Tuesday 3 November 2015

ವೇದವ್ಯಾಸರ ಕರ್ಣ - ಒಂದು ವಿಶ್ಲೇಷಣೆ - ಭಾಗ ೩ (ಕೊನೆಯದು)



ಕರ್ಣನ ಕುರಿತಾದ ಒಳ್ಳೆಯ ಅಭಿಪ್ರಾಯಗಳಲ್ಲೊಂದು ಆತನ ದಾನದ ಗುಣ. ಸರಿ ಒಪ್ಪಿಕೊಳ್ಳೋಣ ಆತ ರಾಜನಾಗಿದ್ದಾಗ ದಾನ ಮಾಡಿದ್ದ ಅಂತ. ಇದು ಅವನಲ್ಲಿರೋ ಒಂದು ಒಳ್ಳೆಯ ಗುಣ ಒಪ್ಪಿಕೊಳ್ಳಬಹುದು... ಆದರೂ ನನಗೆ ತನ್ನ ಮಾಂಸವನೇ ದಾನ ಮಾಡಿದ ಶಿಬಿ ಚಕ್ರವರ್ತಿ ಬಹಳ ಹಿಡಿಸುತ್ತಾನೆ. ಇರಲಿ ಇವನ ದಾನಗಳಲ್ಲಿ ಬಹಳ ಮುಖ್ಯವಾಗಿ ಚರ್ಚೆಯಾಗೋದು ಕವಚ ಮತ್ತು ಕರ್ಣ ಕುಂಡಲಗಳನ್ನೇ ದೇಹದಿಂದ ಕಿತ್ತೊಗೆದು ಕೊಟ್ಟ ಅಂಶ. ಈ ದಾನದ ಕುರಿತಾಗಿ ಪಾವಗಡ ಪ್ರಕಾಶರಾಯರು ಬಹಳ ಸೊಗಸಾಗಿ ಒಂದು ಸೂಕ್ಷ್ಮವನ್ನ ನಮ್ಮ ಮುಂದಿಡುತ್ತಾರೆ. ಗಮನಿಸಬೇಕಾದ ಅಂಶ... ನೀವು ಯಾರಿಗೋ ಏನೋ ಒಂದು ವಸ್ತು ಕೊಟ್ಟಿರಿ ಎಂದಿಟ್ಟುಕೊಳ್ಳಿ ಅದಕ್ಕೆ ಬದಲಾಗಿ ಏನೋ ಪಡೆದಿರಿ ಆಗ ಅದು ದಾನ ಅಂತ ಕರೆಸಿಕೊಳ್ಳುತ್ತದೆಯೇ....? ಇಲ್ಲವಲ್ಲ ಹಾಗಿದ್ದರೆ ಇಂದ್ರನಿಂದ ಅರ್ಜುನನನ್ನ ಕೊಲ್ಲಲೆಂದೇ ಶಕ್ತ್ಯಾಯುಧ ಪಡೆದು ಕರ್ಣಕುಂಡಲ ಮತ್ತು ಕವಚ ಕೊಟ್ಟಿದ್ದು ಹೇಗೆ ದಾನವಾಗುತ್ತೆ....? ಅನ್ನೋ ಪಾವಗಡರ ಪ್ರಶ್ನೆಗೆ ನನಗೀಗಲೂ ಉತ್ತರ ಸಿಕ್ಕಿಲ್ಲ.
ಕರ್ಣನಲ್ಲಿ ಕಾಣಿಸುವ ಮತ್ತೊಂದು ಗುಣ ದುರಂಹಕಾರ... ತನ್ನ ಪೌರುಷ ಪರಾಕ್ರಮದ ಬಗೆಗಿನ ಹಮ್ಮು.... ಶಲ್ಯನನ್ನೇ ಸಾರಥಿಯನ್ನಾಗಿ ಪಡೆಯುವಾಗಲೂ ನಮಗೇ ಕಾಣಿಸೋದು.... ಈ ದುರಾಭಿಮಾನವನ್ನ ಕಂಡೂ ಕಾಣದಂತಾಗಿಸುವ ಜನರಿಗೆ ಇದೊಂದು ಸಾಮಾನ್ಯ ಗುಣವಾಗಿರಬಹುದು.... ಆದರೆ ಇದು ಸಜ್ಜನರ ಅಥವಾ ಉತ್ತಮರ ಗುಣಧರ್ಮವಲ್ಲ. ಒಬ್ಬ ವ್ಯಕ್ತಿಯ ಇಡಿಯ ವ್ಯಕ್ತಿತ್ವವನ್ನೇ ಮಸುಕುಗೊಳಿಸುವ ಗುಣ ಈ ಅಹಂ. ಅದಿದ್ದಾಗಲೂ ಕಂಡು ಕಾಣದಂತಿರಲು ನನಗೆ ಸಾಧ್ಯವಿಲ್ಲ, ವ್ಯಾಸರು ಇದನ್ನ ಅಲ್ಲಲ್ಲಿ ನಮಗೆ ಸ್ಪಷ್ಟವಾಗಿ ತಿಳಿಸುತ್ತಾ ಹೋಗುತ್ತಾರೆ.
ಕರ್ಣನಭಿಮಾನಿಗಳಿಗೆ ಕಾಣಸಿಗುವ ಮತ್ತೊಂದು ದೊಡ್ಡ ಅಂಶ ಕರ್ಣನ ಸಾವು. ಕೆಲವರಂತೂ ಇದನ್ನ ಕೃಷ್ಣನ ಕುತಂತ್ರ ಅನ್ನುವಷ್ಟರ ಮಟ್ಟಿಗೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಬಹುಶ ರಾಮಾಯಣದಲ್ಲಿ ವಾಲಿ ವಧೆ ಕೂಡ ಇದೇ ರೀತಿ ಚರ್ಚೆಗೆ ಗ್ರಾಸವಾಗುತ್ತದೆ. ಕರ್ಣನಿಗೆ ಇಂತಹಾ ಸಾವು ಬರಲು ಕಾರಣವೇ ಅವನದ್ದಾಗಿರತಕ್ಕಂತಹ ದುಷ್ಕರ್ಮ.... ಇಲ್ಲಿ ಅವನನ್ನ ಸೋಲಿಸಲಾಗೋಲ್ಲ ಎಂಬ ಕಾರಣಕ್ಕಾಗಿ ಕೃಷ್ಣ ಆರೀತಿಯ ಸಂಹಾರ ಮಾಡಿದ್ದಲ್ಲ..... ದುಷ್ಟನೊಬ್ಬನಿಗೆ ಯಾವುದೇ ರೀತಿಯ ಸಾವು ಅಧರ್ಮವಲ್ಲ ಎಂಬುದನ್ನ ಜಗತ್ತಿಗೆ ತೋರಿಸುವುದಕ್ಕಾಗಿ ಮಾಡಿದ.... ಅಧರ್ಮದ ನಾಶ ಅಥವಾ ಅಧರ್ಮಿಯ ನಾಶ ಎರಡೂ... ಹೇಗೆ ಆಗಲಿ ಮಾಡಲೇ ತಕ್ಕದ್ದು ಅನ್ನುವುದಕ್ಕಾಗಿ.... ಇನ್ನೂ ಹೇಳೋದಾದ್ರೆ.... ಅಭಿಮನ್ಯುವನ್ನ ಹಿಂದಿನಿಂದ ಕೊಂದವನಿಗೆ ಇಂಥಾ ಸಾವು ಅನ್ಯಾಯ ಅಂತನಿಸುವುದಿಲ್ಲ... ಬಹುಶ ಅಲ್ಲಿನ ಪಾಪ ಕರ್ಮಕ್ಕೆ ಸಿಕ್ಕ ಪ್ರತಿಫಲ ಅಷ್ಟೇ...
ಇವೆಲ್ಲಕ್ಕಿಂತಲೂ ಕರ್ಣ ಪಕ್ಷಪಾತಿಗಳು ಬಹಳಷ್ಟು ಬಾರಿ ಹೇಳೋ ಮಾತು ವಿಧಿವಂಚಿತ ವ್ಯಕ್ತಿ ಆತ.... ವಿಧಿಯಿಂದಾಗಿ ಆತ ದುರಂತ ನಾಯಕನಾದ.... ವಿಧಿ ಯಾರ ಬದುಕಲ್ಲಿ ಆಡಿಲ್ಲ....? ಹಾಗೆ ನೋಡೋದಾದ್ರೆ ಪಾಂಡವರ ಬದುಕಿನಲ್ಲಿ ವಿಧಿ ಕಠೋರವಾಗಿದ್ದಷ್ಟು ಕರ್ಣನ ಬದುಕಲ್ಲಿ ಕಠೋರವಾಗಿತ್ತೇ.... ವಿಧಿಯಾಟಕ್ಕೆ ಕರ್ಣ ಅಧರ್ಮದತ್ತಲೇ ಹೋಗತೊಡಗಿದ.... ಅದೇ ಪಾಂಡವರು ಅದೆಷ್ಟೇ ದೊಡ್ಡ ಬಿರುಗಾಳಿ ಬೀಸಿದರೂ ಧರ್ಮದ ಮಾರ್ಗವನ್ನ ಬಿಟ್ಟು ಕದಲಲಿಲ್ಲ.... ನಾವು ಕಲಿಯಬೇಕಾಗಿರೋದು ಇದನ್ನೇ.... ಪ್ರತಿಯೊಬ್ಬರ ಜೀವನದಲ್ಲೂ ವಿಧಿ ತನ್ನ ಆಟವನ್ನು ಆಡಿಯೇ ಆಡುತ್ತೆ.... ಈ ಆಟ ಕೇವಲ ನಮ್ಮ ನಡೆಯನ್ನ ನೋಡಲಿಕ್ಕಷ್ಟೇ.... ನಾವು ಯಾವ ದಿಕ್ಕಿನಲ್ಲಿ ಸಾಗುತ್ತೇವೆ ಅನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಹೀಗೆ ಹಲವು ಬಾರಿ ಅಧರ್ಮದ ಹೆಜ್ಜೆಯನ್ನಿಟ್ಟು ಅಧರ್ಮಿಗಳ ಜೊತೆ ಸೇರಿ ಅಧರ್ಮದ ಕೆಲಸಗಳನ್ನ ಮಾಡಿದಾತನನ್ನ ವ್ಯಾಸರು ದುಷ್ಠ ಅಂತ ಸಂಭೋದಿಸಿದ್ದು ನನಗೆ ಸಮಂಜಸವೆಂದೆನಿಸುತ್ತದೆ. ಮತ್ತೂ ಆತನ ಪೂರ್ವ ಜನ್ಮದ ಆಧಾರದ ಮೇಲೆ ವಿವೇಚಿಸಿದಾಗಲೂ ಆತ ದುಷ್ಟನಾಗೆ ಕಂಡು ಬರುತ್ತಾನೆ. ಆತ ತನ್ನ ಹಿಂದಿನ ಜನ್ಮದಲ್ಲಿ ಸಹಸ್ರ ಕವಚ ಅನ್ನೋ ರಾಕ್ಷಸನಾಗಿದ್ದು ನರ-ನಾರಾಯಣರನ್ನ ಎದುರು ಹಾಕಿಕೊಂಡು ತನ್ನ ೯೯೯ ಕವಚ ಗಳನ್ನ ಕಳೆದುಕೊಂಡಿರುತ್ತಾನೆ. ಈ ಜನ್ಮದಲ್ಲಿ ತನ್ನ ಸಾವಿರದ ಕವಚವನ್ನ ಕಳಕೊಂಡು ಸಂಹಾರಕ್ಕೊಳಪಡುತ್ತಾನೆ. ಹಾಗಾಗಿ ಆತನ ಗುಣ ದುಷ್ಟತನದ್ದೇ ಅನ್ನುತ್ತಾರೆ ಹಲವು ವಿದ್ವಾಂಸರು.
ಇಡಿಯ ಈ ಲೇಖನದಲ್ಲಿ ನಾನು ಹೇಳ ಬಯಸೋದು ಇಷ್ಟೇ.... ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯಾವುದಾದರೂ ಒಂದೊಳ್ಳೆಯ ಗುಣಗಳಿರುತ್ತದೆ. ಆ ಗುಣವನ್ನ ನೋಡಿಯೇ ಆತ ಒಳ್ಳೆಯವ ಎಂದು ನಿರ್ಧರಿಸುವುದು ಆತುರದ ನಿರ್ಧಾರವಾದೀತು. ಆತನೊಳಗಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನ ತೂಗಿ ನೋಡಬೇಕು.... ಆತ ಯಾವ ಬದಿಗೆ ವಾಲುತ್ತಾನೆ ಅನ್ನೋದನ್ನ ಪರೀಕ್ಷಿಸಬೇಕು. ಒಳ್ಳೆಯತನದ ಕಡೆ ವಾಲಿದಾಗ ಆತ ಒಳ್ಳೆಯವನೆನೆಸಿಕೊಳ್ಳುತ್ತಾನೆ. ಈ ಮೇಲಿನ ಗುಣಗಳನ್ನೆಲ್ಲಾ ಆಧರಿಸಿಯೇ ವ್ಯಾಸರು ಕರ್ಣನನ್ನು ದುಷ್ಠ ಅಂದಿದ್ದಾರೆ.
ಇಲ್ಲಿ ನಾವು ಮುಖ್ಯವಾಗಿ ನೋಡಬೇಕಾದದ್ದು ಮೂಲ ಮಹಭಾರತದಲ್ಲಿ ಯಾವ ಪಾತ್ರ ಹೇಗೆ ಚಿತ್ರಿತವಾಗಿದೆ ಎಂದು . ಮಹಾಭಾರತ ಎಂತಹ ವಸ್ತುವೆಂದರೆ ಅದನ್ನೇ ಹಲವು ಜನ ತಮ್ಮ ಮೂಗಿನ ನೇರಕ್ಕೆ ಬರೆದವರಿದ್ದಾರೆ... ಅಂತಹ ಕೃತಿಗಳಲ್ಲಿ ಅವರಿಗಿಷ್ಟವಾದ ಪಾತ್ರವನ್ನ ವೈಭವೀಕರಿಸಿ ಬರೆದಿರಬಹುದು. ಆದರೆ ಆ ಕೃತಿಗಳ ಆಧಾರದ ಮೇಲೆ ವಾದ ಮಾಡುವುದು ನಿರರ್ಥಕ. ಸ್ವಯಂ ಕೃತಿ ಕರ್ತನೇ ಹೇಳಿರುವಾಗ ಅದರ ಬಗೆಗೆ ಆಕ್ಷೇಪ ಎತ್ತುವುದು ವಿಚಿತ್ರ ಅನ್ನಿಸುತ್ತದೆ. ಒಂದೊಮ್ಮೆ ನಿಮ್ಮಷ್ಟಕ್ಕೇ ವಿವೇಚಿಸಿದಾಗ ಆತ ಒಳ್ಳೆಯವನಂತೆ ಕಾಣಬಹುದು. ಆದರೆ ಸರಿಯಾದ ಕಾರಣಗಳನ್ನ ಹುಡುಕಬೇಕಷ್ಟೇ. ಇಲ್ಲಿ ಸಕಾರಣಗಳನ್ನ ಕೊಡುವ ಪ್ರಯತ್ನ ಮಾಡಿದ್ದೇನಷ್ಟೇ...
ಕರ್ಣನ ಕುರಿತಾದ ವೇದವ್ಯಾಸರ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿರಲು ಕಾರಣ.... ನನಗೆ ಧರ್ಮದ ವಿಜಯ ಅಗತ್ಯವಾಗುತ್ತದೆ. ಧರ್ಮ ಉಳಿಯಬೇಕು ಅಂತಾದರೆ ಅಧರ್ಮಿಗಳ ನಾಶ ಆಗಬೇಕು. ಒಂದು ದರೋಡೆಕೋರರ ತಂಡ ದರೋಡೆ ಮಾಡಿ ಸಿಕ್ಕಿ ಹಾಕಿತೆಂದು ಇಟ್ಟುಕೊಳ್ಳಿ. ಆಗ ಶಿಕ್ಷೆ ತಂಡದ ಎಲ್ಲರಿಗೂ ಸಿಗುವುದು ನ್ಯಾಯವೇ... ಅವರೆಲ್ಲರೂ ದರೋಡೆಕೋರರೇ.... ಅಯ್ಯೋ ನಾನು ದರೋಡೆಯ ಸಂಚು ರೂಪಿಸಿಲ್ಲ... ಅವರ ಜೊತೆ ಇದ್ದೆನಷ್ಟೇ... ಹಾಗಾಗಿ ನಾನು ಉತ್ತಮ ವ್ಯಕ್ತಿ.... ವಿದಿಯ ಆಟದಿಂದಾಗಿ ನಾನು ದರೋಡೆಕೋರರ ಸಂಗ ಮಾಡಿದೆ ಅಂದರೆ ಅದು ಒಪ್ಪತಕ್ಕ ಮಾತಲ್ಲ. ಆತ ದುರಂತ ನಾಯಕ ಆಗಲಾರ. ಹಾಗಾಗಿ ನನ್ನ ಪಾಲಿಗೆ ಕರ್ಣ ಒಬ್ಬ ದುಷ್ಟನಾಗಿಯೇ ಕಾಣುತ್ತಾನೆ. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

(ಇನ್ನು ಈ ಕುರಿತಾದ ಚರ್ಚೆಗೆ ಸಿದ್ದ.... ನಾನೇನು ಮಹಾಭಾರತವನ್ನ ಪೂರ್ತಿ ಅರೆದು ಕುಡಿದವನಲ್ಲ.... ಸಾಕಷ್ಟು ತಿಳಿದುಕೊಳ್ಳುವುದಿದೆ... ತಪ್ಪು ಅಂತನಿಸಿದ್ದನ್ನ ಒಪ್ಪಿಕೊಳ್ಳುತ್ತೇನೆ ಹಾಗೆಯೇ ಸಂಶಯ ಬಂದಲ್ಲಿ ಕೇಳಿ ಅಥವಾ ಓದಿ ಸಮಾಧಾನ ನೀಡುವ ಪ್ರಯತ್ನ ಮಾಡಬಲ್ಲೆ....)

No comments:

Post a Comment