Monday 2 November 2015

ಪ್ರಚಂಡ ಬಹುಮತ ಗಿಟ್ಟಿಸಿದ "ಆಪ್" ಸರಕಾರ ಈ ಬಾರಿಯೂ ನಡುವಿನಲ್ಲೇ " ಆಫ್ " ಆದೀತೇ....?



ತೀರಾ ಕುತೂಹಲ ಕೆರಳಿಸಿದ್ದ ದೆಹಲಿಯ ಚುನಾವಣಾ ಫಲಿತಾಂಶ ಸಾಮಾನ್ಯರಿಗೆ ಬಿಡಿ ರಾಜಕೀಯ ಪಂಡಿತರಿಗೆ ಅರ್ಥವಾಗುತ್ತಿಲ್ಲವೇನೋ. ನಿಜ ಬಹುಶಃ ಭಾರತೀಯ ಇತಿಹಾಸದಲ್ಲೇ ಇಂತಹಾ ಒಂದು ವಿಜಯ ಅದೂ ಒಂದು ಹೊಸ ಪಕ್ಷಕ್ಕೆ ಸಿಕ್ಕಿದ ನಿದರ್ಶನ ಎಲ್ಲೂ ಇಲ್ಲ. ಜನಸಾಮಾನ್ಯನ ಮನಸ್ಸು ಯಾರತ್ತ ಯಾವಾಗ ಹೊರಳುತ್ತದೆ.. ಮತ್ತು ಯಾಕಾಗಿ ತಿರುಗುತ್ತದೆ ಅನ್ನುವುದನ್ನ ವಿಶ್ಲೇಷಣೆ ಮಾಡಿ ಅದೇ ಸರಿ ಅಂತ ಹೇಳೋದು ಹಾಸ್ಯಸ್ಪದವಾದೀತೇನೋ. ಇರಲಿ ಮೊದಲಾಗಿ ಅರವಿಂದ
ಕೇಜ್ರಿವಾಲರಿಗೆ ಹಾರ್ದಿಕ ಅಭಿನಂದನೆಗಳು. ಈ ಅಭೂತಪೂರ್ವ ವಿಜಯವನ್ನ ವಿಶ್ಲೇಷಿಸೋದು ತೀರಾ ಕಠಿಣವೇ... ನನ್ನ ವಿಶ್ಲೇಷಣೆಯೇ ಸರಿ ಅನ್ನುವ ವಾದಕ್ಕೆ ಅಂಟಿಕೊಳ್ಳದೇ ಬರಿಯ ಒಂದು ಊಹೆಯನ್ನ ನಿಮ್ಮ ಮುಂದಿಡಲು ಬಯಸುತ್ತೇನೆ. ಇದು ನಾನು ಕೇಳಿರುವ, ಓದಿದ ವಿಷಯಗಳ ಒಟ್ಟು ಸಾರ. ಈ ಹಿಂದೆ ನ್ಯೂಸ್ ಚಾನೆಲ್ ಒಂದರಲ್ಲಿ ನೋಡಿದ್ದೆ... ಅರವಿಂದ ಕೇಜ್ರಿವಾಲರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ...." ನನ್ನದು ತಪ್ಪಾಯ್ತು... ಕ್ಷಮಿಸಿ ಇನ್ನೊಮ್ಮೆ ಅಧಿಕಾರ
ಬಿಟ್ಟು ಪಲಾಯನ ಮಾಡುವ ಕೆಲಸ ಮಾಡೋದಿಲ್ಲ..." ಅನ್ನುವ ಮಾತನ್ನ ಪದೇ ಪದೇ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಾ ಬಂದಿದ್ದರು, ಇದೂ ಜನರ ಸಿಂಪತಿ ವೋಟ್ ಗಿಟ್ಟಿಸುವಲ್ಲಿ ಸಹಕಾರಿಯಾಯಿತು ಅಂದಿದ್ದರು. ನನಗೂ ಕೂದಾ ಇದು ಅವರ ಪ್ರಮುಖವಾದ ರಣತಂತ್ರ ಅಂತನಿಸುತ್ತದೆ. ಮತ್ತು ಆಮ್ ಆದ್ಮೀ ಪಾರ್ಟಿ ಮಾಡಿದ ಪ್ರಚಾರ... ತೀರಾ ಸಾಮಾನ್ಯನನ್ನೂ ಮಾತಾಡಿಸಿದ ರೀತಿ ಇಂಥಾ ಪರಿಣಾಮವನ್ನು ಕೊಟ್ಟಿತೇನೋ...
ಅದೊಂದು ಚರ್ಚೆಯಲ್ಲಿ ಒಬ್ಬ ವಿಶ್ಲೇಷಕರು ಹೇಳುತ್ತಾ ಇದ್ದರು ಬಿಜೆಪಿ ಮತ್ತು ಆಪ್ ನಡುವಿನ ಚುನಾವಣಾ ರೇಸ್ ಹೇಗಾಯಿತು...? ಅಂದರೆ ಆಮೆ ಮತ್ತು ಮೊಲದ ರೇಸ್ ನ ಹಾಗಾಯ್ತು ಅಂತ. ಅಂದರೆ ಬಿಜೆಪಿ ಭಾರತದ ಉಳಿದೆಲ್ಲೆಡೆಯ ವಿಧಾನಸಭಾ ಚುನಾವಣೆಯಲ್ಲೇ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಗ ದೆಹಲಿಯ ಬಿಜೆಪಿಗರು ತನ್ನ ಹಿಂದಿನ ಸೀಟು ಗಳಿಕೆಯನ್ನ ನೋಡಿ ಹಾಗೇ ನಿದ್ದೆ ಮಾಡುತ್ತಿದ್ದರು ಅದೇ "ಆಪ್" ಡೆಲ್ಲಿಯ ರೇಸ್ ನಲ್ಲಿ ಮೆಲ್ಲೆ ಮೆಲ್ಲಗೆ ಮುಂದೆ
ಹೆಜ್ಜೆ ಹಾಕತೊಡಗಿತ್ತು. ಇದರ ಪರಿಣಾಮವೇ ಇಂತಹದೊಂದು ಅದ್ಭುತ ವಿಜಯ. ಬಿಜೆಪಿಯ ಸೋಲಿಗೆ ಖಂಡಿತವಾಗಿಯೂ ಬೇರೆ ಬೇರೆ ಕಾರಣಗಳಿದ್ದರೂ ಈ ಸೋಲಿನ ಹೊಣೆಯನ್ನ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅಮಿತ್ ಶಾ ಅವರೇ ವಹಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇನ್ನಿತರ ಕಡೆಯೆಲ್ಲಾ ಜಯಗಳಿಸೋವಾಗ ಅವರ ಹೆಸರೇ ತಾನೇ ಬಳಕೆಯಾಗಿದ್ದು... ಹಾಗಾಗಿ ಈಗ ಸೋತಿದ್ದಾರೆ ಅಂದ ಕೂಡಲೇ ಅವರನ್ನ ಬಿಟ್ಟು ಇನ್ನ್ಯಾರನ್ನೋ ಸೋಲಿಗೆ ಹೊಣೆಯಾಗಿಸೋದು ನ್ಯಾಯ ಸಮ್ಮತವಲ್ಲ.
ಹಾಗಂತ ಇದು ಮೋದಿಯವರ ಆಡಳಿತಕ್ಕೆ ಜನರಿಂದ ಸಿಕ್ಕ ತಿರಸ್ಕಾರ ಅಂತಲೂ ಹೇಳಲು ಸಾಧ್ಯವಿಲ್ಲ. ಇಲ್ಲಿ ಇಡಿಯ ಬಿಜೆಪಿಯ ಕೆಲವೊಂದು ಲೋಪಗಳೂ ಎದ್ದು ಕಾಣುತ್ತದೆ.
ಇಲ್ಲಿ ಪ್ರಾಮುಖ್ಯವಾಗಿ ನೋಡೋದಾದರೆ ಆಮ್ ಆದ್ಮೀ ಪಾರ್ಟಿ ಜನರ ಮುಂದಿಟ್ಟ ಚುನಾವಣಾ ಪ್ರಾಣಾಳಿಕೆ... ಅದೇ ಬಿಜೆಪಿ ಚುನಾವಣಾ ಪ್ರಾಣಾಳಿಕೆಯನ್ನ ಬಿಡುಗಡೆಗೊಳಿಸಿದ್ದು ತುಂಬಾನೇ ತಡವಾಗಿ. ಅದರಲ್ಲೂ ಆಮ್ ಆದ್ಮೀ ಪಕ್ಷದವರು ಬಹಳ ನಾಜೂಕಾಗಿ ಜನರನ್ನ ಸೆಳೆಯುವಂಥಾ ಆಶ್ವಾಸನೆಗಳನ್ನ ಕೊಟ್ಟದ್ದು. ದೆಹಲಿಯ ಜನರನ್ನ ಅದರಲ್ಲೂ ಮತದಾರರನ್ನ ನಾನು ಮೂರು ವಿಧವಾಗಿ ವಿಂಗಡಿಸಬಹುದು. ಒಂದು ಬಡ ವರ್ಗ... ಈ ಬಡ ವರ್ಗವನ್ನ ಸೆಳೆಯಲು " ಉಚಿತ ನೀರಿನ " ಭರವಸೆ
ಕೊಡಲಾಯಿತು. ಇನ್ನು ಮಧ್ಯಮ ವರ್ಗ ಇವರಿಗೆ ವಿದ್ಯುತ್ ಬಿಲ್ ಕಡಿಮೆ ಮಾಡಿಸುವ ಭರವಸೆ ನೀಡಲಾಯಿತು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಸುಶಿಕ್ಷಿತ ವರ್ಗ... ಇವರೆಲ್ಲರನ್ನ ದೃಷ್ಟಿಯಲ್ಲಿಟ್ಟುಕೊಂಡು " ಉಚಿತ ವೈಫೈ " ಕೊಡುಗೆಯ ಘೋಷಣೆಯನ್ನ ಮಾಡಿತು. ಹೀಗೆ ಅಲ್ಲಿನ ಜನರ ಗಮನವನ್ನ ಸೆಳೆಯುವಂಥಾ ಅತಿರೇಕದ ಭರವಸೆಗಳನ್ನ ಕೊಡಲಾಯಿತು. ಇಂತಹಾ ಒಂದು ಚುನಾವಣಾ ಪ್ರಾಣಾಳಿಕೆಯನ್ನ ಜನರ ಮುಂದಿಡಲು ಉಳಿದ ಪಕ್ಷಗಳು ವಿಫಲವಾಗಿದ್ದೇ ಇಂತಹ ಜಯ ಆಮ್
ಆದ್ಮೀಗಳಿಗೆ ಸಿಗುವಂಥಾಗಿದ್ದು ಅನ್ನೋದು ನನ್ನ ಊಹೆಗಳಲ್ಲೊಂದು.
ಅದೇನೇ ಇರಲಿ ಹಲವು ದೃಷ್ಟಿಗಳಿಗೆ ಜಯದ ಕಾರಣ ಬೇರೆ ಬೇರೆಯಾಗಿ ಕಾಣಬಹುದು. ಜಯ ದೊರಕಿದೆ, ಅದೂ ವಿಪಕ್ಷವೇ ಇಲ್ಲ ಅನ್ನುವಂತೆ ಇದಂತೂ ಸತ್ಯ. ಇದನ್ನ ಯಾರೂ ತಳ್ಳಿಹಾಕುವಂತಿಲ್ಲ. ಅರವಿಂದ ಕೇಜ್ರಿವಾಲರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಯೂ ಆಗಿದೆ, ಜೊತೆಗೆ ಜನರ ಈ ರೀತಿಯ ಅಭಿಮಾನ ಕಂಡು ಭಯವಾಗುತ್ತಿದೆ ಅನ್ನುವ ಹೇಳಿಕೆಯನ್ನೂ ಕೊಟ್ಟಾಗಿದೆ. ಖಂಡಿತ ಅವರಿಗೆ ಭಯ ಕಾಡಿಯೇ ಕಾಡುತ್ತೆ. ಕಾರಣ ಅವರು ದೆಹಲಿಯ ಆಮ್ ಆದ್ಮೀಗಳಿಗೆ ಕೊಟ್ಟ ಭರವಸೆ.
ಆಮ್ ಆದ್ಮೀ ಪಕ್ಷದ ಚುನಾವಣಾ ಪ್ರಾಣಾಳಿಕೆಯನ್ನ ನಾನು ಅತಿರೇಕದ ಭರವಸೆ ಅಂತ ಹೇಳಿದ್ದು ಅದಕ್ಕಾಗೇ... ಯಾಕೆ ಅತಿರೇಕ...? ಅನ್ನೋದನ್ನ ವಿಶ್ಲೇಷಿಸೋಣ. ಜನಲೋಕಪಾಲ ಬಿಲ್ ತರುತ್ತೇವೆ ಅನ್ನುವುದು ದೊಡ್ದ ಸಮಸ್ಯೆ ಅಲ್ಲ, ಅದನ್ನ ಖಂಡಿತವಾಗಿಯೂ ಪಾಸ್ ಮಾಡಿಯಾರು ಆದರೆ ನಾನು ಇಲ್ಲಿ ಉಲ್ಲೇಖಿಸಬಯಸುವುದು ಅರ್ಧ ದರದ ವಿದ್ಯುತ್, ಉಚಿತ ನೀರು, ಉಚಿತ ವೈಫೈ ಎನ್ನುವ ಭರವಸೆಯ ಪೂರೈಕೆ. ಇದು ಅಮ್ ಅದ್ಮೀಗಳ ಬೆವರಿಳಸಲಿದೆ. ಒಂದು ವಿದ್ಯುತ್ ಬೆಲೆಯಲ್ಲಿನ ಇಳಿತ
ಅದೂ ಅರ್ಧದಷ್ಟು... ಇದನ್ನ ಮಾಡೋದು ಅಷ್ಟು ಸುಲಭ ಅಂತನಿಸೋಲ್ಲ ಕಾರಣ ಅಲ್ಲಿನ ವಿದ್ಯುತ್ ಕಂಪನಿಗಳಿಗೆ ಸಬ್ಸಿಡಿ ಕೊಡೋಕೆ ಹಣ ಎಲ್ಲಿಂದ ಬರಬೇಕು...? ಉಚಿತ ನೀರು.... ನೀರಿನ ಸಮಸ್ಯೆಯೇ ಹೆಚ್ಚಾಗಿರುವಾಗ ಇದರ ಪೂರೈಕೆಯೂ ಬಲು ದೊಡ್ಡ ಸಮಸ್ಯೆಯಾದೀತು.
ಇದನ್ನ ಯಾಕೆ ಹೇಳುತ್ತಿದ್ದೇನೆಂದರೆ ಭರವಸೆಯನ್ನೇನೋ ಕೊಟ್ಟು ಬಿಡಬಹುದು ಆದರೆ ಅದನ್ನ ನೆರವೇರಿಸುವುದಿದೆಯಲ್ಲಾ ಅದೂ ತೀರಾ ಕಠಿಣ... ಹಾಗಾಗಿಯೇ ರಾಜಕೀಯ ಚತುರರು ಚುನಾವಣಾ ಪ್ರಾಣಾಳಿಕೆ ತಯಾರಿಸುವಾಗ ಅದರ ಸಾಧ್ಯತೆಯ ಬಗ್ಗೆ ಯೋಚಿಸಿ ಮತ್ತೆ ಭರವಸೆ ಕೊಡುತ್ತಾರೆ. ಯಾವುದೇ ಯೋಜನೆ ಇರಲಿ ಅದನ್ನ ಸಾಕಾರಗೊಳಿಸಲು ಸರ್ಕಾರದ ಬಳಿ ಆರ್ಥಿಕ ಶಕ್ತಿ ಬಲವಾಗಿರಬೇಕು. ಬರುವ ಆದಾಯದ ಮೇಲೆಯೇ ಖರ್ಚನ್ನು ಹೊಂದಿಸುವುದು ಜಾಣರ ಲಕ್ಷಣ ತಾನೇ.. ಆದರೆ ಅರವಿಂದ
ಕೇಜ್ರಿವಾಲರು ಈ ಕುರಿತು ಯೋಚಿಸಿದ ಹಾಗಿಲ್ಲ. ಹೇಗೂ ಈ ಬಾರಿ ಗೆಲ್ಲೋದಿಲ್ಲ ಹಾಗಾಗಿ ಅದು ಉಚಿತ ಇದು ಉಚಿತ ಅಂತ ಉಚಿತದ ರಾಗ ಎಳೆದ ಹಾಗಿದೆ. ಉದಾಹರಣೆಯಾಗಿ ಉಚಿತ ವೈಫೈ ಕೊಡುತ್ತೇವೆ ಅಂದಿದ್ದಾರೆ.... ಉಚಿತ ವೈ ಫೈ ಅಂದ ಕುಡಲೇ ಅಂತರ್ಜಾಲ ಬಳಸುವವರೆಲ್ಲಾ ಬೇಕಾ ಬಿಟ್ಟಿ ಉಪಯೋಗಿಸೋಕೆ ಶುರುಮಾಡಿದರು ಅಂತಿಟ್ಟು ಕೊಳ್ಳಿ ಹಾಗಾದಾಗ ಸರ್ವಿಸ್ ಪ್ರೊವೈಡರ್ ಗಳಿಗೆ ಅದರ ಖರ್ಚು ಭರಿಸಿಕೊಡುವವರು ಯಾರು...? ಾದಕ್ಕೆ ಬೇಕಾದ ಆರ್ಥಿಕ ಸಾಮರ್ಥ್ಯ ಗಳಿಸೋದು ಹೇಗೆ..?
ಇದಕ್ಕೆಲ್ಲದಕ್ಕಿಂತಲೂ ನನ್ನನ್ನು ಬೆಚ್ಚಿ ಬೀಳಿಸಿದ್ದು ಸಿಸಿ ಟಿವಿ ಹಾಕುವ ಬಗ್ಗೆ ಅವರು ಹೇಳಿಕೊಂಡದ್ದು... ಬಹುಶ ಈ ಭರವಸೆಯ ಉದ್ದೇಶ ಮಹಿಳಾ ಮತಗಳನ್ನ ಆಕರ್ಷಿಸೋದು ಆಗಿದ್ದಿರಬಹುದೇನೋ. ಬರೋಬ್ಬರಿ ಹದಿನೈದು ಲಕ್ಷ ಸಿಸಿ ಕೆಮರಾ ಅಳವಡಿಸುತ್ತೇವೆ ಅಂದಿದ್ದಾರೆ... ಸರಿಯಾಗಿ ಗಮನ ಕೊಡಿ ಹದಿನೈದು ಸಾವಿರವಲ್ಲ.... ಹದಿನೈದು ಲಕ್ಷ. ಇದನ್ನ ಓದಿದವನೇ ಹಾಗೇ ಸುಮ್ಮನೆ ಇದರ ಕುರಿತು ಯೋಚಿಸಲು ಕುಳಿತೆ... ಸರಿ ಸುಮಾರು ಒಂದು ಸಿಸಿಟಿವಿ ಕೆಮಾರಾಗೆ ರೇಟು
950ರಿಂದ ಮೇಲ್ಪಟ್ಟು ಇದೆ ತೀರಾ ದುಬಾರಿಯದ್ದೂ ಇದೆ... ಲೆಕ್ಕಾಚಾರಕ್ಕೆ ಸುಲಭವಾಗೋಕೆ ಅಂತ ಸಾವಿರ ರೂಪಾಯಿ ಸಿಸಿಟಿವಿ ಕೆಮರಾ ಕೊಂಡು ಕೊಳ್ಳುವರು ಅಂತ ಇಟ್ಟುಕೊಳ್ಳೋಣ... ಅದರ ಅರ್ಥ 150ಕೋಟಿ ಹಣ ಬರಿಯ ಕೆಮಾರ ಖರೀದಿಗೆ ಆಗುತ್ತದೆ ಇನ್ನು ಅದರ ವಯರ್ ಮತ್ತು ಇತರೆ ಖರ್ಚುಗಳೆಷ್ಟೋ...? ಬರಿಯ ಸಿಸಿಕೆಮರಾ ಕೊಂಡರಷ್ಟೇ ಸಾಕೇ... ಅದರ ರೆಕಾರ್ಡಿಂಗ್ ಗಳನ್ನ ವೀಕ್ಷಿಸೋದು ಬೇಡವೇ...? ಒಂದು ಟಿವಿಯಲ್ಲಿ ಇಪ್ಪತ್ತು ಸಿಸಿಟಿವಿಯ ಫೂಟೇಜುಗಳನ್ನ ಹಾಕಿದರು
ಅಂತಿಟ್ಟುಕೊಳ್ಳಿ... ಆಗ ನಮಗೆ ಬೇಕಾಗೋ ಟಿವಿಗಳ ಸಂಖ್ಯೆ ಬರೋಬ್ಬರಿ 75000. ಒಂದೊಂದು ಟಿವಿಗೂ 10000 ರೂ ಅಂತಿಟ್ಟುಕೊಂಡರೂ ಬೇಕಾಗೋದು ಎಪ್ಪತ್ತೈದು ಕೋಟಿ. ಅದರ ಇನ್ಸ್ಟಾಲೇಶನ್ನು ಅದು ಇದು ಅಂತ ನೂರು ಕೋಟಿ ರೌಂಡ್ ಫಿಗರ್ ಮಾಡೋಣ... ಒಟ್ಟಿಗೆ 250 ಕೋಟಿ... ಸರಿ ಇದನ್ನೆಲ್ಲಾ ಎಲ್ಲಿ ಇಡೋದು... 75000 ಟಿವಿಗಳು ಹಿಡಿಸುವಷ್ಟು ದೊಡ್ದದಾದ ಪೋಲೀಸ್ ಹೆಡ್ ಕ್ವಾಟರ್ಸ್... ಪ್ರತಿಯೊಂದಕ್ಕೂ ಒಬ್ಬೊಬ್ಬ ಪೇದೆ ಅವನಿಗೆ ಸರ್ಕಾರಿ ಸಂಬಳ ಅದು ಇದು ಅಂತ ಅದರ
ಖರ್ಚುಗಳನ್ನೆಲ್ಲಾ ಇವರು ಲೆಕ್ಕ ಹಾಕಿದ್ದಾರಾ....??? ನನಗನಿಸಿದಂತೆ ಖಂಡಿತವಾಗಿಯೂ ಇಲ್ಲ. ಒಂದು ವೇಳೆ ಯೋಚಿಸಿದ್ದರೆ ಇದರ ಘೋಷಣೆಯಾಗುವ ಸಾಧ್ಯತೆ ಕಡಿಮೆ ಇತ್ತು ಅಲ್ವಾ... ಇವಿಷ್ಟೇ ಅಲ್ಲ ಇನ್ನೂ ಹಲವಾರು ಆಶ್ವಾಸನೆಗಳು ಇಂಥಾದ್ದೇ ಇವೆ.
ನನಗನಿಸಿದಂತೆ ಅರವಿಂದ ಕೇಜ್ರಿವಾಲರಿಗೆ ಭಯ ಹುಟ್ಟಿಸೋ ವಿಷಯ ಇದೇನೆ, ಬೇರೆಲ್ಲಾ ರಾಜಕೀಯ ಪಕ್ಷಗಳಂತೆ ನಮ್ಮ ಪಕ್ಷವಲ್ಲ ಅನ್ನುತ್ತಾ ಈ ಮಟ್ಟಿನ ಮತಗಳನ್ನ ಗಿಟ್ಟಿಸಿಕೊಂಡ ಪಕ್ಷ ತಾವು ಕೊಟ್ಟ ಭರವಸೆಗಳನ್ನ ಈಡೇರಿಸಬೇಕು. ಈಡೇರಿಸೋಕೆ ನಮ್ಮಿಂದ ಸಾಧ್ಯವೇ ಅಂತ ಯೋಚಿಸಿದರೆ ತೀರಾ ಕಷ್ಟ ಅನ್ನೋದು ಗೊತ್ತಾಗೇ ಆಗುತ್ತೆ... ಇದೊಂದು ಥರಾ ಹೇಗಾಗಿತು ಅಂದರೆ ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ... " ಪ್ರಿಯೆ ನಿನಗಾಗಿ ನಾನು ಚಂದಿರನ ಕಿತ್ತು ತರಲೇ... " ಅಂದ
ಹಾಗಾಯ್ತು... ಯಾಕೆಂದರೆ ವಾಸ್ತವದಲ್ಲಿ ಚಂದ್ರನನ್ನು ಕಿತ್ತು ತರಲು ಸಾಧ್ಯವೇ...? ಇಲ್ಲ... ಆದರೆ ಇಂಥಾ ಮಾತು ಕೇಳಿ ಪ್ರಿಯತಮೆ ಏನೋ ಆ ಪ್ರಿಯಕರನ ಮಾತಿಗೆ ಮರುಳಾಗೋದಿಲ್ಲವೇ...? ಇಲ್ಲೂ ಆಗಿದ್ದು ಅದೇ ಬಣ್ಣ ಬಣ್ಣದ ಕನಸುಗಳು... ನಾವ್ ಆಮ್ ಆದ್ಮೀಗಳು ಆಮ್ ಆದ್ಮೀಗಳು ಅಂತ ತೀರಾ ಜನಸಾಮಾನ್ಯರ ವಿಶ್ವಾಸ ಗಳಿಸುವ ರೀತಿಯಲ್ಲಿ ತಮ್ಮನ್ನು ತಾವು ಬಿಂಬಿಸಿದ್ದು ಇವೆಲ್ಲವೂ ಜನರಲ್ಲಿ ಹೊಸ ಭರವಸೆಯನ್ನ ಮೂಡಿಸಿತು... ಈ ಹಿಂದಿನಿಂದಲೂ ನಮ್ಮಲ್ಲಿ ಉಚಿತ ಅಂತಂದರೆ
ಸಾಕು ಜನರ ಕಿವಿ ನೆಟ್ಟಗಾಗುತ್ತದೆ... ಅದೇ ಆ ಉಚಿತಗಳೆಲ್ಲವನ್ನ ಸರ್ಕಾರ ಹೇಗೆ ಕೊಟ್ಟಾರು ಅನ್ನೋ ವಿವೇಚನಾ ಶಕ್ತಿ ಅವರಲ್ಲಿ ಬಹು ಕಡಿಮೆಯೇ... ನನಗನಿಸಿದಂತೆ ಈ ಉಚಿತದ ಕನಸಿನಲ್ಲಿರೋ ಜನರೇ ಅರವಿಂದ ಕೇಜ್ರಿವಾಲರಿಗೆ ಭೀತಿ ಹುಟ್ಟಿಸುತ್ತಾರೆ... ಯಾಕೆಂದರೆ ಅವರಲ್ಲಿ ಬಣ್ಣಬಣ್ನದ ಭರವಸೆಗಳ ಭಂಡಾರವೇ ಇದೆ ಹೊರತು ಅದರ ಸಾಕಾರಕ್ಕೆ ಬೇಕಾದ ರೂಪುರೇಷೆ ಇಲ್ಲ.
ಇನ್ನು ಮುಂದಕ್ಕೆ ಅರವಿಂದ ಕೇಜ್ರಿವಾಲರು ನಾವೇನೋ ಸಿದ್ಧ ಆದರೆ ಕೇಂದ್ರದವರು ಕೊಡುತ್ತಿಲ್ಲ ಹಾಗೆ ಹೀಗೆ ಅಂತ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದರೂ ಅಚ್ಚರಿಯೇನಿಲ್ಲ ಯಾಕೆಂದರೆ ಆರೋಪ ಹೊರಿಸೋದರಲ್ಲಿ ಕೇಜ್ರಿವಾಲರು ಬಹಳ ನಿಪುಣರು... ಎಷ್ಟಂದರೆ ವೋಟಿಂಗ್ ಮೆಷಿನ್ ಮೇಲೆ ಆರೋಪ ಹೊರಿಸಿದವರಲ್ವಾ... ಆದರೂ ಈ ಥರಹದ ಫಲಿತಾಂಶ ಬರುತ್ತಿದ್ದಂತೆ ಅವೆಲ್ಲವೂ ತನ್ನಿಂದ ತಾನೇ ಸರಿಯಾಗಿ ಬಿಟ್ಟಿತೇನೋ ಇರಲಿ ಬಿಡಿ... ನನಗಂತೂ ಅದರ ಮೇಲೆ ಸಂಶಯ ಇಲ್ಲ.
ಆದರೆ ತಾವು ಕೊಟ್ಟಿರುವ ಭರವಸೆಗಳಿಗೆಲ್ಲಾ ಇವರೇ ಪೂರ್ತಿ ಜವಾಬ್ದಾರರಾಗಬೇಕು... ಯಾಕೆಂದರೆ ಇವರ ಯಾವುದೇ ಭರವಸೆಗಳು ಕೇಂದ್ರದ ಸರ್ಕಾರದ ಜೊತೆ ಕೂತು ಮಾತುಕತೆ ನಡೆಸಿ ತೆಗೆದು ಕೊಂಡ ನಿರ್ಣಯವಲ್ಲ... ಅವರಾಗೇ ಮಾಡುತ್ತೇವೆ ಅಂದ ಮೇಲೆ ಅದರ ಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕು ಅಲ್ವಾ... ಹಾ ಸರಿಯಾದ ಯೋಜನೆಗಳನ್ನ ಮಾಡಿ ಅದಕ್ಕೆ ಕೇಂದ್ರದ ನೆರವನ್ನ ಕೇಳಿದರೆ ಅದರಲ್ಲೇನು ತಪ್ಪಿಲ್ಲ... ಆದರೆ ಕಿಸೆಯಲ್ಲಿ ಕಾಸಿಲ್ಲ ಹಣ ಮಾಡೋ ಯೋಜನೆಗಳೂ ಇಲ್ಲ
ಆದರೂ ಎಲ್ಲರಿಗೂ ಉಚಿತ ಕೊಡುತ್ತೇನೆ ಅಂದರೆ ಎಲ್ಲಿಂದ ಕೊಡುತ್ತಾರೆ...? ಯೋಚಿಸಬೇಕಾದ ವಿಷಯ ತಾನೇ... ಅದಕ್ಕಾಗೇ ಹೇಳಿದ್ದು. ದೆಹಲಿಯ ಆಮ್ ಆದ್ಮೀಗಳ ಈ ಪ್ರಚಂಡ ವಿಶ್ವಾಸದ ಋಣ ಭಾರ ಆಪ್ ಸರ್ಕಾರ ಮುಖ್ಯಮಂತ್ರಿಗೆ ಭಾರವಾದೀತೋ ಏನೋ ಅಂತ.. ಇರಲಿ ಬಿಡಿ ಜನ ಬೆಂಬಲಿಸಿದ್ದಾರೆ ನಾವೂ ಕಾದು ನೋಡೋಣ... ಜನರಿಗೆ ಒಳ್ಳೆಯದನ್ನ ಮಾಡುತ್ತಾರೆಂದರೆ ನಮ್ಮ ಬೆಂಬಲವೂ ಇದ್ದೇ ಇರುತ್ತದೆ... ಜನರ ಕಲ್ಯಾಣವಾಗಬೇಕು... ಪಕ್ಷ , ಸಿದ್ಧಾಂತ ಯಾವುದಾದರೇನು ಆದರೆ ತಾನೇ ಕೊಟ್ಟ
ಭರವಸೆಗಳನ್ನು ಈಡೇರಿಸಲಾಗದೇ ಎರಡನೇ ಬಾರಿ ಪ್ರಚಂಡ ಬಹುಮತದಿಂದ ಗದ್ದುಗೆ ಏರಿದ " ಆಪ್ " ಸರ್ಕಾರ ನಡುವಿನಲ್ಲಿಯೇ " ಆಫ್ " ಆಗದಿದ್ದರೆ ಸಾಕು... ಹಾಗಾಗದಿರಲಿ ಅಂತಾನೇ ಆಶಿಸೋಣ ಅಲ್ವಾ...

No comments:

Post a Comment