Saturday, 16 July 2016

ದೂಷಿಸುತ್ತಿರೋರೂ ನಮ್ಮವರೇ ಆದರೂ ನಾನು ಚಕ್ರವರ್ತಿಯವರ ಪರ...... ಯಾಕಂದರೆ...


..
ನಾಲ್ಕೈದು ದಿನಗಳಿಂದೀಚೆ ಚಕ್ರವರ್ತಿ ಸೂಲಿಬೆಲೆಯವರ ಕುರಿತಾಗಿ ಹಲವು ಅಪಸ್ವರಗಳನ್ನ ಕೇಳುತ್ತಿದ್ದೇನೆ. ನಮ್ಮವರೆನಿಸಿಕೊಂಡವರಿಂದಲೇ ಇಂತಹಾ ಮಾತುಗಳು ಕೇಳಿಬರುತ್ತಿರುವುದು ಕಂಡಾಗ ಬಹಳ ಬೇಸರವೆನಿಸುತ್ತದೆ. ನಾನಿಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಅಭಿಮಾನಿ ಅಂತನಿಸಿಕೊಂಡು ನನ್ನ ಅನಿಸಿಕೆಯನ್ನ ಹೇಳಿಕೊಳ್ಳುತ್ತಿಲ್ಲ ನಮ್ಮವರ ನಡುವೆಯೇ ಉಂಟಾಗುತ್ತಿರುವ ಭಿನ್ನಾಭಿಪ್ರಾಯವನ್ನ ದೂರ ಮಾಡಿಸುವ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನ. ಇಷ್ಟಾಗಿಯೂ ನಮ್ಮದೇ ಸರಿ ನಾವೇ ಸರಿ ಅನ್ನುವವರ ಬಗ್ಗೆ ನನ್ನದೇನೂ ತಕರಾರಿಲ್ಲ. ಅವರೇನೂ ಹಠಾತ್ ಆಗಿ ನನ್ನ ವಿರೋಧಿಗಳಾಗೋದಿಲ್ಲ.
ಇಷ್ಟಕ್ಕೂ ಈ ರೀತಿಯ ಅಪಸ್ವರಗಳು ಏಳೋಕೆ ಶುರುವಾಗಿದ್ದು " ಅಂಬೆಯ ಕೂಗು " ಅನ್ನೋ ಕಾರ್ಯಕ್ರಮದಿಂದ ಅನ್ನೋದು ನನ್ನ ಊಹೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಅಂಬೆಯ ಕೂಗು ಕಾರ್ಯಕ್ರಮ ನಡೆದಾಗ ನಾನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಿಜ ನನ್ನ ಹಲವು ಮಿತ್ರರು ಹೇಳುವಂತೆ ಅಲ್ಲೂ ಫಯಾಜ್ ಖಾನ್ ಅವರು " ಟಿಪ್ಪು ಸುಲ್ತಾನ್ ಗೋಹತ್ಯೆ ನಿಷೇಧ ಮಾಡಿದ್ದ " ಅಂದಿದ್ದರು. ಆದರೆ ಯಾಕೆ ಅವರು ಆ ಮಾತನ್ನಾಡಿದರು ಅಂತ ಸ್ವಲ್ಪ ವಿವೇಚಿಸಿದರೆ ನಮಗೆ ಗೊತ್ತಾಗುತ್ತದೆ... ಟಿಪ್ಪುವಿನ ಅಭಿಮಾನಿಗಳು ಅಂತ ಹೇಳಿಕೊಳ್ಳುವವರಿಗೆ ಗೋಹತ್ಯೆಯ ವಿರುದ್ಧವಾಗಿ ನಿಲ್ಲೋದು ಮುಜುಗರ ತಂದೀತೋ ಇಲ್ಲವೋ....??? ಒಂದು ಕಡೆ ಟಿಪ್ಪುವನ್ನು ಅಭಿನಂದಿಸಿದರೆ ಗೋಹತ್ಯೆಯನ್ನ ನಿಲ್ಲಿಸಬೇಕಾಗೋ ಇಕ್ಕಟ್ಟಿನ ಸ್ಥಿತಿಗೆ ಸಿಲುಕಬೇಕಾಗುತ್ತದೆ ತಾನೇ... ಅಷ್ಟಕ್ಕೂ ಫಯಾಜ್ ಖಾನ್ ತಮ್ಮ ಮಾತಿನಲ್ಲಿ ಎಲ್ಲೂ ಟಿಪ್ಪೂ ಸುಲ್ತಾನನನ್ನ ವೈಭವೀಕರಿಸಿಲ್ಲ. ಅಲ್ಲಿ ಕೇವಲ ಅವರ ಹೆಸರು ಉಲ್ಲೇಖಗೊಂಡಿತು. ಟಿಪ್ಪು ಕುರಿತಾದ ಚರ್ಚೆಯಲ್ಲೂ ಹಲವರು ಆತ ಶೃಂಗೇರಿಯ ದೇವಳಕ್ಕೆ ಆರ್ಥಿಕ ಸಹಾಯ ಮಾಡಿದ್ದ ಅನ್ನುವಾಗ ನಮಗದನ್ನು ತಳ್ಳಿಹಾಕಲು ಸಾಧ್ಯವಿದೆಯೇ...? ಹಾಗಂತ ನಾನಾತನ ಪರ ಅನ್ನುವುದಿಲ್ಲ. ಆತ ಒಂದೆರಡು ಒಳ್ಳೆಯ ಕೆಲಸ ಮಾಡಿದ್ದ ಎಂದ ಕೂಡಲೇ ಆತ ಉತ್ತಮ ವ್ಯಕ್ತಿ ಅಂತಾಗುವುದಿಲ್ಲ. ಒಟ್ಟಾರೆ ಆತನ ಜೀವನದಲ್ಲಿನ ಸರಿ ತಪ್ಪುಗಳನ್ನ ತೂಗಿ ನೋಡಬೇಕು ಅಲ್ವೇ.. ಸ್ವಾಮಿ ವಿವೇಕಾನಂದರೂ ನಿಮ್ಮೆಲ್ಲಾ ದೇವರನ್ನು ಮೂಲೆಗೆಸೆಯಿರಿ ಅಂದಿದ್ದರು... ಇದು ಪೂರ್ತಿ ಹೇಳಿಕೆಯಲ್ಲದಿರಬಹುದು ಆದರೆ ಇಷ್ಟನ್ನೆ ತೆಗೆದುಕೊಂಡು ಆತ ಹಿಂದೂ ದ್ವೇಷಿ ಅಂತ ಹೇಳಿದರೆ ಹೇಗೆ....? (ಅಂತಹಾ ಕೀಳು ಯೋಚನೆ ಎಡಪಂಥೀಯರಿಗಷ್ಟೇ ಇರಲಿ .) ಅದೇ ರೀತಿ ಫಯಾಜ್ ಖಾನ್ ಟಿಪ್ಪು ಸುಲ್ತಾನ ಗೋ ಹತ್ಯೆ ನಿಷೇಧಿಸಿದ್ದ ಅಂದ ಮಾತ್ರಕ್ಕೆ ಫಯಾಜ್ ಖಾನ್ ಅವರು ಟಿಪ್ಪು ಪರ ಅಂತ ತಿಳಿದುಕೊಳ್ಳಬೇಕಾಗಿಲ್ಲ. ಅವರ ಕಳಕಳಿ ಇದ್ದದ್ದು ಗೋಹತ್ಯೆಯ ಮೇಲೆಯೇ.
ಫಯಾಜ್ ಖಾನ್ ಅವರ ಮಾತುಗಳನ್ನ ನೇರವಾಗಿ ನಾನೇ ಕೇಳಿರುವುದರಿಂದ, ನಾನು ಹೇಳಬಲ್ಲೆ ಭಾರತದಲ್ಲಿ ಮುಸ್ಲಿಂರಾಗಿ ಇರಬೇಕಾದಂತವರು ಯಾರೆಂದರೆ ಅದು ಫಯಾಜ್ ಖಾನ್ ನಂತವರು. ಯಾರೇ ಆಗಲಿ ಅವರ ಮಾತು ಕೇಳಿದವರನ್ನ ಕೇಳಿ ನೋಡಿ.... ಭಾಷಣದ ಕೊನೆಯಲ್ಲಿ " ಮಾ ಜಗದಂಬಾ ಕೀ.... ಜೈ " ಅನ್ನೋ ಜೈಕಾರ ಹಾಕುವಾಗಿನ ಅವರ ಸ್ವರ ತರಂಗದಲ್ಲಿ ಯಾವುದೇ ನಾಟಕೀಯತೆ ಕಾಣಿಸುವುದಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು ಅನ್ನುವುದನ್ನ ಅವರು ಯಾವುದೇ ಭಯವಿಲ್ಲದೇ ಹೇಳುತ್ತಾರೆ. ಖಂಡ ತುಂಡವಾಗಿ ಹೇಳುತ್ತಾರೆ. ಅಷ್ಟಕ್ಕೂ ಯುವಾ ಬ್ರಿಗೇಡ್ ತನ್ನ ಸದ್ಭಾವನಾ ಅನ್ನೋ ಚಿಂತನೆಯಡಿಯಲ್ಲಿ ರಾಷ್ಟ್ರಭಕ್ತ ಮುಸ್ಲಿಂರನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನ ಮಾಡಿದರೆ ತಪ್ಪೇನು...? ಇದು ಒಂದು ವೇದಿಕೆಯಷ್ಟೇ... ಇಂದಿನ ಪರಿಸ್ಥಿತಿಯಲ್ಲಿ ಮುಸ್ಲಿಮರೆಲ್ಲರನ್ನೂ ಈ ದೇಶದಿಂದ ಹೊರಗಟ್ಟುವ ಮಾತಾಡಿದರೆ ಅದು ಸಾಧ್ಯವಾಗದ ಮಾತು ಮತ್ತು ಮಾಡಲೂ ಕೂಡಾ ಬಾರದು ರಾಷ್ಟ್ರಭಕ್ತರು ಯಾವ ಸಮುದಾಯದವರೇ ಆಗಿರಲಿ ಅವರು ಹಿಂದೂಗಳೇ ತಾನೇ.... ಇದೇ ತಾನೇ ಹಿಂದುತ್ವ. ಇದನ್ನೇ ಅರ್ಥ ಮಾಡಿಕೊಳ್ಳದಿದ್ದರೆ ನಾವು ನಿಜವಾದ ಹಿಂದೂಗಳು ಅನ್ನುತ್ತಾ ಎದೆತಟ್ಟುವುದು ಕೂಡಾ ಹಾಸ್ಯಾಸ್ಪದವಾಗುತ್ತದೆ ತಾನೇ. ಅಬ್ದುಲ್ ಕಲಾಂ ರನ್ನು ನಾವ್ಯಾವತ್ತೂ ಮುಸ್ಲಿಮನಾಗಿ ನೋಡಲೇ ಇಲ್ಲ ತಾನೇ.
ಇನ್ನು ಚಕ್ರವರ್ತಿಯವರು ಜಾತ್ಯಾತೀತರಾಗುತ್ತಿದ್ದಾರೆ ಅನ್ನೋ ಟೀಕೆ.... ಹೀಗೆ ಟೀಕಿಸುತ್ತಿರುವವರಿಗೆಲ್ಲಾ ಒಂದು ಮಾತನ್ನ ಹೇಳ ಬಯಸುತ್ತೇನೆ... ಮಂಗಳೂರಿನಲ್ಲಿ ನಡೆದ ಅಂಬೆಯ ಕೂಗು ಕಾರ್ಯಕ್ರಮದಲ್ಲಿ ಚಕ್ರವರ್ತಿಯವರು ಮಾತನಾಡುತ್ತಾ ಹೇಳಿದ ಸಾಲುಗಳು.... " ನಾವು ಹೆಚ್ಚೇನೂ ಕೇಳೋದಿಲ್ಲ... ಅಯೋಧ್ಯೆ ಮತ್ತು ಮಥುರಾ ಮತ್ತು ಕಾಶಿ... ಇವುಗಳನ್ನ ಬಿಟ್ಟುಕೊಡಿ " ಅಂತ. ದೇಶದೆಲ್ಲೆಡೆ ಅಯೋಧ್ಯೆಯ ವಿಷಯ ಮಾತ್ರವಿದ್ದಾಗಲೂ ಚಕ್ರವರ್ತಿಯವರು ಮಥುರಾ ಮತ್ತು ಕಾಶಿಯನ್ನೂ ಕೇಳಿದ್ದು ಅವರ ಧರ್ಮ ಭ್ರಷ್ಟತೆಯನ್ನ ತೋರಿಸುತ್ತದೆಯೇ...? ನಿಜಕ್ಕೂ ನಾವಿಲ್ಲಿ ಜಾತ್ಯಾತೀತತೆಯ ಅರ್ಥ ತಿಳಿದುಕೊಳ್ಳಬೇಕು.. ಮುಸ್ಲಿಮರ ಓಲೈಕೆಯನ್ನ ಜಾತ್ಯಾತೀತತೆಗೆ ಹೋಲಿಸುವುದಾದರೆ ಅಂತಹಾ ಓಲೈಕೆ ಚಕ್ರವರ್ತಿಯವರು ಮಾಡುತ್ತಿಲ್ಲ.... ಯಾವ ಧರ್ಮ ಗ್ರಂಥದ ಆಧಾರವನ್ನಿಟ್ಟು ಗೋ ಹತ್ಯೆ ನಮ್ಮ ಹಕ್ಕು ಅಂತ ಮುಸ್ಲಿಮರು ಹೇಳುತ್ತಾರೋ ಅದೇ ಧರ್ಮ ಗ್ರಂಥ ಓದಿಕೊಂಡವರಿಂದ ಹಾಗೇನೂ ಇಲ್ಲ ಅಂತ ಹೇಳಿಸುವ ಕೆಲಸ ಚಕ್ರವರ್ತಿಯವರು ಮಾಡುತ್ತಿದ್ದಾರೆ ಅಷ್ಟೇ. ಅಷ್ಟಕ್ಕೇ ಯಾಕೆ ಅವರನ್ನ ಧರ್ಮ ಭ್ರಷ್ಟರನ್ನಾಗಿಸೋದು...?
ಮೊನ್ನೆಯವರೆಗೂ ನಮ್ಮ ಪಾಲಿಗೆ ಆದರ್ಶ ವ್ಯಕ್ತಿಯಾಗಿದ್ದವರು ಹಠಾತ್ ಆಗಿ ಯಾಕೆ ನಮಗೆ ಕೇವಲ ಭಾಷಣಕಾರ ಅಂತನಿಸೋಕೆ ಶುರುವಾಗುತ್ತದೆ...? ನಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ವ್ಯವಹರಿಸುತ್ತಿಲ್ಲ ಅಂತಾನಾ... ಒಮ್ಮೆ ನಾವು ಅವರನ್ನೂ ನಮ್ಮನ್ನೂ ತುಲನೆ ಮಾಡಿಕೊಳ್ಳೋಣ... ಭಾಷಣವೇ ಮಾಡೋದು ಅಂತಿರಲಿ ಅವರಿಂದಾಗಿ ರಾಷ್ಟ್ರಭಕ್ತಿ ಹೆಚ್ಚಿಸಿಕೊಂಡವರ ಸಂಖ್ಯೆ ಎಷ್ಟಿದ್ದೀತು.... ನಮ್ಮ ಸ್ಟೇಟಸ್ ಗಳಿಂದ ರಾಷ್ಟ್ರಭಕ್ತಿ ಹೆಚ್ಚಿಸಿದವರ ಸಂಖ್ಯೆ ಎಷ್ಟಿದ್ದೀತು...? ಅವರು ಕೇವಲ ಭಾಷಣ ಬಿಗಿಯೋಕಷ್ಟೇ ಅಂತಾದರೆ ನಾವುಗಳು ಕೇವಲ ಸ್ಟೇಟಸ್ ಹಾಕೋಕಷ್ಟೇ ಅಂತಾಗೋದಿಲ್ಲವೇ.... ಅವರು ತಮ್ಮ ಮಾತಿನಿಂದ ಹಲವು ಯುವಜನರನ್ನ ರಾಷ್ಟ್ರ ಚಿಂತನೆ ಮಾಡುವಂತೆ ಮಾಡಿದ್ದಾರೆ ಅನ್ನೋದು ನಾವು ಯಾವತ್ತು ಮರೆಯಬಾರದು. ನಮ್ಮ ಈ ಅಸಮಾಧಾನದಿಂದಾಗಿ ನಷ್ಟ ಆಗುತ್ತಿರೋದು ಹಿಂದುತ್ವಕ್ಕೇ ತಾನೇ. ಹಾಗಿರುವಾಗ ನಾವ್ಯಾಕೆ ಅವರ ಸಧ್ಬಾವನಾ ಹೆಜ್ಜೆಯನ್ನೆ ಸಕಾರಾತ್ಮಕವಾಗಿ ನೋಡಬಾರದು.... ರಾಷ್ಟ್ರ‍ೀಯ ಸ್ವಯಂ ಸೇವಕ ಸಂಘವೂ ಕೂಡಾ " ರಾಷ್ಟ್ರ‍ೀಯ ಮುಸ್ಲಿಂ ಮಂಚ್ " ಅನ್ನೋ ವಿಭಾಗವನ್ನೇ ಮಾಡಿಕೊಂಡಿದೆ, ಹಾಗಿದ್ದರೆ ಸಂಘವೂ ಸೋ ಕಾಲ್ಡ್ ಸೆಕ್ಯುಲರ್ ಆಗುತ್ತದೆಯೇ....?
ಇನ್ನೂ ಕೆಲವರ ತರ್ಕ ಯೋಧ ನಿರಂಜನ್ ಅವರ ಅಂತ್ಯ ಸಂಸ್ಕಾರ ದಿನವೇ ಮಾತುಕತೆಯ ಅವಶ್ಯಕತೆ ಇತ್ತೇ...? ಇದು ಅತ್ಯಂತ ಸರಳವಾದ ವಿಚಾರ ಫಯಾಜ್ ಖಾನ್ ಅವರು ದಕ್ಷಿಣ ಭಾರತದ ಯಾತ್ರೆಯಲ್ಲಿರುವಾಗ ಹಮ್ಮಿಕೊಂಡ ಕಾರ್ಯಕ್ರಮಗಳು ಅವುಗಳ ನಿಗದಿತ ದಿನಾಂಕದಂತೆ ನಡೆದಿದೆ... ಅಷ್ಟಕ್ಕೂ ಇವರು ಮಾತುಕತೆ ನಡೆಸಿದ್ದು ಯೋಧ ನಿರಂಜನ್ ಸಾವಿಗೆ ಕಾರಣರಾದ ಭಯೋತ್ಪಾದಕರ ಜೊತೆ ಅಲ್ಲವಲ್ಲ.... ನಿರಂಜನ್ ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿಲ್ಲ ಅಂದ ಮಾತ್ರಕ್ಕೆ ಚಕ್ರವರ್ತಿಯವರಿಗೆ ಯೋಧರ ಬಗ್ಗೆ ಗೌರವ ಇಲ್ಲ ಅನ್ನುವುದು ಬಾಲಿಶ ಹೇಳಿಕೆ ಅಂತಾಗೋದಿಲ್ಲವೇ... ಯೋಧರ ಬಗ್ಗೆ ಅವರಿಗಿರುವ ಕಾಳಜಿ ಏನು ಎನ್ನುವುದು ಗೊತ್ತಾಗಬೇಕಾದರೆ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ತಾಯಿಯರನ್ನ ಕೇಳಿ ನೋಡಿ... ಅವರ ಭಾವುಕ ಮಾತುಗಳಿಂದಲೇ ಇವರ ಸೈನಿಕರ ಪರವಾದ ಕಾಳಜಿಯ ಅರಿವಾಗುತ್ತದೆ.
ಇಷ್ಟೆಲ್ಲಾ ಹೇಳುತ್ತಿರೋದು ಚಕ್ರವರ್ತಿಯವರ ಮೇಲಿನ ಅಂಧಾಭಿಮಾನದ ಕನ್ನಡಕ ಹಾಕಿಕೊಂಡು ಅಂತ ಯೋಚಿಸುವುದೇ ಬೇಡ... ವ್ಯಕ್ತಿ ಪೂಜೆಯಲ್ಲ ವ್ಯಕ್ತಿತ್ವದ ಪೂಜೆ ಮಾಡಬೇಕು ಅನ್ನೋದನ್ನ ಸಂಘದಿಂದ ಕಲಿತವನು ನಾನು ಆ ನಿಟ್ಟಿನಲ್ಲಿ ಅಭಿಮಾನಿಯಾಗಿರದೇ ಒಬ್ಬ ಸಾಮಾನ್ಯನಾಗಿ ಅವರ ನಿಲುವನ್ನು ನೋಡಿದಾಗ ಚಕ್ರವರ್ತಿ ಸೂಲಿಬೆಲೆಯವರು ಹಿಂದೂ ವಿರೋಧಿಯಾಗುತ್ತಿದ್ದಾರೆ ಅಂತ ನನಗನಿಸುತ್ತಿಲ್ಲ. ಅದನ್ನೇ ಹೇಳುತ್ತಿದ್ದೇನೆ. ನಾವೀಗ ಯಾವ ಕಾಲಘಟ್ಟದಲ್ಲಿದ್ದೇವೆ ಅಂದರೆ ಭಾರತವನ್ನ ಬರಿಯ ಹಿಂದೂಗಳು ವಾಸಿಸುವ ದೇಶ ಅನ್ನೋ ಕಲ್ಪನೆಯನ್ನೂ ಮಾಡಲಾಗದಂತಹಾ ಸನ್ನಿವೇಶದಲ್ಲಿದ್ದೇವೆ... ಮಾಡಬೇಕಾಗಿಯೂ ಇಲ್ಲ.... ದೇಶಪ್ರೇಮವೇ ರಾಷ್ಟ್ರನಿಷ್ಠೆಯೇ ಈ ದೇಶದಲ್ಲಿ ವಾಸಿಸೋಕೆ ಅರ್ಹತೆಯಾಗಬೇಕು ಅನ್ನೋ ನಿಲುವಿನವನು ನಾನು... ಹಾಗಾಗಿ ಯಾರೆಲ್ಲಾ ತಮ್ಮ ಮತದ ನಿಷ್ಠೆಯನ್ನ ಇಟ್ಟುಕೊಂಡು ದೇಶದ್ರೋಹಿ ಕೆಲಸಗಳನ್ನು ಮಾಡುತ್ತಾರೋ ಅಂತವರನ್ನು ಮಾತ್ರ ದೇಶದಿಂದ ಒದ್ದೋಡಿಸುವ ಕೆಲಸ ಆಗಬೇಕು. ಅದಕ್ಕಾಗಿ ರಾಷ್ಟ್ರನಿಷ್ಟರ ಕೂಟ ಬಲವಾಗುತ್ತಾ ಹೋಗಬೇಕು. ಎಲ್ಲ ಸಮುದಾಯದವರಲ್ಲೂ ರಾಷ್ಟ್ರನಿಷ್ಟರು ಇದ್ದೇ ಇರುತ್ತಾರೆ. ಅವರನ್ನೆಲ್ಲಾ ಕಲೆಹಾಕುವ ಕೆಲಸವಾಗಬೇಕು. ಹಾಗಾದಾಗಲೇ ಭಾರತ ವಿಶ್ವಗುರುವಾಗಲು ಸಾಧ್ಯ.
ಈ ನಿಟ್ಟಿನಲ್ಲಿ ಅವಲೋಕಿಸಿ ನೋಡಿ ಚಕ್ರವರ್ತಿಯವರ ಸದ್ಭಾವನ ಕಾರ್ಯಕ್ರಮ ಒಂದು ಉತ್ತಮ ನಡೆ ಅಂತನಿಸದಿರದು. ನಮ್ಮೆಲ್ಲಾ ಯೋಚನೆಗಳನ್ನ ರಾಷ್ಟ್ರ ನಿಷ್ಟೆಯ ರಾಷ್ಟ್ರಹಿತದ ಗುರಿಯಲ್ಲಿಟ್ಟು ತೂಗಿ ಅಳೆದು ನೋಡಿದಲ್ಲಿ ಇಂತಹಾ ಭಿನ್ನಾಭಿಪ್ರಾಯಗಳು ನಮ್ಮಲ್ಲೇ ಒಡಕು ತಂದು ಭಾರತ ವಿಶ್ವಗುರುವಾಗುವಲ್ಲಿ ಮತ್ತಷ್ಟು ವಿಳಂಬವಾದೀತೇನೋ. ಹಾಗಾಗಿ ನಮ್ಮ ನಡೆ ಹೇಗಿರಬೇಕು ಅನ್ನುವುದನ್ನ ವಿವೇಚಿಸಿ ರಾಷ್ಟ್ರಹಿತಕ್ಕಾಗಿ ಒಗ್ಗೂಡೋಣ... ನಮ್ಮೆಲ್ಲರ ಗುರಿ ಒಂದೇ ಅದರ ಸಾಧನೆಗೆ ನಮ್ಮಲ್ಲಿನ ಏಕತೆ, ಒಗ್ಗಟ್ಟು ಹೆಚ್ಚಿದ್ದಷ್ಟು ಉತ್ತಮ ಅಲ್ವೇ...??

No comments:

Post a Comment