Monday 2 November 2015

ಭಾಷಾಭಿಮಾನ ಅನ್ನೋದು ಬರೀ ಒಂದು ದಿನಕ್ಕೆ ಸೀಮಿತವಾಗದಿರಲಿ.....



ಸಂಸ್ಕೃತ ಭಾಷೆಯಲ್ಲೊಂದು ಶ್ಲೋಕ ಇದೆ...
ಮಾತೃ ಭಾಷಾಂ ಪರಿತ್ಯಜ್ಯ
ಯೋsನ್ಯಭಾಷಾಮುಪಾಸತೇ |
ತತ್ರ ಯಾಂತಿ ಹಿ ತೇ ದೇಶಾಃ
ಯತ್ರ ಸೂರ್ಯೋ ನ ಭಾಸತೇ...
ಅಂದರೆ " ಯಾರು ತಮ್ಮ ಮಾತೃಭಾಷೆಯನ್ನು ಕೈಬಿಟ್ಟು ಅನ್ಯಭಾಷೆಯನ್ನು ಆರಾಧಿಸುತ್ತಾರೋ ಅವರು ಅಂಧಕಾರಮಯ ಲೋಕಕ್ಕೆ ಹೋಗುತ್ತಾರೆ " ಅಂತ. ಯಾಕೀ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇನೆ... ಅನ್ನೋದು ಖಂಡಿತ ನಿಮಗೆಲ್ಲಾ ಗೊತ್ತಾಗಿದ್ದಿರಬಹುದು... ಇವತ್ತು ನವಂಬರ್ ಒಂದನೇ ತಾರೀಖು.... ಕರ್ನಾಟಕದಲ್ಲಿ ಹೆಚ್ಚಿನ ಜನರ ಹೃದಯದಲ್ಲಿ ಒಂದು ದಿನದ ಜೀವಿತಾವಧಿಯ ಕನ್ನಡ ಕುಸುಮವೊಂದು ಅರಳುವ ದಿನ.... ಕಷ್ಟಪಟ್ಟು ಅಷ್ಟೋ ಇಷ್ಟೋ ಕನ್ನಡ ಮಾತಾಡಿ ಸೂರ್ಯ ಮುಳುಗಿದ ಮೇಲೆ.... ಓಕೆ.... ಬಾಯ್ ಗುಡ್ ನೈಟ್ ಅನ್ನುತ್ತಾ ಈ ಕನ್ನಡ ಕುಸುಮವನ್ನ ತಾವೇ ಹೊಸಕಿ ಹಾಕೋ ದಿನ ಅಲ್ವಾ... ಅದಕ್ಕೆ ಕನ್ನಡದ ಬಗ್ಗೆ ಒಂದಷ್ಟು ಮಾತಾಡೋಣ ಅಂತ.. ನಾನಿಲ್ಲಿ ಕನ್ನಡದ ಪ್ರಾಧಾನ್ಯತೆಯ ಬಗೆಗೆ ವೈಶಿಷ್ಟ್ಯತೆಯ ಬಗೆಗೆ ಪ್ರಬಂಧ ಮಂಡಿಸಲು ಅಥವ ಕನ್ನಡವನ್ನು ಕಡ್ದಾಯವಾಗಿ ಬಳಸಲೇ ಬೇಕು, ಅನ್ನುವ ಒತ್ತಾಯದ ಆಶಯ ಇಟ್ಟುಕೊಂಡು ಬರೆಯುತ್ತಿಲ್ಲ. ಒಂದೆರಡು ಸಣ್ಣ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ...
ಭಾಷೆ ಮಾನವನ ಅಗತ್ಯತೆಗಳಲ್ಲೊಂದು ಅದಿಲ್ಲದೆಯೂ ಬದುಕಬಹುದಾದರೂ.... ಭಾಷೆಯಿದ್ದರೆ ಬದುಕು ಇನ್ನಷ್ಟು ಸುಂದರವಾಗುತ್ತದೆ... ಸಹಜವಾಗಿಯೇ ಪ್ರತಿಯೊಬ್ಬರಿಗೂ ತನ್ನದೇ ಆದ ಭಾಷೆಯೊಂದಿರುತ್ತದೆ... ಹುಟ್ಟಿದ ಕ್ಷಣದಿಂದ ಬೆಳೆಯುತ್ತಾ ಬಂದಂತೆ ಮಗು ತೊದಲುತ್ತಾ ತನ್ನ ಭಾವನೆಯನ್ನು ಯಾವ ಭಾಷೆಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸುತ್ತದೋ ಅದೇ ಆ ಮಗುವಿನ ಮಾತೃ ಭಾಷೆ... ಸಹಜವಾಗೇ ಅದು ತನ್ನ ತಂದೆ ತಾಯಿಯರ ಅಥವಾ ಪೋಷಕರ ಭಾಷೆಯನ್ನೇ ಕಲಿತುಕೊಳ್ಳುವುದು... ಬೆಳೆಯುತ್ತ ಹೋದಂತೆ ಆ ಮಗುವಿಗೆ ತನ್ನ ಸುತ್ತಮುತ್ತಲಿರುವ ಇನ್ನಿತರ ಭಾಷೆಗಳ ಪರಿಚಯವಾಗುತ್ತದೆ...
ಇನ್ನುಳಿದ ಭಾಷೆಗಳ ಪ್ರಭಾವ ಅದೆಷ್ಟೇ ಇರಲಿ ನಾವು ನಮ್ಮ ಮಾತೃಭಾಷೆಯ ಅವಗಣನೆ ಮಾಡುವುದು ಸರಿಯಲ್ಲ ಅನ್ನೋದು ನನ್ನೀ ಲೇಖನದ ಮೂಲ ಉದ್ದೇಶ. ಪ್ರಸ್ತುತ ಕನ್ನಡಿಗರಿಗೆ ಕನ್ನಡ ಮಾತೃಭಾಷೆಯಾದರೂ ಜಾಗತೀಕರಣದ ಪ್ರಭಾವಕ್ಕೊಳಗಾಗಿ ಆಂಗ್ಲ ಭಾಷೆಯ ವ್ಯಾಮೋಹ ಅತಿಯಾಗಿದೆ ಅಂದರೆ ತಪ್ಪಲ್ಲ... ಈ ವ್ಯಾಮೋಹ ಎಷ್ಟರ ಮಟ್ಟಿನದೂ ಅಂದರೆ ಆಂಗ್ಲ ಭಾಷೆಯೇ ಅತ್ಯುನ್ನತ, ಅದಿಲ್ಲವಾದರೆ ನಮಗೆ ಈ ಸಮಾಜದಲ್ಲಿ ಬದುಕಲು ಸಾಧ್ಯವೇ ಇಲ್ಲ ಅನ್ನುವಷ್ಟಾಗಿದೆ.. ಇಂಥಾ ಕಲ್ಪನೆ ಅವರ ತಲೆಯೊಳಗೆ ಹೇಗೇ ಬಂತೋ ದೇವರೇ ಬಲ್ಲ... ಆಂಗ್ಲ ಭಾಷೆಯ ದಾಸ್ಯಕ್ಕೊಳಗಾಗದೆ ತಮ್ಮದೇ ಮಾತೃಭಾಷೆಯನ್ನುಪಯೋಗಿಸಿ ಜರ್ಮನಿ, ಜಪಾನ್ ನಂತಹ ದೇಶಗಳು ಪ್ರಗತಿಯನ್ನು ಹೊಂದಿದೆ... ಇರಲಿ ಬಿಡಿ ಆಂಗ್ಲ ಭಾಷೆಯೂ ಬೇಕು ಅಂತಲೇ ಇಟ್ಟುಕೊಳ್ಳೋಣ ಆದರೆ ಅದರ ಬಳಕೆ ಅಗತ್ಯವಿದ್ದಷ್ಟು ಮಾತ್ರ ಇರಬೇಕೇ ಹೊರತು ನಮ್ಮದನ್ನು ಅಳಿಸಿ ಅದನ್ನು ಉಳಿಸುವುದು ಮೌಢ್ಯವೇ ಅಲ್ವಾ...
ಈ ದಿನಗಳಲ್ಲಿ ಕಾಣಸಿಗುವ ಮತ್ತು ನನಗೆ ತುಂಬಾನೇ ಬೇಸರ ತರಿಸುವ ವಿಷಯ...ವಿದ್ಯಾರ್ಥಿಗಳಲ್ಲಿ ಮತ್ತು ಅವರ ತಂದೆ ತಾಯಿಗಳಲ್ಲಿ ಆಂಗ್ಲ ಭಾಷೆಯ ಬಗೆಗೆ ಅತಿಯಾದ ಆಸಕ್ತಿ. ಕೂಲಿ ಕೆಲಸ ಮಾಡುವವನೂ ಕೂಡ ತನ್ನ ಮಗನನ್ನು ಅಂಗ್ಲ ಮಾಧ್ಯಮ ಶಾಲೆಗೆ ಸೇರಿಸಬೇಕೂ ಅಂತಾನೇ ಬಯಸೋದು... ಕಳುಹಿಸುವವರ ಮಾತುಕತೆಯೆಲ್ಲವೂ ಆಂಗ್ಲಮಯ... ಶುಭಹಾರೈಕೆಗಳಿಗೂ ಆಂಗ್ಲ ಪದಗಳ ಬಳಕೆ ನನಗೆ ಮತ್ತಷ್ಟು ಹಿಂಸೆಯನ್ನು ಕೊಡುತ್ತದೆ. ಬೆಳಗಾಗೆದ್ದರೆ ಸಾಕು ಎಲ್ಲರ ಬಾಯಲ್ಲೂ " ಗುಡ್ ಮಾರ್ನಿಂಗ್ " ಅಂತಾನೇ ಬರೋದು... ಸರಿ ಇದನ್ನು ಬಳಸಿದ ಕೂಡಲೇ ನಿಮ್ಮ ಆಂಗ್ಲ ಭಾಷಾ ಜ್ಞಾನ ಹೆಚ್ಚುತ್ತದೆಯೇ..? ಗುಡ್ ಮಾರ್ನಿಂಗ್ ಅಂದರೆ ಶುಭೋದಯ ಅಂತ ಗೊತ್ತೇ ಇರುತ್ತೆ. ಅದರ ಬಗ್ಗೆ ಕಲಿತದ್ದು ಆಯಿತು... ನಮ್ಮ ನಮ್ಮೊಳಗೆ ಅದರ ಪ್ರಯೋಗದಿಂದ ಆಂಗ್ಲ ಶಬ್ದಭಂಡಾರ ಹೆಚ್ಚುತ್ತದೆಯೇ...? ಇಲ್ಲ ತಾನೇ ಹಾಗಿದ್ದ ಮೇಲೂ ಈ ಪದಪ್ರಯೋಗಗಳೇಕೆ...? ನಾವು ಈ ಪದ ಬಳಸದೆ ಇರುವುದರಿಂದ ಈ ಪದಗಳ ನಾಶ ಆಗೋದಂತೂ ಇಲ್ಲ ಕಾರಣ ಜಗತ್ತಿನಲ್ಲಿ ಇಂಗ್ಲಿಷನ್ನು ಮಾತೃಭಾಷೆಯಾಗಿ ಬಳಸುವವರು ಇದ್ದೇ ಇರುತ್ತಾರೆ... ಆದರೆ ನಾಶವಾಗೋದು ನಮ್ಮದೇ ಪದಗಳಾದ ಶುಭೋದಯ , ಶುಭರಾತ್ರಿ... ಇತ್ಯಾದಿ, ಇನ್ನೂ ಮುಂದುವರಿದರೆ ನಮ್ಮ ಹಬ್ಬಗಳಿಗೆ ಶುಭಾಶಯ, ನಮ್ಮ ಹುಟ್ಟು ಹಬ್ಬಗಳಿಗೆ ಶುಭಾಷಯ ನಮ್ಮ ಇನ್ನಿತರ ಶುಭ ಸಮಾರಂಭಗಳಿಗೆ ಆಂಗ್ಲ ಪದಗಳ ಬಳಕೆ ಯಾಕೆ ಬೇಕು...? ಇವುಗಳ ಅರ್ಥ ಸಾಮಾನ್ಯರಿಗೂ ಗೊತ್ತು. ಇವುಗಳನ್ನ ಅಗತ್ಯ ಬಿದ್ದಾಗ ನೆನಪಿಸಿಕೊಂಡು ಬಳಸಬಹುದು.... ಬಳಸದೇ ಇದ್ದರೆ ಮರೆತು ಹೋದಿತು ಎನ್ನುವ ಸಮಸ್ಯೆ ಇಲ್ಲ. ಯಾಕೆಂದರೆ ಅಷ್ಟೊಂದು ಸರಳ ಇದು... ಆದರೆ ಇದರ ಬಳಕೆ ಯಾವ ರೀತಿ ವ್ಯಾಪಕವಾಗಿ ಆಗುತ್ತಾ ಇದೆ ಅಂದರೆ... ಬಾಯಿ ತೆರೆದಂತೆ ಇದೇ ಪದ ಬರುತ್ತದೆಯೇ ಹೊರತು ನಮ್ಮದಾದ ಕನ್ನಡ ಪದಗಳೇ ಬರುತ್ತಿಲ್ಲ . ಇದೇ ರೀತಿ ಮುಂದುವರಿದರೆ ಒಂದೊಂದಾಗೇ ನಮ್ಮ ಪದಗಳು ನಮ್ಮ ಕೈತಪ್ಪಿ ಹೋಗುವುದಂತೂ ಖಂಡಿತ. ಆಂಗ್ಲರ ದಾಸ್ಯಕ್ಕೆ ನಮ್ಮನ್ನ ನಾವು ಒಳಪಡಿಸಿದ್ದಂತೆ ನಮ್ಮ ಭಾಷೆಯನ್ನೂ ಆಂಗ್ಲ ಭಾಷೆಯ ದಾಸ್ಯಕ್ಕೊಳಪಡಿಸಿ ಬಿಟ್ಟೇವು...
ಕನ್ನಡಿಗರಲ್ಲಿ ನನ್ನ ಸಣ್ಣ ವಿನಂತಿ ಇಷ್ಟೇ... ಆಂಗ್ಲ ಭಾಷೆಯ ಬಳಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಇರಲಿ. ಯಾಕೆಂದರೆ ಈಗಾಗಲೇ ಕೆಲವೊಂದು ಆಂಗ್ಲ ಪದಗಳು ನಮ್ಮ ಕನ್ನಡದ್ದೇ ಆಗಿ ಹೋದಂತಿದೆ. ಕನ್ನಡ ಭಾಷೆಯನ್ನು ನಾವು ಕನ್ನಡಿಗರಷ್ಟೇ ಬಳಸೋದು. ಆದರೆ ಆಂಗ್ಲ ಭಾಷೆಗೆ ಹಾಗಲ್ಲ, ಆ ಭಾಷೆಯನ್ನು ಮಾತೃ ಭಾಷೆಯಾಗಿ ಹೊಂದಿರುವವರೆಲ್ಲಾ ಉಳಿಸಿಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ನನ್ನ ಮನೆ... ನನ್ನ ಸಂಸಾರ... ನನ್ನ ಮಕ್ಕಳು.. ಹೀಗೆಲ್ಲಾ ಹೇಳುವ ನಾವು ನನ್ನ ಭಾಷೆ ಅಂತ ಯಾಕೆ ಅಭಿಮಾನ ತೋರುವುದಿಲ್ಲ....?
ನಿಜವಾಗಿಯೂ ಮಾನವ ಸಮುದಾಯದಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ. ಇಂತಹ ಮಾತೃ ಸ್ಥಾನವನ್ನು ಎಲ್ಲವಕ್ಕೂ ನಾವು ಹೋಲಿಸೋದಿಲ್ಲ. ಹೋಲಿಸುವುದಿದ್ದರೆ ಅದು ನಾವು ಹುಟ್ಟಿ ಬೆಳೆದ ನಾಡಿಗೆ ಮತ್ತು ಹುಟ್ಟಿನಿಂದ ನಾವಾಡಿದ ಭಾಷೆಗೆ. ಆ ಅರ್ಥದಲ್ಲಿ ತಾಯಿಗೆ ಕೊಟ್ಟಷ್ಟೇ ಬೆಲೆ ನಾವು ನಮ್ಮ ಭಾಷೆಗೂ ಕೊಡಬೇಕಲ್ವಾ...ಮುಂದಿನ ಪೀಳಿಗೆಯವರಲ್ಲಿ ಕಂಡು ಬರುತ್ತಿರುವ ಆಂಗ್ಲ ಭಾಷಾ ವ್ಯಾಮೋಹ ಮತ್ತು ಕನ್ನಡದ ಬಗೆಗಿನ ತಾತ್ಸಾರದ ಬಗ್ಗೆ ಯೋಚಿಸುವಾಗ ಬೇಸರವಾದರೂ.. ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ... ತಾಯಿಯನ್ನೇ ವೃದ್ಧಾಶ್ರಮಕ್ಕೆ ಬಿಟ್ಟು ಬರೋ ಜನರಿರುವಾಗ ಮಾತೃ ಭಾಷೆಯನ್ನು ಸದಾ ತಮ್ಮ ಜೊತೆಗಿರಿಸುವ ಮನಸ್ಸು ಹೇಗೆ ತಾನೇ ಮಾಡಿಯಾರು...?
ಆದರೂ ಎಲ್ಲೋ ಮನಸ್ಸಿನ ಮೂಲೆಯಲ್ಲೊಂದು ಆಸೆ... ಜನ ಬದಲಾದಾರೂ ಅಂತ. ಮುಂದಾದರೂ ಜನರಿಗೆ ಮಾತೃಭಾಷೆಯ ಮಹತ್ವದ ಅರಿವು ಉಂಟಾಗಲಿ... ಪ್ರತಿ ದಿನವೂ ನವಂಬರ್ ಒಂದಾಗಲೀ ಎಂದೇ ತಾಯಿ ಭುವನೇಶ್ವರಿಯನ್ನು ಬೇಡಿಕೊಳ್ಳುತ್ತೇನೆ.

No comments:

Post a Comment