Saturday, 16 July 2016

ಇವರೆಂಥಾ ನಾಯಕರು ......?ಈ ದೇಶಕ್ಕೆ ಎಂದಿಗೂ ನಾಯಕರ ಕೊರತೆ ಕಂಡು ಬಂದದ್ದಿಲ್ಲ. ಸ್ವಾತಂತ್ರ್ಯ ಸಿಗೋ ಮುಂಚೆ ಈ ದೇಶದಲ್ಲಿ ಕಾಣಿಸಿಕೊಂಡ ನಾಯಕರ ಪಟ್ಟಿ ಸುಲಭದಲ್ಲಿ ಮುಗಿಯುವಂಥದ್ದಲ್ಲ. ಸ್ವಾತಂತ್ರ್ಯ ಸಿಕ್ಕ ನಂತರವೂ ಜನನಾಯಕರಿಗೇನೂ ಕೊರತೆಯಾಗಿದ್ದಿಲ್ಲ.ಆದರೆ ಆಗಿನ ನಾಯಕರಿಗೂ ಈಗಿನ ನಾಯಕರಿಗೂ ಎಷ್ಟೊಂದು ವ್ಯತ್ಯಾಸ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಜನನಾಯಕರ ವರ್ತನೆ ಮನಸ್ಸಿಗೆ ಆಘಾತವನ್ನ ಕೊಡುತ್ತಿದೆ. ಅಷ್ಟಕ್ಕೂ ಜನಸೇವೆ ಅನ್ನೋದು ಹಲವರಿಗೆ ಅಧಿಕಾರ ಗಳಿಸೋ ಮಾರ್ಗವಾಗಿ ಆಮೇಲೆ ಮರೆತು ಬಿಡಬೇಕಾದ ಪದವಾಗಿದೆಯಾ.....??? ಹೀಗೊಂದು ಅನುಮಾನ ನನ್ನನ್ನು ಬಲವಾಗಿ ಕಾಡುತ್ತದೆ. ಕೆಲವೊಂದು ನಾಯಕರ ವರ್ತನೆಯೇ ಇದಕ್ಕೆ ಕಾರಣ.
ಒಂದೆರಡು ಉದಾಹರಣೆಯನ್ನ ಕೈಗೆತ್ತಿಕೊಳ್ಳೋಣ... ಬಿಹಾರದ ಮುಖ್ಯ ಮಂತ್ರಿಯಾದ ನಿತೀಶ್ ಕುಮಾರ್ ಇತ್ತೀಚೆಗೆ ನಡೆದ ವಿಶ್ವ ಯೋಗ ದಿನಾಚರಣೆಯನ್ನ ತಮ್ಮ ರಾಜ್ಯದಲ್ಲಿ ಆಚರಿಸಲಿಲ್ಲವಂತೆ. ಇದರ ಹಿಂದಿರುವ ಉದ್ದೇಶ ಬಹುತೇಕ ಸ್ಪಷ್ಟ. ತಮ್ಮ ರಾಜಕೀಯ ವಿರೋಧಿಯ ಜನಪ್ರಿಯತೆಗೆ ಪೂರಕವಾದದ್ದನ್ನ ತಾನೇಕೆ ಮಾಡಲಿ. ...? ಅನ್ನೋದು. ಆದರೆ ಇದರಿಂದಾಗಿ ನಷ್ಟವಾಗುತ್ತಿರೋದು ಇಡಿಯ ರಾಜ್ಯಕ್ಕೆ. ಮತ್ತು ಅವಮಾನಾಗಿದ್ದು ಭಾರತದ ಅನನ್ಯ ಕೊಡುಗೆಯಾದ ಯೋಗ ಕ್ಕೆ. ಯೋಗವೇನೂ ಮೋದಿಯವರು ಕಂಡು ಹಿಡಿದಿದ್ದಲ್ಲ. ಅದು ಜಗತ್ತಿಗೆ ಭಾರತ ಕೊಟ್ಟ ಭವ್ಯ ಉಡುಗೊರೆ. ಯೋಗವನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವರ ಆರೋಗ್ಯದಲ್ಲಿ ಏರು ಪೇರಾಗುವುದು ತೀರಾ ಕಡಿಮೆ ಅನ್ನುವುದನ್ನ ಈಗ ಜಗತ್ತೇ ಒಪ್ಪುತ್ತದೆ ಹಾಗಿದ್ದೂ ತಮ್ಮ ವೈಯುಕ್ತಿಕ ದ್ವೇಷಕ್ಕೆ ಇಡಿಯ ರಾಜ್ಯದ ಜನತೆಯ ಹಿತವನ್ನು ಬಲಿಗೊಡೋದು ಒಬ್ಬ ಜನನಾಯಕನ ಲಕ್ಷಣವೇ....? ಇದು ಜನರ ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದವ ಮಾಡಬಹುದಾದಂತಹಾ ಕಾರ್ಯವೇ...?
ಪಕ್ಕದ ರಾಜ್ಯದಲ್ಲಿ ಅತಿವೃಷ್ಟಿಯಾದಾಗ ನಮ್ಮ ರಾಜ್ಯದ ಸಹಾಯವನ್ನು ತಿರಸ್ಕರಿಸಲಾಯಿತು. ಇದು ಯಾವ ರೀತಿಯ ಜನಸೇವೆ. ಸ್ವಾಭಿಮಾನಿಯಾದವನೊಬ್ಬ ತನ್ನ ವೈಯಕ್ತಿಕ ಅಗತ್ಯಕ್ಕಾಗಿ ಇನ್ನೊಬ್ಬರ ಸಹಾಯ ವನ್ನು ತಿರಸ್ಕರಿಸೋದು ಸಹಜ. ಆದರೆ ಇಲ್ಲಿ ಪ್ರಶ್ನೆ ಜನರ ಅಸಹಾಯತೆಯ ಕುರಿತಾದದ್ದು ತಾನೆ. ಆ ಸಹಾಯವೇನೂ ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಕೊಟ್ಟದ್ದಲ್ಲ. ನಮ್ಮದೇ ದೇಶದ ಜನ ಕಷ್ಟದಲ್ಲಿದ್ದುದನ್ನ ಕಂಡಾಗ ಸಹಜ ಮಾನವೀಯತೆಯಿಂದ ಕೊಡಲ್ಪಟ್ಟ ಕೊಡುಗೆ. ಅದೆಷ್ಟೇ ನೆರವು ಸಿಕ್ಕರೂ ಸ್ವೀಕರಿಸಿ ಅದನ್ನ ಸಂತ್ರಸ್ತರಿಗೆ ತಲುಪಿಸಬೇಕಾದದ್ದು ನಿಜವಾದ ಜನನಾಯಕ ನ ಕೆಲಸ .ತನ್ನ ವೈಯುಕ್ತಿಕ ಪ್ರತಿಷ್ಠೆಗಾಗಿ ಜನರಿಗೆ ಸಿಕ್ಕ ಅಗತ್ಯ ಸಹಾಯವನ್ನು ತಪ್ಪಿಸೋದು ಎಂತಹಾ ಜನಸೇವೆ.
ನಮ್ಮದೇ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ದಾಗ, ಕೇಂದ್ರದ ಸಹಾಯವನ್ನು ತಿರಸ್ಕರಿಸೋ ರಾಜನೀತಿಯಲ್ಲಿ ಪಕ್ಷದ ಪ್ರತಿಷ್ಠೆಯಷ್ಠೇ ಎದ್ದು ಕಾಣುತ್ತದೆ ಹೊರತು ಆ ಪಕ್ಷದ ನಾಯಕರ ಮನಸ್ಸಿನಲ್ಲಿರೋ ಜನಸೇವೆಯ ತುಡಿತ ಕಾಣಿಸೋದಿಲ್ಲ. ಎಲ್ಲಿಯವರೆಗೆ ಅಂದರೆ ಈ ಹಿಂದಿನ ಸರಕಾರ ಹಾಕಿದ್ದ ಕಾಮಗಾರಿ ಯ ಕುರಿತಾದ ಮಾಹಿತಿಯನ್ನು ಕಿತ್ತು ಬಿಸಾಕಲು ಖರ್ಚು ಮಾಡೋಕೆ ತಯಾರಿರುತ್ತಾರೆ ಆದರೆ. ಅದೇ ಹಣವನ್ನು ಜನರಿಗಾಗಿ ಕೊಡಿಸಲು ಮುಂದೆ ಹಿಂದೆ ನೋಡುತ್ತಾರೆ. ತಾವು ಅಧಿಕಾರದಲ್ಲಿದ್ದಾಗ ಮಾಡಲಾಗದ್ದನ್ನು ಅಧಿಕಾರದಲ್ಲಿರೋರು ಮಾಡುತ್ತಾರೆ ಅನ್ನೋದನ್ನೂ ಸಹಿಸಲಾರರು. ಇದು ಈಗಿನ ಹಲವಾರು ನಾಯಕರ ಮನಸ್ಥಿತಿ.
ಇನ್ನೂ ಹಲವರ ಮನಸ್ಥಿತಿ ಹೇಗೆಂದರೆ ದೇಶಕ್ಕೆ ಹಾನಿಯಾದರೂ ಪರವಾಗಿಲ್ಲ ತನ್ನ ವಿರೋಧಿ ಗೆ ಜಯವಾಗಬಾರದು. ಇತ್ತೀಚೆಗೆ ನಮ್ಮ ಪ್ರಧಾನಿ ತನ್ನ ದೇಶವನ್ನ “ ಪರಮಾಣು ಸರಬರಾಜು ಒಕ್ಕೂಟದ “ ಸದಸ್ಯರಾಷ್ಟ್ರವನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದದ್ದನ್ನ ಕಂಡಿದ್ದೇವೆ. ಇದು ಸಫಲವಾಗದ್ದಕ್ಕೆ ಖುಷಿ ಪಟ್ಟ ನಾಯಕರು ಅದೆಷ್ಟಿಲ್ಲ. ಒಂದು ಪಕ್ಷದ ಕಾರ್ಯಕರ್ತರಂತೂ ಕುಣಿದು ಕುಪ್ಪಳಿಸಿದರಂತೆ. ವಿರೋಧಿಯನ್ನ ಸೋಲಿಸೋ ನೆಪದಲ್ಲಿ ಈ ಮಣ್ಣಿಗೆ... ಈ ಮಣ್ಣಿನ ಮಕ್ಕಳಿಗೆ ದ್ರೋಹ ಎಸಗುತ್ತಿದ್ದಾರಲ್ಲ ಇವರದೆಂತಹಾ ರಾಜಕೀಯ....? ದೇಶದ ಸೋಲನ್ನ ವ್ಯಕ್ತಿಯ ಸೋಲು ಎಂದು ಸಂಭ್ರಮಿಸುವವರ ಪಕ್ಷದ ಉದ್ದೇಶ ದೇಶೋದ್ದಾರ ಅಂದರೆ ನಂಬಲು ಸಾಧ್ಯವೇ...?
ಜನಸೇವೆಯ ಆಶಯವನ್ನಿಟ್ಟುಕೊಂಡ ವ್ಯಕ್ತಿ... ಮೊದಲು ತನ್ನ ವೈಯಕ್ತಿಕ ಪ್ರತಿಷ್ಠೆಯನ್ನ ಬದಿಗಿಡಬೇಕು. ಜನರಿಗೆ ಒಳ್ಳೆಯದಾಗುವುದಾದರೆ ವಿರೋಧಿಯ ಎದುರು ಸಣ್ಣವನಾಗುವುದಕ್ಕೆ ತಯಾರಾಗುವವನೇ ನಿಜವಾಗಿ ಜನರ ಕಣ್ಣಲ್ಲಿ ದೊಡ್ಡವನಾಗೋದು. ಈ ದೇಶದ ಉದ್ದಾರವೇ ನಮ್ಮ ಧ್ಯೇಯವಾದಾಗ ಅದರ ಈಡೇರಿಕೆಯೇ ಪ್ರಾಮುಖ್ಯ ವಾಗುತ್ತದೆಯೇ ಹೊರತು ಯಾರಿಂದ ಆಯಿತು ಅನ್ನುವುದು ಮುಖ್ಯವಾಗುವುದಿಲ್ಲ. ಎಲ್ಲವೂ ತನ್ನಿಂದಲೇ ಆಗಬೇಕೆನ್ನುವ ಮನೋಭಾವವೂ ಸರಿಯಲ್ಲ. ಸಹಾಯ ಸಿಗಬೇಕಾದವರಿಗೆ ಸೂಕ್ತ ಕಾಲದಲ್ಲಿ ಸಹಾಯ ಸಿಗುವುದೇ ಮುಖ್ಯ ತಾನೇ.. ತಾನು ಮಾಡಲಾಗದ್ದನ್ನು ಇನ್ನಾರೂ ಮಾಡಬಾರದು ಅನ್ನೋದು ಒಂದು ರೀತಿಯ ವಿಕೃತಿಯೇ ತಾನೇ.
ಟೀಕೆಯೂ ಇದಕ್ಕೆ ಹೊರತಾದದ್ದಲ್ಲ. ಟೀಕೆಯ ಮೂಲ ಉದ್ದೇಶವೇ ಜನಹಿತವಾಗಿರಬೇಕು. ಅದಲ್ಲದೇ ಕೇವಲ ಟೀಕೆಗಾಗಿ ಟೀಕೆ ಅಂತಾದರೆ ಸಮಾಜದ ಏಳಿಗೆ ಆಗುವುದಾದರೂ ಹೇಗೆ..? ಯಾವಾಗ ಜನಸೇವೆ ಮಾತ್ರ ನನ್ನ ಮೂಲ ಮಂತ್ರ ಅನ್ನುವ ಭಾವನೆ ರಾಜಕಾರಣಿಯ ಮನಸ್ಸಿನಲ್ಲಿ ಮೂಡುವುದೋ ಅಂದು ಆತ ಒಬ್ಬ ರಾಜಕಾರಣಿಯಿಂದ ಜನಸೇವಕನಾಗಿ ಬದಲಾಗುತ್ತಾನೆ. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತ ಅಂತಲ್ಲ ಪ್ರತಿಯೊಂದು ಪಕ್ಷದ ಶಾಸಕರಿಗೂ ಇದು ಅನ್ವಯಿಸುತ್ತದೆ. ಭಾರತ ವಿಶ್ವಗುರುವಾಗಬೇಕಾದರೆ ನಮ್ಮಲ್ಲಿ ಜನಸೇವಕರ ಸಂಖ್ಯೆ ಹೆಚ್ಚಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಇರೋ ನಮ್ಮೀ ದೇಶದಲ್ಲಿ ರಾಜಕಾರಣಿ ಗಳನ್ನ ಹಿಂದಕ್ಕೆ ತಳ್ಳಿ ತೆರೆಮರೆಯ ಕಾಯಿಯಂತಿರೋ ಜನಸೇವಕರನ್ನ ನಾವು ತಾನೇ ಮುಂದಕ್ಕೆ ತರಬೇಕು. ಈ ನಿಟ್ಟಿನಲ್ಲಿ ನಾವು ಯೋಚಿಸಿ ಕಾರ್ಯತತ್ಪರರಾಗೋಣವೇ....?

No comments:

Post a Comment