Saturday 16 July 2016

ಸಣ್ಣ ಕಥೆಯ ಹಿಂದಿದೆಯೇ ನಮ್ಮ ನಂಬಿಕೆಯನ್ನೊಡೆಯೋ ಗುಪ್ತ ತಂತ್ರ....?



ಅದೊಂದು ಸಣ್ಣ ಕತೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿತ್ತು.. ಓದುಗರನ್ನ ತಮ್ಮೊಳಗೇ ತರ್ಕಿಸುವಂತೆ ಮಾಡೋ ಕಥೆ.
ಒಬ್ಬಾತ ತನ್ನ ಮಗಳ ಜೊತೆ ದೇವಸ್ಥಾನಕ್ಕೆ ಹೋಗುತ್ತಾನಂತೆ. ಅಲ್ಲಿಗೆ ಹೋಗುತ್ತಿದ್ದಂತೆಯೇ ಆ ಪುಟ್ಟ ಹುಡುಗಿ... " ಅಪ್ಪಾ ಬೇಗ ಇಲ್ಲಿಂದ ಓಡೋಣ ಅಗೋ ಆ ಕಂಬದಲ್ಲಿ ಇರೋ ಸಿಂಹ ನಮ್ಮನ್ನ ತಿಂದು ಬಿಡುತ್ತದೆ... " ಎಂದು ಗಾಬರಿಯಿಂದ ಹೇಳತೊಡಗಿದಾಗ.... ಅವಳ ಅಪ್ಪ ಸಮಾಧಾನದಿಂದ ತುಸು ನಗುತ್ತಾ.... " ಹೆದರಬೇಡ ಮಗೂ ಅದೂ ಬರೀ ಮೂರ್ತಿ ಅಷ್ಟೇ " ಅದು ನಮ್ಮನ್ನೇನೂ ಮಾಡುವುದಿಲ್ಲ... ನಮಗೆ ಹಾನಿಯುಂಟು ಮಾಡಲು ಆ ಸಿಂಹದ ಮೂರ್ತಿಯಿಂದ ಸಾಧ್ಯವಿಲ್ಲ " ಅನ್ನುತ್ತಾ ಧೈರ್ಯ ತುಂಬುತ್ತಾನಂತೆ... ಆಗ ಪುಟ್ಟ ಹುಡುಗಿ " ಅಪ್ಪಾ ಕಂಬದಲ್ಲಿರೋ ಸಿಂಹದ ಮೂರ್ತಿಗೆ ನಮಗೇನೂ ಮಾಡಲು ಸಾಧ್ಯವಿಲ್ಲ ಎಂದಾದರೆ, ಗರ್ಭಗುಡಿಯಲ್ಲಿರೋ ದೇವರ ಮೂರ್ತಿಗೆ ನಮ್ಮನ್ನ ಕಾಪಾಡೋದಕ್ಕೆ ಆಗುತ್ತಾ...? " ಅನ್ನುತ್ತಾಳಂತೆ, ಆ ಮಾತಿಗೆ ಅಪ್ಪ ಚಕಿತಗೊಂಡು ಆ ಪುಟ್ಟ ಹುಡುಗಿಯ ಮಾರ್ಮಿಕ ನುಡಿಗೆ ತಲೆದೂಗಿ ಅಲ್ಲಿಂದ ತೆರಳುತ್ತಾನಂತೆ...
ಇದಿಷ್ಟು ಕಥೆ.... ಯಾರಾದರೂ ಮೂರ್ತಿ ಪೂಜಕರು ಇದನ್ನ ಓದಿದಾಗ, ತಾವು ಆಚರಿಸುತ್ತಿರೋ ಪೂರ್ತಿಪೂಜೆಯ ಕುರಿತಾಗೇ ದ್ವಂದ್ವಕ್ಕೆ ಬೀಳುವ ಸಾಧ್ಯತೆ ಇಲ್ಲದ್ದಿಲ್ಲ. ಇಲ್ಲಿ ನಾವಿದನ್ನ ಎರಡು ರೀತಿಯಲ್ಲಿ ವಿಶ್ಲೇಷಣೆ ಮಾಡಬೇಕಾಗಿದೆ. ಒಂದು.... ಮಕ್ಕಳು ಇಷ್ಟು ತಾರ್ಕಿಕವಾಗಿ ಯೋಚಿಸಿಯಾರೇ...? ಅನ್ನೋದೇ ಒಂದು ದೊಡ್ಡ ಪ್ರಶ್ನೆ... ಯಾಕಂದರೆ ನಾನು ನೋಡಿದಂತೆ ದೇವಸ್ಥಾನದಲ್ಲಿ ಮಕ್ಕಳ ಸಂಭ್ರಮವೇ ಹೇಳತೀರದ್ದು.... ದೇವರ ಗರ್ಭಗುಡಿಗೆ ಪ್ರದಕ್ಷಿಣೆ ಹಾಕುತ್ತಾ ಸುತ್ತಲೂ ಓಡೋದು.... ಕೈಗೆಟುಕದ ಗಂಟೆಯನ್ನ ಬಾರಿಸುವ ಪ್ರಯತ್ನ ಪಡೋದು... ಕಂಬದಲ್ಲಿನ ಪ್ರಾಣಿಗಳ ಮೂರ್ತಿಯನ್ನ ಮುಟ್ಟಿ ಮುಟ್ಟಿ ಆನಂದಿಸೋದು ಹೀಗೆ... ಇಂತಾದ್ದು ಅವರ ಅಚ್ಚುಮೆಚ್ಚಿನ ಹವ್ಯಾಸ... ಹಾಗಿರುವಾಗ ಇಂತಹಾ ತರ್ಕಬದ್ಧ ಮಾತು ಮಕ್ಕಳ ಬಾಯಿಯಿಂದ ಬಂದಿರುವ ಸಾಧ್ಯತೆ ಇದೆಯೇ...? ಇಲ್ಲ ಅಂತಾದರೆ ಇದು ಯಾರದೋ ಕಥೆಗಾರನ ಕಲ್ಪನೆ... ಇದರ ಕುರಿತು ಮತ್ತೆ ವಿವೇಚಿಸೋಣ. ಈಗಿನ ಮಕ್ಕಳು ಬಹಳಾನೇ ಬುದ್ಧಿವಂತರು ಇಂಥಾ ತರ್ಕಬದ್ಧ ಮಾತು ಹೇಳೋ ಸಾಧ್ಯತೆ ಇದೆ ಎಂದೇ ಇಟ್ಟುಕೊಳ್ಳೋಣ... ಆ ಹುಡುಗಿಯ ಮಾತಿಗೆ ತರ್ಕಬದ್ಧವಾಗಿಯೇ ಅಪ್ಪನಾದವ ಉತ್ತರಿಸಿದ್ದರೆ ಆ ಮಗುವಿನ ಮನದ ಸಂಶಯವೂ ನಿವಾರಣೆಯಾಗುತ್ತಿತ್ತು.
ಸರ್ವೇ ಸಾಧಾರಣವಾಗಿ ನಾವು ಎಡವೋದು ಇಲ್ಲಿಯೇ.... ಹೆಚ್ಚಿನ ಮಕ್ಕಳ ಪ್ರಶ್ನೆಗೆ.... " ಅದೆಲ್ಲಾ ಕೇಳಬಾರದು ಸುಮ್ಮನೆ ಕೂತ್ಕೋ..." ಅಂತಾನೇ ಹೆದರಿಸೋದು... ಹೆಚ್ಚಿನ ಪ್ರಶ್ನೆಗೆ ಉತ್ತರ ನಮಗೆ ಗೊತ್ತಿಲ್ಲ ಯಾಕಂದರೆ ನಮ್ಮ ಹಿರಿಯರು ನಮಗೆ ಹೇಳಿಲ್ಲ, ನಾವೂ ಗದರಿಸಲ್ಪಟ್ಟವರೇ.. ಇಂಥಾ ಪ್ರಶ್ನೆಗೆ ಉತ್ತರ ತಿಳಿದುಕೊಂಡು ಉತ್ತರಿಸೋ ವ್ಯವಧಾನ ನಮ್ಮಲ್ಲಿಲ್ಲ. ಹಾಗಾಗಿ ಮಕ್ಕಳಲ್ಲಿ ನಮ್ಮ ಆಚಾರ ವಿಚಾರ ರೀತಿ ನೀತಿಗಳೆಂದರೆ ಯಾವುದೇ ಗೌರವ ಇಲ್ಲದೆ ಒಂದು ರೀತಿಯ ಅಸಡ್ಡೆ ಬೆಳೆದು ಬಿಟ್ಟಿರುವುದು. ನಿಜಕ್ಕೂ ಈ ಕಥೆಯಲ್ಲಿ ಅಪ್ಪನಾದವ ತಿಳಿ ಹೇಳಬೇಕಿತ್ತು " ಮಗು... ಕಂಬದ ಮೇಲಿರೋ ಸಿಂಹಕ್ಕೂ ಗರ್ಭಗುಡಿಯಲ್ಲಿರೋ ದೇವರ ಮೂರ್ತಿಗೂ ವ್ಯತ್ಯಾಸವಿದೆ... ಗರ್ಭಗುಡಿಯ ಮೂರ್ತಿಗೆ ಮೊದಲಿಗೆ ಪ್ರಾಣ ಪ್ರತಿಷ್ಠೆಯಾಗುತ್ತದೆ, ಶಾಸ್ತ್ರೀಯ ರೀತಿಯಲ್ಲಿ ಒಂದಷ್ಟು ಸಂಸ್ಕಾರಗಳಾಗುತ್ತದೆ. ಪ್ರತಿ ನಿತ್ಯವೂ ಆ ಮೂರ್ತಿಗೆ ಪೂಜೆಯಾಗುತ್ತಾ ಆಗುತ್ತಾ ಅದು ಬರೀ ಮೂರ್ತಿಯಾಗಿರದೇ ಅದೊಂದು ಶಕ್ತಿಯಾಗುತ್ತದೆ. ನಾವಿಲ್ಲಿ ಬೇಡಲು, ನಮ್ಮನ್ನು ಕಾಪಾಡು ಅಂತ ಕೇಳಲು ಬರುವುದು ಬರಿಯ ಆ ಮೂರ್ತಿಯಲ್ಲಲ್ಲ , ಅದು ಅದರೊಳಗೆ ಇರೋ ಭಗವಂತನಲ್ಲಿ. ಹಾಗಾಗಿ ನಾವು ಮೂರ್ತಿಯ ಮುಂದೆ ಮಾಡಿದ ಪ್ರಾರ್ಥನೆಯನ್ನ ಆಲಿಸಿ ನಮ್ಮನ್ನ ಕಾಪಾಡಲು ಭಗವಂತ ಬಂದೇ ಬರುತ್ತಾನೆ... ಆದರೆ ಕಂಬದಲ್ಲಿರೋ ಸಿಂಹ ಅದು ಬರೀ ಮೂರ್ತಿ ಮಾತ್ರ ಅದಕ್ಕೆ ಯಾವುದೇ ಸಂಸ್ಕಾರಗಳಾಗೋದಿಲ್ಲ ಹಾಗಗಿ ಅದು ನಮ್ಮನ್ನೇನು ಮಾಡುವುದಿಲ್ಲ.... ನೀನು ನಿನ್ನ ಅಪ್ಪ ಅಮ್ಮನ ಫೋಟೋಗೆ ಕೆಲವೊಮ್ಮೆ ಪ್ರೀತಿಯಿಂದ ಮುತ್ತು ಕೊಡುತ್ತೀಯಲ್ಲಾ ಅದು ಯಾರಿಗಾಗಿ ಕೊಡೋದು ಯಾರಿಗಾಗಿ ಮಗೂ... ಆ ಫೋಟೋ ಇರುವ ಹಾಳೆಗೆ ಅಲ್ಲ ಅಲ್ವಾ.... ನೀನು ನಿನ್ನ ಪ್ರೀತಿಯನ್ನ ತೋರಿಸೋದು ನಿನ್ನ ಅಪ್ಪ ಅಮ್ಮನ ಮೇಲೆ ತಾನೇ.... ಹಾಗೆಯೇ ನಾವು ಇಲ್ಲಿ ಪೂಜಿಸೋದು ದೇವರ ಮೂರ್ತಿಯೊಳಗಿರುವ ದೇವರನ್ನು " ಅಂತ ಹೇಳಿದ್ದರೆ ಮಗುವಿಗೂ ನಮ್ಮ ಮೂರ್ತಿಪೂಜೆಯ ಹಿಂದಿರೋ ಸಂಕೇತಾರ್ಥ ತಿಳಿದುಬಿಡುತಿತ್ತು.
ಇದೊಂದು ಬುದ್ಧಿಜೀವಿಗಳು ಸಿದ್ದ ಮಾಡಿರೋ ಕಥೆ, ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಮೂರ್ತಿಪೂಜೆಯನ್ನ ಅಪಹಾಸ್ಯ ಮಾಡೋ ಹುನ್ನಾರ ಅಂತ ನಾನೇನಾದರೂ ಹೇಳಿದರೆ ಜನ ನನ್ನ ಯೋಚನೆಯನ್ನೇ ಟೀಕಿಸಿಯಾರು... ಆದರೂ ಒಮ್ಮೆ ಯೋಚಿಸಿ ನೋಡಿ ಇದರಲ್ಲಿ ನಮ್ಮ ಮೂರ್ತಿ ಪೂಜೆಯ ಆರಾಧನೆಯ ಬಗ್ಗೆಯೇ ಪ್ರಶ್ನೆ ಎತ್ತಿರುವುದು ಅಂತನಿಸೋದಿಲ್ವಾ....? ಮೂರ್ತಿ ಪೂಜೆಯ ಅಪಹಾಸ್ಯವೇ ಹೌದು ಅಂತಾದರೆ ಅದನ್ನ ನಾವು ವಿರೋಧಿಸಬೇಕಲ್ವಾ... ಅಥವಾ ಮೂರ್ತಿ ಪೂಜೆಯನ್ಯಾಕೆ ನಾವು ತಲೆತಲಾಂತರಗಳಿಂದ ನಡೆಸಿಕೊಂಡು ಬಂದಿದ್ದೇವೆ ಅನ್ನೋದನ್ನ ಹೇಳೋದು ಬೇಡವೇ...??? ಈ ಮೂರ್ತಿ ಪೂಜೆಯ ಬಗ್ಗೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಉಪನ್ಯಾಸವೊಂದರಲ್ಲಿ ಬಹಳ ಸೊಗಸಾಗಿ ವಿವರಣೆ ಕೊಡುತ್ತಾರೆ. ಒಮ್ಮೆ ಅವರು ಮುಸ್ಲಿಂ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಡುತ್ತಾರಂತೆ... ಅಲ್ಲಿ ಅವರು ಖುರಾನಿನ ಭಾಗವಾದ " ಮೂರ್ತಿ ಪೂಜಕರು ನರಕಕ್ಕೆ ಹೋಗುತ್ತಾರೆ " ಅನ್ನುವುದನ್ನ ಉಲ್ಲೇಖಿಸಿ ಇದು ಸರಿಯಾಗಿದೆ ನಾನೂ ಕೂಡಾ ಮೂರ್ತಿ ಪೂಜಕರು ನರಕಕ್ಕೆ ಹೋಗಲಿ ಅನ್ನುತ್ತೇನೆ ಇದರ ಕುರಿತು ನನ್ನದೇನೂ ಅಭ್ಯಂತರವಿಲ್ಲ.... ಯಾಕೆಂದರೆ ನಾವು ಮೂರ್ತಿ ಪೂಜಕರಲ್ಲ ಆ ಮೂರ್ತಿಯೊಳಗಿನ ಭಗವಂತನ ಪೂಜಕರು " ಅಂದರಂತೆ... ಇನ್ನೂ ವಿವರಣೆ ನೀಡುತ್ತಾ ಸರ್ವಶಕ್ತನಾದ ಭಗವಂತ ಜಗತ್ತಿನ ಕಣ ಕಣದಲ್ಲಿಯೂ ಇದ್ದಾನೆ ಅಂತಾದರೆ ಆ ಮೂರ್ತಿಯ ಶಿಲೆಯ ಕಣಕಣದಲ್ಲಿ ಇಲ್ಲದೇ ಇರುತ್ತಾನೆಯೇ...? ಹಾಗಿದ್ದರೆ ಆ ಕಣದೊಳಗಿರುವ ಭಗವಂತನನ್ನ ಪೂಜಿಸೋದು ಹೇಗೆ ವ್ಯರ್ಥವಾಗುತ್ತದೆ...? ಅನ್ನುತ್ತಾರೆ.
ಅಷ್ಟಕ್ಕೂ ಪೂಜೆ ಅಂದರೆ ಏನು...? ನಮ್ಮ ಸೃಷ್ಟಿಗೆ, ಸ್ಥಿತಿಗೆ ಲಯಕ್ಕೆ ಕಾರಣನಾದ ಪರಮಾತ್ಮನನ್ನ ಗೌರವಿಸುವ ವಿಧಾನ... ಮಾನಸಿಕವಾಗಿಯೂ ಪೂಜೆ ಮಾಡಬಹುದು, ಆದರೆ ನಾವೆಲ್ಲಾ ಸಾಮಾನ್ಯ ಜನರು ಮಾನಸಿಕ ಪೂಜೆಯಂತಹಾ ಆಧ್ಯಾತ್ಮಿಕ ಹಂತಕ್ಕೇರಲು ಸ್ವಲ್ಪ ಸಮಯ ಹಿಡಿದೀತು ಅನ್ನುವ ಕಾರಣಕ್ಕಾಗಿಯೇ ನಮ್ಮಲ್ಲಿ ಮೂರ್ತಿ ಪೂಜೆಯ ಪದ್ಧತಿ ಬಂದಿದ್ದು. ಪ್ರತಿ ದಿನವೂ ಮೂರ್ತಿಯಲ್ಲಿ ಭಗವಂತನನ್ನ ಆವಹನೆ ಮಾಡಲಾಗುತ್ತದೆ... ಆ ಮೂರ್ತಿಯಲ್ಲಿ ಆವಹಿಸಲ್ಪಟ್ಟ ಭಗವಂತನಿಗೇನೇ ನಾವು ನೈವೇದ್ಯ ಬಡಿಸೋದು, ಆರತಿ ಬೆಳಗೋದು. ಮೂರ್ತಿಯ ಪ್ರತಿಷ್ಠಾಪನೆಯನ್ನ ನಾವು " ಪ್ರಾಣ ಪ್ರತಿಷ್ಠೆ " ಅಂತಲೂ ಹೇಳುತ್ತೇವಲ್ಲಾ ಯಾಕಾಗಿ...? ಆ ಮೂರ್ತಿಯೊಳಗೆ ಪ್ರಾಣವಿದೆ ಅನ್ನುವುದನ್ನ ನಂಬುತ್ತೇವೆ... ಆ ನಂಬಿಕೆಯೇ ನಮ್ಮ ಶಕ್ತಿ.... ಪುರಾಣ ಕಾಲದಲ್ಲಿ ಮಾರ್ಕಂಡೇಯ ಅನ್ನುವ ಬಾಲಕ, ಭಗವಂತನೇ ಎಂದು ಬಿಗಿದಪ್ಪಿಕೊಂಡದ್ದು ಶಿವಲಿಂಗವನ್ನೇ ಅಲ್ವೇ.... ಅವನ ಭಕ್ತಿಗೆ ಶಿವ ಒಲಿಯಲಿಲ್ಲವೇ.... ಅಯ್ಯೋ ಕಲ್ಲಿನ ಮೂರ್ತಿಯನ್ನ ಅಪ್ಪಿಕೊಂಡಿದ್ದಾನೆ ನಾನೇಕೆ ಹೋಗಲಿ ಅಂತ ಸುಮ್ಮನಿದ್ದನೇ...? ಇಂತಹಾ ಕಥೆಯ ಮೂಲಕ ನಮ್ಮ ಮಕ್ಕಳಿಗೆ ತಿಳಿಹೇಳಿದ್ದರೆ ಈಗ ಹರಿದಾಡುತ್ತಿರೋ ಕಥೆಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿತ್ತು ಅಲ್ವಾ....?
ಆದರೆ ಇಂದು ಅಂಥಹಾ ಕಥೆಯನ್ನ ಹಲವಾರು ಜನ ವಾಟ್ಸಾಪ್ ನಲ್ಲಿ ನೋಡಿ, ಅಬ್ಬಾ ಅದ್ಭುತ ಅನ್ನುತ್ತಾ ಇನ್ನೊಂದಿಷ್ಟು ಜನರಿಗೆ ಕಳುಹಿಸಿ ಅದೇನೋ ಸಾಧನೆ ಮಾಡಿದ ರೀತಿ ಬೀಗುತ್ತಾರೆಯೇ ಹೊರತು ಇದು ನಮ್ಮ ಮೂಲ ಸಂಸ್ಕೃತಿಗೆ, ನಮ್ಮ ಪೂಜಾ ವಿಧಾನದ ಮೇಲೆ ಗೊತ್ತಾಗದಂತೆ ನಡೆಯುತ್ತಿರೋ ಪ್ರಹಾರ ಅನ್ನೋದನ್ನ ತಿಳಿಯೋದೇ ಇಲ್ಲ.... ಸರಿ ಒಪ್ಪೋಣ ಇಂಥಾ ಕಥೆಯ ಹಿಂದೆ ಈ ರೀತಿಯ ಯೋಚನೆ ಯೋಜನೆಗಳಿಲ್ಲ ಅಂತ... ಹಾಗಿದ್ದರೂ ನಮ್ಮ ನಂಬಿಕೆ ನಮ್ಮ ಸಂಸ್ಕಾರಗಳಲ್ಲಿ ಶ್ರದ್ಧೆ ಹೆಚ್ಚುವಂಥೆ ಮಾಡೋ ಪೌರಾಣಿಕ ಕಥೆಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆಯಾ...? ಒಮ್ಮೆ ಪ್ರಶ್ನಿಸಿ ಅದು ಇಲ್ಲ ಅಂತಾದರೆ ಇದನ್ಯಾಕೆ ಹರಡೋದು...? ನಮ್ಮ ಸಂಸ್ಕಾರಕ್ಕೇ ಕೊಡಲಿಯೇಟೇ...? ಅಯ್ಯೋ ಇದು ವಿಪರೀತವಾಯಿತಪ್ಪಾ ಇಷ್ಟು ಸಣ್ಣ ಕಥೆಗೆ ಇಷ್ಟುದ್ದದ ಹರಿಕಥೆ ಬೇಕಿತ್ತಾ...? ಅಂತ ಒಂದಷ್ಟು ಜನರಿಗೆ ಅನಿಸಬಹುದು ಆದರೆ ಇದನ್ನ ಹೇಳೋದಿಕ್ಕೆ ಕಾರಣ ಒಂದೇ.... ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ಭವ್ಯ ಸಂಸ್ಕಾರ ಸಂಸ್ಕೃತಿಯ ಅರಿವು ಇರಬೇಕು. ಆ ಸಂಸ್ಕಾರಗಳು ಆಚಾರ ವಿಚಾರಗಳು ಉಳಿಯಬೇಕು ಅಂತಾದರೆ ಅದನ್ನ ಇಂದು ನಾವು ಅದನ್ನ ಪಾಲಿಸಬೇಕು... ನಮ್ಮನ್ನ ನೋಡಿಯೇ ತಾನೇ ಮಕ್ಕಳು ಕಲಿಯೋದು... ಮಕ್ಕಳಾಗಿರುವಾಗಲೇ ನಮ್ಮ ನಂಬಿಕೆಗಳ ಮೇಲೆ ಅಭಿಮಾನ ಮೂಡಿದರೆ ಅದು ಶಾಶ್ವತ ಅಲ್ವೇ... ಒಮ್ಮೆ ಯೋಚಿಸಿ ನೋಡಿ....

No comments:

Post a Comment