Monday 2 November 2015

ಮತ್ತೆ ಜಾಗರಣೆ....(ಹಾಗೇ ಸುಮ್ಮನೆ ಒಂದು ಕಥೆ....)



ಅಂದು ಶಿವರಾತ್ರಿ, ಹಬ್ಬದ ತಯಾರಿಗಾಗಿ ಮಾರ್ಕೆಟ್ಟು ಗಿಜಿಗುಡುತಿತ್ತು. ಆ ಸದ್ದಿನ ನಡುವಲ್ಲಿಯೂ ಪಾರ್ವತಕ್ಕನಿಗೆ ಜೋರಾದ ಸದ್ದು ಕೇಳಿಸಿತು...
" ಪಾರ್ವತಕ್ಕ ಬಿಲ್ವಪತ್ರೆ ತಕ್ಕೊಂಡು ಹೋಗೋಕೆ ಬಂದ್ರಾ. ನಿಮ್ಮ ಕೈಯಲ್ಲಿರೋ ಬಿಲ್ವ ಪತ್ರೆಗಳನ್ನ ನೋಡಿದ್ರೆ. ಇವತ್ತು ರಾತ್ರಿ ಇಡೀ ಜಾಗರಣೆ ಅಂತನ್ನಿಸುತ್ತೆ..."
ಪಾರ್ವತಕ್ಕನ ಕೈಯಲ್ಲಿದ್ದ ಬಿಲ್ವಪತ್ರೆಯ ಚೀಲವನ್ನ ನೋಡಿ ಯಶೋದಕ್ಕ ನಿಲ್ಲಿಸಿ ಪ್ರಶ್ನೆ ಎಸೆದಿದ್ದರು.
" ಹೌದು ಯಶೋದಕ್ಕ ಇವತ್ತು ಶಿವರಾತ್ರಿ ಅಲ್ವಾ... ಇವತ್ತಿನ ದಿನ ಈ ಬಿಲ್ವಪತ್ರೆಯನ್ನ ಭಕ್ತಿಯಿಂದ ಆ ಭೋಲೇ ನಾಥನಿಗೆ ಅರ್ಪಿಸಿದರೆ ಸಾಕು... ಆ ಶಿವ ಖಂಡಿತ ಒಲಿದೇ ಒಲೀತಾನೆ... ಈ ಸಾರಿಯಂತೂ ನನ್ನ ಮಗಳದ್ದು MBA ಫೈನಲ್ ಇಯರ್ ಅಲ್ವಾ... ಹಾಗಾಗಿ ಸ್ವಲ್ಪ ವಿಶೇಷ ಆರಾಧನೆ ಮಾಡ್ಬೇಕೂಂತ ಇದೀನಿ... ಅಹೋರಾತ್ರಿ ಪಂಚಾಕ್ಷರಿ ನಾಮ ಜಪ... ನೀವೂ ಬರ್ತೀರಾ..?"
" ಅಯ್ಯೋ ಇಲ್ಲಾರೀ ಹನ್ನೊಂದು ಘಂಟೆಯವರೆಗೆ ಸೀರಿಯಲ್ ನೋಡೇದೇ ಬಹಳ ಕಷ್ಟಕ್ಕೆ ... ಇನ್ನು ಬೆಳಗ್ಗಿನವರೆಗೆ ಜಾಗರಣೆ ಅಂದ್ರೆ ಮುಗಿದೋಯ್ತು ನನ್ನ ಕಥೆ... ನಿಮ್ಮ ಶಿವ ಭಕ್ತಿ ನಿಮಗೇ ಇರಲಿ" ಅಂತಂದು ಬೇಗ ಜಾಗ ಖಾಲಿ ಮಾಡಿ ಬಿಟ್ಟರು ಯಶೋದಕ್ಕ.
ಸರಿ ಬಿಡಿ ನಿಮಗೇನು ಗೊತ್ತು... ನಮ್ಮ ಶಂಕರ ಅದೆಷ್ಟು ದಯಾಳು ಅಂತ... ಮನದಲ್ಲಿ ಗೊಣಗಿಕೊಂಡರು ಮುಂದೆ ಹೆಜ್ಜೆ ಹಾಕತೊಡಗಿದರು ಪಾರ್ವತಕ್ಕ.
ಹಾ..... ಪಾರ್ವತಕ್ಕ ಈ ಕಾಲಕ್ಕೆ ಸಿಗೋ ಅಪರೂಪದ ಶಿವ ಭಕ್ತೆ.. ಅದರಲ್ಲೂ ಶಿವರಾತ್ರಿಯಂದು ಉಪವಾಸ, ಜಾಗರಣೆ ಅಂತ ಶಿವನ ಆರಾಧನೆ ಬಹಳ ಜೋರಾಗೇ ಇರುತ್ತೆ. ಈ ಪಾರ್ವತಕ್ಕನ ಪತಿ ದೇವರು ಗಿರೀಶ್ ಅಂತ, ಅವರಿಗೋ ಪೇಟೆಯಲ್ಲಿ ಸ್ವಂತದ ಗಿಫ್ಟ್ ಮತ್ತು ಕಾರ್ಡ್ಸ್ ಗಳ ಅಂಗಡಿ ಇದೆ. ಪಾರ್ವತಕ್ಕನ ಭಕ್ತಿಯ ಫಲವೋ ಅಥವಾ ಗಿರೀಶ್ ರ ಶ್ರದ್ಧೆಯ ದುಡಿಮೆಯ ಫಲವೋ ಉತ್ತಮ ಆದಾಯವಂತೂ ಬರುತಿತ್ತು. ಈ ದಂಪತಿಗಳಿಗೆ ಒಬ್ಬಳೇ ಪುತ್ರಿ..ನಮಿತಾ ಅಂತ ... ಇಬ್ಬರೂ ಮುದ್ದಾಗಿ ನಮ್ಮೀ... ಅಂತಾನೇ ಕರೀತಿದ್ರು... ಈ ಬಾರಿ ಆಕೆಯದು ಫೈನಲ್ ಇಯರ್ MBA... ಪರೀಕ್ಷೆ ಕೂಡ ಹತ್ತಿರ ಬರ್ತಾ ಇತ್ತು. ಮೊದಲೆಲ್ಲಾ ಒಳ್ಳೆ ರಿಸಲ್ಟ್ ತರ್ತಾ ಇದ್ದೋಳೋ ಯಾಕೋ ಒಂದು ವರ್ಷದಿಂದ ಸ್ವಲ್ಪ ಕಡಿಮೆ ಮಾರ್ಕ್ಸ್ ತೆಗೆಯೋಕೆ ಶುರುಮಾಡಿದ್ಲು... ಹಾಗಾಗೋ ಏನೋ ಪಾರ್ವತಕ್ಕನನ್ನ ಚಿಂತೆ ಕಾಡತೊಡಗಿತ್ತು... ಈ ಬಾರಿ ಶಿವನ ಎದುರು ತನ್ನ ಮಗಳ ಕುರಿತೇ ಬೇಡಿಕೊಳ್ಳೋ ಆಲೋಚನೆ ಮಾಡಿಕೊಂಡಿದ್ದಳು....
ಹಾಗೇ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿ ಖರೀದಿಸಿ ತರುವಷ್ಟರಲ್ಲಿ ಗಂಟೆ ಏಳಾಗಿತ್ತು. ಮನೆಗೆ ಬಂದವಳೇ ಕೈಕಾಲು ಮುಖ ತೊಳೆದು ದೇವರ ಕೋಣೆಗೆ ಹೋಗಿ ದೇವರ ಅಲಂಕಾರ ಶುರು ಮಾಡಿಕೊಂಡಳು, ಅಷ್ಟು ಹೊತ್ತಿಗೆ ಯಾರೋ ಬಂದ ಸದ್ದಾಯಿತು.... ಕುಳಿತಲ್ಲಿಂದಲೇ ಇಣುಕಿ ನೋಡಿದಳು...
ಬಂದಿದ್ದು ನಮ್ಮೀ... ಬಂದವಳೇ ಟಿ.ವಿ ಆನ್ ಮಾಡಿ ಚಾನಲ್ ಬದಲಾಯಿಸೋಕೆ ಶುರು ಮಾಡಿಕೊಂಡಳು.
" ಏ ನಮ್ಮೀ ಪುರುಸೊತ್ತು ಇದ್ರೆ ಇಲ್ಲಿ ಬಾರೆ...ಸ್ವಲ್ಪ ಅಲಂಕಾರ ಮಾಡುವಿಯಂತೆ...."
" ಇಲ್ಲ ಅಮ್ಮಾ.... ಎಕ್ಸಾಮ್ ಗೆ ಓದ್ಕೋ ಬೇಕು...." ಅಂದವಳೆ ಸುಮ್ಮನೆ ರಾಗ ಎಳೆದಳು...
" ಹೂ... ಸರಿ ಬಿಡು ಓದ್ಕೋ..." ಅಂದಳು ಪಾರ್ವತಕ್ಕ.
ನಮ್ಮೀ ಒಳ್ಳೆ ಹುಡುಗೀನೇ ಆದರೆ ಅದೇನೋ ಸಹವಾಸ ದೋಷ ಅಂತಾರಲ್ಲ ಹಾಗಾಗಿ ಮೊದಲಿನ ಭಯ ಭಕ್ತಿ ಎಲ್ಲಾ ಮರೆಯೋಕೆ ಶುರುಮಾಡಿದ್ದಳು. ಕಾರಣ ಉತ್ತರ ಭಾರತದಿಂದ ಕಲಿಯಲು ಬಂದಿದ್ದ ಇವಳ ಗೆಳೆಯರೆಲ್ಲಾ ಹೈ ಫೈ ಲೈಫ್ ಸ್ಟೈಲ್ ನ ರುಚಿ ತೋರಿಸತೊಡಗಿದ್ದರು. ಎಲ್ಲಾರೂ ಆ ರೀತಿ ಇರಬೇಕಾದ್ರೆ ಇವಳೊಬ್ಬಳನ್ನ ಬದಲಾಯಿಸದೇ ಬಿಡುತ್ತಾರ... ?
ಗಂಟೆ ಎಂಟಾಗುತ್ತಿದ್ದಂತೆ ಕಾಲಿಂಗ್ ಬೆಲ್ ಸದ್ದು ಕೇಳಿಸಿದ್ದೇ ತಡ ... ನಮ್ಮೀ ಓಡೋಡಿ ಬಂದವಳೇ... ಬಾಗಿಲು ತೆಗೆದಳು... ನೋಡಿದರೆ ಒಂದಿಬ್ಬರು ಕಾಲೇಜಿನ ಮಿತ್ರರು ... ಅದೇನೋ ಗುಸು ಗುಸು ಅಂತ ಮಾತಾಡಿಕೊಂಡರು... ಆ ಮಾತುಕತೆ ಅಲಂಕಾರದ ಕೆಲಸದಲ್ಲಿ ತಲ್ಲೀನಳಾಗಿದ್ದ ಪಾರ್ವತಕ್ಕನ ಕಿವಿಗೆ ಬೀಳಲಿಲ್ಲ. ಆಕೆ ಗಮನವನ್ನೂ ಹರಿಸಲಿಲ್ಲ.
ಅತ್ತ ಮಾತುಕತೆ ಮುಗಿದದ್ದೇ ತಡ ನಮ್ಮೀ ಅಮ್ಮನ ಬಳಿಗೋಡಿ ಬಂದು ....ಅಮ್ಮಾ... ಎಂದವಳೆ ಮೆಲುಧ್ವನಿಯಲ್ಲಿ ರಾಗ ಎಳೆಯತೊಡಗಿದಳು...
" ಏನೇ...."
" ಅದು ಎಕ್ಸಾಮ್ ಹತ್ರ ಬಂತಲ್ವಾ... ಕೆಲವು ಪೋರ್ಶನ್ ನಾವೇ ಓದ್ಕೋಬೇಕು ಅಂದಿದಾರೆ ಹಾಗಾಗಿ ನಾವೊಂದು ಐದು ಜನ ಗ್ರೂಪ್ ಸ್ಟಡಿ ಮಾಡ್ಬೇಕೋಂತ ಇದೀವೀ ನನ್ನ ಫ್ರೆಂಡ್ ಸಹನಾ ಮನೇಲಿ ಒಟ್ಟಾಗ್ತಾ ಇದ್ದೀವಿ...ಹೋಗ್ಲಾ..."
" ಅಯ್ಯೋ ಆಗ್ಲೇ ಕತ್ತಲಾಯಿತಲ್ಲೇ..."
" ಹೂ... ಅಮ್ಮ ನಾಳೆ ಬುಕ್ ರಿಟರ್ನ್ ಮಾಡೋಕ್ಕಿದೆ... ಹಾಗಾಗಿ ಇವತ್ತಿಡೀ ಜಾಗರಣೆ ಮಾಡ್ಬೇಕಾಗುತ್ತೆ...."
" ಹಾಗಿದ್ರೆ ಅಪ್ಪ ಬರ್ಲಿ... ಅವರ ಹತ್ರನೇ ಕೇಳು..."
" ಅಮ್ಮಾ.... ಪ್ಲೀಸ್... ಅಮ್ಮಾ.... ನೀನೇ ಅಪ್ಪನ ಹತ್ರ ಹೇಳು ನಾನೀಗ್ಲೇ ಹೊರಡಬೇಕು .... ನೀನು ಇಲ್ಲಿ ಜಾಗರಣೆ ಮಾಡು... ನಾನು ಅಲ್ಲಿ ಮಾಡ್ತೀನೀ.... ಹಾ ಈಶ್ವರ ದೇವರ ಫೋಟೋ ಕೂಡ ಇದೆಯಮ್ಮಾ...." ಅಂತ ಅಮ್ಮನನ್ನ ಭಾವನಾತ್ಮಕವಾಗಿ ಕಾಡತೊಡಗಿದಳು.
"ಜಾಗರಣೆ"..... "ಈಶ್ವರನ ಫೋಟೋ" ಅನ್ನುವ ಶಬ್ದಗಳೆಲ್ಲ ಪಾರ್ವತಕ್ಕನ ಮೇಲೆ ಮೋಡಿ ಮಾಡಿತ್ತು.
" ಸರಿ, ಅಪ್ಪನ ಹತ್ರ ನಾನು ಹೇಳ್ತೀನಿ ನೀನು ಚೆನ್ನಾಗಿ ಓದು.... ಭೋಲೇ ನಾಥನನ್ನು ಅಗಾಗ ನೆನಪಿಸ್ಕೋ..." ಅಂತಂದರು...
ಸೋ ಸ್ವೀಟ್.... ಅಂದವಳೇ ಅಮ್ಮನ ಕೆನ್ನೆಗೆ ಸಿಹಿ ಮುತ್ತನ್ನಿಕ್ಕಿ ಓಡಿ ಹೋಗಿ ಹೊರಡೋಕೆ ಶುರು ಮಾಡಿದಳು...
ಇಲ್ಲಿ ಪಾರ್ವತಕ್ಕನ ಜಾಗರಣೆ ನಿಶ್ಕಲ್ಮಶ ಭಕ್ತಿಯಿಂದ ಶುರುವಾದ್ರೆ ಅಲ್ಲಿ ಅವರ ಮಗಳು ಕಪಟತನದ ಭಕ್ತಿಯಿಂದ ಕೂಡಿತ್ತು. ನಿಜಕ್ಕೂ ನಮ್ಮಿಗೆ ಯಾವುದೇ ಗ್ರೂಪ್ ಸ್ಟಡಿ ಇದ್ದಿರಲಿಲ್ಲ. ಸಂಡೇ ಪಬ್ ಗೆ ಹೋಗೋದಿಕ್ಕಾಗಿ ನಮ್ಮೀ ಗ್ರೂಪ್ ಸ್ಟಡಿ ಮತ್ತು ಜಾಗರಣೆಯ ನೆಪ ಮುಂದಿಟ್ಟಿದ್ದಳು. ಗೆಳತಿಯ ರೂಮಿಗೆ ಹೋದವಳೇ ತನ್ನ ಸಾಂಪ್ರಾದಾಯಿಕ ಉಡುಗೆಗಳನೆಲ್ಲಾ ಬಿಸಾಕಿ ಆಧುನಿಕ ಬಟ್ಟೆಗಳನ್ನ ತೊಟ್ಟುಕೊಂಡಳು, ಪಬ್ ಸಂಸ್ಕೃತಿನೇ ಹಾಗಲ್ವಾ.... ಬಟ್ಟೆಗಳಿಗೆ ಹೆಚ್ಚು ಮೈಮುಚ್ಚುವ ಅವಕಾಶ ಇಲ್ಲ..ಗೆಳತಿಯರ ಜೊತೆಗೂಡಿ ಹೊರಟವಳೇ. ಅಲ್ಲಿಂದ ಒಂದಷ್ಟು ಜನ ಹುಡುಗರ ಜೊತೆ ಸೇರಿ ನಗರದ ಪ್ರಸಿದ್ಧ ಪಬ್ ಸೇರಿದ್ದರು. ಇತ್ತ ತಾಯಿ ಲಿಂಗಾಭಿಷೇಕದ ನೀರನ್ನ ತೀರ್ಥವಾಗಿ ಸೇವಿಸಿದರೆ ಅತ್ತ ಮಗಳು... ಬೇರೇನೇ ತೀರ್ಥ ಸೇವಿಸೋಕೆ ಶುರು ಮಾಡತೊಡಗಿದ್ದಳು. ಭಗವದ್ಭಕ್ತಿಯಲ್ಲಿ ತಲ್ಲೀನವಾಗಿ ತಾಯಿ ಜಾಗರಣೆ ಮಾಡುತ್ತಿದ್ದರೆ ಮಗಳು ಕುಡಿದು ಕುಪ್ಪಳಿಸಿ ಮೈ ಮರೆತು ಜಾಗರಣೆ ಮಾಡುತ್ತಿದ್ದಳು. ನಶೆ ಏರಿ ತನ್ನ ಮೈಮೇಲಿನ ಅರಿವನ್ನೇ ಕಳಕೊಂಡಿದ್ದಳು...ಅದೆಷ್ಟು ಜನ ಇವಳ ಈ ದುರವಸ್ಥೆಯ ಲಾಭ ಪಡಕೊಂಡರೋ ದೇವರೇ ಬಲ್ಲ.... ಅಲ್ಲಿಂದ ನಡುರಾತ್ರಿ ಮೂರರ ಹೊತ್ತಿಗೆ ಹೇಗೋ ಗೆಳತಿಯ ರೂಮ್ ಸೇರಿದವಳನ್ನ ಆರೂವರೆಯ ಅಲರಾಂ ಬಡಿದೆಬ್ಬಿಸಿತು... ತಡೆಯಲಾಗದ ತಲೆಭಾರವನ್ನು ಲೆಕ್ಕಿಸದೆ ಮನೆಯಿಂದ ಬರುವಾಗ ಹಾಕಿದ್ದ ಬಟ್ಟೆ ಧರಿಸಿ ಮನೆಗೆ ಕಡೆ ಹೆಜ್ಜೆ ಹಾಕಿದಳು ನಮ್ಮೀ....
ಇತ್ತ ಆರು ಗಂಟೆಯವರೆಗೆ ಜಾಗರಣೆ ಮಾಡಿದ್ದ ಪಾರ್ವತಕ್ಕ ಸ್ನಾನವನ್ನೆಲ್ಲಾ ಪೂರೈಸಿ ಚೆಂದವಾಗಿ ಅಂಗಣದಲ್ಲಿ ರಂಗೋಲಿ ಹಾಕುತ್ತಿದ್ದರು. ಅದಾಗಲೇ ಮಗಳ ಪ್ರವೇಶವಾಯಿತು.
" ಯಾಕೇ ಇಷ್ಟೊಂದು ತಡವಾಯಿತು....?"
" ಹಾ... ಪೂರ್ತಿ ಜಾಗರಣೆ ಅಮ್ಮಾ ......ಓದಿ ಓದಿ ಸಾಕಾಗಿ ಹೋಯಿತು ನಾನೊಬ್ಬಳೇ ಇದ್ದಿದ್ರೆ ಮಲಗಿರ್ತಿದ್ನೋ ಏನೋ ಗ್ರೂಪಲ್ಲಿ ಓದಿದಕ್ಕೆ ಸುಲಭ ಆಯಿತು.... ಸ್ವಲ್ಪ ಹೊತ್ತು ಮಲಗ್ತೀನಿ ಒಂಭತ್ತು ಗಂಟೆಗೆ ಎಬ್ಬಿಸ್ತೀಯಾ..." ಅಂದವಳೇ ತನ್ನ ರೂಮಿನಾಚೆ ಹೊರಟಳು.
ನಮ್ಮೀ ಯ ಮುಖವನ್ನು ಸರಿಯಾಗಿ ನೋಡಿದ ಪಾರ್ವತಕ್ಕನಿಗೆ ಅವಳಲ್ಲಿನ ಆಯಾಸ , ಕೆಂಪಾದ ಕಣ್ಣುಗಳು ಆಕೆ ನಿಜವನ್ನೇ ಹೇಳುತ್ತಿದ್ದಾಳೆ ಅನ್ನುವ ನಂಬಿಕೆಯನ್ನು ಹುಟ್ಟಿಸಿತ್ತು. ಒಂದು ಕ್ಷಣ ಮನದಲ್ಲಿ ಸಂತಸ ಪಟ್ಟ ಪಾರ್ವತಕ್ಕ ನೇರ ದೇವರ ಕೋಣೆಯ ಬಳಿ ಬಂದು....
" ಹೇ ಶಂಕರಾ... ನಿಜಕ್ಕೂ ನನ್ನ ಮಗಳನ್ನ ನೋಡೋವಾಗ ಅದೆಷ್ಟು ಖುಶಿಯಾಯಿತು ಗೊತ್ತಾ... ನನ್ನ ಜಾಗರಣೆಗೆ ಅಷ್ಟು ಬೇಗ ಮೆಚ್ಚಿದಿಯಾ...ಅದೆಷ್ಟು ಕಷ್ಟ ಪಟ್ಟು ಓದ್ತಾ ಇದ್ದಾಳೆ .... ಅವಳಲ್ಲಿ ಈ ಬುದ್ಧಿ ಸದಾ ಇರೋ ಹಾಗೆ ಮಾಡಪ್ಪಾ.... ಇದೇ ನನ್ನ ಕೋರಿಕೆ...."
ಅತ್ತ ನಿಜವಾದ ಕೈಲಾಸದಲ್ಲಿ ಪರಶಿವನ ಅರ್ಧಾಂಗಿ ಶಿವೆ ನಗತೊಡಗಿದಳು....
" ಸ್ವಾಮೀ ಈಗೇನು ಮಾಡುವಿರಿ.... ನಿಮ್ಮ ಭಕ್ತೆ ವಾಸ್ತವದ ಅರಿವಿಲ್ಲದೇ ತನ್ನ ಮಗಳ ಬುದ್ಧಿ ಇದೇ ತೆರನಿರಲಿ ಅನ್ನುತ್ತಿದ್ದಾಳಲ್ಲ.... "
ನಿಜಕ್ಕೂ ತನ್ನ ಭಕ್ತೆಯ ಜಾಗರಣೆ ಸಾಕ್ಷಾತ್ ಪರಶಿವನನ್ನೇ ಧರ್ಮ ಸಂಕಟಕ್ಕೀಡುಮಾಡಿತ್ತು....
(ಕಳೆದ ಬಾರಿಯ ಅಂತ್ಯ...)
.
.
.
ಕೊನೆಗೂ ಮುಗುಳ್ನಕ್ಕ ಶಿವ ತಥಾಸ್ತು ಅಂದು ಬಿಟ್ಟ....
ಮರುದಿನ ಮಗಳು ಅದೇ ರೀತಿ ಓದೋಕಿದೆ ಅಂತ ಹೇಳಿ ಅದೇ ಗುಂಪಿನ ಜೊತೆ ಮತ್ತೆ ಹೊರಟಿದ್ದಳು. ಮತ್ತದೇ.. ಹಾಳು ಮದ್ಯದ ಎರಡು ಗುಟುಕನ್ನೇರಿಸಿದ್ದಳು...ಅಷ್ಟರಲ್ಲಿ... ಹಾಠಾತ್ತಾಗಿ ಆ ಪಬ್ಬಿನ ಮೇಲೆ ಪೋಲೀಸ್ ದಾಳಿಯಾಗಿತ್ತು.... ಎಲ್ಲ ಹುಡುಗ ಹುಡುಗಿಯರು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದಾಗ ಈಕೆಗೆ ತಲೆಗೇರಿದ್ದ ನಶೆ ಇಳಿದು ಹೋಗಿತ್ತು ಎಲ್ಲರೂ ಅತ್ತಿತ್ತ ಓಡಾಡತೊಡಗಿದರು ತಪ್ಪಿಸಿಕೊಳ್ಳೋ ಆಸೆ.... ಅಷ್ಟರಲ್ಲಿ ಅದ್ಯಾರೋ ಈಕೆಯ ತೋಳನ್ನ ಹಿಡಿದು ದರದರನೆ ಹಿಂಬಾಗಿಲ ಕಡೆ ಕರೆದೊಯ್ದು...." ಬೇಗ ತಪ್ಪಿಸಿಕೋ.... ಇನ್ಯಾವತ್ತೂ ನಿನ್ನ ತಾಯಿಗೆ ಮೋಸ ಮಾಡಬೇಡ.... ನಿನ್ನ ಈ ರೂಪ ಕಂಡರೆ ಆಕೆಗೆ ಶಿವನ ಮೇಲಿನ ನಂಬಿಕೆ ಹೊರಟು ಹೋದೀತು...." ಎಂದವನೇ ಅವಳನ್ನ ಹೋಗಲು ಬಿಟ್ಟ ಒಬ್ಬ ಪೋಲೀಸ್ ಪೇದೆ..... ಆತ ಯಾರು....? ಎಷ್ಟು ಯೋಚಿಸಿದರೂ ಆಕೆಗೆ ಏನು ಅರ್ಥವಾಗಲಿಲ್ಲ.... ಸಾವರಿಸಿಕೊಂಡು ಓಡತೊಡಗಿದಳು ಮೆಲ್ಲನೆ ಹಿಂದುರಿಗಿ ನೋಡಿದರೆ ಬೇರೆ ಇಬ್ಬರು ಪೋಲೀಸ್ ಪೇದೆಗಳು ಇವಳನಟ್ಟಸಿ ಬರತೊಡಗಿದ್ದರು.... ಅಷ್ಟರಲ್ಲೇ ಅದೆಲ್ಲಿಂದಲೋ ಬಂದ ದೊಡ್ಡ " ಬಸವ " ಆ ಪೋಲಿಸರ ಕಡೆ ದುರುಗುಟ್ಟಿಸಿ ಹೂಂಕರಿಸಿತು....
" ಲೋ... ಒಬ್ಳೇ ತಾನೆ ಹೋಗ್ಲಿ ಬಿಡು... ಮೊದ್ಲು ಈ ಬಸವನಿಂದ ನಾವ್ ಬಚಾವಾಗೋಣ " ಅಂದವರೇ ಹಿಂದುರಿಗಿ ಓಡತೊಡಗಿದರು....
ಬೆವರಿ ಹೋಗಿದ್ದ ನಮ್ಮಿಯನ್ನ ಬಾಗಿಲಲ್ಲಿ ನೋಡಿದ ಆಕೆಯ ಅಮ್ಮನಿಗೆ ಗಾಬರಿಯಾಯಿತು...
" ಏನಾಯಿತೇ....?"
" ಏನಿಲ್ಲ ಅಮ್ಮಾ.... ಹೆಚ್ಚಿನವರಿಗೆ ಗ್ರೂಪ್ ಸ್ಟಡಿ ಮಾಡೋಕೆ ಬರಲಾಗಲೇ ಇಲ್ಲ ಹಾಗಾಗಿ ನಾನು ವಾಪಾಸ್ ಬಂದೆ... ಬರಬೇಕಾದ್ರೆ ಬೀದಿ ನಾಯಿಯೊಂದು ಅಟ್ಟಿಸಿಕೊಂಡು ಬಂತು.... ಅಷ್ಟೇ... " ಅಂದಳು
" ಹೆದರಬೇಡ ನಮ್ಮೀ.... ನನ್ನ ಶಿವ ನಿನ್ನನ್ನು ಸದಾ ಕಾಪಾಡ್ತಾನೆ " ಎಂದು ಒಳಹೋದಳು.
ಆ ಘಟನೆ ನಮ್ಮೀ ಯಲ್ಲಿ ದೊಡ್ಡ ಬದಲಾವಣೆಯನ್ನ ತಂದಿತ್ತು...
ಈಗ ಪಾರ್ವತಕ್ಕನದು ಒಂದೇ ರಾಗ " ಒಳ್ಳೇ ಮಾರ್ಕ್ಸೇನೋ ಬರ್ತದೆ.... ಆದರೆ ಯಾಕೋ ನನ್ನ ನಮ್ಮೀ ಗ್ರೂಪ್ ಸ್ಟಡೀಸ್ ಗೇ ಹೋಗೋದಿಲ್ಲ..." ಅಂತ.

No comments:

Post a Comment