Monday, 23 November 2015

ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿಯವರ ಹೊಸ ಹುಡುಕಾಟ.... ಈಗ " ನುಡಿಸಿರಿ " ಯಲ್ಲಿ" ಆಳ್ವಾಸ್ ನುಡಿಸಿರಿ " ಮತ್ತು " ಆಳ್ವಾಸ್ ವಿರಾಸತ್ " ಈ ಎರಡು ಸಾಂಸ್ಕೃತಿಕ ಹಬ್ಬಗಳ ಹೆಸರು ಕೇಳದ ಜನರು ತೀರಾ ವಿರಳ ಅಂತನೇ ಹೇಳಬೇಕು, ಆ ಮಟ್ಟಿಗೆ ಅದು ಜನರ ಗಮನ ಸೆಳೆದಿದೆ. ಬರಿಯ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟಕ್ಕೂ ತನ್ನ ಖ್ಯಾತಿಯನ್ನ ವಿಸ್ತರಿಸಿ ಅದರಾಚೆಗೂ ತನ್ನ ಛಾಪು ಮೂಡಿಸಿದೆಯೆಂದರೆ ಅದರ ಸ್ವರೂಪ, ವೈಶಿಷ್ಟ್ಯತೆ ಹೇಗಿದ್ದರಬೇಡ. ಇವೆರಡರ ಕಲ್ಪನೆಯೇ ವಿಶಿಷ್ಟವಾದದ್ದು " ನುಡಿಸಿರಿ " ಅನ್ನೋದು ನಮ್ಮ ನಾಡಿನ ನುಡಿಗಾಗಿ ಮೀಸಲಿಟ್ಟ ಕಾರ್ಯಕ್ರಮವಾದರೆ " ವಿರಾಸತ್ " ನಮ್ಮ ಸಾಂಸ್ಕೃತಿಕ ವೈಭವಕ್ಕೆ ಹಿಡಿದ ಕೈಗನ್ನಡಿ. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಭಾಷೆ ಇವೆರಡರ ಕಬಂಧ ಬಾಹುಗಳ ಬಂಧನದಲ್ಲಿರೋ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಈ ಎರಡೂ ಕಾರ್ಯಕ್ರಮಗಳೇ ಆಶಾಕಿರಣ. ಅಷ್ಟಾಗಿದ್ದೂ ಈ ನುಡಿಸಿರಿಯ ಬಗ್ಗೆ ಅಪಸ್ವರ ಏಳುತ್ತಿದೆ ಅಂದರೆ ಅದನ್ನ ದುರಂತ ಅನ್ನದೆ ಇನ್ನೇನನ್ನಲಿ...??
ಬಹುಶಃ ಕಳೆದ ಬಾರಿಯೇ ಇದ್ದಿರಬೇಕು.... ತೀರಾ ಹಿಂದುಳಿದ ವರ್ಗದ ಸಾಂಸ್ಕೃತಿಕ ಕಲಾಪ್ರಕಾರವೊಂದನ್ನ ಅಳವಡಿಸಿಕೊಂಡಿದ್ದಕ್ಕೆ ಅಪಸ್ವರವೊಂದು ಕೇಳಿ ಬಂದಿತ್ತು. ಕಾರಣ ಆ ಕಲಾವಿದರು ತಮ್ಮ ಮೈ ಮತ್ತು ಮುಖಕ್ಕೆ  ಪೂರ್ತಿ ಕಪ್ಪು ಬಣ್ಣ ಬಳಿದುಕೊಂಡಿದ್ದರು.   ಭಾರತದಲ್ಲಿ ಕಲಾ ಪ್ರಕಾರಗಳು ಲೆಕ್ಕವಿಲ್ಲದಷ್ಟಿದೆ ಅನ್ನೋದು ನಮಗೆಲ್ಲಾ ಗೊತ್ತಿದ್ದ ವಿಷಯವೇ... ಪ್ರತಿಯೊಂದು ಜನಾಂಗಕ್ಕೂ ಅದರದೇ ಆದ ಸಾಂಸ್ಕೃತಿಕ ಆಚರಣೆಗಳಿರುತ್ತದೆ. ಆ ಜನಾಂಗಕ್ಕೆ ಆ ಕಲಾ ಪ್ರಕಾರದ ಕುರಿತು ಅಭಿಮಾನವಿದ್ದೇ ಇರುತ್ತದೆ, ಇಂಥಾದ್ದರಲ್ಲಿ ಆ ಕಲಾ ಪ್ರಕಾರ ಉಳಿಯಲಿ ಅನ್ನುವ ನಿಟ್ಟಿನಲ್ಲಿ ಅಂತಾ ಕಲಾವಿದರನ್ನ ಕರೆದು ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟು  ಆ ಕಲೆಯನ್ನೂ ಉಳಿಸುವ ಪ್ರಯತ್ನ ಪಟ್ಟ ಮೋಹನ್ ಆಳ್ವಾರವರು ಟೀಕೆಗೊಳಪಡುತ್ತಾರೆ. ಅದು ಆ ಜನಾಂಗದ ನಿಂದನೆ ಎಂಬಂತೆ ಲೇಖನ ಬರೆಯುತ್ತಾರೆ.... ವಾಸ್ತವದಲ್ಲಿ " ಜನಾಂಗೀಯ ನಿಂದನೆ " ಅನ್ನೋ ಆರೋಪ ಹೊರಿಸಿದವರ್ಯಾರು ಆ ಕಲಾವಿದರನ್ನ ಮಾತಾಡಿಸಿ ಅವರ ಮನದ ಮಾತನ್ನ ತಮ್ಮ ಬರಹದ ಮೂಲಕ ಹೇಳಿದ್ದಲ್ಲ. ತಮಗೆ ತಾವೇ ಅದು ಜನಾಂಗೀಯ ಅವಹೇಳನ ಅನ್ನುವ ನಿರ್ಧಾರ ತೆಗೆದುಕೊಂಡು ಡಂಗುರ ಸಾರಿಬಿಟ್ಟಿದ್ದರು. ಆದರೆ ಅದೇ ಕಲಾ ಪ್ರಕಾರವನ್ನ ಖುದ್ದು ರಾಜ್ಯಸರ್ಕಾರವೇ ಒಮ್ಮೆ ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲೋ ಅಥವಾ ದಸರಾ ಉತ್ಸವದಲ್ಲೂ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತ್ತು. ಆವಾಗ ಏನೂ ಮಾತನಾಡದವರು ಆಳ್ವಾಸ್ ನುಡಿಸಿರಿಯಲ್ಲಿ ಇದನ್ನ ಕಂಡೊಂಡನೆ ಕೆಂಡ ತುಳಿದವರಂತೆ ಆಡತೊಡಗಿದ್ದಾದರೂ ಯಾಕೆ...? ಕಲಾವಿದರಿಗೆ ಮುನಿಸಿಲ್ಲ, ಕಲೆಯನ್ನ ಪೋಷಿಸೋರಿಗೂ ಕೀಳಾಗಿ ಕಾಣಿಸುವ ಯೋಚನೆ ಇಲ್ಲದಿರುವಾಗ ಮೂರನೆ ವ್ಯಕ್ತಿಗಳಿಂದ ಅಪಸ್ವರ ಬರುತ್ತಿರುವುದು  ಯಾಕೆ...?
ಕಳೆದ ಬಾರಿಯದ್ದು ಹಳತಾಯಿತು ಬಿಡಿ ಈ ಬಾರಿಯೂ ಹೊಸ ಅಪಸ್ವರ ಏಳುತ್ತಿದೆಯಂತೆ... ಒಂದಷ್ಟು ಜನರ ಪ್ರಕಾರ ಆ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಧಾರೆಗೆ ಮನ್ನಣೆ ಸಿಗುತ್ತದೆ ಅನ್ನುತಿದ್ದಾರೆ. ನುಡಿಯ ಕುರಿತಾದ ಕಾರ್ಯಕ್ರಮದಲ್ಲಿ ಪಂಥಗಳೆಲ್ಲಿಂದ ಬಂತು...? ಅನ್ನುತ್ತಾ ಈ ಬಾರಿಯ ಆಹ್ವಾನ ಪತ್ರಿಕೆ ನೋಡಿದೆ.. ಉದ್ಘಾಟನ ಸಮಾರಂಭಕ್ಕೆ ವೇದಿಕೆ ಏರಲಿರುವವರಲ್ಲಿ ಐದು ಜನ ಕಾಂಗ್ರೆಸ್ ಪಕ್ಷದ ನಾಯಕರು... ಮೂವರು ಬಿಜೆಪಿಯ ನಾಯಕರು ಹಾಗಾದರೆ ಕಾಂಗ್ರೆಸ್ ನಾಯಕರು ಬಲಪಂಥೀಯ ವಿಚಾರಧಾರೆಯವರೇ....???? ಕಾರ್ಯಕ್ರಮದ ಅಧ್ಯಕ್ಷರು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಇವರು ಬಲಪಂಥೀಯರೇ...? ಸರಿ ಹಾಗಿದ್ದರೆ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಧಾರೆಗೆ ಒತ್ತುಕೊಡುವ ಅಂಶಗಳೇನಾದರೂ ಇದೆಯಾ ಎಂದು ಹುಡುಕಿದರೆ... ಅಲ್ಲಿ ಕಂಡಿದ್ದು ಕನ್ನಡ ನುಡಿಯ ಏಳಿಗೆಗೆ ಮತ್ತು ಕರ್ನಾಟಕದ ಹಲವಾರು ಸಮಸ್ಯೆಗಳ ಕುರಿತಾದ ಚಿಂತನ, ಮಂಥನ... ಅದರಲ್ಲೂ " ಸಾಮಾಜಿಕ ನ್ಯಾಯ - ಹೊಸತನದ ಹುಡುಕಾಟ " ಇದರ ಕುರಿತಾಗಿ ಉಪಾನ್ಯಾಸ ಕೊಡೋದಿಕ್ಕೆ ಆಹ್ವಾನಿಸಲ್ಪಟ್ಟವರು " ಡಾ. ಬಂಜೆಗೆರೆ ಜಯಪ್ರಕಾಶ್ "  ಅವರು ಬಲಪಂಥೀಯರೇ...??? ಹಾಗೇನಾದರು ಅಂದರೆ ಅದು ಅವರ ಜೊತೆಗಾರರೇ ಅವರಿಗೆ ಮಾಡುವ ಅವಮಾನವಾದೀತು ಅಲ್ವಾ...
ಇರಲಿ ಬಿಡಿ ಇನ್ನೊಂದು ಅಪಸ್ವರ ಎದ್ದಿದ್ದು.... ಮೋಹನ್ ಆಳ್ವಾರವರು,  ಕಲ್ಬುರ್ಗಿಯವರ ಹತ್ಯೆಯ ಕುರಿತಾಗಿ ಏನೂ ಪತ್ರಿಕಾ ಹೇಳಿಕೆ ಕೊಡಲೇ ಇಲ್ಲ.... ಹಾಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಕೂಡದು.... ಎಂಥಾ ಅರ್ಥಹೀನ ಮಾತು... ಮಾತನಾಡಿಲ್ಲ , ಅಂದ ಮಾತ್ರಕ್ಕೆ ಅವರು ಕೊಲೆಗಾರರಿಗೆ ಬೆಂಬಲವಾಗಿರೋರು ಅಂತ ಅರ್ಥವೇ...? ಹಾಗಿದ್ದರೆ ಆ ಪ್ರಕರಣದ ಕುರಿತು ಮಾತನಾಡಿದವರು ಕಡಿಮೆ, ಮಾತನಾಡದವರೇ ಹೆಚ್ಚು. ಇದರರ್ಥ ಏನಾಯಿತು...? ತುಂಬಾ ಜನರು ಕಲ್ಬುರ್ಗಿಯವರ ಸಾವನ್ನ ಬಯಸಿದ್ದರು ಅಂತಲೇ....? ಒಂದುವೇಳೆ ಮೋಹನ್ ಆಳ್ವರಿಗೆ ಆ ತೆರನಾದ ಮನಸ್ಸು ಇತ್ತು ಅಂದಿದ್ದರೆ " ನಾಡೋಜ ಡಾ. ಎಮ್.ಎಮ್. ಕಲ್ಬುರ್ಗಿ ನೆನಪು " ಅನ್ನೋ ಕಾರ್ಯಕ್ರಮವನ್ನೇಕೆ ಈ ಬಾರಿಯ ನುಡಿಸಿರಿಯಲ್ಲಿ ಹಮ್ಮಿಕೊಂಡಿದ್ದು...? ಅವರ ನೆನಪು ಉಳಿಯಲಿ ಅನ್ನುವ ಕುರಿತಾದ ಕಾಳಜಿ ಮೋಹನ್ ಆಳ್ವಾರಿಗೆ ಇದೆಯಲ್ಲಾ ಇದು ಏನನ್ನ ಸೂಚಿಸುತ್ತದೆ...? ಯಾವುದಾದರೊಂದು ಹೇಳಿಕೆಗೆ ಇಂಥಾದ್ದೆ ಅರ್ಥ ಅಂತಿರುತ್ತದೆ, ಆದರೆ ಏನೂ ಹೇಳದೆ ಇರುವುದಕ್ಕೆ ನಕಾರಾತ್ಮಕ ಅರ್ಥವನ್ನೇ ಹುಡುಕುವವರು.... ನಕಾರಾತ್ಮಕ ವ್ಯಕ್ತಿತ್ವ ಉಳ್ಳವರು ಅಂತಲೇ ಅರ್ಥವಲ್ಲವೇ... ಅದಕ್ಕೆ ಹೇಳಿದ್ದು ಇಂಥವರೆಲ್ಲಾ ಮೊಸರಲ್ಲಿ ಕಲ್ಲು ಹುಡುಕುವವರು ಎಂದು.
ಅಷ್ಟಕ್ಕೂ ನಾವು ನಾಡಿನ ನುಡಿಯ ಕುರಿತಾದ ಕಾರ್ಯಕ್ರಮಗಳಲ್ಲಿ ಪಂಥವನ್ನ ಯಾಕೆ ಹುಡುಕುತ್ತಿದ್ದೇವೆ....? ನುಡಿಸಿರಿಯಲ್ಲಿ ಆಯೋಜನೆಗೊಂಡಿರುವ ವಿಷಯಗಳನ್ನ ನೋಡಿ ಒಟ್ಟು ಎಂಟು ವಿಶೇಷೋಪನ್ಯಾಸಗಳು ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಚಳವಳಿ, ಸಾಮರಸ್ಯ, ಜಾನಪದ, ಪರಿಸರ ಕಾಳಜಿ, ಕೃಷಿ, ಪ್ರದರ್ಶನ ಮತ್ತು ಕಲೆ... ಒಟ್ಟು ಐದು ವಿಚಾರಗೋಷ್ಠಿಗಳಿವೆ ಪ್ರಾಚೀನ ಕನ್ನಡ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ, ಮಾಧ್ಯಮ, ಶಿಕ್ಷಣ, ನೀರಿನ ಬಳಕೆ ಮತ್ತು ಹಂಚಿಕೆ. ಇವುಗಳ ನಡುವೆ ನಮ್ಮ ಕಲಾಪ್ರಕಾರಗಳ ಪ್ರದರ್ಶನ.... ಯಾವುದೇ ರೀತಿಯ ಧರ್ಮಾಧಾರಿತ ವಿಚಾರಗಳ ಸುಳಿವೇ ಇಲ್ಲ. ಇಂಥಾ ಒಂದೊಳ್ಳೆಯ ಕಾರ್ಯಕ್ರಮಕ್ಕೆ ಅಪಸ್ವರವೇ...? ಅಷ್ಟಕ್ಕೂ ಇವರು ಈ ಸಮಾರಂಭ  ಬಲಪಂಥದ ಪರ ಅಂಥ ಯಾಕೆ ಹೇಳುತ್ತಾರೋ ಗೊತ್ತಾಗುತ್ತಿಲ್ಲ, ಯಾಕೆ ಈ ಮಾತನ್ನ ಹೇಳುತ್ತಿದ್ದೇನೆ ಗೊತ್ತಾ... ಇದೇ ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿಕ್ಕಿರುವ ನಾಟಕ ಯಾವುದು ಗೊತ್ತಾ...? " ಸಂಸ್ಕಾರ " ಅದೂ ಡಾ. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ನಾಟಕ... ಬಲಪಂಥೀಯ ಧೋರಣೆಯ ಕಾರ್ಯಕ್ರಮ ಇದಾಗಿದ್ದಿದ್ದರೆ ಈ ನಾಟಕದ ಪ್ರದರ್ಶನ ನಡೆಯುತ್ತಿತ್ತೇ...? ಇರಲಿ ಇದರಲ್ಲಿ ಭಾಗವಹಿಸುವ ಕಲಾವಿದರಲ್ಲಿ ಉಸ್ತಾದ್ ಫಯಾಜ್ ಖಾನ್ ಅವರೂ ಇದ್ದಾರೆ ಸೈಯದ್ ಸಲ್ಲಾವುದ್ದೀನ್ ಪಾಷಾ ಅವರೂ ಇದ್ದಾರೆ ಯಾಕೆ ಗೊತ್ತಾ ಇದೊಂದು ಜಾತಿ ಪಂಥ ಮತಗಳನ್ನು ಮೀರಿದ ನಾಡಿನ ಹಬ್ಬ...
ಇದರಲ್ಲೂ ಕೊಂಕನ್ನು ಹುಡುಕುವುದೆಂದರೆ ಅದು ಒಬ್ಬ ವ್ಯಕ್ತಿ ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಅನ್ನುವುದನ್ನ ಬಿಂಬಿಸುತ್ತದೆ. ಅಂದರೆ ನೀವು ಕನ್ನಡ ನಾಡು ನುಡಿಯ ಕುರಿತಾದ ಕಾರ್ಯಕ್ರಮ ಅನ್ನುವ ದೃಷ್ಟಿಕೋನದಲ್ಲಿ ನೋಡಿದಾಗ ಇಲ್ಲಿ ತಾಯಿ ಭುವನೇಶ್ವರಿಯ ಆರಾಧನೆ ಮಾತ್ರ ಕಾಣಿಸುತ್ತದೆ ಅದೇ ಯಾವುದೋ ಸಿದ್ಧಾಂತದ ಕನ್ನಡಕ ಹಾಕಿ ನೋಡಿದರೆ ಮೊಸರಲ್ಲೂ ಕಲ್ಲು ಸಿಕ್ಕೀತು... ಆದರೆ ಅಲ್ಲಿ ಸ್ಪಷ್ಟವಾಗೋದು ಒಂದೇ ಕಲ್ಲು ಹುಡುಕುವುದೇ ಇಂಥವರ ಕಾಯಕ ಅನ್ನುವುದು ಅಲ್ವೇ... ಸಿದ್ಧಾಂತಗಳು ಇರುವುದು ತಪ್ಪಲ್ಲ ಎಡವಿರಲಿ, ಬಲವಿರಲಿ ಆದರೆ ಎಲ್ಲಿ ನಮ್ಮ ಸಿದ್ಧಾಂತದ ಉಪಯೋಗ ಆಗಬೇಕು...? ಅನ್ನುವ ಪ್ರಜ್ಞೆ ಇರದೇ ಇದ್ದರೆ ಆ ಸಿದ್ಧಾಂತಗಳೇ ವ್ಯಕ್ತಿಯ ಮಾನ ಹರಾಜು ಹಾಕೀತು ಅಲ್ವಾ... ಇಂತಹ ಅದ್ಭುತ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ನಡೆಸಿಕೊಂಡು ಬರುತ್ತಿರುವ ಮೋಹನ್ ಆಳ್ವ ಮತ್ತವರ ತಂಡಕ್ಕೆ ಸಾಧ್ಯವಾದಲ್ಲಿ ನಾವು ಬೆನ್ನು ತಟ್ಟ ಬೇಕು... ಅವರ ಜೊತೆಗೂಡಿ ನಾವು ಒಂದಿಷ್ಟು ತಾಯಿ ಭುವನೇಶ್ವರಿ ಸೇವೆ ಮಾಡೋಣ ಎನ್ನುವ ನಿರ್ಮಲ ಮನಸ್ಸಿನಿಂದ ಜೊತೆಗೂಡಬೇಕು ಆಗ್ಲೇ ನಮ್ಮ ನಾಡು ನುಡಿ ಉಳಿದು ಬೆಳೆಯುತ್ತದೆ.
ಇಂಥಾ ಮನಸ್ಥಿತಿಯವರನ್ನ ನೋಡುವಾಗ ಒಂದು ಕಥೆ ನೆನಪಾಗುತ್ತಿದೆ.... ಯುರೋಪಿನ ಒಬ್ಬ ಆಗರ್ಭ ಶ್ರೀಮಂತ ತನ್ನ ಪುಟ್ಟ ಮಗನ ಹುಟ್ಟು ಹಬ್ಬದ ದಿನ ಎರಡು ಪ್ರತಿಷ್ಠಿತ ಪುಟ್ಬಾಲ್ ಕ್ಲಬ್ಬಿನ ನಡುವೆ ಪುಟ್ಬಾಲ್ ಪಂದ್ಯವನ್ನಿಟ್ಟು ಉಚಿತವಾಗಿ ಜನರಿಗೆ ಇದರ ವೀಕ್ಷಣೆ ಮಾಡಲು ಅನುವು ಮಾಡುತ್ತಾನೆ... ಇಡಿಯ ಪ್ರೇಕ್ಷಕ ವೃಂದ ಆನಂದದಿಂದ ಈ ಪಂದ್ಯದ ಸವಿ ಸವಿಯುತ್ತಿರಲು ಶ್ರೀಮಂತನ ಮಗ ಮಾತ್ರ ಸಪ್ಪಗಿದ್ದನಂತೆ.... " ಯಾಕಪ್ಪಾ ಸಪ್ಪಗಿದ್ದಿ...?  ಪಂದ್ಯ ಖುಷಿ ಕೊಡುತ್ತಿಲ್ಲವೇ...? " ಅಂದಿದ್ದಕ್ಕೆ.... ಆ ಮಗ ಉತ್ತರಿಸಿದನಂತೆ.... " ಅಪ್ಪಾ ನಮ್ಮ ಬಳಿ ಅಷ್ಟೊಂದು ಹಣ ಇದೆ ಪ್ರತಿಯೊಬ್ಬರಿಗೂ ಒಂದೊಂದು ಚೆಂಡು ಕೊಟ್ಟಿದ್ದರೆ.....? ಎಲ್ಲರೂ ಸಂತೋಷದಿಂದ ಆಡುತ್ತಿದ್ದರು ಆದರೆ ಈಗ ನೋಡು ಒಂದು ಚೆಂಡಿಗಾಗಿ ಅಷ್ಟೊಂದು ಜನ ಹೇಗೆ ಜಗಳವಾಡುತ್ತಿದ್ದಾರೆ...."  ಅಂತ. ನೋಡಿ ನೋಡುವ ದೃಷ್ಟಿಕೋನದಲ್ಲಿ ಎಷ್ಟೊಂದು ವ್ಯತ್ಯಾಸ.... ಇಂಥವರಿಂದಲೇ ಇಂದು ನುಡಿಸಿರಿಯಂಥಾ ಕಾರ್ಯಕ್ರಮಕ್ಕೆ ಅಪಚಾರವಾಗುತ್ತಿರೋದು... ಇರಲಿ ಬಿಡಿ, ನಮ್ಮ ಪಾಲಿಗಂತೂ ನುಡಿಸಿರಿ ಅನ್ನೋದು ಹೆಮ್ಮೆಯ ಪ್ರತೀಕ. ತಾಯಿ ಭುವನೇಶ್ವರಿಯ ಬಗ್ಗೆ ಅಬಿಮಾನ ಇರುವವರು ಬರಲಿ ಸಾಕು.... ನಾಡು ನುಡಿಯ ಸೇವೆಗಿಂತಲೂ ತಮ್ಮ ವೈಯಕ್ತಿಕ ಸಿದ್ದಾಂತವೇ ಮಿಗಿಲು ಅನ್ನುವವರು ಬಾರದಿದ್ದರೇನೇ ಒಳ್ಳೆಯದು ಅಲ್ವೇ....?

Wednesday, 18 November 2015

ವಿಂಬ್ಲೆಯಲ್ಲಿ ಮೋದೀ ಭಾಷಣಮೋದೀಜಿಯವರ ಭಾಷಣ ಅಂದರೆ ಸಾಕು ಅದರಲ್ಲೋನೋ ಹೊಸತು ಇದ್ದೇ ಇರುತ್ತದೆ... ಅದೇ ಹಳೇ ಸರಕನ್ನ ಮತ್ತೆ ಮತ್ತೆ ಹೇಳುವ ಜಾಯಮಾನದವರಲ್ಲ. ಅದನ್ನೇ ಹೇಳುತ್ತಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಒಂದಾಗುವುದೂ ಸಾಧ್ಯವಿರಲಿಲ್ಲ... ಬರಿಯ ಪೊಳ್ಳು ಮಾತಲ್ಲ ಅವರ ನುಡಿಗಳಲ್ಲಿ ಅದೇನೋ ಸೆಳೆತವಿದೆ... ನಿಮ್ಮೊಳಗಿನ ವಿಶ್ವಾಸವನ್ನ ಬಡಿದೆಬ್ಬಿಸುತ್ತದೆ. ಅದಕ್ಕೆ ಸಾಕ್ಷಿ ನಿನ್ನೆಯ ಭಾಷಣ. ಅವರ ಭಾಷಣದಲ್ಲಿ ನನ್ನ ಗಮನ ಸೆಳೆದ ಹಲವು ಅಂಶಗಳು.
೧. ಸ್ವಾತಂತ್ರ್ಯ ಹೋರಾಟಗಾರ ಶ್ಯಾಮಜೀ ಕೃಷ್ಣ ಶರ್ಮ ಅವರ ಅಸ್ಥಿ ತಂದ ವಿಚಾರ. ಎಂಥಾ ವಿಚಿತ್ರ ಅಲ್ವಾ... ಸ್ವಾತಂತ್ರ್ಯ ಸಿಕ್ಕಿ ಐವತ್ತಾರು ವರ್ಷಗಳ ಬಳಿಕ ಈ ದೇಶದ ಒಬ್ಬ ಮುಖ್ಯಮಂತ್ರಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಕೊನೆಯ ಆಸೆ ಈಡೇರಿಸುವ ಮನಸ್ಸಾಗುತ್ತದೆ... ಅದುವರೆಗೂ ಆಡಳಿತ ಮಾಡಿದ ದೇಶದ ಕೇಂದ್ರ ಸರ್ಕಾರಗಳು ಮಾಡಿದ್ದೇನು...? ಅನ್ನೋ ಪ್ರಶ್ನೆಯೊಂದು ಈಗ ನನ್ನನ್ನ ಕಾಡಲು ಶುಋ ಮಾಡಿದೆ.
೨. ಮೊದಲ ಬಾರಿಗೋ ಏನೋ... ಒಬ್ಬ ಪ್ರಧಾನಿ, ಭಾರತ ಕಂಡ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಮತ್ತವರ ಶಿಷ್ಯ ಮದನ್ ಲಾಲ್ ಧಿಂಗ್ರಾ ರ ಹೆಸರನ್ನ ಉಲ್ಲೇಖಿಸುತ್ತಾರೆ... ಇದುವರೆಗೆ ಗಾಂಧಿ, ನೆಹರುರನ್ನ ಬಿಟ್ಟು ಮತ್ಯಾರ ಹೆಸರೂ ಬರುತ್ತಲೇ ಇರಲಿಲ್ಲ.
೩. ಸೂಫೀ ಸಂತರ ಪಂಥದ ಅನುಯಾಯಿಗಳಾಗಿದ್ದಿದ್ದರೆ ಭಯೋತ್ಪಾದನೆ ಮಾರ್ಗ ತುಳಿಯುತ್ತಿರಲಿಲ್ಲ... ಅಂದಿದ್ದು.
೪. ಭಾರತದಲ್ಲಿ ಎಷ್ಟು ಗ್ರಾಮಗಳಿಗೆ ವಿದ್ಯುತ್ ತಲುಪಿಲ್ಲ ಅನ್ನೋ ಲೆಕ್ಕಾಚಾರ ಗೊತ್ತಿರೋದು... ಬಹುಶ ಇದು ಅವರ ಗುರಿ ತಲುಪುವ ಸ್ಪಷ್ಟತೆಯನ್ನ ತೋರಿಸುತ್ತದೆ.. ಮೊದಲಾಗಿದ್ದರೆ ಹಾಗಲ್ಲ... ಇನ್ನೂ ನಮ್ಮಲ್ಲಿ ಹಲವು ಗ್ರಾಮಗಳಿಗೆ ವಿದ್ಯುತ್ ತಲುಪಿಲ್ಲ ಅಂದಿದ್ದರೆ ಸಾಕಿತ್ತು ಎಷ್ಟು ಗ್ರಾಮ..? ಅದಕ್ಕೇನು ಮಾಡೋದು..? ಅನ್ನುವುದರ ಗೊಡವೆಗೆ ಯಾರೂ ಹೋಗುತ್ತಿರಲಿಲ್ಲ.
೫. ಸೂರ್ಯಪುತ್ರ ರಾಷ್ಟ್ರಗಳ ಒಕ್ಕೂಟದ ಕಲ್ಪನೆ... ಸೌರಶಕ್ತಿಯ ಉಪಯೋಗ ಯಾವೆಲ್ಲಾ ರಾಷ್ಟ್ರಗಳಿಗೆ ಉಪಲಬ್ಧವಿದೆ ಅನ್ನುವುದರ ಸ್ಪಷ್ಟ ಲೆಕ್ಕಾಚಾರ ಗೊತ್ತಿದೆ... ಮತ್ತು ಅದರ ಒಕ್ಕೂಟದಿಂದ ಇಡಿಯ ವಿಶ್ವಕ್ಕೆ ಲಾಭವಾಗುವಂಥಾ ಕಾರ್ಯಯೋಜನೆ ಮತ್ತು ಆ ಯೋಜನೆಗೆ ಭಾರತವೇ ನಾಯಕತ್ವ ವಹಿಸುವಂಥಾ ಕಲ್ಪನೆ... ನಿಜಕ್ಕೂ ಅದ್ಭುತ... ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲದ ಕುರಿತಾಗಿ ಎಷ್ಟು ಗಮನ ಹರಿಸುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತದೆ.
೬. " ಅಬ್ ಹಮ್ ಮೆಹೆರ್ಬಾನಿ ನಹೀ ಬರಾಬರೀ ಚಾಹ್ತೇ ಹೈ..." ಅದೆಂಥಾ ಸ್ವಾಭಿಮಾನದ ಮಾತು ರೀ... ದೇಶವನ್ನ ದಿಗ್ಗಜ ದೇಶಗಳ ಜೊತೆ ಸಮಾನವಾಗಿ ನಿಲ್ಲಿಸೋ ಮಾತು ಆಡಬೇಕಾದರೆ... ಹಾಗೆ ಮಾತನಾಡುತ್ತಿರುವಾಗ ಇತರ ದೇಶದ ನಾಯಕರೂ ತಲೆದೂಗುತ್ತಿರಬೇಕಾದರೆ... ಇಡಿಯ ಜಗತ್ತು ಇವರ ಮೇಲಿಟ್ಟಿರೋ ವಿಶ್ವಾಸ ಎಷ್ಟು ಆಳವಾಗಿದ್ದಿರಬಹುದು...ಅನ್ನೋದರ ಪರಿಚಯ ಆಗೋದಿಲ್ವಾ...
೭. " ಟಿವಿಯಲ್ಲಿ ಕಾಣಿಸುತ್ತಿರುವುದೇ ಭಾರತವಲ್ಲ..." ಅಂತ ಹೇಳಿದ್ದು... ನಿಜಕ್ಕೂ ಇದು ಭಾರತೀಯ ಮಾಧ್ಯಮಗಳ ಮುಖಕ್ಕೆ ನಮ್ಮ ಪ್ರಧಾನಿ ಕೊಟ್ಟ ಸಾತ್ವಿಕ ಹೊಡೆತ...... ಸತ್ಯವನ್ನ ಮರೆಮಾಚುವುದಲ್ಲ, ಸುದ್ದಿಯ ಸತ್ಯವನ್ನ ನಿಮಗೆ ಬೇಕಾದ ಹಾಗೆ ತಿರುಚಬೇಡಿ ಅನ್ನುವುದು ಮಾತ್ರ ಅವರ ಕೋರಿಕೆಯಾಗಿದ್ದ ಹಾಗೆ ಕಂಡಿತು.
೮. ರಾಜಸ್ಥಾನದಲ್ಲಿನ ಸಣ್ಣ ಗ್ರಾಮದಲ್ಲಿನ ಇಮ್ರಾನ್ ಖಾನ್ ಎಂಬ ವ್ಯಕ್ತಿಯ ಸಾಧನೆಯನ್ನ ಉಲ್ಲೇಖಿಸಿ ಭಾರತೀಯ ಮಾಧ್ಯಮಗಳು ಬೇಕಾಗಿದ್ದನ್ನ ತೋರಿಸುವುದು ಕಡಿಮೆಯೇ ಅನ್ನುವ ಟಾಂಗ್ ಕೊಟ್ಟಿದ್ದು... ನಿಜಕ್ಕೂ ನಮ್ಮ ಪ್ರಧಾನಿಗೆ ಮಾಧ್ಯಮಗಳ ಬೆಂಬಲ ಸಿಕ್ಕರೆ ದೇಶವನ್ನ ವಿಶ್ವಗುರುವಾಗಿಸಲು ಹೆಚ್ಚು ಸಮಯ ಬೇಕಾಗಿಲ್ಲ... ಆದರೆ ಮಾಧ್ಯಮ ಆ ಕೆಲಸ ಮಾಡುತ್ತಿಲ್ಲವಲ್ಲ ಅನ್ನುವುದೇ ಖೇದಕರ.
೯. ತಾವು ಮುಖ್ಯಮಂತಿಯಾಗಿದ್ದಾಗ ಈಡೇರಿಸಲಾಗದ ಬೇಡಿಕೆಯೊಂದನ್ನ ಪ್ರಧಾನಿಯಾಗಿ ಈಡೇರಿಸಿದ್ದು. ಲಂಡನ್ ಟು ಅಲಹಬಾದ್ ವಿಮಾನ ಸಂಚಾರ. ಅಂಥಾ ನೆನಪನ್ನೂ ಅವರಿಟ್ಟುಕೊಂಡಿದ್ದಾರಲ್ವಾ ಅನ್ನೋದೇ ಆಶ್ಚರ್ಯಕರ ಅಲ್ವಾ
೧೦. ಬರಿಯ ನಾವು ಬೆಳೆಯುವುದು ಮಾತ್ರವಲ್ಲ ನಮ್ಮ ಜೊತೆಗೆ ಉಳಿದವರೂ ಬೆಳೆಯಲಿ ಅನ್ನುವ ಉದ್ದೇಶ ನಮ್ಮದು... ನಿಜ ಇಂತಹಾ ಉಧಾತ್ತ ಚಿಂತನೆ ಭಾರತೀಯ ಪ್ರಧಾನಿಯೊಬ್ಬರಿಗೆ ಮಾತ್ರ ಬರಲು ಸಾಧ್ಯವೇನೋ...
ಬಿಹಾರದ ಫಲಿತಾಂಶ ಅದೇನೇ ಇರಲಿ ನಿಮ್ಮ ಸ್ಪಷ್ಟ ಗುರಿ... ಆ ಗುರಿಯತ್ತ ನೀವಿಡುತ್ತಿರುವ ದಿಟ್ಟ ಹೆಜ್ಜೆಯೇ ನಿಮ್ಮ ಮೇಲಿನ ನಮ್ಮ ನಂಬಿಕೆಯನ್ನ ಗಟ್ಟಿಗೊಳಿಸುವುದು... ತಾಯಿ ಭಾರತಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಹೀಗೇ ಇರಲಿ....

Tuesday, 3 November 2015

ವೇದವ್ಯಾಸರ ಕರ್ಣ - ಒಂದು ವಿಶ್ಲೇಷಣೆ - ಭಾಗ ೩ (ಕೊನೆಯದು)ಕರ್ಣನ ಕುರಿತಾದ ಒಳ್ಳೆಯ ಅಭಿಪ್ರಾಯಗಳಲ್ಲೊಂದು ಆತನ ದಾನದ ಗುಣ. ಸರಿ ಒಪ್ಪಿಕೊಳ್ಳೋಣ ಆತ ರಾಜನಾಗಿದ್ದಾಗ ದಾನ ಮಾಡಿದ್ದ ಅಂತ. ಇದು ಅವನಲ್ಲಿರೋ ಒಂದು ಒಳ್ಳೆಯ ಗುಣ ಒಪ್ಪಿಕೊಳ್ಳಬಹುದು... ಆದರೂ ನನಗೆ ತನ್ನ ಮಾಂಸವನೇ ದಾನ ಮಾಡಿದ ಶಿಬಿ ಚಕ್ರವರ್ತಿ ಬಹಳ ಹಿಡಿಸುತ್ತಾನೆ. ಇರಲಿ ಇವನ ದಾನಗಳಲ್ಲಿ ಬಹಳ ಮುಖ್ಯವಾಗಿ ಚರ್ಚೆಯಾಗೋದು ಕವಚ ಮತ್ತು ಕರ್ಣ ಕುಂಡಲಗಳನ್ನೇ ದೇಹದಿಂದ ಕಿತ್ತೊಗೆದು ಕೊಟ್ಟ ಅಂಶ. ಈ ದಾನದ ಕುರಿತಾಗಿ ಪಾವಗಡ ಪ್ರಕಾಶರಾಯರು ಬಹಳ ಸೊಗಸಾಗಿ ಒಂದು ಸೂಕ್ಷ್ಮವನ್ನ ನಮ್ಮ ಮುಂದಿಡುತ್ತಾರೆ. ಗಮನಿಸಬೇಕಾದ ಅಂಶ... ನೀವು ಯಾರಿಗೋ ಏನೋ ಒಂದು ವಸ್ತು ಕೊಟ್ಟಿರಿ ಎಂದಿಟ್ಟುಕೊಳ್ಳಿ ಅದಕ್ಕೆ ಬದಲಾಗಿ ಏನೋ ಪಡೆದಿರಿ ಆಗ ಅದು ದಾನ ಅಂತ ಕರೆಸಿಕೊಳ್ಳುತ್ತದೆಯೇ....? ಇಲ್ಲವಲ್ಲ ಹಾಗಿದ್ದರೆ ಇಂದ್ರನಿಂದ ಅರ್ಜುನನನ್ನ ಕೊಲ್ಲಲೆಂದೇ ಶಕ್ತ್ಯಾಯುಧ ಪಡೆದು ಕರ್ಣಕುಂಡಲ ಮತ್ತು ಕವಚ ಕೊಟ್ಟಿದ್ದು ಹೇಗೆ ದಾನವಾಗುತ್ತೆ....? ಅನ್ನೋ ಪಾವಗಡರ ಪ್ರಶ್ನೆಗೆ ನನಗೀಗಲೂ ಉತ್ತರ ಸಿಕ್ಕಿಲ್ಲ.
ಕರ್ಣನಲ್ಲಿ ಕಾಣಿಸುವ ಮತ್ತೊಂದು ಗುಣ ದುರಂಹಕಾರ... ತನ್ನ ಪೌರುಷ ಪರಾಕ್ರಮದ ಬಗೆಗಿನ ಹಮ್ಮು.... ಶಲ್ಯನನ್ನೇ ಸಾರಥಿಯನ್ನಾಗಿ ಪಡೆಯುವಾಗಲೂ ನಮಗೇ ಕಾಣಿಸೋದು.... ಈ ದುರಾಭಿಮಾನವನ್ನ ಕಂಡೂ ಕಾಣದಂತಾಗಿಸುವ ಜನರಿಗೆ ಇದೊಂದು ಸಾಮಾನ್ಯ ಗುಣವಾಗಿರಬಹುದು.... ಆದರೆ ಇದು ಸಜ್ಜನರ ಅಥವಾ ಉತ್ತಮರ ಗುಣಧರ್ಮವಲ್ಲ. ಒಬ್ಬ ವ್ಯಕ್ತಿಯ ಇಡಿಯ ವ್ಯಕ್ತಿತ್ವವನ್ನೇ ಮಸುಕುಗೊಳಿಸುವ ಗುಣ ಈ ಅಹಂ. ಅದಿದ್ದಾಗಲೂ ಕಂಡು ಕಾಣದಂತಿರಲು ನನಗೆ ಸಾಧ್ಯವಿಲ್ಲ, ವ್ಯಾಸರು ಇದನ್ನ ಅಲ್ಲಲ್ಲಿ ನಮಗೆ ಸ್ಪಷ್ಟವಾಗಿ ತಿಳಿಸುತ್ತಾ ಹೋಗುತ್ತಾರೆ.
ಕರ್ಣನಭಿಮಾನಿಗಳಿಗೆ ಕಾಣಸಿಗುವ ಮತ್ತೊಂದು ದೊಡ್ಡ ಅಂಶ ಕರ್ಣನ ಸಾವು. ಕೆಲವರಂತೂ ಇದನ್ನ ಕೃಷ್ಣನ ಕುತಂತ್ರ ಅನ್ನುವಷ್ಟರ ಮಟ್ಟಿಗೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಬಹುಶ ರಾಮಾಯಣದಲ್ಲಿ ವಾಲಿ ವಧೆ ಕೂಡ ಇದೇ ರೀತಿ ಚರ್ಚೆಗೆ ಗ್ರಾಸವಾಗುತ್ತದೆ. ಕರ್ಣನಿಗೆ ಇಂತಹಾ ಸಾವು ಬರಲು ಕಾರಣವೇ ಅವನದ್ದಾಗಿರತಕ್ಕಂತಹ ದುಷ್ಕರ್ಮ.... ಇಲ್ಲಿ ಅವನನ್ನ ಸೋಲಿಸಲಾಗೋಲ್ಲ ಎಂಬ ಕಾರಣಕ್ಕಾಗಿ ಕೃಷ್ಣ ಆರೀತಿಯ ಸಂಹಾರ ಮಾಡಿದ್ದಲ್ಲ..... ದುಷ್ಟನೊಬ್ಬನಿಗೆ ಯಾವುದೇ ರೀತಿಯ ಸಾವು ಅಧರ್ಮವಲ್ಲ ಎಂಬುದನ್ನ ಜಗತ್ತಿಗೆ ತೋರಿಸುವುದಕ್ಕಾಗಿ ಮಾಡಿದ.... ಅಧರ್ಮದ ನಾಶ ಅಥವಾ ಅಧರ್ಮಿಯ ನಾಶ ಎರಡೂ... ಹೇಗೆ ಆಗಲಿ ಮಾಡಲೇ ತಕ್ಕದ್ದು ಅನ್ನುವುದಕ್ಕಾಗಿ.... ಇನ್ನೂ ಹೇಳೋದಾದ್ರೆ.... ಅಭಿಮನ್ಯುವನ್ನ ಹಿಂದಿನಿಂದ ಕೊಂದವನಿಗೆ ಇಂಥಾ ಸಾವು ಅನ್ಯಾಯ ಅಂತನಿಸುವುದಿಲ್ಲ... ಬಹುಶ ಅಲ್ಲಿನ ಪಾಪ ಕರ್ಮಕ್ಕೆ ಸಿಕ್ಕ ಪ್ರತಿಫಲ ಅಷ್ಟೇ...
ಇವೆಲ್ಲಕ್ಕಿಂತಲೂ ಕರ್ಣ ಪಕ್ಷಪಾತಿಗಳು ಬಹಳಷ್ಟು ಬಾರಿ ಹೇಳೋ ಮಾತು ವಿಧಿವಂಚಿತ ವ್ಯಕ್ತಿ ಆತ.... ವಿಧಿಯಿಂದಾಗಿ ಆತ ದುರಂತ ನಾಯಕನಾದ.... ವಿಧಿ ಯಾರ ಬದುಕಲ್ಲಿ ಆಡಿಲ್ಲ....? ಹಾಗೆ ನೋಡೋದಾದ್ರೆ ಪಾಂಡವರ ಬದುಕಿನಲ್ಲಿ ವಿಧಿ ಕಠೋರವಾಗಿದ್ದಷ್ಟು ಕರ್ಣನ ಬದುಕಲ್ಲಿ ಕಠೋರವಾಗಿತ್ತೇ.... ವಿಧಿಯಾಟಕ್ಕೆ ಕರ್ಣ ಅಧರ್ಮದತ್ತಲೇ ಹೋಗತೊಡಗಿದ.... ಅದೇ ಪಾಂಡವರು ಅದೆಷ್ಟೇ ದೊಡ್ಡ ಬಿರುಗಾಳಿ ಬೀಸಿದರೂ ಧರ್ಮದ ಮಾರ್ಗವನ್ನ ಬಿಟ್ಟು ಕದಲಲಿಲ್ಲ.... ನಾವು ಕಲಿಯಬೇಕಾಗಿರೋದು ಇದನ್ನೇ.... ಪ್ರತಿಯೊಬ್ಬರ ಜೀವನದಲ್ಲೂ ವಿಧಿ ತನ್ನ ಆಟವನ್ನು ಆಡಿಯೇ ಆಡುತ್ತೆ.... ಈ ಆಟ ಕೇವಲ ನಮ್ಮ ನಡೆಯನ್ನ ನೋಡಲಿಕ್ಕಷ್ಟೇ.... ನಾವು ಯಾವ ದಿಕ್ಕಿನಲ್ಲಿ ಸಾಗುತ್ತೇವೆ ಅನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಹೀಗೆ ಹಲವು ಬಾರಿ ಅಧರ್ಮದ ಹೆಜ್ಜೆಯನ್ನಿಟ್ಟು ಅಧರ್ಮಿಗಳ ಜೊತೆ ಸೇರಿ ಅಧರ್ಮದ ಕೆಲಸಗಳನ್ನ ಮಾಡಿದಾತನನ್ನ ವ್ಯಾಸರು ದುಷ್ಠ ಅಂತ ಸಂಭೋದಿಸಿದ್ದು ನನಗೆ ಸಮಂಜಸವೆಂದೆನಿಸುತ್ತದೆ. ಮತ್ತೂ ಆತನ ಪೂರ್ವ ಜನ್ಮದ ಆಧಾರದ ಮೇಲೆ ವಿವೇಚಿಸಿದಾಗಲೂ ಆತ ದುಷ್ಟನಾಗೆ ಕಂಡು ಬರುತ್ತಾನೆ. ಆತ ತನ್ನ ಹಿಂದಿನ ಜನ್ಮದಲ್ಲಿ ಸಹಸ್ರ ಕವಚ ಅನ್ನೋ ರಾಕ್ಷಸನಾಗಿದ್ದು ನರ-ನಾರಾಯಣರನ್ನ ಎದುರು ಹಾಕಿಕೊಂಡು ತನ್ನ ೯೯೯ ಕವಚ ಗಳನ್ನ ಕಳೆದುಕೊಂಡಿರುತ್ತಾನೆ. ಈ ಜನ್ಮದಲ್ಲಿ ತನ್ನ ಸಾವಿರದ ಕವಚವನ್ನ ಕಳಕೊಂಡು ಸಂಹಾರಕ್ಕೊಳಪಡುತ್ತಾನೆ. ಹಾಗಾಗಿ ಆತನ ಗುಣ ದುಷ್ಟತನದ್ದೇ ಅನ್ನುತ್ತಾರೆ ಹಲವು ವಿದ್ವಾಂಸರು.
ಇಡಿಯ ಈ ಲೇಖನದಲ್ಲಿ ನಾನು ಹೇಳ ಬಯಸೋದು ಇಷ್ಟೇ.... ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯಾವುದಾದರೂ ಒಂದೊಳ್ಳೆಯ ಗುಣಗಳಿರುತ್ತದೆ. ಆ ಗುಣವನ್ನ ನೋಡಿಯೇ ಆತ ಒಳ್ಳೆಯವ ಎಂದು ನಿರ್ಧರಿಸುವುದು ಆತುರದ ನಿರ್ಧಾರವಾದೀತು. ಆತನೊಳಗಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನ ತೂಗಿ ನೋಡಬೇಕು.... ಆತ ಯಾವ ಬದಿಗೆ ವಾಲುತ್ತಾನೆ ಅನ್ನೋದನ್ನ ಪರೀಕ್ಷಿಸಬೇಕು. ಒಳ್ಳೆಯತನದ ಕಡೆ ವಾಲಿದಾಗ ಆತ ಒಳ್ಳೆಯವನೆನೆಸಿಕೊಳ್ಳುತ್ತಾನೆ. ಈ ಮೇಲಿನ ಗುಣಗಳನ್ನೆಲ್ಲಾ ಆಧರಿಸಿಯೇ ವ್ಯಾಸರು ಕರ್ಣನನ್ನು ದುಷ್ಠ ಅಂದಿದ್ದಾರೆ.
ಇಲ್ಲಿ ನಾವು ಮುಖ್ಯವಾಗಿ ನೋಡಬೇಕಾದದ್ದು ಮೂಲ ಮಹಭಾರತದಲ್ಲಿ ಯಾವ ಪಾತ್ರ ಹೇಗೆ ಚಿತ್ರಿತವಾಗಿದೆ ಎಂದು . ಮಹಾಭಾರತ ಎಂತಹ ವಸ್ತುವೆಂದರೆ ಅದನ್ನೇ ಹಲವು ಜನ ತಮ್ಮ ಮೂಗಿನ ನೇರಕ್ಕೆ ಬರೆದವರಿದ್ದಾರೆ... ಅಂತಹ ಕೃತಿಗಳಲ್ಲಿ ಅವರಿಗಿಷ್ಟವಾದ ಪಾತ್ರವನ್ನ ವೈಭವೀಕರಿಸಿ ಬರೆದಿರಬಹುದು. ಆದರೆ ಆ ಕೃತಿಗಳ ಆಧಾರದ ಮೇಲೆ ವಾದ ಮಾಡುವುದು ನಿರರ್ಥಕ. ಸ್ವಯಂ ಕೃತಿ ಕರ್ತನೇ ಹೇಳಿರುವಾಗ ಅದರ ಬಗೆಗೆ ಆಕ್ಷೇಪ ಎತ್ತುವುದು ವಿಚಿತ್ರ ಅನ್ನಿಸುತ್ತದೆ. ಒಂದೊಮ್ಮೆ ನಿಮ್ಮಷ್ಟಕ್ಕೇ ವಿವೇಚಿಸಿದಾಗ ಆತ ಒಳ್ಳೆಯವನಂತೆ ಕಾಣಬಹುದು. ಆದರೆ ಸರಿಯಾದ ಕಾರಣಗಳನ್ನ ಹುಡುಕಬೇಕಷ್ಟೇ. ಇಲ್ಲಿ ಸಕಾರಣಗಳನ್ನ ಕೊಡುವ ಪ್ರಯತ್ನ ಮಾಡಿದ್ದೇನಷ್ಟೇ...
ಕರ್ಣನ ಕುರಿತಾದ ವೇದವ್ಯಾಸರ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿರಲು ಕಾರಣ.... ನನಗೆ ಧರ್ಮದ ವಿಜಯ ಅಗತ್ಯವಾಗುತ್ತದೆ. ಧರ್ಮ ಉಳಿಯಬೇಕು ಅಂತಾದರೆ ಅಧರ್ಮಿಗಳ ನಾಶ ಆಗಬೇಕು. ಒಂದು ದರೋಡೆಕೋರರ ತಂಡ ದರೋಡೆ ಮಾಡಿ ಸಿಕ್ಕಿ ಹಾಕಿತೆಂದು ಇಟ್ಟುಕೊಳ್ಳಿ. ಆಗ ಶಿಕ್ಷೆ ತಂಡದ ಎಲ್ಲರಿಗೂ ಸಿಗುವುದು ನ್ಯಾಯವೇ... ಅವರೆಲ್ಲರೂ ದರೋಡೆಕೋರರೇ.... ಅಯ್ಯೋ ನಾನು ದರೋಡೆಯ ಸಂಚು ರೂಪಿಸಿಲ್ಲ... ಅವರ ಜೊತೆ ಇದ್ದೆನಷ್ಟೇ... ಹಾಗಾಗಿ ನಾನು ಉತ್ತಮ ವ್ಯಕ್ತಿ.... ವಿದಿಯ ಆಟದಿಂದಾಗಿ ನಾನು ದರೋಡೆಕೋರರ ಸಂಗ ಮಾಡಿದೆ ಅಂದರೆ ಅದು ಒಪ್ಪತಕ್ಕ ಮಾತಲ್ಲ. ಆತ ದುರಂತ ನಾಯಕ ಆಗಲಾರ. ಹಾಗಾಗಿ ನನ್ನ ಪಾಲಿಗೆ ಕರ್ಣ ಒಬ್ಬ ದುಷ್ಟನಾಗಿಯೇ ಕಾಣುತ್ತಾನೆ. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

(ಇನ್ನು ಈ ಕುರಿತಾದ ಚರ್ಚೆಗೆ ಸಿದ್ದ.... ನಾನೇನು ಮಹಾಭಾರತವನ್ನ ಪೂರ್ತಿ ಅರೆದು ಕುಡಿದವನಲ್ಲ.... ಸಾಕಷ್ಟು ತಿಳಿದುಕೊಳ್ಳುವುದಿದೆ... ತಪ್ಪು ಅಂತನಿಸಿದ್ದನ್ನ ಒಪ್ಪಿಕೊಳ್ಳುತ್ತೇನೆ ಹಾಗೆಯೇ ಸಂಶಯ ಬಂದಲ್ಲಿ ಕೇಳಿ ಅಥವಾ ಓದಿ ಸಮಾಧಾನ ನೀಡುವ ಪ್ರಯತ್ನ ಮಾಡಬಲ್ಲೆ....)

ವೇದವ್ಯಾಸರ ಕರ್ಣ - ಒಂದು ವಿಶ್ಲೇಷಣೆ - ಭಾಗ ೨ಕರ್ಣನ ಕುರಿತು ಸಕಾರಾತ್ಮಕವಾಗಿ ಮಾತನಾಡುವವರು ಅಥವಾ ಆತನ ಪರ ವಹಿಸಿ ಮಾತಾಡುವವರು ಆತನ ಹಲವಾರು ದುರ್ಗುಣಗಳನ್ನ ಮರೆತೇ ಬಿಡುತ್ತಾರೆ... ಅರಗಿನ ಅರಮನೆಯಲ್ಲಿ ಪಾಂಡವರನ್ನ ಕೊಲ್ಲಲು ಸಂಚು ರೂಪಿಸಿದಾಗ ಇವನು ಕೈ ಜೋಡಿಸಿಲ್ಲವೇ... ದ್ಯೂತದಲ್ಲಿ ಪಾಂಡವರು ಸೋತಾಗ ದ್ರೌಪದಿಯನ್ನು ಸಭೆಗೆ ಎಳೆದು ತಂದೊಡನೆ ಅವಳ ಸೀರೆ ಎಳೆಯೋದಿಕ್ಕೆ ಮೊದಲು ಪ್ರೇರಣೆ ನೀಡಿದ್ದು ಇವನೇ ಅನ್ನೋದು ಮರೆಯೋದ್ಯಾಕೆ....? ಒಬ್ಬ ಹೆಣ್ಣು ತನ್ನನ್ನು ತಿರಸ್ಕರಿಸಿದಳು ಅಂದ ಮಾತ್ರಕ್ಕೆ ಇಡೀ ರಾಜಸಭೆಯಲ್ಲಿ ವಸ್ತ್ರಾಪಹರಣ ಮಾಡಿಸೋ ಮನಸ್ಥಿತಿ ಹೊಂದಿದ ವ್ಯಕ್ತಿತ್ವದವನಿಗೆ ಹೆಣ್ಣು ಮಕ್ಕಳೇ ಹೆಚ್ಚು ಮರುಕಪಡುತ್ತಾರೆ ಅಂದರೆ ನನಗೇಕೋ ವಿಚಿತ್ರ ಅನ್ನಿಸುತ್ತೆ.. ಇದೂ ಉತ್ತಮರ ಲಕ್ಷಣವೇ...?
ನನಗೆ ಮತ್ತಷ್ಟು ವಿಚಿತ್ರ ಅನ್ನಿಸೋದು ಕರ್ಣನಿಗೆ ಪಾಂಡವರ ಮೇಲಿದ್ದ ದ್ವೇಷ... ಅದರಲ್ಲೂ ವಿಶೇಷವಾಗಿ ಅರ್ಜುನನ ಮೇಲೆ... ಈ ದ್ವೇಷ ಯಾಕಾಗಿ.... ಇಡಿಯ ಮಹಾಭಾರತದಲ್ಲಿ ಪಾಂಡು ಪುತ್ರರು ಯಾರೊಬ್ಬರೂ ಕರ್ಣನನ್ನ ದ್ವೇಷಿಸಿಲ್ಲ ಅವಮಾನಿಸಿಲ್ಲ ಹಾಗಿದ್ದು ಅವನಿಗ್ಯಾಕೆ ಇಂತಹಾ ದ್ವೇಷ.... ನನಗೆ ಸಿಗೋದು ಒಂದೇ ಕಾರಣ... ಅರ್ಜುನ ತನಗಿಂತ ಶ್ರೇಷ್ಠ ಧನುರ್ಧಾರಿ ಎಂದು... ನಾವಾಡುವ ಭಾಷೆಯ ಪ್ರಯೋಗ ಮಾಡಿದರೆ ಇದನ್ನ ಹೊಟ್ಟೆಕಿಚ್ಚು ಅನ್ನುತ್ತೇವೆ. ಸಿದ್ಧಿಯನ್ನು ತಾನು ಸಾಧಿಸಿ ಪಡೆಯಬೇಕೇ ಹೊರತು ಇನ್ನೊಬ್ಬನ ಬಳಿ ಇರುವುದರ ಕುರಿತಾಗಿ ಮತ್ಸರ ಪಡೋದು ಉತ್ತಮರ ಲಕ್ಷಣವೇ...? ಅವನ ದ್ವೇಷ ಎಲ್ಲಿಯವರೆಗಿತ್ತು ಅಂದರೆ ಕೊನೆಯಲ್ಲಿ ಕುಂತಿ ತನ್ನ ಮಕ್ಕಳನ್ನ ಉಳಿಸು ಅಂದಾಗ ಅರ್ಜುನನನ್ನು ಮಾತ್ರ ಬಿಡಲಾರೆ ಅನ್ನುತ್ತಾನೆ. ಇಂಥಾ ದ್ವೇಷದ ಪರಾಕಾಷ್ಠೆಗೆ ಕಾರಣ.... ನನ್ನ ಕಣ್ಣಿಗೆ ಕಾಣಿಸೋದು ಬರೀ ಮತ್ಸರವಷ್ಟೇ...
ಮಿತ್ರತ್ವದ ವಿಷಯ ಬಂದಾಗ ಕರ್ಣ ದುರ್ಯೋಧನರದ್ದು ಅಪೂರ್ವ ಮಿತ್ರತ್ವ ಅನ್ನುತ್ತಾರೆ. ಕೆಟ್ಟಗುಣಗಳವರು ಉತ್ತಮ ಮಿತ್ರರಾಗೋದರಲ್ಲಿ ವಿಚಿತ್ರವೇನಿಲ್ಲ... ಆದರೆ ಅಲ್ಲೂ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೂ ಲೋಪ ತೋರಿಸಬಹುದು. ವಿರಾಟ ನಗರದಲ್ಲಾದ ಯುದ್ದದಲ್ಲಿ ಮಿತ್ರನನ್ನೂ ಬಿಟ್ಟು ಮೊದಲಿಗನಾಗಿ ಓಡಿದಾಗ ಅವನ ಮಿತ್ರತ್ವ ಯಾಕೋ ಸಪ್ಪೆಯಾಗುತ್ತದೆ.. ಇನ್ನೂ ಹೇಳೋದಾದರೆ ದುರ್ಯೋಧನನಿಗೆ ಎಲ್ಲಾ ಪಾಂಡವರ ಮೇಲೆ ಸಿಟ್ಟು ಇದ್ದರೂ... ಬದ್ಧ ವೈರತ್ವವಿದ್ದುದು ಭೀಮನ ಮೇಲೆ... ಆದರೆ ತನ್ನ ಮಿತ್ರನ ಪರಮ ವೈರಿಯ ಸಂಹಾರವನ್ನ ತನ್ನ ಪರಮ ಗುರಿಯಾಗಿಸಲಿಲ್ಲ.... ಅಲ್ಲೂ ಆತನಿಗಿದ್ದಿದು ಸ್ವಾರ್ಥವೇ ಅಲ್ವಾ... ಇದೇ ಮಿತ್ರನಿಗಾಗಿ ಏನನ್ನು ಬೇಕಿದ್ದರೂ ಮಾಡಬಲ್ಲೆ ಅನ್ನುವ ಕರ್ಣ ಭೀಷ್ಮನ ಸೇನಾಧಿಪತ್ಯವನ್ನ ಒಪ್ಪಿಕೊಳ್ಳದೇ ಮಹಾಭಾರತದಲ್ಲಿ ಹನ್ನೊಂದು ದಿನಗಳವರೆಗೆ ರಣರಂಗಕ್ಕೆ ಬರೋದೇ ಇಲ್ಲ.... ಅಲ್ಲೂ ಆತನ ಅಹಂ ಅಡ್ಡ ಬರುತ್ತದೆ.... ವಾಸ್ತವದಲ್ಲಿ ಕರ್ಣನಿಗಿಂತ ಭೀಷ್ಮನೇ ಪರಾಕ್ರಮಿ... ಇದೇ ಕಾರಣ ಅವನು ಭಾಗವಹಿಸದೇ ಇರೋದಿಕ್ಕೆ...ಅಲ್ಲೂ ಮಿತ್ರತ್ವಕ್ಕಾಗಿನ ತ್ಯಾಗ ಕಾಣಿಸೋದೆ ಇಲ್ಲ. ಮಿತ್ರತ್ವಕ್ಕಿಂತಲೂ ಸ್ವಪ್ರತಿಷ್ಠೆ ಹೆಚ್ಚಾಗಿ ಹೋಯಿತು.
ಇನ್ನು ಆತನ ಶೂರತ್ವ... ಮಿತ್ರರೊಬ್ಬರು ಕಮೆಂಟಿಸಿದ್ದರು ಕುಂತಿಗೆ ಕೊಟ್ಟ ಮಾತು ಮುರಿದು ಕರ್ಣ ಯುದ್ದ ಮಾಡಿದ್ದರೆ ಪಾಂಡವರನ್ನು ಮುಗಿಸಿಬಿಡುತ್ತಿದ್ದ ಅಂತ.... ಹ ಹ ನಿಜಕ್ಕೂ ಇದು ಹಾಸ್ಯಾಸ್ಪದವೇ ಸರಿ... ಕರ್ಣ ಒಳ್ಳೆಯ ಧನುರ್ಧಾರಿ ಒಪ್ಪೋ ಮಾತು. ಆದರೆ ಅರ್ಜುನನಿಗಿಂತಲೂ ಶಕ್ತಿಶಾಲಿ ಅನ್ನೋದನ್ನ ನಾನು ನಂಬೋಲ್ಲ... ಇದಕ್ಕೆ ಪ್ರತ್ಯಕ್ಷ ಪ್ರಮಾಣ ಮಹಾಭಾರತದಲ್ಲೇ ಸಿಗುತ್ತದೆ. ಕುರುಕ್ಷೇತ್ರಕ್ಕೂ ಮುನ್ನ ಎರಡು ಬಾರಿ ಮುಖಾಮುಖಿಯಾದಗಲೂ ಕರ್ಣ ಅರ್ಜುನನ ಬಳಿ ಸೋತವನೇ... ಅದರಲ್ಲೂ ಅಜ್ಞಾತವಾಸ ಮುಗಿಯುವ ಹಂತದಲ್ಲಿ ವಿರಾಟನಗರಿಯಲ್ಲಾದ ಯುದ್ದದಲ್ಲಂತೂ ಮೊದಲು ಓಡಿದವನೇ ಕರ್ಣ.... ಅರ್ಜುನನನ್ನು ಬಿಡಿ ಅವನ ಎಳೆಯ ಮಗ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಹಿಂದಿನಿಂದ ಕೊಂದಂತಹಾ ಕರ್ಣ ಹೇಗೆ ಶೂರನಾದಾನು....?
ಕರ್ಣ ಜನರ ಸಹಾನುಭೂತಿಯನ್ನು ಪಡೆಯುವ ಇನ್ನೊಂದು ಕ್ಷಣ... ಕುಂತಿ ಕರ್ಣನ ಬಳಿ ಹೋಗಿ ನೀನು ನನ್ನ ಮಗನೆಂದು ಹೇಳಿಕೊಳ್ಳುವುದು. ಇದನ್ನ ಕೆಲವರು ಆಕೆಯ ಮೊಸಳೆ ಕಣ್ಣೀರು ಅನ್ನುತ್ತಾರೆ. ಆದರೆ ಇದನ್ನ ಸಕಾರಾತ್ಮಕವಾಗಿ ನೋಡಬೇಕು ಅಂತನಿಸುತ್ತದೆ. ದುಷ್ಟರ ಸಂಘದಲ್ಲಿದ್ದವನನ್ನ ಮತ್ತೆ ಧರ್ಮದ ಕಡೆಗೆ ಎಳೆದು ತರುವ ತಾಯಿಯ ನಿಸ್ವಾರ್ಥ ಪ್ರಯತ್ನ... ಒಂದು ವೇಳೆ ಕರ್ಣ ತನ್ನ ತಾಯಿಯ ಮಾತಿಗೆ ಬೆಲೆ ಕೊಟ್ಟು ಧರ್ಮದ ಜೊತೆ ನಡೆದಿದ್ದರೆ ಆತ ಬದುಕುಳಿಯುತಿದ್ದುದಷ್ಟೇ ಅಲ್ಲ ರಾಜನಾಗುವ ಯೋಗವೂ ಸಿಗಬಹುದಿತ್ತೇನೋ ಯಾಕೆಂದರೆ ಯುಧಿಷ್ಠಿರ ಅಂತಹ ಧರ್ಮನಿಷ್ಠ. ಅಷ್ಟಕ್ಕೂ ಆಕೆ ಕೇಳೋದು ತನ್ನ ಮಕ್ಕಳನ್ನು ಉಳಿಸು ಎಂದು ಯಾವ ಯಾವ ಮಕ್ಕಳನ್ನು ಉಳಿಸಬೇಕು ಅನ್ನುವುದನ್ನ ಹೇಳಿಲ್ಲ... ಅಧರ್ಮದ ಜೊತೆ ಸೇರಿ ನೀನು ನಾಶವಾಗಬೇಡವೆಂಬ ಗೂಢಾರ್ಥ ಬಲುಬೇಗ ಕಣ್ಣಿಗೆ ಕಾಣಿಸೋದೆ ಇಲ್ಲ. ಆದರೂ ಆತ ತನಗೆ ಸಿಕ್ಕ ಕೊನೆಯ ಅವಕಾಶವನ್ನೂ ಕೈ ಚೆಲ್ಲಿದ. ಮತ್ತೂ ಆತ ಹೊರಟಿದ್ದು ಅಧರ್ಮದ ಕಡೆಗೇ... ಒಬ್ಬ ಉತ್ತಮ ವ್ಯಕ್ತಿ ಧರ್ಮಕ್ಕೆ ಪ್ರಾಮುಖ್ಯತೆ ಕೊಡಬೇಕೇ ಹೊರತು ಅಧರ್ಮದ ಮಿತ್ರತ್ವಕ್ಕಲ್ಲ...ಅಧರ್ಮಿಗಷ್ಟೇ.... ಅಧರ್ಮದಲ್ಲೂ ಧರ್ಮ ಕಾಣಿಸೋದು ಅಲ್ವೇ...
ಇನ್ನೂ ಮುಗಿದಿಲ್ಲ....

ವೇದವ್ಯಾಸರ ಕರ್ಣ - ಒಂದು ವಿಶ್ಲೇಷಣೆ - ಭಾಗ ೧ಒಂದಷ್ಟು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ಕಣ್ಣಾಡಿಸುವಾಗ ಮಹಾಭಾರತದ " ಕರ್ಣ " ನ ಬಗ್ಗೆ ಕವಿತೆ ನೋಡಿದೆ.... ಕವಿತೆಯೇನೋ ಚೆನ್ನಾಗಿ ಮೂಡಿತ್ತು... ಆದರೆ ನನಗೆ ಕವಿತೆಯಲ್ಲಿನ ಕರ್ಣನ ವರ್ಣನೆ ಹಿಡಿಸಿರಲಿಲ್ಲ.... ಅಲ್ಲೇ ಒಂದಷ್ಟು ವಾದ ವಿವಾದಗಳೂ ಆಯಿತು.. ಇವತ್ತು ಮತ್ತೆ ಇನ್ನೊಬ್ಬರ ಮಾತುಗಳೂ ಕೂಡ ಕರ್ಣ ನನ್ನ ಅಟ್ಟಕ್ಕೇರಿಸಿಬಿಟ್ಟಿದ್ದರು... ಮೊದಲ ನೋಟಕ್ಕೆ ಎಲ್ಲರಿಗೂ ಕರ್ಣ ಎನುವ ಪಾತ್ರ ಪ್ರಿಯವಾಗಿ ಬಿಡುತ್ತದೆ. ನಾನು ಮೊದಲು ಕರ್ಣನ ಬಗ್ಗೆ ಅನುಕಂಪ ಪಟ್ಟಿದ್ದೆ... ಆದರೆ ಮಹಾಭಾರತವನ್ನ ಹೆಚ್ಚು ಹೆಚ್ಚು ಅರಿಯುತ್ತಾ ಹೋದಂತೆ ಸ್ವಯಂ ಮಹಭಾರತದ ರಚನಾಕಾರರಾದ ವೇದವ್ಯಾಸರು ಹೇಳಿರುವಂತೆ ಕರ್ಣ ದುಷ್ಟ ಚತುಷ್ಟಯರಲ್ಲೊಬ್ಬ ಅನ್ನೋದು ಅರಿವಾಗುತ್ತಾ ಹೋಯಿತು...
ಈ ಅರಿವು ಮೂಡಿದ್ದು ವಿದ್ವಾನ್ ಪಾವಗಡ ಪ್ರಕಾಶ ರಾಯರ ಉಪನ್ಯಾಸದಿಂದ ಮತ್ತು ಡಾ.ಕೆ. ಎಸ್. ನಾರಾಯಣಾಚಾರ್ಯರ ಗ್ರಂಥಗಳಿಂದ. ಮತ್ತು ನನ್ನ ಒಂದಷ್ಟು ಸಹೋದ್ಯೋಗಿಗಳ ನಡುವಿನ ಚರ್ಚೆಗಳಿಂದ. ಇವರುಗಳಲ್ಲಿ ಒಬ್ಬರನ್ನೇ ಅನುಸರಿಸುತ್ತಿದ್ದರೆ ನಾನು ಅವರ ಮುಖವಾಣಿ ಆಗಿರುತ್ತಿದ್ದೆನೋ ಏನೋ ಆದರೆ ಇಲ್ಲಿ ಎಲ್ಲರೂ ಕೊಟ್ಟಿರುವ ಸಕಾರಣಗಳನ್ನ ಬಳಸಿಕೊಂಡು ನನ್ನ ವಿವೇಚನೆಯನ್ನೂ ಉಪಯೋಗಿಸಿ ಯಾಕೆ ಆತ ದುಷ್ಟ ಚತುಷ್ಟಯರಲ್ಲೊಬ್ಬ ಅನ್ನೋದನ್ನ ವಿವರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಕರ್ಣ ತನ್ನ ಜನ್ಮದಿಂದಲೇ ಜನರ ಅನುಕಂಪ ಪಡೆಯುತ್ತಾನೆ. ಆತನನ್ನ ಕುಂತಿ ಹುಟ್ಟುತ್ತಲೇ ನದಿಯಲ್ಲಿ ಬಿಟ್ಟು ಬಿಟ್ಟಳು ಅಂತ. ಇದಾದ ಕೂಡಲೇ ಕುಂತಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಡುತ್ತೇವೆ. ಆದರೆ ಒಮ್ಮೆ ಯೋಚಿಸಿ ಆ ಹೊತ್ತಿಗೆ ಕುಂತಿ ಆತನನ್ನು ಸ್ವೀಕರಿಸೋ ಸ್ಥಿತಿಯಲ್ಲಿದ್ದಳಾ...??? ಬಾಲ್ಯದಲ್ಲಿ ಸಹಜವಾಗಿ ಕಾಡುವ ಕುತೂಹಲದಿಂದ ಆಕೆ ಸೂರ್ಯನನ್ನು ಕರೆದಿದ್ದು ಸಹಜವೇ... ಆದರೆ ಹಠಾತ್ತಾಗಿ ಈ ರೀತಿ ಆದಾಗ ಆಕೆ ಮಗುವನ್ನ ನೀರಿನಲ್ಲಿ ತೇಲಿ ಬಿಟ್ಟಳು ಮತ್ತೂ ಯಾವುದೇ ಹುಡುಗಿಯಾದರೂ ಆ ರೀತಿಯಾಗೇ ಮಾಡುತಿದ್ದರು ಅನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಇದನ್ನೇ ನೆಪವಾಗಿಟ್ಟು ಕರ್ಣನಿಗೆ ತಾಯಿಯಿಂದಲೇ ಮೋಸ ಆಯಿತು ಅನ್ನೋದನ್ನ ನಾವು ಹೇಳಲಾಗುವುದಿಲ್ಲ.... ಕಾರಣ ಅದಿರಥ ಮತ್ತು ರಾಧೆ ಇಬ್ಬರೂ ಇವನ ಮೇಲೆರೆದ ವಾತ್ಸಲ್ಯ ಕಪಟತನದ್ದಲ್ಲವಲ್ಲ.... ಕರ್ಣ ರಾಧೆಯ ಸ್ವಂತ ಮಗನಲ್ಲದಿದ್ದರೂ ಆಕೆ ಮಲತಾಯಿ ಧೋರಣೆ ತೋರಿಸಿಯೇ ಇಲ್ಲ... ಅದೆಂಥಾ ಮಾತೃ ವಾತ್ಸಲ್ಯ ಸಿಕ್ಕಿತು ಅಂತಂದರೆ ಅವನನ್ನ ಜನ ರಾಧೇಯ ಅಂತಾನೂ ಕರೆಯುತ್ತಾರೆ ಹಾಗಿದ್ದರೆ ಮಾತೃ ವಾತ್ಸಲ್ಯದಿಂದ ವಂಚಿತ ಹೇಗಾದ...?
ಯಾರೇ ಆಗಲಿ ಸಣ್ಣಂದಿನಿಂದ ಯಾರು ತನ್ನನ್ನು ತಾಯಿ ಎಂದು ಪರಿಚಯಿಸಿಕೊಂಡು ಪ್ರೀತಿ ಕೊಡುತ್ತಾರೋ ಅವರನ್ನೇ ನಾವು ನಮ್ಮ ತಾಯಿಯೆಂದು ನಂಬುತ್ತೇವೆ. ನಾವೇನೂ ಆಕೆಯನ್ನ ಸಂಶಯದಿಂದ ನೋಡುವುದಿಲ್ಲ ತಾನೆ. ಒಂದು ವೇಳೆ ಆಕೆ ಸರಿಯಾದ ಪ್ರೀತಿ ತೋರಿಸದಿದ್ದರೆ ಮಾತ್ರ ನಮಗೆ ಅಂತಹ ಸಂಶಯ ಬರುತ್ತೆ ಹೌದಲ್ವೇ.... ಇಲ್ಲಿ ಎಡವಟ್ಟು ಏನಾಗೋದಂದರೆ ನೋಡುಗರಿಗೆ ಗೊತ್ತಿದೆ ರಾಧೆ ಆತನ ನಿಜವಾದ ತಾಯಿಯಲ್ಲ ಅಂದು ಆದರೆ ಒಮ್ಮೆ ನೀವೇ ಆತನ ಸ್ಥಾನದಲ್ಲಿ ನಿಂತು ನೋಡಿ... ತಾಯಿ ವಾತ್ಸಲ್ಯದಲ್ಲಿ ಎಳ್ಳಷ್ಟೂ ಕಮ್ಮಿಯಾಗಿಲ್ಲ. ಪುಟ್ಟ ಮಗುವಾಗಿದ್ದಾಗಿನಿಂದಲೇ ಕರ್ಣನ ಪಾಲಿಗೆ ರಾಧೆ ತಾಯಿ... ಯಾವ ಗ್ರಂಥದಲ್ಲಿ ಬರೆದಿದ್ದಾರೆ ಆತ ಎಳೆತನದಲ್ಲಿ ಮಾತೃ ವಾತ್ಸಲ್ಯದಿಂದ ವಂಚಿತನಾಗಿದ್ದ ಎಂದು...? ಹಾಗಿದ್ದರೆ ಯಾಕೆ ನಾವ್ಯಾಕೆ ಇಲ್ಲದ ವಿಷಯಕ್ಕೆ ಅನುಕಂಪ ತೋರಿಸೋದು...?
ಎರಡನೆಯದಾಗಿ ಕರ್ಣನಿಗೆ ತನ್ನ ಗುರುಗಳಿಂದ ಅನ್ಯಾಯವಾಯಿತು ಅನ್ನೋ ಮಾತು ಆದರೆ ಎಂಥಾ ವಿಚಿತ್ರ ಕರ್ಣ ಮಾಡಿದ ಮೋಸವ್ಯಾಕೆ ಜನ ಗುರುತಿಸೋದಿಲ್ಲ...? ಪರಶುರಾಮರು ಯಾಕಾಗಿ ಕ್ಷತ್ರಿಯರಿಗೆ ಬಿಲ್ವಿದ್ಯೆ ಕಲಿಸೋದಿಲ್ಲ ಅನ್ನೋದು ಲೋಕಕ್ಕೆ ಗೊತ್ತಿದೆ... ಹಾಗಿದ್ದು ಅವರನ್ನ ವಂಚಿಸಿ ವಿದ್ಯೆ ಪಡೆಯಲು ಹೋಗಿದ್ದು ಯಾರ ತಪ್ಪು....? ಧನುರ್ವಿದ್ಯೆಯ ಕಲಿವ ಆಸೆ ಅಥವಾ ಅತೀವ ಉತ್ಕಟತೆ ಇದ್ದಲ್ಲಿ ಹೇಗೂ ಸಾಧಿಸಬಹುದು ಅನ್ನುವುದಕ್ಕೆ ಏಕಲವ್ಯನೇ ಸಾಕ್ಷಿ. ಯಾಕೆ ಆ ರೀತಿಯಾಗಿ ದ್ರೋಣರಿಂದಲೇ ಕಲಿಯುವ ಮನಸ್ಸು ಮಾಡಲಿಲ್ಲ.... ಇಲ್ಲಿಯೂ ಕರ್ಣನ ಮೇಲೆ ಅನುಕಂಪ ನನಗೆ ಅಕಾರಣ ಎಂದು ಕಾಣಿಸುತ್ತದೆ....ಈಗಿನ ಕಾಲದಲ್ಲಿ ಮೋಸ ಮಾಡಿದಾತನಿಗೆ ಮೋಸ ಆಯಿತೆಂದರೆ ನಾವೆಲ್ಲ ಅತೀವ ಸಂತಸ ಪಡುತ್ತೇವೆ ಆದರೆ ಕರ್ಣನ ಜೀವನದಲ್ಲಿ ಅದೇ ಆದಾಗ ಯಾಕೆ ಅನುಕಂಪ....?
ಇನ್ನು ಸೂತಪುತ್ರ ಅನ್ನುವ ಮಾತು... ದ್ರೌಪದಿಗೆ ಇಷ್ಟವಿಲ್ಲದೇ ಹೋದಾಗ ಆಕೆ ಸೂತಪುತ್ರನನ್ನು ಮದುವೆಯಾಗಲಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪು....? ಮತ್ತು ಆಗಿನ ಕಾಲಕ್ಕೆ ವರ್ಣ ಪದ್ದತಿಯ ಅನುಷ್ಠಾನ ಇದ್ದಾಗ ಒಬ್ಬ ಕ್ಷತ್ರಿಯ ಕನ್ಯೆ ಶೂದ್ರನನ್ನು ಮದುವೆಯಾಗೋದು ಧಾರ್ಮಿಕ ನಡೆಯಾಗಿರಲಿಲ್ಲ. ಆಕೆ ಆತನ ಹುಟ್ಟಿನ ಕುರಿತಾಗಿ ಹೇಳಿದಳೇ ವಿನಹ ಅವನನ್ನು ಅವಮಾನಿಸಲಿಲ್ಲ. ಅವಮಾನ ಎಂದು ತಿಳಿದುಕೊಂಡಿದ್ದು ಸ್ವಯಂ ಆತನೇ... ಇಲ್ಲಿ ಆಧ್ಯಾತ್ಮಿಕವಾಗಿ ನೋಡೋದಾದರೆ ಯಾವ ಕುಲದಲ್ಲಿ ಹುಟ್ಟುವುದು ಎನ್ನುವುದು ಪೂರ್ವಾರ್ಜಿತ ಕರ್ಮ ಫಲ ಮೇಲೆ ನಿರ್ಭರವಾಗಿದೆ. ಆತನ ಪೂರ್ವ ಜನ್ಮದ ಕರ್ಮ ಫಲದ ಪರಿಣಾಮವಾಗಿ ಸಿಕ್ಕಿದ್ದನ್ನು ಆತ ಅಪಮಾನ ಎಂದು ತಿಳಿಯುವುದು ಅವನ ಅವಿವೇಕತನವನ್ನ ತೋರಿಸುತ್ತದೆ. ಹುಟ್ಟು ಕ್ಷತ್ರಿಯನಿಗೆ ಅವಮಾನ ಸಹಿಸಬೇಕಾಯ್ತು ಅನ್ನೋದು ಕೆಲವರ ವಾದ.... ಆದರೆ ಸನಾತನ ಧರ್ಮದ ಪ್ರಕಾರ ಯಾವುದೇ ಕುಲ ನೀಚ ಅಂತೇನಿಲ್ಲ.... ಯಾಕೆ ವೇದವ್ಯಾಸರು ಕೂಡ ಅದೇ ಕುಲದವರಲ್ವೇ ಅವರಿಗೆಂದಿಗೂ ತಮ್ಮ ಕುಲದ ಬಗ್ಗೆ ಹೇಳಿದಾಗ ಅವಮಾನವಾಗಿಲ್ಲ. ಧರ್ಮದ ಹಾದಿಯಲ್ಲೇ ನಡೆದರಲ್ವಾ..ಆದರೆ ಕರ್ಣನಾದರೋ ಮಾಡಿದ್ದೇನು...? ಶ್ರೀಕೃಷ್ಣನೂ ಗೋಪಾಲಕನಾಗಿ ಶೂದ್ರ ಕುಲದಲ್ಲೇ ಸಂತೋಷವಾಗಿರಲಿಲ್ಲವೇ... ದ್ರೌಪದಿಯ ಭಾವನೆಗೆ ಬೆಲೆ ಕೊಡಲಾಗದಾತ ಹೇಗೆ ತಾನೆ ಉತ್ತಮನಾದಾನು...?
ಇಷ್ಟಾಗಿಯೂ ಆತನ ದೊಡ್ಡ ತಪ್ಪು ದುರ್ಜನರ ಸಂಗ ಮಾಡಿದ್ದು. ಯಾರು ಒಳ್ಳೆಯವರು ಯಾರು ಕೆಟ್ಟವರು ಅನ್ನೋ ವಿವೇಚನೆ ಇದ್ದಾಗಲೂ ಕೆಟ್ಟವರ ಆಯ್ಕೆ ಮಾಡಿದ್ದು ಹೇಗೆ ಸಮರ್ಥನೀಯ...? ಇದೇ ಕುಲದ ಮಾತಿನಿಂದಾಗಿ ಅವನಿಗೆ ಅನ್ಯಾಯವಾಯಿತು ಅನ್ನುವ ಮಾತನ್ನು ಮುಂದಿರಿಸಿ ದುರ್ಯೋಧನ ಇವನಿಗೆ ಆಶ್ರಯ ನೀಡಿದಾಗ ಆತನ ಜೊತೆ ಸೇರಿದ್ದು ಅವನಲ್ಲಿ ಯಾವ ಧರ್ಮ ಇದೆ ಎಂದು..? ಒಂದು ವೇಳೆ ನಾವೇ ಎಂದಿಟ್ಟುಕೊಳ್ಳಿ ದಾವೂದ್ ಬಂದು ನನ್ನ ಕುರಿತಾಗಿ ಸಹಾನುಭೂತಿ ತೋರಿಸಿದರೆ ನಾವವರ ಜೊತೆ ಸೇರುತ್ತೇವೆಯೇ...? ಇಲ್ಲ ತಾನೇ... ಹಾಗಿದ್ದರೆ ತನಗೆ ಸಹಾನುಭೂತಿ ತೋರಿಸಿದ ಮಾತ್ರಕ್ಕೆ ದುರ್ಯೋಧನನ ಜೊತೆ ಸೇರಿದ್ದು ಯಾವ ಧಾರ್ಮಿಕ ನಡೆ...? ಅಲ್ಲಿ ಹೋಗಿ ಅಧರ್ಮಿಯಾದ ರೀತಿ ಯಾರಿಗೂ ಕಾಣಿಸೋದಿಲ್ಲ ಯಾಕೆ ಅನ್ನೋದೇ ಅಚ್ಚರಿಯ ವಿಷಯ..
ಮುಂದುವರಿಯುತ್ತದೆ....

ಶ್ರೀ ರಾಮ ಮಂದಿರ, ಬರಿಯ ಮಂದಿರವಲ್ಲ ಅದು ದೇಶಭಕ್ತಿಯ ಸಂಕೇತ...ಕಾಲ ಕಾಲಕ್ಕೆ ಹಣದ ಟಾನಿಕ್ ಕೊಡೋ ಕಾಣದ " ಕೈ " ಗಳು.... ಮತ್ತೆ ಮಾಧ್ಯಮಗಳಿಗೊಂದು ಹೊಸ ವಿಷಯ ಕೊಟ್ಟು ಬಿಟ್ಟಿದ್ದಾರೆ ಅಂತನಿಸುತ್ತದೆ. ಅದೇ ಅಯೋಧ್ಯೆಯ ಶ್ರೀರಾಮ ಮಂದಿರ...... ವಿಚಿತ್ರ ಅಂದ್ರೆ... ಈ ವಿಷಯವಾಗಿ ಬಹಳಷ್ಟು ಹಿಂದೂಗಳೇ ಮುಸ್ಲಿಂರಂತೆ ವರ್ತಿಸುತ್ತಿದ್ದಾರೆ ಕೂಡ.... ಆದರೆ ಇವರಿಗ್ಯಾರಿಗೂ ಈ ವಿವಾದ ಬಗೆಹರಿಯೋದೇ ಬೇಕಾಗಿಲ್ಲ... ಮತ್ತಷ್ಟು ಮತ್ತಷ್ಟು ಚರ್ಚಿಸಿ ಹಿಂದೂ ಮುಸ್ಲಿಮರ ನಡುವೆ ಅಂತರ ಕಾಯ್ದಿರಿಸಿಕೊಳ್ಳುವುದೇ ಇವರ ಅಜೆಂಡಾ.... ಈ ಚುನಾವಣಾ ಸಂಧರ್ಭದಲ್ಲಂತೂ ಹೇಳೋದೇ ಬೇಡ ಬಿಡಿ.... ಮೋದಿ ಅಲೆಗೆ ಸಿಕ್ಕಿ ಧೂಳೀಪಟವಾಗುತ್ತಿರೋ ವಿರೋಧಿಗಳಿಗೆ ಹುಲ್ಲು ಕಡ್ಡಿಯೊಂದು ಸಿಕ್ಕ ಹಾಗಿದೆ. ಬೇರೇನೂ ಬೇಡ ಈ ವಿಷಯದ ಕುರಿತಾಗಿ ನ್ಯಾಯಯುತವಾಗಿ ಯೋಚಿಸಿದರಷ್ಟೇ ಸಾಕು ಈ ಸಮಸ್ಯೆಯನ್ನ ಪರಿಹರಿಸಬಹುದು. ಆದರೆ ಕಾಂಗ್ರೆಸ್ ಗೆ ಇದು ಬೇಕಾಗಿಲ್ಲ. ಈ ಮಂದಿರ ಮಸೀದಿ ಗಲಾಟೆ ಇರುವವರೆಗೆ ಅವರ ಕುರ್ಚಿ ಸುಭದ್ರ ತಾನೆ... ವೋಟ್ ಬ್ಯಾಂಕಿನ ಮೂಲ ಆಧಾರ ಸ್ಥಂಬವೇ ಇದಲ್ವಾ...
ಇಲ್ಲಿ ಮೊದಲ ಪ್ರಶ್ನೆ ಉದ್ಭವವಾಗೋದು... ಅಯೋಧ್ಯೆಯಲ್ಲಿ ಉರುಳಿಸಲ್ಪಟ್ಟ ಮಸೀದಿ... ಬಾಬ್ರಿ ಮಸೀದಿ ಏನದು....? ನಮಗೆ ನಿಮಗೆಲ್ಲಾ ಗೊತ್ತಿರುವಂತೆ ಇದು ಬಾಬರ್ ಗಾಗಿ ಕಟ್ಟಿಸಿರೋ ಮಸೀದಿ. ಸರಿ ಹಾಗಿದ್ದರೆ ಈ ಬಾಬರ್ ಯಾರು ...? ಇತಿಹಾಸವನ್ನಿಣುಕಿದರೆ ನಮಗೆ ಗೊತ್ತಾಗೋದು... ಬಾಬರ್ ಅನ್ನುವಾತ ತೈಮೂರ್ ನಲ್ಲಿ ಜನಿಸಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದಾತ. ಈತನೇ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರವನ್ನ ಧ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿಸಿದ. ಈಗೇನು ಎಲ್ಲರೂ ಮಸೀದಿ ಒಡೆದರು ಮಸೀದಿ ಒಡೆದರು ಅನ್ನುತ್ತಾರಲ್ಲ.... ಆ ಮಸೀದಿಯೂ ಒಂದು ಮಂದಿರವನ್ನ ಒಡೆದು ಮಾಡಿದ್ದೇ ತಾನೇ.... ಯಾಕೆ ಮಾಧ್ಯಮದವರಾಗಲೀ ಅಥವಾ ಸೆಕ್ಯುಲರ್ ಗಳಾಗಲೀ ಈ ಆಂಶದ ಮೇಲೆ ಬೆಳಕು ಚೆಲ್ಲಲು ಇಷ್ಟಪಡುವುದಿಲ್ಲ...??
ಒಬ್ಬನ ಜಾಗದಲ್ಲಿ ಇನ್ನೊಬ್ಬ ಅಕ್ರಮವಾಗಿ ಬಂದು ನೆಲೆಸಿದ್ದನ್ನು ಖಂಡಿಸಿ... ಯಾರು ಅಕ್ರಮವಾಗಿ ಬಂದಿದ್ದನೋ ಅವನನ್ನ ಎದ್ದೇಳೋಕೆ ಹೇಳಿದರೆ ಅದು ಅನ್ಯಾಯ ಹೇಗಾದೀತು ಸ್ವಾಮೀ.... ಅದೂ ಆತನ ಬಳಿ ಸರಿಯಾದ ದಾಖಲೆಗಳಿದ್ದರಂತೂ ಯಾವುದೇ ಕೋರ್ಟ್ ಆಗಲಿ ಮೂಲವಾಗಿ ಯಾರಿಗೆ ಜಾಗ ಯಾರಿಗೆ ಸೇರಬೇಕೋ ಆತನಿಗೇ ಆ ಭೂಮಿಯನ್ನ ಬಿಟ್ಟು ಕೊಡುತ್ತದೆ. ಆದರೆ ಇಲ್ಲಿ ಮಾತ್ರ ಯಾಕೆ ಹೀಗೆ.... ಜಾತ್ಯಾತೀತತೆ ಅಂದರೆ ಇದೇ ಅಲ್ವಾ.... ಯಾರಿಗೆ ದಕ್ಕಬೇಕೋ ಅವನಿಗೆ ಜಾತಿ ಭೇದಗಳನ್ನ ಮೀರಿ ನ್ಯಾಯ ಒದಗಿಸೋದು.... ಕೋರ್ಟಿನಲ್ಲಿ ಇದು ಸಾಬೀತಾಗಿದೆ... ಅಯೋಧ್ಯೆಯಲ್ಲಿದ್ದದ್ದು ಶ್ರೀರಾಮ ಮಂದಿರ ಎಂದು. ಬೇಕಿದ್ದರೆ ಯಾರು ಬೇಕಿದ್ದರೂ ಅಯೋಧ್ಯೆಯ ಉತ್ಖನನದ ವಿವರ ನೋಡಬಹುದು.. ಹಾಗಾಗಿ ಇಲ್ಲಿ ಚರ್ಚಿಸುವಂಥಾದ್ದೇನಿದೆ...??? ಅಥವಾ ಮಾಧ್ಯಮದ ಚರ್ಚೆಗಳಲ್ಲಿ ಉತ್ಖನನದ ವಿಷಯ ಯಾಕೆ ಬರೋಲ್ಲ..?
ಹಾಗಾದರೆ ಇಲ್ಲಿ ನ್ಯಾಯಕ್ಕೆ ಬೆಲೆಯೇ ಇಲ್ಲವೇ....? ಇಲ್ಲಿ ಸಮಸ್ಯೆ ಪ್ರಾರ್ಥನಾ ಮಂದಿರದ್ದಲ್ಲ ಪ್ರತಿಷ್ಠೆಯದ್ದು.... ಹಿಂದೂಗಳಿಗೆ ಬಿಟ್ಟು ಕೊಟ್ಟರೆ ಮುಸ್ಲಿಮರಿಗೆ ಅಪಜಯವಾದಂತೆ ಅನ್ನೋ ತಪ್ಪು ಕಲ್ಪನೆ... ನಿಜಕ್ಕೂ ಒಂದು ವೇಳೆ ಅಲ್ಲಿ ಮಂದಿರಕ್ಕೆ ಅವಕಾಶ ಮಾಡಿಕೊಟ್ಟರೆ ಮುಸ್ಲಿಂ ಮತ್ತು ಹಿಂದೂಗಳಲ್ಲಿ ಭಾಂಧವ್ಯತೆ ಹೆಚ್ಚುತ್ತದೆ. ಮುಸ್ಲಿಮರ ಮೇಲೆ ಗೌರವ ಭಾವನೆ ಇಮ್ಮಡಿಯಾದೀತೇ ಹೊರತು ಜಯದ ದರ್ಪ ತಲೆಗೇರೋಲ್ಲ.... ಯಾಕೆಂದರೆ ಜನರಿಗೆ ಶ್ರೀರಾಮನ ಪೂಜೆಯಲ್ಲಿ ಮನಸ್ಸಿದೆಯೇ ಹೊರತು ಇನ್ನೊಂದು ಧರ್ಮವನ್ನ ತುಳಿಯೋ ಯೋಚನೆಯಿಲ್ಲ... ಮೊದಲಿಂದಲೂ ಇಲ್ಲಿ ಭಕ್ತಿ ಮಾರ್ಗವೇ ಜನರ ಮೊದಲ ಆಯ್ಕೆ...
ಮುಸ್ಲಿಮರ ದೃಷ್ಟಿಯಿಂದ ನೋಡಿದಾಗಲೂ ಅಲ್ಲಿನ ಮಸೀದಿ ಅಷ್ಟೊಂದು ಮಹತ್ವದ್ದಲ್ಲ... ಯಾಕೆಂದರೆ ಭಾರತದಲ್ಲಿ ಮುಸ್ಲಿಂ ಸಂತರ ಹೆಸರಿನಲ್ಲಿ ಹಲವಾರು ಮಸೀದಿಗಳಿವೆಯಾದರೂ ರಾಜರ ಹೆಸರಿನಲ್ಲಿಲ್ಲ. ಒಂದು ವೇಳೆ ಮುಸ್ಲಿಮರ ನಿಷ್ಠೆ ಭಾರತಕ್ಕಿದ್ದರೆ ಅವರಿಗೂ ಅದೊಂದು ದರೋಡೆಕೋರನದೇ ಕಟ್ಟಡವಾದೀತೇ ಹೊರತು ಪರಮಾತ್ಮನ ಪ್ರಾರ್ಥನಾ ಮಂದಿರವಲ್ಲ. ನನಗೆ ಗೊತ್ತಿದ್ದಂತೆ ಮುಸ್ಲಿಮರು ಅಲ್ಲಾಹುವನ್ನ ನಂಬುತ್ತಾರೆಯೇ ಹೊರತು ದರೋಡೆಕೋರರನ್ನಲ್ಲ. ಕನಿಷ್ಠ ಮುಸ್ಲಿಂ ಭಾಂಧವರಿಗೆ ಬಾಬರ್ ಇಲ್ಲಿಯವನೇ ಅನ್ನೋ ಅಭಿಮಾನವನ್ನು ಕೂಡ ಇಡುವಂತಿಲ್ಲ.. ಯಾಕೆಂದರೆ ಬಾಬರ್ ಈ ದೇಶದಲ್ಲೇ ಹುಟ್ಟಿ ಬೆಳೆದವನಲ್ಲ. ನಾಳೆ ಯಾರೋ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಗೂ ಇಲ್ಲೊಂದು ಮಸೀದಿ ಕಟ್ಟೋಣ ಅಂದರೆ ಅದು ಆಗತಕ್ಕ ಮಾತೇ...? ಅವರಂತೆಯೇ ದರೋಡೆಕೋರನಾಗಿರುವ ಬಾಬರ್ ಗೆ ಮಾತ್ರ ಯಾಕೆ ಮಸೀದಿ... ಹಾಗಿದ್ದು ಯಾಕೆ ಇಷ್ಟೊಂದು ಹಠ...? ಯಾಕೆ ಹಿಂದೂಗಳ ಭಾವನೆಗಳಿಗೆ ಬೆಲೆಕೊಡಬೇಕೆನಿಸುತ್ತಿಲ್ಲ... ಬಹುಶ ಅವರನ್ನ ಹಾಗೆ ಮಾಡದಂತೆ ತಡೆಯುತ್ತಿರುವುದು ಈ ರಾಜಕೀಯ ಪುಢಾರಿಗಳೇ...
ಮುಸ್ಲಿಮರು ಭಾರತಕ್ಕೆ ಬಂದಾಗ ಅವರನ್ನ ಅವರ ಧರ್ಮದಲ್ಲೇ ಇರಲು ಬಿಟ್ಟು ಕೊಟ್ಟ ಶ್ರೇಷ್ಠ ಸನಾತನ ಧರ್ಮಿಗಳ ಆರಾಧ್ಯನಿಗೆ ಅವನ ನೆಲದಲ್ಲೇ ಮಂದಿರ ಕಟ್ಟಲು ಬಿಡದಿರುವುದು ಯಾವ ರೀತಿಯ ನ್ಯಾಯ...? ಶಾಂತಿ ಸಾಮರಸ್ಯಗಳು ಚಪ್ಪಾಳೆಯಂತೆ ಎರಡೂ ಕೈಗಳು ಬೇಕು.. ಒಂದೇ ಕೈಗಳಿಂದ ಚಪ್ಪಾಳೆ ಸಾಧ್ಯವಿಲ್ಲ. ನಿಜಕ್ಕೂ ಅಲ್ಲಿನ ಹಕ್ಕು ಅವರದೇ ಅಂತಿದ್ದರೆ ಖಂಡಿತಾ ಬಿಟ್ಟುಕೊಡುವ ಮನಸ್ಥಿತಿ ಹಿಂದೂಗಳಿಗಿದೆ. ಆದರೆ ಸಾಕ್ಷ್ಯಾಧಾರಗಳ್ಯಾವುದೂ ಮುಸ್ಲಿಮರ ಜೊತೆಯಲ್ಲಿಲ್ಲ. ಅದಾಗಿಯೂ ಈ ದೇಶದ ಮೇಲೆ ದಾಳಿ ಮಾಡಿ ಇಲ್ಲಿನ ಮಂದಿರವನ್ನ ಧ್ವಂಸ ಮಾಡಿದವನ ಹೆಸರಿನಲ್ಲಿ ಮಸೀದಿ ಕಟ್ಟಿಕೊಳ್ಳುವುದು ದೇಶದ್ರೋಹವಲ್ಲದೇ ಮತ್ತಿನ್ನೇನು....? ಇಂತಹಾ ದೇಶದ್ರೋಹದ ಪರವಾಗಿ ನಿಲ್ಲುವ ಮಾಧ್ಯಮದವರೂ ದೇಶದ್ರೋಹಿಗಳೇ ತಾನೇ...
ಲಂಕೆಯಂತಹಾ ಸ್ವರ್ಣಾನಗರಿಯನ್ನ ಗೆದ್ದ ಶ್ರೀರಾಮ ಅದನ್ನ ವಿಭೀಷಣನಿಗೆ ಕೊಟ್ಟು ಬರಲು ಕಾರಣ ಅವನ ಮಾತೃಭೂಮಿಯ ಪ್ರೇಮ...
ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||
ಅರ್ಥಾತ್, ಲಕ್ಷ್ಮಣ, ಬಂಗಾರದಿಂದ ನಿರ್ಮಿತವಾಗಿದ್ದರೂ ಲಂಕೆ ನನಗೆ ಇಷ್ಟವಾಗುವುದಿಲ್ಲ, ಯಾಕೆಂದರೆ ಜನನೀ ಮತ್ತು ಜನ್ಮಭೂಮಿಗಳು ಸ್ವರ್ಗಕ್ಕಿಂತಲೂ ಶ್ರೇಷ್ಠವಾದವು.
ತನ್ನ ಮಾತೃಭೂಮಿಯೇ ಶ್ರೇಷ್ಠ ಅಂತ ಹೇಳಿದ ಶ್ರೀರಾಮನಿಗೆ ಅವನ ಊರಿನಲ್ಲೇ ಒಂದು ಮಂದಿರ ಕಟ್ಟಲು ಸಾಧ್ಯವಾಗದಷ್ಟು ಭಾರತೀಯರು ಅಸಮರ್ಥರೇ...? ಯಾವ ಧರ್ಮದವನೇ ಆಗಲಿ ಆತ ಬಯಸೋದು ತನ್ನ ರಾಜ್ಯ ರಾಮರಾಜ್ಯವಾಗಬೇಕು ಅಂತ.... ರಾಮನನ್ನ ಒಬ್ಬ ದೇವಪುರುಷ ಅನ್ನೋದನ್ನ ಬದಿಗಿಟ್ಟು ಯೋಚಿಸಿದರೂ ಶ್ರೀರಾಮನದು ಸರ್ವ ಧರ್ಮೀಯರಿಗೂ ಮಾನ್ಯವಾಗುವಂಥಾ ವ್ಯಕ್ತಿತ್ವ.... ಅಂಥ ಮಹಾಪುರುಷ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಬೇಕಲ್ವಾ...
ನಾವು ನಾವಾಗೇ ನಮ್ಮ ದೇಶದ ಗೌರವವನ್ನ ಇಡಿಯ ಜಗತ್ತಿನ ಎದುರು ಮಣ್ಣು ಪಾಲು ಮಾಡಹೊರಟಿದ್ದೇವಲ್ಲಾ... ಎಂಥಾ ದೌರ್ಭಾಗ್ಯ ಇದು... ಆದರೆ ಮತ್ತೆ ಹೊಸ ಕನಸು ಚಿಗುರಿದೆ.... ಮೋದಿ ತಮ್ಮ ಪ್ರಾಣಾಳಿಕೆಯಲ್ಲಿ ಸಂವಿಧಾನಾತ್ಮಕ ರೀತಿಯಲ್ಲಿ ರಾಮ ಮಂದಿರದ ನಿರ್ಮಾಣದ ಮಾತೆತ್ತಿದ್ದಾರೆ. ಇಲ್ಲಿ ಮಾಧ್ಯಮಗಳು ಮರೆಮಾಚುವ ಇನ್ನೊಂದು ವಿಷಯ ಸಂವಿಧಾನಾತ್ಮಕವಾಗಿ ಅನ್ನೋ ಪದ.. ಅಂದರೆ ಎಲ್ಲರನ್ನೂ ಸೇರಿಸಿಕೊಂಡು ರಾಮಮಂದಿರದ ನಿರ್ಮಾನದ ಕನಸು ಕಾಣುತ್ತಿದ್ದಾರೆ... ಈ ಬಾರಿಯಾದರೂ ಈ ಕನಸು ನನಸಾಗಲಿ... ಧರ್ಮ ಬೇಧ ಮರೆತು ಈ ಪುಣ್ಯ ಕಾರ್ಯದಲ್ಲಿ ಕರಜೋಡಿಸೋಣ. ಶ್ರೀರಾಮ ರಾಷ್ಟ್ರಭಕ್ತಿಯ ಸಂಕೇತ.... ರಾಷ್ಟ್ರಪ್ರೇಮಿಗಳೆಲ್ಲಾ ಒಂದಾಗಬೇಕಿದೆ... ಈ ಜಾತಿ ರಾಜಕೀಯಕ್ಕಾಗಿ ಧರ್ಮಗಳ ನಡುವೆ ಕಿಚ್ಚು ಹಚ್ಚುವವರನ್ನ ಒದ್ದೋಡಿಸಬೇಕಾಗಿದೆ...
ಸಮಸ್ತ ಭಾರತೀಯರೆಲ್ಲರಿಗೂ ರಾಮ ನವಮಿಯ ಹಾರ್ದಿಕ ಶುಭಾಶಯಗಳು

Monday, 2 November 2015

ಯಾನದೊಳಗೆ ನನ್ನ ಯಾನ....ಯಾನ ನನ್ನ ಕೈ ಸೇರಿದಾಗ ನನ್ನ ಹಲವಾರು ಬರಹಗಾರ ಮಿತ್ರರು, ಅದನ್ನೋದಿ... ಅದರ ಕುರಿತಾದ ವಿಮರ್ಶೆಯನ್ನು ಬರೆದಾಗಿತ್ತು. ನಾನು ಅಷ್ಟೊಂದು ಸ್ಲೋ ಓದೋದರಲ್ಲಿ ಅದಿರಲಿ ಬಿಡಿ.... ಆದರೆ ನಾನು ಆ ವಿಮರ್ಶೆಗಳನ್ನು ಓದಿದಾಗ ಹೆಚ್ಚಿನ ಜನ, ಭೈರಪ್ಪನವರ ಉಳಿದ ಕಾದಂಬರಿಗಿಂತ ಇದು ಸ್ವಲ್ಪ ಸಪ್ಪೆ ಅನ್ನುವಂತೆ ಬರೆದಿದ್ದರು. ಕಾರಣ ಅವರು ಭೈರಪ್ಪನವರ ಎಲ್ಲಾ ಕಾದಂಬರಿಯನ್ನು ಓದಿದವರು... ಹಾಗಾಗಿ ಅವರಿಗೆ ಆ ರೀತಿ ಅನಿಸಿತ್ತೋ ಏನೋ.... ವಿಮರ್ಶೆ ಏನಾದರಾಗಿರಲಿ ಭೈರಪ್ಪನವರ ಕಾದಂಬರಿ ಓದದಿರಲು ಸಾಧ್ಯವೇ ಅದೂ ಬೇರೆ ನಾನು ಬರಿಯ ಎರಡು ಮೂರು ಕಾದಂಬರಿಗಳನಷ್ಟೇ ಓದಿದ್ದು ಹಾಗಾಗಿ ಯಾನದ ಯಾನವನ್ನ ಆರಂಭಿಸಿಯೇ ಬಿಟ್ಟೆ...
ಓದಿ ಮುಗಿಸಿದಾಗ ಅದೇನೋ ಸಂಭ್ರಮ.... ಒಂದಷ್ಟು ಬೇಸರ... ಆದರೆ ಒಟ್ಟಾರೆಯಾಗಿ ಯಾನದ ವಿಮರ್ಶೆಗಳೇ ನನ್ನ ಪಾಲಿಗೆ ಸಪ್ಪೆ ಅಂತನಿಸಿತ್ತು.... ಕಾರಣ ಇಲ್ಲಿ ಒಂದಷ್ಟು ವಿಜ್ಞಾನವಿದೆ.... ಒಂದಷ್ಟು ಆಧ್ಯಾತ್ಮವಿದೆ... ಒಂದಷ್ಟು ಕಲ್ಪನೆಗಳಿವೆ... ಅವರ ಕಲ್ಪನೆಗಳೇ ಅದ್ಭುತ.... ಓಹ್ ಈ ದಿಕ್ಕಿನಲ್ಲೂ ಯೋಚಿಸಬಹುದಲ್ವಾ ಅನ್ನಿಸುವಂತೆ ಮಾಡುತ್ತದೆ.... ಉದಾಹರಣೆ ನಾಯಕ ಅಂಟಾರ್ಟಿಕದಲ್ಲಿ ಕಳೆಯೋ ಸಮಯ... ಬರಿಯ ಆರು ತಿಂಗಳು ಕತ್ತಲಿನಲ್ಲೇ ಇರಬೇಕಾದಂತಹ ಪರಿಸ್ಥಿಯ ಜೀವನವನ್ನು ಕಲ್ಪಿಸಿ ಬರೆಯುವುದಿದೆಯಲ್ಲಾ ಅದು ಸಾಮಾನ್ಯರಿಂದ ಸಾಧ್ಯವಿಲ್ಲ... ಅಂತರಿಕ್ಷದ ಬದುಕು ಅದೂ ಆ ರೀತಿಯ ಯಾನವೊಂದು ವೈಜ್ಞಾನಿಕವಾಗಿಯೂ ಸಾಧ್ಯ ಎನ್ನಿಸುವಂತ ಕಲ್ಪನೆಯನ್ನು ಬರಹವಾಗಿಸೋಕೆ ಭೈರಪ್ಪನವರಿಗಷ್ಟೇ ಸಾಧ್ಯ....
ಅದರಲ್ಲೂ ಅಷ್ಟೊಂದು ದೀರ್ಘಕಾಲೀನ ಯಾನದಲ್ಲಿನ ಸಂತತಿಯ ಬೆಳವಣಿಗೆಯ ಕುರಿತಾಗಿ ಅವರು ಕೊಡುವ ವಿವರಣೆ ನಮಗೆ ಮುಜುಗರವೆನಿಸಿದರೂ ವೈಜ್ಞಾನಿಕವಾಗಿ ಅದನ್ನು ನಿರೂಪಿಸುವ ಶೈಲಿ ಅದ್ಭುತ.... ನಾಯಕಿ ಆಧುನಿಕಳಾದರೂ ಅವಳಲ್ಲೊಂದು ಭಾರತೀಯ ನಾರಿಯ ಛಾಪನ್ನು ಮೂಡಿಸಿ ತನ್ನ ಸಂಗಾತಿಯ ಬಗೆಗಿನ ಆಯ್ಕೆಯಲ್ಲಿ ಆ ಪಾತ್ರದೊಳಗಿನ ತೊಳಲಾಟವನ್ನು ಅದ್ಭುತವಾಗಿ ಬರಹವಾಗಿಸಿದ್ದಾರೆ ಅಂತ ನನಗನಿಸಿತು... ಅದರಲ್ಲೂ ನಾಯಕಿ ಹೇಳುವ ಒಂದು ಮಾತು " ಭೂಮಿಯ ಮೇಲೆ ಕೊಟ್ಟ ಮಾತಿಗೆ ಸೂರ್ಯನ ಕಕ್ಷೆಯನ್ನು ದಾಟಿ ಬಂದಾಗ ಅದಕ್ಕೆ ಬೆಲೆ ಕೊಡಬೇಕಾಗಿಲ್ಲ " ಅನ್ನುವ ಮಾತು ಅಬ್ಬಾ ಎಂಥಾ ಯೋಚನೆ ಅಂತನಿಸಿ ನಮ್ಮ ದಂಗಾಗಿಸಿಬಿಡುತ್ತದೆ.
ಭೈರಪ್ಪನವರ ಕಾದಂಬರಿ ಅಂತಂದರೆ ಅಲ್ಲಿ ನಮಗೊಂದಷ್ಟು ಜ್ಞಾನ ಸಿಕ್ಕೇ ಸಿಗುತ್ತದೆ... ತಮ್ಮ ಅಧ್ಯಯನದಿಂದ ಪಡೆದ ಜ್ಞಾನ ಸಂಪತ್ತನ್ನು ಅವರು ತಮ್ಮ ಪಾತ್ರಗಳ ಮೂಲಕ ಹಂಚುತ್ತಾರೆ... ಇದೇ ಅವರನ್ನ ನಾನು ಬಹುವಾಗಿ ಮೆಚ್ಚಲು ಕಾರಣ... ಉದಾಹರಣೆಗಾಗಿ ಈ ಸಾಲುಗಳನ್ನೇ ನೋಡಿ... " ಶಾಸ್ತ್ರದಲ್ಲಿ ಏನಿದೆ ? ಮಕ್ಕಳ ಜವಾಬ್ದಾರಿಯನ್ನು ಮುಗಿಸಿ ಹೆಂಡತಿಯ ಅನುಮತಿ ಪಡೆಯದವನಿಗೆ ಸಂನ್ಯಾಸ ಕೊಡಕೂಡದು ಅಂತ ಇದೆ. ಯಾವ ಹೆಂಡತಿ ತಾನೇ ಅನುಮತಿ ಕೊಡುತ್ತಾಳೆ ? ಕೊಟ್ಟರೂ ಸಂನ್ಯಾಸಿಯಾದ ಮೇಲೂ ಅವನ ಮನಸ್ಸು ಬಿಟ್ಟು ಬಂದ ಹೆಂಡತಿ ಮಕ್ಕಳ ಕಡೆಗೆ ಎಳೆಯುವುದಿಲ್ಲವೇ ? ಅದಕ್ಕೇ ನೇರವಾಗಿ ಬ್ರಹ್ಮಾಚಾರಿಗೆ ಸಂನ್ಯಾಸ ಕೊಡುವ ಪದ್ಧತಿ ಬೆಳೀತು. " ಇಲ್ಲಿ ಸಂನ್ಯಾಸದ ಕುರಿತು ನಮ್ಮಲ್ಲಿನ ಮೂಲ ಸತ್ಯ ಮತ್ತು ಈಗಿನ ಪದ್ಧತಿ ಬೆಳೆದು ಬಂದ ಹಿನ್ನಲೆಯನ್ನ ನಮಗೆ ವಿವರಿಸುತ್ತಾರೆ..
ಹಿಮಾಲಯದ ಉಗಮ ಹೇಗಾಯಿತು... ಅನ್ನುವುದನ್ನು ವಿವರಿಸುತ್ತಾ ಅಲ್ಲಿನ ಈಗಿನ ಪರಿಸ್ಥಿತಿಯನ್ನ ವಿವರಿಸಿ ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ಕಡಿಮೆಮಾಡಬೇಕಾಗಿದೆ.... ನಮ್ಮ ಪುಣ್ಯ ಕ್ಷೇತ್ರಗಳನ್ನ ಉಳಿಸಿಕೊಳ್ಳಬೇಕಾಗಿದೆ ಅನ್ನುವುದನ್ನ ನಮಗೆ ತಿಳಿಹೇಳುತ್ತಾರೆ...ಬರಿಯ ಇದಿಷ್ಟೇ ಅಲ್ಲ ಸೂರ್ಯ ಅಂದರೆ ವೈಜ್ಞಾನಿಕ ವಾಗಿ ಏನು ಅನ್ನುವುದನ್ನ ವಿವರಿಸಿ ಅದಕ್ಕೂ ನಮ್ಮ ಹಿರಿಯರು ಮಾತಿಗೆ ಸೂರ್ಯ ಚಂದ್ರರನ್ನು ಆಧಾರವಾಗಿರಿಸುವುದರ ಕುರಿತು ಅದ್ಭುತ ಮಾಹಿತಿ ಕೊಡುತ್ತಾರೆ... ಅದನ್ನೆಲ್ಲಾ ಓದಿಯೇ ನಾವು ತಿಳಿದುಕೊಳ್ಳಬೇಕು...ಅಧ್ಯಾತ್ಮ ಅಂದರೆ ಏನು ? ಅಹಿಂಸೆ ಎಂದರೆ ಏನು ? ಎಲ್ಲವುದನ್ನೂ ವಿವರಿಸಿ ನಮಗೆ ತಿಳಿಹೇಳುತ್ತಾರೆ... ನಮ್ಮ ವೇದ ಉಪನಿಷತ್ತುಗಳಲ್ಲಿನ ಜ್ಞಾನವನ್ನೂ ನಮಗೆ ಉಣಬಡಿಸುತ್ತಾರೆ.
ಇದರ ಹೊರತಾಗಿಯೂ ಭಾರತದಲ್ಲಿ ವಿಜ್ಞಾನದಲ್ಲೇ ತೊಡಗಿಸಿಕೊಂಡವರ ನಂಬಿಕೆ ಮತ್ತು ನಮ್ಮ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಿಂದಾಗುವ ಪರಿಣಾಮಗಳೆಲ್ಲದರ ಅದ್ಭುತ ಚಿತ್ರಣ ಇಲ್ಲಿ ಸಿಗುತ್ತದೆ. ಕೊನೆಯಲ್ಲಿ ನಾಯಕನ ಮಗನಿಗೆ ತನ್ನ ನಿಜವಾದ ಹೆತ್ತವರ ಕುಳಿತು ತಿಳಿದುಕೊಳ್ಳಬೇಕೆನುವ ಛಲ ಉಂಟಾದಾಗ ಆಗುವ ತಳಮಳ.... ಮತ್ತು ಕೊನೆಯಲ್ಲಿ ವ್ಯಕ್ತಿಯೊಳಗಾಗುವ ಒಂಟಿತನದ ಕುರಿತು ಭೈರಪ್ಪನವರು ನೀಡೋ ವಿವರಣೆ ಬಹಳಾನೇ ಖುಷಿ ಕೊಡುತ್ತದೆ...
ಹಾಗಾಗಿ ಇಲ್ಲಿ ಯಾನ ಅನ್ನುವ ಶೀರ್ಷಿಕೆ ನೋಡಿ ಮುಳಪುಟದ ಚಿತ್ರ ನೋಡಿ ಬರಿಯ ಹಾಲಿವುಡ್ ಸಿನಿಮಾಗಳ ಕಲ್ಪನೆ ಮಾಡಿಕೊಂಡಿದ್ದವರಿಗೆ ಸ್ವಲ್ಪ ಸಪ್ಪೆಯಾಗಿದೆ ಅಂತನಿಸುವುದೋ ಏನೋ ಆದರೆ ವಿಜ್ಞಾನ, ಭಾರತೀಯ ಯೋಚನ ವಿಧಾನ ಜೀವನ ಶೈಲಿ ಮತ್ತು ಭಾರತೀಯ ಜ್ಞಾನ ಮತ್ತು ಆಧ್ಯಾತ್ಮದ ಹಸಿವನ್ನು ಇಟ್ಟುಕೊಂಡಿರುವವರಿಗೆ ಇದೊಂದು ಭೂರೀ ಭೋಜವಾಗುವುದರಲ್ಲಿ ನನಗೇನೂ ಸಂದೇಹವಿಲ್ಲ . ಹಾ.... ಒಂದಂತೂ ಸತ್ಯ ಕೊನೆಯಲ್ಲಿ ಛೇ.... ಮುಗಿದೇ ಹೋಯಿತಾ...!!! ಅನ್ನುವ ಭಾವ ಕಾಡಿಯೇ ಕಾಡುತ್ತದೆ...ಯಾಕೆಂದರೆ ಲಕ್ಷ ಕಿಮೀ ಪ್ರತಿ ಘಂಟೆಯ ವೇಗದಲ್ಲಿ ಹೋಗುತ್ತಿದ್ದ ಯಾನಕ್ಕೆ, ಸಡನ್ ಆಗಿ ಬ್ರೇಕ್ ಹಾಕಿದರೆ ಹೇಗಿರುತ್ತೆ...???? ಆ ಥರ ಎಂಡಿಂಗ್ ಇದೆ.... ಅಯ್ಯೋ ನಿಂತೇ ಬಿಟ್ಟಿತಲ್ಲ... ಅನ್ನುವ ಬೇಸರದಿಂದ ಯಾನದೊಳಗಿನ ನಮ್ಮ ಯಾನವನ್ನೂ ನಾವು ನಿಲ್ಲಿಸಬೇಕಾಗುತ್ತದೆ. ಇನ್ನೂ ಓದದವರು ಖಂಡಿತವಾಗಿಯೂ ಓದಿ ಅನ್ನುವ ಉಚಿತ ಮತ್ತು ಉಪಯುಕ್ತ ಸಲಹೆಯೊಂದಿಗೆ ನಾನು ನನ್ನ ಯಾನವನ್ನು ಮುಗಿಸುತ್ತೇನೆ....

ಮುತ್ತಿನ ಸುತ್ತ ಮುತ್ತ.... ಮತ್ತೆ....?ಈಗ ಪ್ರತಿಯೊಂದು ಚಾನೆಲಿನಲ್ಲೂ, ಸಾಮಾಜಿಕ ಜಾಲತಾಣದಲ್ಲೂ ಬರೀ ಒಂದೇ ಚರ್ಚೆ.... " ಕಿಸ್ ಆಫ್ ಲವ್ " ಬಹುಶಃ ಮೆಕಾಲೆಗೆ ಈಗ ಬಹಳಾನೇ ಖುಷಿ ಆಗುತ್ತಿರಬಹುದು. ಯಾವ ಸಾಂಸ್ಕೃತಿಕ ಭದ್ರ ಬುನಾದಿಯಿಂದಾಗಿ ಭಾರತ ಬ್ರಿಟಿಷರಿಗೆ ಬಿಡಿಸಲಾಗದ ಕಗ್ಗಂಟಾಗಿತ್ತೋ ಆ ಸಾಂಸ್ಕೃತಿಕ ಮೌಲ್ಯಗಳಲ್ಲಿ ಇಂದು ಬಿರುಕು ಮೂಡ ತೊಡಗಿದೆ. ನಿಸ್ಸಂಶಯವಾಗಿ ನಮ್ಮ ಶಿಕ್ಷಣ ಪದ್ಧತಿಯ ಬದಲಾವಣೆಯೇ ಇದಕ್ಕೆ ಮೂಲ ಕಾರಣ ಅಂತ ನನಗನಿಸುತ್ತದೆ. ಯಾಕೆಂದರೆ ಬರಿಯ ಸರ್ಟಿಫಿಕೇಟಿನ ಶಿಕ್ಷಣ ಪದ್ಧತಿಯನ್ನ ನಮ್ಮ ಮೇಲೆ ಹೇರಿ ಸಾಂಸ್ಕೃತಿಕ ಮೌಲ್ಯಗಳೆಲ್ಲಾ ನಮಗೆ ದಕ್ಕದ ಹಾಗೆ ಮಾಡೋಕೆ ನಾಂದಿ ಹಾಡಿದ್ದು ಬ್ರಿಟೀಷರೇ... ಅದು ಒಂದು ಆಯಾಮ ಬಿಡಿ, ಇಂದು ಅದೇನು ಈ ಫ್ರೀ ಥಿಂಕರ್ಸ್ ಅನ್ನೋ ಯುವ ಪಡೆ ಈ " ಕಿಸ್ ಆಫ್ ಲವ್ " ಅನ್ನೋ ಹೆಸರಿನಲ್ಲಿ ವಿಕೃತಿಯ ಪ್ರದರ್ಶನಕ್ಕೆ ತಯಾರು ನಡೆಸುತ್ತಿದ್ದಾರೋ ಅವರದೆಲ್ಲಾ ಬಲು ವಿಚಿತ್ರ ವಾದಗಳು. ತಮ್ಮ ತೆವಲು ತೀರಿಸೋಕೆ ಏನೇನೋ ಸಮಜಾಯಿಷಿಕೆ ಕೊಡುತ್ತಾರೆ.
ಅವುಗಳಲ್ಲಿ ಕೆಲವೆಲ್ಲಾ ನಗು ತರಿಸುವಂಥಾದ್ದು.. " ಭಾರತದಲ್ಲಿ ಸಾರ್ವಜನಿಕವಾಗಿ ಮೂತ್ರ ಮಾಡಬಹುದು ಆದರೆ ಸಾರ್ವಜನಿಕವಾಗಿ ಕಿಸ್ ಮಾಡಬಾರದಾ...? " , ಅಲ್ಲ ಸ್ವಾಮೀ ನನ್ನ ಮಟ್ಟಿಗೆ ಸಾರ್ವಜನಿಕವಾಗಿ ಮೂತ್ರ ಮಾಡುವವರೂ ಕೂಡ ಅದೆಲ್ಲೋ ರೋಡಿನ ಮೂಲೆಗಳಿಗೆ ಹೋಗುತ್ತಾರೆ, ಕಸದ ರಾಶಿಯಿದ್ದಲ್ಲೋ ಹೋಗುತ್ತಾರೆ ಅಥವಾ ಮರದ ಮೂಲೆಗೆ ಹೋಗುತ್ತಾರೆಯೇ ವಿನಹ ರಸ್ತೆಯಲ್ಲೇ ಮೂತ್ರ ಮಾಡುತ್ತಾರ....? ನನಗಂತೂ ಇಂತಹ ಘಟನೆ ನೋಡಿದ ನೆನಪೇ ಇಲ್ಲ. ಸರಿ ಸಾರ್ವಜನಿಕವಾಗಿ ಮೂತ್ರ ಮಾಡೋದು ಯಾರು...? ನೂರಕ್ಕೆ ನೂರು ಪ್ರತಿಶತ ಗಂಡಸರೇ, ಹಾಗಾದರೆ ಆ ವಾದವನ್ನಿಟ್ಟುಕೊಂಡು ಈ ಚಳುವಳಿ... ಛೇ ಚಳುವಳಿ ಅನ್ನೋ ಪದ ಪ್ರಯೋಗ ಮಾಡಿ ಅದರ ಗೌರವವನ್ನ ನಾನ್ಯಾಕೆ ಕಳೆಯಲಿ.... ಈ ವಿಕೃತಿಯನ್ನ ಆಚರಿಸೋರು ಬರೀ ಗಂಡಸರು ಮಾತ್ರಾನಾ...? ಹೆಂಗಸರು, ಹುಡುಗಿಯರು ಯಾಕೆ ಈ ವಿಕೃತಿಯಲ್ಲಿ ಪಾಲ್ಗೊಳ್ಳಬೇಕು...? ಯಾಕೆ ಇವರೆಲ್ಲಾ ಸಾರ್ವಜನಿಕಾವಾಗೇ ಮೂತ್ರ ಮಾಡುವವರಾ...? ಸರಿ ಸಾರ್ವಜನಿಕವಾಗಿ ಮೂತ್ರ ಮಾಡುವವರಿಗೆ ಸರ್ಕಾರಗಳೆಲ್ಲಾ ಬೆಂಬಲ ಅಥವಾ ರಕ್ಷಣೆ ಕೊಡುವ ಕ್ರಮವೇ ಇಲ್ಲ ನೀವ್ಯಾಕೆ ಹಾಗಿದ್ದರೆ ಸರ್ಕಾರದ ರಕ್ಷಣೆ ಬಯಸುತ್ತೀರಿ....? ಸಾರ್ವಜನಿಕವಾಗಿ ಮೂತ್ರ ಮಾಡುವವರನ್ನ ಒಂದಷ್ಟು ಜನ ತರಾಟೆ ತೆಗೆದುಕೊಂಡರೆ ಎಲ್ಲರೂ ತರಾಟೆ ತೆಗೆದುಕೊಂಡವರ ಪರವೇ ನಿಲ್ಲುತ್ತಾರೆ... ನೀವ್ಯಾಕೆ ಹಾಗಿದ್ದರೆ ಈಗ ನಿಮ್ಮನ್ನು ತರಾಟೆಗೆ ತೆಗೆದುಕೊಂಡವರ ವಿರುದ್ಧ ಉರಿದು ಬೀಳುತ್ತೀರಿ...? ಸಾರ್ವಜನಿಕವಾಗಿ ಮೂತ್ರ ಮಾಡೋದನ್ನ ನೆಪವಾಗಿಟ್ಟು ಕೊಂಡು ನೀವು ಇದನ್ನು ಮಾಡುತ್ತಿದ್ದೀರೆಂದರೆ ನಿಮಗೂ ಅವರಿಗೂ ಏನು ವ್ಯತ್ಯಾಸ....? ನೀವು ಅವರನ್ನು ಪ್ರೋತ್ಸಾಹಿಸಿದಂತೆಯೇ ಅಲ್ವಾ...?
ಎರಡನೆಯದಾಗಿ ಅವರ ವಾದ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಗಳಿರುತ್ತದೆ ಅದನ್ನೆಲ್ಲಾ ಒಪ್ಪಿಕೊಳ್ಳುತ್ತೀರಿ ಇದನ್ನ್ಯಾಕೆ ವಿರೋಧಿಸುತ್ತೀರಿ ಅಂತ. ಅಲ್ಲೂ ನೋಡೋಕೆ ಹೋದರೆ ಹಲವಾರು ಬಾರಿ ವಿರೋಧಗಳು ಪ್ರತಿಭಟನೆಗಳು ನಡೆದಿವೆ. ಇರಲಿ ಅದಾಗಿಯೂ ಬರುವ ಸಿನಿಮಾಗಳಿಗೆ ಮೊದಲೇ ನಮ್ಮಲ್ಲಿ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ಕೊಡುತ್ತದೆ. " ಯು " ಬಂದಾಗ ಕುಟುಂಬ ಸಹಿತರಾಗಿ ಹೋಗಬಹುದು ಅನ್ನೋ ಧೈರ್ಯ ನಮ್ಮಲ್ಲಿರುತ್ತದೆ. ಅದಾಗಿಯೂ ಈ ಸಿನಿಮಾಗಳು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಪ್ರಸಾರವಾಗೋದು. ಅದನ್ನು ಬೀದಿ ಬದಿಯಲ್ಲಿ ಪ್ರದರ್ಶಿಸಿದರೆ ಜನ ಛೀ... ಥೂ..... ಅಂತಾನೇ ಹೇಳುತ್ತಾರೆಯೇ ವಿನಹ ಸುಮ್ಮನಿರಲ್ಲ ಅಲ್ವಾ.... ಅಷ್ಟಾಗಿಯೂ ಮನೆಯಲ್ಲೇನಾದರೂ ಚಿತ್ರ ನೋಡೋವಾಗ ಮುತ್ತಿನ ದೃಶ್ಯ ಬಂದಾಗಲೆಲ್ಲಾ ಸಂಸ್ಕಾರಸ್ಥರ ಮನೆಯಲ್ಲಿ ಚಾನೆಲ್ ಚೇಂಜ್ ಆಗುತ್ತೆ . ಯಾಕೆ ಸಾರ್ವಜನಿಕವಾಗಿ ಇದು ಸಲ್ಲ ಅಂತಾನೇ ತಾನೇ...... ಹಾಗಿದ್ದರೆ ಇಂತಹಾ ವಿಕೃತಿ ಆಚರಿಸೋ ಚಪಲವ್ಯಾಕೆ...?
ಅಷ್ಟಕ್ಕೂ ಇದರ ಆಯೋಜನೆಯಾದರೂ ಯಾಕಾಗಿ....? ನೈತಿಕ ಪೋಲೀಸ್ ಗಿರಿ ನಿಲ್ಲಿಸೋಕೆ... ತಾನೇ... ವಿಕೃತಿ ಮಾಡಬೇಡಿ ಅಂದಿದ್ದನ್ನ , ಅಂದರವರ ಕ್ರಿಯೆಯನ್ನ ಜನರೇ ನೈತಿಕ ವಾದದ್ದು ಅಂದಿದ್ದಾರೆ.... ಅದರ ಅರ್ಥ ಈ ವಿಕೃತಿಯ ಆಚರಣೆ ಮಾಡುತ್ತಿರೋರ ಕೆಲಸವೇ ಅನೈತಿಕವಾದದ್ದು ತಾನೇ. ಒಂದು ಸಮಾಜದ ಸ್ವಾಸ್ಥ್ಯಕ್ಕೆ ಅನೈತಿಕವಾದದ್ದು ಇರಬೇಕಾ...? ಅನೈತಿಕವಾದದ್ದು ಇರಬೇಕಾ...? ಇರಲಿ ಅದನ್ನು ಬಿಟ್ಟು ಬಿಡೋಣ. ಯಾವುದೇ ಹೋರಾಟ ನಡೆಯಬೇಕಾದರೂ ಅದಕ್ಕೊಂದು ಉದ್ದೇಶ ಇದ್ದೇ ಇರುತ್ತದೆ. ಈ ವಿಕೃತಿಯ ಬೆಂಬಲಿಗರನ್ನ ನಾನು ಕೇಳೋದು.... ಈ ನಿಮ್ಮ ಹೋರಾಟದ ಉದ್ದೇಶ ಏನು...? ನೈತಿಕ ಪೋಲೀಸ್ ಗಿರಿ ನಿಲ್ಲಬೇಕು ಅಂತ ಅಲ್ವೇ.... ಹಾಗಿದ್ದರೆ ಇದಕ್ಕೆ ಸರಳ ಉಪಾಯ ನೈತಿಕವಾಗಿ ನಡೆದುಕೊಳ್ಳುವುದು.... ಅನೈತಿಕವಾದದ್ದು ನಡೆದರೆ ತಾನೇ ಅವರು ಪೋಲೀಸ್ ಗಿರಿ ತೋರಿಸೋದು. ಎಲ್ಲರೂ ನೈತಿಕವಾಗೇ ನಡೆದುಕೊಂಡರೆ ಯಾರಿಗೆ ತಾನೇ ನೈತಿಕ ಪೋಲೀಸ್ ಗಿರಿ ಮಾಡೋಕೆ ಅವಕಾಶ ಇರುತ್ತೆ...? ಆದರೆ ಅದನ್ನ ಬಿಟ್ಟು ನೀವು ಮಾಡುತ್ತಿರುವ ಕೆಲಸವಾದರೂ ಏನು...? ಮತ್ತೆ ಅನೈತಿಕವಾದದ್ದನ್ನ ಮಾಡೋದು. ಇಂಥಾದ್ದು ಆದಾಗಲೇ ನೈತಿಕ ಪೋಲೀಸ್ ಗಿರಿ ಕಾಣಿಸಿಕೊಳ್ಳುವುದು. ಅಂದರೆ ನೀವು ಬೆಂಕಿಯನ್ನ ಆರಿಸುವ ಬದಲಾಗಿ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದ್ದೀರಿ ಅಲ್ವಾ...
ಸರಿ ಅದೇನೋ ಮಾಡುತ್ತೀರಿ ಅಂತಾನೇ ಇಟ್ಟುಕೊಳ್ಳೋಣ ಅದರ ಫಲಿತಾಂಶ ಏನು...? ಬಹುಶ ಈಗ ನಡೆಯುತ್ತಿರುವ ಚರ್ಚೆಗಳಲ್ಲಿ ಇದರ ಅಡ್ಡ ಪರಿಣಾಮದ ಕುರಿತು ಜಾಸ್ತಿ ಮಾತುಕತೆ ಕೇಳಿದ ಹಾಗಿಲ್ಲ. ನಾನೂ ಇಲ್ಲಿ ಸ್ವಲ್ಪ ನಾಚಿಕೆ ಬಿಟ್ಟೇ ಬರೆಯುತ್ತಿದ್ದೇನೆ. ಕಾರಣ.... ಅಂತಹ ನಾಚಿಕೆಗೇಡಿನ ಕೆಲಸ ತಡಿಯಬೇಕಾದರೆ ಇದು ಅವಶ್ಯಕವೇನೋ ಅಂತನಿಸಿತು. ಸರಿ ನೀವೆಲ್ಲರೂ ಮುತ್ತಿಡೋಕೆ ಒಂದಾದಿರಿ... ಅಲ್ಲಿ ಹಲವಾರು ಜನ ಯುವತಿಯರು ಬರಬಹುದು ಯುವಕರು ಬರಬಹುದು. ಆದರೆ ಇಂತವರೇ ಬರಬೇಕು, ಅಂತವರು ಬರಬಾರದು ಅನ್ನುವ ನಿಯಮಗಳೇನೂ ಇಲ್ಲ. ಹಾಗಾಗಿ ಯಾರು ಬೇಕಿದ್ದರೂ ಬರಬಹುದು , ಬರುವವರೆಲ್ಲರೂ ನಾವೂ ನೈತಿಕ ಪೋಲೀಸ್ ಗಿರಿಯ ವಿರೋದ ಮಾಡುವವರು ಅಂದರಾಯಿತು ಅಷ್ಟೇ. ಸರಿ ನಾವು ನೈತಿಕ ಪೋಲೀಸ್ ಗಿರಿಯ ವಿರೋಧಿಗಳು ಅನ್ನೋ ಜನಾನೇ ಸೇರಿದರು... ಮುಂದೇನು...? ಮುತ್ತಿಡಲು ಶುರು ಮಾಡಿದಿರಿ. ನನಗನಿಸಿದಂತೆ ಅಲ್ಲಿ ಇಂತವರು ಇಂತವರಿಗಷ್ಟೇ ಮುತ್ತಿಡಬೇಕು ಅನ್ನುವ ನಿಯಮಗಳೇನೂ ಇಲ್ಲ, ಯಾರು ಯಾರಿಗೂ ಮುತ್ತಿಡಬಹುದು. ಅಲ್ವೇ ಹಾಗಿದ್ದರೆ ಅಲ್ಲಿಗೆ ಬರೋ ಹುಡುಗಿಯರಲ್ಲಿ ನನ್ನದೊಂದಿಷ್ಟು ಮಾತು. ಯಾಕೆ ಬರೀ ಹುಡುಗಿಯರಿಗೆ...? ಅನ್ನೋದಕ್ಕೆ ಬೇಕಿದ್ದರೆ ನನ್ನನ್ನು ಬೈಯ್ದುಕೊಳ್ಳಿ ಪರವಾಗಿಲ್ಲ. ಇದು ಸ್ತ್ರೀ ಶೋಷಣೆ ಅಂತನೂ ಡಂಗುರ ಸಾರಿ ನನಗೇನೂ ಬೇಜಾರಿಲ್ಲ ಆದರೂ ಇದು ಅವಶ್ಯಕ ಯಾಕಂದ್ರೆ ಸಮಾಜದಲ್ಲಿ ಹೆಣ್ಣು ಕೂಡ ಪ್ರಶ್ನಿಸೋದು ಹೆಣ್ನನ್ನೇ...
ಅಲ್ಲಿಗೆ ಬರೋ ಹುಡುಗಿಯರಿಗಾಗಿ ಈ ಮಾತುಗಳು : ಕಿಸ್ ಆಫ್ ಲವ್.... ನಮ್ಮಲ್ಲಿ ಬೇಕಾದಷ್ಟು ಜನರಿಗೆ ಈ ವಿಷಯ ಕೇಳಿ ವಿಪರೀತ ಆಸೆ ಹುಟ್ಟಿರಬಹುದು. ಹೇಳೋರಿಲ್ಲ ಕೇಳೋರಿಲ್ಲ ಹುಡುಗಿಯರೇ ಬಂದು ನಮಗೆ ಮುತ್ತು ಕೊಡುತ್ತಾರೆ ಅಂತಾದರೆ ನಮಗೇನು...???? ಅನ್ನೋ ಅಭಿಪ್ರಾಯ ಹೊಂದಿರೋ ಹುಡುಗರು ಬಂದರು ಅಂತಿಟ್ಟುಕೊಳ್ಳಿ, ಬೇಕಾಬಿಟ್ಟಿ ಮುತ್ತು ಕೊಟ್ಟರು ಅನ್ನಿ... ಅದೇನೋ ಹೊಸ ಅನುಭವ... ನಿಮ್ಮನ್ನ ಬಿಡಲೇ ಇಲ್ಲ ಮತ್ತೆ ಮತ್ತೆ ಬಂದು ನಿಮ್ಮ ಬಳಿ ಮುತ್ತಿಡೋಣ ಅಂದರೆ...?
ಸಾಮಾನ್ಯವಾಗಿ ಮುತ್ತು ಕೊಡೋದು ಕೂಡ ಗಂಡು ಹೆಣ್ಣಿನಲ್ಲಿ ಕಾಮವನ್ನ ಉತ್ತೇಜಿಸುತ್ತದೆ. ಕಾಮೋತ್ತೇಜಿತನಾದ ಹುಡುಗ ಮುಂದೇನು ಮಾಡಬಲ್ಲ...? ಅನ್ನೋದು ಸರ್ವೇ ಸಾಧಾರಣ ನಮಗೆ ಗೊತ್ತಿರುವಂಥಾದ್ದೇ... ಸರಿ ಅಲ್ಲೇನೂ ಮಾಡೋಲ್ಲ ಸುಮ್ಮನಿದ್ದ ಆದರೆ ಈ ರೀತಿಯ ವಿಕೃತಿಗಳಿಲ್ಲದೆಯೇ ಹಲವಾರು ಬಲಾತ್ಕಾರದ ಘಟನೆ ನಡೆಯುತ್ತದೆ ಅನ್ನುವಾಗ ಇದೂ ಆದ್ರೆ...? ಕಾಡಿಗೆ ಕಿಡಿ ಹಚ್ಚಿ ಮತ್ತೆ ಕಾಳ್ಗಿಚ್ಚು ಕಾಳ್ಗಿಚ್ಚು ಅನ್ನೋದು ಮೂರ್ಖತನ ಅಲ್ವಾ...
ಸರಿ ಇನ್ನೂ ಸ್ವಲ್ಪ ಇದರ ಕುರಿತೇ ಯೋಚಿಸಿ. ಒಬ್ಬಾತ ನಿಮ್ಮನ್ನ ಮುತ್ತಿಟ್ಟ ಆತನಿಗೋ ಬಹಳ ಖುಷಿಯಾಯಿತು. ನಿಮ್ಮನ್ನ ಮನಸ್ಸಿನಲ್ಲಿ ನೆನಪಿಟ್ಟುಕೊಂಡ. ಇದಾಗಿ ಹಲವು ದಿನಗಳ ಬಳಿಕ ಅದ್ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಾಗ, ನೀವೂ ನಿಮ್ಮ ಗೆಳತಿಯರ ಜೊತೆ, ಹೆತ್ತವರ ಜೊತೆ, ಅಥವಾ ಗಂಡನ ಅಥವಾ ಪ್ರಿಯಕರನ ಜೊತೆ ಇರುವಾಗ ನಿಮ್ಮ ಬಳಿ ಬಂದು... " ಹೇ ನನ್ನ ಪರಿಚಯ ಆಯ್ತಾ ನಾನು ಆವತ್ತು ನಿಮಗೆ ರೋಡ್ ನಲ್ಲೇ ಮುತ್ತು ಕೊಟ್ಟಿದ್ದೆ... ನೆನಪಾಯ್ತಾ...? ಅಂತಂದರೆ ನಿಮಗೆ ಹೇಗಾಗಬೇಡ...? ಇನ್ನೂ ಮುಂದುವರಿದು ರೀ ನನ್ನ ಫ್ರೆಂಡ್ಸ್ ಗಳೂ ಇದ್ದಾರೆ ಆವತ್ತು ಬರ್ಲಿಕ್ಕಾಗಲಿಲ್ಲ ಈವಾಗ ಅವರಿಗೆಲ್ಲಾ ಒಂದು ಮುತ್ತು ಕೊಡ್ರೀ ಅಂದ್ರೆ...??? ಅಯ್ಯೋ ನೀವು ಮಾತಾಡುವ ಹಾಗಿಲ್ಲ ಅವರು ಈಗಲೂ ನೀವು ಹೇಳೋ ಪ್ರೀತಿಯ ಅಭಿವ್ಯಕ್ತಿಯನ್ನೇ ಬಯಸುತ್ತಿರೋದು.... ಪ್ರೀತಿಯ ಅಭಿವ್ಯಕ್ತಿಗೆ ದಿನಗಳು ಮಹತ್ವ ಅಲ್ಲ ಅಲ್ವಾ.... ಸರಿ ಇನ್ನೂ ಮುಂದುವರಿದು ಯೋಚಿಸೋಣ... ನೀವು ಒಂಟಿಯಾಗಿ ಸಿಕ್ಕಾಗ ಇವರೆಲ್ಲಾ ಕುಡಿದು ಬಂದು ನಿಮಗೆ ಸಿಕ್ಕರು ಅನ್ನಿ... ನಿಮ್ಮನ್ನ ಬಲವಂತ ಪಡಿಸೋಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ.... ಆ ಕ್ಷಣಕ್ಕೆ ಅವರೆಲ್ಲರ ಪಾಲಿಗೆ ನೀವೊಬ್ಬ ವ್ಯಭಿಚಾರಿಣಿ ಆಗಿ ಬಿಡ್ತೀರಾ... ಇದರ ಸಂಭವನೀಯತೆಯನ್ನ ನೀವು ತಳ್ಳಿ ಹಾಕೋಗಾಗುತ್ತಾ...??? ಮುತ್ತು... ಮುತ್ತಿನ ಮತ್ತೇನು...???
ಈಗ ಇಡಿಯ ಮುತ್ತಿನ ಬೆಂಬಲಿಗರ ಕುರಿತು ಹೇಳೋದಾದರೆ... ನಿಮ್ಮ ಈ ವಿಕೃತಿಯಿಂದ ಸಮಾಜಕ್ಕೇನು ಲಾಭ....? ಯಾವುದನ್ನು ವಿರೋಧಿಸುತ್ತೀರೋ ಅದಂತೂ ನಿಲ್ಲೋದಿಲ್ಲ. ಬದಲಿಗೆ ನೀವು ಪಡೆಯುವಂಥಾದ್ದು ಏನು...? ನೈತಿಕ ಪೋಲೀಸ್ ಗಿರಿಗೆ ವಿರಾಮ ಹಾಕಿದ್ದೇವೆ ಅನ್ನೋ ಆತ್ಮ ಸಂತೃಪ್ತಿಯೂ ಇಲ್ಲ... ನಿಮಗೆ ಬೇರೆನು ಸಿಗುತ್ತದೆ.. ಅದರ ಬಗ್ಗೆಯೂ ಯೋಚಿಸೋಣ... ನಾನು ನಿಜಕ್ಕೂ ನಿಮ್ಮಷ್ಟು ವಿದ್ಯಾವಂತನಲ್ಲ, ಹಳ್ಳಿಯಲ್ಲಿ ಬೆಳೆದವನು. ಹಾಗಾಗಿ ಅಲ್ಪಜ್ನಾನಿಯೇ ಅಂತಿಟ್ಟುಕೊಳ್ಳಿ, ಆದರೆ ಹಿಂದೆ ನಾನೊಮ್ಮೆ ಏಡ್ಸ್ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ನಡೆದ ಘಟನೆ, ಸಭೆಯಲ್ಲಿ ಒಬ್ಬಾತ ಕೇಳಿದ " ಸರ್ ಮುತ್ತು ಕೊಡೋದರಿಂದ ಏಡ್ಸ್ ಬರುವ ಸಂಭವ ಇದೆಯಾ...? " ಅದಕ್ಕೆ ಅಲ್ಲಿದ್ದ ಡಾಕ್ಟರ್ ಅಂದರು " ಖಂಡಿತಾ ಇದೆ, ಒಂದು ವೇಳೆ HIV ಪೀಡಿತ ವ್ಯಕ್ತಿ ಮುತ್ತಿಡುವಾಗ ಇನ್ನೊಬ್ಬನ ಬಾಯಿಯಲ್ಲಿ ಗಾಯಗಳೇನಾದರೂ ಇದ್ದಲ್ಲಿ ಏಡ್ಸ್ ಸೋಂಕು ತಗಲೋ ಸಂಭವ ಇದೆ." ಈಗ ಹೇಳಿ ಇಲ್ಲಿ ಸಂಘಟಕರು ಏಡ್ಸ್ ಪೀಡಿತರು ಬರಕೂಡದು ಅಂತ ಎಲ್ಲಿ ಹೇಳಿದ್ದಾರೆ...? ಅಥವಾ ಅಲ್ಲಿಗೆ ಬರೋ ಜನರ ಆರೋಗ್ಯದ ಬಗ್ಗೆ ಯಾವ ಕಾಳಜಿಯನ್ನು ವಹಿಸುತ್ತಾರೆ. ಬರಿಯ ನಾನು ಬೆಂಬಲಿಸುತ್ತೇನೆ ಅಂತ ಹೇಳಿದ ಮಾತ್ರಕ್ಕೆ, ಭಾಗವಹಿಸಿದ ಮಾತ್ರಕ್ಕೆ ನೈತಿಕ ಪೋಲೀಸ್ ಗಿರಿ ನಿಲ್ಲೋದಿಲ್ಲ ಆದ್ರೆ ನಷ್ಟ ಅನುಭವಿಸುವವರು ಯಾರು...? ಎಜುಕೇಟೆಡ್ ಗಳು ಸ್ವಾಮೀ ನೀವುಗಳು ಇದನ್ನೆಲ್ಲಾ ಯೋಚಿಸಬೇಕಲ್ವಾ...
ವಾಸ್ತವದಲ್ಲಿ ಈ ಸಂಘಟಕರಿಗೆ ಆಗಲಿ ಅಥವಾ ಇದನ್ನ ಬೆಂಬಲಿಸುವವರಿಗಾಗಲೀ ಪ್ರೀತಿಯ ನಿಜವಾದ ಅರ್ಥವೇ ಗೊತ್ತಿಲ್ಲ. ಅದರಲ್ಲೂ ಇದಕ್ಕೆ ಬೆಂಬಲವಾಗಿ ನಿಲ್ಲೋ ಹೆಚ್ಚಿನವರಿಗೂ ಪ್ರೇಮ ಅನ್ನೋದು ಬರೀ ಆಕರ್ಷಣೆ... ಲಿವ್ ಇನ್ ರಿಲೇಶನ್ ಶಿಪ್ ಅನ್ನು ತಮ್ಮ ಸಿದ್ದಾಂತವನ್ನಗಿಸಿಕೊಂಡವರಿಂದ ಇನ್ನು ಹೆಚ್ಚೇನನ್ನು ಬಯಸೋಕೆ ಸಾಧ್ಯ...,? ಭಾರತ ಜಗತ್ತಿಗೆ ಪ್ರೇಮವನ್ನ ಧಾರೆಯೆರೆದ ನಾಡು. ಶ್ರೀಕೃಷ್ಣ ರಾಧೆಯರದ್ದು ಅಪೂರ್ವ ಪ್ರೇಮ ಶ್ರೀರಾಮಕೃಷ್ಣ ಪರಮಹಂಸರೂ ಶಾರಾದಾದೇವಿ ಪತಿ ಪತ್ನಿಯರಾಗಿದ್ದು ಜಗತ್ತಿಗೆ ಪ್ರೇಮ ಸಾರಿದರಲ್ವಾ ಅವರು ಯಾವತ್ತೂ ಒಬ್ಬರಿಗೊಬ್ಬರು ಮುತ್ತಿಟ್ಟಿರಲಿಲ್ಲ ಆದರೆ ಇಡಿಯ ಜಗತ್ತಿಗೆ ಪ್ರೇಮದ ಮಹತ್ವ ಹೇಳಿಕೊಟ್ಟಿಲ್ವಾ.... ಪ್ರೀತಿಯ ಅಭಿವ್ಯಕ್ತಿಗೆ ಮುತ್ತೇ ಬೇಕು ಅಂತಿಲ್ಲ ಅದೂ ರಸ್ತೆಯ ಮಧ್ಯದಲ್ಲೇ ಕೊಟ್ಟು ಯಾರಿಗಾಗಿ ಪ್ರೀತಿಯ ಭಾವವನ್ನು ತೋರಿಸೋದು... ವಾಸ್ತವದಲ್ಲಿ ಇಂಥವರೇ ಹೆಚ್ಚಾಗಿ ತಮ್ಮ ತಂದೆ ತಾಯಿಯರನ್ನ ಬಿಟ್ಟು ಬಂದು ಪ್ರತ್ಯೇಕ ಜೀವನ ನಡೆಸೋರು ಅಥವಾ ಅವರ ಮುದಿಪ್ರಾಯದಲ್ಲಿ ಆಶ್ರಮಗಳಿಗೆ ಕಳುಹಿಸುವವರು.... ನಿಮ್ಮ ರಕ್ತ ಸಂಬಂಧಿಗಳಿಗೇ ಪ್ರೀತಿ ಹಂಚಲಾರದ ಮೇಲೆ ಜಗತ್ತಿಗೇನು ಪ್ರೀತಿ ಹಂಚುತ್ತೀರಾ. ಇಷ್ಟಾಗಿಯೂ ನಮ್ಮ ಹಕ್ಕು ವೈಯಕ್ತಿಕ ಸ್ವಾತಂತ್ರ್ಯ ಅಂತೆಲ್ಲಾ ಬೊಬ್ಬಿಡುವವರಲ್ಲೆಲ್ಲಾ ಒಂದು ಕಳಕಳಿಯ ವಿನಂತಿ ನೀವು ಅದೇನು ಬೇಕಿದ್ದರೂ ಮಾಡಿ ನಿಮ್ಮನ್ನ ಯಾರೂ ಕೇಳೋದಿಲ್ಲ ಅದಕ್ಕೆ ಅಂತಹದ್ದೇ ಸಂಸ್ಕೃತಿಯ ದೇಶಗಳಿವೆ... ಆ ದೇಶಕ್ಕೆ ಹೋಗಿ ಏನು ಬೇಕಿದ್ದರೂ ಮಾಡಿ ಯಾರೂ ನಿಮ್ಮನ್ನ ತಡೆಯೋದಿಲ್ಲ. ನಾವುಗಳು ಕೂಡ ಭಾರತ ಇಂತಹ ವಿಕೃತಿಯಿಂದಲೂ ಸ್ವಚ್ಛವಾಗುತ್ತಿದೆ ಅನ್ನುತ್ತಾ ಖುಷಿ ಪಡುತ್ತೇವೆ.

ಮದನ ಲಾಲ್ ಧಿಂಗ್ರ"ನಾನು ಬ್ರಿಟಿಷರ ರಕ್ತ ಹರಿಸಲು ಯತ್ನಿಸಿದ್ದು ನಿಜ. ದೇಶಭಕ್ತ ಭಾರತೀಯ ಯುವಕರನ್ನು ಬ್ರಿಟಿಷರು ಹಿಂಸಿಸುತ್ತಿರುವುದರ ವಿರುದ್ಧ ಸಣ್ಣ ಸೇಡು. ಇದಕ್ಕೆ ನಾನೇ ಹೊಣೆ.
ನಮ್ಮ ದೇಶ ಪರಕೀಯರ ಕೈಯಲ್ಲಿದೆ. ಎಡೆಬಿಡದೆ ಹೋರಾಡುತ್ತಿದೆ, ನಮ್ಮ ಬಳಿ ಶಸ್ತ್ರಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ, ಬಂದೂಕು ಇಟ್ಟುಕೊಳ್ಳಲು ಬಿಟ್ಟಿಲ್ಲ. ಆದುದರಿಂದ ನಾನು ಪಿಸ್ತೂಲಿನಿಂದ ಹಲ್ಲೆ ನಡೆಸಬೇಕಾಯಿತು.
ನಾನು ಹಿಂದು. ನನ್ನ ದೇಶಕ್ಕೆ ಅಪಮಾನವಾದರೆ ಅದು ನಮ್ಮ ದೇವರಿಗೆ ಅಪಮಾನವಾದಂತೆ ಎಂದು ನನ್ನ ಭಾವನೆ. ನಾನು ಬುದ್ಧಿವಂತನಲ್ಲ, ನಾನು ಬಲಶಾಲಿಯಲ್ಲ. ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಇನ್ನೇನು ತಾನೆ ಕೊಡಬಲ್ಲೆ? ಆದುದರಿಂದ ನನ್ನ ರಕ್ತವನ್ನೇ ನನ್ನ ಮಾತೃಭೂಮಿಗೆ ಅರ್ಪಿಸಿದ್ದೇನೆ. ಭಾರತಮಾತೆಯ ಕೆಲಸವೆಂದರೆ ಶ್ರೀರಾಮನ ಕೆಲಸ; ಆಕೆಯ ಸೇವೆ ಶ್ರೀ ಕೃಷ್ಣನ ಸೇವೆ. ಆದ್ದರಿಂದ ನಾನು ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು, ಇದೇ ಧ್ಯೇಯಕ್ಕಾಗಿ ಬಲಿದಾನ ನೀಡುವಂತೆ ಆಗಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ. ವಂದೇ ಮಾತರಂ"
ಸಿನಿಮಾದ ಡೈಲಾಗುಗಳು ನೆನಪಿರಬಹುದೇ ವಿನಹಾ ಈ ಮಾತುಗಳು ಯಾರದ್ದು ಅನ್ನುವುದು ಬಹುಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.. ಕುತ್ತಿಗೆಯ ಬಳಿ ನೇಣು ಹಗ್ಗ ಸುಳಿದಾಡತೊಡಗಿದಾಗ ನಗು ನಗುತಾ ಹೇಳಿದ ಮಾತಿದು. ಹೇಳಿದಾತ ಭಾರತ ಮಾತೆಯ ವೀರ ಪುತ್ರ " ಮದನ್ ಲಾಲ್ ಧಿಂಗ್ರಾ"
ಯಾರಿಗೂ ಕಲ್ಪಿಸಿಕೊಳ್ಲಲಿಕ್ಕೂ ಸಾಧ್ಯವಿಲ್ಲ ಒಳ್ಳೆಯು ಉಡುಪು ಹಾಕಿಕೊಂಡು ಸ್ನೋ, ಪೌಡರು ಹಾಕಿಕೊಂಡು ಖಡಕ್ ಇಸ್ತ್ರಿ ಮಾಡಿರೋ ಬಟ್ಟೆ ಹಾಕಿಕೊಂಡು ಸಂತೋಷ ಕೂಟಗಳಿಗೆ ಹೋಗುವುದನ್ನೇ... ಜೀವನ, ಅಂದು ಕೊಂಡ ಆಗರ್ಭ ಶ್ರೀಮಂತನ ಮಗನೋರ್ವನ ಬಾಯಲ್ಲಿ ಇಂತಹಾ ಮಾತುಗಳು ಬಂದಿತ್ತೇ...
ಧಿಂಗ್ರಾ ಹುಟ್ಟಿದ್ದು ಪಂಜಾಬಿನ ಅಮೃತಸರದಲ್ಲಿ ಅವನ ತಂದೆ ದೊಡ್ದ ಡಾಕ್ಟರ್...ಹಣದಿಂದ ತಮ್ಮ ಖಜಾನೆಯನ್ನು ತುಂಬಿಸಿಬಿಟ್ಟಿದ್ದರು.. ಆದರೂ ಧಿಂಗ್ರಾ ಸ್ವಾಭಿಮಾನಿ.. ತಾನೆ ದುಡಿದು ತನ್ನ ಹಣದಿಂದಲೇ ಇಂಗ್ಲೆಂಡಿಗೆ ಹೋಗಿ ಇಂಜಿನಿಯರ್ ಆಗೋ ಕನಸು ಕಂಡು ಅದರಂತೆ ಇಂಗ್ಲೆಂಡಿಗೆ ತೆರಳಿದ್ದ...ಅದುವರೆಗೂ ದೇಶಪ್ರೇಮದ ಗಂಧಗಾಳಿ ಇಲ್ಲದ ಶೋಕಿ ವ್ಯಕ್ತಿಯಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದವರು " ವಿನಾಯಕ ದಾಮೋದರ ಸಾವರ್ಕರ್".
ಸಾವರ್ಕರರ ಮಾತುಗಳಿಂದ ಪ್ರಭಾವಿತನಾದ ಧಿಂಗ್ರ ಒಬ್ಬ ಅಪ್ಪಟ ದೇಶಭಕ್ತ ಕ್ರಾಂತಿಕಾರಿಯಾಗಿ ಬದಲಾಗಿ ಬಿಟ್ಟ. ಆದರೂ ಕೆಲವು ಗೆಳೆಯರು ನಿನ್ನಿಂದ ಏನೂ ಮಾಡುವುದಕ್ಕಾಗೋದಿಲ್ಲ ನೀನು ಶೋಕಿ ಮಾಡುವುದಕ್ಕಷ್ಟೇ ಸರಿ ಎಂದು ಇವನ ರೋಷವನ್ನ ಕೆಣಕುತ್ತಿದ್ದರಂತೆ ಅಂತಹಾ ಸಂಧರ್ಭದಲ್ಲಿ ಒಮ್ಮೆ ಇಡಿಯ ದೊಡ್ದ ಸೂಜಿಯನ್ನ ತನ್ನ ಕೈಯೊಳಗೆ ಇನ್ನೊಬ್ಬನಿಂದ ಚುಚ್ಚಿಸಿಕೊಂಡು ಬಿಟ್ಟಿದ್ದನಂತೆ ಈ ರೀತಿ ಚುಚ್ಚುತ್ತಿದ್ದಾಗಲೂ ಸಮಚಿತ್ತನಾಗೇ ನಿಂತಿದ್ದನಂತೆ ಈ ಧಿಂಗ್ರಾ..
ಅದೊಂದು ದಿನ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಮೇಲಿನ ದೌರ್ಜನ್ಯ ಕಂಡು ಸೇಡು ತೀರಿಸುವುದಕ್ಕಾಗಿ " ಸರ್ ವಿಲಿಯಂ ಕರ್ಜನ್ ವಾಯ್ ಲಿ " ಎಂಬ ಧೂರ್ತ ಬ್ರಿಟಿಷ್ ಅಧಿಕಾರಿಯನ್ನ ದಿಟ್ಟೆದೆಯಿಂದ ಗುಂಡಿಟ್ಟು ಕೊಂದು ಬಿಡುತ್ತಾನೆ ಈ ಧಿಂಗ್ರಾ, ಈ ಘಟನೆಯ ಬಳಿಕ ಪೋಲೀಸರು ಆತನನ್ನ ಬಂಧಿಸುತ್ತಾರೆ. ವಿಚಾರಣೆಯ ಹೊತ್ತಲ್ಲಿ ಅವ ಬ್ರಿಟಿಷರಿಗೆ ಹೇಳಿದ ಮಾತಾದರೂ ಎಂತಾದ್ದು... " ಹೇಗೆ ಜರ್ಮನ್ನರಿಗೆ ಇಂಗ್ಲೆಂಡನ್ನು ಆಕ್ರಮಿಸಲು ಅಧಿಕಾರವಿಲ್ಲವೋ ಹಾಗೆಯೇ ಭಾರತವನ್ನು ಆಕ್ರಮಿಸುವ ಅಧಿಕಾರ ಬ್ರಿಟಿಷರಿಗೂ ಇಲ್ಲ, ನಮ್ಮ ಪವಿತ್ರ ಭೂಮಿಯನ್ನು ಅಪವಿತ್ರಗೊಳಿಸುತ್ತಿರುವ ಆಂಗ್ಲರನ್ನು ಸಂಹರಿಸುವುದೇ ನ್ಯಾಯಸಮ್ಮತವಾಗಿದೆ.. ನನಗೆ ಮರಣದಂಡನೆ ವಿಧಿಸಿ ಅದೇ ನನ್ನ ಆಸೆ... ಅದರಿಂದ ನನ್ನ ದೇಶಭಾಂಧವರ ಸೇಡಿನ ಕಿಚ್ಚು ಹೆಚ್ಚು ಉಗ್ರವಾಗುತ್ತದೆ"
ಇಂತಹಾ ಮಹಾನ್ ದೇಶಭಕ್ತನ ಬಲಿದಾನ ವಾದದ್ದು 1909 ಆಗಸ್ಟ್ 17... ಹಣದ ದರ್ಪದಿಂದ ಶೋಕಿ ಮಾಡುತ್ತಿದ್ದ ವ್ಯಕ್ತಿ ತನ್ನ ತಾಯಿ ನಾಡಿಗಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡುತ್ತಾನೆಂದರೆ ಅದು ಅಧ್ಬುತ ಬದಲಾವಣೆ ತಾನೆ ... ಇವನಲ್ಲಿ ಆದ ಬದಲಾವಣೆ ಪ್ರಸ್ತುತ ಯುವಜನತೆಯಲ್ಲಿ ( ಪೋಷಕರು ದುಡಿದ ದುಡ್ಡಿನಲ್ಲಿ ಮಜಾ ಉಡಿಯಾಸೋ ಯುವಜನತೆ... ಪಬ್ , ಲೇಟ್ ನೈಟ್ ಪಾರ್ಟಿ ಅಂತೆಲ್ಲಾ ಬೆಳಗಿನವರೆಗೂ ಕುಡಿದು ಕುಣಿಯೋ ಯುವಜನತೆ..) ಆದರೆ... ಭಾರತ ಮಾತೆಗೆ ಧಿಂಗ್ರಾನನ್ನು ಮತ್ತೆ ಹೆತ್ತ ಖುಷಿ ಸಿಗಬಹುದಲ್ವಾ...
ದೇಶ್ ಭಕ್ತ್ ಮದನ ಲಾಲ್ ಧಿಂಗ್ರ ಅಮರ್ ರಹೇ

ಮಕರ ಸಂಕ್ರಾಂತಿನನ್ನೆಲ್ಲಾ ಮಿತ್ರರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು...ಕಳೆದ ವರ್ಷ ಸಂಕ್ರಾಂತಿಗೆ ಈ ಲೇಖನ ಪೋಸ್ಟ್ ಮಾಡಿದ್ದೆ. ಒಂದು ವರ್ಷದಲ್ಲಿ ಅದೆಷ್ಟೋ ಹೊಸ ಗೆಳೆಯರು ಸಿಕ್ಕಿದ್ದಾರೆ, ಅವರಿಗೋಸ್ಕರ ಇದನ್ನು ಮತ್ತೊಮ್ಮೆ ಪೋಸ್ಟ್ ಮಾಡುತ್ತಿದ್ದೇನೆ. ನಮ್ಮ ಸಂಪ್ರಾದಾಯಗಳು ಮತ್ತು ಅದರ ಮಹತ್ವವನ್ನು ತಿಳಿದು ಉಳಿದವರಿಗೆ ತಿಳಿಸಬೇಕಾದದ್ದು ಅದನ್ನು ಮುಂದಿನ ಪೀಳಿಗೆಗೆ ಕೊಡಬೇಕಾದದ್ದು ನಮ್ಮ ಕರ್ತವ್ಯ. ಯಾರಾದರೂ ಗೊಡ್ಡು ಸಂಪ್ರದಾಯ ಅಂದಾಗ ಎದೆಯುಬ್ಬಿಸಿ ನಮ್ಮ ಸಂಪ್ರದಾಯಗಳ ಮಹತ್ವವನ್ನು ಹೇಳಿ ನಿಂದಕರ ಬಾಯಿ ಮುಚ್ಚಿಸೋಣ...
ಇಂದು ಮಕರ ಸಂಕ್ರಾಂತಿ, ಉತ್ತರಾಯಣ ಶುರು ಆಗುತ್ತೆ( ಅಂದ್ರೆ ಸೂರ್ಯ ಉತ್ತರದಿಕ್ಕಿಗೆ ಪ್ರಯಾಣ ಮಾಡುತಾನೆ ಅಂತ). ಎಲ್ಲರೂ ಎಳ್ಳು ಬೆಲ್ಲ, ಎಳ್ಳು ಬೆಲ್ಲ ಅಂತ ಹಂಚಿಕೊಳ್ಳುತ್ತೇವೆ. ಯಾಕೆ...? ಅಂದ್ರೆ... ಅದು ಸಂಪ್ರದಾಯ ಅಂತ ಹೇಳ್ತೀವಿ... ಅದರ ಹಿಂದಿರುವ ವೈಜ್ನಾನಿಕ ಹಿನ್ನಲೆ ಗೊತ್ತಿರೋರು ಸ್ವಲ್ಪ ಕಮ್ಮೀನೆ...ನಾನು ಅದೇ ತರ ಇದ್ದಾಗ ಇದಕ್ಕಿರುವ ಉತ್ತರಗಳ ಪುಸ್ತಕವೊಂದು ಸಿಕ್ಕಿತು (ಲೇಖಕರು: ಹೆಚ್.ಕೆ.ಎಸ್.ರಾವ್) ಅದರಲ್ಲಿ ಓದಿ ತಿಳ್ಕೊಂಡಿರೋದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ...
ಯಾಕೆ ಎಳ್ಳು ಬೆಲ್ಲಾನೇ ತಿನ್ನಬೇಕು...??
ಮೇಲೆ ಹೇಳಿದಂತೆ ಉತ್ತರಾಯಣ ಪ್ರಾರಂಭವಾಗುತ್ತೆ, ಅದರ ಜೊತೆಗೆ ಹವಾಮಾನ ಬದಲಾವಣೆಯು ಆಗುತ್ತೆ. ಈ ಹವಮಾನ ಬದಲಾವಣೆ ಮಾನವನ ಮೇಲೆ ಪ್ರಭಾವ ಬೀರುತ್ತೆ. ಈ ಧನುರ್ಮಾಸ ಕಳೆದು ಮಕರ ಮಾಸ ಪ್ರಾರಂಭವಾಗುವ ಹೊತ್ತಿಗೆ ಮನುಷ್ಯನ ದೇಹದಲ್ಲಿ ಕೊಬ್ಬಿನ ಅಂಶ ಎಷ್ಟು ಬೇಕೋ ಅಷ್ಟು ಇದ್ದಿರುವುದಿಲ್ಲ. ಸ್ವಲ್ಪ ಕಡಿಮೆಯಾಗಿರುತ್ತದೆ. ಉತ್ತರಾಯಣ ಕಾಲದಲ್ಲಿ ಶೆಖೆ ಪ್ರಾರಂಭವಾಗುವುದರಿಂದ ಈ ಕಾಲದಲ್ಲಿ ದೇಹಕ್ಕೆ ಅತ್ಯವಶ್ಯವಾದ ಕೊಬ್ಬಿನ ಅಂಶ ಸರಿತೂಗಿಸದಿದ್ದರೆ ಮುಂದೆ ಬಿಸಿಲಿನ ತಾಪಕ್ಕೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಇದನ್ನು ತಪ್ಪಿಸುವುದಕ್ಕಾಗಿ ಮುಂಜಾಗರೂಕತಾ ಕ್ರಮವಾಗಿ ಎಳ್ಳನ್ನು ಸೇವಿಸಬೇಕು.ವೈದ್ಯಶಾಸ್ತ್ರ ಮತ್ತು ಆಹಾರ ಶಾಸ್ತ್ರ ಪ್ರಕಾರ ಶರೀರದ ಚರ್ಮನೇತ್ರ ಮತ್ತು ಅಸ್ತಿ ಇವುಗಳ ಬೆಳವಣಿಗೆಗೆ ಮತ್ತು ಇವುಗಳು ಸರಿಯಾದ ಸ್ಥಿತಿಯಲ್ಲಿರುವುದಕ್ಕೆ ’ಎ’ ಮತ್ತು ’ಬಿ’ ವಿಟಮಿನ್ ಗಳು ಬೇಕು. ತೈಲ ಧಾನ್ಯವಾದ ಎಳ್ಳಿನಲ್ಲಿ ಇದು ಹೇರಳವಾಗಿದೆ. ಆದುದರಿಂದ ಇದರ ಸೇವನೆಯನ್ನು ಹಬ್ಬದ ಆಚರಣೆಯನ್ನಾಗಿಸಿದರು.
ಆಯುರ್ವೇದ ಪಂಡಿತರ ಪ್ರಕಾರ ಉತ್ತರಾಯಣದಲ್ಲಿ ಶರೀರದ ಉಷ್ಣವು ಹೆಚ್ಚು ಶೇಖರಿಸಲ್ಪಡುತ್ತದೆ. ದಕ್ಷಿಣಾಯನದಲ್ಲಿ ದೇಹದ ಉಷ್ಣತೆ ಹೆಚ್ಚಿಗೆ ವಿಸರ್ಜಿಸಲ್ಪಡುತ್ತದೆ.ಹಾಗಾಗಿ ಈಗ ದಕ್ಷಿಣಾಯನ ಮುಗಿಯೋ ಹೊತ್ತಿಗೆ ನಮ್ಮ ದೇಹದ ಹೆಚ್ಚಿನ ಉಷ್ಣತೆಯನ್ನು ನಾವು ಕಳಕೊಂಡಿರುತ್ತೇವೆ.ಈ ಕೊರತೆಯನ್ನು ನಿವಾರಿಸಲು ಉಷ್ಣ ಪದಾರ್ಥವಾಗಿರುವ ಎಳ್ಳಿನ ಸೇವನೆಗೆ ಒತ್ತು ಕೊಟ್ಟರು.
ಎಳ್ಳು ತಿನ್ನಲು ಹೇಳಿದ್ದ್ದು ನಿಜ ಆದ್ರೆ ಎಳ್ಳಿನ ಇನ್ನೊಂದು ಗುಣ ಪಿತ್ತ. ಹೆಚ್ಚು ತಿಂದಲ್ಲಿ ಪಿತ್ತ ಜಾಸ್ತಿಯಾಗುತ್ತೆ.ಆದ್ದರಿಂದ ಪಿತ್ತ ಹರವಾದ ಬೆಲ್ಲವನ್ನು ಜೊತೆಯಲ್ಲಿ ತೆಗೆದುಕೊಂಡರೆ ಶರೀರದಲ್ಲಿ ಕೊರತೆ ಉಂಟಾಗಿರುವ ಕೊಬ್ಬಿನ ಅಂಶವು ಸರಿತೂಗಿಸಲ್ಪಡುತ್ತದೆ.( ಗುಣದಲ್ಲಿ ಬೆಲ್ಲವೂ ಪಿತ್ತಗುಣವುಳ್ಳದ್ದಾದರೂ ಎಳ್ಳಿನ ಜೊತೆ ತೆಗೆದುಕೊಂಡಾಗ ಅದು ಪಿತ್ತಹರವಾಗುತ್ತೆ.diamond cuts diamond ಅನ್ನೋ ತರ ಪಿತ್ತವನ್ನು ಪಿತ್ತದಿಂದ ನಾಶಮಾಡುವುದೇ "ಎಳ್ಳು-ಬೆಲ್ಲ")
ಹಸಿ ಎಳ್ಳಿನಲ್ಲಿರುವ ದೋಷಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಹುರಿದ ಎಳ್ಳನ್ನು ಸೇವನೆ ಮಾಡಬೇಕು ಅಂದಿದ್ದಾರೆ. ಇದರಿಂದ ಸೇವನೆಗೂ ಹಿತವಾಗುತ್ತೆ. ಇದರ ಜೊತೆಗೆ ರುಚಿಗೋಸ್ಕರವೂ ಮತ್ತು ಕೊಬ್ಬಿನ ಅಂಶ ಇರುವ ಕಡಲೇಕಾಯಿ ಬೀಜ, ಕೊಬ್ಬರಿ ಇತ್ಯಾದಿಗಳನ್ನು ಬೆರೆಸಿ ತಿನ್ನುವಂತೆ ಹೇಳಿದ್ದಾರೆ.
ಹಾಗೆ ನಮ್ಮ ಪೂರ್ವಜರ ಅರೋಗ್ಯ ಕಾಳಜಿಯ ಬಗ್ಗೆ ಎಷ್ಟು ಹೇಳಿಕೊಂಡರೂ ಕಮ್ಮಿಯೇ.. ಈ ಬಾರಿ ಎಳ್ಳು - ಬೆಲ್ಲ ತಿನ್ನೋವಾಗ ಅದರ ಮಹತ್ವ ಅರಿತು ತಿನ್ನೋಣ, ಎಳ್ಳು-ಬೆಲ್ಲ ಹಂಚುವಾಗ ಅದರ ಹಿಂದಿನ ವೈಜ್ನಾನಿಕ ಮಹತ್ವವನ್ನು ಹೇಳಿ ಹಂಚೋಣ....
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು....

ಮತ್ತೆ ಜಾಗರಣೆ....(ಹಾಗೇ ಸುಮ್ಮನೆ ಒಂದು ಕಥೆ....)ಅಂದು ಶಿವರಾತ್ರಿ, ಹಬ್ಬದ ತಯಾರಿಗಾಗಿ ಮಾರ್ಕೆಟ್ಟು ಗಿಜಿಗುಡುತಿತ್ತು. ಆ ಸದ್ದಿನ ನಡುವಲ್ಲಿಯೂ ಪಾರ್ವತಕ್ಕನಿಗೆ ಜೋರಾದ ಸದ್ದು ಕೇಳಿಸಿತು...
" ಪಾರ್ವತಕ್ಕ ಬಿಲ್ವಪತ್ರೆ ತಕ್ಕೊಂಡು ಹೋಗೋಕೆ ಬಂದ್ರಾ. ನಿಮ್ಮ ಕೈಯಲ್ಲಿರೋ ಬಿಲ್ವ ಪತ್ರೆಗಳನ್ನ ನೋಡಿದ್ರೆ. ಇವತ್ತು ರಾತ್ರಿ ಇಡೀ ಜಾಗರಣೆ ಅಂತನ್ನಿಸುತ್ತೆ..."
ಪಾರ್ವತಕ್ಕನ ಕೈಯಲ್ಲಿದ್ದ ಬಿಲ್ವಪತ್ರೆಯ ಚೀಲವನ್ನ ನೋಡಿ ಯಶೋದಕ್ಕ ನಿಲ್ಲಿಸಿ ಪ್ರಶ್ನೆ ಎಸೆದಿದ್ದರು.
" ಹೌದು ಯಶೋದಕ್ಕ ಇವತ್ತು ಶಿವರಾತ್ರಿ ಅಲ್ವಾ... ಇವತ್ತಿನ ದಿನ ಈ ಬಿಲ್ವಪತ್ರೆಯನ್ನ ಭಕ್ತಿಯಿಂದ ಆ ಭೋಲೇ ನಾಥನಿಗೆ ಅರ್ಪಿಸಿದರೆ ಸಾಕು... ಆ ಶಿವ ಖಂಡಿತ ಒಲಿದೇ ಒಲೀತಾನೆ... ಈ ಸಾರಿಯಂತೂ ನನ್ನ ಮಗಳದ್ದು MBA ಫೈನಲ್ ಇಯರ್ ಅಲ್ವಾ... ಹಾಗಾಗಿ ಸ್ವಲ್ಪ ವಿಶೇಷ ಆರಾಧನೆ ಮಾಡ್ಬೇಕೂಂತ ಇದೀನಿ... ಅಹೋರಾತ್ರಿ ಪಂಚಾಕ್ಷರಿ ನಾಮ ಜಪ... ನೀವೂ ಬರ್ತೀರಾ..?"
" ಅಯ್ಯೋ ಇಲ್ಲಾರೀ ಹನ್ನೊಂದು ಘಂಟೆಯವರೆಗೆ ಸೀರಿಯಲ್ ನೋಡೇದೇ ಬಹಳ ಕಷ್ಟಕ್ಕೆ ... ಇನ್ನು ಬೆಳಗ್ಗಿನವರೆಗೆ ಜಾಗರಣೆ ಅಂದ್ರೆ ಮುಗಿದೋಯ್ತು ನನ್ನ ಕಥೆ... ನಿಮ್ಮ ಶಿವ ಭಕ್ತಿ ನಿಮಗೇ ಇರಲಿ" ಅಂತಂದು ಬೇಗ ಜಾಗ ಖಾಲಿ ಮಾಡಿ ಬಿಟ್ಟರು ಯಶೋದಕ್ಕ.
ಸರಿ ಬಿಡಿ ನಿಮಗೇನು ಗೊತ್ತು... ನಮ್ಮ ಶಂಕರ ಅದೆಷ್ಟು ದಯಾಳು ಅಂತ... ಮನದಲ್ಲಿ ಗೊಣಗಿಕೊಂಡರು ಮುಂದೆ ಹೆಜ್ಜೆ ಹಾಕತೊಡಗಿದರು ಪಾರ್ವತಕ್ಕ.
ಹಾ..... ಪಾರ್ವತಕ್ಕ ಈ ಕಾಲಕ್ಕೆ ಸಿಗೋ ಅಪರೂಪದ ಶಿವ ಭಕ್ತೆ.. ಅದರಲ್ಲೂ ಶಿವರಾತ್ರಿಯಂದು ಉಪವಾಸ, ಜಾಗರಣೆ ಅಂತ ಶಿವನ ಆರಾಧನೆ ಬಹಳ ಜೋರಾಗೇ ಇರುತ್ತೆ. ಈ ಪಾರ್ವತಕ್ಕನ ಪತಿ ದೇವರು ಗಿರೀಶ್ ಅಂತ, ಅವರಿಗೋ ಪೇಟೆಯಲ್ಲಿ ಸ್ವಂತದ ಗಿಫ್ಟ್ ಮತ್ತು ಕಾರ್ಡ್ಸ್ ಗಳ ಅಂಗಡಿ ಇದೆ. ಪಾರ್ವತಕ್ಕನ ಭಕ್ತಿಯ ಫಲವೋ ಅಥವಾ ಗಿರೀಶ್ ರ ಶ್ರದ್ಧೆಯ ದುಡಿಮೆಯ ಫಲವೋ ಉತ್ತಮ ಆದಾಯವಂತೂ ಬರುತಿತ್ತು. ಈ ದಂಪತಿಗಳಿಗೆ ಒಬ್ಬಳೇ ಪುತ್ರಿ..ನಮಿತಾ ಅಂತ ... ಇಬ್ಬರೂ ಮುದ್ದಾಗಿ ನಮ್ಮೀ... ಅಂತಾನೇ ಕರೀತಿದ್ರು... ಈ ಬಾರಿ ಆಕೆಯದು ಫೈನಲ್ ಇಯರ್ MBA... ಪರೀಕ್ಷೆ ಕೂಡ ಹತ್ತಿರ ಬರ್ತಾ ಇತ್ತು. ಮೊದಲೆಲ್ಲಾ ಒಳ್ಳೆ ರಿಸಲ್ಟ್ ತರ್ತಾ ಇದ್ದೋಳೋ ಯಾಕೋ ಒಂದು ವರ್ಷದಿಂದ ಸ್ವಲ್ಪ ಕಡಿಮೆ ಮಾರ್ಕ್ಸ್ ತೆಗೆಯೋಕೆ ಶುರುಮಾಡಿದ್ಲು... ಹಾಗಾಗೋ ಏನೋ ಪಾರ್ವತಕ್ಕನನ್ನ ಚಿಂತೆ ಕಾಡತೊಡಗಿತ್ತು... ಈ ಬಾರಿ ಶಿವನ ಎದುರು ತನ್ನ ಮಗಳ ಕುರಿತೇ ಬೇಡಿಕೊಳ್ಳೋ ಆಲೋಚನೆ ಮಾಡಿಕೊಂಡಿದ್ದಳು....
ಹಾಗೇ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿ ಖರೀದಿಸಿ ತರುವಷ್ಟರಲ್ಲಿ ಗಂಟೆ ಏಳಾಗಿತ್ತು. ಮನೆಗೆ ಬಂದವಳೇ ಕೈಕಾಲು ಮುಖ ತೊಳೆದು ದೇವರ ಕೋಣೆಗೆ ಹೋಗಿ ದೇವರ ಅಲಂಕಾರ ಶುರು ಮಾಡಿಕೊಂಡಳು, ಅಷ್ಟು ಹೊತ್ತಿಗೆ ಯಾರೋ ಬಂದ ಸದ್ದಾಯಿತು.... ಕುಳಿತಲ್ಲಿಂದಲೇ ಇಣುಕಿ ನೋಡಿದಳು...
ಬಂದಿದ್ದು ನಮ್ಮೀ... ಬಂದವಳೇ ಟಿ.ವಿ ಆನ್ ಮಾಡಿ ಚಾನಲ್ ಬದಲಾಯಿಸೋಕೆ ಶುರು ಮಾಡಿಕೊಂಡಳು.
" ಏ ನಮ್ಮೀ ಪುರುಸೊತ್ತು ಇದ್ರೆ ಇಲ್ಲಿ ಬಾರೆ...ಸ್ವಲ್ಪ ಅಲಂಕಾರ ಮಾಡುವಿಯಂತೆ...."
" ಇಲ್ಲ ಅಮ್ಮಾ.... ಎಕ್ಸಾಮ್ ಗೆ ಓದ್ಕೋ ಬೇಕು...." ಅಂದವಳೆ ಸುಮ್ಮನೆ ರಾಗ ಎಳೆದಳು...
" ಹೂ... ಸರಿ ಬಿಡು ಓದ್ಕೋ..." ಅಂದಳು ಪಾರ್ವತಕ್ಕ.
ನಮ್ಮೀ ಒಳ್ಳೆ ಹುಡುಗೀನೇ ಆದರೆ ಅದೇನೋ ಸಹವಾಸ ದೋಷ ಅಂತಾರಲ್ಲ ಹಾಗಾಗಿ ಮೊದಲಿನ ಭಯ ಭಕ್ತಿ ಎಲ್ಲಾ ಮರೆಯೋಕೆ ಶುರುಮಾಡಿದ್ದಳು. ಕಾರಣ ಉತ್ತರ ಭಾರತದಿಂದ ಕಲಿಯಲು ಬಂದಿದ್ದ ಇವಳ ಗೆಳೆಯರೆಲ್ಲಾ ಹೈ ಫೈ ಲೈಫ್ ಸ್ಟೈಲ್ ನ ರುಚಿ ತೋರಿಸತೊಡಗಿದ್ದರು. ಎಲ್ಲಾರೂ ಆ ರೀತಿ ಇರಬೇಕಾದ್ರೆ ಇವಳೊಬ್ಬಳನ್ನ ಬದಲಾಯಿಸದೇ ಬಿಡುತ್ತಾರ... ?
ಗಂಟೆ ಎಂಟಾಗುತ್ತಿದ್ದಂತೆ ಕಾಲಿಂಗ್ ಬೆಲ್ ಸದ್ದು ಕೇಳಿಸಿದ್ದೇ ತಡ ... ನಮ್ಮೀ ಓಡೋಡಿ ಬಂದವಳೇ... ಬಾಗಿಲು ತೆಗೆದಳು... ನೋಡಿದರೆ ಒಂದಿಬ್ಬರು ಕಾಲೇಜಿನ ಮಿತ್ರರು ... ಅದೇನೋ ಗುಸು ಗುಸು ಅಂತ ಮಾತಾಡಿಕೊಂಡರು... ಆ ಮಾತುಕತೆ ಅಲಂಕಾರದ ಕೆಲಸದಲ್ಲಿ ತಲ್ಲೀನಳಾಗಿದ್ದ ಪಾರ್ವತಕ್ಕನ ಕಿವಿಗೆ ಬೀಳಲಿಲ್ಲ. ಆಕೆ ಗಮನವನ್ನೂ ಹರಿಸಲಿಲ್ಲ.
ಅತ್ತ ಮಾತುಕತೆ ಮುಗಿದದ್ದೇ ತಡ ನಮ್ಮೀ ಅಮ್ಮನ ಬಳಿಗೋಡಿ ಬಂದು ....ಅಮ್ಮಾ... ಎಂದವಳೆ ಮೆಲುಧ್ವನಿಯಲ್ಲಿ ರಾಗ ಎಳೆಯತೊಡಗಿದಳು...
" ಏನೇ...."
" ಅದು ಎಕ್ಸಾಮ್ ಹತ್ರ ಬಂತಲ್ವಾ... ಕೆಲವು ಪೋರ್ಶನ್ ನಾವೇ ಓದ್ಕೋಬೇಕು ಅಂದಿದಾರೆ ಹಾಗಾಗಿ ನಾವೊಂದು ಐದು ಜನ ಗ್ರೂಪ್ ಸ್ಟಡಿ ಮಾಡ್ಬೇಕೋಂತ ಇದೀವೀ ನನ್ನ ಫ್ರೆಂಡ್ ಸಹನಾ ಮನೇಲಿ ಒಟ್ಟಾಗ್ತಾ ಇದ್ದೀವಿ...ಹೋಗ್ಲಾ..."
" ಅಯ್ಯೋ ಆಗ್ಲೇ ಕತ್ತಲಾಯಿತಲ್ಲೇ..."
" ಹೂ... ಅಮ್ಮ ನಾಳೆ ಬುಕ್ ರಿಟರ್ನ್ ಮಾಡೋಕ್ಕಿದೆ... ಹಾಗಾಗಿ ಇವತ್ತಿಡೀ ಜಾಗರಣೆ ಮಾಡ್ಬೇಕಾಗುತ್ತೆ...."
" ಹಾಗಿದ್ರೆ ಅಪ್ಪ ಬರ್ಲಿ... ಅವರ ಹತ್ರನೇ ಕೇಳು..."
" ಅಮ್ಮಾ.... ಪ್ಲೀಸ್... ಅಮ್ಮಾ.... ನೀನೇ ಅಪ್ಪನ ಹತ್ರ ಹೇಳು ನಾನೀಗ್ಲೇ ಹೊರಡಬೇಕು .... ನೀನು ಇಲ್ಲಿ ಜಾಗರಣೆ ಮಾಡು... ನಾನು ಅಲ್ಲಿ ಮಾಡ್ತೀನೀ.... ಹಾ ಈಶ್ವರ ದೇವರ ಫೋಟೋ ಕೂಡ ಇದೆಯಮ್ಮಾ...." ಅಂತ ಅಮ್ಮನನ್ನ ಭಾವನಾತ್ಮಕವಾಗಿ ಕಾಡತೊಡಗಿದಳು.
"ಜಾಗರಣೆ"..... "ಈಶ್ವರನ ಫೋಟೋ" ಅನ್ನುವ ಶಬ್ದಗಳೆಲ್ಲ ಪಾರ್ವತಕ್ಕನ ಮೇಲೆ ಮೋಡಿ ಮಾಡಿತ್ತು.
" ಸರಿ, ಅಪ್ಪನ ಹತ್ರ ನಾನು ಹೇಳ್ತೀನಿ ನೀನು ಚೆನ್ನಾಗಿ ಓದು.... ಭೋಲೇ ನಾಥನನ್ನು ಅಗಾಗ ನೆನಪಿಸ್ಕೋ..." ಅಂತಂದರು...
ಸೋ ಸ್ವೀಟ್.... ಅಂದವಳೇ ಅಮ್ಮನ ಕೆನ್ನೆಗೆ ಸಿಹಿ ಮುತ್ತನ್ನಿಕ್ಕಿ ಓಡಿ ಹೋಗಿ ಹೊರಡೋಕೆ ಶುರು ಮಾಡಿದಳು...
ಇಲ್ಲಿ ಪಾರ್ವತಕ್ಕನ ಜಾಗರಣೆ ನಿಶ್ಕಲ್ಮಶ ಭಕ್ತಿಯಿಂದ ಶುರುವಾದ್ರೆ ಅಲ್ಲಿ ಅವರ ಮಗಳು ಕಪಟತನದ ಭಕ್ತಿಯಿಂದ ಕೂಡಿತ್ತು. ನಿಜಕ್ಕೂ ನಮ್ಮಿಗೆ ಯಾವುದೇ ಗ್ರೂಪ್ ಸ್ಟಡಿ ಇದ್ದಿರಲಿಲ್ಲ. ಸಂಡೇ ಪಬ್ ಗೆ ಹೋಗೋದಿಕ್ಕಾಗಿ ನಮ್ಮೀ ಗ್ರೂಪ್ ಸ್ಟಡಿ ಮತ್ತು ಜಾಗರಣೆಯ ನೆಪ ಮುಂದಿಟ್ಟಿದ್ದಳು. ಗೆಳತಿಯ ರೂಮಿಗೆ ಹೋದವಳೇ ತನ್ನ ಸಾಂಪ್ರಾದಾಯಿಕ ಉಡುಗೆಗಳನೆಲ್ಲಾ ಬಿಸಾಕಿ ಆಧುನಿಕ ಬಟ್ಟೆಗಳನ್ನ ತೊಟ್ಟುಕೊಂಡಳು, ಪಬ್ ಸಂಸ್ಕೃತಿನೇ ಹಾಗಲ್ವಾ.... ಬಟ್ಟೆಗಳಿಗೆ ಹೆಚ್ಚು ಮೈಮುಚ್ಚುವ ಅವಕಾಶ ಇಲ್ಲ..ಗೆಳತಿಯರ ಜೊತೆಗೂಡಿ ಹೊರಟವಳೇ. ಅಲ್ಲಿಂದ ಒಂದಷ್ಟು ಜನ ಹುಡುಗರ ಜೊತೆ ಸೇರಿ ನಗರದ ಪ್ರಸಿದ್ಧ ಪಬ್ ಸೇರಿದ್ದರು. ಇತ್ತ ತಾಯಿ ಲಿಂಗಾಭಿಷೇಕದ ನೀರನ್ನ ತೀರ್ಥವಾಗಿ ಸೇವಿಸಿದರೆ ಅತ್ತ ಮಗಳು... ಬೇರೇನೇ ತೀರ್ಥ ಸೇವಿಸೋಕೆ ಶುರು ಮಾಡತೊಡಗಿದ್ದಳು. ಭಗವದ್ಭಕ್ತಿಯಲ್ಲಿ ತಲ್ಲೀನವಾಗಿ ತಾಯಿ ಜಾಗರಣೆ ಮಾಡುತ್ತಿದ್ದರೆ ಮಗಳು ಕುಡಿದು ಕುಪ್ಪಳಿಸಿ ಮೈ ಮರೆತು ಜಾಗರಣೆ ಮಾಡುತ್ತಿದ್ದಳು. ನಶೆ ಏರಿ ತನ್ನ ಮೈಮೇಲಿನ ಅರಿವನ್ನೇ ಕಳಕೊಂಡಿದ್ದಳು...ಅದೆಷ್ಟು ಜನ ಇವಳ ಈ ದುರವಸ್ಥೆಯ ಲಾಭ ಪಡಕೊಂಡರೋ ದೇವರೇ ಬಲ್ಲ.... ಅಲ್ಲಿಂದ ನಡುರಾತ್ರಿ ಮೂರರ ಹೊತ್ತಿಗೆ ಹೇಗೋ ಗೆಳತಿಯ ರೂಮ್ ಸೇರಿದವಳನ್ನ ಆರೂವರೆಯ ಅಲರಾಂ ಬಡಿದೆಬ್ಬಿಸಿತು... ತಡೆಯಲಾಗದ ತಲೆಭಾರವನ್ನು ಲೆಕ್ಕಿಸದೆ ಮನೆಯಿಂದ ಬರುವಾಗ ಹಾಕಿದ್ದ ಬಟ್ಟೆ ಧರಿಸಿ ಮನೆಗೆ ಕಡೆ ಹೆಜ್ಜೆ ಹಾಕಿದಳು ನಮ್ಮೀ....
ಇತ್ತ ಆರು ಗಂಟೆಯವರೆಗೆ ಜಾಗರಣೆ ಮಾಡಿದ್ದ ಪಾರ್ವತಕ್ಕ ಸ್ನಾನವನ್ನೆಲ್ಲಾ ಪೂರೈಸಿ ಚೆಂದವಾಗಿ ಅಂಗಣದಲ್ಲಿ ರಂಗೋಲಿ ಹಾಕುತ್ತಿದ್ದರು. ಅದಾಗಲೇ ಮಗಳ ಪ್ರವೇಶವಾಯಿತು.
" ಯಾಕೇ ಇಷ್ಟೊಂದು ತಡವಾಯಿತು....?"
" ಹಾ... ಪೂರ್ತಿ ಜಾಗರಣೆ ಅಮ್ಮಾ ......ಓದಿ ಓದಿ ಸಾಕಾಗಿ ಹೋಯಿತು ನಾನೊಬ್ಬಳೇ ಇದ್ದಿದ್ರೆ ಮಲಗಿರ್ತಿದ್ನೋ ಏನೋ ಗ್ರೂಪಲ್ಲಿ ಓದಿದಕ್ಕೆ ಸುಲಭ ಆಯಿತು.... ಸ್ವಲ್ಪ ಹೊತ್ತು ಮಲಗ್ತೀನಿ ಒಂಭತ್ತು ಗಂಟೆಗೆ ಎಬ್ಬಿಸ್ತೀಯಾ..." ಅಂದವಳೇ ತನ್ನ ರೂಮಿನಾಚೆ ಹೊರಟಳು.
ನಮ್ಮೀ ಯ ಮುಖವನ್ನು ಸರಿಯಾಗಿ ನೋಡಿದ ಪಾರ್ವತಕ್ಕನಿಗೆ ಅವಳಲ್ಲಿನ ಆಯಾಸ , ಕೆಂಪಾದ ಕಣ್ಣುಗಳು ಆಕೆ ನಿಜವನ್ನೇ ಹೇಳುತ್ತಿದ್ದಾಳೆ ಅನ್ನುವ ನಂಬಿಕೆಯನ್ನು ಹುಟ್ಟಿಸಿತ್ತು. ಒಂದು ಕ್ಷಣ ಮನದಲ್ಲಿ ಸಂತಸ ಪಟ್ಟ ಪಾರ್ವತಕ್ಕ ನೇರ ದೇವರ ಕೋಣೆಯ ಬಳಿ ಬಂದು....
" ಹೇ ಶಂಕರಾ... ನಿಜಕ್ಕೂ ನನ್ನ ಮಗಳನ್ನ ನೋಡೋವಾಗ ಅದೆಷ್ಟು ಖುಶಿಯಾಯಿತು ಗೊತ್ತಾ... ನನ್ನ ಜಾಗರಣೆಗೆ ಅಷ್ಟು ಬೇಗ ಮೆಚ್ಚಿದಿಯಾ...ಅದೆಷ್ಟು ಕಷ್ಟ ಪಟ್ಟು ಓದ್ತಾ ಇದ್ದಾಳೆ .... ಅವಳಲ್ಲಿ ಈ ಬುದ್ಧಿ ಸದಾ ಇರೋ ಹಾಗೆ ಮಾಡಪ್ಪಾ.... ಇದೇ ನನ್ನ ಕೋರಿಕೆ...."
ಅತ್ತ ನಿಜವಾದ ಕೈಲಾಸದಲ್ಲಿ ಪರಶಿವನ ಅರ್ಧಾಂಗಿ ಶಿವೆ ನಗತೊಡಗಿದಳು....
" ಸ್ವಾಮೀ ಈಗೇನು ಮಾಡುವಿರಿ.... ನಿಮ್ಮ ಭಕ್ತೆ ವಾಸ್ತವದ ಅರಿವಿಲ್ಲದೇ ತನ್ನ ಮಗಳ ಬುದ್ಧಿ ಇದೇ ತೆರನಿರಲಿ ಅನ್ನುತ್ತಿದ್ದಾಳಲ್ಲ.... "
ನಿಜಕ್ಕೂ ತನ್ನ ಭಕ್ತೆಯ ಜಾಗರಣೆ ಸಾಕ್ಷಾತ್ ಪರಶಿವನನ್ನೇ ಧರ್ಮ ಸಂಕಟಕ್ಕೀಡುಮಾಡಿತ್ತು....
(ಕಳೆದ ಬಾರಿಯ ಅಂತ್ಯ...)
.
.
.
ಕೊನೆಗೂ ಮುಗುಳ್ನಕ್ಕ ಶಿವ ತಥಾಸ್ತು ಅಂದು ಬಿಟ್ಟ....
ಮರುದಿನ ಮಗಳು ಅದೇ ರೀತಿ ಓದೋಕಿದೆ ಅಂತ ಹೇಳಿ ಅದೇ ಗುಂಪಿನ ಜೊತೆ ಮತ್ತೆ ಹೊರಟಿದ್ದಳು. ಮತ್ತದೇ.. ಹಾಳು ಮದ್ಯದ ಎರಡು ಗುಟುಕನ್ನೇರಿಸಿದ್ದಳು...ಅಷ್ಟರಲ್ಲಿ... ಹಾಠಾತ್ತಾಗಿ ಆ ಪಬ್ಬಿನ ಮೇಲೆ ಪೋಲೀಸ್ ದಾಳಿಯಾಗಿತ್ತು.... ಎಲ್ಲ ಹುಡುಗ ಹುಡುಗಿಯರು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದಾಗ ಈಕೆಗೆ ತಲೆಗೇರಿದ್ದ ನಶೆ ಇಳಿದು ಹೋಗಿತ್ತು ಎಲ್ಲರೂ ಅತ್ತಿತ್ತ ಓಡಾಡತೊಡಗಿದರು ತಪ್ಪಿಸಿಕೊಳ್ಳೋ ಆಸೆ.... ಅಷ್ಟರಲ್ಲಿ ಅದ್ಯಾರೋ ಈಕೆಯ ತೋಳನ್ನ ಹಿಡಿದು ದರದರನೆ ಹಿಂಬಾಗಿಲ ಕಡೆ ಕರೆದೊಯ್ದು...." ಬೇಗ ತಪ್ಪಿಸಿಕೋ.... ಇನ್ಯಾವತ್ತೂ ನಿನ್ನ ತಾಯಿಗೆ ಮೋಸ ಮಾಡಬೇಡ.... ನಿನ್ನ ಈ ರೂಪ ಕಂಡರೆ ಆಕೆಗೆ ಶಿವನ ಮೇಲಿನ ನಂಬಿಕೆ ಹೊರಟು ಹೋದೀತು...." ಎಂದವನೇ ಅವಳನ್ನ ಹೋಗಲು ಬಿಟ್ಟ ಒಬ್ಬ ಪೋಲೀಸ್ ಪೇದೆ..... ಆತ ಯಾರು....? ಎಷ್ಟು ಯೋಚಿಸಿದರೂ ಆಕೆಗೆ ಏನು ಅರ್ಥವಾಗಲಿಲ್ಲ.... ಸಾವರಿಸಿಕೊಂಡು ಓಡತೊಡಗಿದಳು ಮೆಲ್ಲನೆ ಹಿಂದುರಿಗಿ ನೋಡಿದರೆ ಬೇರೆ ಇಬ್ಬರು ಪೋಲೀಸ್ ಪೇದೆಗಳು ಇವಳನಟ್ಟಸಿ ಬರತೊಡಗಿದ್ದರು.... ಅಷ್ಟರಲ್ಲೇ ಅದೆಲ್ಲಿಂದಲೋ ಬಂದ ದೊಡ್ಡ " ಬಸವ " ಆ ಪೋಲಿಸರ ಕಡೆ ದುರುಗುಟ್ಟಿಸಿ ಹೂಂಕರಿಸಿತು....
" ಲೋ... ಒಬ್ಳೇ ತಾನೆ ಹೋಗ್ಲಿ ಬಿಡು... ಮೊದ್ಲು ಈ ಬಸವನಿಂದ ನಾವ್ ಬಚಾವಾಗೋಣ " ಅಂದವರೇ ಹಿಂದುರಿಗಿ ಓಡತೊಡಗಿದರು....
ಬೆವರಿ ಹೋಗಿದ್ದ ನಮ್ಮಿಯನ್ನ ಬಾಗಿಲಲ್ಲಿ ನೋಡಿದ ಆಕೆಯ ಅಮ್ಮನಿಗೆ ಗಾಬರಿಯಾಯಿತು...
" ಏನಾಯಿತೇ....?"
" ಏನಿಲ್ಲ ಅಮ್ಮಾ.... ಹೆಚ್ಚಿನವರಿಗೆ ಗ್ರೂಪ್ ಸ್ಟಡಿ ಮಾಡೋಕೆ ಬರಲಾಗಲೇ ಇಲ್ಲ ಹಾಗಾಗಿ ನಾನು ವಾಪಾಸ್ ಬಂದೆ... ಬರಬೇಕಾದ್ರೆ ಬೀದಿ ನಾಯಿಯೊಂದು ಅಟ್ಟಿಸಿಕೊಂಡು ಬಂತು.... ಅಷ್ಟೇ... " ಅಂದಳು
" ಹೆದರಬೇಡ ನಮ್ಮೀ.... ನನ್ನ ಶಿವ ನಿನ್ನನ್ನು ಸದಾ ಕಾಪಾಡ್ತಾನೆ " ಎಂದು ಒಳಹೋದಳು.
ಆ ಘಟನೆ ನಮ್ಮೀ ಯಲ್ಲಿ ದೊಡ್ಡ ಬದಲಾವಣೆಯನ್ನ ತಂದಿತ್ತು...
ಈಗ ಪಾರ್ವತಕ್ಕನದು ಒಂದೇ ರಾಗ " ಒಳ್ಳೇ ಮಾರ್ಕ್ಸೇನೋ ಬರ್ತದೆ.... ಆದರೆ ಯಾಕೋ ನನ್ನ ನಮ್ಮೀ ಗ್ರೂಪ್ ಸ್ಟಡೀಸ್ ಗೇ ಹೋಗೋದಿಲ್ಲ..." ಅಂತ.

ಮೋದಿಯ ಕುರಿತಾದ ಮಿತ್ರರೊಬ್ಬರ ಪ್ರಶ್ನೆಗಳಿಗೆ ನನ್ನ ಉತ್ತರ೧. ರಾಜಧರ್ಮದ ಪಾಲನೆಯಾಗಿಲ್ಲ ಅಂತ ಕೇಳಿದ ಪ್ರಶ್ನೆ...
ರಾಜಧರ್ಮ ಪಾಲಿಸಲೇಬೇಕು ನಿಜ... ಮೋದಿ ಅವರು ರಾಜ ಧರ್ಮ ಪಾಲಿಸಿಲ್ಲ ಅಂತ ಹೇಗೆ ಹೇಳುತ್ತೀರ....? ಬಹುಶ ಯಾರೇ ಆಗಲಿ ಒಬ್ಬ ಹೊರಗಿನಿಂದ ನೋಡುವ ವ್ಯಕ್ತಿಗೆ ಮೇಲ್ನೋಟಕ್ಕೆ ಹಿಂದುತ್ವದ ಬಗ್ಗೆ ಮಾತನಾಡುವ ವ್ಯಕ್ತಿ ಗಲಭೆಗೆ ಸಹಕರಿಸಿರಬಹುದು ಅಂತ ಕಾಣಿಸಬಹುದು. ಆದರೆ ಅದು ನಿಜವಲ್ಲ ಎಂದು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನನ್ನು ತಾನು ನಿರಪರಾಧಿ ಎಂದು ಸಾಬೀತುಪಡಿಸಿಕೊಂಡ ಮೇಲೆ ನೀವು ರಾಜಧರ್ಮ ಪಾಲನೆಯಾಗಿಲ್ಲ ಅಂತ ಹೇಗೆ ಹೇಳುತ್ತೀರ...? ರಾಜಧರ್ಮ ಪಾಲನೆಯಾಗಿಲ್ಲ ಅಂದಾಗಿದ್ದರೆ ಕೋರ್ಟು ಅವರಿಗೆ ಶಿಕ್ಷೆ ನೀಡಲೇಬೇಕಿತ್ತು. ವಾಜಪೇಯಿ ರಾಜಧರ್ಮದ ಪಾಲನೆಯಾಗಬೇಕು ಅಂತ ಹೇಳಿದರೇ ಹೊರತು, ಮೋದಿ... ನೀನು ರಾಜಧರ್ಮದ ಪಾಲನೆ ಮಾಡಿಲ್ಲ ಅಂತ ಎಲ್ಲೂ ಹೇಳಿಲ್ಲ. ಒಂದು ವೇಳೆ ಅವರಿಗೂ ಆ ಅನುಮಾನ ಬಂದಿದ್ದರೂ ಅದೇನೂ ಆಶ್ಚರ್ಯವಲ್ಲ ಮಾನವ ಸಹಜ ಗುಣ ಅಂತಾನೇ ಇಟ್ಟುಕೊಳ್ಳಿ ಆದರೆ ಆ ಮಾತನ್ನ ಈಗ ನಾವ್ಯಾರು ಹೇಳುವಂತಿಲ್ಲ ಕಾರಣ ಕೋರ್ಟು ರಾಜಧರ್ಮದ ಪಾಲನೆಯಾಗಿದೆ ಅನ್ನುವುದನ್ನೇ ಎತ್ತಿ ಹಿಡಿದದ್ದು.

೨. ಪ್ರಣಬ್ ಮುಖರ್ಜಿಗೆ ಪ್ರಧಾನ ಮಂತ್ರಿ ಪಟ್ಟ ತಪ್ಪಿಸಿದ್ದು ಗಾಂಧಿ ಕುಟುಂಬ ಎನ್ನುವ ಹೇಳಿಕೆ ನೀಡಿ ವೈಯಕ್ತಿಕ ನಿಂದನೆ ಮಾಡಿದರು ಮೋದಿ ಅಂದಿರಿ....
ಪ್ರಣಬ್ ಮುಖರ್ಜಿ ಕುರಿತಾದ ವಿಷಯ ವೈಯಕ್ತಿಕ ನಿಂದನೆ ಹೇಗಾಯ್ತು...? ಗಾಂಧಿ ಕುಟುಂಬದ ಭಕ್ತರನ್ನ ಬಿಟ್ಟರೆ ನಾನು ಮಾತನಾಡಿಸಿದ ಹೆಚ್ಚಿನ ಜನ... ಯಾಕೆ ಬಿಜೆಪಿಯ ಬೆಂಬಲಿಗರೇ ಹೇಳುವಂತೆ ಕಾಂಗ್ರೆಸ್ ನಲ್ಲಿ ಈಗಿರುವ ಮಟ್ಟಿಗೆ ಪ್ರಣಬ್ ಮುಖರ್ಜಿ ನಿಜಕ್ಕೂ ಅರ್ಹ ಪ್ರಧಾನಮಂತ್ರಿಯ ಅಭ್ಯರ್ಥಿ... ಯಾಕೆ ರಾಷ್ಟ್ರಪತಿಯ ಪಟ್ಟ ಕಟ್ಟಲಾಯಿತು ಅವರಿಗೆ....? ರಾಹುಲ್ ಗಾಂಧಿಗೆ ಪಟ್ಟ ಸಿಗಲು ಇದ್ದ ಅಡ್ಡಿ ಎಂದು ತಾನೇ....ಅದನ್ನ ಹೇಳಿದಗ ಅದು ವೈಯಕ್ತಿಕ ನಿಂದನೆ ಹೇಗಾದೀತು ಸ್ವಾಮೀ... ಸತ್ಯ ಕಹಿಯಾಗೇ ಇರೋದು ಬೇಕಿದ್ದರೆ ನೀವೇ ನಿಮ್ಮ ಕಾಂಗ್ರೆಸ್ ಮಿತ್ರರ ಬಳಿ ಕೇಳಿ ನೋಡಿ..

೩. ಮೋದಿಜಿ ಅಡ್ವಾಣಿ ಮತ್ತು ಕೇಶೂಭಾಯಿ ಅವರಿಂದ ಅಧಿಕಾರ ಕಿತ್ತುಕೊಂಡರು ಅನ್ನೋ ಮಾತು
ಅಡ್ವಾಣೀಜಿಗೆ ಮತ್ತು ಕೇಶೂ ಬಾಯಿ ಪಟೇಲ್ಗೆ ಪಟ್ಟ ತಪ್ಪಲು ಕಾರಣ ಮೋದಿ ಕಾರಣ ಅನ್ನೋ ನಿಮ್ಮ ಮಾತು ಹಾಸ್ಯಾಸ್ಪದ ನಾನೊಂದು ಉದಾಹರಣೆಯ ಮೂಲಕ ನಿಮ್ಮಲ್ಲಿ ಪ್ರಶ್ನೆ ಕೇಳುತ್ತೇನೆ.... ನೀವು ಕ್ರಿಕೆಟ್ ಆಟ ನೋಡುತ್ತಿರಬಹುದು.... ಗೌತಮ್ ಗಂಭೀರ್ ನನ್ನು ಹೊರಗಿಟ್ಟು ಶಿಖರ್ ಧವನ್ ನನ್ನು ಹಾಕಿಕೊಳ್ಳಲಾಯಿತು.... ನಿಮ್ಮ ಪ್ರಕಾರ ಗೌತಮ್ ಗಂಭೀರ್ ಸ್ಥಾನ ಕಳಕೊಂಡಿದ್ದೋ ಶಿಖರ್ ಧವನ್ ಪಡಕೊಂಡಿದ್ದೋ...? ಒಬ್ಬ ವ್ಯಕ್ತಿ ತನ್ನ ಸಾಧನೆಯಿಂದ ತಾನು ಮೇಲೆ ಬಂದ ಅಂತಾದರೆ ಆತ ಇನ್ನೊಬ್ಬರ ಸ್ಥಾನ ಕಸಿದುಕೊಂಡ ಅಂತ ಹೇಳೋದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ತಾನೇ ಇದಕ್ಕೆ ನಾನೇನು ಹೇಳಲಿ.... ಮೋದಿ ಅವರಾಗಿ ತನಗೆ ಪ್ರಧಾನಿ ಪಟ್ಟ ಬೇಕು ಅಂತ ಹೇಳಿದ ದಾಖಲೆ ಎಲ್ಲಿದೆ ಹೇಳಿ ..... ಬಿಜೆಪಿಯೊಳಗಿನ ಬಹು ಜನರ ಆಯ್ಕೆ ಅದು.... ಜನರ ಆಯ್ಕೆಯನ್ನ ನೀವು ಮೋದಿ ಮೇಲೆ ಆರೋಪಿಸಿದರೆ ಹೇಗೆ...?

೪. ರಾಜಧರ್ಮ ಪಾಲನೆಯಾಗಿಲ್ಲ ಎಂದು ವಾಜಪೇಯಿ ಪತ್ರ ಬರೆದಿದ್ದಾರೆ ಅಂದಿರಿ...
ವಾಜಪೇಯಿಯವರ ಲೆಟರ್ ಬಗ್ಗೆ ಹೇಳೋದಾದರೆ ಆಗ ಅದನ್ನ ಲಘುವಾಗಿ ತೆಗೆದುಕೊಳ್ಳಲಾಗದೇ ಇದ್ದಿರಬಹುದು ಆದರೆ ಈಗ ಹಾಗಲ್ಲ ಕೋರ್ಟು ತೀರ್ಪು ಬಂದ ಮೇಲೆ ಅದಕ್ಕೆ ಬೆಲೆ ಖಂಡಿತವಾಗಿಯೂ ಇಲ್ಲ. ಬಹುಶ ವಾಜಪೇಯಿ ಅವರನ್ನೇ ಕೇಳಿದರೂ ಅವರು ಇದಕ್ಕೆ ಖಂಡಿತ ಸಮ್ಮತಿಸಿಯಾರು ಅದರಲ್ಲಿ ಸಂಶಯವೇ ಇಲ್ಲ.

೫. ಯಾವುದೋ ಅಂಕಿ ಅಂಶಗಳನ್ನ ತೋರಿಸಿ ಗುಜರಾತ್ ಅಭಿವೃದ್ಧಿ ಆಗಿಲ್ಲ ಅಂದಿದ್ದು.
ಇನ್ನು ನೀವು ಕೊಟ್ಟ ಅಂಕಿ ಅಂಶಗಳಲ್ಲಿ ಹೆಚ್ಚಿನವು 2011ರದ್ದು..... ಈಗ 2014 ಅಲ್ವಾ.... ಇರಲಿ ಬಿಡಿ ನನಗೊಂದು ವಿಷಯ ಹೇಳಿ..... ಇಂತದ್ದನ್ನೆಲ್ಲಾ ನೋಡದೇ ಯಾವುದೇ ಅಂಕಿ ಅಂಶಗಳನ್ನ ಗಣನೆಗೆ ತೆಗೆದುಕೊಳ್ಲದೇ ಹಾಗೇನೇ ವಿಶ್ವಸಂಸ್ಥೆ ಗುಜರಾತ್ ಅನ್ನು ಪ್ರಗತಿ ಸಾಧಿಸುತ್ತಿರುವ ವಿಶ್ವದ ಎರಡನೇ ರಾಜ್ಯ ಅಂತ ಘೋಶಿಸಿ ಬಿಟ್ಟಿತೇ.... ಅಥವಾ ಅವರನ್ನ ಬಿಜೆಪಿಯ ಏಜೆಂಟ್ ಅಂತ ಹೇಳ್ತೀರೇನು...?
ಯಾಕೆ ವಿಶ್ವದ ರಾಷ್ಟ್ರಗಳೆಲ್ಲಾ ಅವರನ್ನ ತಮ್ಮ ದೇಶಕ್ಕೆ ಆಹ್ವಾನಿಸುತ್ತಿದೆ.? ಯಾಕೆ ಮೂರು ಬಾರಿ ಗುಜರಾತಿನ ಜನ ತಮ್ಮ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು ? ಗಲಭೆ ಗಲಭೆ ಎಂದು ಹತ್ತು ವರ್ಷದಿಂದ ಅದೇ ರಾಗವನ್ನ ಹಾಡುತ್ತೀರಲ್ಲ ಯಾಕೆ ಕಳೆದ ಹತ್ತು ವರ್ಷಗಳಲ್ಲಿ ಗಲಭೆಗಳಾಗಿಲ್ಲ...? ನನ್ನ ಮಟ್ಟಿಗೆ ಮೋದಿಯನ್ನ ನೀವು ವಿರೋಧಿಸೋಕೆ ಕಾರಣ ಒಂದೇ ಹಿಂದುತ್ವದ ವಿಚಾರ ಮಾತನಾಡಿದರಲ್ವಾ.... ತಾನೊಬ್ಬ ಹಿಂದೂ ಅಂತ ಹೇಳಿಕೊಂಡರಲ್ವಾ.... ಇದು ನಿಮ್ಮ ಸಮಸ್ಯೆ.... ಪ್ರತಿಯೊಂದು ಕ್ಷೇತ್ರವನ್ನು ಪ್ರತಿಯೊಂದು ಅಂಕಿ ಅಂಶದಲ್ಲೂ ಮೊದಲ ಸ್ಥಾನದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಇಲ್ಲದಿದ್ದರೆ ಇಲ್ಲ ಅನ್ನುವಂತಾದ್ದಕ್ಕೆ ಕಟ್ಟು ಬಿದ್ದರೆ ಅವರ ದೂರದೃಷ್ಟಿಯನ್ನ ನೀವು ನೋಡಲು ಸಾಧ್ಯವೇ ಇಲ್ಲ. ಇರಲಿ ಬಿಡಿ. ನನ್ನ ಗೆಳೆಯ ಗುಜರಾತಿನಲ್ಲೇ ಕೆಲಸಕ್ಕಿದ್ದಿದ್ದು. ಅವನ ಮಾತಿನಲ್ಲಿ ಮೋದಿ ಬಗೆಗೆ ಅಬಿಮಾನ ಕಂಡಿದ್ದೇನೆ. ನನ್ನ ಕಂಪನಿಗೆ ಬಂದಿದ್ದ ಗುಜರಾತಿನ ಲಾರಿಡ್ರೈವರ್ (ಒಬ್ಬ ಮುಸಲ್ಮಾನ) ನ ಮಾತುಗಳಲ್ಲಿ ಮೋದಿಯ ಬಗೆಗಿನ ಪ್ರೀತಿ ಕಂಡಿದ್ದೇನೆ. ಇತ್ತೀಚೆಗಷ್ಟೇ ಪುತ್ತೂರಿನ ಇಂಜಿನಿಯರ್ಸ್ ಎಸೋಸಿಯೇಶನ್ ನ ತಂಡವೊಂದು ಗುಜರಾತ್ ಅಧ್ಯಯನಕ್ಕೆ ಹೋಗಿ ಬಂದು ಅಲ್ಲಿನ ಅಚ್ಚರಿಯ ಬಗ್ಗೆ ಹೇಳಿಕೊಂಡಿರುವುದನ್ನ ನನ್ನ ಮಾವನವರ ಮೂಲಕ ಕೇಳಿಕೊಂಡಿದ್ದೇನೆ.... ಹೀಗೆ ಇವೆಲ್ಲವೂ ಮೋದಿಜಿ ನನ್ನ ದೇಶವನ್ನ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲ ಅನ್ನುವ ನಂಬಿಕೆ ಮೂಡಿಸಿದೆ. ನಮಗೆ ಯಾವುದೋ ದ್ವೇಷ ಇದೆ ಅಂತ ಆ ದ್ವೇಷಕ್ಕೆ ಮಹತ್ವ ಕೊಟ್ಟು ಅದೇ ದೃಷ್ಠಿಯಲ್ಲಿ ನೋಡಿದರೆ ಖಂಡಿತವಾಗಿಯೂ ಮೋದಿ ಒಳ್ಳೆಯವರಾಗಿ ಕಾಣಿಸಲಿಕ್ಕಿಲ್ಲ ಅದಂತೂ ಖಂಡಿತ. ಸಾಧ್ಯವಾಗುವುದಾದರೆ ಆ ದ್ವೇಷದ ದೃಷ್ಟಿಯನ್ನ ಕಳಚಿಟ್ಟು ನೋಡಿ.

ಮೋದಿ ಪ್ರಧಾನಿಯಾಗೋದು ಎಷ್ಟು ಮುಖ್ಯ ಅನ್ನೋದಿಕ್ಕೆ ಸಕಾರಣಗಳುಹೆಸರಾಂತ ಅಂಕಣಕಾರ " ಎಮ್. ವಿ.ಕಾಮತ್ " ಅವರ " ಮೋದಿಗೆ ಪ್ರಧಾನಿ ಹುದ್ದೆ ತಪ್ಪಿಸಲು ವ್ಯವಸ್ಥಿತ ಬ್ಲ್ಯಾಕ್ ಮೇಲ್..ನಿತೀಶ್ ರಾಜಕೀಯದ ಬಣ್ಣ ಬಯಲಾದೀತೇ..." ಅನ್ನೋ ಆರ್ಟಿಕಲ್ ಇಂದಿನ ಉದಯವಾಣಿಯಲ್ಲಿ ಓದಿದೆ. ನಿಜಕ್ಕೂ ಅಂಕಿ ಅಂಶಗಳ ಮೂಲಕ ನಮ್ಮ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಮೋದಿಯ ಕೋಮುವಾದಿ... ಅವರ ಆಡಳಿತದಲ್ಲಿ ದಂಗೆಗಳಾಗಿವೆ... ಅತ ಮೌತ್ ಕಾ ಸೌದಾಗರ್ ಅಂತೆಲ್ಲಾ ಬೊಬ್ಬಿಡೋ ಅಂತ ಕಾಂಗ್ರೆಸ್ ಗೆ ತಮ್ಮ "ಕೈ"ಯ ಹುಣ್ಣನ್ನ ತೋರಿಸಿದ್ದಾರೆ. ಬಹುಷ ಅದೆಷ್ಟೋ ಸಮಯದಿಂದ ಹುಡುಕಾಡುತ್ತಿದ್ದ ಕೋಮು ದಂಗೆಗಳ ಕುರಿತ ಅಂಕಿ ಅಂಶಗಳನ್ನ ಇವರ ಲೇಖನದಲ್ಲಿ ಕಂಡಾಗ ನನಗಾದ ಖುಷಿ ಅಷ್ಟಿಷ್ಟಲ್ಲ......ಇಲ್ಲಿದೆ ನೋಡಿ ಈ ಅಂಕಿ ಅಂಶಗಳು...
1.1964ರಲ್ಲಿ ಬಿಹಾರದ ಜಮ್ಶೆಡ್ ಪುರದಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಸಂಖ್ಯೆ 2000 ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಕೆ.ಬಿ.ಸಹಾಯ್ (ಕಾಂಗ್ರೆಸ್)
2. 1969ರಲ್ಲಿ ಅಹಮದಾಬಾದ್ ನಲ್ಲಿನ ಗಲಭೆಯಲ್ಲಿನ ಸತ್ತವರ ಸಂಖ್ಯೆ 2000. ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಹಿತೇಂದ್ರ ದೇಸಾಯಿ (ಕಾಂಗ್ರೆಸ್)
3. 1980ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಸಂಖ್ಯೆ 200. ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ ನ ವಿ.ಪಿ.ಸಿಂಗ್
4. 1983 ರಲ್ಲಿ ಅಸ್ಸಾಂನಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಸಂಖ್ಯೆ 2,200. ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ ನ ಹಿತೇಶ್ವರ ಸೈಕಿಯಾ.
5. 1984ರ ಸಿಖ್ ದಂಗೆಯಲ್ಲಿನ ಪ್ರತಿಯೊಂದು ಸಾವು ನೋವಿಗೂ ಹೊಣೆ ಬರಿಯ ಕಾಂಗ್ರೆಸಿಗರು.
6. 1992-93 ರ ಮುಂಬಯಿ ಹತ್ಯೆಗಳಾದ ಅಲ್ಲಿ ಮುಖ್ಯಮಂತ್ರಿಗಳಾಗಿದ್ದವರು ಕಾಂಗ್ರೆಸ್ಸಿನ ಸುಧಾಕರ್ ರಾವ್ ನಾಯಕ್
ಇಷ್ಟೊಂದು ಜನ ಕೈ ಪಡೆಯ ಮುಖ್ಯಮಂತ್ರಿಗಳ ಕಾಲದಲ್ಲಿ ಇಷ್ಟೊಂದು ಸಾವು ನೋವುಗಳಾಗಿದ್ದರು ಮೀಡಿಯಾ ಕಂಗಳಿಗೆ ಬರಿಯ ಮೋದಿ ಮಾತ್ರ ಕಾಣಸಿಗುತ್ತಾರೆ ಅನ್ನೋದು ವಿಷಾದನೀಯ ಅಲ್ವಾ. ಪದೇ ಪದೇ ಮೋದಿಯವರನ್ನ ಗೋಳು ಹೊಯ್ದುಕೊಂಡ ಮೀಡಿಯಾಗಳು ಈ ಮುಖ್ಯಮಂತ್ರಿಗಳನ್ನು ಮತ್ತು ಅವರ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ನೆನಪು ನಿಮಗಿದೆಯೇ...?
ಬರಿಯ ದಂಗೆಗಳ ಕುರಿತು ಮಾತ್ರವಲ್ಲ ಅಭಿವೃದ್ದಿಯ ಅಂಕಿ ಅಂಶಗಳನ್ನ ಬಿಹಾರದೊಂದಿಗೆ ಈ ರೀತಿ ತುಲನೆ ಮಾಡುತ್ತಾ ನಿತೀಶ್ ಕುಮಾರ್ ಅವರ ಪ್ರಧಾನಿ ಪಟ್ಟದ ಮಮಕಾರವನ್ನ ಬಯಲು ಮಾಡಿದ್ದಾರೆ.
1. 2001ರಲ್ಲಿ ಗುಜರಾತ್ ನಲ್ಲಿದ್ದ 17,227ರಷ್ಟಿದ್ದ ವ್ಯಕ್ತಿಗತ ಆದಾಯ ಇಂದು 57,508 ಅದೇ ಬಿಹಾರದಲ್ಲಿ 7,914ರಿಂದ 15,268. ಏರಿಕೆಯ ವ್ಯತ್ಯಾಸ ಅಲ್ಲಿ 40,281 ಆದರೆ ಇಲ್ಲಿ ಬರಿಯ 7,354
2. 2001ರಲ್ಲಿ ಗುಜರಾತ್ ನ ಬಡತನದ ಪ್ರಮಾಣ ಶೇ. 23 ಈಗ ಶೇ. 16.8 ಅದೇ ಬಿಹಾರದಲ್ಲಿ 2005 ರಲ್ಲಿ ಬಡತನದ ಪ್ರಮಾಣ ಶೇ.54.4 ಈಗ ಶೇ.53.1
3. 2001ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣ ಶೇ. 37.22 ಈಗ ಶೇ. 7.9 ಅದೇ ಬಿಹಾರದಲ್ಲಿ ಶೇ.74.69 ರಿಂದ ಶೇ. 55.14ಕ್ಕಷ್ಟೇ ಇಳಿದಿದ್ದು.
ಬಹುಷ ಇನ್ನಾದರೂ ಜನರಿಗೆ ಅರ್ಥವಾದೀತು ಅಂದುಕೊಂಡಿದ್ದೇನೆ. ಭಾರತಕ್ಕೆ ಮೋದಿ ಪ್ರಧಾನಿಯಾಗುವುದು ಎಷ್ಟು ಮುಖ್ಯ ಎಂದು ತಮ್ಮ ಲೇಖನದ ಮುಖಾಂತರ ಜನರಿಗೆ ತಿಳಿಹೇಳಿದ ಹಿರಿಯ ಅಂಕಣಕಾರ ಎಮ್. ವಿ.ಕಾಮತ್ ಅವರಿಗೆ ನಿಜಕ್ಕೂ ನಾನು ಆಭಾರಿ...

ಭಾಷಾಭಿಮಾನ ಅನ್ನೋದು ಬರೀ ಒಂದು ದಿನಕ್ಕೆ ಸೀಮಿತವಾಗದಿರಲಿ.....ಸಂಸ್ಕೃತ ಭಾಷೆಯಲ್ಲೊಂದು ಶ್ಲೋಕ ಇದೆ...
ಮಾತೃ ಭಾಷಾಂ ಪರಿತ್ಯಜ್ಯ
ಯೋsನ್ಯಭಾಷಾಮುಪಾಸತೇ |
ತತ್ರ ಯಾಂತಿ ಹಿ ತೇ ದೇಶಾಃ
ಯತ್ರ ಸೂರ್ಯೋ ನ ಭಾಸತೇ...
ಅಂದರೆ " ಯಾರು ತಮ್ಮ ಮಾತೃಭಾಷೆಯನ್ನು ಕೈಬಿಟ್ಟು ಅನ್ಯಭಾಷೆಯನ್ನು ಆರಾಧಿಸುತ್ತಾರೋ ಅವರು ಅಂಧಕಾರಮಯ ಲೋಕಕ್ಕೆ ಹೋಗುತ್ತಾರೆ " ಅಂತ. ಯಾಕೀ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇನೆ... ಅನ್ನೋದು ಖಂಡಿತ ನಿಮಗೆಲ್ಲಾ ಗೊತ್ತಾಗಿದ್ದಿರಬಹುದು... ಇವತ್ತು ನವಂಬರ್ ಒಂದನೇ ತಾರೀಖು.... ಕರ್ನಾಟಕದಲ್ಲಿ ಹೆಚ್ಚಿನ ಜನರ ಹೃದಯದಲ್ಲಿ ಒಂದು ದಿನದ ಜೀವಿತಾವಧಿಯ ಕನ್ನಡ ಕುಸುಮವೊಂದು ಅರಳುವ ದಿನ.... ಕಷ್ಟಪಟ್ಟು ಅಷ್ಟೋ ಇಷ್ಟೋ ಕನ್ನಡ ಮಾತಾಡಿ ಸೂರ್ಯ ಮುಳುಗಿದ ಮೇಲೆ.... ಓಕೆ.... ಬಾಯ್ ಗುಡ್ ನೈಟ್ ಅನ್ನುತ್ತಾ ಈ ಕನ್ನಡ ಕುಸುಮವನ್ನ ತಾವೇ ಹೊಸಕಿ ಹಾಕೋ ದಿನ ಅಲ್ವಾ... ಅದಕ್ಕೆ ಕನ್ನಡದ ಬಗ್ಗೆ ಒಂದಷ್ಟು ಮಾತಾಡೋಣ ಅಂತ.. ನಾನಿಲ್ಲಿ ಕನ್ನಡದ ಪ್ರಾಧಾನ್ಯತೆಯ ಬಗೆಗೆ ವೈಶಿಷ್ಟ್ಯತೆಯ ಬಗೆಗೆ ಪ್ರಬಂಧ ಮಂಡಿಸಲು ಅಥವ ಕನ್ನಡವನ್ನು ಕಡ್ದಾಯವಾಗಿ ಬಳಸಲೇ ಬೇಕು, ಅನ್ನುವ ಒತ್ತಾಯದ ಆಶಯ ಇಟ್ಟುಕೊಂಡು ಬರೆಯುತ್ತಿಲ್ಲ. ಒಂದೆರಡು ಸಣ್ಣ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ...
ಭಾಷೆ ಮಾನವನ ಅಗತ್ಯತೆಗಳಲ್ಲೊಂದು ಅದಿಲ್ಲದೆಯೂ ಬದುಕಬಹುದಾದರೂ.... ಭಾಷೆಯಿದ್ದರೆ ಬದುಕು ಇನ್ನಷ್ಟು ಸುಂದರವಾಗುತ್ತದೆ... ಸಹಜವಾಗಿಯೇ ಪ್ರತಿಯೊಬ್ಬರಿಗೂ ತನ್ನದೇ ಆದ ಭಾಷೆಯೊಂದಿರುತ್ತದೆ... ಹುಟ್ಟಿದ ಕ್ಷಣದಿಂದ ಬೆಳೆಯುತ್ತಾ ಬಂದಂತೆ ಮಗು ತೊದಲುತ್ತಾ ತನ್ನ ಭಾವನೆಯನ್ನು ಯಾವ ಭಾಷೆಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸುತ್ತದೋ ಅದೇ ಆ ಮಗುವಿನ ಮಾತೃ ಭಾಷೆ... ಸಹಜವಾಗೇ ಅದು ತನ್ನ ತಂದೆ ತಾಯಿಯರ ಅಥವಾ ಪೋಷಕರ ಭಾಷೆಯನ್ನೇ ಕಲಿತುಕೊಳ್ಳುವುದು... ಬೆಳೆಯುತ್ತ ಹೋದಂತೆ ಆ ಮಗುವಿಗೆ ತನ್ನ ಸುತ್ತಮುತ್ತಲಿರುವ ಇನ್ನಿತರ ಭಾಷೆಗಳ ಪರಿಚಯವಾಗುತ್ತದೆ...
ಇನ್ನುಳಿದ ಭಾಷೆಗಳ ಪ್ರಭಾವ ಅದೆಷ್ಟೇ ಇರಲಿ ನಾವು ನಮ್ಮ ಮಾತೃಭಾಷೆಯ ಅವಗಣನೆ ಮಾಡುವುದು ಸರಿಯಲ್ಲ ಅನ್ನೋದು ನನ್ನೀ ಲೇಖನದ ಮೂಲ ಉದ್ದೇಶ. ಪ್ರಸ್ತುತ ಕನ್ನಡಿಗರಿಗೆ ಕನ್ನಡ ಮಾತೃಭಾಷೆಯಾದರೂ ಜಾಗತೀಕರಣದ ಪ್ರಭಾವಕ್ಕೊಳಗಾಗಿ ಆಂಗ್ಲ ಭಾಷೆಯ ವ್ಯಾಮೋಹ ಅತಿಯಾಗಿದೆ ಅಂದರೆ ತಪ್ಪಲ್ಲ... ಈ ವ್ಯಾಮೋಹ ಎಷ್ಟರ ಮಟ್ಟಿನದೂ ಅಂದರೆ ಆಂಗ್ಲ ಭಾಷೆಯೇ ಅತ್ಯುನ್ನತ, ಅದಿಲ್ಲವಾದರೆ ನಮಗೆ ಈ ಸಮಾಜದಲ್ಲಿ ಬದುಕಲು ಸಾಧ್ಯವೇ ಇಲ್ಲ ಅನ್ನುವಷ್ಟಾಗಿದೆ.. ಇಂಥಾ ಕಲ್ಪನೆ ಅವರ ತಲೆಯೊಳಗೆ ಹೇಗೇ ಬಂತೋ ದೇವರೇ ಬಲ್ಲ... ಆಂಗ್ಲ ಭಾಷೆಯ ದಾಸ್ಯಕ್ಕೊಳಗಾಗದೆ ತಮ್ಮದೇ ಮಾತೃಭಾಷೆಯನ್ನುಪಯೋಗಿಸಿ ಜರ್ಮನಿ, ಜಪಾನ್ ನಂತಹ ದೇಶಗಳು ಪ್ರಗತಿಯನ್ನು ಹೊಂದಿದೆ... ಇರಲಿ ಬಿಡಿ ಆಂಗ್ಲ ಭಾಷೆಯೂ ಬೇಕು ಅಂತಲೇ ಇಟ್ಟುಕೊಳ್ಳೋಣ ಆದರೆ ಅದರ ಬಳಕೆ ಅಗತ್ಯವಿದ್ದಷ್ಟು ಮಾತ್ರ ಇರಬೇಕೇ ಹೊರತು ನಮ್ಮದನ್ನು ಅಳಿಸಿ ಅದನ್ನು ಉಳಿಸುವುದು ಮೌಢ್ಯವೇ ಅಲ್ವಾ...
ಈ ದಿನಗಳಲ್ಲಿ ಕಾಣಸಿಗುವ ಮತ್ತು ನನಗೆ ತುಂಬಾನೇ ಬೇಸರ ತರಿಸುವ ವಿಷಯ...ವಿದ್ಯಾರ್ಥಿಗಳಲ್ಲಿ ಮತ್ತು ಅವರ ತಂದೆ ತಾಯಿಗಳಲ್ಲಿ ಆಂಗ್ಲ ಭಾಷೆಯ ಬಗೆಗೆ ಅತಿಯಾದ ಆಸಕ್ತಿ. ಕೂಲಿ ಕೆಲಸ ಮಾಡುವವನೂ ಕೂಡ ತನ್ನ ಮಗನನ್ನು ಅಂಗ್ಲ ಮಾಧ್ಯಮ ಶಾಲೆಗೆ ಸೇರಿಸಬೇಕೂ ಅಂತಾನೇ ಬಯಸೋದು... ಕಳುಹಿಸುವವರ ಮಾತುಕತೆಯೆಲ್ಲವೂ ಆಂಗ್ಲಮಯ... ಶುಭಹಾರೈಕೆಗಳಿಗೂ ಆಂಗ್ಲ ಪದಗಳ ಬಳಕೆ ನನಗೆ ಮತ್ತಷ್ಟು ಹಿಂಸೆಯನ್ನು ಕೊಡುತ್ತದೆ. ಬೆಳಗಾಗೆದ್ದರೆ ಸಾಕು ಎಲ್ಲರ ಬಾಯಲ್ಲೂ " ಗುಡ್ ಮಾರ್ನಿಂಗ್ " ಅಂತಾನೇ ಬರೋದು... ಸರಿ ಇದನ್ನು ಬಳಸಿದ ಕೂಡಲೇ ನಿಮ್ಮ ಆಂಗ್ಲ ಭಾಷಾ ಜ್ಞಾನ ಹೆಚ್ಚುತ್ತದೆಯೇ..? ಗುಡ್ ಮಾರ್ನಿಂಗ್ ಅಂದರೆ ಶುಭೋದಯ ಅಂತ ಗೊತ್ತೇ ಇರುತ್ತೆ. ಅದರ ಬಗ್ಗೆ ಕಲಿತದ್ದು ಆಯಿತು... ನಮ್ಮ ನಮ್ಮೊಳಗೆ ಅದರ ಪ್ರಯೋಗದಿಂದ ಆಂಗ್ಲ ಶಬ್ದಭಂಡಾರ ಹೆಚ್ಚುತ್ತದೆಯೇ...? ಇಲ್ಲ ತಾನೇ ಹಾಗಿದ್ದ ಮೇಲೂ ಈ ಪದಪ್ರಯೋಗಗಳೇಕೆ...? ನಾವು ಈ ಪದ ಬಳಸದೆ ಇರುವುದರಿಂದ ಈ ಪದಗಳ ನಾಶ ಆಗೋದಂತೂ ಇಲ್ಲ ಕಾರಣ ಜಗತ್ತಿನಲ್ಲಿ ಇಂಗ್ಲಿಷನ್ನು ಮಾತೃಭಾಷೆಯಾಗಿ ಬಳಸುವವರು ಇದ್ದೇ ಇರುತ್ತಾರೆ... ಆದರೆ ನಾಶವಾಗೋದು ನಮ್ಮದೇ ಪದಗಳಾದ ಶುಭೋದಯ , ಶುಭರಾತ್ರಿ... ಇತ್ಯಾದಿ, ಇನ್ನೂ ಮುಂದುವರಿದರೆ ನಮ್ಮ ಹಬ್ಬಗಳಿಗೆ ಶುಭಾಶಯ, ನಮ್ಮ ಹುಟ್ಟು ಹಬ್ಬಗಳಿಗೆ ಶುಭಾಷಯ ನಮ್ಮ ಇನ್ನಿತರ ಶುಭ ಸಮಾರಂಭಗಳಿಗೆ ಆಂಗ್ಲ ಪದಗಳ ಬಳಕೆ ಯಾಕೆ ಬೇಕು...? ಇವುಗಳ ಅರ್ಥ ಸಾಮಾನ್ಯರಿಗೂ ಗೊತ್ತು. ಇವುಗಳನ್ನ ಅಗತ್ಯ ಬಿದ್ದಾಗ ನೆನಪಿಸಿಕೊಂಡು ಬಳಸಬಹುದು.... ಬಳಸದೇ ಇದ್ದರೆ ಮರೆತು ಹೋದಿತು ಎನ್ನುವ ಸಮಸ್ಯೆ ಇಲ್ಲ. ಯಾಕೆಂದರೆ ಅಷ್ಟೊಂದು ಸರಳ ಇದು... ಆದರೆ ಇದರ ಬಳಕೆ ಯಾವ ರೀತಿ ವ್ಯಾಪಕವಾಗಿ ಆಗುತ್ತಾ ಇದೆ ಅಂದರೆ... ಬಾಯಿ ತೆರೆದಂತೆ ಇದೇ ಪದ ಬರುತ್ತದೆಯೇ ಹೊರತು ನಮ್ಮದಾದ ಕನ್ನಡ ಪದಗಳೇ ಬರುತ್ತಿಲ್ಲ . ಇದೇ ರೀತಿ ಮುಂದುವರಿದರೆ ಒಂದೊಂದಾಗೇ ನಮ್ಮ ಪದಗಳು ನಮ್ಮ ಕೈತಪ್ಪಿ ಹೋಗುವುದಂತೂ ಖಂಡಿತ. ಆಂಗ್ಲರ ದಾಸ್ಯಕ್ಕೆ ನಮ್ಮನ್ನ ನಾವು ಒಳಪಡಿಸಿದ್ದಂತೆ ನಮ್ಮ ಭಾಷೆಯನ್ನೂ ಆಂಗ್ಲ ಭಾಷೆಯ ದಾಸ್ಯಕ್ಕೊಳಪಡಿಸಿ ಬಿಟ್ಟೇವು...
ಕನ್ನಡಿಗರಲ್ಲಿ ನನ್ನ ಸಣ್ಣ ವಿನಂತಿ ಇಷ್ಟೇ... ಆಂಗ್ಲ ಭಾಷೆಯ ಬಳಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಇರಲಿ. ಯಾಕೆಂದರೆ ಈಗಾಗಲೇ ಕೆಲವೊಂದು ಆಂಗ್ಲ ಪದಗಳು ನಮ್ಮ ಕನ್ನಡದ್ದೇ ಆಗಿ ಹೋದಂತಿದೆ. ಕನ್ನಡ ಭಾಷೆಯನ್ನು ನಾವು ಕನ್ನಡಿಗರಷ್ಟೇ ಬಳಸೋದು. ಆದರೆ ಆಂಗ್ಲ ಭಾಷೆಗೆ ಹಾಗಲ್ಲ, ಆ ಭಾಷೆಯನ್ನು ಮಾತೃ ಭಾಷೆಯಾಗಿ ಹೊಂದಿರುವವರೆಲ್ಲಾ ಉಳಿಸಿಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ನನ್ನ ಮನೆ... ನನ್ನ ಸಂಸಾರ... ನನ್ನ ಮಕ್ಕಳು.. ಹೀಗೆಲ್ಲಾ ಹೇಳುವ ನಾವು ನನ್ನ ಭಾಷೆ ಅಂತ ಯಾಕೆ ಅಭಿಮಾನ ತೋರುವುದಿಲ್ಲ....?
ನಿಜವಾಗಿಯೂ ಮಾನವ ಸಮುದಾಯದಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ. ಇಂತಹ ಮಾತೃ ಸ್ಥಾನವನ್ನು ಎಲ್ಲವಕ್ಕೂ ನಾವು ಹೋಲಿಸೋದಿಲ್ಲ. ಹೋಲಿಸುವುದಿದ್ದರೆ ಅದು ನಾವು ಹುಟ್ಟಿ ಬೆಳೆದ ನಾಡಿಗೆ ಮತ್ತು ಹುಟ್ಟಿನಿಂದ ನಾವಾಡಿದ ಭಾಷೆಗೆ. ಆ ಅರ್ಥದಲ್ಲಿ ತಾಯಿಗೆ ಕೊಟ್ಟಷ್ಟೇ ಬೆಲೆ ನಾವು ನಮ್ಮ ಭಾಷೆಗೂ ಕೊಡಬೇಕಲ್ವಾ...ಮುಂದಿನ ಪೀಳಿಗೆಯವರಲ್ಲಿ ಕಂಡು ಬರುತ್ತಿರುವ ಆಂಗ್ಲ ಭಾಷಾ ವ್ಯಾಮೋಹ ಮತ್ತು ಕನ್ನಡದ ಬಗೆಗಿನ ತಾತ್ಸಾರದ ಬಗ್ಗೆ ಯೋಚಿಸುವಾಗ ಬೇಸರವಾದರೂ.. ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ... ತಾಯಿಯನ್ನೇ ವೃದ್ಧಾಶ್ರಮಕ್ಕೆ ಬಿಟ್ಟು ಬರೋ ಜನರಿರುವಾಗ ಮಾತೃ ಭಾಷೆಯನ್ನು ಸದಾ ತಮ್ಮ ಜೊತೆಗಿರಿಸುವ ಮನಸ್ಸು ಹೇಗೆ ತಾನೇ ಮಾಡಿಯಾರು...?
ಆದರೂ ಎಲ್ಲೋ ಮನಸ್ಸಿನ ಮೂಲೆಯಲ್ಲೊಂದು ಆಸೆ... ಜನ ಬದಲಾದಾರೂ ಅಂತ. ಮುಂದಾದರೂ ಜನರಿಗೆ ಮಾತೃಭಾಷೆಯ ಮಹತ್ವದ ಅರಿವು ಉಂಟಾಗಲಿ... ಪ್ರತಿ ದಿನವೂ ನವಂಬರ್ ಒಂದಾಗಲೀ ಎಂದೇ ತಾಯಿ ಭುವನೇಶ್ವರಿಯನ್ನು ಬೇಡಿಕೊಳ್ಳುತ್ತೇನೆ.

ಭಾಂಧವ್ಯಗಳ ಬೆಸೆಯುತಿದ್ದ ಬೇಸಿಗೆ ರಜೆ.....ಬೇಸಿಗೆಯ ರಜೆ ಅಂತಂದರೇನೆ ಸಾಕು ಮನದ ತುಂಬೆಲ್ಲಾ ಖುಶಿಯ ವಾತಾವರಣ. ಎಪ್ರಿಲ್ 10 ರ ಫಲಿತಾಂಶದ ದಿನದಿಂದ ಶುರುವಾಗುತ್ತಿದ್ದ ಈ ಸಡಗರ ಸರಿ ಸುಮಾರು ಐವತ್ತು ದಿನಗಳವರೆಗೆ ವಿಸ್ತರಿಸುತಿತ್ತು. ಸಾಮಾನ್ಯವಾಗಿ ನಾವೆಲ್ಲ " ದೊಡ್ದ ರಜೆ " ಅಂತಾನೇ ಕರೆಯುತಿದ್ದುದು. ಇನ್ನೊಂದು ಮದ್ಯಾವಧಿ ರಜೆ, ಈಗ ಬಹುಶ ಅದು ಕ್ರಿಸ್ ಮಸ್ ರಜೆ ಆಗಿದೆ. ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅದು ಕ್ರಿಸ್ ಮಸ್ ರಜೆ ಆಗುತ್ತಿರಲಿಲ್ಲ ಕಾರಣ ಈ ರಜೆ ಅಕ್ಟೋಬರ್ ತಿಂಗಳಲ್ಲಿ ಬರುತಿತ್ತು. ಹೆಚ್ಚಾಗಿ ನವರಾತ್ರಿ ಬರುತ್ತಿದುದು ಇದೇ ಸಂಧರ್ಭದಲ್ಲಿ. ಈ ಮಧ್ಯಾವಧಿ ರಜೆಯನ್ನ ಸಣ್ಣ ರಜೆ ಅಂತ ಕರೆಯದಿದ್ರೂ ಬೇಸಿಗೆಯ ರಜೆಯನ್ನ " ದೊಡ್ಡ ರಜೆ " ಅಂತಾನೇ ಕರೆಯುತ್ತಿದ್ದೆವು.
ದೊಡ್ಡ ರಜೆ ಬಂತೆಂದರೆ ಸಾಕು ಚಿಣ್ಣರಿಂದ ಹಿಡಿದು ಹಿರಿಯವರೆಲ್ಲರಿಗೂ ಸಡಗರ. ಶಾಲಾ ಮಕ್ಕಳಿಗಂತೂ " ಅಜ್ಜಿ ಮನೆ" ಗೆ ಹೋಗೋ ಕಾತರ. ಅಜ್ಜಿ ಮನೆ ಅಂತಂದ ಕೂಡಲೇ ನನಗೆ ನಾ ಕಲಿತ ಪಾಠವೊಂದರ ಅಸ್ಪಷ್ಟ ನೆನಪು ಹಾದು ಹೋಗುತ್ತದೆ, ಆದರೆ ಅಜ್ಜಿ ಮನೆಗೆ ಹೊರಟ ಮಕ್ಕಳು ಎತ್ತಿನ ಗಾಡಿಯಲ್ಲಿ ಹಳ್ಳಿಯ ಸೇತುವೆಯೊಂದನ್ನು ದಾಟಿ ಹೋಗುತ್ತಿದ್ದ ಚಿತ್ರ ಮಾತ್ರ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹೆಚ್ಚಾಗಿ ದೊಡ್ದ ರಜೆಯಲ್ಲಿ ಮಕ್ಕಳೆಲ್ಲರೂ ತಮ್ಮ ತಮ್ಮ ಅಜ್ಜಿ ಮನೆಗೆ ಹೋಗೋದು ಅಲಿಖಿತ ನಿಯಮ. ಪರಿವಾರ ಪೂರ್ತಿ ಹೋಗದಿದ್ದರೂ ಅಪ್ಪ ಅಮ್ಮ ಸೇರಿ ಮಕ್ಕಳನ್ನ ಅಜ್ಜಿ ಮನೆಯಲ್ಲಿ ಬಿಟ್ಟಾದರೂ ಬರುತ್ತಿದ್ದರು. ಅಜ್ಜಿ ಮನೆಗೆ ಹೋಗೋದು ವಿಳಂಬವಾದರೆ ಅದೇನು ರಂಪಾಟ ಅಂತೀರಾ... ಅದೆಷ್ಟೋ ಅಮ್ಮಂದಿರು " ಒಮ್ಮೆ ಕರ್ಕೊಂಡು ಹೋಗಿ..." ಅಂತ ಸುಸ್ತಾಗಿ ನುಡಿಯುತ್ತಿದ್ದುದನ್ನ ನೀವೂ ಕೇಳಿರಬಹುದು. ಅಜ್ಜಿ ಮತ್ತು ಮೊಮ್ಮಕ್ಕಳ ಭಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದ್ದುದು ಈ ದೊಡ್ಡ ರಜೆಯಲ್ಲಿ. ಈ ಮಕ್ಕಳಿಗೆ ತಿಂಡಿ ತಿನಿಸೇ ಪ್ರಿತಿಯ ಸಂಕೇತ. ತನ್ನ ಕರೆದು ತಿಂಡಿ ಕೊಟ್ಟರೆ ಸಾಕು ನನ್ನ ಅಜ್ಜಿ ನನ್ನನ್ನು ಎಷ್ಟೊಂದು ಪ್ರೀತಿಸುತ್ತಾರೆ ಗೊತ್ತಾ ಅಂದು ಬಿಡುತ್ತಾರೆ. ಆದರೆ ನಿಜವಾಗಿ ಅಜ್ಜಿಯ ಪ್ರೀತಿಯನ್ನ ತಿನಿಸಿನ ಮೂಲಕ ಅಳೆಯೋಕೆ ಸಾಧ್ಯವೇ..? ಆದರೇನು ಮಾಡೋದು ಮಕ್ಕಳಿಗೆ ಅರ್ಥವಾಗೋದೇ ಅಷ್ಟು . ಒಂದಷ್ಟು ತಿಂಡಿ ಕೊಡೋದು, ತಪ್ಪಿದ್ದರೂ ಬೈಯದೇ ಇರೋದು, ಅಪ್ಪ ಅಮ್ಮನ ಹೊಡೆತವನ್ನ ತಪ್ಪಿಸೋದು ಇದೇ ಪ್ರೀತಿಯ ದ್ಯೋತಕ . ಈ ಅಜ್ಜಿ ಮೊಮ್ಮಕ್ಕಳ ಭಾಂಧವ್ಯದ ಹೂ ಪೂರ್ತಿಯಾಗಿ ಅರಳುವುದು ಈ ದೊಡ್ದ ರಜೆಯಲ್ಲೇ ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಬೇಸರ ಏನಂದರೆ ನನಗೆ ಈ ಭಾಂಧವ್ಯದ ರುಚಿ ಸಿಕ್ಕಿರಲೇ ಇಲ್ಲ. ಕಾರಣ ನಾನು ಹುಟ್ಟುವಷ್ಟರಲ್ಲಿ ಎರಡು ಕಡೆಯ ಅಜ್ಜ ಅಜ್ಜಿಯರು ಸ್ವರ್ಗ ಸೇರಿದ್ದರು.
ಇನ್ನು ಪರವೂರಿನಲ್ಲಿ ನೆಲೆಸುತ್ತಿದ್ದ ಬಂಧುಗಳು ಕೂಡ ಊರಿಗೆ ಬರುತ್ತಿದ್ದುದು ದೊಡ್ದ ರಜೆಯಲ್ಲೇ. ರಜೆ ಪಡೆಯಲು ಸಾಧ್ಯವಾಗೋ ದುಡಿಯುವ ಗಂಡಸರು ಊರಿಗೆ ಬರುತ್ತಿದ್ದರು , ಸಾಧ್ಯವಾಗಿಲ್ಲ ಅಂತಾದರೆ ನಗರದಲ್ಲಿ ಕೆಲವು ದಿನಗಳ ಮಟ್ಟಿಗೆ ಅವರು ಒಂಟಿ. ಕಾರಣ ತಾಯಿ ಮಕ್ಕಳಂತೂ ಊರಿಗೆ ಬರೋದು ಗ್ಯಾರಂಟಿ ಅಲ್ವಾ. ಅವರಲ್ಲೂ ಸಂಭ್ರಮ... ಊರಿನವರಲ್ಲೂ ಸಂಭ್ರಮ. ಅದೇಷ್ಟೋ ಸಮಯದ ಬಳಿಕ ಒಬ್ಬರನ್ನೊಬ್ಬರು ಪರಸ್ಪರ ನೋಡಿಕೊಳ್ಳುವ ತವಕ. ನಮ್ಮ ಮನೆಗೆ ನಮ್ಮ ಚಿಕ್ಕಮ್ಮ ಮತ್ತು ಅಕ್ಕ , ಅಣ್ಣ ಬರುತ್ತಿದ್ದರು. ಆ ನಸು ಬೆಳಕಿನ ಹೊತ್ತಿಗೆ ರಿಕ್ಷದ ಸದ್ದಾಯಿತೆಂದರೆ ಸಾಕು ಬೇಗನೆ ಬಾಗಿಲು ತೆರೆದು ಅವರ ದೊಡ್ದ ದೊಡ್ಡ ಸೂಟ್ ಕೇಸನ್ನ ಕಷ್ಟಪಟ್ಟು ಒಳಗೆ ತಂದಿಡೋ ಖುಷಿ ಮತ್ಯಾವುದರಲ್ಲೂ ಸಿಗುತ್ತಿರಲಿಲ್ಲ. ಅವರು ತರೋ ಅಲ್ಲಿನ ಸಿಹಿ ತಿಂಡಿಗಳು ಚಪ್ಪರಿಸೋ ತವಕ. ನನಗೀಗಲೂ ನೆನಪಾಗುತ್ತದೆ ಆ ಮಧುರ ಕ್ಷಣಗಳು ಅವರು ಬರುತಿದ್ದಾಗ ಇನ್ನೂ ಸೂರ್ಯೋದಯವಾಗುತ್ತಿರಲಿಲ್ಲ. ಹಾಗೆಯೇ ಹಾಸಿದ್ದ ಚಾಪೆಯಲ್ಲಿ ಬಂದು ಮತ್ತೆ ಬೀಳೋದು... ನಿದಿರೆ ಅಂತಲ್ಲ ಉದಾಸೀನತೆ.... ಅವರು ಬಂದ ದಿನ ಮನೆಯಲ್ಲಿ ಯಾವಗಲೂ ಸಿಗುವ ಸಮಯಕ್ಕೆ ತಿಂಡಿ ಸಿಗೋ ಸಾಧ್ಯತೆ ತುಂಬಾನೇ ಕಮ್ಮಿ.
ಈ ರೀತಿ ಬಂಧುಗಳು ಒಟ್ಟಾದರೆ ಸಾಕು ರಜೆಯ ಖುಷಿ ಗಗನವನ್ನ ಮುಟ್ಟುತ್ತಿತ್ತು. ನಮ್ಮದೇ ವಿಶಿಷ್ಟ ಆಟಗಳನ್ನ ಆಡುತ್ತಿದ್ದೆವು... ಸಂಜೆಯ ಹೊತ್ತಲ್ಲಿ ಚೀಟಿ ಯಲ್ಲಿ ಸಿನಿಮಾದ ನಾಯಕರ ಹೆಸರುಗಳನ್ನ ಬರೆದು ನಾಲ್ಕು ಸಿಗುವವರೆಗೆ ಪಾಸ್ ಮಾಡೋದು... ಯಾರಿದ್ದು ಮೊದಲು ಆಗುತ್ತೋ ಅವರು ವಿಜೇತರು... ಚೀಟಿಯಲ್ಲಿನ ಕಳ್ಳ ಪೋಲೀಸ್ ಆಟ. ಜುಬುಲಿ, ಮರಕೋತಿ, ಲೂಡೋ.. ಹೀಗೆ ಸಮಯವನ್ನ ನಾನಾ ಬಗೆಯಲ್ಲಿ ಕೊಲ್ಲುತ್ತಿದ್ದೆವು. ಇನ್ನು ತಿನ್ನೋ ವಿಷಯದಲ್ಲಿ ಹೇಳೋದೇ ಬೇಡ ಮಾವಿನ ಹಣ್ಣಿನ , ಹಲಸಿನ ಹಣ್ಣಿನ ಕಾಲ.... ಒಮ್ಮೆ ತೋಟ ತಿರುಗಾಡಿದರೆ ಹೊಟ್ಟೆಗೇನಾದ್ರೂ ಬೀಳೊದಿದ್ದೇ ಇದೆ. ಅದೂ ಅಲ್ಲದೆ ಎಲ್ಲ ಮಕ್ಕಳು ಒಟ್ಟಾಗಿ ನಮ್ಮ ಮನೆಯೆದುರಿನ ಗುಡ್ಡೆಗೆ ಹೋಗುತ್ತಿದ್ದೆವು. ಕರಂಡೆ ಹಣ್ಣು, ಕುಂಟಲ ಹಣ್ಣು, ಬಿಕೋಜಾಯಿ, ಚೂರಿಮುಳ್ಳು, ನೇರಳೆ ಹಣ್ಣು, ಗೇರುಹಣ್ಣು ಹೀಗೆ ಇವೆ ನಮ್ಮ ತಿಂಡಿಗಳು... (ಇವೆಲ್ಲಾ ನಾವು ಬಳಸೋ ಪದ ಇದಕ್ಕೆ ಸಮಾನವಾದ ಪದಗಳು ನನಗೆ ಗೊತ್ತಿಲ್ಲ). ಈಗಿನ ನೂಡಲ್ಸ್ ಗಳ ಹಾವಳಿಯೇ ಇದ್ದಿರಲಿಲ್ಲ. ಏನಿದ್ರೂ ಮಾವಿನಕಾಯಿಯನ್ನ ಸಣ್ಣದಾಗಿ ತುಂಡು ಮಾಡಿ ಅದಕ್ಕೆ ಹಳದಿ ಹುಡಿ, ಮೆಣಸಿನಹುಡಿ , ಉಪ್ಪು , ಸ್ವಲ್ಪ ಎಣ್ಣೆ ಬೆರೆಸಿ ಬಾಯಿಗೆ ಹಾಕುತ್ತಾ ಇದ್ರೆ ಆಯ್ತು ಅದಕ್ಕಿಂತ ರುಚಿಯದ್ದು ಇನ್ನೇನಿದೆ. ಮತ್ತೆ ಈ ದೊಡ್ದ ರಜೆಯಲ್ಲಿ ಒಂದು ಬಾರಿಯಾದರೂ ಬೀಚ್ ಭೇಟಿ ಇದ್ದೇ ಇರುತಿತ್ತು. ಮರಳ ರಾಶಿಯಲ್ಲಿ ಆಡಿ ವಾಪಾಸ್ ಬರೋಕೆ ಮನಸ್ಸಿಲ್ಲದೇ ಲೇಟಾಗಿ ಕತ್ತಲಿಗೆ ಮೆಲ್ಲನೆ ಬಂದು ಮನೆಯ ಹಿರಿಯರಿಂದ ಬೈಗುಳ ತಿಂದ ಮೇಲೇನೇ ಮನಸ್ಸಿಗೆ ಸಮಾಧಾನ. ಕತ್ತಲಾದರೆ ಸಾಕು ಅಂಗಳದಲ್ಲೇ ಚಾಪೆ ಹಾಕಿಕೊಂಡು ಅಂತಾಕ್ಷರಿ ಆಟ ಶುರುವಾಗುತಿತ್ತು.
ಸಾಧಾರಣವಾಗಿ ಪರವೂರಿಂದ ಬಂದವರು ತಮ್ಮ ಎಲ್ಲಾ ಹತ್ತಿರ ಸಂಬಂಧಿಗಳ ಮನೆಗೊಂದು ಭೇಟಿ ಕೊಡೋದು ಸಾಮಾನ್ಯವೇ. ಎಲ್ಲಾ ಕಡೆ ಆತಿಥ್ಯ ಸ್ವೀಕರಿಸಿ ಹೊಟ್ಟೆಗೂ ಖುಷಿ ಮನಸಿಗೂ ಖುಶಿ. ಇನ್ನು ಇದೇ ರಜೆಯ ಸಮಯದಲ್ಲೇ ಮದುವೆಗಳ ಸೀಸನ್ ಬರೋದು ಅಲ್ವಾ...ದಿನ ಬಿಟ್ಟು ದಿನ ಮದುವೆಗೆ ಹೋಗಿ ಅಲ್ಲೊಂದಿಷ್ಟು ಬಂಧು ಮಿತ್ರರ ಭೇಟಿ ಅದೇನ್ ಮಜಾ ಕೊಡುತ್ತಿತ್ತಂದರೆ ನಿಜಕ್ಕೂ ಈ ಎಲ್ಲಾ ನೆನಪುಗಳನ್ನೇ ಮೆಲುಕು ಹಾಕೋದೇ ಅದೆಷ್ಟು ಖುಶಿ ಕೊಡುತ್ತೆ. ಅದಿಕ್ಕೆ ಹೇಳಿದ್ದು ಈ ಬೇಸಿಗೆ ರಜೆ ಭಾಂಧವ್ಯದ ಬೆಸುಗೆಯನ್ನ ಗಟ್ಟಿಗೊಳಿಸುತ್ತಿತ್ತು ಅಂತ. ಬಹುಶ ಈಗ ಆ ಭಾಂಧವ್ಯಗಳು ಜನರಿಗೆ ಸಂಕೋಲೆ ಆಗತೊಡಗಿದೆಯೋ ಏನೋ. ನಗರವಾಸಿಗಳಿಗೆ ಬೇಸಿಗೆ ರಜೆ ಅಂತದಂದ್ರೆ ಯಾವುದಾದ್ರೂ ಪ್ರವಾಸಕ್ಕೆ ಹೋಗುತ್ತಾರೆಯೇ ಹೊರತು ಹಳ್ಳಿ ಕಡೆ ತಲೆ ಹಾಕುವವರಿಲ್ಲ. ಅವರಿಗೆಲ್ಲ ಬಂಧುಗಳು ಬೇಕಾಗಿಲ್ಲ. ಅವರಿಗೆ ಗೊತ್ತಿರೋದು ಗೆಳೆತನದ ಲೋಕ ಮಾತ್ರ. ಗೆಳೆತನಕ್ಕೆ ಮತ್ತು ಬಂಧು ಮಿತ್ರರ ಭಾಂಧವ್ಯಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ ಅದನ್ನ ಅನುಭವಿಸಿದವರಿಗಷ್ಟೇ ಗೊತ್ತು. ಈ ಬದಲಾಗುತ್ತಿರುವ ಈ ಜೀವನ ಶೈಲಿಯಲ್ಲಿ ನಾವೆಲ್ಲೋ ಇಂಥ ಸಣ್ನ ಪುಟ್ಟ ಖುಷಿಗಳನ್ನ ಕಳೆದುಕೊಳ್ಳುತ್ತಿದ್ದೇವೇನೋ ಅನ್ನಿಸುತ್ತಿದೆ. ಇನ್ನು ಮಕ್ಕಳಿಗೂ ಹಾಗೇಯೇ ರಜೆ ಅನ್ನೋದು ಬರಿ ನೆಪ ಮಾತ್ರ ಟ್ಯೂಶನ್, ಕ್ಯಾಂಪು , ಕೋಚಿಂಗ್ ಕ್ಲಾಸ್ ಹೀಗೆ ಹತ್ತು ಹಲವು ತೊಡರುಗಳು. ಅದೆಲ್ಲಾ ಆಗಿ ಸಮಯ ಸಿಕ್ಕರೂ ಹೆಚ್ಚಿನವರಿಗೆ ಹಳ್ಳಿಯ ಕಡೆ ತಲೆ ಹಾಕೋ ಮನಸಿರಲ್ಲ. ಇದರಲ್ಲಿ ಅವರ ತಪ್ಪು ಇದೆ ಅಂತಲ್ಲ ಅವರನ್ನ ಅದೇ ರೀತಿಯಲ್ಲಿ ಬೆಳೆಸಲಾಗುತ್ತದೆಯಲ್ವಾ. ಇರಲಿ ಬಿಡಿ ನನಗಂತೂ ಈಗಲೂ ಆ ಬೇಸಿಗೆಯ ರಜೆಯ ಕ್ಷಣಗಳು ನೆನಸಿಕೊಂದರೆ ಹೇಳಲಾಗದಷ್ಟು ಖುಶಿ... ನಿಮಗೂ ಹಾಗೇ ಆಗುತ್ತಾ.....?

ಬಲಾತ್ಕಾರ...ಬೆಂಗಳೂರಿನ ಇಡಿಯ ಮಹಿಳಾ ಸಮಾಜವೇ ಬೀದಿಗಿಳಿದಿತ್ತು... ಅದಕ್ಕೆ ಕಾರಣವೂ ಅಷ್ಟೇ ಪ್ರಬಲವಾದದ್ದು... ಶ್ರೀಮಂತ ಕುಟುಂಬದ ಒಬ್ಬಾಕೆ ಹೆಣ್ಣು ಮಗಳು ತಡರಾತ್ರಿ ಪಾರ್ಟಿ ಮುಗಿಸಿ ಬರುವಾಗ ಒಂದಿಬ್ಬರು ಹುಡುಗರು ಬಲಾತ್ಕರಿಸಿಬಿಟ್ಟಿದ್ದರು... ಹೇಳಿ ಕೇಳಿ ಆ ಶ್ರೀಮಂತ ಹುಡುಗಿಯ ತಾಯಿ ಬೆಂಗಳೂರಿನಲ್ಲೇ ಪ್ರಸಿದ್ಧವಾದ ಮಹಿಳಾ ಸಂಘದ... ಮಹಾ ಪೋಷಕಿ... ಆ ಮಹಿಳಾ ಸಂಘಕ್ಕೆ ಋಣಭಾರ ತೀರಿಸಲು ಒಳ್ಳೇ ಅವಕಾಶ... ಹಾಗಾಗಿ ಮಹಿಳಾ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಹಳ ಮುತುವರ್ಜಿಯಿಂದ ಈ ಹೋರಾಟವನ್ನು ಮುನ್ನಡೆಸುತ್ತಿದ್ದಳು... ಅದೇನು ಛಲ... ಸಾಕ್ಷಾತ್ ಭದ್ರಕಾಳಿಯೇ ಮೈಯಲ್ಲಿ ಬಂದಂತೆ.... " ವೀ ವಾಂಟ್ ಜಸ್ಟಿಸ್...ವೀ ವಾಂಟ್ ಜಸ್ಟಿಸ್..." ಅನ್ನೋ ಕೂಗು ಇನ್ನೇನು ಮುಗಿಲನ್ನ ಸೀಳಿ ಬಿಡುವುದರಲ್ಲಿತ್ತು... ಹೋರಾಟದ ಕಾವು ಪೋಲೀಸ್ ಇಲಾಖೆಗೆ ತಟ್ಟದೇ ಬಿಟ್ಟಿರಲಿಲ್ಲ... ಗೃಹಮಂತ್ರಿಗಳು ಆ ಸ್ಥಳಕ್ಕೆ ಭೇಟಿ ಕೊಟ್ಟಾಗ ಶ್ರೀಮತಿ ಅದ್ಯಾವ ರೀತಿ ರೋಪು ಹಾಕಿದಳೆಂದರೆ ಅದರ ನೇರ ಪರಿಣಾಮವಾಗಿದ್ದು ಪೋಲೀಸ್ ಇಲಾಖೆಯ ಮೇಲೆ...ಹಿರಿಯ ಅಧಿಕಾರಿಗಳು ಹೇಳೇ ಬಿಟ್ಟರು " ಅದೇನ್ ಮಾಡುತ್ತೀರೋ ಗೊತ್ತಿಲ್ಲ.... ಆ ರೇಪಿಸ್ಟ್ ಗಳು ಅರೆಸ್ಟ್ ಆಗಬೇಕು...ವಿತಿನ್ ಟ್ವೆಂಟಿಫೋರ್ ಹವರ್ಸ್..." ಕೂಡಲೇ ವಿಶೇಷ ತಂಡ ರಚನೆಯಾಗಿ ತನ್ನ ಜಾಲ ಬೀಸಿಯಾಗಿತ್ತು.... ಇತ್ತ ಸೂರ್ಯಾಸ್ತವಾಗುತ್ತಿದ್ದಂತೆ ಎಲ್ಲಾ ಹೋರಾಟಗಾರರೂ ತಮ್ಮ ತಮ್ಮ ಮನೆಯತ್ತ ಹೊರಡತೊಡಗಿದರು... ಶ್ರೀಮತಿಯೂ... ತನ್ನ ನೇತೃತ್ವದ ಹೋರಾಟಕ್ಕೆ ಸಹಕರಿಸಿದ ಮಹಿಳೆಯರನ್ನೆಲ್ಲರನ್ನೂ ಅಭಿನಂದಿಸಿ ಕಳುಹಿಸತೊಡಗಿದ್ದಳು.... ಮಾತನಾಡಲು ಆಗುತ್ತಿರಲಿಲ್ಲ..... ಸ್ವರವೆಲ್ಲಾ ಬಿದ್ದು ಹೋಗುವುದರಲ್ಲಿತ್ತು... ಆದರೂ ಉತ್ಸಾಹ ಒಂದಿಷ್ಟು ಕಡಿಮೆಯಾಗಿರಲಿಲ್ಲ.... ಗಂಟೆ ಓಡುತಿತ್ತು... ಶ್ರೀಮತಿಯೂ ಮನೆಯತ್ತ ಹೊರಟೇ ಬಿಟ್ಟಳು... ಮನೆಗೆ ಬಂದವಳೇ ತನ್ನ ಬ್ಯಾಗನ್ನ ಬದಿಗಿರಿಸಿ ಹಾಲ್ ನಲ್ಲಿದ್ದ ಮೆತ್ತನೆಯ ಸೋಫಾದ ಮೇಲೆ ದೊಪ್ಪನೆ ಬಿದ್ದು ಕೊಂಡು ಬಿಟ್ಟಳು...." ಉಫ್... ಸಾಕಪ್ಪಾ ಸಾಕು... ಸೀತಕ್ಕಾ ಒಂದು ಬಿಸಿ ಬಿಸಿ ಕಾಫಿ ಮಾಡಿಕೊಂಡು ಬನ್ನಿ..." ಅಂತ ತನ್ನ ಮನೆ ಕೆಲಸದಾಕೆಗೆ ಹೇಳಿ ಟಿವಿ ಆನ್ ಮಾಡಿದಳು.... ಅದಾಗಲೇ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಅಬ್ಬರಿಸತೊಡಗಿತ್ತು.... " ನಗರದಲ್ಲಿ ನಡೆದ ಬಲಾತ್ಕಾರದ ಆರೋಪಿಗಳ ಬಂಧನ... ಪೋಲೀಸರ ಅದ್ಭುತ ಕಾರ್ರ್ಯಾಚಾರಣೆ...." ಶ್ರೀಮತಿಯ ಮುಖದಲ್ಲಿ ಸಣ್ಣ ವಿಜಯದ ನಗು.... ತನ್ನ ಹೋರಾಟಕ್ಕೆ ಇಷ್ಟು ಶೀಘ್ರವಾಗಿ ಸಫಲತೆ ಸಿಕ್ಕೀತು ಅಂತ ಅವಳು ಯೋಚಿಸಿರಲಿಲ್ಲ... ಈ ಹೋರಾಟದ ಮುಂಚೂಣಿಯಲ್ಲಿದ್ದಾಗ ವಿರೋಧ ಪಕ್ಷದ ನಾಯಕರೊಬ್ಬರು ಅಬಿನಂದಿಸಿ ಹೋಗಿದ್ದನ್ನ ನೆನೆಸಿ ತನಗೇನಾದರೂ ರಾಜಕೀಯ ಲಾಭವಾದೀತಾ ಅಂತ ಮನಸಿನಲ್ಲಿಯೇ ಲೆಕ್ಕಾಚಾರ ಹಾಕುತ್ತಿರುವಾಗಲೇ ಅವಳ ಫೋನ್ ರಿಂಗಣಿಸಿತು... ತನ್ನ ಬ್ಯಾಗನ್ನ ತಡಕಾಡಿ ಮೊಬೈಲ್ ತೆಗೆದುಕೊಳ್ಳುವಷ್ಟರಲ್ಲಿ ರಿಂಗ್ ಕಟ್ ಆಗಿತ್ತು... ತನ್ನ ಏಕ ಮಾತ್ರ ಮುದ್ದಿನ ಪುತ್ರ ವಿಕ್ರಮ್ ನ ಕರೆ.... ತಾನೇ ವಾಪಾಸು ಕರೆ ಮಾಡಿ.... ಆತ ರಿಸೀವ್ ಮಾಡಿದ ಕೂಡಲೇ ..... " ಎಲ್ಲಿದಿಯೋ.... ನಿನ್ನೆಯಿಂದ ಮನೆಗೇ ಬಂದಿಲ್ಲ.... ಪಾರ್ಟಿ ಇನ್ನೂ ಮುಗೀಲಿಲ್ವಾ.... " ಅಂತ ಮೆಲ್ಲಗೆ ಗದರಿದಳು.... ಆದರೆ ವಿಕ್ರಮನ ಸ್ವರ ಕ್ಷೀಣಿಸಿತ್ತು.... ಆತನ ಮಾತುಗಳನ್ನ ಕೇಳಿದವಳೇ ಶ್ರೀಮತಿ ಕುಸಿದುಹೋದಳು...ಅದೇ ಸಮಯಕ್ಕೆ ಪೋಲೀಸ್ ಜೀಪಿನಿಂದ ಸ್ಟೇಶನ್ ಗೆ ಆರೋಪಿಗಳನ್ನು ಮುಖ ಪೂರ್ತಿ ಮುಚ್ಚಿ ಕೊಂಡೊಯ್ಯುವ ದೃಶ್ಯ ವನ್ನ ಮತ್ತೆ ಮತ್ತೆ ತೋರಿಸುತ್ತಿದ್ದುದು ಆಕೆಗೆ ಕಾಣಿಸಿತು.... ಹೌದು ಅದೇ ಪ್ಯಾಂಟ್.... ಶರ್ಟ್... ಇದು ತನ್ನ ಮಗನದ್ದೇ ಅಂದಾಗ ಮತ್ತೆ ಮಗನ ಸ್ವರ ಕೇಳಿಸಿತು... " ಅಮ್ಮಾ ಪ್ಲೀಸ್ ಏನಾದ್ರೂ ಮಾಡಮ್ಮ... " ಅನ್ನುತ್ತಿರುವಾಗಲೇ.... ಅತ್ತ ಪೋಲೀಸ್ " ಬೋ.... ಮಗನೇ ಮನೆಯವರನ್ನ ಬರಲಿಕ್ಕೆ ಹೇಳು ಅಂದ್ರೆ.... ಏನೇನೋ ಮಾತಾಡ್ತೀಯಾ... ಇಡೋ ಫೋನ್...." ಅಂದ ಬೈಯುತ್ತಿರುವ ಮಾತುಗಳು ಕೇಳಿತು.... ಫೋನ್ ಕಟ್ ಆಯಿತು...ಶ್ರೀಮತಿ ಪೂರ್ತಿಯಾಗಿ ಬೆವರತೊಡಗಿದ್ದಳು.... ಆ ಕ್ಷಣಕ್ಕೆ ಏನು ಮಾಡಬೇಕೆಂದೇ ತೋಚಲಿಲ್ಲ... ಕೂಡಲೇ ತನ್ನ ಪತಿಗೆ ಫೋನಾಯಿಸಿ.... ವಿಷಯ ತಿಳಿಸಿದಳು.... ತನ್ನ ಪರಿಚಯದ ವಕೀಲರ ನಂಬರುಗಳನೆಲ್ಲಾ ತಡಕಾಡಿದಳು..... ಅತ್ಯಾಚಾರಿಗಳನ್ನ ಗಲ್ಲಿಗೇರಿಸಲು ಶುರುವಾದ ಹೋರಾಟ ಮುಕ್ತಾಯದಂಚಿನಲ್ಲಿರುವಾಗಲೇ ಶ್ರೀಮತಿಗೆ ತನ್ನ ಮಗನನ್ನ ಉಳಿಸೋ ಹೋರಾಟ ಶುರುವಾಗಿತ್ತು..

ಪುರಾಣಗಳನ್ನ ಒಳಗಣ್ಣಿನಿಂದ ನೋಡಿದರೆ ಮಾತ್ರ ಅದರ ರುಚಿ ಗೊತ್ತಾಗೋದು...ಫೇಸ್ ಬುಕ್ಕಿನ ಮಿತ್ರರೂ ಮತ್ತು ಅದ್ಭುತ ಕವಿತಾ ರಚನೆಗಾರರೂ ಆದ ಸುಮಾ ಮಾವಹಳ್ಳಿ
ಅವರ ಒಂದು ಕವಿತೆ ಹೀಗಿದೆ...
ಅವರ ಕವಿತೆ
ದಿನವೂ ಹೆಂಗೆಳೆಯರು
ಅತ್ಯಾಚಾರ ನಿಲ್ಲಿಸುವ
ಮೊರೆಹೊತ್ತು
ತುಳಸಿಕಟ್ಟೆ ಪ್ರದಕ್ಷಿಣೆ
ಮಾಡುತ್ತಿದ್ದಾರೆ
ಎಂಥಾ ವಿಪರ್ಯಾಸ...
( ಇಲ್ಲಿ ನಾನವರ ಕವಿತೆಯನ್ನ ವಿಮರ್ಷಿಸುತ್ತಿಲ್ಲ... ಅಂಥಾ ಯೋಗ್ಯತೆಯೂ ನನ್ನದಲ್ಲ... ಬದಲಾಗಿ ಇವರು ಹೇಳಿರುವ ಮೂಲ ಅಂಶದ ಬಗೆಗೆ ನನಗೆ ಗೊತ್ತಿರುವ ಸ್ಪಷ್ಟೀಕರಣ ಕೊಡುವುದು ಅಷ್ಟೇ... ಕವಿಯತ್ರಿಯವ್ರು ಅನ್ಯಥಾ ಭಾವಿಸಬಾರದು...)
ಕವಿತೆಯ ಹಿನ್ನಲೆ... ತುಳಸಿ ವಿಷ್ಣುವಿನಿಂದ ಅತ್ಯಾಚಾರಕ್ಕೊಳಗಾಗಿದ್ದಳು ಅಂತ... ಈ ಒಂದು ವಾಕ್ಯವನ್ನೇ ನೋಡಿ ಬಿಟ್ಟರೆ ದೇವರೆ ಇಂಥಾದ್ದು ಮಾಡಿಬಿಟ್ಟರೆ ಇನ್ನೇನು...? ಅಂತ ಖಂಡಿತವಾಗಿಯೂ ಅನಿಸುತ್ತದೆ... ಆದರೆ ಅದರ ಹಿಂದಿರುವ ವಾಸ್ತವ ಏನು...? ಅದನ್ನೂ ನೋಡಬೇಕು... ತುಳಸಿ ಒಬ್ಬ ದೊಡ್ದ ಪತಿವೃತೆ... ಅವಳ ಪತಿ ಒಬ್ಬ ರಾಕ್ಷಸನಾಗಿದ್ದು ಲೋಕಕಂಟಕನಾಗಿದ್ದ... ಆದರೆ ಇವಳ ಪಾತಿವೃತ್ಯದ ಕವಚದಿಂದಾಗಿ ಅವನನ್ನ ಸಂಹರಿಸುವುದು ಕಷ್ಟವಾಗಿತ್ತು... ಹಾಗಾಗಿ ಅವಳ ಪಾತಿವೃತ್ಯವನ್ನ ಭಂಗಗೊಳಿಸದೇ ಲೋಕಕಲ್ಯಾಣವಾಗುತ್ತಿರಲಿಲ್ಲ... ಇದನ್ನ ಮನಗಂಡೇ ವಿಷ್ಣು ಈ ತುಳಸಿಯನ್ನ ಅತ್ಯಾಚಾರ ಮಾಡುತ್ತಾನೆ.... ಲೋಕಕಂಟಕನನ್ನು ಬೆಂಬಲಿಸಿದ ಕಾರಣದಿಂದಾಗಿಯೇ ಅವಳಿಗೆ ಆ ಶಿಕ್ಷೆ ಸಿಕ್ಕಿರಬಹುದಲ್ವಾ...? ಹಾಗಾಗಿ ನಾವು ಪುರಾಣಗಳ ಕಥೆಯ ಒಳ ತಿರುಳನ್ನ ನೋಡಬೇಕೆ ಹೊರತು ಮೇಲ್ನೋಟವನ್ನಲ್ಲ...
ಅದೇ ಕವಿತೆಗೆ ಪಾಲಾಕ್ಷ ಅನ್ನುವವರು ಕಮೆಂಟು ಮಾಡುತ್ತಾ ಪುರಾಣದಲ್ಲಿನ ಸ್ತ್ರೀ ದೌರ್ಜನ್ಯದ ಕುರಿತಾಗಿ ಹಲವು ಉದಾಹರಣೆಗಳನ್ನ ಕೊಡುತ್ತಾರೆ ಅವುಗಳಿಗೆ ಉತ್ತರಿಸುವ ಸಣ್ಣ ಪ್ರಯತ್ನ...
೧. ಗೌತಮ ಮಹರ್ಷಿಯ ಪತ್ನಿಯನ್ನ ಇಂದ್ರ ಕೆಡಿಸಿದ್ದು...
ಗೌತಮ ಮಹರ್ಷಿ ಶ್ರೇಷ್ಠ ತಪಸ್ವಿ... ಆ ಹೊತ್ತಿಗೆ ಅವರ ತಪಶ್ಶಕ್ತಿ ಯಾವ ಹಂತವನ್ನ ತಲುಪಿತ್ತೆಂದರೆ ಅದನ್ನ ಕಡಿಮೆಗೊಳಿಸದೇ ಇದ್ದಿದ್ದರೆ ಅವರ ದೇಹಕ್ಕೆ ಅದು ಹಾನಿಯಾಗಿರುತ್ತಿತ್ತು... ಯಾವ ರೀತಿ ಅಂದರೆ ಕಡಿಮೆ ವೋಲ್ಟಿನ ಬಲ್ಬಿನಲ್ಲಿ ಜಾಸ್ತಿ ವಿದ್ಯುತ್ ಹರಿಸಿದಂತೆ...ಅದಕ್ಕಾಗಿ ದೈವ ನಿರ್ಣಯದಂತೆ ಇಂದ್ರ ಅಹಲ್ಯೆಯ ಬಳಿ ಹೋಗಿದ್ದು.. ಅಹಲ್ಯೆಯೂ ಗೊತ್ತಿದ್ದೇ ಒಪ್ಪಿಕೊಂಡದ್ದು... ಇದನ್ನು ನೋಡಿದ ಗೌತಮ ಮಹರ್ಷಿ ಶಾಪ ಕೊಟ್ಟು ತಾನು ಸಂಪಾದಿಸಿದ ಶಕ್ತಿಯ ಬಹುಪಾಲನ್ನು ನಷ್ಟಮಾಡಿಕೊಂಡ... ತನ್ನ ಪತಿಯ ಹಿತಕ್ಕಾಗಿ ಮಾಡಿದುದರಿಂದ ಅದು ಸರಿಯಾಗಿತ್ತು... ಮೇಲ್ನೋಟಕ್ಕೆ ಅಹಲ್ಯೆಗೆ ಕೆಡುಕಾದರೂ ಒಬ್ಬ ತಪಸ್ವಿಗೆ ಒಳಿತಾಗಿತ್ತು ಅದರಿಂದಾಗಿ ಲೋಕ ಕಲ್ಯಾಣವಾಯಿತು..

೨. ತ್ರಿಮೂರ್ತಿಗಳು ಅನುಸೂಯೆಯನ್ನು ಕೆಡಿಸಿದ್ದು...
ತ್ರೀಮೂರ್ತಿಗಳು ಎಂದೂ ಅನುಸೂಯೆಯನ್ನು ಕೆಡಿಸಲಿಲ್ಲ... ಇದು ಅವರ ತಪ್ಪು ಕಲ್ಪನೆ...ಬದಲಾಗಿ ಆಕೆಯ ಬಳಿ ಮೊಲೆ ಹಾಲು ಕುಡಿಸೆಂದಾಗ... ತ್ರಿಮೂರ್ತಿಗಳನ್ನೇ ಆಕೆ ಮಗುವಾಗಿಸಿ ಹಾಲು ಕುಡಿಸಿದಳು... ಇಲ್ಲಿ ತ್ರಿಮೂರ್ತಿಗಳಿಂದಾಗಿ ಅವಳ ಪಾತಿವೃತ್ಯದ ಶಕ್ತಿ ಜಗತ್ತಿಗೆ ಗೊತ್ತಾಯಿತು...

೩. ರಂಬೆ ಮೇನಕಾದಿ ಅಪ್ಸರೆಯರು ಕೈಲಾಸದಲ್ಲಿ ಬೆತ್ತಲೆ ನರ್ತನ ಮಾಡುವುದು...
ಅಪ್ಸರೆಯರು ಕೈಲಾಸದಲ್ಲಿ ನೃತ್ಯ ಮಾಡುವುದಿಲ್ಲ... ಅವರು ದೇವಲೋಕದ ನರ್ತಕಿಯರು... ಅದೂ ಬೆತ್ತಲಾಗಿ ನರ್ತನ ಮಾಡಿದ ಉಲ್ಲೇಖ ನನಗಂತೂ ಸಿಗಲಿಲ್ಲ...( ಪ್ರಶ್ನಿಸಿದವರು ಯಾವ ಪುರಾಣದಲ್ಲಿದೆ ಅಂತ ತಿಳಿಸಿದರೆ ನೋಡಬಹುದು..).

೪.ರಾಮ ಲಕ್ಷ್ಮಣರು ಶೂರ್ಪನಖಿಯ ಮೂಗು ಕಿವಿ ಮೊಲೆ ಕತ್ತರಿಸಿದ್ದು...
ಮೊದಲಾಗಿ ರಾಮಲಕ್ಷ್ಮಣರು ಆಕೆ ಸಿಕ್ಕೊಡನೆ ಆ ರೀತಿ ಮಾಡಿದ್ದಲ್ಲ... ಅವಳಿಗೆ ತಿಳಿಹೇಳಿದ ನಂತರವೂ ಕೇಳದೆ ಇದ್ದುದಕ್ಕಾಗಿ ಅವರ ಕಿವಿ ಮೂಗನ್ನ ತೆಗೆದರೇ ಹೊರತು ಸುಮ್ಮ ಸುಮ್ಮನೆ ತೆಗೆಯಲಿಲ್ಲ ತಾನೇ... ರಾಕ್ಷಸಿಯನ್ನೂ ನೋಯಿಸಬಾರದೆಂದರೆ ಅದು ಲೋಕಕಂಟಕವೇ ಅಲ್ವೇ... ( ಅದರದೇ ಆಧಾರದ ಮೇಲೆ ನೋಡೋದಾದರೆ ಈ ಬಲಾತ್ಕಾರಿಗಳನ್ನೂ ಬಿಟ್ಟು ಬಿಡಿ ಅಂದ ಹಾಗಾಯ್ತು... ಅಲ್ವೇ...)

೫. ಹದಿನಾರು ಸಾವಿರ ಗೋಪಿಕಾ ಸ್ತ್ರೀಯರನ್ನ ಶ್ರೀಕೃಷ್ಣ ಮದುವೆಯಾಗಿದ್ದು...
ಆ ಹದಿನಾರು ಸಾವಿರ ಸ್ತ್ರೀಯರು ನರಕಾಸುರನ ಬಂಧನದಲ್ಲಿದ್ದವರು...ಆತ ಯಾವ ರೀತಿ ಅವರನ್ನ ಬಳಸಿಕೊಂಡಿದ್ದನೋ ಯಾರಿಗೆ ಗೊತ್ತು.... ಅದಾಗಿಯೂ ಅವರನ್ನ ವರಿಸಿದನಲ್ಲ ಕೃಷ್ಣ.... ನಮ್ಮಿಂದ ಇಂತಾದ್ದು ಸಾಧ್ಯವೇ.... ಒಬ್ಬಾಕೆ ಸೂಳೆಗೇರಿಯಲ್ಲಿ ಒಂದು ದಿನ ಇದ್ದು ಬಂದವರನ್ನ ನಾವೇನಾದರೂ ವರಿಸಲು ಸಾಧ್ಯವೇ... ಅಂಥಾದ್ದನ್ನು ಮಾಡಿ ಜಗತ್ತಿಗೆ ಆದರ್ಶನಾದ ಶ್ರೀಕೃಷ್ಣನನ್ನು ದೌರ್ಜನ್ಯ ಮಾಡಿದವ ಅಂದರೆ ನಗಬೇಕೋ ಅಳಬೇಕೋ ಅರ್ಥವಾಗುವುದಿಲ್ಲ... ಹಾಗಾದರೆ ಮದುವೆಯಾಗುವುದು ಅಂದರೆ ಹೆಣ್ಣನ್ನ ದೌರ್ಜನ್ಯ ಮಾಡುವುದು ಅಂತಾನಾ...

೬.ಮಾತೃ ಸಮಾನರಾದ ಗೋಪಿಕೆಯ ಬಟ್ಟೆ ಕದ್ದಿದ್ದು...
ಇಲ್ಲೊಂದು ಕುಹಕ ನೋಡಿ ತಾಯಿಯನ್ನು ಮಗು ಬೆತ್ಲಾಗಿ ನೋಡಿದರೆ ಏನು ತಪ್ಪು...? ಪುಟ್ಟ ಬಾಲಕ ಅವ... ಅದು ಯಾವ ರೀತಿಯ ದೌರ್ಜನ್ಯವಾಯಿತು... ವಾಸ್ತವವಾಗಿ ಆ ಘಟನೆಯ ಒಳಾರ್ಥ.... ಕೃಷ್ಣನನ್ನೇ ದೇವರೆಂದು ಕೊಂಡವರು... ತಮ್ಮ ಸಂಪೂರ್ಣ ಸಮರ್ಪಣೆಯ ಪರೀಕ್ಷೆ ಮಾಡಿದ್ದು... ಎಲ್ಲವನ್ನೂ ಅವನಲ್ಲಿ ಅರ್ಪಿಸಿಕೊಂದವರಿಗೆ ಬೆತ್ತಲಾಗುವುದರಲ್ಲೇನು ಹಿಂಜರಿಕೆ ನಾಚಿಕೆ ಅನ್ನುವುದು ನಮ್ಮವರಲ್ಲದವರಲ್ಲಿ ತಾನೇ... ದಿಗಂಬರರು ಯಾಕೆ ಬೆತ್ತಲಾಗುತ್ತಾರೆ.... ??? ಈ ರೀತಿ ಯೋಚಸಿ ನೋಡಿ...

೭.ದ್ರೌಪದಿಯನ್ನ ಐದು ಜನ ಮದುವೆಯಾದರು...
ದ್ರೌಪದಿಯ ವಿಷಯ ಬಂದಾಗ ಅವಳೇ ಪೂರ್ವ ಜನ್ಮದಲ್ಲಿ ಕೇಳಿದ ವರದಿಂದಾಗಿ ಅವಳಿಗೆ ಐವರು ಗಂಡಂದಿರು ಸಿಕ್ಕಿದ್ದು... ಅದಾಗಿಯೂ ಒಂದು ವರ್ಷಕ್ಕೆ ಒಬ್ಬ ಮಾತ್ರ ಪತಿಯ ಸ್ಥಾನದಲ್ಲಿರುತ್ತಿದ್ದ... ಅದೆಷ್ಟು ಕಟ್ಟುನಿಟ್ತಾಗಿ ಆ ಶಿಸ್ತನ್ನು ಪಾಂಡವರು ಪಾಲನೆ ಮಾಡಿದರೆಂದರೆ ಒಳ್ಳೆಯ ಕೆಲಸಕ್ಕಾಗಿಯೇ ಬಿಲ್ಲು ತೆಗೆಯಲು ದ್ರೌಪದಿ ಯುಧಿಷ್ಠಿರ ಕೋಣೆಯನ್ನ ಹೊಕ್ಕ ಅರ್ಜುನ ತೀರ್ಥಯಾತ್ರೆಗೆ ಹೋದ... ಹಾಗಿದ್ದರೆ ದೌರ್ಜನ್ಯ ಎಲ್ಲಿಯಾಯಿತು...?

೭.ದ್ರೌಪದಿಯ ಸೀರೆ ಎಳೆದ ಕೌರವರು...
ಹಾ ಇವರು ಮಾಡಿದ್ದು ದೌರ್ಜನ್ಯವೇ... ಅವರಿಗೆ ಸಿಕ್ಕ ಗತಿಯೇ ಈಗಿನ ಬಲಾತ್ಕಾರಿಗಳಿಗೂ ಸಿಗಬೇಕು... ಅನ್ನೋದು ನನ್ನ ಅಭಿಮತ...
ಇದರಲ್ಲಿ ಒಂದು ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗಲಿಲ್ಲ... ಬ್ರಹ್ಮ ತನ್ನ ಮಗಳನ್ನೇ ಮದುವೆಯಾದ ಅನ್ನೋದು... ಇಲ್ಲಿ ನನ್ನ ಊಹೆಯ ಪ್ರಕಾರ ತನಗಾಗಿ ಬ್ರಹ್ಮ ಪತ್ನಿಯನ್ನೇ ಸೃಷ್ಟಿಸಿದ್ದಿರಬಹುದು.... ಸೃಷ್ಟಿಸಿದ್ದೆಲ್ಲವೂ ಮಕ್ಕಳಾಗಲೇಬೇಕು ಅಂತೇನಿಲ್ಲವಲ್ಲ... ಇದು ನನ್ನ ಊಹೆ ಅಷ್ಟೇ...
ಆದರೆ ಒಟ್ಟಾರೆಯಾಗಿ ಈಗಿನ ಸಮಾಜವನ್ನ ನೋಡುವಾಗ ನಮ್ಮದೇ ಪುರಾಣಗಳನ್ನ ನಾವೇ ಅಣಕ ಮಾಡುವ ವಿಚಿತ್ರ ಪ್ರವೃತ್ತಿಯನ್ನ ಕಾಣುತ್ತೇವೆ... ಮೊದಲಾಗಿ ತಿಳಿದುಕೊಳ್ಳೋಣ ಅದೇನನ್ನು ಹೇಳುತ್ತಿದೆ ಅಂತ... ಅಧ್ಯಯನ ಮಾಡೋಣ ತಿಳಿದವರನ್ನ ಕೇಳಿ ತಿಳಿಯೋಣ... ಅದು ಬಿಟ್ಟು ತಿಳಿಯದೇ ಪುರಾಣಗಳನ್ನ ಅಣಕಮಾಡೋದು ಬೇಡ... ಇದು ಯಾವ ರೀತಿ ಆಗುತ್ತದೆ ಎಂದರೆ ಕುರುಡರು ಆನೆಯನ್ನ ಮುಟ್ಟಿ ಹೇಗಿದೆ ಅಂತ ಹೇಳಿದ ರೀತಿ.... ಮೊದಲು ನಾವು ಕಣ್ಣು ಬಿಟ್ಟು ನೋಡಬೇಕಾಗಿದೆ... ಬರಿಯ ಹೊರಕಣ್ಣು ಅಲ್ಲ... ಒಳಗಣ್ಣಿನಿಂದ ನೋಡಿದರೆ ಒಳಾರ್ಥಗಳು ತಿಳಿದೀತು ಅಲ್ವಾ... ಅವುಗಳು ಹೇಳುವ ನೀತಿಯನ್ನ ನಮ್ಮ ಬದುಕಿನ ಅನುಕೂಲಕ್ಕಾಗಿ ಅಳವಡಿಸಬೇಕಲ್ಲವೇ...

" ಓ ಮೈ ಗಾಡ್ " ಪುಳಿಯೋಗರೆಯಾದರೆ " ಪಿಕೆ " ಚಿತ್ರಾನ್ನ.ಅಂತೂ ಇಂತೂ "ಪಿಕೆ" ನೋಡೇ ಬಿಟ್ಟೆ... ಅದೂ ನಮ್ಮ ಯುಪಿ ಸಿಎಂ ಥರಾ.... ಅಯ್ಯೋ ನಾನೇ ಡೌನ್ ಲೋಡ್ ಮಾಡ್ಲಿಲ್ಲಾರೀ... ಯಾರೋ ಮಾಡಿ ಕೊಟ್ಟರು ಬಿಡಿ.... ಆದರೆ ನೋಡಿದ ಕೂಡಲೇ ನನಗನಿಸಿದ್ದು ಮುನ್ನೂರು ಕೋಟಿ ರೂಪಾಯಿ ವಹಿವಾಟು ಮಾಡುವಂಥಾದ್ದು ಅದರಲ್ಲೇನಿದೆ...? ನೀವೊಂದು ವೇಳೆ " ಓ ಮೈ ಗಾಡ್ " ಸಿನಿಮಾ ನೋಡಿದ್ದವರಾಗಿದ್ದಲ್ಲಿ ಬೋರು ಹೊಡೆಸೋದು ಗ್ಯಾರಂಟಿ... ಅದು ಪುಳಿಯೋಗರೆ ಆದರೆ ಇದು ಚಿತ್ರಾನ್ನ.... ಅದರೊಳಗಿರೋ ಹೆಚ್ಚಿನ ವಸ್ತುಗಳೆಲ್ಲಾ ಒಂದೇ, ಆದರೆ ಸ್ವಲ್ಪ ರುಚಿ ಬೇರೆ... ಧಾರ್ಮಿಕ ವಿಚಾರಗಳನ್ನು ಬದಿಗಿರಿಸಿದರೂ ಮುನ್ನಾಭಾಯ್ ಮತ್ತು ತ್ರೀ ಈಡಿಯಟ್ಸ್ ನಂತಹಾ ಸಿನಿಮಾ ಕೊಟ್ಟಂತಹ ನಿರ್ದೇಶಕನಿಂದ ನಮಗೆ ನಿರೀಕ್ಷೆಯ ತುಂಬಾನೇ ಇರುತ್ತದೆಯಲ್ವಾ ಆ ನಿರೀಕ್ಷೆಯೂ ಈಡೇರುವುದಿಲ್ಲ... ಆ ಚಿತ್ರಗಳನ್ನು ಅದೆಷ್ಟು ಬಾರಿಯಾದರೂ ನೋಡಬಹುದು ಆದರೆ ಇದು ಒಮ್ಮೆ ನೋಡಿದರೆ ಮುಗಿಯಿತು. ಮತ್ತೆ ನೋಡಬೇಕೆನಿಸೋದಿಲ್ಲ.
ಧಾರ್ಮಿಕ ವಿಚಾರಗಳೆಲ್ಲವೂ " ಓ ಮೈ ಗಾಡ್ "ನಲ್ಲಿರುವಂಥಾದ್ದೇ... ಮೂರ್ತಿ ಪೂಜೆ, ಅಭಿಷೇಕ ಅನ್ನೋದು ವೇಸ್ಟ್...ದೇವಸ್ಠಾನಗಳೆಲ್ಲಾ ಅಗತ್ಯವಿಲ್ಲ, ಸ್ವಾಮೀಜಿಗಳೆಲ್ಲಾ ಕಳ್ಳರು... ಹೀಗೆ ಎಲ್ಲೋ ನಿಮ್ಮೊಳಗಿನ ಆಸ್ತೀಕನನ್ನು ಕಾಡುತ್ತದೆಯಾದರೂ ಇವೆಲ್ಲಕ್ಕೂ ಓ ಮೈ ಗಾಡ್ ಸಿನಿಮಾದ ವಿಮರ್ಶೆಯಲ್ಲಿ ಉತ್ತರ ಹೇಳಿಯಾಗಿರೋದರಿಂದ ಮತ್ತೆ ಮತ್ತೆ ಅದನ್ನೇ ಹೇಳೋಕೆ ಯಾಕೋ ಬೋರು... ಹಾ ಹೇಳೋರು ಖಂಡಿತಾ ಇಲ್ಲಿ ಎಲ್ಲಾ ಧರ್ಮಗಳ ಹುಳುಕನ್ನೂ ತೋರಿಸಲಾಗಿದೆ ಅನ್ನುತ್ತಾರಾದರೂ ಅವೆಲ್ಲಾ ಎಲೆಯಲ್ಲಿ ಬಡಿಸೋ ಪಲ್ಯ ಉಪ್ಪು ಉಪ್ಪಿನಕಾಯಿ ಥರಾ... ಹೆಚ್ಚಿನ ಪಾಲು ಹಿಂದೂ ಧರ್ಮಕ್ಕೆ ಮೀಸಲು.... ಹೇಗೂ " ಓ ಮೈ ಗಾಡ್ " ನಲ್ಲಿ ಸ್ವಾಮೀಜಿಗಳನ್ನ ಟಾರ್ಗೆಟ್ ಮಾಡಿ ಆಗಿದೆ... ನಮ್ಮ ಸಿನಿಮಾದಲ್ಲಾದರೂ ಉಳಿದ ಧರ್ಮದ ಗುರುಗಳನ್ನ ಕಟಕಟೆಯಲ್ಲಿ ನಿಲ್ಲಿಸೋಣ ಅಂತ ರಾಜ್ ಕುಮಾರ್ ಹಿರಾನಿಗೂ ಅನ್ನಿಸದಿರೋದು ಅಥವಾ ಆಮೀರ್ ಖಾನ್ ಗೂ ಅನ್ನಿಸದಿರೋದು ನಮ್ಮ ದುರಂತ... ಆದರೆ ವಿಚಿತ್ರ ಏನಪ್ಪಾ ಅಂದರೆ ಚಿತ್ರದ ಮೊದಲಿಗೆ ಹೆಸರು ಬೀಳುವಾಗ ಅಲ್ಲಿ ರವಿಶಂಕರ್ ಗುರೂಜಿಗೆ ವಿಶೇಷ ವಂದನೆಗಳನ್ನ ಕೊಡಲಾಗಿದೆ... ನನಗನಿಸುತ್ತೆ ಅದನ್ನ ಮೊದಲು ಯಾಕೆ ಹಾಕಿದ್ದಾರೆ ಅಂದರೆ... ಕೊನೆಯಲ್ಲೇನಾದರೂ ಹಾಕಿದ್ದಾರೆ ಪ್ರೇಕ್ಷಕರೇ.... " ಯೇ ರಾಂಗ್ ನಂಬರ್ ಹೈ..." ಅಂತ ಅಂದು ಬಿಟ್ಟರೆ...??? ಅನ್ನೋ ಕಾರಣಕ್ಕಾಗಿ ಇರಬಹುದು.
ದಯವಿಟ್ಟು ನನ್ನನ್ನು ತಪ್ಪು ತಿಳಿಯಬೇಡಿ. ರವಿಶಂಕರ್ ಗುರೂಜಿಯವರ ಮೇಲೆ ನನಗೆ ಗೌರವ ಇದ್ದೇ ಇದೆ... ಆದರೆ ನಾನವರ ಅನುಯಾಯಿ ಅಥವಾ ಪರಮ ಭಕ್ತ ಅಲ್ಲ. ಹಾಗಂತ ಅವರನ್ನ ಸಂಶಯಿಸುತ್ತೇನೆ ಅಂತಲೂ ಅಲ್ಲ. ಅದನ್ನ ಬದಿಗಿಡೋಣ, ರಾಜ್ ಕುಮಾರ್ ಹಿರಾನಿಯವರನ್ನ ಹೀಗೆಯೇ ಒಂದು ಪ್ರಶ್ನೆ ಕೇಳ ಬಯಸುತ್ತೇನೆ... ನೀವು ನಂಬುವ ಸ್ವಾಮೀಜಿ ಮಾತ್ರ ಒಳ್ಳೆಯವರು ಜನ ನಂಬೋರು ಮಾತ್ರ ಕೆಟ್ಟವರಾ...? ಈ ಹಿಂದೆಯೂ ಹೇಳಿದ್ದೆ... ಧರ್ಮಗುರುಗಳು ಯಾರೇ ಆಗಲಿ ಬೆಳೆಯುತ್ತಿದ್ದಾರೆಂದರೆ ಅಲ್ಲಿಗೆ ಬರೋ ಭಕ್ತರಿಗೆ ಏನಾದರೂ ಲಾಭ ಆಗಿದ್ದರಲೇಬೇಕು... ನಮ್ಮವರೆಲ್ಲಾ ಈಗ ಲಾಭದ ಲೆಕ್ಕಾಚಾರವನ್ನೇ ಹಾಕೋದು ಸ್ವಾಮೀ... ( ಈಗ ಹಿರಾನಿ ಸಾಹೇಬ್ರನ್ನೇ ನೋಡಿ... ಯಾಕೆ ಇಂಥಾ ಸಬ್ಜೆಕ್ಟನ್ನೇ ಆಯ್ಕೆ ಮಾಡಿಕೊಂಡ್ರು... ಲಾಭಕ್ಕಾಗೇ ಅಲ್ವಾ.... ಬರೋಬ್ಬರಿ ಮುನ್ನೂರು ಕೋಟಿ ಗಳಿಸಿಕೊಂಡ್ರು ನೋಡಿ...) ಹಾಗಾಗಿ ಒಬ್ಬ ಧರ್ಮಗುರುಗಳಲ್ಲಿ ಏನೇನೂ ವರ್ಚಸ್ಸಿಲ್ಲ ಅನ್ನುವವರ ಕಡೆ ಯಾರೂ ಹೋಗಲ್ಲ. ಭಕ್ತರು ಒಂದು ವೇಳೆ ಹೋಗುತ್ತಾರೆಂದರೆ ಅವರಿಗೇನೋ ಸಿಕ್ಕಿದೆ ಅಂತಾನೇ ಅಲ್ವಾ...ಕನಿಷ್ಠ ಮನಃಶಾಂತಿಯಾದರೂ ಖಂಡಿತಾ ಸಿಕ್ಕಿರುತ್ತೆ. ಇದರಿಂದಾಗಿ ಸಮಾಜಕ್ಕೇನು ನಷ್ಟವಾಯಿತು...? ಸಮಾಜಕ್ಕೆ ನಷ್ಟವನ್ನುಂಟು ಮಾಡುತ್ತಿರೋದು ಜನರ ಆಸ್ತಿಕತೆ ಅಲ್ಲ... ಅದು ಮತಾಂಧತೆ ಅಲ್ವಾ..ಆದರೆ ನಿರ್ದೇಶಕರು ಅಂಥಾ ಮತಾಂಧತೆಯ ಕುರಿತು ಇಡಿಯ ಸಿನಿಮಾದಲ್ಲಿ ಏನೇನೂ ಹೇಳೋದಿಲ್ಲ. ಮತಾಂದತೆಗಿಂತಲೂ ಸ್ವಾಮೀಜಿಗಳ ಬಣ್ಣ ಬಯಲು ಮಾಡೋದರಲ್ಲೇ ಲಾಭ ಇದೆ ಅಂತ ನಿರ್ದೇಶಕರು ಯೋಚಿಸೋದಾದ್ರೆ ಸ್ವಾಮೀಜಿಗಳು ಕೂಡ ಲಾಭದ ಬಗ್ಗೆ ಯಾಕೆ ಯೋಚಿಸಬಾರದು... ಸ್ವಾಮೀಜಿಗಳ ಕೆಲಸ ಅದಲ್ಲ ಅನ್ನೋರಿಗೆ ನಾನೂ ಕೇಳಬಲ್ಲೆ... ಒಬ್ಬ ನಿರ್ದೇಶಕನಾಗಿ ಸಮಾಜಕ್ಕೆ ಕಂಟಕಪ್ರಾಯವಾಗಿರೋದರ ಕುರಿತು ಹೇಳದೆ ಹಾನಿಕರವಲ್ಲದ್ದರ ಬಗ್ಗೆ ಇವರ್ಯಾಕೆ ಹೇಳುತ್ತಾರೆ..?
ಮನೋರಂಜನೆಗಾಗಿ ಮಾಡಿರುವಂಥಾದ್ದು ಅಂದರೂ ಧಾರ್ಮಿಕ ವಿಚಾರಗಳು ಈ ಕಥೆಯ ಮೂಲ ಸತ್ವ ಆಗಿರುವುದರಿಂದ ಗೊಂದಲಗಳು ಕಾಣಿಸಿಯೇ ಕಾಣಿಸುತ್ತದೆ. ಉದಾಹರಣೆಗೆ ಹಿಂದೂ ದೇವಸ್ಥಾನದಲ್ಲಿ ಕೆನ್ನೆಗೆ ಹೊಡೆಯದಂತೆ ಮಾಡಲು ಕೆನ್ನೆಗೆ ಹಿಂದೂ ದೇವರ ಫೋಟೋ ಅಂಟಿಸಿಕೊಳ್ಳಬೇಕು ಅನ್ನೋ ಬುದ್ದಿಶಕ್ತಿ ಇರುವಾತನಿಗೆ ಇನ್ನುಳಿದ ಆಚರಣೆಗಳನ್ನೂ ಸಹ ಆಯಾಯಾ ದೇವಾಲಯಗಳಲ್ಲೇ ಆಚರಿಸಬೇಕು ಅನ್ನೋದು ಗೊತ್ತಾಗೋದಿಲ್ಲ. ಇರಲಿ ಬಿಡಿ. ಇಂಥಾದ್ದು ಹುಡುಕಿದರೆ ನಾನು ಕೋಮುವಾದಿ ಅಂತನಿಸಬೇಕಾಗುತ್ತೆ. ಬೇಸರವಾಗೋದು ಅದಲ್ಲ ಆಸ್ತಿಕತೆಯೇ ಭಾರತದ ಮೂಲ ಜೀವಾಳವಾಗಿರುವಾಗ ನಾಸ್ತಿಕತೆಯ ವೈಭವೀಕರಣ ಆಗುತ್ತಲ್ಲ. ಹೇಗೂ ಯುವ ಜನತೆ ಹೆಚ್ಚಾಗಿ ದೇವಸ್ಥಾನಗಳ ಬಳಿ ಸುಳಿಯೋದಿಲ್ಲ ಅಂಥವರಿಗೆಲ್ಲಾ ಇದೊಂದು ನೆಪ ಆಗುತ್ತೆ ಅಷ್ಟೇ. ಈ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಅನ್ನುವುದಕ್ಕಿಂತಲೂ ಆಸ್ತೀಕ ಭಾವನೆಗೆ ಧಕ್ಕೆಯಂತೂ ಇದ್ದೇ ಇದೆ. ಈಗಿನ ಕಾಲಕ್ಕೆ ತಕ್ಕಂತೆ ಯೋಚಿಸಬೇಕು ಅನ್ನೋರಿಗೆಲ್ಲಾ ಇದರಲ್ಲಿ ಅಂಥಾದ್ದೇನಿಲ್ಲ ಅನ್ನಿಸಬಹುದು. ಅಥವಾ ಇವರು ಹೇಳಿದ ಕೂಡಲೇ ಭಾರತದಲ್ಲಿ ಹಿಂದುತ್ವ ನಶಿಸುತ್ತೆ ಅಂತ ನಾನು ಹೇಳುತ್ತಿಲ್ಲ. ಹಾಗೇನಾದರೂ ಆಗುವಂಥಿದ್ದರೆ ಓ ಮೈ ಗಾಡ್ ಸಿನಿಮಾ ಬಂದಾಗಲೇ ಆಗಿರುತಿತ್ತು.
ಹಾಗಂತ ಈ ಚಿತ್ರದಲ್ಲೆಲ್ಲಾ ಹಿಂದೂ ವಿರೋಧಿ ಭಾವನೆಗಳೇ ತುಂಬಿವೆ ಅಂತಲೂ ನಾನು ಹೇಳೋಲ್ಲ. ಕೆಲವೊಂದು ಒಳ್ಳೆಯ ಪ್ರಶ್ನೆಗಳನ್ನ ಕೈಗೆತ್ತಿಕೊಂಡಿದ್ದಾರೆ. ಉದಾಹರಣೆಗೆ ಯಾರು ಯಾವ ಧರ್ಮದವ ಅಂತ ಹೇಗೆ ಗೊತ್ತಾಗುತ್ತೆ...? ಅನ್ನೋಕೆ ಯಾವುದಾದರೂ ಗುರುತಿದೆಯಾ ಅನ್ನೋ ಪ್ರಶ್ನೆ, ನಿಜಕ್ಕೂ ಒಳ್ಳೆಯ ಪ್ರಶ್ನೆ... ಆದರೆ ಕೇಳುವಂತವರು ಯಾರು ಅನ್ನೋದು ಮುಖ್ಯ ಅಲ್ಲವೇ...? ನನ್ನ ಬಳಿ ಈಗ ಅದರ ಫೋಟೋ ಇಲ್ಲ ಆದರೆ ಹಿಂದೊಮ್ಮೆ ಓದಿದ್ದೆ... ಅಮೀರ್ ಖಾನ್ ಅವರು ನೀಡಿದ್ದ ಹೇಳಿಕೆ... " ನನ್ನ ಪತ್ನಿ ಕಿರಣ್ ರಾವ್ ಹಿಂದೂವಾಗಿದ್ದರೂ ನನ್ನ ಮಕ್ಕಳು ಮುಸ್ಲಿಮರಾಗೇ ಇರುತ್ತಾರೆ ಅಂತ. " ಈಗ ಅದೇ ಪ್ರಶ್ನೆಯನ್ನ ನಾನು ಅಮೀರ್ ಖಾನ್ ರಿಗೆ ಕೇಳಿದರೆ ಹೇಗಿರುತ್ತೆ... ಎಲ್ಲಿದೆ ಸ್ವಾಮಿ ಆ ಧರ್ಮದ ಗುರುತು ಅಂತ. ನನಗೆ ಅವರಿಂದ ಉತ್ತರ ಸಿಕ್ಕೀತೋ... ಇನ್ನು ಅವರು ತಮ್ಮ ಆರಾಧನಾಲಯಕ್ಕೆ ಹೋಗಿರುವ ಚಿತ್ರಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ ಬಿಡಿ... ಅದನ್ನು ಚರ್ಚಿಸೋದು ಬೇಡ.. ನಿರ್ದೇಶಕರದ್ದು ಹಾಗೆಯೇ ತಾವು ಸ್ವಾಮೀಜಿಗಳ ಆಶೀರ್ವಾದ ಪಡೆದು ಸಿನಿಮಾ ಮಾಡುತ್ತಾರೆ ಆದರೆ ಜನರಿಗೆ ಸ್ವಾಮೀಜಿಗಳೆಲ್ಲಾ " ದೇವರನ್ನ ರಾಂಗ್ ಕನೆಕ್ಟ್ " ಮಾಡೋರು ಅನ್ನುವಾಗ ನಗು ಬರೋದಿಲ್ಲವಾ....ಹೇಳುವುದು ಒಂದು ಮಾಡುವುದು ಇನ್ನೊಂದು ಅಂತಾಗುತ್ತೆ.
ಇನ್ನೊಂದು ಕಿವಿಮಾತು ಭಯ ಇದ್ದೋರು ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ ಅನ್ನೋದು ನಂಬತಕ್ಕ ಮಾತಲ್ಲ. ಮಂದಿರಕ್ಕೆ ಹೋಗೋದರ ಹಿಂದೆ ಶತಮಾನಗಳ ನಂಬಿಕೆ ಇದೆ ಶ್ರದ್ಧೆ ಇದೆ. ಮಂದಿರಗಳೂ ಜನರಿಗೆ ಶಕ್ತಿ ಕೊಡುವ ಕೇಂದ್ರ. ಜನರನ್ನ ಸುಲಿಯೋ ಕೇಂದ್ರವಲ್ಲ. ಅದು ಎಲ್ಲೂ ಸೇವೆಗಳನ್ನ ಖಡ್ಡಾಯಗೊಳಿಸಿಲ್ಲ. ಮಂದಿರಗಳ ಬಗ್ಗೆ ಅಪಸ್ವರ ಎತ್ತುವುದಕ್ಕೂ ಮುನ್ನ ದಕ್ಷಿಣ ಭಾರತದ ದೇವಾಲಯಗಳತ್ತ ಒಮ್ಮೆ ಬಂದು ನೋಡಲಿ... " ನಿತ್ಯ ಅನ್ನ ಸಂತರ್ಪಣೆಯ " ಮೂಲಕ ಅದೆಷ್ಟೋ ಲಕ್ಷ ಜನರ ಹಸಿವನ್ನು ನೀಗುವುದು ಇದೇ ಮಂದಿರಗಳು ಅಂತ. ಮಠಗಳ ಸ್ವಾಮೀಜಿಗಳು ಅದೆಷ್ಟು ಜನರಿಗೆ ವಿದ್ಯಾದಾನ ಮಾಡುತ್ತೆ ಅಂತ. ವಾಸ್ತವದಲ್ಲಿ ಪಿಕೆ ಅಥವಾ ಓ ಮೈ ಗಾಡ್ ನ ಕಾಂಜಿಯ ಸ್ವಾರ್ಥ ಜನರ ಕಣ್ಣಿಗೆ ಕಾಣಿಸುವುದೇ ಇಲ್ಲ . ಇಲ್ಲಿ ಪಿಕೆಗೆ ತನ್ನ ಗ್ರಹಕ್ಕೆ ಮರಳಿ ಹೋಗಬೇಕು ಅನ್ನೋ ಸ್ವಾರ್ಥ ಕಾಂಜಿಗೆ ಕಳೆದುಹೋದ ಆಸ್ತಿ ಪಡೆದುಕೊಳ್ಳೋ ಸ್ವಾರ್ಥ. ಭಾರತ ದೇಶದ ಮೂಲ ಧರ್ಮ ಹೇಳಿಕೊಡೋದು ಸ್ವಾರ್ಥ ರಹಿತನಾಗಿರು ಅಂತಾನೇ ಅಲ್ವಾ.
ಈ ಧಾರ್ಮಿಕತೆಯನ್ನೆಲ್ಲಾ ಬಿಟ್ಟು ಸಿನಿಮಾ ಬಗ್ಗೆ ಹೇಳೋಕೆ ಹೊರಟರೆ ಏನೇನೂ ಇಲ್ಲ ಬರೀ ಸಪ್ಪೆ ಸಪ್ಪೆ.... ಅಮೀರ್ ಖಾನ್ ನಟನೆ ಅದ್ಭುತ ಅಂತೇನಿಲ್ಲ... ಅನುಷ್ಕಾ ಶರ್ಮಾರ ಅಗಲ ಬಾಯಿಯನ್ನ ನೋಡೋಕೆ ಬಹಳಾನೇ ಕಷ್ಟಪಡಬೇಕಾಗುತ್ತದೆ. ಮತ್ತೇನುಂಟು ಸರ್ಫರಾಜ್ ಅನ್ನೋ ಪಾತ್ರದಾರಿಯ ನಟನೆ ಖುಷಿ ಕೊಡುತ್ತದೆಯಾದರೂ ಯಾಕೋ ಈ ಪಾಕಿಸ್ಥಾನಿಗಳನ್ನ ಒಳ್ಳೆಯವರು ಅಂತ ನಂಬೋಕೆ ಬಹಳಾನೆ ಹಿಂಸೆಯಾಗುತ್ತೆ ರೀ... ಇದಕ್ಕೆ ಇತ್ತೀಚೆಗಷ್ಟೇ ಪೇಶಾವರದಲ್ಲಿ ಮಕ್ಕಳನ್ನ ಕಳಕೊಂಡ ಪೋಷಕರೊಬ್ಬರು ಹೇಳಿದ ಮಾತೂ ಕಾರಣ. ಅವರು ಹೇಳಿದ್ದರು... ನಮ್ಮ ಮಕ್ಕಳನ್ನ ಕೊಲ್ಲೋ ಬದಲು ಭಾರತದ ಹಿಂದೂ ಮಕ್ಕಳನ್ನಾದರೂ ಕೊಲ್ಲಬಹುದಿತ್ತು ಅಂತ.. ಇಂಥವರನ್ನೆಲ್ಲಾ ಒಳ್ಲೆಯವರನ್ನಾಗಿ ತೋರಿಸೋದು ಬೇಕಾ...? ಹಾಗಂತ ಇಲ್ಲವೇ ಇಲ್ಲ ಅಂದರೂ ತಪ್ಪಾಗುತ್ತದೆ. ಅವ ಒಬ್ಬ ಇದ್ದ ಅಂತಾನೆ ಅಂದುಕೊಂಡರಾಯಿತು ಬಿಡಿ. ಕೊನೆಗೆ ಏಲಿಯನ್ಸ್ ಗೂ ಸುಳ್ಳು ಹೇಳೋಕೆ ಕಲಿಸಿಕೊಡುವಾಗ ಮಾತ್ರ ಅಪ್ಪಟ ಬಾಲಿವುಡ್ ತನ ಪ್ರದರ್ಶಿಸುತ್ತಾರೆ ನಿರ್ದೇಶಕ ಮಹಾಶಯರು. ಹೀಗಿದೆ ನಾ ಕಂಡ ಪಿಕೆ.
ಕೊನೆಯದಾಗಿ... ನೀವು ಆಸ್ತಿಕರಾಗಿದ್ದಲ್ಲಿ ಸ್ವಲ್ಪ ಬೇಸರವಾದರೂ ಒಂದಂತೂ ಸತ್ಯ ಇಂತಹಾ ನೂರು ಸಿನಿಮಾ ಬಂದರೂ ಅಷ್ಟು ಸುಲಭವಾಗಿ ನಮ್ಮೊಳಗಿನ ಆಸ್ತಿಕತೆಯನ್ನ ಕೊನೆಗಾಣಿಸೋಕೆ ಆಗೋಲ್ಲ ರೀ ಇವರಿಗೆ... ಯಾಕೆಂದರೆ ಅದೆಷ್ಟೋ ಋಷಿ ಮುನಿಗಳ ತಪಶ್ಶಕ್ತಿ ಈ ನೆಲದಲ್ಲಿದೆ ಅಲ್ವಾ...

ನಾನು ಮತ್ತು ಫೇಸ್ ಬುಕ್ಕು....ನನಗೆ ಸರಿಯಾಗಿ ಎಷ್ಟು ಸಮಯದ ಹಿಂದಿನ ಮಾತು ಅಂತ ನೆನಪಿಲ್ಲ. ನನ್ನ ನೆನಪಿನ ಶಕ್ತಿ ತುಂಬಾನೇ ವೀಕು... ಅಂತೂ ನಾನು ಕಂಪ್ಯೂಟರ್ ತೆಗೆದುಕೊಂಡ ಹೊಸತರಲ್ಲಿ ಗೆಳೆಯನೊಬ್ಬ ಅರ್ಕುಟ್ ನಲ್ಲಿ ಅಕೌಂಟ್ ಒಂದನ್ನ ಓಪನ್ ಮಾಡಿ ಕೊಟ್ಟಿದ್ದ.. ಅದರಲ್ಲಿ ಖುಷಿ ಪಡುತ್ತಿದ್ದ ಸ್ವಲ್ಪ ಸಮಯದಲ್ಲೇ ಇನ್ನೊಬ್ಬ ಗೆಳೆಯ " ಫೇಸ್ ಬುಕ್ " ನೋಡು ಚೆನ್ನಾಗಿದೆ ಅಂತ ಹೇಳಿದ. ಹಾಗೇ ಅದರಲ್ಲೂ ಒಂದು ಅಕೌಂಟ್ ಓಪನ್ ಮಾಡಿದ್ದೆ... ಬರು ಬರುತ್ತಾ ಈ ಅರ್ಕುಟ್ ಅನ್ನೋದು ಹೇಗೆ ಮರೆಯಾಯಿತೋ ನನಗೇ ಗೊತ್ತಿಲ್ಲ... ಫೇಸ್ ಬುಕ್ ಅನ್ನೋದು ನನ್ನ ಜೀವನದ ಒಂದಷ್ಟು ಸಮಯವನ್ನ ತನ್ನತ್ತ ಸೆಳೆಯಲು ಶುರು ಮಾಡಿತ್ತು. ಈ ಸಮಯ ಸದುಪಯೋಗವಾದದ್ದೋ ಅಥವಾ ದುರುಪಯೋಗವಾದದ್ದೋ ಅನ್ನುವಂತಾದ್ದನ್ನ ಅವರವರಿಗೆ ಬಿಟ್ಟು ಬಿಡಬೇಕು ಅನ್ನೋದು ನನ್ನ ಅಭಿಪ್ರಾಯ.... ಕಾರಣ ನನ್ನ ಪಾಲಿಗಿದು ಸದುಪಯೋಗವೇ... ಹೇಗೆ...?
ಕಾಲೇಜು ದಿನಗಳಲ್ಲಿ ಸಹಜವಾಗಿ ಮೂಡುವ ಹುಚ್ಚು ಯೌವನದ ಆಸೆಗಳನ್ನೆಲ್ಲಾ ಹಾಳೆಗಳಲ್ಲಿ ಗೀಚಿ ನಮ್ಮ ಕಾಲೇಜಿನ ನೋಟೀಸು ಬೋರ್ಡಿನಲ್ಲಿ ಹಾಕೋದು ನನ್ನ ಆಗಿನ ಹವ್ಯಾಸವಾಗಿತ್ತು. ಆಗ ನನ್ನ ಪಾಲಿಗೆ ಅದೇ ಸ್ಟೇಟಸ್ ಅಪ್ ಡೇಟ್... ಬೆಳಿಗ್ಗೆ ಓದೋಕೆ ಅಂತ ಬೇಗ ಏಳೋದು.... ಹಾಗೇ ಏನೇನೋ ಕಲ್ಪಿಸಿಕೊಂಡು ಗೀಚೋದು... ಮತ್ತೆ ಅದನ್ನ ನೋಟೀಸ್ ಬೋರ್ಡಿಗಾಗಿ ಕೊಡೋದು...ಇದು ನಡೀತಾನೇ ಇತ್ತು... ಅದಕ್ಕೆ ನನ್ನ ಗೆಳೆಯರ ಶಹಬ್ಬಾಸ್ ಗಿರಿನೂ ಕಾರಣ. ಈ ಹವ್ಯಾಸಕ್ಕೆ ಬ್ರೇಕ್ ಬಿದ್ದಿದ್ದು.... ಕಾಲೇಜು ಜೀವನ ಮುಗಿಸಿ, ದುಡಿಯೋಕೆ ಶುರುಮಾಡಿದಾಗ. ಕೆಲಸ ಅಂತ ಶುರು ಆದಾಗ ಈ ಗೀಚೋದೆಲ್ಲಾ ನಿಂತೇ ಹೋಗಿತ್ತು. ಅದರಲ್ಲೂ ನನ್ನದು ಕಂಪನಿಯ ಶಿಫ್ಟ್ ಜೀವನ. ನಮ್ಮ ಲೈಫ್ ಸ್ಟೈಲೇ ಒಂದು ಥರಾ.... ಜಗತ್ತು ಮಲಗಿರುವಾಗ ನಾವ್ ಎದ್ದಿರ್ತೇವೆ, ಜಗತ್ತು ಎಚ್ಚರವಾಗಿರುವಾಗ ಮನೆಯಲ್ಲಿ ಅಂಗಾಲ ಬಿದ್ದಿರುತ್ತೇವೆ. ಇವೆಲ್ಲದರ ನಡುವೆ ಬರವಣಿಗೆ ನಿಜಕ್ಕೂ ನಿಂತೇ ಹೋಗಿತ್ತು.
ಹೀಗೆ ಒಣಗಿ ಇನ್ನೇನು ಸಾಯಲು ತಯಾರಾಗಿದ್ದ ಬರವಣಿಗೆಯ ಮರವನ್ನ ಮತ್ತೆ ಚಿಗುರುವಂತೆ ಮಾಡಿದ್ದು ಈ "ಫೇಸ್ ಬುಕ್ " ಅಂತ ನಾನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಇದಕ್ಕೆ ಸ್ಪೂರ್ತಿ ನೀಡಿದ್ದು ನನ್ನ ಆತ್ಮೀಯ ಮಿತ್ರರಾಗಿರೋ ರವೀಂದ್ರ ನಾಯಕ್. ಅವರ ಒಂದು ಸ್ಪೂರ್ತಿದಾಯಕ ಮಾತಿನಿಂದ ನಾನು ಮತ್ತೆ ಗೀಚೋಕೆ ಶುರು ಮಾಡಿದೆ.... ನನ್ನ ಪಾಲಿಗೆ ಈ ಫೇಸ್ ಬುಕ್ ಕಾಲೇಜು ದಿನಗಳ ನೋಟೀಸ್ ಬೋರ್ಡ್ ಆಗಿ ಹೋಗಿತ್ತು. ಬಹುಶ ಗೆಳೆಯರ ಬೆನ್ನು ತಟ್ಟುವಿಕೆ ಯಾವ ರೀತಿ ಫಲ ಕೊಡುತ್ತೆ ಅನ್ನೋದು ಗೊತ್ತಾಗಬೇಕಾದರೆ ಫೇಸ್ ಬುಕ್ ಗೆ ಬರಬೇಕೇನೋ...
ಅಂಥಾ ದೊಡ್ದ ಗೆಳೆಯರ ಬಳಗವೇ ಸಿಗುತ್ತಾ ಹೋಯಿತು...... ಅದೆಲ್ಲೋ ಕಳೆದೇ ಹೋಗಿದ್ದಾರೆ ಅನ್ನುವಷ್ಟರ ಮಟ್ಟಿಗೆ ಮರೆತು ಹೋಗಿದ್ದ ಬಾಲ್ಯದ ಸ್ನೇಹಿತರನ್ನ ಮತ್ತೆ ಒಂದು ಮಾಡುವ ಕೆಲಸ ಈ ಫೇಸ್ ಬುಕ್ ಮಾಡುತ್ತೆ ಅಂದರೆ ಅದರ ತಾಕತ್ತು ಸುಮ್ನೇನಾ... ಬಹುಶ ಈ ಬಾಲ್ಯದ ಸ್ನೇಹಿತರು ಮತ್ತು ಅವರೊಂದಿಗೆ ಮರುಕಳಿಸೋ ಆ ಹಳೆಯ ನೆನಪುಗಳು ನಮಗೆ ಕೊಡೋ ಖುಷಿ ಹೇಳಿಕೊಳ್ಳೋಕೆ ಖಂಡಿತಾ ಸಾಧ್ಯವಿಲ್ಲ...ಬರಿಯ ಗೆಳೆಯರಷ್ಟೇ ಅಲ್ಲ.. ನನಗಂತೂ ಈ ಫೇಸ್ ಬುಕ್ ಹಲವು ಅಕ್ಕಂದಿರನ್ನ, ಅಣ್ಣನಂತೆ ನೋಡಿಕೊಳ್ಳೋ ಹಿತೈಷಿಗಳನ್ನ ಒಂದಷ್ಟು ಗೆಳೆಯ ಗೆಳತಿಯರನ್ನ ಮುದ್ದು ತಂಗಿಯರನ್ನೂ ಕೊಟ್ಟಿದೆ. ಇದೆಲ್ಲಾ ಫೇಸ್ ಬುಕ್ಕಿನ ಭಾರತೀಕರಣದಿಂದಾಗಿದ್ದು ಅನ್ನಬಹುದು. ಅದರಲ್ಲೂ ಬರವಣಿಗೆಯ ಲೋಕದಲ್ಲಿ ತಮ್ಮ ಹೆಸರನ್ನ ಎತ್ತರಕ್ಕೇರಿಸಿಕೊಂಡವರ ಜೊತೆ ಸಿಕ್ಕ ಸಖ್ಯ, ಅವರ ಸಲಹೆಗಳು ಅವರ ಹಿತವಾದ ಮಾತು ಇದೆಲ್ಲಾ ನನ್ನ ಪಾಲಿಗೆ ಸಿಗುತ್ತೆ ಅಂತ ನಾನು ನಿಜಕ್ಕೂ ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ.
ಇವರೆಲ್ಲರೂ ನನ್ನ ಗೀಚುವಿಕೆಯನ್ನ ಮೆಚ್ಚಿ ಪ್ರೋತ್ಸಾಹಿಸುತ್ತಾರೆ. ಇವರ ಮೆಚ್ಚುಗೆಯೇ ಬಹುಶ ನನ್ನನ್ನ ಮತ್ತಷ್ಟು ಬರೆಯುವಂತೆ ಮಾಡುತ್ತೆ. ಹೀಗಾಗಿ ಮೊದಲೆಲ್ಲಾ ನಾಲ್ಕು ಸಾಲಿನ ಕವನಗಳನ್ನ ಬರೆಯುತ್ತಿದ್ದವ... ಹುಚ್ಚು ಧೈರ್ಯ ಮಾಡಿ ಉದ್ದನೆಯ ಲೇಖನ ಬರೆಯೋಕು ಕೈ ಹಾಕಿದೆ... ನಾಲ್ಕೈದು ಜನರ ಮೆಚ್ಚುಗೇನೇ ನನ್ನ ಪಾಲಿಗೆ ದೊಡ್ದದು. ಅಂತಾದರಲ್ಲಿ ಒಮ್ಮೆ ಪ್ರಸಿದ್ಧ ಅಂಕಣಕಾರರಾದ ಸಂತೋಷ್ ತಮ್ಮಯ್ಯ ಅವರು ತಮ್ಮ ಅಸೀಮಾಕ್ಕೆ ನನ್ನ ಲೇಖನವೊಂದನ್ನ ಕೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು...ಹೀಗೆ ನನ್ನೊಳಗಿನ ಸಣ್ಣ ಲೇಖಕನಿಗೆ ಫೇಸ್ ಬುಕ್ ಕೊಟ್ಟ ಖುಶಿ ಅಷ್ಟಿಷ್ಟಲ್ಲ.... ಹಾಗಾಗೇ ಕೆಲವೊಮ್ಮೆ ಜನ ನನ್ನನ್ನ ಯಾವಾಗ ನೋಡಿದರೂ ಫೇಸ್ ಬುಕ್ ನಲ್ಲೇ ಇರ್ತೀಯಾ ಅಂತದರೂ ನಾನು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದೆ ಇಲ್ಲ.
ಕೆಲವೊಂದು ಸ್ನೇಹಿತರು ಅಭಿಮಾನದಿಂದ ಮಾತನಾಡಿಸುವಾಗ ತುಂಬಾನೇ ಖುಷಿಯಾಗುತ್ತದೆ. ಇಂದೇನಾದರೂ ನಾನು ಒಂದಷ್ಟು ಸಾಲುಗಳನ್ನ ಬರೆಯುತ್ತಿದ್ದೇನೆ ಅಂತಾದರೆ ಅದಕ್ಕೆ ಕಾರಣ ಈ ಫೇಸ್ ಬುಕ್. ಹಾಗಂತ ನಾನೊಬ್ಬ ದೊಡ್ದ ಲೇಖಕನಾಗಿದ್ದೇನೆ ಅಂತಲ್ಲ. ನನ್ನ ಕಂಪನಿಯಲ್ಲೇ ನನಗಿಂತ ಪ್ರಬುದ್ಧ ಲೇಕಕರಿದ್ದಾರೆ... ಆದರೆ ಅವರಿಗೆ ಅಷ್ಟು ಸಮಯ ಕೊಡೋದಿಕ್ಕೆ ಆಗುತ್ತಿಲ್ಲ ಅಷ್ಟೇ... ಯಾವುದೇ ವಿಷಯಗಳಿರಲಿ ಅದರಲ್ಲಿ ಒಳ್ಳೆಯದೂ ಇರುತ್ತೆ ಕೆಟ್ಟದೂ ಇರುತ್ತೆ, ನಮಗೆ ಬೇಕಾದ ಹಾಗೆ ಬರಿಯ ಒಳ್ಳೆಯದನ್ನ ಆಯ್ಕೆ ಮಾಡಿಕೊಳ್ಳತೊಡಗಿದರೆ. ಎಲ್ಲವೂ ಒಳ್ಳೆಯದೇ ಆಗುತ್ತದೆ ಅಲ್ವೇ... ನಾನೂ ಕೂಡ ಫೇಸ್ ಬುಕ್ಕಿನ ಒಳ್ಳೆಯ ಅಂಶಗಲನ್ನೇ ಹೀರುತ್ತಿದ್ದೇನೆ... ಅಂದ ಹಾಗೆ ಇವತ್ತ್ಯಾಕೆ ಫೇಸ್ ಬುಕ್ ಬಗ್ಗೆ ಬಾರೀ ಬರೀತಿದಾನೆ ಅಂತ ನಿಮಗನ್ನಿಸುತ್ತಿದ್ದಿರಬಹುದು, ಕಾರಣ ಇಷ್ಟೇ ಇವತ್ತು " ಫೇಸ್ ಬುಕ್" ನ ಹತ್ತನೇ ಹುಟ್ಟು ಹಬ್ಬವಂತೆ. ನನ್ನ ಜೀವನದಲ್ಲಿ ಒಂದೊಳ್ಳೆ ತಿರುವು ಕೊಟ್ಟ ಈ ಸಾಮಾಜಿಕ ಜಾಲತಾಣಕ್ಕೆ ಒಂದು ಸಲಾಮ್ ಹೊಡೆಯೋಣ ಅಂತನಿಸಿತು.
ಚಿರಋಣಿ ನಿನಗೆ "ಫೇಸ್ ಬುಕ್" ಹಾಗೇನೇ ಹತ್ತನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ...

ರಾಜ್ಯಕ್ಕೆ ರಾಹುಲ್ ಗಾಂಧಿಯ ಭೇಟಿ ತಂದಿಟ್ಟ ಪ್ರಶ್ನೆಗಳ ಸರಮಾಲೆ...ಇಂದಿನ ವಿಜಯವಾಣಿ ಕೈಗೆತ್ತಿಕೊಂಡ ಕೂಡಲೇ ಕಾಣಿಸಿದ್ದು... " ರಾಹುಲ್ ಭೇಟಿ ಫಲಶ್ರುತಿ.... ಸುಸ್ತಿ ಬಡ್ಡಿ ಮನ್ನಾ..." ಅಂತೂ ರೈತರ ಪಾಲಿಗೆ ಒಂದಷ್ಟು ಖುಷಿಯ ವಿಚಾರ ಸಿಕ್ಕಿತಲ್ಲಾ... ಅಂತ ನಿರಾಳನಾದರೂ ಅಂತರ್ಮುಖಿಯಾಗಿ ಯೋಚಿಸಿದಾಗ ಪ್ರಶ್ನೆಗಳ ಸರಮಾಲೆಯೇ ನನ್ನ ಮುಂದೆ ಬಂದು ನಿಂತಿತು. ನನ್ನ ಮುಂದೆ ಬಂದ ಪ್ರಶ್ನೆ ಹಲವರಿಗೂ ಬಂದಿದ್ದಿರಬಹುದು ಅದಕ್ಕಾಗೇ ಈ ಕುರಿತಾಗಿ ಒಂದಷ್ಟು  ಯೋಚಿಸೋಣ.
ವಾಸ್ತವದಲ್ಲಿ ರಾಹುಲ್ ಗಾಂಧಿ ಹೇಳಿದರು ಅಂತ ಸರ್ಕಾರ ಸುಸ್ತಿ ಬಡ್ಡಿ ಮನ್ನಾ ಮಾಡುವ  ಕ್ರಮ ಕೈಗೊಂಡಿತೇ...? ಹೌದು ಅಂತಾದರೆ.... ಕೇವಲ ತಮ್ಮ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು ಅನ್ನೋದಕ್ಕಾಗೇ... ಮನ್ನಾ ಮಾಡಿದ್ದು , ಸರ್ಕಾರಕ್ಕೆ ಸುಸ್ತಿ ಬಡ್ಡಿ ಮನ್ನಾ ಮಾಡೋ ಮನಸಿದ್ದಿರಲಿಲ್ಲವೇ...? ಇಲ್ಲ ಸರ್ಕಾರಕ್ಕೂ ಮನಸ್ಸಿತ್ತು...ಅಂತಿಟ್ಟುಕೊಳ್ಳೋಣ ಹಾಗಾದರೆ ರೈತರ ಆತ್ಮಹತ್ಯೆಯಾಗಲು ಶುರುವಾಗಿ ಎಷ್ಟೋ ಸಮಯವಾಯಿತು, ಆವಾಗಲೇ ಯಾಕೆ ಈ ಕ್ರಮ ಕೈಗೊಳ್ಳಲಿಲ್ಲ...? ಇಲ್ಲ ಕೊಡುವ ಮನಸ್ಸಿದ್ದರೂ ರಾಹುಲ್ ಗಾಂಧಿ ಬರುವವರಿದ್ದರಲ್ಲ... ಆ ಹೊತ್ತಿನಲ್ಲಿ ಘೋಷಿಸೋಣ ಅಂತ ಯೋಚಿಸಿದೆವು ಅಂತ ಹೇಳಿದರು ಅಂತಿಟ್ಟುಕೊಳ್ಳಿ... ಹಾಗಾದರೆ ರೈತರ ತುರ್ತಿಗಿಂತಲೂ ತಮ್ಮ ನಾಯಕ ಬರುವುದು, ಅವರ ಮಾತಿನ ಮೂಲಕ ಜಾರಿಗೆಗೊಳಿಸುವುದು ಸರ್ಕಾರದ ನಿಲುವೇ...? ( ಇದು ಹೇಗಾಯಿತು ಅಂದರೆ ಒಬ್ಬಾತ ಮುಳುಗಿತ್ತಿದ್ದೇನೆ ಮೇಲೆತ್ತಿ ಅಂತ ಕೂಗುತ್ತಿದ್ದರೂ.. ನಿಲ್ಲಿ, ಫೋಟೋ ತೆಗೆಯುವವರು ಬರಲಿ ಇಲ್ಲಾಂದ್ರೆ ಬಚಾವ್ ಮಾಡಿದ್ದಕ್ಕೆ ಆಧಾರ ಇರೋದಿಲ್ಲ ಅಂದ ಹಾಗೆ ಅಲ್ವೇ )
ಇಲ್ಲ ಹಾಗೇನಿಲ್ಲ , ಆವಾಗ ರಾಜ್ಯ ಆರ್ಥಿಕ ಸಂಕಷ್ಟದಲ್ಲಿತ್ತು . ಇಷ್ಟೊಂದು ಹಣ ಸರ್ಕಾರದ ಬಳಿ ಇದ್ದಿರಲಿಲ್ಲ, ಹಾಗಾಗಿ ತಡವಾಯಿತು ಅಂತ ಹೇಳಿದರು ಅಂತಿಟ್ಟುಕೊಳ್ಳಿ ಆಗಲೂ ಪ್ರಶ್ನೆ ಬರುತ್ತದೆ...ಏನಪ್ಪಾ ಅಂದ್ರೆ ಈಗ ರಾಹುಲ್ ಗಾಂಧಿ ಬಂದ ಕೂಡಲೇ ದಿಢೀರನೇ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗೆ ಸುಧಾರಿತು...? ರಾಜ್ಯದ ಬೊಕ್ಕಸಕ್ಕೇ ಖಜಾನೆ ಭಾಗ್ಯದಂತಹಾ ಯಾವ ಸ್ಕೀಮು ತರಲಾಯಿತು...? ಇಲ್ಲ, ಆಗಲೂ ರಾಜ್ಯ ಆರ್ಥಿಕವಾಗಿ ಸಕ್ಷಮವಾಗಿಯೇ ಇತ್ತು ಅಂತ ಸರಕಾರ ಹೇಳಿತು...... ಅಂತಾದರೆ ಪರಿಹಾರ ಘೋಷಣೆಗೆ ಯಾಕೆ ಇಷ್ಟೊಂದು  ವಿಳಂಬವಾಗಿದ್ದು...? ಕ್ಲಪ್ತ ಸಮಯಕ್ಕೆ ರೈತರಿಗೆ ನೆರವು ಯಾಕೆ ಒದಗಿಸಲಿಲ್ಲ, ಅದೂ ರಾಜ್ಯ ಸರ್ಕಾರ ಸಕ್ಷವಾಗಿದ್ದು ಇಂಥಾ ಕ್ರಮ ಕೈಗೊಳ್ಳಲಿಲ್ಲವೇಕೆ...? ಸರಿ, ಇದನ್ನ ಇಲ್ಲೇ ಬಿಟ್ಟು ಬಿಡೋಣ... ರಾಹುಲ್ ಗಾಂಧಿಯವರಿಗೆ ಕರ್ನಾಟಕದ ರೈತರ ಮೇಲೆ ಕಾಳಜಿ ಇದೆ ಅದಕ್ಕಾಗೇ ಅವರು ಒತ್ತಡ ಹಾಕಿ ಈ ಘೋಷಣೆ ಮಾಡಿಸಿದರು ಅಂತಿಟ್ಟುಕೊಳ್ಳೋಣ... ಹಾಗಿದ್ದರೆ ದೆಹಲಿಯ ರಾಹುಲ್ ಗಾಂಧಿಗೆ ನಮ್ಮ ರೈತರ ಮೇಲೆ ಕಾಳಜಿ ಇರುವಷ್ಟು ನಮ್ಮ ಇಲ್ಲಿನ ನಾಯಕರಿಗಿಲ್ಲವೇ...? ಇಲ್ಲ ನಮ್ಮ ನಾಯಕರಿಗೆ ಅವರಿಗಿಂತ ಜಾಸ್ತಿಯೇ ಇದೆ ಅಂತಾದರೆ ಮತ್ತದೇ ಪ್ರಶ್ನೆ ಸುಸ್ತಿ ಬಡ್ಡಿ ಮನ್ನಾ ಯಾಕೆ ಇಷ್ಟೊಂದು ವಿಳಂಬವಾಗಿದ್ದು..?
ಇಲ್ಲ ರೀ ನಮ್ಮ ಯುವನಾಯಕನಿಗಿರುವ ರೈತ ಕಾಳಜಿಯನ್ನ ತೋರಿಸಬೇಕಿತ್ತು ಅದಕ್ಕಾಗಿ ಅವರು ಬರೋ ತನಕ ಕಾದಿದ್ದು ಅಂತ ನಿಷ್ಠುರವಾಗಿ ಹೇಳಿದರು ಅಂತಿಟ್ಟುಕೊಳ್ಳೋಣ... ಆಗಲೂ ಪ್ರಶ್ನೆ ಏಳುತ್ತದೆ... ಈ ಘೋಷಣೆಯನ್ನೆಲ್ಲಾ ಸರಕಾರವೇ ಯೋಚಿಸಿ ತಮ್ಮ ಯುವನಾಯಕನ ಬಾಯಲ್ಲಿ ಹೇಳಿಸಿದ್ದೇ...? ಹಾಗಾದರೆ ವಾಸ್ತವದಲ್ಲಿ ಈ ಯುವನಾಯಕನಿಗೆ ರೈತರ ಬಗ್ಗೆ ಕಾಳಜಿ ಇದೆಯೇ...? ಯಾಕೆಂದರೆ ಇವೆಲ್ಲವನ್ನೂ ಯೋಚಿಸಿದ್ದು ನಮ್ಮ ಸರಕಾರ ತಾನೇ...? ಇಲ್ಲ... ಅವರಿಗೆ ರೈತರ ಬಗ್ಗೆ ಕಾಳಜಿ ಇರೋದು ನಿಜ ಅವರೇ ಈ ಯೋಜನೆ ಮಾಡುವಂತೆ ಹೇಳಿದ್ದು ಅಂತಿಟ್ಟುಕೊಳ್ಳೋಣ.... ಹಾಗಿದ್ದರೆ ನಮ್ಮ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲವೇ ಅಥವಾ ತಮ್ಮ ರಾಜ್ಯದ ರೈತರ ಬಗೆಗಿನ ಕಾಳಜಿಗಿಂತ ತಮ್ಮ ಯುವನಾಯಕನ ಬಗೆಗೇ ಕಾಳಜಿ ಹೆಚ್ಚಾಯಿತೇ...?
ಹೀಗೆ ನಮ್ಮೊಳಗೆ ಏಳುವ ಪ್ರಶ್ನೆಗಳು ಹಲವಾರು... ಯಾವುದಕ್ಕೆ ಉತ್ತರಿಸಿದರೂ ಇನ್ನೊಂದು ಪ್ರಶ್ನೆಯಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರಿಗೆ ಮುಜುಗರ ಆಗಲೇಬೇಕು... ನಾನೇನೂ ರಾಜಕೀಯದ ಪ್ರಖರ ವಿಶ್ಲೇಷಕ ಅಲ್ಲವೇ ಅಲ್ಲ... ದಿನನಿತ್ಯದ ರಾಜಕೀಯವನ್ನ ಗಮನಿಸುವವ ಅಷ್ಟೇ... ಯಾವ ಪಕ್ಷದ ಬೆಂಬಲಿಗನೂ ಆಗದೆಯೇ ಒಬ್ಬ ತಟಸ್ಥ ವ್ಯಕ್ತಿಯಾಗಿ ಈ ಘಟನೆಯನ್ನ ನೋಡಿದರೆ ನಮಗೆಲ್ಲೋ ಇದು ರಾಹುಲ್ ಗಾಂಧಿಯವರ ವರ್ಚಸ್ಸನ್ನ ಹೆಚ್ಚಿಸುವ ನಾಟಕ ಅಂತ ಗೊತ್ತಾಗಿಯೇ ಆಗುತ್ತದೆ. ನಿಜವಾಗಿಯೂ ಆತನಿಗೆ ರೈತರ ಕಾಳಜಿ ಇದ್ದಿದ್ದರೆ ಅವರು ಯಾವಗಲೋ ಬರಬೇಕಿತ್ತು... ಬರಬೇಕಾದ ಹೊತ್ತಿನಲ್ಲಿ ಬರಲೇ ಇಲ್ಲ.... ಈಗ ಅವರು ಬರುವ ಮುನ್ನವೇ ಮಾಧ್ಯಮಗಳಲ್ಲಿ ಸಾಲ ಮನ್ನಾ ಘೋಷಣೆ ಸಾಧ್ಯತೆ ಅನ್ನುವ ಸುದ್ದಿ ಪ್ರಸಾರವಾಗುವಾಗಲೇ ಗೊತ್ತಾಗುತ್ತದೆ, ಇದು ಆತನ ರಾಜಕೀಯ ವರ್ಚಸ್ಸಿನ ಉದ್ದೀಪನಕ್ಕೆ ಕಾಂಗ್ರೆಸ್ ಪಕ್ಷ ಮಾಡುತ್ತಿರೋ ಪ್ರಯತ್ನ ಎಂದು. ನಿಜವಾಗಿಯೂ ಅವರಿಗೆ ಕಾಳಜಿ ಇದ್ದಿದ್ದರೆ ರೈತರು ಆತ್ಮಹತ್ಯೆ ಮಾಡತೊಡಗಿದ್ದಾಗಲೇ ಈ ಕ್ರಮಗಳನ್ನ ಕೈಗೊಳ್ಳಲು ಸೂಚಿಸಬಹುದಾಗಿತ್ತು... ಸರಿ ಅದೇನೋ ಕಾರ್ಯಕ್ರಮಗಳ ಒತ್ತಡ ಬರಲಾಗಲಿಲ್ಲ ಅಂತಾನೇ ಇಟ್ಟುಕೊಳ್ಳೋಣ... ಅವರು ಬಂದೇ ಪರಿಹಾರ ಘೋಷಣೆ ಆಗಬೇಕು ಅಂತೇನಿಲ್ಲವಲ್ಲ.... ಬಾಯಾರಿದವನಿಗೆ ಸಕಾಲದಲ್ಲಿ ನೀರು ಕೊಡಿಸುವುದಷ್ಟೇ ಮುಖ್ಯ , ಯಾವುದೇ ಆದರೂ ಸಕಾಲದಲ್ಲಿ ಕೆಲಸವಾಗಬೇಕೇ ಹೊರತು.. ಇಂತವರೇ ಬಂದು ಕೊಡಬೇಕು ಅಂತೇನಿಲ್ಲವಲ್ಲ. ಫೋನಿನ ಮುಖಾಂತರವೋ ಅಥವಾ ಮೈಲ್ ಮುಖಾಂತವರವೋ ಈ ಕೆಲಸ ಮಾಡಲು ಹೇಳಬಹುದಿತ್ತು. ತನ್ನ ಹೆಸರು ಉಲ್ಲೇಖವಾಗದಂತೆಯೇ ಹೋಳುವುದು ನಿಜವಾದ ಕಾಳಜಿಯಾಗಿರುತ್ತಿತ್ತು. ಆದರೂ ಅದನ್ನ ಮಾಡಲೇ ಇಲ್ಲ.
ಇಲ್ಲಿ ಇನ್ನೊಂದು ವಿಪರ್ಯಾಸ ಅಂದರೆ ತಮ್ಮ ಯುವನಾಯಕನ ವರ್ಚಸ್ಸನ್ನ ಏರಿಸುವ ಭರದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ವರ್ಚಸ್ಸನ್ನ ಕಳೆದುಕೊಳ್ಳುತ್ತಿದ್ದಾರೆ. ಇಲ್ಲವಾದರೆ  ಉಪಾಧ್ಯಕ್ಷರು  ಹೇಳಿಯೇ ಮಾಡಬೇಕು ಅಂತೇನಿದೆ... ರಾಜ್ಯಕ್ಕೆ ಆರ್ಥಿಕ ಸದೃಡತೆ ಇದೆ ಅಂತಾದರೆ ಪರಿಹಾರ ಘೋಷಣೆ ಮಾಡುವುದೇ ಒಬ್ಬ ಜನನಾಯಕ ಕೆಲಸ... ಇಲ್ಲ ಪರಿಹಾರ ಘೋಷಣೆ ಸಾಧ್ಯವೇ ಇಲ್ಲ ಅಂತಿದ್ದದ್ದು ರಾಜ್ಯದ ಆರ್ಥಿಕತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಅಂತಿದ್ದದ್ದು ಇವರು ಬಂದ ಕೂಡಲೇ ಪರಿಸ್ಥಿತಿ ಅನುಕೂಲಕರವಾದದ್ದು ಹೇಗೆ...? ... ಆವಾಗ ಆಗದ್ದು ಈಗ ಆಗಲು ಹೇಗೆ ಸಾಧ್ಯ... ರಾಹುಲ್ ಗಾಂಧಿಯವರೇನೂ ತಮ್ಮ ಕೈಯಿಂದ ಹಣ ಕೊಡಲಿಲ್ಲ ತಾನೆ , ಈಗಲೂ ಖರ್ಚಾಗುತ್ತಿರೋದು ರಾಜ್ಯದ ಬೊಕ್ಕಸದ್ದೇ ಅಲ್ವೇ... ಇದರರ್ಥ ಆಗಲೂ ಸಾಧ್ಯವಿತ್ತು ಆದರೂ ಮಾಡಲಿಲ್ಲ. ತಮ್ಮ ನಾಯಕ ಹೇಳಿದ ಮೇಲೆ ಮಾಡುತ್ತಿದ್ದೇವೆ ಅನ್ನುವುದನ್ನ ರಾಜ್ಯದ ನಾಯಕರು ತೋರಿಸಿಕೊಂಡರು. ಆ ಮೂಲಕ ಬಯಲಾದ ಕಟು ಸತ್ಯ ಏನೆಂದರೆ  ನಮ್ಮ ರಾಜ್ಯದ ಜನನಾಯಕರಿಗೆ ತಮಗೆ ವೋಟು ಹಾಕಿದ ಜನರಿಗಿಂತಲೂ ಅವರಿಗೆ ಟಿಕೇಟು ನೀಡಿದ ನಾಯಕರ ಪಾಲಿಗೇ ಅವರ ನಿಷ್ಠೆ ಅನ್ನುವುದು.
ಇಷ್ಟಾದ ಮೇಲೆ ನಮ್ಮೆಲ್ಲರಲ್ಲಿ ಹುಟ್ಟಲೇ ಬೇಕಾದ ಒಂದೇ ಒಂದು ಪ್ರಶ್ನೆ ಇಂತಹಾ ಕುಟುಂಬ ನಿಷ್ಠೆ ಹೊಂದಿದ ಪಕ್ಷವೂ ಮತ್ತು ಆ ಕುಟುಂಬದ ಕುಡಿಯನ್ನ ಜನನಾಯಕ ಅಂತ ಬಿಂಬಿಸುವುದಕ್ಕೆ ಏನು ಬೇಕಿದ್ದರೂ ಮಾಡಬಲ್ಲ, ತಮ್ಮದೇ ರಾಜ್ಯದ ಜನರ ಹಿತಾಸಕ್ತಿಯನ್ನ ಬದಿಗೊತ್ತಬಲ್ಲ ತಮ್ಮದೇ ವರ್ಚಸ್ಸನ್ನ ಕಳೆದುಕೊಳ್ಳಬಲ್ಲ ನಾಯಕರಿಂದ ನಮ್ಮ ರಾಜ್ಯದ ಉದ್ಧಾರ ಸಾಧ್ಯವೇ...? ಇಂತವರನ್ನೂ ನಾವು ಆಯ್ಕೆ ಮಾಡಬಹುದೇ...? ಈ ಪ್ರಶ್ನೆಗಳಷ್ಟನ್ನೂ ನಿಮಗೆ ನೀವೇ ಕೇಳಿಕೊಂಡು ಕೊನೆಯ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಕಂಡುಕೊಳ್ಳಿ.... ಇಲ್ಲವೇ ಮುಂದಿನ ಬಾರಿ ಇವರು ವೋಟು ಕೇಳಿಕೊಂಡು ಬರುತ್ತಾರಲ್ಲ ಆವಾಗ ಅವರಿಗೆ ಈ ಎಲ್ಲ ಪ್ರಶ್ನೆಯನ್ನ ಕೇಳಿ ಉತ್ತರ ಪಡೆದುಕೊಳ್ಳಿ. ಅದನ್ನ ಇನ್ನೂ ಮಾಡದೇ ಹೋದರೆ ರಾಜ್ಯದ ಅಭಿವೃದ್ಧಿ ಗಗನ ಕುಸುಮವೇ...

" ನವ ದಂಪತಿ ಸಮಾವೇಶ " ಅನ್ನೋ ಕಾರ್ಯಕ್ರಮದ ಸಾರ್ಥಕತೆಯ ಕ್ಷಣಗಳುಸರಿಸುಮಾರು ಹತ್ತು ದಿನಗಳ ಹಿಂದೆಯೋ ಏನೋ ನನ್ನ ಆತ್ಮೀಯ ಮಿತ್ರರೊಬ್ಬರಿಂದ ಸಂದೇಶವೊಂದು ಬಂದಿತ್ತು " ಅಕ್ಟೋಬರ್ ತಿಂಗಳಿನ ನಾಲ್ಕನೆಯ ತಾರೀಖಿನಂದು, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ’ ನವದಂಪತಿ ಸಮಾವೇಶ ’ ಇದೆ, ತಾವೂ ಭಾಗವಹಿಸಬೇಕು " ಅಂದಿದ್ದರು. " ಸರಿ ನೋಡೋಣ " ಅಂತಿದ್ದೆ, ಅದಾಗಿ ನಾಲ್ಕೈದು ದಿನಗಳ ತರುವಾಯ ನನಗೊಂದು ಕರೆ ಬಂದಿತ್ತು... ಅತ್ತ ಕಡೆಯಿಂದ ನಾನು " ಕಲ್ಲಡ್ಕ ಪ್ರಭಾಕರ ಭಟ್  ಮಾತನಾಡುತ್ತಿರೋದು ನಾಡಿದ್ದು ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶ ಇದೆ ಬರಬೇಕು " ಅಂದರು. ಒಂದು ಕ್ಷಣ ದಂಗಾಗಿ ಬಿಟ್ಟಿದ್ದೆ... ಅಲ್ಲಿಯವರೆಗೆ ಸಾಧ್ಯವಾದರೆ ಹೋಗೋಣ ಅಂತಿದ್ದ ನನ್ನೊಳಗಿನ ನಿರ್ಧಾರ ಹೋಗಲೇಬೇಕು ಅಂತ ಬದಲಾಗಿಬಿಟ್ಟಿತ್ತು. ಅಂತೂ ಆ ದಿನ ಬಂದೇ ಬಿಟ್ಟಿತ್ತು ಮುಂಜಾನೆ ಬೇಗ ಎದ್ದವನೇ  ಏಳೂವರೆಗಾಗಲೆ ಮನೆಯಿಂದ ಕಾರ್ಯಕ್ರಮ ನಡೆಯುವ ಕಲ್ಲಡ್ಕಕ್ಕೆ ಹೊರಟು ಬಿಟ್ಟಿದ್ದೆ, ಕಲ್ಲಡ್ಕ ತಲುಪುವಷ್ಟರಲ್ಲಿ ಸರಿಯಾಗಿ ಒಂಭತ್ತು ಗಂಟೆಯಾಗಿತ್ತು. ಅಲ್ಲಿಂದ ಅದ್ಭುತ ಕ್ಷಣಗಳ ಅನಾವರಣ ಆಗುತ್ತಲೇ ಹೋಯಿತು.
ಶ್ರೀರಾಮ ವಿದ್ಯಾಕೇಂದ್ರದ ಆವರಣಕ್ಕೆ ಕಾಲಿಡುವಾಗಲೇ ಅದೆಷ್ಟೋ ಮಹಿಳೆಯರು ತಮ್ಮ ನಗುಮೊಗದಿಂದ " ಜೈ ಶ್ರೀರಾಮ್ " ಅನ್ನೋ ಘೋಷಣೆಗಳ ಮೂಲಕ ನಮ್ಮನ್ನ ಸ್ವಾಗತಿಸತೊಡಗಿದರು. ನಮ್ಮನ್ನ ಬರಲು ಹೇಳಿ ಮಣೆಯ ಮೇಲೆ ನಿಲ್ಲಿಸಿ ಕಾಲಿಗೆ ನೀರು ಹಾಕಿ ತೊಳೆದು ವಸ್ತ್ರವೊಂದರಿಂದ ಒರೆಸಿದಾಗ ನನಗೆ ತೀರಾ ಮುಜುಗರವಾದದ್ದಂತೂ ಸತ್ಯ. ಬಹುಶಃ ಆತಿಥ್ಯದ ಅತ್ಯುತ್ತಮ ಸ್ತರ ಇದಾಗಿತ್ತೋ ಅಥವಾ ನವ ವಧೂ ವರರನ್ನ ಬರಿಯ ಮಾತಿನ ಮೂಲಕ ಲಕ್ಷ್ಮೀ ನಾರಾಯಣ ಸ್ವರೂಪ ಅಂತನ್ನದೆ ನಿಜವಾಗಿಯೂ ಅದೇ ರೀತಿಯಲ್ಲಿ ನೋಡುವ ರೀತಿಯಾಗಿತ್ತೇನೋ... ಗೊತ್ತಿಲ್ಲ ಆ ಮುಜುಗರದ ಭಾವ ಮರೆಯಾಗವ ಮುನ್ನವೇ ನಮ್ಮನ್ನ ಕರಸಿ ಉಪಹಾರ ನೀಡಲಾಯಿತು... ಶುಚಿಯಾದ ರುಚಿಯಾದ ಲಘು ಉಪಹಾರ. ಅದನ್ನ ಸವಿದವರೇ  ಹತ್ತಿರದಲ್ಲೇ ಇದ್ದ ಶಿಶು ಮಂದಿರಕ್ಕೆ ಹೋಗುವಂತೆ ಹೇಳಿದರು. ಅಲ್ಲಿದ್ದ ಹಿರಿಯ ದಂಪತಿಗಳಿಂದ ನಮ್ಮ ಹಣೆಗೆ ತಿಲಕವಿಡಿಸಿ ನಮ್ಮನ್ನ ಸ್ವಾಗತಿಸತೊಡಗಿದರು, ಅವರಿಂದ ಆಶೀರ್ವಾದ ಪಡೆದು ಮುಂದೆ ನಡೆದಾಗ ನಮಗೆ ಅಲ್ಲಿನ ಗುಹೆಯೊಳಗಿನ ಶಿವನ ದರ್ಶನ ಮಾಡಿಸಿದರು... ಕೃತಕವಾಗಿ ನಿರ್ಮಾಣ ಮಾಡಿದ ಶಿವನ ಗುಹಾ ದೇವಾಲಯ.... ಒಂದು ವಿಶಿಷ್ಟ ಅನುಭವವನ್ನ ನೀಡಿತ್ತು. ನಮ್ಮಿಂದಲೇ ಆ ಶಿವನಿಗೆ ಪುಷ್ಪಾರ್ಚನೆ ಮಾಡಿಸಿದರು, ಆ ಗುಹೆಯ ಇನ್ನೊಂದು ತುದಿ  ಪಕ್ಕದ ಇನ್ನೊಂದು ಕೊಠಡಿಯನ್ನ ಸೇರಿಸುತ್ತಿತ್ತು. ಅಲ್ಲಿ ನಮ್ಮ ವಿವರಗಳನ್ನೆಲ್ಲಾ ಬರೆಯಲು ಹೇಳಿ ಅಲ್ಲಿಯೇ ಕುಳಿತು ಕೊಂಡು ಸ್ವಲ್ಪ ಹೊತ್ತು ಕಾಯುವಂತೆ ಹೇಳಿದರು.
ಮುಂದಿನ ಕಾರ್ಯಕ್ರಮಗಳ ಬಗ್ಗೆ  ಹೇಳುವ ಮುನ್ನ ಆ ಶಾಲೆಯ ವಾತಾವರಣದ ಬಗ್ಗೆ ಹೇಳಿ ಬಿಡುತ್ತೇನೆ. ಪ್ರಕೃತಿಯ ನಡುವೆ ಗುರುಕುಲದ ಮಾದರಿಯಂತ ಶಾಲೆ, ಎಲ್ಲಾ ಕೊಠಡಿಗಳಿಗೆ ಭಾರತೀಯ ಸಾಧಕರ ಹೆಸರುಗಳನ್ನ ಇಡಲಾಗಿತ್ತು... ಕಣಾದ, ಆರ್ಯಭಟ, ಕೇಶವ , ಮಾಧವ , ಗಾರ್ಗಿ ಇತ್ಯಾದಿ ಎಂಥಾ ಪರಿಕಲ್ಪನೆ ಅಲ್ವಾ... ಅಲ್ಲಿನ ವಿದ್ಯಾರ್ಥಿಗಳಿಗೆ ಈ ಭಾರತೀಯ ಸಾಧಕರ ಹೆಸರು ಮರೆಯಲು ಸಾಧ್ಯವೇ ಇಲ್ಲ. ಎಷ್ಟು ಸರಳವಾಗಿ ಎಳೆಯರ ಮನಸ್ಸಲ್ಲಿ ನಮ್ಮವರ ಹೆಸರನ್ನ ಅಚ್ಚುಗೊಳಿಸುತ್ತಿದ್ದಾರೆ ಅನ್ನುವ ಭಾವ ನನ್ನನ್ನ ರೋಮಾಂಚನಗೊಳಿಸಿತ್ತು. ಆ ಕೊಠಡಿಗಳೂ ಕೂಡಾ ಹಾಗೆಯೇ ಚೌಕಾಕಾರದಲ್ಲಿರದೆ ಅಷ್ಟಕೋನಾಕೃತಿಯ ಕೊಠಡಿಗಳಾಗಿದ್ದವು. ಆ ಕೊಠಡಿಯ ಮೇಲ್ಗಡೆ ಮರದ ಹಾಸು ಆ ತರಗತಿಗಳಿಗೆ ಭವ್ಯವಾದ ಅನುಭೂತಿಯನ್ನ ಕೊಡಿಸುತ್ತಿತ್ತು. ಪ್ರತಿ ತರಗತಿಯಲ್ಲೂ ಭಾರತಮಾತೆಯ ಚಿತ್ರ. ನಿಜಕ್ಕೂ ಅಲ್ಲಿ ಕಲಿತ ವಿದ್ಯಾರ್ಥಿಗಳ ಬಗ್ಗೆ ಸಣ್ಣ ಅಸೂಯೆಯಾಗಿದ್ದನ್ನ ಅಲ್ಲಗಳೆಯುವ ಹಾಗಿಲ್ಲ.
ಸರಿ ಇನ್ನು ಮುಂದುವರಿಯೋಣ ಅಲ್ಲಿಂದ ಸಭಾಂಗಣಕ್ಕೆ ಇನ್ನೇನು ಹೋಗಬೇಕು ಅಂತಿರುವಾಗ ಭಾರತೀಯ ಉಡುಗೆಯನ್ನುಟ್ಟ ಪಂಚೆ ಮತ್ತು ಶಾಲು ಹೊದ್ದ ಒಂದಷ್ಟು ಬಾಲಕರು ಆ ಕೊಠಡಿಯ ದ್ವಾರದ ಬಳಿ ಬಂದರು... ಅದರಲ್ಲೊಬ್ಬ ವಿದೇಶಿ ಬಾಲಕನು ಇದ್ದದ್ದೂ ಒಂದು ವಿಶೇಷ ... ನಮ್ಮನ್ನ ವೇದ ಘೋಷಗಳೊಂದಿಗೆ ಮುಖ್ಯ ಸಭಾಂಗಣಕ್ಕೆ ಕರೆದು ತರಲಾಯಿತು ಆ ಮಕ್ಕಳ ಸ್ಫುಟವಾದ ವೇದ ಮಂತ್ರಗಳು ಮನಸ್ಸಿಗೆ ಇಂಪನ್ನ ಕೊಡುತ್ತಿತ್ತು. ಸಭಾಂಗಣಕ್ಕಿದ್ದ ಮೆಟ್ಟಿಲುಗಳು ಮುಗಿಯುವಲ್ಲಿ ಭಾರತ ಮಾತೆಯ ದೊಡ್ಡದಾದ ಭಾವಚಿತ್ರ ರಾರಾಜಿಸುತ್ತಿತ್ತು ಆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಾಗ ನನ್ನೊಳಗಾದ ಭಾವಕ್ಕೆ ಯಾವ ಪದಗಳೂ ಸಾಟಿಯಿಲ್ಲ. ಮತ್ತೆ ಪನ್ನೀರು ಸಲ್ಲಿಸುವಿಕೆ ಮತ್ತು ಅಕ್ಷತೆಯ ಕಾಳನ್ನ ಹಾಕಿ ನಮ್ಮನ್ನ ಸಭಾಂಗಣದೊಳಕ್ಕೆ ಕರೆಸಿಕೊಂಡರು. ವೇದಿಕೆಯಲ್ಲಿ ತುಳುನಾಡಿನ ಗುತ್ತಿನ ಮನೆಯ ಪ್ರತಿಕೃತಿ ಕಾಣಿಸುತ್ತಿತ್ತು. ನೈಜವಾಗಿರಲಿ ಎಂದೋ ಏನೋ ಒಬ್ಬ ದಪ್ಪ ಬಿಳಿ ಮೀಸೆಯ ಗುತ್ತಿನ ಯಜಮಾನನ ವೇಷ ಧರಿಸಿ ವೇದಿಕೆಯ ಬಲಭಾಗದಲ್ಲಿ ಹಾಯಾಗಿ ಕುಳಿತಿದ್ದ. ದಪ್ಪ ಮರದ ಕಂಬಗಳ ಮನೆ ಎಡಭಾಗದಲ್ಲಿ ತುಳುನಾಡಿನ ಪ್ರತೀಕವಾದ ದೈವದ ಮಂಚ , ಅಲ್ಲೇ ಅಕ್ಕಪಕ್ಕದಲ್ಲಿ ಒಂದಷ್ಟು ಬೊಂಡ(ಎಳನೀರು)ದ ರಾಶಿ, ಅಕ್ಕಿ ಮುಡಿ... ಒಟ್ಟಾರೆಯಾಗಿ ಕಣ್ಮನ ಸೆಳೆಯುವ ಸಾಂಪ್ರದಾಯಿಕ ಚಿತ್ರಣ ನಮ್ಮ ಮುಂದಿಟ್ಟಿದ್ದರು... ತುಂಬಾ ಅದ್ಭುತ ಕಲ್ಪನೆಯ ವೇದಿಕೆ ಅದನ್ನೂ ಮಾಡಿದ ಉದ್ದೇಶ ಇದೊಂದು ಮನೆ ನಾವೆಲ್ಲರೂ ಆ ಮನೆಯ ಸದಸ್ಯರು ಅನ್ನುವ ಭಾವ ನಮ್ಮಲ್ಲಿ ಮೂಡಿಸುವುದಕ್ಕಾಗಿ ಅಷ್ಟೇ... ಎಂಥಾ ಯೋಚನೆ ಅಲ್ವಾ.
ತದನಂತರ ಅತಿಥಿಗಳು ವೇದಿಕೆಯನ್ನ ಅಲಂಕರಿಸಿದರು ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ  ಸು.ರಾಮಣ್ಣ ಅವರು ಮುಖ್ಯ ಅತಿಥಿಯಾಗಿದ್ದರೆ ಹಿರಿಯ ದಂಪತಿಗಳಾಗಿ ನಮ್ಮನ್ನ ಹರಸಬೇಕಿದ್ದವರೂ ವೇದಿಕೆಯಲ್ಲಿದ್ದರು. ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ನ ಅಧ್ಯಕ್ಷರೂ ಮತ್ತು ಸಂಚಾಲಕರೂ ವೇದಿಕೆಯಲ್ಲಿದ್ದರು.  ಅದಾದ ಮೇಲೆ ನವದಂಪತಿಗಳ ಪರಿಚಯ ಕಾರ್ಯಕ್ರಮ ನಡೆಯಿತು. ಗಂಡನ ಪರಿಚಯವನ್ನ ಹೆಂಡತಿಯೂ... ಹೆಂಡತಿಯ ಪರಿಚಯವನ್ನ ಗಂಡನೂ ಮಾಡುವಂತೆ ನಮ್ಮಲ್ಲಿ ಕೇಳಿಕೊಂಡರು ಹೀಗೆ ಬಂದ ಸುಮಾರು ನೂರಕ್ಕೂ ಹೆಚ್ಚು ಜೋಡಿಗಳು ತಮ್ಮ ಪರಿಚಯ ಮಾಡಿಕೊಂಡರು... ಅದಾದ ಮೇಲೆ ಸು.ರಾಮಣ್ಣ ಅವರು ನಮ್ಮನ್ನ ಉದ್ದ್ದೇಶಿಸಿ ಮಾತನಾಡಿದರು. ಎಪ್ಪತ್ತು ಮೀರಿದ ಸು.ರಾಮಣ್ಣ ಅವರು ವೃದ್ಧಾಪ್ಯದಲ್ಲಿ ಅಂತಃಶಕ್ತಿ ಚಿರಯೌವನದಂತೆಯೇ ಇರಲು ಓಂಕಾರ ಪಠಣ ಮಾಡಿ ಅನ್ನುವ ಸಲಹೆ ನೀಡಿದರು ಅವರು ಹೇಳಿದ ಓಂಕಾರವಂತೂ ಇಡಿಯ ಸಭೆಯಲ್ಲಿ ಒಂದು ವಿಶಿಷ್ಟ ಕಂಪನವನ್ನುಂಟುಮಾಡಿದ್ದು ಸುಳ್ಳಲ್ಲ. ಅದಾದ ಮೇಲೆ ಭಾರತೀಯರಲ್ಲಿ ಮದುವೆಯ ಬಗ್ಗೆ ಇರೋ ಭಾವನೆಗೂ ಪಾಶ್ಚಾತ್ಯರ ಮದುವೆಯ ಬಗೆಗಿನ ಕಲ್ಪನೆಯ ಅನಾವರಣ ಮಾಡಿದರೂ ಅದರಲ್ಲೂ ಅವರು ಮದುವೆಯ ಬಗ್ಗೆ ಕೊಟ್ಟ ವ್ಯಾಖ್ಯಾನ ನಿಜಕ್ಕೂ ಅದ್ಭುತ... " ಭಾರತದಲ್ಲಿ ಮದುವೆ ಅಂದರೆ ಬರಿಯ ಸಡಗರ ಸಂಭ್ರಮದ ವಿಚಾರವಷ್ಟೇ ಅಲ್ಲ... ಆಡಂಬರದ ಆಚರಣೆಯೂ ಅಲ್ಲ ಅದು ಶಾಶ್ವತೆಯ ಸಂಕಲ್ಪದ ಸುಮುಹೂರ್ತ " ಭಾರತದಲ್ಲಿ ಮದುವೆ ಅಂದರೆ ಜೀವನ ಪರ್ಯಂತ ಒಟ್ಟಾಗಿ ಇರಲು ಗಂಡು ಹೆಣ್ಣು ಕೈಗೊಳ್ಳುವ  ಸಂಕಲ್ಪ ಅಂದಾಗ ಭಾರತೀಯ ಮೌಲ್ಯಗಳ ಬಗ್ಗೆ ಅಭಿಮಾನವಾದದ್ದು ನಿಜವೇ....
ಅದಾದ ಮೇಲೆ ಗುಂಪು ಚರ್ಚೆ. ಗಂಡಂದಿರದ್ದೂ ಬೇರೆಯೇ ಗುಂಪು ಮಾಡಿ ಹೆಂಡತಿಯರದ್ದೂ ಬೇರೆಯೇ ಗುಂಪು ಮಾಡಲಾಯಿತು. ಅಲ್ಲಿ ಸಂಭಾಷಣೆಯ ಮೂಲಕ ಮೂಲಕ, ಹಲವು ಪ್ರಶ್ನೆಗಳ ಮೂಲಕ ಕುಟುಂಬದಲ್ಲಿ ಬರಬಹುದಾದ ಸಮಸ್ಯೆಗಳನ್ನ ಹೇಗೆ ನಿವಾರಿಸಬಹುದು...? ಮತ್ತು ಸಮರಸದ ದಾಂಪತ್ಯ ಜೀವನ ಹೇಗೆ ನಡೆಸಬಹುದು...? ಅನ್ನುವುದನ್ನ ಚರ್ಚಿಸಲಾಯಿತು. ಅನುಭವಿಗಳಾಗಿದ್ದರಿಂದ ಅವರ ಕೆಲವೊಂದು ಸಲಹೆ ನಿಜವಾಗಿಯೂ ದಾಂಪತ್ಯ ಜೀವನದಲ್ಲಿ ಉಪಯೋಗವಾಗಿಯೇ ಆಗುತ್ತದೆ. ಅಲ್ಲಿ ಚರ್ಚೆಯಾದ ವಿಚಾರಗಳೆಲ್ಲವೂ ಪ್ರಾಮುಖ್ಯವಾದದ್ದೇ. ನಿಜವಾಗಿ ನಾನು ನವದಂಪತಿ ಸಮಾವೇಶ ಅಂತ ಕೇಳಿದಾಗ ಇದೇ ರೀತಿ ಬೇರೆ ಬೇರೆಯಾಗಿ ಗಂದ ಹೆಂಡದಿರನ್ನ ಕುಳ್ಳಿರಿಸಿ ಅವರ ಬಗ್ಗೆ ಇವರನ್ನ ಕೇಳೋದು ಇವರ ಬಗ್ಗೆ ಅವರನ್ನ ಕೇಳೋದು ಅಂತಹುದೇ ಕಾರ್ಯಕ್ರಮವೋ ಏನೋ ಅಂದುಕೊಂಡಿದ್ದೆ ಆದರೆ ಇಲ್ಲಿ ಅಂಥಾದ್ದೇನೂ ಕೇಳದೆ ಮುಂದೆ ನಾವು ಎಡವಬಹುದಾದ ಸಂಧರ್ಭಗಳು ಎಲ್ಲೆಲ್ಲಾ ಬರಬಹುದು ಆ ಕ್ಷಣ ಬಾರದಂತೆ ಮಾಡಲು ನಾವೇನು ಮಾಡಬಹುದು ಅನ್ನುವುದನ್ನ ಹೇಳಿಕೊಟ್ಟರು. ಬೇರೆ ಬೇರೆಯಾಗಿ ಚರ್ಚಿಸಿದರೂ ಆ ಎರಡೂ ಚರ್ಚೆಯ ಸಾರಾಂಶಗಳನ್ನ ಮತ್ತೆ ಎಲ್ಲರ ಸಮ್ಮುಖದಲ್ಲಿ ಕ್ರೋಢಿಕರಿಸಲಾಗಿತ್ತು. ಆದರೆ ಅದು ಮಧ್ಯಾಹ್ನದ ಭೋಜನದ ನಂತರ.
ಗುಂಪು ಚರ್ಚೆಯಾದ ನಂತರ ದಂಪತಿಗಳೆಲ್ಲರಿಗೆ ಸವಿಯಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಹಾಳಾನೆ ಹಿಡಿಸಿದ್ದು ಸಹ ಪಂಕ್ತಿ ಭೋಜನ, ನೂರಕ್ಕೂ ಹೆಚ್ಚಿನ ಜೋಡಿಗಳಿತ್ತು ಅಂದೆನಲ್ಲಾ... ಹಿಂದೂ ಸಂಪ್ರದಾಯದ ಎಲ್ಲಾ ಜಾತಿಗಳವರನ್ನೂ ಅಲ್ಲಿ ಕಲೆ ಹಾಕಿದ್ದರು. ಪೌರೋಹಿತ್ಯ ಮಾಡುವವರೂ ರಿಕ್ಷಾಚಾಲಕರೂ ಬೇರೆ ಬೇರೆ ವೃತ್ತಿಯವರೂ ಮೇಲ್ವರ್ಗದವರು ಕೆಳವರ್ಗದವರು ಎಲ್ಲರೂ ಇದ್ದರೂ ಒಂದೇ ಕಡೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟು ಜನರಿದ್ದರೂ ಪಾಶ್ಚಾತ್ಯರ ಬಫೆ ಸಿಸ್ಟಮ್ ಗೆ ಜೋತು ಬೀಳದೆ ನೆಲದಲ್ಲಿಯೇ ಕುಳಿತು ಬಾಳೆಯೆಲೆಯಲ್ಲಿ ಭೋಜನ ವಿತರಿಸುವ ಯೋಜನೆ ನಿಜಕ್ಕೂ ನಮ್ಮತನವನ್ನು ನೆನಪಿಸಿತು.  ಅದರಲ್ಲೂ ಭೋಜನ ಮಂತ್ರದ ನಂತರವೇ ಎಲ್ಲರೂ ಒಂದಾಗಿ ಊಟ ಮಾಡಲು ತೊಡಗಿದೆವಲ್ಲ ಅದ್ಭುತ ಸಾರ್ಥಕ ಭಾವದ ರುಚಿಯನ್ನೂ ತೋರಿಸಿಬಿಟ್ಟರು. ಈ ಭೋಜನದ ಹೊತ್ತಿನಲ್ಲಿ ಶ್ರೀರಾಮ ವಿದ್ಯಾಕೇಂದ್ರದವರು ಮೇಘಾಲಯದ ವಿದ್ಯಾರ್ಥಿಗಳನ್ನ ದತ್ತಕ್ಕೆ ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಖರ್ಚುವೆಚ್ಚವನ್ನ ನೋಡುತ್ತಿರುವುದಾಗಿ ಹೇಳಿದಾಗ ಆ ವಿದ್ಯಾಕೇಂದ್ರದ ಸಾಮಾಜಿಕ ಕಳಕಳಿಯ ಬಗ್ಗೆ ಗೌರವದ ಭಾವ ಮನದಲ್ಲಿ ಗಟ್ಟಿಯಾಗಿತ್ತು.  ಭೋಜನದ ನಂತರ ಸಾಮೂಹಿಕವಾಗಿ ಭಾವಚಿತ್ರ ತೆಗೆಸಿದ್ದೂ ಆಯಿತು ಅದಾದ ಮೇಲೆ ಸಮಾರೋಪ ಕಾರ್ಯಕ್ರಮ ಯೋಜಿಸಲಾಗಿತ್ತು.
ಸಮಾರೋಪ ಕಾರ್ಯಕ್ರಮದಲ್ಲಿ ಮೊದಲಿಗೆ ಗುಂಪು ಚರ್ಚೆಯ ಸಾರಾಂಶದ ಮಂಡನೆ ಮಾಡಲಾಯಿತು, ಅದಾದ ಬಳಿಕ ಭಾಗವಹಿಸಿದ ದಂಪತಿಗಳಿಗೆ ತಮ್ಮ ಅನುಭವವನ್ನ ಹೇಳಿಕೊಳ್ಳಲು ಅವಕಾಶ ನೀಡಲಾಯಿತು. ಹಾಳು ಬಾಯಿ ಚಪಲ... ನಾನು ಸಣ್ಣದಾಗಿ ನನ್ನ ಮಾತುಗಳನ್ನ ಹೇಳಿಯೇ ಬಿಟ್ಟೆ... ಮತ್ತೇನೂ ಅಲ್ಲ ಈ ಹಿಂದೆ ಫೇಸ್ ಬುಕ್ಕಿನಲ್ಲಿ ಚಾಲೆಂಜ್ ಹಾಕಿದ್ದೆ ....  " ಸಂಘದ ಕಾರ್ಯಕ್ರಮದಲ್ಲಿ ಪಂಕ್ತಿ ಭೋಜನದ ವಿಚಾರದಲ್ಲಿ ತಾರತಮ್ಯ ಮಾಡಿದರೆ ಸಂಘವನ್ನೇ ತೊರೆಯುತ್ತೇನೆ " ಅಂತ... ನನ್ನ ಕಣ್ಣೆದುರಿಗೇ ಸಹ ಪಂಕ್ತಿ ಭೋಜನ ನಡೆಯಿತಲ್ಲ.... ಸಹಪಂಕ್ತಿ ಭೋಜನ ಅಭಿನಂದನೀಯ ಅನ್ನುತ್ತಾ ಅಚ್ಚುಕಟ್ಟಾದ ಕಾರ್ಯಕ್ರಮ ರೂಪಿಸಿದ ಮತ್ತು ಅದರ ಸಾಫಲ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದವನ್ನ ಹೇಳಿ ಬಿಟ್ಟೆ... ಮಾತು ಮಾತಿನಲ್ಲಿ ಈ ಕಾರ್ಯಕ್ರಮವನ್ನ ಬುದ್ಧಿಜೀವಿಗಳು ಅಂತ ಹೇಳಿಕೊಳ್ಳುತ್ತಾರಲ್ಲ ಅವರು ನೋಡ ಬೇಕಿತ್ತು ಅಂತ ಹೇಳಲು ಮರೆಯಲಿಲ್ಲ.
ಇದಾದ ಮೇಲೆ ಸು.ರಾಮಣ್ನ ಅವರು ನವ ದಂಪತಿಗಳಿಗೆ ಒಂದಷ್ಟು ಕಿವಿಮಾತು ಹೇಳಿದರು.  ಊಟ ಮತ್ತು ಮಲಗಲು ಅವಕಾಶವಿದೆ ಅನ್ನೋ ಕಾರಣಕ್ಕೆ ಮನೆಯನ್ನ ಲಾಡ್ಜ್ ಮಾಡಬೇಡಿ... ಆದಷ್ಟು ಮಾತೃಭಾಷೆ ಬಳಸಿ, ಸ್ವದೇಶಿ ವಸ್ತುಗಳನ್ನ ಬಳಸೋದು ರೂಢಿಸಿಕೊಳ್ಳಿ... ನಮ್ಮ ಸಂಸ್ಕೃತಿಯನ್ನ ಉಳಿಸಿ ಬೆಳಿಸಿ....ಹೀಗೆ ಎಲ್ಲವೂ ಅತ್ಯುತ್ತಮವಾದದ್ದೇ... ಕಲ್ಲಡ್ಕ ಪ್ರಭಾಕರ ಭಟ್ ಅವರು ಭವಿಷ್ಯದ ಹಿಂದೂ ಸಮಾಜದ ಉಳಿಯುವಿಕೆ ನಿಟ್ಟಿನಲ್ಲಿ  ಕನಿಷ್ಠ ಮೂರಾದರೂ ಮಕ್ಕಳಿರಲಿ ಅಂದರು.. ನಮ್ಮ ಹಿಂದೂ ಸಂಪ್ರದಾಯ ಸಂಸ್ಕೃತಿ ಹೀಗೆ ಎಲ್ಲವೂ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವುಗಳೇ... ಕೊನೆಯಲ್ಲಿ ನಮಗೆಲ್ಲರಿಗೂ ಕಾರ್ಯಕ್ರಮದ ಸವಿನೆನಪಿಗಾಗಿ ಕಿರುಕಾಣಿಕೆಗಳನ್ನೂ ಕೊಡಲಾಯಿತು. ಅದಾದ ಮೇಲೆ ಮತ್ತೆ ಲಘು ಉಪಹಾರ.
ಈ ಎಲ್ಲಾ ಸಾರ್ಥಕ ಕ್ಷಣಗಳನ್ನ ಹೊತ್ತುಕೊಂಡು ಅಲ್ಲಿಂದ ಹೊರನಡೆಯತೊಡಗಿದಾಗ ಹೆಜ್ಜೆ ಭಾರವೆನಿಸಿದ್ದೂ ಹೌದು...   ಇಡಿಯ ಕಾರ್ಯಕ್ರಮದಲ್ಲಿ ಹಿಂದೂ ಸಂಸ್ಕೃತಿಯನ್ನ ನಮ್ಮ ಮೇಲೆ ಹೇರುವ ಬದಲು ಅದರ ಆಚರಣೆಯ ಮೂಲಕ ನಮ್ಮನ್ನ ಪ್ರಭಾವಿತಗೊಳಿಸಿದರು. ನಿಜಕ್ಕೂ ನನ್ನದೂ ಅದೇ ಯೋಚನೆ.. ಯಾವತ್ತೂ ನಾವು ಹೇಳಿಕೊಟ್ಟದ್ದಕ್ಕಿಂತ ನಾವು ನಡೆದು ತೋರಿಸಿದಾಗ ಅದು ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗುತ್ತದೆ. ಆಗ ಮಾತ್ರ ನಮ್ಮ ಸಂಸ್ಕಾರ, ಸಂಸ್ಕೃತಿಗಳು ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಒಂದು ಅದ್ಭುತ ಕಾರ್ಯಕ್ರಮದಲ್ಲಿ ಭಾಗೀಯಾದೆ ಅನ್ನುವ ಸಾರ್ಥಕ ಭಾವ ನನ್ನದಾಯಿತು... ಆದರ್ಶಮಯ ದಾಂಪತ್ಯ ನಡೆಸುವುದು ಹೇಗೆ ಎನ್ನುವುದನ್ನಲ್ಲೆವನ್ನೂ ಹೇಳಿಕೊಟ್ಟರು ಅಂತಲ್ಲ... ಆದರೆ ಸಾಮಾನ್ಯವಾಗಿ ದಂಪಾತ್ಯದಲ್ಲಿ ಎಲ್ಲಿ ಎಡವೋ ಸಾಧ್ಯತೆ ಇದೆ ಅಂತ ಹೇಳಿಕೊಟ್ಟರು... ಒಂದು ವೇಳೆ ಇಂತಹಾ ಸಂಭವನೀಯತೆ ಮುಂದೆ ಬಂತು ಅಂತಿಟ್ಟುಕೊಳ್ಳಿ...ಆಗ ಈ ಸಲಹೆಗಳು ನಮಗೆ ಉಪಯೋಗವಾದೀತು...  ಉದಾಹರಣೆ ಕೊಡುವುದಾದರೆ ಗೊತ್ತಿಲ್ಲದ ದಾರಿಯಲ್ಲಿ ಪ್ರಯಾಣ ಮಾಡುವುದು ಹೇಗೆ ಅಂತ ಹೇಳಿಕೊಡದೇ ಎಲ್ಲೆಲ್ಲಿ ತಿರುವುಗಳಿವೆ ಆ ಸಂದರ್ಭದಲ್ಲಿ ಯಾವ ಸುರಕ್ಷತಾ ಕ್ರಮ ಕೈಗೊಳ್ಲಬೇಕು ಅನ್ನುವುದನ್ನ ಹೇಳಿಕೊಟ್ತರು ....  ಇಂತಹಾ ಕಾರ್ಯಕ್ರಮದ ಮೂಲಕ ನಮ್ಮ ಮುಂದಿನ ಪೀಳಿಗೆಯ ನವದಂಪತಿಗಳೆಲ್ಲರಿಗೂ ಇಂತಹ ಅದ್ಭುತ ಕ್ಷಣಗಳು ಸಿಗುವಂತಾಗಲಿ ಎಂದೇ ಹಾರೈಸುತ್ತೇನೆ ಮತ್ತು ಈ ಕಾರ್ಯಕ್ರಮಕ್ಕೆ ಹೋಗುವಂತೆ ನಿವೇದನೆ ಮಾಡಿದ ಅವರಿಗೂ ಕಾರ್ಯಕ್ರಮದ ಆಯೋಜಕರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಈ ಸಾರ್ಥಕ ಕ್ಷಣಗಳು ನನ್ನ ಮತ್ತು ನನ್ನ ಪತ್ನಿಯ ದಾಂಪತ್ಯ ಜೀವನದ ಹೊಸ್ತಿಲಲ್ಲಿ ಸಿಕ್ಕಿದೆಯಲ್ವಾ ಅನ್ನೋದು ಮತ್ತೂ ಖುಷಿಯ ವಿಚಾರ...