Saturday, 16 July 2016

ನಾವು ತೊಡುವ ಬಟ್ಟೆಯೂ ನಮ್ಮ ಸಂಸ್ಕೃತಿಯ ಭಾಗವೇ ತಾನೇ...ನಾವು ತೊಡುವ ಬಟ್ಟೆಯ ಬಗೆಗಿನ ಟೀಕೆ....ಈ ವಿಷಯ ಹಳೆಯದ್ದೇ ಹೊಸತೇನೂ ಅಲ್ಲ. ಇದರ ಪರ ವಿರೋಧದ ಚರ್ಚೆ ಹಲವಾರು ಬಾರಿ ಆಗಿ ಹೋಗಿದ್ದಿರಬಹುದು. ಆದರೂ ನನ್ನ ಅಭಿಪ್ರಾಯ ಹೇಳಿಕೊಳ್ಳುವ ವೇದಿಕೆ ಇದ್ದಿರಲಿಲ್ಲ. ನನ್ನ ಅನಿಸಿಕೆ ಸರಿಯೋ ಸುಳ್ಳೋ ಗೊತ್ತಿಲ್ಲ ಆದರೂ ಹಂಚಿಕೊಳ್ಳುವ ವೇದಿಕೆಯನ್ನ ಉಪಯೋಗಿಸಿಕೊಳ್ಳೋಣ ಅನ್ನುವ ಆಸೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಹೀಗೊಂದು ಪ್ರಶ್ನೆ ಉದ್ಭವವಾಯ್ತು.... " ಸೀರೆ ಉಟ್ಟುಕೊಂಡವರು ಮಾತ್ರ ಸಂಸ್ಕಾರವಂತರಾ...? ಜೀನ್ಸ್ ಪ್ಯಾಂಟ್ ಮತ್ತು ಟೀಶರ್ಟ್ ಹಾಕಿ ಅಥವಾ ಪಾಶ್ಚತ್ಯ ಉಡುಪು ತೊಟ್ಟು ಪೂರ್ತಿ ಮೈಮುಚ್ಚಿ ಕೊಳ್ಳುವವರು, ಸೀರೆ ಉಟ್ಟು ಸೊಂಟ, ಹೊಕ್ಕಳು ತೋರಿಸಿಕೊಂಡು ಹೋಗುವವರಿಗಿಂತ ಉತ್ತಮ ಅಲ್ವೇ...? ಉಟ್ಟ ಬಟ್ಟೆಯಿಂದ ಒಬ್ಬರ ವ್ಯಕ್ತಿತ್ವ ಅಳೆಯೋದು ಎಷ್ಟು ಸರಿ... ?" ಅಂತ. ನಿಜ ಉಟ್ಟ ಬಟ್ಟೆಯಿಂದ ಯಾರ ವ್ಯಕ್ತಿತ್ವವನ್ನೂ ಅಳೆಯಲಾಗದು. ಸೀರೆ ಉಟ್ಟವರೇ ಸಂಸ್ಕಾರವಂತರು, ಪಾಶ್ಚಾತ್ಯ ಬಟ್ಟೆ ತೊಟ್ಟವರೆಲ್ಲಾ ಸಂಸ್ಕಾರಹೀನರು ಅಂತ ಘೋಷಿಸೋ ಹಾಗಿಲ್ಲ. ಹಾಗೇನಾದರೂ ಯೋಚಿಸಲು ಹೋದರೆ ನಾವು ಎಡವಿ ಬೀಳೋ ಸಾಧ್ಯತೆಯೇ ಹೆಚ್ಚು.
ಇಲ್ಲಿ ಎರಡು ವಿಚಾರಗಳಿವೆ. ಒಂದು ಮೈ ಮುಚ್ಚುವಿಕೆ ಮತ್ತು ಸಂಸ್ಕಾರ. ಮೈ ಮುಚ್ಚುವಿಕೆಯನ್ನ ನೋಡಿಯೂ ವ್ಯಕ್ತಿತ್ವ ಅಳೆಯೋಕೆ ಸಾಧ್ಯವಿಲ್ಲ. ಇಲ್ಲಿ ಸೂಕ್ಷ್ಮವಾಗಿ ಗಮನಿಸಿ... ಆಧುನೀಕತೆಯ ಪಾಶ್ಚಾತ್ಯ ಉಡುಗೆಗಳು ಹೆಚ್ಚಿನವು ಮೈಗಂಟಿದಂತಿದ್ದು... ಅದು ನೋಡಲು ಉದ್ರೇಕಕಾರಿಯೇ ಹೊರತು ಸಂಸ್ಕಾರಪೂರಿತ ಅಂತನಿಸೋದು ಕಡಿಮೆಯೇ... ಕೆಲವೊಂದು ಉಡುಗೆ ಉದ್ರೇಕಕಾರಿಯಾಗಿ ಇಲ್ಲದೆಯೂ ಇರಬಹುದು. ಆದರೂ ಪೂರ್ತಿ ಮೈ ಮುಚ್ಚಿದ ಬಟ್ಟೆ ಹಾಕಿಯೂ ಉದ್ರೇಕಕಾರಿಯಾಗಿದ್ದರೆ ಆಕೆ ಗೌರವಾರ್ಹಳು ಹೇಗಾದಾಳು...? ಪೂರ್ತಿ ಮೈಮುಚ್ಚಿಯೂ ಏನು ಫಲ...?? ಹಾಗಾಗಿ ಪೂರ್ತಿ ಮೈ ಮುಚ್ಚುವ ಬಟ್ಟೆ ಹಾಕಿದವಳೇ ಸಂಸ್ಕಾರವಂತಳು ಅನ್ನೋದು ಕೂಡಾ ಮೇಲಿನಂತೆ ತಪ್ಪು ಕಲ್ಪನೆಯೇ ಆಗೋದಿಲ್ವಾ.... ಈಗ ಭಾರತೀಯ ಉಡುಪುಗಳ ಬಗ್ಗೆ ಮಾತಾಡುವುದಾದರೆ ಹೆಚ್ಚು ಕಡಿಮೆ ಅದರ ರೀತಿಯಲ್ಲೇ ತೊಡುವುದಾದರೆ ಇಲ್ಲಿನ ಉಡುಪು ಉದ್ರೇಕಕಾರಿಯಂತೂ ಅಲ್ಲವೇ ಅಲ್ಲ. ಸೀರೆಯನ್ನೂ ಅಂಗಾಂಗ ಪ್ರದರ್ಶಿಸುವ ರೀತಿಯಂತೆ ಉಡಲು ಹೇಳಿಕೊಟ್ಟಿದ್ದು ಸಿನಿಮಾರಂಗ. ಅದೂ ಪಾಶ್ಚಾತ್ಯರ ಪ್ರಭಾವಕ್ಕೊಳಗಾದ ಕ್ಷೇತ್ರ. ಹಾಗಾಗಿ ಭಾರತೀಯ ಉಡುಗೆ ತನ್ನ ಮೂಲರೂಪದಲ್ಲಿ ಎಲ್ಲಿಯೂ ಅಸಹ್ಯ ಅಂತ ಅನಿಸೋದು ಕಡಿಮೆಯೇ. ಭಾರತೀಯ ಉಡುಪುಗಳನ್ನ ಪ್ರಚೋದಿಸುವ ರೀತಿಯಲ್ಲಿ ಉಟ್ಟರೂ ಸಹ್ಯವಲ್ಲ ಅದು ನಿಜವಾಗಿ ಅವರ ವ್ಯಕ್ತಿತ್ವವನ್ನ ತೆರೆದಿಡುತ್ತದೆ ಅಷ್ಟೇ...
ಎರಡನೆಯದಾಗಿ ಸಂಸ್ಕಾರ...ನನಗನಿಸಿದಂತೆ ಇಲ್ಲಿ ನಾವು ಸಂಸ್ಕಾರಕ್ಕಿಂತಲೂ ಸಂಸ್ಕೃತಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು... ಯಾಕೆಂದರೆ ಮೇಲೆ ಹೇಳಿದಂತೆಯೇ ಭಾರತೀಯ ಉಡುಪನ್ನ ತೊಟ್ಟು ಅನಾಚಾರ ಮಾಡೋ ವ್ಯಕ್ತಿಗಳೂ ಇರುತ್ತಾರೆ. ಅವರ ಅನಾಚಾರಕ್ಕೆ ಉಡುಪು ಕಾರಣವಲ್ಲ ಅದು ಅವರ ವ್ಯಕ್ತಿತ್ವದ ಪ್ರತಿಫಲನ. ಹಾಗಾಗಿ ನಾವು ತೊಡುವ ಬಟ್ಟೆ ನಮ್ಮ ಸಂಸ್ಕೃತಿಯ ಪ್ರತೀಕವೇ ಹೊರತು ಸಂಸ್ಕಾರದ ಪ್ರತೀಕವಲ್ಲ. ಉಡುಪು ಸಂಸ್ಕೃತಿಯ ಪ್ರತೀಕ ಹೇಗೆ...? ಅನ್ನುವ ಪ್ರಶ್ನೆ ಮೂಡುತ್ತಿದೆ ಅಂತಾದರೆ ಒಮ್ಮೆ ಒಬ್ಬ ಭಾರತೀಯನನ್ನ ಕಣ್ಣು ಮುಚ್ಚಿ ಕಲ್ಪಿಸಿಕೊಳ್ಳಿ.... ಭಾರತೀಯ ಅಂತಂದಕೂಡಲೇ ನಮ್ಮ ಮನಸ್ಸು ಚಿತ್ರಿಸೋದು ಪಂಚೆ ಶಾಲು ಹೊದ್ದ ಗಂಡು ಮತ್ತು ಸೀರೆ ಉಟ್ಟ ಹೆಣ್ಣು. ಇದು ಹೇಗೆ ಸಾಧ್ಯ. ಭಾರತೀಯ ಅಂದರೆ ಯಾರೂ ಆಗಿರಬಹುದು. ಹಿಂದೂ , ಮುಸ್ಲಿಮ್, ಕ್ರೈಸ್ತ.... ಅವರ ಉಡುಗೆ ತೊಡುಗೆಗಳೆಲ್ಲಾ ಬೇರೆ ಬೇರೆಯೇ... ಹಾಗಿದ್ದೂ ನಾವು ಕಲ್ಪಿಸೋದು ಇಂಥ ಹೆಣ್ಣು ಗಂಡನ್ನು ಅನ್ನೋದು ಏನನ್ನ ಸೂಚಿಸುತ್ತದೆ....? ಈ ಉಡುಗೆ ತೊಡುಗೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಅಂತ ತಾನೇ.
ಭಾರತೀಯ ಪ್ರಜೆ ಅನ್ನುವುದು ಬಿಂಬಿತವಾಗಲು ನಮ್ಮದೇ ಆದ ವಸ್ತ್ರ ಸಂಹಿತೆ ಇದೆ ಅನ್ನುವುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ನೀವು ಕಣ್ಣು ಮುಚ್ಚಿ ಭಾರತೀಯ ಅಂತ ಊಹಿಸಿದಾಗ ನಮ್ಮ ಸಾಂಪ್ರಾದಾಯಿಕ ಉಡುಗೆ ತೊಡುಗೆ ತೊಟ್ಟ ಚಿತ್ರಣವೇ ಬರುವುದು ವಿನಹ ಪಾಶ್ಚಾತ್ಯ ಉಡುಗೆ ತೊಟ್ಟ ಚಿತ್ರಣ ಸಿಗುವುದಿಲ್ಲ... ಬರಿಯ ನಾವು ಅಂತಲ್ಲ ಜಗತ್ತಿನ ಯಾರೇ ಆಗಲಿ ಭಾರತೀಯ ಅನ್ನುವಾಗ ಅವರ ಕಲ್ಪನೆಯಲ್ಲಿ ಇದೇ ಮೂಡೋದು. ಇದು ನಮ್ಮ ನೆಲದ ಸಂಸ್ಕೃತಿ. ಅಯಾಯಾ ದೇಶಗಳಿಗೆ ಅವರದ್ದೇ ಆದ ಉಡುಪುಗಳ ವಿನ್ಯಾಸ ಹೇಗಿದೆಯೋ... ಹಾಗೇ ನಮಗೆ ನಮ್ಮದೇ ಆದ ಉಡುಗೆ ತೊಡುಗೆ ಇದೆ ಅಲ್ವೇ... ಆದ್ದರಿಂದಲೇ ನಾವು ತೊಡುವ ಬಟ್ಟೆಯಲ್ಲಿ ಸಂಸ್ಕಾರಕ್ಕಿಂತಲೂ ಸಂಸ್ಕೃತಿಯನ್ನ ಕಾಣಬೇಕು ಅಂದಿದ್ದು.
ಆದರೆ ಈಗಿನ ಜನರ ಉಡುಗೆ ತೊಡುಗೆ ನೋಡಿದರೆ ( ಇದೂ ಹುಡುಗರಿಗೂ ಅನ್ವಯ ) ನಮ್ಮ ಈ ಭವ್ಯ ಸಂಸ್ಕೃತಿ ಇನ್ನು ಕೆಲವೇ ದಶಕಗಳಲ್ಲಿ ಅಳಿದು ಹೋಗುವುದೋ ಅನ್ನೋ ಭಯ ಕಾಡುತ್ತದೆ.... ಬಹುತೇಕ ಅರ್ಧಭಾಗದಷ್ಟು ಯುವಕರಿಗೆ ಪಂಚೆ ಉಡೋದು ಹೇಗೆ...? ಅನ್ನುವುದೇ ಗೊತ್ತಿಲ್ಲ. ಈ ಮಟ್ಟಿಗೆ ಹೆಣ್ಣು ಮಕ್ಕಳು ಆಗಬಹುದು. ಸೀರೆಯನ್ನುಡೋ ಆಸಕ್ತಿ ಇದೆ. ಆದರೆ ಹಲವಾರು ಜನರಿಗೆ ಸೀರೆ ಉಡೋದು ಅಂತಂದರೆ ಅದೇನೋ ಮಹಾ ಸಾಧನೆ ಮಾಡಿದಂತೆ... ಈ ಸೀರೆ ಉಡೋದು ಮತ್ತು ಪಂಚೆ ಉಡೋದು ಒಂದು ಮಹತ್ಸಾಧನೆ ಎಂಬಂತೆ ಬಿಂಬಿತವಾಗಿರುವುದೇ ನಮ್ಮ ಸಂಸ್ಕೃತಿ ನಶಿಸುತ್ತಿದೆ ಅನ್ನುವುದನ್ನ ತೋರಿಸುತ್ತದೆ ತಾನೇ.
ಪಾಶ್ಚಾತ್ಯ ಬಟ್ಟೆ ಹಾಕಿದ ಕೂಡಲೇ ಸಂಸ್ಕಾರ ಹೀನರಂತೂ ಆಗೋದಿಲ್ಲ ಆದರೆ ಎಲ್ಲೋ ನಮ್ಮ ಸಭ್ಯತೆ ಮರೆತು ಹೋಗೋ ಸಾಧ್ಯತೆ ಇದೆ. ಎಲ್ಲಿಯವರೆಗೆ ಅಂದರೆ ಪಾಶ್ಚಾತ್ಯರನ್ನ ಅನುಕರಿಸುತ್ತಾ ಅನುಕರಿಸುತ್ತಾ ಸಿನಿಮಾದಲ್ಲಿ ಹಾಕುವ ಬಟ್ಟೆಗಳನ್ನೆಲ್ಲಾ ತೊಡುವ ಮನಸ್ಥಿತಿಯನ್ನ ಮುಟ್ಟಿದ್ದೇವೆ. ನಾವು ನಮಗರಿವಿಲ್ಲದಂತೇ ನಮ್ಮತನವನ್ನ ಕಳೆದುಕೊಳ್ಳುತ್ತಿದ್ದೇವೆ. ಇದೇ ಮುಂದುವರಿದರೆ ನಮ್ಮತನದ ಗತಿಯೇನು...? ವಿದೇಶಗಳಲ್ಲಿ ನೀವು ತೊಡುವ ಬಟ್ಟೆಯನ್ನ ಗಮನಿಸಿ " ಓಹ್ ನೀವು ಭಾರತೀಯರಾ... ಅದೆಂಥಾ ಅದ್ಭುತ ದೇಶ ಕಣ್ರೀ ನಿಮ್ಮದು. ಅಲ್ಲಿನ ಶ್ರೇಷ್ಠತೆ ಕೇಳುತ್ತಿದ್ದರೆ ನೀವು ಅಲ್ಲಿ ಹುಟ್ಟಿರೋದೇ ಪುಣ್ಯ ಕಣ್ರೀ " ಅಂತ ನಿಮ್ಮ ಬಳಿ ಯಾರಾದರೂ ವಿದೇಶಿಯನೊಬ್ಬ ಕೇಳಬೇಕು ಅಂತಾದರೆ... ಮೊದಲು ನಾವು ಆ ಸಂಸ್ಕೃತಿಯನ್ನ ತೋರ್ಪಡಿಸಬೇಕಲ್ಲವೇ... ಕೇವಲ ಮುಖ ನೋಡಿ ನೀವು ಭಾರತೀಯರೇ ಅಂತ ಹೇಳುವುದು ಸುಲಭವಲ್ಲ ತಾನೇ... ಆದರೆ ನಮ್ಮ ತೊಡುಗೆಗೆ ನಾವು ಭಾರತೀಯ ಅಂತ ತೋರಿಸಿಕೋಡೋ ತಾಕತ್ತಿದೆ.
ಹಾಗಾಗಿ ಒಂದು ವೇಳೆ ನನ್ನ ಬಳಿ ಯಾರಾದರೂ ಉಡುಗೆಯಿಂದ ವ್ಯಕ್ತಿಯ ಸಂಸ್ಕಾರ ತಿಳಿದುಕೊಳ್ಳಲಾಗುವುದಿಲ್ಲ ಆದ್ದರಿಂದ ಯಾವುದೇ ಸಭ್ಯ ಉಡುಗೆ ತೊಟ್ಟರೂ ಪರವಾಗಿಲ್ಲವಲ್ಲ ಅಂದರೆ.. ತೊಂದರೆ ಇದೆ ಅಂತಲೇ ಹೇಳುತ್ತೇನೆ. ಹೇಗೆ ಒಂದು ಭಾಷೆ ಉಳಿಯಬೇಕಾದರೆ ಅದನ್ನ ಮಾತನಾಡಿಯೇ ಉಳಿಸಬೇಕಾಗುತ್ತದೋ ಅದೇ ರೀತಿ ನಮ್ಮ ಉಡುಗೆ ತೊಡುಗೆಗಳು. ಅವುಗಳನ್ನ ತೊಟ್ಟುಕೊಂಡೇ ಅವುಗಳ ಅಸ್ತಿತ್ವವನ್ನ ಉಳಿಸಬೇಕಾಗುತ್ತದೆ. ನಿಜ ಜಾಗತೀಕರಣದಿಂದಾಗಿ ಕೆಲಸಕ್ಕೆ ಹೋಗುವಾಗಲೆಲ್ಲಾ ನಮ್ಮ ಉಡುಗೆ ತೊಟ್ಟರೆ ಹಲವು ಕಡೆಗಳಲ್ಲಿ ಅನಾನುಕೂಲವಾಗಬಹುದು. ಈಗ ನೋಡುವವರು ಅದೇನೆನ್ನುತ್ತಾರೋ ಅನ್ನೋ ಭಯ ನಮ್ಮೊಳಗೆ ಬಂದಾಗಿದೆ. ಅಥವಾ ನಮ್ಮ ಉಡುಗೆ ಏನಿದ್ದರೂ " ಎಥ್ನಿಕ್ ಡೇ " ಗಷ್ಟೇ ಅನ್ನೋ ಮೂಢನಂಬಿಕೆಯೂ ಬೆಳೆದು ಬಿಟ್ಟಿದೆ. ಇದರಲ್ಲಿ ನಮ್ಮತನವನ್ನ ಅಡವಿಟ್ಟು ಪಾಶ್ಚಾತ್ಯರು ನಡೆದುಕೊಂಡಿದ್ದೇ ಸರಿ ಎಂದು ಅವರನ್ನೇ ಅನುಕರಿಸಿದ ನಮ್ಮ ಹಿರಿಯರ ಪಾತ್ರವೂ ಇದೆ. ಇರಲಿ ಬಿಡಿ ಆಗಿ ಹೋದ ತಪ್ಪಿಗೆ ಚಿಂತಿಸಿ ಏನು ಫಲ.
ಇದರ ಹೊರತಾಗಿಯೂ ನಾವು ನಮ್ಮ ಸಂಸ್ಕೃತಿಯನ್ನ ಉಳಿಸುವಲ್ಲಿ ಧೃಡವಾದ ಹೆಜ್ಜೆ ಇಡಬಹುದು. ಆಫೀಸು, ಕಾಲೇಜು ಇಲ್ಲೆಲ್ಲಾ ಇನ್ಯಾರದೋ ಆಣತಿಯಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಅಂತಲೇ ಇಟ್ಟುಕೊಳ್ಳೋಣ ಆದಾರೆ ನಮಗೆ ಸ್ವಾತಂತ್ರ್ಯ ಇದೆ ಅನ್ನುವ ಕಡೆಯಲ್ಲಿ ನಾವ್ಯಾಕೆ ನಮ್ಮದೇ ಸಂಸ್ಕೃತಿಯನ್ನ ಅಳವಡಿಸಿಕೊಳ್ಳಬಾರದು...? ನಮ್ಮ ಈ ಭವ್ಯ ಸಂಸ್ಕೃತಿಯನ್ನ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆಯಲ್ವಾ... ಮುಂದಿನ ಜನಾಂಗಕ್ಕೆ ನಮ್ಮ ಉಡುಗೆ ತೊಡುಗೆಗಳ ಅರಿವನ್ನ ಕೊಡಬೇಕಾದರೆ ಅದರ ಅರಿವು ನಮಗಿರಬೇಕು ತಾನೇ... ಅದಕ್ಕಾಗಿ ನಮ್ಮ ಉಡುಗೆ ತೊಡುಗೆಗೆ ಪ್ರಾಶಸ್ತ್ಯವಿರಲಿ ಎನ್ನುವುದು.... ಹಾಗಂತ ನಾನ್ಯಾರನ್ನೂ ಬಲವಂತ ಪಡಿಸಲಾರೆ.... ಯಾಕೆಂದರೆ ಬಲವಂತ ಪಡಿಸಿದರೆ ಅದು ಅವರ ಮೇಲೆ ನಮ್ಮ ಅಭಿಪ್ರಾಯದ ಹೇರಿಕೆ ಆಗುತ್ತದೆ. ಯಾವುದೇ ಆಚಾರವಾಗಲಿ ಅಥವಾ ವಿಚಾರವಾಗಲಿ ಹೇರಿಕೆಯಾದರೆ ಅದರ ಬಾಳ್ವಿಕೆ ಕಡಿಮೆಯೇ.. ಅದು ದೀರ್ಘಕಾಲ ಬಾಳಬೇಕಾದರೆ... ಒಬ್ಬಾತ ಹೇಳಿದ ವಿಷಯಗಳಿಂದಾಗಿ... ಭವ್ಯ ಭಾರತದ ಸಂಸ್ಕೃತಿ ಜಗತ್ತಿನಲ್ಲಿ ಹಾಗೆಯೇ ಉಳಿಯಬೇಕು ಅನ್ನುವ ಭಾವ ಮನಸ್ಸಿನೊಳಗೆ ತಾನಾಗೇ ಹುಟ್ಟಬೇಕು.... ಆಗ ಅದ್ಯಾವ ನಾಚಿಕೆಯೂ ನಮ್ಮನ್ನ ತಡೆಹಿಡಿಯಲಾರದು ಅಲ್ವೇ...

No comments:

Post a Comment