Monday 2 November 2015

" ನವ ದಂಪತಿ ಸಮಾವೇಶ " ಅನ್ನೋ ಕಾರ್ಯಕ್ರಮದ ಸಾರ್ಥಕತೆಯ ಕ್ಷಣಗಳು



ಸರಿಸುಮಾರು ಹತ್ತು ದಿನಗಳ ಹಿಂದೆಯೋ ಏನೋ ನನ್ನ ಆತ್ಮೀಯ ಮಿತ್ರರೊಬ್ಬರಿಂದ ಸಂದೇಶವೊಂದು ಬಂದಿತ್ತು " ಅಕ್ಟೋಬರ್ ತಿಂಗಳಿನ ನಾಲ್ಕನೆಯ ತಾರೀಖಿನಂದು, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ’ ನವದಂಪತಿ ಸಮಾವೇಶ ’ ಇದೆ, ತಾವೂ ಭಾಗವಹಿಸಬೇಕು " ಅಂದಿದ್ದರು. " ಸರಿ ನೋಡೋಣ " ಅಂತಿದ್ದೆ, ಅದಾಗಿ ನಾಲ್ಕೈದು ದಿನಗಳ ತರುವಾಯ ನನಗೊಂದು ಕರೆ ಬಂದಿತ್ತು... ಅತ್ತ ಕಡೆಯಿಂದ ನಾನು " ಕಲ್ಲಡ್ಕ ಪ್ರಭಾಕರ ಭಟ್  ಮಾತನಾಡುತ್ತಿರೋದು ನಾಡಿದ್ದು ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶ ಇದೆ ಬರಬೇಕು " ಅಂದರು. ಒಂದು ಕ್ಷಣ ದಂಗಾಗಿ ಬಿಟ್ಟಿದ್ದೆ... ಅಲ್ಲಿಯವರೆಗೆ ಸಾಧ್ಯವಾದರೆ ಹೋಗೋಣ ಅಂತಿದ್ದ ನನ್ನೊಳಗಿನ ನಿರ್ಧಾರ ಹೋಗಲೇಬೇಕು ಅಂತ ಬದಲಾಗಿಬಿಟ್ಟಿತ್ತು. ಅಂತೂ ಆ ದಿನ ಬಂದೇ ಬಿಟ್ಟಿತ್ತು ಮುಂಜಾನೆ ಬೇಗ ಎದ್ದವನೇ  ಏಳೂವರೆಗಾಗಲೆ ಮನೆಯಿಂದ ಕಾರ್ಯಕ್ರಮ ನಡೆಯುವ ಕಲ್ಲಡ್ಕಕ್ಕೆ ಹೊರಟು ಬಿಟ್ಟಿದ್ದೆ, ಕಲ್ಲಡ್ಕ ತಲುಪುವಷ್ಟರಲ್ಲಿ ಸರಿಯಾಗಿ ಒಂಭತ್ತು ಗಂಟೆಯಾಗಿತ್ತು. ಅಲ್ಲಿಂದ ಅದ್ಭುತ ಕ್ಷಣಗಳ ಅನಾವರಣ ಆಗುತ್ತಲೇ ಹೋಯಿತು.
ಶ್ರೀರಾಮ ವಿದ್ಯಾಕೇಂದ್ರದ ಆವರಣಕ್ಕೆ ಕಾಲಿಡುವಾಗಲೇ ಅದೆಷ್ಟೋ ಮಹಿಳೆಯರು ತಮ್ಮ ನಗುಮೊಗದಿಂದ " ಜೈ ಶ್ರೀರಾಮ್ " ಅನ್ನೋ ಘೋಷಣೆಗಳ ಮೂಲಕ ನಮ್ಮನ್ನ ಸ್ವಾಗತಿಸತೊಡಗಿದರು. ನಮ್ಮನ್ನ ಬರಲು ಹೇಳಿ ಮಣೆಯ ಮೇಲೆ ನಿಲ್ಲಿಸಿ ಕಾಲಿಗೆ ನೀರು ಹಾಕಿ ತೊಳೆದು ವಸ್ತ್ರವೊಂದರಿಂದ ಒರೆಸಿದಾಗ ನನಗೆ ತೀರಾ ಮುಜುಗರವಾದದ್ದಂತೂ ಸತ್ಯ. ಬಹುಶಃ ಆತಿಥ್ಯದ ಅತ್ಯುತ್ತಮ ಸ್ತರ ಇದಾಗಿತ್ತೋ ಅಥವಾ ನವ ವಧೂ ವರರನ್ನ ಬರಿಯ ಮಾತಿನ ಮೂಲಕ ಲಕ್ಷ್ಮೀ ನಾರಾಯಣ ಸ್ವರೂಪ ಅಂತನ್ನದೆ ನಿಜವಾಗಿಯೂ ಅದೇ ರೀತಿಯಲ್ಲಿ ನೋಡುವ ರೀತಿಯಾಗಿತ್ತೇನೋ... ಗೊತ್ತಿಲ್ಲ ಆ ಮುಜುಗರದ ಭಾವ ಮರೆಯಾಗವ ಮುನ್ನವೇ ನಮ್ಮನ್ನ ಕರಸಿ ಉಪಹಾರ ನೀಡಲಾಯಿತು... ಶುಚಿಯಾದ ರುಚಿಯಾದ ಲಘು ಉಪಹಾರ. ಅದನ್ನ ಸವಿದವರೇ  ಹತ್ತಿರದಲ್ಲೇ ಇದ್ದ ಶಿಶು ಮಂದಿರಕ್ಕೆ ಹೋಗುವಂತೆ ಹೇಳಿದರು. ಅಲ್ಲಿದ್ದ ಹಿರಿಯ ದಂಪತಿಗಳಿಂದ ನಮ್ಮ ಹಣೆಗೆ ತಿಲಕವಿಡಿಸಿ ನಮ್ಮನ್ನ ಸ್ವಾಗತಿಸತೊಡಗಿದರು, ಅವರಿಂದ ಆಶೀರ್ವಾದ ಪಡೆದು ಮುಂದೆ ನಡೆದಾಗ ನಮಗೆ ಅಲ್ಲಿನ ಗುಹೆಯೊಳಗಿನ ಶಿವನ ದರ್ಶನ ಮಾಡಿಸಿದರು... ಕೃತಕವಾಗಿ ನಿರ್ಮಾಣ ಮಾಡಿದ ಶಿವನ ಗುಹಾ ದೇವಾಲಯ.... ಒಂದು ವಿಶಿಷ್ಟ ಅನುಭವವನ್ನ ನೀಡಿತ್ತು. ನಮ್ಮಿಂದಲೇ ಆ ಶಿವನಿಗೆ ಪುಷ್ಪಾರ್ಚನೆ ಮಾಡಿಸಿದರು, ಆ ಗುಹೆಯ ಇನ್ನೊಂದು ತುದಿ  ಪಕ್ಕದ ಇನ್ನೊಂದು ಕೊಠಡಿಯನ್ನ ಸೇರಿಸುತ್ತಿತ್ತು. ಅಲ್ಲಿ ನಮ್ಮ ವಿವರಗಳನ್ನೆಲ್ಲಾ ಬರೆಯಲು ಹೇಳಿ ಅಲ್ಲಿಯೇ ಕುಳಿತು ಕೊಂಡು ಸ್ವಲ್ಪ ಹೊತ್ತು ಕಾಯುವಂತೆ ಹೇಳಿದರು.
ಮುಂದಿನ ಕಾರ್ಯಕ್ರಮಗಳ ಬಗ್ಗೆ  ಹೇಳುವ ಮುನ್ನ ಆ ಶಾಲೆಯ ವಾತಾವರಣದ ಬಗ್ಗೆ ಹೇಳಿ ಬಿಡುತ್ತೇನೆ. ಪ್ರಕೃತಿಯ ನಡುವೆ ಗುರುಕುಲದ ಮಾದರಿಯಂತ ಶಾಲೆ, ಎಲ್ಲಾ ಕೊಠಡಿಗಳಿಗೆ ಭಾರತೀಯ ಸಾಧಕರ ಹೆಸರುಗಳನ್ನ ಇಡಲಾಗಿತ್ತು... ಕಣಾದ, ಆರ್ಯಭಟ, ಕೇಶವ , ಮಾಧವ , ಗಾರ್ಗಿ ಇತ್ಯಾದಿ ಎಂಥಾ ಪರಿಕಲ್ಪನೆ ಅಲ್ವಾ... ಅಲ್ಲಿನ ವಿದ್ಯಾರ್ಥಿಗಳಿಗೆ ಈ ಭಾರತೀಯ ಸಾಧಕರ ಹೆಸರು ಮರೆಯಲು ಸಾಧ್ಯವೇ ಇಲ್ಲ. ಎಷ್ಟು ಸರಳವಾಗಿ ಎಳೆಯರ ಮನಸ್ಸಲ್ಲಿ ನಮ್ಮವರ ಹೆಸರನ್ನ ಅಚ್ಚುಗೊಳಿಸುತ್ತಿದ್ದಾರೆ ಅನ್ನುವ ಭಾವ ನನ್ನನ್ನ ರೋಮಾಂಚನಗೊಳಿಸಿತ್ತು. ಆ ಕೊಠಡಿಗಳೂ ಕೂಡಾ ಹಾಗೆಯೇ ಚೌಕಾಕಾರದಲ್ಲಿರದೆ ಅಷ್ಟಕೋನಾಕೃತಿಯ ಕೊಠಡಿಗಳಾಗಿದ್ದವು. ಆ ಕೊಠಡಿಯ ಮೇಲ್ಗಡೆ ಮರದ ಹಾಸು ಆ ತರಗತಿಗಳಿಗೆ ಭವ್ಯವಾದ ಅನುಭೂತಿಯನ್ನ ಕೊಡಿಸುತ್ತಿತ್ತು. ಪ್ರತಿ ತರಗತಿಯಲ್ಲೂ ಭಾರತಮಾತೆಯ ಚಿತ್ರ. ನಿಜಕ್ಕೂ ಅಲ್ಲಿ ಕಲಿತ ವಿದ್ಯಾರ್ಥಿಗಳ ಬಗ್ಗೆ ಸಣ್ಣ ಅಸೂಯೆಯಾಗಿದ್ದನ್ನ ಅಲ್ಲಗಳೆಯುವ ಹಾಗಿಲ್ಲ.
ಸರಿ ಇನ್ನು ಮುಂದುವರಿಯೋಣ ಅಲ್ಲಿಂದ ಸಭಾಂಗಣಕ್ಕೆ ಇನ್ನೇನು ಹೋಗಬೇಕು ಅಂತಿರುವಾಗ ಭಾರತೀಯ ಉಡುಗೆಯನ್ನುಟ್ಟ ಪಂಚೆ ಮತ್ತು ಶಾಲು ಹೊದ್ದ ಒಂದಷ್ಟು ಬಾಲಕರು ಆ ಕೊಠಡಿಯ ದ್ವಾರದ ಬಳಿ ಬಂದರು... ಅದರಲ್ಲೊಬ್ಬ ವಿದೇಶಿ ಬಾಲಕನು ಇದ್ದದ್ದೂ ಒಂದು ವಿಶೇಷ ... ನಮ್ಮನ್ನ ವೇದ ಘೋಷಗಳೊಂದಿಗೆ ಮುಖ್ಯ ಸಭಾಂಗಣಕ್ಕೆ ಕರೆದು ತರಲಾಯಿತು ಆ ಮಕ್ಕಳ ಸ್ಫುಟವಾದ ವೇದ ಮಂತ್ರಗಳು ಮನಸ್ಸಿಗೆ ಇಂಪನ್ನ ಕೊಡುತ್ತಿತ್ತು. ಸಭಾಂಗಣಕ್ಕಿದ್ದ ಮೆಟ್ಟಿಲುಗಳು ಮುಗಿಯುವಲ್ಲಿ ಭಾರತ ಮಾತೆಯ ದೊಡ್ಡದಾದ ಭಾವಚಿತ್ರ ರಾರಾಜಿಸುತ್ತಿತ್ತು ಆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಾಗ ನನ್ನೊಳಗಾದ ಭಾವಕ್ಕೆ ಯಾವ ಪದಗಳೂ ಸಾಟಿಯಿಲ್ಲ. ಮತ್ತೆ ಪನ್ನೀರು ಸಲ್ಲಿಸುವಿಕೆ ಮತ್ತು ಅಕ್ಷತೆಯ ಕಾಳನ್ನ ಹಾಕಿ ನಮ್ಮನ್ನ ಸಭಾಂಗಣದೊಳಕ್ಕೆ ಕರೆಸಿಕೊಂಡರು. ವೇದಿಕೆಯಲ್ಲಿ ತುಳುನಾಡಿನ ಗುತ್ತಿನ ಮನೆಯ ಪ್ರತಿಕೃತಿ ಕಾಣಿಸುತ್ತಿತ್ತು. ನೈಜವಾಗಿರಲಿ ಎಂದೋ ಏನೋ ಒಬ್ಬ ದಪ್ಪ ಬಿಳಿ ಮೀಸೆಯ ಗುತ್ತಿನ ಯಜಮಾನನ ವೇಷ ಧರಿಸಿ ವೇದಿಕೆಯ ಬಲಭಾಗದಲ್ಲಿ ಹಾಯಾಗಿ ಕುಳಿತಿದ್ದ. ದಪ್ಪ ಮರದ ಕಂಬಗಳ ಮನೆ ಎಡಭಾಗದಲ್ಲಿ ತುಳುನಾಡಿನ ಪ್ರತೀಕವಾದ ದೈವದ ಮಂಚ , ಅಲ್ಲೇ ಅಕ್ಕಪಕ್ಕದಲ್ಲಿ ಒಂದಷ್ಟು ಬೊಂಡ(ಎಳನೀರು)ದ ರಾಶಿ, ಅಕ್ಕಿ ಮುಡಿ... ಒಟ್ಟಾರೆಯಾಗಿ ಕಣ್ಮನ ಸೆಳೆಯುವ ಸಾಂಪ್ರದಾಯಿಕ ಚಿತ್ರಣ ನಮ್ಮ ಮುಂದಿಟ್ಟಿದ್ದರು... ತುಂಬಾ ಅದ್ಭುತ ಕಲ್ಪನೆಯ ವೇದಿಕೆ ಅದನ್ನೂ ಮಾಡಿದ ಉದ್ದೇಶ ಇದೊಂದು ಮನೆ ನಾವೆಲ್ಲರೂ ಆ ಮನೆಯ ಸದಸ್ಯರು ಅನ್ನುವ ಭಾವ ನಮ್ಮಲ್ಲಿ ಮೂಡಿಸುವುದಕ್ಕಾಗಿ ಅಷ್ಟೇ... ಎಂಥಾ ಯೋಚನೆ ಅಲ್ವಾ.
ತದನಂತರ ಅತಿಥಿಗಳು ವೇದಿಕೆಯನ್ನ ಅಲಂಕರಿಸಿದರು ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ  ಸು.ರಾಮಣ್ಣ ಅವರು ಮುಖ್ಯ ಅತಿಥಿಯಾಗಿದ್ದರೆ ಹಿರಿಯ ದಂಪತಿಗಳಾಗಿ ನಮ್ಮನ್ನ ಹರಸಬೇಕಿದ್ದವರೂ ವೇದಿಕೆಯಲ್ಲಿದ್ದರು. ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ನ ಅಧ್ಯಕ್ಷರೂ ಮತ್ತು ಸಂಚಾಲಕರೂ ವೇದಿಕೆಯಲ್ಲಿದ್ದರು.  ಅದಾದ ಮೇಲೆ ನವದಂಪತಿಗಳ ಪರಿಚಯ ಕಾರ್ಯಕ್ರಮ ನಡೆಯಿತು. ಗಂಡನ ಪರಿಚಯವನ್ನ ಹೆಂಡತಿಯೂ... ಹೆಂಡತಿಯ ಪರಿಚಯವನ್ನ ಗಂಡನೂ ಮಾಡುವಂತೆ ನಮ್ಮಲ್ಲಿ ಕೇಳಿಕೊಂಡರು ಹೀಗೆ ಬಂದ ಸುಮಾರು ನೂರಕ್ಕೂ ಹೆಚ್ಚು ಜೋಡಿಗಳು ತಮ್ಮ ಪರಿಚಯ ಮಾಡಿಕೊಂಡರು... ಅದಾದ ಮೇಲೆ ಸು.ರಾಮಣ್ಣ ಅವರು ನಮ್ಮನ್ನ ಉದ್ದ್ದೇಶಿಸಿ ಮಾತನಾಡಿದರು. ಎಪ್ಪತ್ತು ಮೀರಿದ ಸು.ರಾಮಣ್ಣ ಅವರು ವೃದ್ಧಾಪ್ಯದಲ್ಲಿ ಅಂತಃಶಕ್ತಿ ಚಿರಯೌವನದಂತೆಯೇ ಇರಲು ಓಂಕಾರ ಪಠಣ ಮಾಡಿ ಅನ್ನುವ ಸಲಹೆ ನೀಡಿದರು ಅವರು ಹೇಳಿದ ಓಂಕಾರವಂತೂ ಇಡಿಯ ಸಭೆಯಲ್ಲಿ ಒಂದು ವಿಶಿಷ್ಟ ಕಂಪನವನ್ನುಂಟುಮಾಡಿದ್ದು ಸುಳ್ಳಲ್ಲ. ಅದಾದ ಮೇಲೆ ಭಾರತೀಯರಲ್ಲಿ ಮದುವೆಯ ಬಗ್ಗೆ ಇರೋ ಭಾವನೆಗೂ ಪಾಶ್ಚಾತ್ಯರ ಮದುವೆಯ ಬಗೆಗಿನ ಕಲ್ಪನೆಯ ಅನಾವರಣ ಮಾಡಿದರೂ ಅದರಲ್ಲೂ ಅವರು ಮದುವೆಯ ಬಗ್ಗೆ ಕೊಟ್ಟ ವ್ಯಾಖ್ಯಾನ ನಿಜಕ್ಕೂ ಅದ್ಭುತ... " ಭಾರತದಲ್ಲಿ ಮದುವೆ ಅಂದರೆ ಬರಿಯ ಸಡಗರ ಸಂಭ್ರಮದ ವಿಚಾರವಷ್ಟೇ ಅಲ್ಲ... ಆಡಂಬರದ ಆಚರಣೆಯೂ ಅಲ್ಲ ಅದು ಶಾಶ್ವತೆಯ ಸಂಕಲ್ಪದ ಸುಮುಹೂರ್ತ " ಭಾರತದಲ್ಲಿ ಮದುವೆ ಅಂದರೆ ಜೀವನ ಪರ್ಯಂತ ಒಟ್ಟಾಗಿ ಇರಲು ಗಂಡು ಹೆಣ್ಣು ಕೈಗೊಳ್ಳುವ  ಸಂಕಲ್ಪ ಅಂದಾಗ ಭಾರತೀಯ ಮೌಲ್ಯಗಳ ಬಗ್ಗೆ ಅಭಿಮಾನವಾದದ್ದು ನಿಜವೇ....
ಅದಾದ ಮೇಲೆ ಗುಂಪು ಚರ್ಚೆ. ಗಂಡಂದಿರದ್ದೂ ಬೇರೆಯೇ ಗುಂಪು ಮಾಡಿ ಹೆಂಡತಿಯರದ್ದೂ ಬೇರೆಯೇ ಗುಂಪು ಮಾಡಲಾಯಿತು. ಅಲ್ಲಿ ಸಂಭಾಷಣೆಯ ಮೂಲಕ ಮೂಲಕ, ಹಲವು ಪ್ರಶ್ನೆಗಳ ಮೂಲಕ ಕುಟುಂಬದಲ್ಲಿ ಬರಬಹುದಾದ ಸಮಸ್ಯೆಗಳನ್ನ ಹೇಗೆ ನಿವಾರಿಸಬಹುದು...? ಮತ್ತು ಸಮರಸದ ದಾಂಪತ್ಯ ಜೀವನ ಹೇಗೆ ನಡೆಸಬಹುದು...? ಅನ್ನುವುದನ್ನ ಚರ್ಚಿಸಲಾಯಿತು. ಅನುಭವಿಗಳಾಗಿದ್ದರಿಂದ ಅವರ ಕೆಲವೊಂದು ಸಲಹೆ ನಿಜವಾಗಿಯೂ ದಾಂಪತ್ಯ ಜೀವನದಲ್ಲಿ ಉಪಯೋಗವಾಗಿಯೇ ಆಗುತ್ತದೆ. ಅಲ್ಲಿ ಚರ್ಚೆಯಾದ ವಿಚಾರಗಳೆಲ್ಲವೂ ಪ್ರಾಮುಖ್ಯವಾದದ್ದೇ. ನಿಜವಾಗಿ ನಾನು ನವದಂಪತಿ ಸಮಾವೇಶ ಅಂತ ಕೇಳಿದಾಗ ಇದೇ ರೀತಿ ಬೇರೆ ಬೇರೆಯಾಗಿ ಗಂದ ಹೆಂಡದಿರನ್ನ ಕುಳ್ಳಿರಿಸಿ ಅವರ ಬಗ್ಗೆ ಇವರನ್ನ ಕೇಳೋದು ಇವರ ಬಗ್ಗೆ ಅವರನ್ನ ಕೇಳೋದು ಅಂತಹುದೇ ಕಾರ್ಯಕ್ರಮವೋ ಏನೋ ಅಂದುಕೊಂಡಿದ್ದೆ ಆದರೆ ಇಲ್ಲಿ ಅಂಥಾದ್ದೇನೂ ಕೇಳದೆ ಮುಂದೆ ನಾವು ಎಡವಬಹುದಾದ ಸಂಧರ್ಭಗಳು ಎಲ್ಲೆಲ್ಲಾ ಬರಬಹುದು ಆ ಕ್ಷಣ ಬಾರದಂತೆ ಮಾಡಲು ನಾವೇನು ಮಾಡಬಹುದು ಅನ್ನುವುದನ್ನ ಹೇಳಿಕೊಟ್ಟರು. ಬೇರೆ ಬೇರೆಯಾಗಿ ಚರ್ಚಿಸಿದರೂ ಆ ಎರಡೂ ಚರ್ಚೆಯ ಸಾರಾಂಶಗಳನ್ನ ಮತ್ತೆ ಎಲ್ಲರ ಸಮ್ಮುಖದಲ್ಲಿ ಕ್ರೋಢಿಕರಿಸಲಾಗಿತ್ತು. ಆದರೆ ಅದು ಮಧ್ಯಾಹ್ನದ ಭೋಜನದ ನಂತರ.
ಗುಂಪು ಚರ್ಚೆಯಾದ ನಂತರ ದಂಪತಿಗಳೆಲ್ಲರಿಗೆ ಸವಿಯಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಹಾಳಾನೆ ಹಿಡಿಸಿದ್ದು ಸಹ ಪಂಕ್ತಿ ಭೋಜನ, ನೂರಕ್ಕೂ ಹೆಚ್ಚಿನ ಜೋಡಿಗಳಿತ್ತು ಅಂದೆನಲ್ಲಾ... ಹಿಂದೂ ಸಂಪ್ರದಾಯದ ಎಲ್ಲಾ ಜಾತಿಗಳವರನ್ನೂ ಅಲ್ಲಿ ಕಲೆ ಹಾಕಿದ್ದರು. ಪೌರೋಹಿತ್ಯ ಮಾಡುವವರೂ ರಿಕ್ಷಾಚಾಲಕರೂ ಬೇರೆ ಬೇರೆ ವೃತ್ತಿಯವರೂ ಮೇಲ್ವರ್ಗದವರು ಕೆಳವರ್ಗದವರು ಎಲ್ಲರೂ ಇದ್ದರೂ ಒಂದೇ ಕಡೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟು ಜನರಿದ್ದರೂ ಪಾಶ್ಚಾತ್ಯರ ಬಫೆ ಸಿಸ್ಟಮ್ ಗೆ ಜೋತು ಬೀಳದೆ ನೆಲದಲ್ಲಿಯೇ ಕುಳಿತು ಬಾಳೆಯೆಲೆಯಲ್ಲಿ ಭೋಜನ ವಿತರಿಸುವ ಯೋಜನೆ ನಿಜಕ್ಕೂ ನಮ್ಮತನವನ್ನು ನೆನಪಿಸಿತು.  ಅದರಲ್ಲೂ ಭೋಜನ ಮಂತ್ರದ ನಂತರವೇ ಎಲ್ಲರೂ ಒಂದಾಗಿ ಊಟ ಮಾಡಲು ತೊಡಗಿದೆವಲ್ಲ ಅದ್ಭುತ ಸಾರ್ಥಕ ಭಾವದ ರುಚಿಯನ್ನೂ ತೋರಿಸಿಬಿಟ್ಟರು. ಈ ಭೋಜನದ ಹೊತ್ತಿನಲ್ಲಿ ಶ್ರೀರಾಮ ವಿದ್ಯಾಕೇಂದ್ರದವರು ಮೇಘಾಲಯದ ವಿದ್ಯಾರ್ಥಿಗಳನ್ನ ದತ್ತಕ್ಕೆ ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಖರ್ಚುವೆಚ್ಚವನ್ನ ನೋಡುತ್ತಿರುವುದಾಗಿ ಹೇಳಿದಾಗ ಆ ವಿದ್ಯಾಕೇಂದ್ರದ ಸಾಮಾಜಿಕ ಕಳಕಳಿಯ ಬಗ್ಗೆ ಗೌರವದ ಭಾವ ಮನದಲ್ಲಿ ಗಟ್ಟಿಯಾಗಿತ್ತು.  ಭೋಜನದ ನಂತರ ಸಾಮೂಹಿಕವಾಗಿ ಭಾವಚಿತ್ರ ತೆಗೆಸಿದ್ದೂ ಆಯಿತು ಅದಾದ ಮೇಲೆ ಸಮಾರೋಪ ಕಾರ್ಯಕ್ರಮ ಯೋಜಿಸಲಾಗಿತ್ತು.
ಸಮಾರೋಪ ಕಾರ್ಯಕ್ರಮದಲ್ಲಿ ಮೊದಲಿಗೆ ಗುಂಪು ಚರ್ಚೆಯ ಸಾರಾಂಶದ ಮಂಡನೆ ಮಾಡಲಾಯಿತು, ಅದಾದ ಬಳಿಕ ಭಾಗವಹಿಸಿದ ದಂಪತಿಗಳಿಗೆ ತಮ್ಮ ಅನುಭವವನ್ನ ಹೇಳಿಕೊಳ್ಳಲು ಅವಕಾಶ ನೀಡಲಾಯಿತು. ಹಾಳು ಬಾಯಿ ಚಪಲ... ನಾನು ಸಣ್ಣದಾಗಿ ನನ್ನ ಮಾತುಗಳನ್ನ ಹೇಳಿಯೇ ಬಿಟ್ಟೆ... ಮತ್ತೇನೂ ಅಲ್ಲ ಈ ಹಿಂದೆ ಫೇಸ್ ಬುಕ್ಕಿನಲ್ಲಿ ಚಾಲೆಂಜ್ ಹಾಕಿದ್ದೆ ....  " ಸಂಘದ ಕಾರ್ಯಕ್ರಮದಲ್ಲಿ ಪಂಕ್ತಿ ಭೋಜನದ ವಿಚಾರದಲ್ಲಿ ತಾರತಮ್ಯ ಮಾಡಿದರೆ ಸಂಘವನ್ನೇ ತೊರೆಯುತ್ತೇನೆ " ಅಂತ... ನನ್ನ ಕಣ್ಣೆದುರಿಗೇ ಸಹ ಪಂಕ್ತಿ ಭೋಜನ ನಡೆಯಿತಲ್ಲ.... ಸಹಪಂಕ್ತಿ ಭೋಜನ ಅಭಿನಂದನೀಯ ಅನ್ನುತ್ತಾ ಅಚ್ಚುಕಟ್ಟಾದ ಕಾರ್ಯಕ್ರಮ ರೂಪಿಸಿದ ಮತ್ತು ಅದರ ಸಾಫಲ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದವನ್ನ ಹೇಳಿ ಬಿಟ್ಟೆ... ಮಾತು ಮಾತಿನಲ್ಲಿ ಈ ಕಾರ್ಯಕ್ರಮವನ್ನ ಬುದ್ಧಿಜೀವಿಗಳು ಅಂತ ಹೇಳಿಕೊಳ್ಳುತ್ತಾರಲ್ಲ ಅವರು ನೋಡ ಬೇಕಿತ್ತು ಅಂತ ಹೇಳಲು ಮರೆಯಲಿಲ್ಲ.
ಇದಾದ ಮೇಲೆ ಸು.ರಾಮಣ್ನ ಅವರು ನವ ದಂಪತಿಗಳಿಗೆ ಒಂದಷ್ಟು ಕಿವಿಮಾತು ಹೇಳಿದರು.  ಊಟ ಮತ್ತು ಮಲಗಲು ಅವಕಾಶವಿದೆ ಅನ್ನೋ ಕಾರಣಕ್ಕೆ ಮನೆಯನ್ನ ಲಾಡ್ಜ್ ಮಾಡಬೇಡಿ... ಆದಷ್ಟು ಮಾತೃಭಾಷೆ ಬಳಸಿ, ಸ್ವದೇಶಿ ವಸ್ತುಗಳನ್ನ ಬಳಸೋದು ರೂಢಿಸಿಕೊಳ್ಳಿ... ನಮ್ಮ ಸಂಸ್ಕೃತಿಯನ್ನ ಉಳಿಸಿ ಬೆಳಿಸಿ....ಹೀಗೆ ಎಲ್ಲವೂ ಅತ್ಯುತ್ತಮವಾದದ್ದೇ... ಕಲ್ಲಡ್ಕ ಪ್ರಭಾಕರ ಭಟ್ ಅವರು ಭವಿಷ್ಯದ ಹಿಂದೂ ಸಮಾಜದ ಉಳಿಯುವಿಕೆ ನಿಟ್ಟಿನಲ್ಲಿ  ಕನಿಷ್ಠ ಮೂರಾದರೂ ಮಕ್ಕಳಿರಲಿ ಅಂದರು.. ನಮ್ಮ ಹಿಂದೂ ಸಂಪ್ರದಾಯ ಸಂಸ್ಕೃತಿ ಹೀಗೆ ಎಲ್ಲವೂ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವುಗಳೇ... ಕೊನೆಯಲ್ಲಿ ನಮಗೆಲ್ಲರಿಗೂ ಕಾರ್ಯಕ್ರಮದ ಸವಿನೆನಪಿಗಾಗಿ ಕಿರುಕಾಣಿಕೆಗಳನ್ನೂ ಕೊಡಲಾಯಿತು. ಅದಾದ ಮೇಲೆ ಮತ್ತೆ ಲಘು ಉಪಹಾರ.
ಈ ಎಲ್ಲಾ ಸಾರ್ಥಕ ಕ್ಷಣಗಳನ್ನ ಹೊತ್ತುಕೊಂಡು ಅಲ್ಲಿಂದ ಹೊರನಡೆಯತೊಡಗಿದಾಗ ಹೆಜ್ಜೆ ಭಾರವೆನಿಸಿದ್ದೂ ಹೌದು...   ಇಡಿಯ ಕಾರ್ಯಕ್ರಮದಲ್ಲಿ ಹಿಂದೂ ಸಂಸ್ಕೃತಿಯನ್ನ ನಮ್ಮ ಮೇಲೆ ಹೇರುವ ಬದಲು ಅದರ ಆಚರಣೆಯ ಮೂಲಕ ನಮ್ಮನ್ನ ಪ್ರಭಾವಿತಗೊಳಿಸಿದರು. ನಿಜಕ್ಕೂ ನನ್ನದೂ ಅದೇ ಯೋಚನೆ.. ಯಾವತ್ತೂ ನಾವು ಹೇಳಿಕೊಟ್ಟದ್ದಕ್ಕಿಂತ ನಾವು ನಡೆದು ತೋರಿಸಿದಾಗ ಅದು ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗುತ್ತದೆ. ಆಗ ಮಾತ್ರ ನಮ್ಮ ಸಂಸ್ಕಾರ, ಸಂಸ್ಕೃತಿಗಳು ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಒಂದು ಅದ್ಭುತ ಕಾರ್ಯಕ್ರಮದಲ್ಲಿ ಭಾಗೀಯಾದೆ ಅನ್ನುವ ಸಾರ್ಥಕ ಭಾವ ನನ್ನದಾಯಿತು... ಆದರ್ಶಮಯ ದಾಂಪತ್ಯ ನಡೆಸುವುದು ಹೇಗೆ ಎನ್ನುವುದನ್ನಲ್ಲೆವನ್ನೂ ಹೇಳಿಕೊಟ್ಟರು ಅಂತಲ್ಲ... ಆದರೆ ಸಾಮಾನ್ಯವಾಗಿ ದಂಪಾತ್ಯದಲ್ಲಿ ಎಲ್ಲಿ ಎಡವೋ ಸಾಧ್ಯತೆ ಇದೆ ಅಂತ ಹೇಳಿಕೊಟ್ಟರು... ಒಂದು ವೇಳೆ ಇಂತಹಾ ಸಂಭವನೀಯತೆ ಮುಂದೆ ಬಂತು ಅಂತಿಟ್ಟುಕೊಳ್ಳಿ...ಆಗ ಈ ಸಲಹೆಗಳು ನಮಗೆ ಉಪಯೋಗವಾದೀತು...  ಉದಾಹರಣೆ ಕೊಡುವುದಾದರೆ ಗೊತ್ತಿಲ್ಲದ ದಾರಿಯಲ್ಲಿ ಪ್ರಯಾಣ ಮಾಡುವುದು ಹೇಗೆ ಅಂತ ಹೇಳಿಕೊಡದೇ ಎಲ್ಲೆಲ್ಲಿ ತಿರುವುಗಳಿವೆ ಆ ಸಂದರ್ಭದಲ್ಲಿ ಯಾವ ಸುರಕ್ಷತಾ ಕ್ರಮ ಕೈಗೊಳ್ಲಬೇಕು ಅನ್ನುವುದನ್ನ ಹೇಳಿಕೊಟ್ತರು ....  ಇಂತಹಾ ಕಾರ್ಯಕ್ರಮದ ಮೂಲಕ ನಮ್ಮ ಮುಂದಿನ ಪೀಳಿಗೆಯ ನವದಂಪತಿಗಳೆಲ್ಲರಿಗೂ ಇಂತಹ ಅದ್ಭುತ ಕ್ಷಣಗಳು ಸಿಗುವಂತಾಗಲಿ ಎಂದೇ ಹಾರೈಸುತ್ತೇನೆ ಮತ್ತು ಈ ಕಾರ್ಯಕ್ರಮಕ್ಕೆ ಹೋಗುವಂತೆ ನಿವೇದನೆ ಮಾಡಿದ ಅವರಿಗೂ ಕಾರ್ಯಕ್ರಮದ ಆಯೋಜಕರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಈ ಸಾರ್ಥಕ ಕ್ಷಣಗಳು ನನ್ನ ಮತ್ತು ನನ್ನ ಪತ್ನಿಯ ದಾಂಪತ್ಯ ಜೀವನದ ಹೊಸ್ತಿಲಲ್ಲಿ ಸಿಕ್ಕಿದೆಯಲ್ವಾ ಅನ್ನೋದು ಮತ್ತೂ ಖುಷಿಯ ವಿಚಾರ...

No comments:

Post a Comment