಂತ್ರಿ ಮತ್ತು ಸೇನಾಧ್ಯಕ್ಷರು ನಿತ್ಯವೂ ಬೊಬ್ಬೆ ಹೊಡೆಯಬೇಕಿತ್ತು. ಅನ್ನುತ್ತಾರೆ. ಇಲ್ಲಿ " ಬೊಬ್ಬೆ " ಯ ಕುರಿತೇ ಇವರ ಅಸಹನೆ ತೋರ್ಪಡಿಸುತ್ತಾರೆಯೇ ವಿನಹ ಆ ಬೊಬ್ಬೆಯಲ್ಲಿರುವ ಸತ್ಯವನ್ನ ನೋಡುವ ಮನಸ್ಸು ಮಾಡುವುದಿಲ್ಲ. ನಿಜ ಯಾವುದೇ ವಿಚಾರ ಹೇಳುವಾಗ ಬೊಬ್ಬೆ ಹೊಡೆಯಬೇಕಾಗಿಲ್ಲ ಹಾಗಂತ ಬೊಬ್ಬೆ ಹೊಡೆದು ಹೇಳಿದ್ದೆಲ್ಲ ಸುಳ್ಳು, ಸೌಮ್ಯವಾಗಿ ಹೇಳಿದ್ದು ಮಾತ್ರ ನಿಜ ಅನ್ನಲಾಗುತ್ತದೆಯೇ.... ಈ ಸತ್ಯವನ್ನು ಮುಚ್ಚಿಟ್ಟು ಬೊಬ್ಬೆಯ ಕುರಿತು ಇವರೇಕೆ ಅಸಹಿಷ್ಣುಗಳಾಗಬೇಕು..... ?
೪. ಮಾಧ್ಯಮಗಳ ಆಂಕರ್ ಗಳು ಪಕ್ಷದ ವಕ್ತಾರರು ಹೆದರಿಸೋ ಕೆಲಸ ಮಾಡುತ್ತಿದ್ದಾರೆ, ಗುಂಡು ಹಾರಿಸೋ ಮಾತಾಡುತ್ತಿದ್ದಾರೆ.... ಯಾಕೆಂದರೆ ಹೋರಾಟಗಾರರು ಹೆದರಲಿ ಎಂದು ಹೀಗೆ ಮಾಡುತ್ತಿದ್ದಾರೆ ಅನ್ನುತ್ತಾರೆ. ನಿಜ ದೇಶದ್ರೋಹಿಗಳಿಗೆ " ಗೋಲಿ ಮಾರೋ ಸಾಲೋಂಕೋ..." ಅನ್ನುವ ಮಾತನ್ನ ಹೇಳಿದ್ದು ನಾನು ಕೇಳಿದ್ದೇನೆ. ಇದನ್ನ ತಪ್ಪು ಅಂತ ಬಿಂಬಿಸುವವರು ಆವತ್ತು ಓವೈಸಿ ಅನ್ನುವಾತ ಹದಿನೈದು ನಿಮಿಷ ಪೋಲಿಸರು ಸುಮ್ಮನಿದ್ದರೆ ಇಡಿಯ ಹಿಂದೂ ಸಮಾಜವನ್ನೇ ನಿರ್ನಾಮ ಮಾಡುತ್ತೇನೆ ಅಂದಾಗ ಯಾಕೆ ಸುಮ್ಮನಿದ್ದರು...? ಆಗಲೂ ಇಂತಹ " ಬೊಬ್ಬೆ "ಯ ಕುರಿತು ಸ್ಕ್ರೀನ್ ಕತ್ತಲಾಗಿಸಿ ಕಾರ್ಯಕ್ರಮ ಮಾಡಲಿಲ್ಲವೇಕೆ...? ಈಗ ಗೋಲಿ ಮಾರೋ ಅಂತ ಹೇಳಿದವರು ದೇಶದ್ರೋಹಿಗಳನ್ನು ಮಾತ್ರ ಗುರಿಯನ್ನಾಗಿಸಿದ್ದರು ಆದರೆ ಓವೈಸಿ ಇಡಿಯ ಹಿಂದೂ ಸಮಾಜವನ್ನೇ ನಿರ್ನಾಮ ಮಾಡುತ್ತೇನೆ ಅಂದಿದ್ದನಲ್ಲ. ಆವಾಗ ಮೌನ ಈಗ ಅಸಹನೆ ಇದು ಏನನ್ನ ತೋರಿಸುತ್ತದೆ...? ಅಷ್ಟಕ್ಕೂ ದೇಶದ್ರೋಹಿಗಳಿಗೆ ಗುಂಡು ಹೊಡೆಯುವ ಮಾತು ತಾನೇ ಆಡಿದ್ದು ಇದರಿಂದ ಇವರೇಕೆ ಆತಂಕಿತರಾಗುತ್ತಾರೆ...?
೫. ಸೈನಿಕರ ಬಲಿದಾನವನ್ನ ರಾಜಕೀಯಗೊಳಿಸುತ್ತಿದ್ದಾರೆ. ಆದರೆ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಕುಳಿತ ಸೈನಿಕರ ಕುರಿತು ಮೌನವಾಗುತ್ತಾರೆ. ಅನ್ನುತ್ತಾ ಕೇಂದ್ರ ಸರ್ಕಾರವನ್ನ ಟೀಕಿಸುತ್ತಾರೆ. ಸೈನಿಕರ ಬಲಿದಾನವನ್ನ ರಾಜಕೀಯಗೊಳಿಸಿದ್ದು ಎಲ್ಲೂ ಇಲ್ಲ ಪ್ರತಿಭಟನೆಗೆ ಕುಳಿತವರ ಜೊತೆ ಮಾತುಕತೆ ನಡೆಸಿ ಅವರ ಬೇಡಿಕೆಯನ್ನ ಒಪ್ಪಿದ ಮೇಲೆ ಈಗ ಪ್ರಶ್ನೆ ಎತ್ತುವುದು ಎಷ್ಟು ಸರಿ. ಇರಲಿ ಹೈದಾರಾಬಾದಿನಲ್ಲಿ ಒಬ್ಬಾತ ಕೆಳವರ್ಗದ ಹುಡುಗ ಆತ್ಮಹತ್ಯೆ ಮಾಡುತ್ತಾನೆ. ಅದನ್ನ ಕಾಂಗ್ರೆಸ್ ನಾಯಕರು ಎಡಪಂಥೀಯರು ರಾಜಕೀಯ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಾರೆ ಅದೇ ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಅನ್ನುವಾತ ಕೇರಳದಲ್ಲೊಬ್ಬ ಬಲಪಂಥೀಯ ವಿಚಾರಧಾರೆಯವನ ಹತ್ಯೆಯಾಗುತ್ತದೆ ಅದರೆ ಆಗ ಬಾರದ ಕಾಂಗ್ರೆಸ್ ನಾಯಕರನ್ನ ಎಡಪಂಥೀಯ ನಾಯಕರನ್ನ ರವೀಶ್ ಅವರು ಪ್ರಶ್ನಿಸುವುದಿಲ್ಲ. ಇದೇ ಕಾರ್ಯಕ್ರಮದಲ್ಲಿ ಜೆ.ಎನ್.ಯು ಘಟನೆಯನ್ನ ಪಕ್ಷದ ದೃಷ್ಟಿಯಿಂದ ನೋಡಬೇಡಿ ಅನ್ನುವ ರವೀಶ್ ತಾವು ಮಾತ್ರ ಟೀಕೆ ಸದಾ ಕೇಂದ್ರದ ಮೇಲಿರುವಂತೆ ಮಾತಾಡುತ್ತಾರಲ್ಲ. ಇವರಿಗೆ ಪ್ರಶ್ನೆ ಎತ್ತಲು ಅದೆಂಥಾ ನೈತಿಕತೆಯಿದೆ...?
ಮುಂದುವರೆಯುತ್ತದೆ...

ಜೈಲಿನಿಂದ ಹೊರಗೆ ಬಂದ ಕನ್ಹಯ್ಯಾನ ಮಾತನ್ನ ಕೇಳಿ ಎಂಥಾ ಅದ್ಭುತ ಭಾಷಣ ಅಂತ ಹೇಳಿಕೊಂಡ ರಾಜಕಾರಣಿಗಳಿಗೆ ಮತ್ತು " ಮಾಧ್ಯಮದ ರಾಜಕಾರಣಿ "ಗಳಿಗೊಂದಿಷ್ಟು ಪ್ರಶ್ನೆ... ೧


. ನಾವು ಬಡತನದಿಂದ ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಬಯಸೋದು....ಅಂತ ಕನ್ಹಯ್ಯಾ ಕೇಳಿದನಲ್ವಾ.... ಹಾಗಿದ್ದರೆ ಕಳೆದ ಯುಪಿಎ ಸರ್ಕಾರ ಇದ್ದಾಗ ತಿಂಗಳಿಗೊಂದರಂತೆ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬರುತ್ತಿತ್ತಲ್ಲ ಆಗ ಯಾವನಿಗೆ ಲಾಲ್ ಸಲಾಮ್ ಹೊಡಿತಾ ಕೂತಿದ್ದೆ....? ಅನ್ನೋ ಪ್ರಶ್ನೆ ಕೇಳುವ ಧೈರ್ಯ ನಿಮಗಿದೆಯಾ...?
೨. ದೇಶದ ಗಡಿಭಾಗದಲ್ಲಿ ಸೈನಿಕರು ಸಾಯುತ್ತಿದ್ದಾರೆ... ಅಂತ ಶಾಸಕರೊಬ್ಬರ ಮಾತನ್ನ ಉಲ್ಲೇಖಿಸಿ ಆ ಸೈನಿಕ ಏನು ನಿಮ್ಮ ಅಣ್ಣನೋ ತಮ್ಮನೋ.... ಅವನು ಅದ್ಯಾವುದೋ ಕೃಷಿಕನ ಮಗ.... ದೇಶದ ಒಳಗೂ ಕೃಷಿಕರ ಸಾವಾಗುತ್ತಿದೆ... ಅವರ ಸಾವಿನ ಬಗ್ಗೆ ಮಾತಾಡೋದಿಲ್ಲ ಯಾಕೆ ಅನ್ನುವ ಪ್ರಶ್ನೆ ಕೇಳಿದೊಡನೆ.... ಇದೋ ಈ ಭಾರಿಯ ಬಜೆಟ್ ನಲ್ಲಿ ಕೃಷಿಕರಿಗೆ ಪ್ರಾಧಾನ್ಯತೆ ಕೊಡಲಾಗಿದೆ ಅನ್ನೋ ಸತ್ಯವನ್ನ ಅವನ ಖಾಲಿ ತಲೆಯೊಳಗೆ ತುಂಬೋ ಧೈರ್ಯ ನಿಮಗಿದೆಯಾ....? ಅಂತ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬರುತ್ತಿರೋ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಬೇಕು ಅನ್ನುವ ಅಫ್ಜಲನ ಕುರಿತು ಕಾರ್ಯಕ್ರಮ ಮಾಡುವಾಗ ಈ ಕಳಕಳಿ ಎಲ್ಲಿತ್ತು ಅನ್ನುವ ಪ್ರಶ್ನೆ ಮಾಡೋ ತಾಕತ್ತು ನಿಮಗಿದೆಯಾ..?
೩. ಹರಿಯಾಣದಲ್ಲಿನ ಗಲಭೆಯನ್ನು ಉಲ್ಲೇಖಿಸಿ ನಾವು ಈ ಜಾತಿವಾದದಿಂದಲೇ ಸ್ವಾತಂತ್ರ್ಯ ಬಯಸೋದು ಅಂತ ಆತ ಹೇಳುವಾಗ ಶಹಬ್ಬಾಸ್.... ಇನ್ನು ಮುಂದೆ ಜಾತಿ ಆಧಾರಿತ ಮೀಸಲಾತಿಯನ್ನು ನಿನಗಾಗಿ ತೆಗೆದು ಹಾಕಲು ನಾವು ಹೋರಾಟ ಮಾಡುತ್ತೇವೆ ಅನ್ನೋ ತಾಕತ್ತು ನಿಮಗಿದೆಯಾ....? ಅಥವಾ ಜಾತಿ ಆಧಾರಿತ ಮೀಸಲಾತಿ ತೆಗೆದು ಹಾಕಬೇಕೆನ್ನುತ್ತೀಯಾ ಅದಕ್ಕೂ ಹೋರಾಟ ಮಾಡುತ್ತೀಯಾ ಅನ್ನುವ ಪ್ರಶ್ನೆ ಕೇಳೋ ತಾಕತ್ತಿದೆಯಾ...?
೪. ಈ ದೇಶದೊಳಗೆ ಹಿಂದುಳಿವರು, ಕೆಳವರ್ಗದವರು, ಆದಿವಾಸಿಗಳು, ಅಲ್ಪಸಂಖ್ಯಾತರ ಮೇಲಾಗುತ್ತಿರೋ ಶೋಷಣೆಯಿಂದ ಸ್ವಾತಂತ್ರ್ಯ ಬೇಕು ಅಂದಾಗ ಶೋಷಿತರು ಅನ್ನುವುದೇ ಸಾಕಾಗುವುದಿಲ್ಲವೇ... ಅಲ್ಲಿ ಕೆಳವರ್ಗ, ಅಲ್ಪಸಂಖ್ಯಾತ, ಹಿಂದುಳಿದ ಅನ್ನುವುದಷ್ಟಕ್ಕೇ ಸೀಮಿತ ಯಾಕಾಗುತ್ತೀರಾ ಅನ್ನುವ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...? ಅಥವಾ ಕೆಳವರ್ಗ, ಅಲ್ಪಸಂಖ್ಯಾತರಿಂದ ಆಗುತ್ತಿರೋ ಶೋಷಣೆಯಿಂದ ಸ್ವಾತಂತ್ರ್ಯ ಬೇಕಾಗಿಲ್ಲವೇ ಅನ್ನೋ ಪ್ರಶ್ನೆ ಕೇಳೋ ತಾಕತ್ತಿದೆಯಾ...?
೫. ರಾಷ್ಟ್ರ‍ೀಯ ಸ್ವಯಂಸೇವಕ ಸಂಘ ಜೆ.ಎನ್.ಯು ನ ವಿರುದ್ಧ ಪಿತೂರಿಯನ್ನ ಮೊದಲೇ ಮಾಡಿತ್ತು ಅನ್ನುವಾಗ..... ನಿಮ್ಮ ಕಾರ್ಯಕ್ರಮ ಆಯೋಜನೆ ಆಗದೇ ಇದ್ದಿದ್ದರೆ ಈ ಪಿತೂರಿ ನಡೆಸಲು ಆಗುತ್ತಿತ್ತೇ ಅನ್ನುವ ಸರಳ ಪ್ರಶ್ನೆ ಅಥವಾ ಇಂಥಾ ಕಾರ್ಯಕ್ರಮ ದೇಶದ ಬೇರೆಲ್ಲೂ ಆಗಲಿಲ್ಲ ಯಾಕೆ... ನಿಮ್ಮಲ್ಲೇ ಇದು ಆಗಿದ್ದು ಯಾಕೆ ಅನ್ನುವ ಕಾರಣ ಕೇಳುವ ಧೈರ್ಯ ಇದೆಯಾ...?
೬. ರೋಹಿತ್ ಮೇಮುಲನ್ನ ಸರ್ಕಾರ ಕೊಂದಿತು ಅನ್ನುವಾಗ.... ರೋಹಿತ್ ವೇಮುಲನೇ ಆತ್ಮಹತ್ಯೆಗೆ ಮುನ್ನ ಬರೆದ ಕೊನೆಯ ಪತ್ರದಲ್ಲಿ ಏನು ಬರೆದಿದ್ದ ಅನ್ನೋದು ನಿನಗೆ ಗೊತ್ತಿದೆಯಾ ಅನ್ನುವ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...?
೭. ನಾವು ಸುಳ್ಳು ಟ್ವೀಟ್ ಮಾಡುವ ಸಂಘಿಗಳಿಂದ ಸ್ವಾತಂತ್ರ್ಯ ಬಯಸುತ್ತೇವೆ ಅಂದಾಗ..... ಸಂಘದವರು ನಿಮ್ಮನ್ನ ಯಾವ ವಿಚಾರದಲ್ಲಿ ಬಂಧನದಲ್ಲಿಟ್ಟಿದ್ದಾರೆ...? ಅನ್ನುವ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...?
೮. ಜೆ.ಎನ್.ಯು ನಲ್ಲಿನ ಹೋರಾಟದ ಧ್ವನಿಯನ್ನು ಅಡಗಿಸುವುದೇ ಸಂಘಿಗಳ ಉದ್ದೇಶ ಅನ್ನುವಾಗ..... ಹಾಗಿದ್ದರೆ ನಿಮ್ಮ ಚಳವಳಿಗೆ ಕವಿತಾ ವಾಚನ ಅನ್ನುವ ಶೀರ್ಷಿಕೆ ಕೊಟ್ಟು ಕಾರ್ಯಕ್ರಮ ನಡೆಸುವ ಅಗತ್ಯವೇನಿತ್ತು...? ನೇರವಾಗಿ ಬಡತನದ ವಿರುದ್ಧ ಹೋರಾಟ ಅನ್ನುವ ಶೀರ್ಷಿಕೆ ಯಾಕೆ ಕೊಡಲಿಲ್ಲ ಅನ್ನುವ ನೇರ ಸವಾಲು ಹಾಕುವ ತಾಕತ್ತು ನಿಮಗಿದೆಯಾ...?
೯. ಯಾವನೋ ಒಬ್ಬ ಪೇದೆಯ ಬಳಿ ಧಾರ್ಮಿಕ ವಿಚಾರ ಕೇಳಿ.... ರಾಮ ಮಂದಿರ ನಿರ್ಮಾಣದ ವಿಷಯ ಪ್ರಸ್ತಾಪಿಸಿ ಅದಕ್ಕೂ ತಮ್ಮ ಸಮ್ಮತಿಯಿಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದಾಗ.... ತಡೆದು... ಇದು ದೇಶದ ಬಹುಪಾಲು ಜನರ ಕನಸು... ಇಡಿಯ ದೇಶದಲ್ಲಿ ಎಷ್ಟು ಜನರಿಗೆ ಮಂದಿರದ ಬಯಕೆ ಇದೆ ಎಂದು ಮೊದಲು ತಿಳಿದುಕೊಳ್ಳುಬೇಕೆಂಬ ಪರಿಜ್ಞಾನ ನಿನಗಿದೆಯಾ ಅನ್ನುವ ನೇರ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...?
೧೦. ಷರತ್ತು ಬದ್ಧ ಜಾಮೀನಿನ ಮೇಲೆ ನೀನು ಹೊರಬಂದಿದ್ದೀಯ ಮೊದಲು ನಿರಪರಾಧಿ ಅಂತ ಸಾಬೀತುಪಡಿಸಿಕೋ ಆಮೇಲೆ ರಾಜಕಾರಣಿಯಂತೆ ಮಾತನಾಡು ಅನ್ನುವ ಸಲಹೆ ಕೊಡೋ ತಾಕತ್ತಿದೆಯಾ...?

ಸಣ್ಣ ಕಥೆಯ ಹಿಂದಿದೆಯೇ ನಮ್ಮ ನಂಬಿಕೆಯನ್ನೊಡೆಯೋ ಗುಪ್ತ ತಂತ್ರ....?ಅದೊಂದು ಸಣ್ಣ ಕತೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿತ್ತು.. ಓದುಗರನ್ನ ತಮ್ಮೊಳಗೇ ತರ್ಕಿಸುವಂತೆ ಮಾಡೋ ಕಥೆ.
ಒಬ್ಬಾತ ತನ್ನ ಮಗಳ ಜೊತೆ ದೇವಸ್ಥಾನಕ್ಕೆ ಹೋಗುತ್ತಾನಂತೆ. ಅಲ್ಲಿಗೆ ಹೋಗುತ್ತಿದ್ದಂತೆಯೇ ಆ ಪುಟ್ಟ ಹುಡುಗಿ... " ಅಪ್ಪಾ ಬೇಗ ಇಲ್ಲಿಂದ ಓಡೋಣ ಅಗೋ ಆ ಕಂಬದಲ್ಲಿ ಇರೋ ಸಿಂಹ ನಮ್ಮನ್ನ ತಿಂದು ಬಿಡುತ್ತದೆ... " ಎಂದು ಗಾಬರಿಯಿಂದ ಹೇಳತೊಡಗಿದಾಗ.... ಅವಳ ಅಪ್ಪ ಸಮಾಧಾನದಿಂದ ತುಸು ನಗುತ್ತಾ.... " ಹೆದರಬೇಡ ಮಗೂ ಅದೂ ಬರೀ ಮೂರ್ತಿ ಅಷ್ಟೇ " ಅದು ನಮ್ಮನ್ನೇನೂ ಮಾಡುವುದಿಲ್ಲ... ನಮಗೆ ಹಾನಿಯುಂಟು ಮಾಡಲು ಆ ಸಿಂಹದ ಮೂರ್ತಿಯಿಂದ ಸಾಧ್ಯವಿಲ್ಲ " ಅನ್ನುತ್ತಾ ಧೈರ್ಯ ತುಂಬುತ್ತಾನಂತೆ... ಆಗ ಪುಟ್ಟ ಹುಡುಗಿ " ಅಪ್ಪಾ ಕಂಬದಲ್ಲಿರೋ ಸಿಂಹದ ಮೂರ್ತಿಗೆ ನಮಗೇನೂ ಮಾಡಲು ಸಾಧ್ಯವಿಲ್ಲ ಎಂದಾದರೆ, ಗರ್ಭಗುಡಿಯಲ್ಲಿರೋ ದೇವರ ಮೂರ್ತಿಗೆ ನಮ್ಮನ್ನ ಕಾಪಾಡೋದಕ್ಕೆ ಆಗುತ್ತಾ...? " ಅನ್ನುತ್ತಾಳಂತೆ, ಆ ಮಾತಿಗೆ ಅಪ್ಪ ಚಕಿತಗೊಂಡು ಆ ಪುಟ್ಟ ಹುಡುಗಿಯ ಮಾರ್ಮಿಕ ನುಡಿಗೆ ತಲೆದೂಗಿ ಅಲ್ಲಿಂದ ತೆರಳುತ್ತಾನಂತೆ...
ಇದಿಷ್ಟು ಕಥೆ.... ಯಾರಾದರೂ ಮೂರ್ತಿ ಪೂಜಕರು ಇದನ್ನ ಓದಿದಾಗ, ತಾವು ಆಚರಿಸುತ್ತಿರೋ ಪೂರ್ತಿಪೂಜೆಯ ಕುರಿತಾಗೇ ದ್ವಂದ್ವಕ್ಕೆ ಬೀಳುವ ಸಾಧ್ಯತೆ ಇಲ್ಲದ್ದಿಲ್ಲ. ಇಲ್ಲಿ ನಾವಿದನ್ನ ಎರಡು ರೀತಿಯಲ್ಲಿ ವಿಶ್ಲೇಷಣೆ ಮಾಡಬೇಕಾಗಿದೆ. ಒಂದು.... ಮಕ್ಕಳು ಇಷ್ಟು ತಾರ್ಕಿಕವಾಗಿ ಯೋಚಿಸಿಯಾರೇ...? ಅನ್ನೋದೇ ಒಂದು ದೊಡ್ಡ ಪ್ರಶ್ನೆ... ಯಾಕಂದರೆ ನಾನು ನೋಡಿದಂತೆ ದೇವಸ್ಥಾನದಲ್ಲಿ ಮಕ್ಕಳ ಸಂಭ್ರಮವೇ ಹೇಳತೀರದ್ದು.... ದೇವರ ಗರ್ಭಗುಡಿಗೆ ಪ್ರದಕ್ಷಿಣೆ ಹಾಕುತ್ತಾ ಸುತ್ತಲೂ ಓಡೋದು.... ಕೈಗೆಟುಕದ ಗಂಟೆಯನ್ನ ಬಾರಿಸುವ ಪ್ರಯತ್ನ ಪಡೋದು... ಕಂಬದಲ್ಲಿನ ಪ್ರಾಣಿಗಳ ಮೂರ್ತಿಯನ್ನ ಮುಟ್ಟಿ ಮುಟ್ಟಿ ಆನಂದಿಸೋದು ಹೀಗೆ... ಇಂತಾದ್ದು ಅವರ ಅಚ್ಚುಮೆಚ್ಚಿನ ಹವ್ಯಾಸ... ಹಾಗಿರುವಾಗ ಇಂತಹಾ ತರ್ಕಬದ್ಧ ಮಾತು ಮಕ್ಕಳ ಬಾಯಿಯಿಂದ ಬಂದಿರುವ ಸಾಧ್ಯತೆ ಇದೆಯೇ...? ಇಲ್ಲ ಅಂತಾದರೆ ಇದು ಯಾರದೋ ಕಥೆಗಾರನ ಕಲ್ಪನೆ... ಇದರ ಕುರಿತು ಮತ್ತೆ ವಿವೇಚಿಸೋಣ. ಈಗಿನ ಮಕ್ಕಳು ಬಹಳಾನೇ ಬುದ್ಧಿವಂತರು ಇಂಥಾ ತರ್ಕಬದ್ಧ ಮಾತು ಹೇಳೋ ಸಾಧ್ಯತೆ ಇದೆ ಎಂದೇ ಇಟ್ಟುಕೊಳ್ಳೋಣ... ಆ ಹುಡುಗಿಯ ಮಾತಿಗೆ ತರ್ಕಬದ್ಧವಾಗಿಯೇ ಅಪ್ಪನಾದವ ಉತ್ತರಿಸಿದ್ದರೆ ಆ ಮಗುವಿನ ಮನದ ಸಂಶಯವೂ ನಿವಾರಣೆಯಾಗುತ್ತಿತ್ತು.
ಸರ್ವೇ ಸಾಧಾರಣವಾಗಿ ನಾವು ಎಡವೋದು ಇಲ್ಲಿಯೇ.... ಹೆಚ್ಚಿನ ಮಕ್ಕಳ ಪ್ರಶ್ನೆಗೆ.... " ಅದೆಲ್ಲಾ ಕೇಳಬಾರದು ಸುಮ್ಮನೆ ಕೂತ್ಕೋ..." ಅಂತಾನೇ ಹೆದರಿಸೋದು... ಹೆಚ್ಚಿನ ಪ್ರಶ್ನೆಗೆ ಉತ್ತರ ನಮಗೆ ಗೊತ್ತಿಲ್ಲ ಯಾಕಂದರೆ ನಮ್ಮ ಹಿರಿಯರು ನಮಗೆ ಹೇಳಿಲ್ಲ, ನಾವೂ ಗದರಿಸಲ್ಪಟ್ಟವರೇ.. ಇಂಥಾ ಪ್ರಶ್ನೆಗೆ ಉತ್ತರ ತಿಳಿದುಕೊಂಡು ಉತ್ತರಿಸೋ ವ್ಯವಧಾನ ನಮ್ಮಲ್ಲಿಲ್ಲ. ಹಾಗಾಗಿ ಮಕ್ಕಳಲ್ಲಿ ನಮ್ಮ ಆಚಾರ ವಿಚಾರ ರೀತಿ ನೀತಿಗಳೆಂದರೆ ಯಾವುದೇ ಗೌರವ ಇಲ್ಲದೆ ಒಂದು ರೀತಿಯ ಅಸಡ್ಡೆ ಬೆಳೆದು ಬಿಟ್ಟಿರುವುದು. ನಿಜಕ್ಕೂ ಈ ಕಥೆಯಲ್ಲಿ ಅಪ್ಪನಾದವ ತಿಳಿ ಹೇಳಬೇಕಿತ್ತು " ಮಗು... ಕಂಬದ ಮೇಲಿರೋ ಸಿಂಹಕ್ಕೂ ಗರ್ಭಗುಡಿಯಲ್ಲಿರೋ ದೇವರ ಮೂರ್ತಿಗೂ ವ್ಯತ್ಯಾಸವಿದೆ... ಗರ್ಭಗುಡಿಯ ಮೂರ್ತಿಗೆ ಮೊದಲಿಗೆ ಪ್ರಾಣ ಪ್ರತಿಷ್ಠೆಯಾಗುತ್ತದೆ, ಶಾಸ್ತ್ರೀಯ ರೀತಿಯಲ್ಲಿ ಒಂದಷ್ಟು ಸಂಸ್ಕಾರಗಳಾಗುತ್ತದೆ. ಪ್ರತಿ ನಿತ್ಯವೂ ಆ ಮೂರ್ತಿಗೆ ಪೂಜೆಯಾಗುತ್ತಾ ಆಗುತ್ತಾ ಅದು ಬರೀ ಮೂರ್ತಿಯಾಗಿರದೇ ಅದೊಂದು ಶಕ್ತಿಯಾಗುತ್ತದೆ. ನಾವಿಲ್ಲಿ ಬೇಡಲು, ನಮ್ಮನ್ನು ಕಾಪಾಡು ಅಂತ ಕೇಳಲು ಬರುವುದು ಬರಿಯ ಆ ಮೂರ್ತಿಯಲ್ಲಲ್ಲ , ಅದು ಅದರೊಳಗೆ ಇರೋ ಭಗವಂತನಲ್ಲಿ. ಹಾಗಾಗಿ ನಾವು ಮೂರ್ತಿಯ ಮುಂದೆ ಮಾಡಿದ ಪ್ರಾರ್ಥನೆಯನ್ನ ಆಲಿಸಿ ನಮ್ಮನ್ನ ಕಾಪಾಡಲು ಭಗವಂತ ಬಂದೇ ಬರುತ್ತಾನೆ... ಆದರೆ ಕಂಬದಲ್ಲಿರೋ ಸಿಂಹ ಅದು ಬರೀ ಮೂರ್ತಿ ಮಾತ್ರ ಅದಕ್ಕೆ ಯಾವುದೇ ಸಂಸ್ಕಾರಗಳಾಗೋದಿಲ್ಲ ಹಾಗಗಿ ಅದು ನಮ್ಮನ್ನೇನು ಮಾಡುವುದಿಲ್ಲ.... ನೀನು ನಿನ್ನ ಅಪ್ಪ ಅಮ್ಮನ ಫೋಟೋಗೆ ಕೆಲವೊಮ್ಮೆ ಪ್ರೀತಿಯಿಂದ ಮುತ್ತು ಕೊಡುತ್ತೀಯಲ್ಲಾ ಅದು ಯಾರಿಗಾಗಿ ಕೊಡೋದು ಯಾರಿಗಾಗಿ ಮಗೂ... ಆ ಫೋಟೋ ಇರುವ ಹಾಳೆಗೆ ಅಲ್ಲ ಅಲ್ವಾ.... ನೀನು ನಿನ್ನ ಪ್ರೀತಿಯನ್ನ ತೋರಿಸೋದು ನಿನ್ನ ಅಪ್ಪ ಅಮ್ಮನ ಮೇಲೆ ತಾನೇ.... ಹಾಗೆಯೇ ನಾವು ಇಲ್ಲಿ ಪೂಜಿಸೋದು ದೇವರ ಮೂರ್ತಿಯೊಳಗಿರುವ ದೇವರನ್ನು " ಅಂತ ಹೇಳಿದ್ದರೆ ಮಗುವಿಗೂ ನಮ್ಮ ಮೂರ್ತಿಪೂಜೆಯ ಹಿಂದಿರೋ ಸಂಕೇತಾರ್ಥ ತಿಳಿದುಬಿಡುತಿತ್ತು.
ಇದೊಂದು ಬುದ್ಧಿಜೀವಿಗಳು ಸಿದ್ದ ಮಾಡಿರೋ ಕಥೆ, ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಮೂರ್ತಿಪೂಜೆಯನ್ನ ಅಪಹಾಸ್ಯ ಮಾಡೋ ಹುನ್ನಾರ ಅಂತ ನಾನೇನಾದರೂ ಹೇಳಿದರೆ ಜನ ನನ್ನ ಯೋಚನೆಯನ್ನೇ ಟೀಕಿಸಿಯಾರು... ಆದರೂ ಒಮ್ಮೆ ಯೋಚಿಸಿ ನೋಡಿ ಇದರಲ್ಲಿ ನಮ್ಮ ಮೂರ್ತಿ ಪೂಜೆಯ ಆರಾಧನೆಯ ಬಗ್ಗೆಯೇ ಪ್ರಶ್ನೆ ಎತ್ತಿರುವುದು ಅಂತನಿಸೋದಿಲ್ವಾ....? ಮೂರ್ತಿ ಪೂಜೆಯ ಅಪಹಾಸ್ಯವೇ ಹೌದು ಅಂತಾದರೆ ಅದನ್ನ ನಾವು ವಿರೋಧಿಸಬೇಕಲ್ವಾ... ಅಥವಾ ಮೂರ್ತಿ ಪೂಜೆಯನ್ಯಾಕೆ ನಾವು ತಲೆತಲಾಂತರಗಳಿಂದ ನಡೆಸಿಕೊಂಡು ಬಂದಿದ್ದೇವೆ ಅನ್ನೋದನ್ನ ಹೇಳೋದು ಬೇಡವೇ...??? ಈ ಮೂರ್ತಿ ಪೂಜೆಯ ಬಗ್ಗೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಉಪನ್ಯಾಸವೊಂದರಲ್ಲಿ ಬಹಳ ಸೊಗಸಾಗಿ ವಿವರಣೆ ಕೊಡುತ್ತಾರೆ. ಒಮ್ಮೆ ಅವರು ಮುಸ್ಲಿಂ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಡುತ್ತಾರಂತೆ... ಅಲ್ಲಿ ಅವರು ಖುರಾನಿನ ಭಾಗವಾದ " ಮೂರ್ತಿ ಪೂಜಕರು ನರಕಕ್ಕೆ ಹೋಗುತ್ತಾರೆ " ಅನ್ನುವುದನ್ನ ಉಲ್ಲೇಖಿಸಿ ಇದು ಸರಿಯಾಗಿದೆ ನಾನೂ ಕೂಡಾ ಮೂರ್ತಿ ಪೂಜಕರು ನರಕಕ್ಕೆ ಹೋಗಲಿ ಅನ್ನುತ್ತೇನೆ ಇದರ ಕುರಿತು ನನ್ನದೇನೂ ಅಭ್ಯಂತರವಿಲ್ಲ.... ಯಾಕೆಂದರೆ ನಾವು ಮೂರ್ತಿ ಪೂಜಕರಲ್ಲ ಆ ಮೂರ್ತಿಯೊಳಗಿನ ಭಗವಂತನ ಪೂಜಕರು " ಅಂದರಂತೆ... ಇನ್ನೂ ವಿವರಣೆ ನೀಡುತ್ತಾ ಸರ್ವಶಕ್ತನಾದ ಭಗವಂತ ಜಗತ್ತಿನ ಕಣ ಕಣದಲ್ಲಿಯೂ ಇದ್ದಾನೆ ಅಂತಾದರೆ ಆ ಮೂರ್ತಿಯ ಶಿಲೆಯ ಕಣಕಣದಲ್ಲಿ ಇಲ್ಲದೇ ಇರುತ್ತಾನೆಯೇ...? ಹಾಗಿದ್ದರೆ ಆ ಕಣದೊಳಗಿರುವ ಭಗವಂತನನ್ನ ಪೂಜಿಸೋದು ಹೇಗೆ ವ್ಯರ್ಥವಾಗುತ್ತದೆ...? ಅನ್ನುತ್ತಾರೆ.
ಅಷ್ಟಕ್ಕೂ ಪೂಜೆ ಅಂದರೆ ಏನು...? ನಮ್ಮ ಸೃಷ್ಟಿಗೆ, ಸ್ಥಿತಿಗೆ ಲಯಕ್ಕೆ ಕಾರಣನಾದ ಪರಮಾತ್ಮನನ್ನ ಗೌರವಿಸುವ ವಿಧಾನ... ಮಾನಸಿಕವಾಗಿಯೂ ಪೂಜೆ ಮಾಡಬಹುದು, ಆದರೆ ನಾವೆಲ್ಲಾ ಸಾಮಾನ್ಯ ಜನರು ಮಾನಸಿಕ ಪೂಜೆಯಂತಹಾ ಆಧ್ಯಾತ್ಮಿಕ ಹಂತಕ್ಕೇರಲು ಸ್ವಲ್ಪ ಸಮಯ ಹಿಡಿದೀತು ಅನ್ನುವ ಕಾರಣಕ್ಕಾಗಿಯೇ ನಮ್ಮಲ್ಲಿ ಮೂರ್ತಿ ಪೂಜೆಯ ಪದ್ಧತಿ ಬಂದಿದ್ದು. ಪ್ರತಿ ದಿನವೂ ಮೂರ್ತಿಯಲ್ಲಿ ಭಗವಂತನನ್ನ ಆವಹನೆ ಮಾಡಲಾಗುತ್ತದೆ... ಆ ಮೂರ್ತಿಯಲ್ಲಿ ಆವಹಿಸಲ್ಪಟ್ಟ ಭಗವಂತನಿಗೇನೇ ನಾವು ನೈವೇದ್ಯ ಬಡಿಸೋದು, ಆರತಿ ಬೆಳಗೋದು. ಮೂರ್ತಿಯ ಪ್ರತಿಷ್ಠಾಪನೆಯನ್ನ ನಾವು " ಪ್ರಾಣ ಪ್ರತಿಷ್ಠೆ " ಅಂತಲೂ ಹೇಳುತ್ತೇವಲ್ಲಾ ಯಾಕಾಗಿ...? ಆ ಮೂರ್ತಿಯೊಳಗೆ ಪ್ರಾಣವಿದೆ ಅನ್ನುವುದನ್ನ ನಂಬುತ್ತೇವೆ... ಆ ನಂಬಿಕೆಯೇ ನಮ್ಮ ಶಕ್ತಿ.... ಪುರಾಣ ಕಾಲದಲ್ಲಿ ಮಾರ್ಕಂಡೇಯ ಅನ್ನುವ ಬಾಲಕ, ಭಗವಂತನೇ ಎಂದು ಬಿಗಿದಪ್ಪಿಕೊಂಡದ್ದು ಶಿವಲಿಂಗವನ್ನೇ ಅಲ್ವೇ.... ಅವನ ಭಕ್ತಿಗೆ ಶಿವ ಒಲಿಯಲಿಲ್ಲವೇ.... ಅಯ್ಯೋ ಕಲ್ಲಿನ ಮೂರ್ತಿಯನ್ನ ಅಪ್ಪಿಕೊಂಡಿದ್ದಾನೆ ನಾನೇಕೆ ಹೋಗಲಿ ಅಂತ ಸುಮ್ಮನಿದ್ದನೇ...? ಇಂತಹಾ ಕಥೆಯ ಮೂಲಕ ನಮ್ಮ ಮಕ್ಕಳಿಗೆ ತಿಳಿಹೇಳಿದ್ದರೆ ಈಗ ಹರಿದಾಡುತ್ತಿರೋ ಕಥೆಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿತ್ತು ಅಲ್ವಾ....?
ಆದರೆ ಇಂದು ಅಂಥಹಾ ಕಥೆಯನ್ನ ಹಲವಾರು ಜನ ವಾಟ್ಸಾಪ್ ನಲ್ಲಿ ನೋಡಿ, ಅಬ್ಬಾ ಅದ್ಭುತ ಅನ್ನುತ್ತಾ ಇನ್ನೊಂದಿಷ್ಟು ಜನರಿಗೆ ಕಳುಹಿಸಿ ಅದೇನೋ ಸಾಧನೆ ಮಾಡಿದ ರೀತಿ ಬೀಗುತ್ತಾರೆಯೇ ಹೊರತು ಇದು ನಮ್ಮ ಮೂಲ ಸಂಸ್ಕೃತಿಗೆ, ನಮ್ಮ ಪೂಜಾ ವಿಧಾನದ ಮೇಲೆ ಗೊತ್ತಾಗದಂತೆ ನಡೆಯುತ್ತಿರೋ ಪ್ರಹಾರ ಅನ್ನೋದನ್ನ ತಿಳಿಯೋದೇ ಇಲ್ಲ.... ಸರಿ ಒಪ್ಪೋಣ ಇಂಥಾ ಕಥೆಯ ಹಿಂದೆ ಈ ರೀತಿಯ ಯೋಚನೆ ಯೋಜನೆಗಳಿಲ್ಲ ಅಂತ... ಹಾಗಿದ್ದರೂ ನಮ್ಮ ನಂಬಿಕೆ ನಮ್ಮ ಸಂಸ್ಕಾರಗಳಲ್ಲಿ ಶ್ರದ್ಧೆ ಹೆಚ್ಚುವಂಥೆ ಮಾಡೋ ಪೌರಾಣಿಕ ಕಥೆಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆಯಾ...? ಒಮ್ಮೆ ಪ್ರಶ್ನಿಸಿ ಅದು ಇಲ್ಲ ಅಂತಾದರೆ ಇದನ್ಯಾಕೆ ಹರಡೋದು...? ನಮ್ಮ ಸಂಸ್ಕಾರಕ್ಕೇ ಕೊಡಲಿಯೇಟೇ...? ಅಯ್ಯೋ ಇದು ವಿಪರೀತವಾಯಿತಪ್ಪಾ ಇಷ್ಟು ಸಣ್ಣ ಕಥೆಗೆ ಇಷ್ಟುದ್ದದ ಹರಿಕಥೆ ಬೇಕಿತ್ತಾ...? ಅಂತ ಒಂದಷ್ಟು ಜನರಿಗೆ ಅನಿಸಬಹುದು ಆದರೆ ಇದನ್ನ ಹೇಳೋದಿಕ್ಕೆ ಕಾರಣ ಒಂದೇ.... ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ಭವ್ಯ ಸಂಸ್ಕಾರ ಸಂಸ್ಕೃತಿಯ ಅರಿವು ಇರಬೇಕು. ಆ ಸಂಸ್ಕಾರಗಳು ಆಚಾರ ವಿಚಾರಗಳು ಉಳಿಯಬೇಕು ಅಂತಾದರೆ ಅದನ್ನ ಇಂದು ನಾವು ಅದನ್ನ ಪಾಲಿಸಬೇಕು... ನಮ್ಮನ್ನ ನೋಡಿಯೇ ತಾನೇ ಮಕ್ಕಳು ಕಲಿಯೋದು... ಮಕ್ಕಳಾಗಿರುವಾಗಲೇ ನಮ್ಮ ನಂಬಿಕೆಗಳ ಮೇಲೆ ಅಭಿಮಾನ ಮೂಡಿದರೆ ಅದು ಶಾಶ್ವತ ಅಲ್ವೇ... ಒಮ್ಮೆ ಯೋಚಿಸಿ ನೋಡಿ....

ಇವರೆಂಥಾ ನಾಯಕರು ......?ಈ ದೇಶಕ್ಕೆ ಎಂದಿಗೂ ನಾಯಕರ ಕೊರತೆ ಕಂಡು ಬಂದದ್ದಿಲ್ಲ. ಸ್ವಾತಂತ್ರ್ಯ ಸಿಗೋ ಮುಂಚೆ ಈ ದೇಶದಲ್ಲಿ ಕಾಣಿಸಿಕೊಂಡ ನಾಯಕರ ಪಟ್ಟಿ ಸುಲಭದಲ್ಲಿ ಮುಗಿಯುವಂಥದ್ದಲ್ಲ. ಸ್ವಾತಂತ್ರ್ಯ ಸಿಕ್ಕ ನಂತರವೂ ಜನನಾಯಕರಿಗೇನೂ ಕೊರತೆಯಾಗಿದ್ದಿಲ್ಲ.ಆದರೆ ಆಗಿನ ನಾಯಕರಿಗೂ ಈಗಿನ ನಾಯಕರಿಗೂ ಎಷ್ಟೊಂದು ವ್ಯತ್ಯಾಸ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಜನನಾಯಕರ ವರ್ತನೆ ಮನಸ್ಸಿಗೆ ಆಘಾತವನ್ನ ಕೊಡುತ್ತಿದೆ. ಅಷ್ಟಕ್ಕೂ ಜನಸೇವೆ ಅನ್ನೋದು ಹಲವರಿಗೆ ಅಧಿಕಾರ ಗಳಿಸೋ ಮಾರ್ಗವಾಗಿ ಆಮೇಲೆ ಮರೆತು ಬಿಡಬೇಕಾದ ಪದವಾಗಿದೆಯಾ.....??? ಹೀಗೊಂದು ಅನುಮಾನ ನನ್ನನ್ನು ಬಲವಾಗಿ ಕಾಡುತ್ತದೆ. ಕೆಲವೊಂದು ನಾಯಕರ ವರ್ತನೆಯೇ ಇದಕ್ಕೆ ಕಾರಣ.
ಒಂದೆರಡು ಉದಾಹರಣೆಯನ್ನ ಕೈಗೆತ್ತಿಕೊಳ್ಳೋಣ... ಬಿಹಾರದ ಮುಖ್ಯ ಮಂತ್ರಿಯಾದ ನಿತೀಶ್ ಕುಮಾರ್ ಇತ್ತೀಚೆಗೆ ನಡೆದ ವಿಶ್ವ ಯೋಗ ದಿನಾಚರಣೆಯನ್ನ ತಮ್ಮ ರಾಜ್ಯದಲ್ಲಿ ಆಚರಿಸಲಿಲ್ಲವಂತೆ. ಇದರ ಹಿಂದಿರುವ ಉದ್ದೇಶ ಬಹುತೇಕ ಸ್ಪಷ್ಟ. ತಮ್ಮ ರಾಜಕೀಯ ವಿರೋಧಿಯ ಜನಪ್ರಿಯತೆಗೆ ಪೂರಕವಾದದ್ದನ್ನ ತಾನೇಕೆ ಮಾಡಲಿ. ...? ಅನ್ನೋದು. ಆದರೆ ಇದರಿಂದಾಗಿ ನಷ್ಟವಾಗುತ್ತಿರೋದು ಇಡಿಯ ರಾಜ್ಯಕ್ಕೆ. ಮತ್ತು ಅವಮಾನಾಗಿದ್ದು ಭಾರತದ ಅನನ್ಯ ಕೊಡುಗೆಯಾದ ಯೋಗ ಕ್ಕೆ. ಯೋಗವೇನೂ ಮೋದಿಯವರು ಕಂಡು ಹಿಡಿದಿದ್ದಲ್ಲ. ಅದು ಜಗತ್ತಿಗೆ ಭಾರತ ಕೊಟ್ಟ ಭವ್ಯ ಉಡುಗೊರೆ. ಯೋಗವನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವರ ಆರೋಗ್ಯದಲ್ಲಿ ಏರು ಪೇರಾಗುವುದು ತೀರಾ ಕಡಿಮೆ ಅನ್ನುವುದನ್ನ ಈಗ ಜಗತ್ತೇ ಒಪ್ಪುತ್ತದೆ ಹಾಗಿದ್ದೂ ತಮ್ಮ ವೈಯುಕ್ತಿಕ ದ್ವೇಷಕ್ಕೆ ಇಡಿಯ ರಾಜ್ಯದ ಜನತೆಯ ಹಿತವನ್ನು ಬಲಿಗೊಡೋದು ಒಬ್ಬ ಜನನಾಯಕನ ಲಕ್ಷಣವೇ....? ಇದು ಜನರ ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದವ ಮಾಡಬಹುದಾದಂತಹಾ ಕಾರ್ಯವೇ...?
ಪಕ್ಕದ ರಾಜ್ಯದಲ್ಲಿ ಅತಿವೃಷ್ಟಿಯಾದಾಗ ನಮ್ಮ ರಾಜ್ಯದ ಸಹಾಯವನ್ನು ತಿರಸ್ಕರಿಸಲಾಯಿತು. ಇದು ಯಾವ ರೀತಿಯ ಜನಸೇವೆ. ಸ್ವಾಭಿಮಾನಿಯಾದವನೊಬ್ಬ ತನ್ನ ವೈಯಕ್ತಿಕ ಅಗತ್ಯಕ್ಕಾಗಿ ಇನ್ನೊಬ್ಬರ ಸಹಾಯ ವನ್ನು ತಿರಸ್ಕರಿಸೋದು ಸಹಜ. ಆದರೆ ಇಲ್ಲಿ ಪ್ರಶ್ನೆ ಜನರ ಅಸಹಾಯತೆಯ ಕುರಿತಾದದ್ದು ತಾನೆ. ಆ ಸಹಾಯವೇನೂ ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಕೊಟ್ಟದ್ದಲ್ಲ. ನಮ್ಮದೇ ದೇಶದ ಜನ ಕಷ್ಟದಲ್ಲಿದ್ದುದನ್ನ ಕಂಡಾಗ ಸಹಜ ಮಾನವೀಯತೆಯಿಂದ ಕೊಡಲ್ಪಟ್ಟ ಕೊಡುಗೆ. ಅದೆಷ್ಟೇ ನೆರವು ಸಿಕ್ಕರೂ ಸ್ವೀಕರಿಸಿ ಅದನ್ನ ಸಂತ್ರಸ್ತರಿಗೆ ತಲುಪಿಸಬೇಕಾದದ್ದು ನಿಜವಾದ ಜನನಾಯಕ ನ ಕೆಲಸ .ತನ್ನ ವೈಯುಕ್ತಿಕ ಪ್ರತಿಷ್ಠೆಗಾಗಿ ಜನರಿಗೆ ಸಿಕ್ಕ ಅಗತ್ಯ ಸಹಾಯವನ್ನು ತಪ್ಪಿಸೋದು ಎಂತಹಾ ಜನಸೇವೆ.
ನಮ್ಮದೇ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ದಾಗ, ಕೇಂದ್ರದ ಸಹಾಯವನ್ನು ತಿರಸ್ಕರಿಸೋ ರಾಜನೀತಿಯಲ್ಲಿ ಪಕ್ಷದ ಪ್ರತಿಷ್ಠೆಯಷ್ಠೇ ಎದ್ದು ಕಾಣುತ್ತದೆ ಹೊರತು ಆ ಪಕ್ಷದ ನಾಯಕರ ಮನಸ್ಸಿನಲ್ಲಿರೋ ಜನಸೇವೆಯ ತುಡಿತ ಕಾಣಿಸೋದಿಲ್ಲ. ಎಲ್ಲಿಯವರೆಗೆ ಅಂದರೆ ಈ ಹಿಂದಿನ ಸರಕಾರ ಹಾಕಿದ್ದ ಕಾಮಗಾರಿ ಯ ಕುರಿತಾದ ಮಾಹಿತಿಯನ್ನು ಕಿತ್ತು ಬಿಸಾಕಲು ಖರ್ಚು ಮಾಡೋಕೆ ತಯಾರಿರುತ್ತಾರೆ ಆದರೆ. ಅದೇ ಹಣವನ್ನು ಜನರಿಗಾಗಿ ಕೊಡಿಸಲು ಮುಂದೆ ಹಿಂದೆ ನೋಡುತ್ತಾರೆ. ತಾವು ಅಧಿಕಾರದಲ್ಲಿದ್ದಾಗ ಮಾಡಲಾಗದ್ದನ್ನು ಅಧಿಕಾರದಲ್ಲಿರೋರು ಮಾಡುತ್ತಾರೆ ಅನ್ನೋದನ್ನೂ ಸಹಿಸಲಾರರು. ಇದು ಈಗಿನ ಹಲವಾರು ನಾಯಕರ ಮನಸ್ಥಿತಿ.
ಇನ್ನೂ ಹಲವರ ಮನಸ್ಥಿತಿ ಹೇಗೆಂದರೆ ದೇಶಕ್ಕೆ ಹಾನಿಯಾದರೂ ಪರವಾಗಿಲ್ಲ ತನ್ನ ವಿರೋಧಿ ಗೆ ಜಯವಾಗಬಾರದು. ಇತ್ತೀಚೆಗೆ ನಮ್ಮ ಪ್ರಧಾನಿ ತನ್ನ ದೇಶವನ್ನ “ ಪರಮಾಣು ಸರಬರಾಜು ಒಕ್ಕೂಟದ “ ಸದಸ್ಯರಾಷ್ಟ್ರವನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದದ್ದನ್ನ ಕಂಡಿದ್ದೇವೆ. ಇದು ಸಫಲವಾಗದ್ದಕ್ಕೆ ಖುಷಿ ಪಟ್ಟ ನಾಯಕರು ಅದೆಷ್ಟಿಲ್ಲ. ಒಂದು ಪಕ್ಷದ ಕಾರ್ಯಕರ್ತರಂತೂ ಕುಣಿದು ಕುಪ್ಪಳಿಸಿದರಂತೆ. ವಿರೋಧಿಯನ್ನ ಸೋಲಿಸೋ ನೆಪದಲ್ಲಿ ಈ ಮಣ್ಣಿಗೆ... ಈ ಮಣ್ಣಿನ ಮಕ್ಕಳಿಗೆ ದ್ರೋಹ ಎಸಗುತ್ತಿದ್ದಾರಲ್ಲ ಇವರದೆಂತಹಾ ರಾಜಕೀಯ....? ದೇಶದ ಸೋಲನ್ನ ವ್ಯಕ್ತಿಯ ಸೋಲು ಎಂದು ಸಂಭ್ರಮಿಸುವವರ ಪಕ್ಷದ ಉದ್ದೇಶ ದೇಶೋದ್ದಾರ ಅಂದರೆ ನಂಬಲು ಸಾಧ್ಯವೇ...?
ಜನಸೇವೆಯ ಆಶಯವನ್ನಿಟ್ಟುಕೊಂಡ ವ್ಯಕ್ತಿ... ಮೊದಲು ತನ್ನ ವೈಯಕ್ತಿಕ ಪ್ರತಿಷ್ಠೆಯನ್ನ ಬದಿಗಿಡಬೇಕು. ಜನರಿಗೆ ಒಳ್ಳೆಯದಾಗುವುದಾದರೆ ವಿರೋಧಿಯ ಎದುರು ಸಣ್ಣವನಾಗುವುದಕ್ಕೆ ತಯಾರಾಗುವವನೇ ನಿಜವಾಗಿ ಜನರ ಕಣ್ಣಲ್ಲಿ ದೊಡ್ಡವನಾಗೋದು. ಈ ದೇಶದ ಉದ್ದಾರವೇ ನಮ್ಮ ಧ್ಯೇಯವಾದಾಗ ಅದರ ಈಡೇರಿಕೆಯೇ ಪ್ರಾಮುಖ್ಯ ವಾಗುತ್ತದೆಯೇ ಹೊರತು ಯಾರಿಂದ ಆಯಿತು ಅನ್ನುವುದು ಮುಖ್ಯವಾಗುವುದಿಲ್ಲ. ಎಲ್ಲವೂ ತನ್ನಿಂದಲೇ ಆಗಬೇಕೆನ್ನುವ ಮನೋಭಾವವೂ ಸರಿಯಲ್ಲ. ಸಹಾಯ ಸಿಗಬೇಕಾದವರಿಗೆ ಸೂಕ್ತ ಕಾಲದಲ್ಲಿ ಸಹಾಯ ಸಿಗುವುದೇ ಮುಖ್ಯ ತಾನೇ.. ತಾನು ಮಾಡಲಾಗದ್ದನ್ನು ಇನ್ನಾರೂ ಮಾಡಬಾರದು ಅನ್ನೋದು ಒಂದು ರೀತಿಯ ವಿಕೃತಿಯೇ ತಾನೇ.
ಟೀಕೆಯೂ ಇದಕ್ಕೆ ಹೊರತಾದದ್ದಲ್ಲ. ಟೀಕೆಯ ಮೂಲ ಉದ್ದೇಶವೇ ಜನಹಿತವಾಗಿರಬೇಕು. ಅದಲ್ಲದೇ ಕೇವಲ ಟೀಕೆಗಾಗಿ ಟೀಕೆ ಅಂತಾದರೆ ಸಮಾಜದ ಏಳಿಗೆ ಆಗುವುದಾದರೂ ಹೇಗೆ..? ಯಾವಾಗ ಜನಸೇವೆ ಮಾತ್ರ ನನ್ನ ಮೂಲ ಮಂತ್ರ ಅನ್ನುವ ಭಾವನೆ ರಾಜಕಾರಣಿಯ ಮನಸ್ಸಿನಲ್ಲಿ ಮೂಡುವುದೋ ಅಂದು ಆತ ಒಬ್ಬ ರಾಜಕಾರಣಿಯಿಂದ ಜನಸೇವಕನಾಗಿ ಬದಲಾಗುತ್ತಾನೆ. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತ ಅಂತಲ್ಲ ಪ್ರತಿಯೊಂದು ಪಕ್ಷದ ಶಾಸಕರಿಗೂ ಇದು ಅನ್ವಯಿಸುತ್ತದೆ. ಭಾರತ ವಿಶ್ವಗುರುವಾಗಬೇಕಾದರೆ ನಮ್ಮಲ್ಲಿ ಜನಸೇವಕರ ಸಂಖ್ಯೆ ಹೆಚ್ಚಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಇರೋ ನಮ್ಮೀ ದೇಶದಲ್ಲಿ ರಾಜಕಾರಣಿ ಗಳನ್ನ ಹಿಂದಕ್ಕೆ ತಳ್ಳಿ ತೆರೆಮರೆಯ ಕಾಯಿಯಂತಿರೋ ಜನಸೇವಕರನ್ನ ನಾವು ತಾನೇ ಮುಂದಕ್ಕೆ ತರಬೇಕು. ಈ ನಿಟ್ಟಿನಲ್ಲಿ ನಾವು ಯೋಚಿಸಿ ಕಾರ್ಯತತ್ಪರರಾಗೋಣವೇ....?

ನಾವು ತೊಡುವ ಬಟ್ಟೆಯೂ ನಮ್ಮ ಸಂಸ್ಕೃತಿಯ ಭಾಗವೇ ತಾನೇ...ನಾವು ತೊಡುವ ಬಟ್ಟೆಯ ಬಗೆಗಿನ ಟೀಕೆ....ಈ ವಿಷಯ ಹಳೆಯದ್ದೇ ಹೊಸತೇನೂ ಅಲ್ಲ. ಇದರ ಪರ ವಿರೋಧದ ಚರ್ಚೆ ಹಲವಾರು ಬಾರಿ ಆಗಿ ಹೋಗಿದ್ದಿರಬಹುದು. ಆದರೂ ನನ್ನ ಅಭಿಪ್ರಾಯ ಹೇಳಿಕೊಳ್ಳುವ ವೇದಿಕೆ ಇದ್ದಿರಲಿಲ್ಲ. ನನ್ನ ಅನಿಸಿಕೆ ಸರಿಯೋ ಸುಳ್ಳೋ ಗೊತ್ತಿಲ್ಲ ಆದರೂ ಹಂಚಿಕೊಳ್ಳುವ ವೇದಿಕೆಯನ್ನ ಉಪಯೋಗಿಸಿಕೊಳ್ಳೋಣ ಅನ್ನುವ ಆಸೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಹೀಗೊಂದು ಪ್ರಶ್ನೆ ಉದ್ಭವವಾಯ್ತು.... " ಸೀರೆ ಉಟ್ಟುಕೊಂಡವರು ಮಾತ್ರ ಸಂಸ್ಕಾರವಂತರಾ...? ಜೀನ್ಸ್ ಪ್ಯಾಂಟ್ ಮತ್ತು ಟೀಶರ್ಟ್ ಹಾಕಿ ಅಥವಾ ಪಾಶ್ಚತ್ಯ ಉಡುಪು ತೊಟ್ಟು ಪೂರ್ತಿ ಮೈಮುಚ್ಚಿ ಕೊಳ್ಳುವವರು, ಸೀರೆ ಉಟ್ಟು ಸೊಂಟ, ಹೊಕ್ಕಳು ತೋರಿಸಿಕೊಂಡು ಹೋಗುವವರಿಗಿಂತ ಉತ್ತಮ ಅಲ್ವೇ...? ಉಟ್ಟ ಬಟ್ಟೆಯಿಂದ ಒಬ್ಬರ ವ್ಯಕ್ತಿತ್ವ ಅಳೆಯೋದು ಎಷ್ಟು ಸರಿ... ?" ಅಂತ. ನಿಜ ಉಟ್ಟ ಬಟ್ಟೆಯಿಂದ ಯಾರ ವ್ಯಕ್ತಿತ್ವವನ್ನೂ ಅಳೆಯಲಾಗದು. ಸೀರೆ ಉಟ್ಟವರೇ ಸಂಸ್ಕಾರವಂತರು, ಪಾಶ್ಚಾತ್ಯ ಬಟ್ಟೆ ತೊಟ್ಟವರೆಲ್ಲಾ ಸಂಸ್ಕಾರಹೀನರು ಅಂತ ಘೋಷಿಸೋ ಹಾಗಿಲ್ಲ. ಹಾಗೇನಾದರೂ ಯೋಚಿಸಲು ಹೋದರೆ ನಾವು ಎಡವಿ ಬೀಳೋ ಸಾಧ್ಯತೆಯೇ ಹೆಚ್ಚು.
ಇಲ್ಲಿ ಎರಡು ವಿಚಾರಗಳಿವೆ. ಒಂದು ಮೈ ಮುಚ್ಚುವಿಕೆ ಮತ್ತು ಸಂಸ್ಕಾರ. ಮೈ ಮುಚ್ಚುವಿಕೆಯನ್ನ ನೋಡಿಯೂ ವ್ಯಕ್ತಿತ್ವ ಅಳೆಯೋಕೆ ಸಾಧ್ಯವಿಲ್ಲ. ಇಲ್ಲಿ ಸೂಕ್ಷ್ಮವಾಗಿ ಗಮನಿಸಿ... ಆಧುನೀಕತೆಯ ಪಾಶ್ಚಾತ್ಯ ಉಡುಗೆಗಳು ಹೆಚ್ಚಿನವು ಮೈಗಂಟಿದಂತಿದ್ದು... ಅದು ನೋಡಲು ಉದ್ರೇಕಕಾರಿಯೇ ಹೊರತು ಸಂಸ್ಕಾರಪೂರಿತ ಅಂತನಿಸೋದು ಕಡಿಮೆಯೇ... ಕೆಲವೊಂದು ಉಡುಗೆ ಉದ್ರೇಕಕಾರಿಯಾಗಿ ಇಲ್ಲದೆಯೂ ಇರಬಹುದು. ಆದರೂ ಪೂರ್ತಿ ಮೈ ಮುಚ್ಚಿದ ಬಟ್ಟೆ ಹಾಕಿಯೂ ಉದ್ರೇಕಕಾರಿಯಾಗಿದ್ದರೆ ಆಕೆ ಗೌರವಾರ್ಹಳು ಹೇಗಾದಾಳು...? ಪೂರ್ತಿ ಮೈಮುಚ್ಚಿಯೂ ಏನು ಫಲ...?? ಹಾಗಾಗಿ ಪೂರ್ತಿ ಮೈ ಮುಚ್ಚುವ ಬಟ್ಟೆ ಹಾಕಿದವಳೇ ಸಂಸ್ಕಾರವಂತಳು ಅನ್ನೋದು ಕೂಡಾ ಮೇಲಿನಂತೆ ತಪ್ಪು ಕಲ್ಪನೆಯೇ ಆಗೋದಿಲ್ವಾ.... ಈಗ ಭಾರತೀಯ ಉಡುಪುಗಳ ಬಗ್ಗೆ ಮಾತಾಡುವುದಾದರೆ ಹೆಚ್ಚು ಕಡಿಮೆ ಅದರ ರೀತಿಯಲ್ಲೇ ತೊಡುವುದಾದರೆ ಇಲ್ಲಿನ ಉಡುಪು ಉದ್ರೇಕಕಾರಿಯಂತೂ ಅಲ್ಲವೇ ಅಲ್ಲ. ಸೀರೆಯನ್ನೂ ಅಂಗಾಂಗ ಪ್ರದರ್ಶಿಸುವ ರೀತಿಯಂತೆ ಉಡಲು ಹೇಳಿಕೊಟ್ಟಿದ್ದು ಸಿನಿಮಾರಂಗ. ಅದೂ ಪಾಶ್ಚಾತ್ಯರ ಪ್ರಭಾವಕ್ಕೊಳಗಾದ ಕ್ಷೇತ್ರ. ಹಾಗಾಗಿ ಭಾರತೀಯ ಉಡುಗೆ ತನ್ನ ಮೂಲರೂಪದಲ್ಲಿ ಎಲ್ಲಿಯೂ ಅಸಹ್ಯ ಅಂತ ಅನಿಸೋದು ಕಡಿಮೆಯೇ. ಭಾರತೀಯ ಉಡುಪುಗಳನ್ನ ಪ್ರಚೋದಿಸುವ ರೀತಿಯಲ್ಲಿ ಉಟ್ಟರೂ ಸಹ್ಯವಲ್ಲ ಅದು ನಿಜವಾಗಿ ಅವರ ವ್ಯಕ್ತಿತ್ವವನ್ನ ತೆರೆದಿಡುತ್ತದೆ ಅಷ್ಟೇ...
ಎರಡನೆಯದಾಗಿ ಸಂಸ್ಕಾರ...ನನಗನಿಸಿದಂತೆ ಇಲ್ಲಿ ನಾವು ಸಂಸ್ಕಾರಕ್ಕಿಂತಲೂ ಸಂಸ್ಕೃತಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು... ಯಾಕೆಂದರೆ ಮೇಲೆ ಹೇಳಿದಂತೆಯೇ ಭಾರತೀಯ ಉಡುಪನ್ನ ತೊಟ್ಟು ಅನಾಚಾರ ಮಾಡೋ ವ್ಯಕ್ತಿಗಳೂ ಇರುತ್ತಾರೆ. ಅವರ ಅನಾಚಾರಕ್ಕೆ ಉಡುಪು ಕಾರಣವಲ್ಲ ಅದು ಅವರ ವ್ಯಕ್ತಿತ್ವದ ಪ್ರತಿಫಲನ. ಹಾಗಾಗಿ ನಾವು ತೊಡುವ ಬಟ್ಟೆ ನಮ್ಮ ಸಂಸ್ಕೃತಿಯ ಪ್ರತೀಕವೇ ಹೊರತು ಸಂಸ್ಕಾರದ ಪ್ರತೀಕವಲ್ಲ. ಉಡುಪು ಸಂಸ್ಕೃತಿಯ ಪ್ರತೀಕ ಹೇಗೆ...? ಅನ್ನುವ ಪ್ರಶ್ನೆ ಮೂಡುತ್ತಿದೆ ಅಂತಾದರೆ ಒಮ್ಮೆ ಒಬ್ಬ ಭಾರತೀಯನನ್ನ ಕಣ್ಣು ಮುಚ್ಚಿ ಕಲ್ಪಿಸಿಕೊಳ್ಳಿ.... ಭಾರತೀಯ ಅಂತಂದಕೂಡಲೇ ನಮ್ಮ ಮನಸ್ಸು ಚಿತ್ರಿಸೋದು ಪಂಚೆ ಶಾಲು ಹೊದ್ದ ಗಂಡು ಮತ್ತು ಸೀರೆ ಉಟ್ಟ ಹೆಣ್ಣು. ಇದು ಹೇಗೆ ಸಾಧ್ಯ. ಭಾರತೀಯ ಅಂದರೆ ಯಾರೂ ಆಗಿರಬಹುದು. ಹಿಂದೂ , ಮುಸ್ಲಿಮ್, ಕ್ರೈಸ್ತ.... ಅವರ ಉಡುಗೆ ತೊಡುಗೆಗಳೆಲ್ಲಾ ಬೇರೆ ಬೇರೆಯೇ... ಹಾಗಿದ್ದೂ ನಾವು ಕಲ್ಪಿಸೋದು ಇಂಥ ಹೆಣ್ಣು ಗಂಡನ್ನು ಅನ್ನೋದು ಏನನ್ನ ಸೂಚಿಸುತ್ತದೆ....? ಈ ಉಡುಗೆ ತೊಡುಗೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಅಂತ ತಾನೇ.
ಭಾರತೀಯ ಪ್ರಜೆ ಅನ್ನುವುದು ಬಿಂಬಿತವಾಗಲು ನಮ್ಮದೇ ಆದ ವಸ್ತ್ರ ಸಂಹಿತೆ ಇದೆ ಅನ್ನುವುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ನೀವು ಕಣ್ಣು ಮುಚ್ಚಿ ಭಾರತೀಯ ಅಂತ ಊಹಿಸಿದಾಗ ನಮ್ಮ ಸಾಂಪ್ರಾದಾಯಿಕ ಉಡುಗೆ ತೊಡುಗೆ ತೊಟ್ಟ ಚಿತ್ರಣವೇ ಬರುವುದು ವಿನಹ ಪಾಶ್ಚಾತ್ಯ ಉಡುಗೆ ತೊಟ್ಟ ಚಿತ್ರಣ ಸಿಗುವುದಿಲ್ಲ... ಬರಿಯ ನಾವು ಅಂತಲ್ಲ ಜಗತ್ತಿನ ಯಾರೇ ಆಗಲಿ ಭಾರತೀಯ ಅನ್ನುವಾಗ ಅವರ ಕಲ್ಪನೆಯಲ್ಲಿ ಇದೇ ಮೂಡೋದು. ಇದು ನಮ್ಮ ನೆಲದ ಸಂಸ್ಕೃತಿ. ಅಯಾಯಾ ದೇಶಗಳಿಗೆ ಅವರದ್ದೇ ಆದ ಉಡುಪುಗಳ ವಿನ್ಯಾಸ ಹೇಗಿದೆಯೋ... ಹಾಗೇ ನಮಗೆ ನಮ್ಮದೇ ಆದ ಉಡುಗೆ ತೊಡುಗೆ ಇದೆ ಅಲ್ವೇ... ಆದ್ದರಿಂದಲೇ ನಾವು ತೊಡುವ ಬಟ್ಟೆಯಲ್ಲಿ ಸಂಸ್ಕಾರಕ್ಕಿಂತಲೂ ಸಂಸ್ಕೃತಿಯನ್ನ ಕಾಣಬೇಕು ಅಂದಿದ್ದು.
ಆದರೆ ಈಗಿನ ಜನರ ಉಡುಗೆ ತೊಡುಗೆ ನೋಡಿದರೆ ( ಇದೂ ಹುಡುಗರಿಗೂ ಅನ್ವಯ ) ನಮ್ಮ ಈ ಭವ್ಯ ಸಂಸ್ಕೃತಿ ಇನ್ನು ಕೆಲವೇ ದಶಕಗಳಲ್ಲಿ ಅಳಿದು ಹೋಗುವುದೋ ಅನ್ನೋ ಭಯ ಕಾಡುತ್ತದೆ.... ಬಹುತೇಕ ಅರ್ಧಭಾಗದಷ್ಟು ಯುವಕರಿಗೆ ಪಂಚೆ ಉಡೋದು ಹೇಗೆ...? ಅನ್ನುವುದೇ ಗೊತ್ತಿಲ್ಲ. ಈ ಮಟ್ಟಿಗೆ ಹೆಣ್ಣು ಮಕ್ಕಳು ಆಗಬಹುದು. ಸೀರೆಯನ್ನುಡೋ ಆಸಕ್ತಿ ಇದೆ. ಆದರೆ ಹಲವಾರು ಜನರಿಗೆ ಸೀರೆ ಉಡೋದು ಅಂತಂದರೆ ಅದೇನೋ ಮಹಾ ಸಾಧನೆ ಮಾಡಿದಂತೆ... ಈ ಸೀರೆ ಉಡೋದು ಮತ್ತು ಪಂಚೆ ಉಡೋದು ಒಂದು ಮಹತ್ಸಾಧನೆ ಎಂಬಂತೆ ಬಿಂಬಿತವಾಗಿರುವುದೇ ನಮ್ಮ ಸಂಸ್ಕೃತಿ ನಶಿಸುತ್ತಿದೆ ಅನ್ನುವುದನ್ನ ತೋರಿಸುತ್ತದೆ ತಾನೇ.
ಪಾಶ್ಚಾತ್ಯ ಬಟ್ಟೆ ಹಾಕಿದ ಕೂಡಲೇ ಸಂಸ್ಕಾರ ಹೀನರಂತೂ ಆಗೋದಿಲ್ಲ ಆದರೆ ಎಲ್ಲೋ ನಮ್ಮ ಸಭ್ಯತೆ ಮರೆತು ಹೋಗೋ ಸಾಧ್ಯತೆ ಇದೆ. ಎಲ್ಲಿಯವರೆಗೆ ಅಂದರೆ ಪಾಶ್ಚಾತ್ಯರನ್ನ ಅನುಕರಿಸುತ್ತಾ ಅನುಕರಿಸುತ್ತಾ ಸಿನಿಮಾದಲ್ಲಿ ಹಾಕುವ ಬಟ್ಟೆಗಳನ್ನೆಲ್ಲಾ ತೊಡುವ ಮನಸ್ಥಿತಿಯನ್ನ ಮುಟ್ಟಿದ್ದೇವೆ. ನಾವು ನಮಗರಿವಿಲ್ಲದಂತೇ ನಮ್ಮತನವನ್ನ ಕಳೆದುಕೊಳ್ಳುತ್ತಿದ್ದೇವೆ. ಇದೇ ಮುಂದುವರಿದರೆ ನಮ್ಮತನದ ಗತಿಯೇನು...? ವಿದೇಶಗಳಲ್ಲಿ ನೀವು ತೊಡುವ ಬಟ್ಟೆಯನ್ನ ಗಮನಿಸಿ " ಓಹ್ ನೀವು ಭಾರತೀಯರಾ... ಅದೆಂಥಾ ಅದ್ಭುತ ದೇಶ ಕಣ್ರೀ ನಿಮ್ಮದು. ಅಲ್ಲಿನ ಶ್ರೇಷ್ಠತೆ ಕೇಳುತ್ತಿದ್ದರೆ ನೀವು ಅಲ್ಲಿ ಹುಟ್ಟಿರೋದೇ ಪುಣ್ಯ ಕಣ್ರೀ " ಅಂತ ನಿಮ್ಮ ಬಳಿ ಯಾರಾದರೂ ವಿದೇಶಿಯನೊಬ್ಬ ಕೇಳಬೇಕು ಅಂತಾದರೆ... ಮೊದಲು ನಾವು ಆ ಸಂಸ್ಕೃತಿಯನ್ನ ತೋರ್ಪಡಿಸಬೇಕಲ್ಲವೇ... ಕೇವಲ ಮುಖ ನೋಡಿ ನೀವು ಭಾರತೀಯರೇ ಅಂತ ಹೇಳುವುದು ಸುಲಭವಲ್ಲ ತಾನೇ... ಆದರೆ ನಮ್ಮ ತೊಡುಗೆಗೆ ನಾವು ಭಾರತೀಯ ಅಂತ ತೋರಿಸಿಕೋಡೋ ತಾಕತ್ತಿದೆ.
ಹಾಗಾಗಿ ಒಂದು ವೇಳೆ ನನ್ನ ಬಳಿ ಯಾರಾದರೂ ಉಡುಗೆಯಿಂದ ವ್ಯಕ್ತಿಯ ಸಂಸ್ಕಾರ ತಿಳಿದುಕೊಳ್ಳಲಾಗುವುದಿಲ್ಲ ಆದ್ದರಿಂದ ಯಾವುದೇ ಸಭ್ಯ ಉಡುಗೆ ತೊಟ್ಟರೂ ಪರವಾಗಿಲ್ಲವಲ್ಲ ಅಂದರೆ.. ತೊಂದರೆ ಇದೆ ಅಂತಲೇ ಹೇಳುತ್ತೇನೆ. ಹೇಗೆ ಒಂದು ಭಾಷೆ ಉಳಿಯಬೇಕಾದರೆ ಅದನ್ನ ಮಾತನಾಡಿಯೇ ಉಳಿಸಬೇಕಾಗುತ್ತದೋ ಅದೇ ರೀತಿ ನಮ್ಮ ಉಡುಗೆ ತೊಡುಗೆಗಳು. ಅವುಗಳನ್ನ ತೊಟ್ಟುಕೊಂಡೇ ಅವುಗಳ ಅಸ್ತಿತ್ವವನ್ನ ಉಳಿಸಬೇಕಾಗುತ್ತದೆ. ನಿಜ ಜಾಗತೀಕರಣದಿಂದಾಗಿ ಕೆಲಸಕ್ಕೆ ಹೋಗುವಾಗಲೆಲ್ಲಾ ನಮ್ಮ ಉಡುಗೆ ತೊಟ್ಟರೆ ಹಲವು ಕಡೆಗಳಲ್ಲಿ ಅನಾನುಕೂಲವಾಗಬಹುದು. ಈಗ ನೋಡುವವರು ಅದೇನೆನ್ನುತ್ತಾರೋ ಅನ್ನೋ ಭಯ ನಮ್ಮೊಳಗೆ ಬಂದಾಗಿದೆ. ಅಥವಾ ನಮ್ಮ ಉಡುಗೆ ಏನಿದ್ದರೂ " ಎಥ್ನಿಕ್ ಡೇ " ಗಷ್ಟೇ ಅನ್ನೋ ಮೂಢನಂಬಿಕೆಯೂ ಬೆಳೆದು ಬಿಟ್ಟಿದೆ. ಇದರಲ್ಲಿ ನಮ್ಮತನವನ್ನ ಅಡವಿಟ್ಟು ಪಾಶ್ಚಾತ್ಯರು ನಡೆದುಕೊಂಡಿದ್ದೇ ಸರಿ ಎಂದು ಅವರನ್ನೇ ಅನುಕರಿಸಿದ ನಮ್ಮ ಹಿರಿಯರ ಪಾತ್ರವೂ ಇದೆ. ಇರಲಿ ಬಿಡಿ ಆಗಿ ಹೋದ ತಪ್ಪಿಗೆ ಚಿಂತಿಸಿ ಏನು ಫಲ.
ಇದರ ಹೊರತಾಗಿಯೂ ನಾವು ನಮ್ಮ ಸಂಸ್ಕೃತಿಯನ್ನ ಉಳಿಸುವಲ್ಲಿ ಧೃಡವಾದ ಹೆಜ್ಜೆ ಇಡಬಹುದು. ಆಫೀಸು, ಕಾಲೇಜು ಇಲ್ಲೆಲ್ಲಾ ಇನ್ಯಾರದೋ ಆಣತಿಯಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಅಂತಲೇ ಇಟ್ಟುಕೊಳ್ಳೋಣ ಆದಾರೆ ನಮಗೆ ಸ್ವಾತಂತ್ರ್ಯ ಇದೆ ಅನ್ನುವ ಕಡೆಯಲ್ಲಿ ನಾವ್ಯಾಕೆ ನಮ್ಮದೇ ಸಂಸ್ಕೃತಿಯನ್ನ ಅಳವಡಿಸಿಕೊಳ್ಳಬಾರದು...? ನಮ್ಮ ಈ ಭವ್ಯ ಸಂಸ್ಕೃತಿಯನ್ನ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆಯಲ್ವಾ... ಮುಂದಿನ ಜನಾಂಗಕ್ಕೆ ನಮ್ಮ ಉಡುಗೆ ತೊಡುಗೆಗಳ ಅರಿವನ್ನ ಕೊಡಬೇಕಾದರೆ ಅದರ ಅರಿವು ನಮಗಿರಬೇಕು ತಾನೇ... ಅದಕ್ಕಾಗಿ ನಮ್ಮ ಉಡುಗೆ ತೊಡುಗೆಗೆ ಪ್ರಾಶಸ್ತ್ಯವಿರಲಿ ಎನ್ನುವುದು.... ಹಾಗಂತ ನಾನ್ಯಾರನ್ನೂ ಬಲವಂತ ಪಡಿಸಲಾರೆ.... ಯಾಕೆಂದರೆ ಬಲವಂತ ಪಡಿಸಿದರೆ ಅದು ಅವರ ಮೇಲೆ ನಮ್ಮ ಅಭಿಪ್ರಾಯದ ಹೇರಿಕೆ ಆಗುತ್ತದೆ. ಯಾವುದೇ ಆಚಾರವಾಗಲಿ ಅಥವಾ ವಿಚಾರವಾಗಲಿ ಹೇರಿಕೆಯಾದರೆ ಅದರ ಬಾಳ್ವಿಕೆ ಕಡಿಮೆಯೇ.. ಅದು ದೀರ್ಘಕಾಲ ಬಾಳಬೇಕಾದರೆ... ಒಬ್ಬಾತ ಹೇಳಿದ ವಿಷಯಗಳಿಂದಾಗಿ... ಭವ್ಯ ಭಾರತದ ಸಂಸ್ಕೃತಿ ಜಗತ್ತಿನಲ್ಲಿ ಹಾಗೆಯೇ ಉಳಿಯಬೇಕು ಅನ್ನುವ ಭಾವ ಮನಸ್ಸಿನೊಳಗೆ ತಾನಾಗೇ ಹುಟ್ಟಬೇಕು.... ಆಗ ಅದ್ಯಾವ ನಾಚಿಕೆಯೂ ನಮ್ಮನ್ನ ತಡೆಹಿಡಿಯಲಾರದು ಅಲ್ವೇ...